w
(ತನ್ನ ಸೃಷ್ಟಿಗಳಿಗೆ) ಅಪಾರ ದಯಾಮಯನೂ, (ತನ್ನ ನೈಜ ವಿಶ್ವಾಸಿಗಳಾದ ದಾಸರಿಗೆ) ಸದಾ ಕರುಣಾಮಯಿಯೂ ಆದ ಅಲ್ಲಾಹುವಿನ ನಾಮದಿಂದ.
ಸರ್ವ ಸ್ತುತಿಗಳೂ ಸಕಲಲೋಕಗಳ ರಬ್ಬ್ಆದ ಅಲ್ಲಾಹುವಿಗೆ ಮೀಸಲು. (ಅಲ್ಲಾಹುವಿನ) ಸಲಾತ್ ಮತ್ತು ಸಲಾಮ್ಗಳು ನಮ್ಮ ಪ್ರವಾದಿಯಾದ ಮುಹಮ್ಮದ್ (H) ರವರ ಮೇಲೂ ಅವರ ಕುಟುಂಬದ ಮೇಲೂ ಮತ್ತು ಅವರ ಎಲ್ಲಾ ಸಹಾಬಿಗಳ ಮೇಲೂ ಇರಲಿ.
ಅನೇಕ ಜನರು ಸಾವನ್ನಪ್ಪಲು ಕಾರಣವಾದ ಹಾಗೂ ಇನ್ನುಳಿದ ಜನರನ್ನು ಭಯಭೀತರನ್ನಾಗಿಸುತ್ತಿರುವ, ಪ್ರಸ್ತುತ ದಿನಗಳಲ್ಲಿ ಮುಸ್ಲಿಮರಿಗೂ, ಅದೂ ಅಲ್ಲದೆ ಇಡೀ ಜಗತ್ತಿಗೆ ಸಂಭಿಸುತ್ತಿರುವ ಈ ಸಾಂಕ್ರಾಮಿಕ ರೋಗ ಅಥವಾ ನಿಗೂಢತೆಯಿಂದ ಕೂಡಿರುವ ಕೊರೊನಾ ಎಂದು ಕರೆಯಲಾಗುವ ಈ ವೈರಾಣುವಿನ ಸಂಬಂಧಿಸಿದಂತೆ ಇದೊಂದು ಉದ್ಭೋದಕ ಉಪದೇಶವಾಗಿದೆ.
ಮುಖ್ಯವಾಗಿ ಮುಸ್ಲಿಮರಿಗೂ ಹಾಗೂ ಒಟ್ಟಾರೆ ಜಗತ್ತಿನ ಎಲ್ಲರ ಮೇಲಿರುವ ಹೊಣೆಗಾರಿಕೆಯೇನೆಂದರೆ ಈ ಅಪಾಯವನ್ನು ನಿರ್ಮೂಲನೆ ಮಾಡಲು ಹಾಗೂ ಅದನ್ನು ನಿವಾರಿಸಲು ಮಹೋನ್ನತನಾದ ಅಲ್ಲಾಹುವಿನಲ್ಲಿ ರಕ್ಷಣೆಯನ್ನು ಬೇಡುವುದಾಗಿದೆ. ಏಕೆಂದರೆ ಖಂಡಿತವಾಗಿಯೂ, ಮಹೋನ್ನತನಾದ ಅಲ್ಲಾಹುವಾಗಿರುವನು ಅದನ್ನು ನಮ್ಮ ಮೇಲೆ ವಿಧಿಸಿದವನು ಮತ್ತು ಅವನು ಮಾತ್ರವಾಗಿರುವನು ಅದನ್ನು ನಿರ್ಮೂಲನೆ ಮಾಡಲು ಹಾಗೂ ಮುಸ್ಲಿಮರನ್ನು ಅದರಿಂದ ಸಂರಕ್ಷಿಸಲು ಸಮರ್ಥನು.
ಮಹೋನ್ನತನಾದ ಅಲ್ಲಾಹು ಹೇಳುತ್ತಾನೆ :
﴿ وَإِذَا مَسَّكُمُ الضُّرُّ فِي الْبَحْرِ ضَلَّ مَن تَدْعُونَ إِلَّا إِيَّاهُ ۖ ﴾
“ನಿಮಗೆ ಸಮುದ್ರದಲ್ಲಿ ಹಾನಿಯು ತಗುಲಿದರೆ, (ಈ ಮುಂಚೆ) ಯಾರೆನ್ನೆಲ್ಲಾ ನೀವು ಕರೆದು ಪ್ರಾರ್ಥಿಸುತ್ತೀದ್ದೀರೋ ಅವರೆಲ್ಲರೂ (ನಿಮ್ಮ ಮನಸ್ಸಿನಿಂದ) ಮಾಯವಾಗುವರು. (ಆದರೆ ಏಕೈಕನಾದ) ಅವನ ಹೊರತು (ಅರ್ಥಾತ್ ಅಲ್ಲಾಹುವಿನ ಹೊರತು)” (ಸೂರಃ ಅಲ್-ಇಸ್ರಾಅ್, 17 : 67)
(ಮತ್ತು ಅಲ್ಲಾಹು ಹೇಳುತ್ತಾನೆ),
﴿ قُلْ مَن يُنَجِّيكُم مِّن ظُلُمَاتِ الْبَرِّ وَالْبَحْرِ تَدْعُونَهُ تَضَرُّعًا وَخُفْيَةً لَّئِنْ أَنجَانَا مِنْ هَـٰذِهِ لَنَكُونَنَّ مِنَ الشَّاكِرِينَ ٣٦ قُلِ اللَّـهُ يُنَجِّيكُم مِّنْهَا وَمِن كُلِّ كَرْبٍ ثُمَّ أَنتُمْ تُشْرِكُونَ ٤٦ ﴾
“(ಅಲ್ಲಾಹುವಿನೊಂದಿಗೆ ಇತರ ಆರಾಧ್ಯರನ್ನು ಕರೆದು ಪ್ರಾರ್ಥಿಸುವವರೊಂದಿಗೆ) ಹೇಳಿರಿ : ಒಂದು ವೇಳೆ ಈ ಆಪತ್ತಿನಿಂದ ಅವನು (ಅಲ್ಲಾಹು) ನಮ್ಮನ್ನು ಪಾರುಮಾಡಿಬಿಟ್ಟರೆ, ಖಂಡಿತವಾಗಿಯೂ ಅವನಿಗೆ ಕೃತಜ್ಞರಾಗುವವರ ಪೈಕಿ ನಾವು ಸೇರುತ್ತಿದ್ದೆವು ಎಂದು ಹೇಳುತ್ತಾ ವಿನಮ್ರತೆಯಿಂದಲೂ ರಹಸ್ಯವಾಗಿಯೂ ನೀವು ಅವನನ್ನು ಕರೆದು ಪ್ರಾರ್ಥಿಸುವಾಗ ನಿಮ್ಮನ್ನು ಭೂಮಿ ಮತ್ತು ಸಮುದ್ರದ (ಚಂಡಮಾರುತಗಳಂತಹ) ವಿಪತ್ತುಗಳಿಂದ ಪಾರುಮಾಡುವವನು ಯಾರು? ಹೇಳಿರಿ : ನಿಮ್ಮನ್ನು ಇದರಿಂದಲೂ ಹಾಗೂ (ಇನ್ನಿತರ) ಎಲ್ಲಾ ವಿಪತ್ತುಗಳಿಂದಲೂ ಪಾರುಮಾಡುವವನು ಅಲ್ಲಾಹುವಾಗಿರುವನು, ಆ ಬಳಿಕವೂ ನೀವು (ಸುಖ ಸೌಕರ್ಯಾವಸ್ಥೆಯಲ್ಲಿ) ಅಲ್ಲಾಹುವಿನ ಹೊರತು ಇತರರನ್ನು ಆರಾಧಿಸುವಿರಿ.” (ಸೂರಃ ಅಲ್-ಅನ್ಆಮ್, 6 : 63-64)
ಹಾಗಾಗಿ ಇದನ್ನು ನಿರ್ಮೂಲನೆ ಮಾಡಲು, ಅದರ ಹಾನಿಯಿಂದ ಮುಸ್ಲಿಮರನ್ನು ಕಾಪಾಡಲು ಹಾಗೂ ಅದರ ಅಪಾಯದಿಂದ ಜಗತ್ತನ್ನು ರಕ್ಷಿಸಲು ಅಲ್ಲಾಹುವಿನೆಡೆಗೆ ಅವಲಂಬಿಸುವ ಮೂಲಕ, ಅವನ ಬಳಿ (ನಮಗಿರುವ) ಆವಶ್ಯಕತೆಯನ್ನು ಅಂಗೀಕರಿಸಿ, (ಅವನೊಂದಿಗೆ ನಮ್ಮ) ಪ್ರಾರ್ಥನೆಯನ್ನು ಅಧಿಕಗೊಳಿಸುವುದರ ಹೊರತು ಈ ಅಪಾಯದಿಂದ ಹಾಗೂ ಇನ್ನಿತರ ವಿಪತ್ತುಗಳಿಂದ ಯಾವುದೇ ಆಶ್ರಯವಾಗಲೀ ರಕ್ಷಣೆಯಾಗಲೀ ಇಲ್ಲ.
ಖಂಡಿತವಾಗಿಯೂ ಅದನ್ನು (ರೋಗವನ್ನು) ವಿಧಿಸಿರುವವನು ಅಲ್ಲಾಹುವಾಗಿರುವನು ಮತ್ತು ಅದನ್ನು ನಿರ್ಮೂಲನೆ ಮಾಡಲು ಅವನೇ ಸಮರ್ಥನು, ಅದು ಅಲ್ಲಾಹುವಿಗೆ ಅತೀ ಸುಲಭವಾದುದಾಗಿದೆ.
ಅದಾಗ್ಯೂ, ನಮ್ಮ ದೌರ್ಬಲ್ಯವನ್ನು ಜ್ಞಾಪಿಸಿಕೊಳ್ಳುವುದು ಮತ್ತು ಮಹೋನ್ನತನಾದ ಅಲ್ಲಾಹುವಿನೆಡೆಗೆ ನಮಗಿರುವ ಆವಶ್ಯಕತೆಯನ್ನು ಅರಿತುಕೊಳ್ಳುವುದು, ಪ್ರಾರ್ಥನೆಗಳನ್ನೂ, ದಾನಗಳನ್ನೂ ಹಾಗೂ ಸತ್ಕರ್ಮಗಳನ್ನು ನಿರ್ವಹಿಸುವುದನ್ನು ಅಧಿಕಗೊಳಿಸುವುದು, (ಇವೆಲ್ಲವೂ) ನಮ್ಮೆಲ್ಲರ ಮೇಲಿರುವ ಬಾಧ್ಯತೆಯಾಗಿದೆ.
ಪ್ರಾಯಶಃ ಮಹೋನ್ನತನಾದ ಅಲ್ಲಾಹು ಏನನ್ನು (ನಮ್ಮ ಮೇಲೆ) ವಿಧಿಸಿರುವನೋ ಅದನ್ನು ನಿರ್ಮೂಲನೆ ಮಾಡುವನು, ಏಕೆಂದರೆ ಖಂಡಿತವಾಗಿಯೂ ಅವನು ಎಲ್ಲದರ ಮೇಲೂ ಸಾಮರ್ಥ್ಯವುಳ್ಳವನಾಗಿರುವನು. ಆದ್ದರಿಂದ ಮುಖ್ಯವಾಗಿ ಮುಸ್ಲಿಮರಿಗೂ ಹಾಗೂ ಒಟ್ಟಾರೆಯಾಗಿ ಜಗತ್ತಿನ ಎಲ್ಲರ ಮೇಲಿರುವ ಹೊಣೆಗಾರಿಕೆಯೇನೆಂದರೆ ಈ ಹಾನಿಯನ್ನು ನಿವಾರಿಸಲು ಹಾಗೂ ಅದರ (ಕೆಟ್ಟ) ಪರಿಣಾಮಗಳಿಂದ ಸಂರಕ್ಷಿಸಲು ಅಲ್ಲಾಹುವಿನೆಡೆಗೆ ಅವಲಂಬಿಸುವುದಾಗಿದೆ. ಏಕೆಂದರೆ ಖಂಡಿತವಾಗಿಯೂ ಅದನ್ನು ಮಾಡಲು ಅವನೇ ಶಕ್ತನು. ಅದು (ಅರ್ಥಾತ್ ಅಲ್ಲಾಹುವಿನ ನೆರವನ್ನು ಬಯಸಿ ಅವನೆಡೆಗೆ ಅವಲಂಬಿಸುವುದು) ಅಧಿಕ ಪ್ರಾರ್ಥನೆಯ ಮೂಲಕವಾಗಿದೆ (ಅವನೊಂದಿಗೆ ದುಆ ಮಾಡುವ ಮೂಲಕವಾಗಿದೆ) ಹಾಗೂ ದಾನಗಳು ಮತ್ತು ಸತ್ಕಾರ್ಯಗಳನ್ನು ಮಾಡುವುದರೊಂದಿಗೆ ಬಡವರಿಗೂ ನಿರ್ಗತಿಕರಿಗೂ ಹೆಚ್ಚು ಒಳಿತುಗಳನ್ನು ಮಾಡುವ ಮೂಲಕವಾಗಿದೆ, ಏಕೆಂದರೆ ಖಂಡಿತವಾಗಿಯೂ ಮಹೋನ್ನತನಾದ ಅಲ್ಲಾಹು ಅತಿ ನಿಕಟನಾಗಿರುವನು, ಅವನು (ಪ್ರಾರ್ಥನೆಗೆ) ಉತ್ತರಿಸುವವನಾಗಿರುವನು.
ಅಲ್ಲಾಹು ಹೇಳಿದನು :
﴿ وَإِذَا سَأَلَكَ عِبَادِي عَنِّي فَإِنِّي قَرِيبٌ ۖ أُجِيبُ دَعْوَةَ الدَّاعِ إِذَا دَعَانِ ۖ فَلْيَسْتَجِيبُوا لِي وَلْيُؤْمِنُوا بِي لَعَلَّهُمْ يَرْشُدُونَ ٦٨١﴾
“ನನ್ನ ದಾಸರು ನನ್ನ ಬಗ್ಗೆ ನಿಮ್ಮಲ್ಲಿ ಕೇಳಿದರೆ (ಓ ಪ್ರವಾದಿಯವರೇ), (ಅವರಿಗೆ ಉತ್ತರಿಸಿರಿ) ಖಂಡಿತವಾಗಿಯೂ ನಾನು (ರಹಸ್ಯಗಳನ್ನು ಹಾಗೂ ಮರೆಮಾಚುವಿಕೆಯನ್ನು ಅರಿತಿರುವೆನು, ಪ್ರಾರ್ಥಿಸುವವನಿಗೆ ಉತ್ತರ ನೀಡಲು) ಅವರಿಗೆ ಹತ್ತಿರನಾಗಿರುವೆನು. ಯಾವಾಗ ನನ್ನನು ಅವನು (ಯಾವುದೇ ಶಿಫಾರಸುದಾರರು ಹಾಗೂ ಮಧ್ಯವರ್ತಿಗಳಿಲ್ಲದೆ) ಕರೆದು ಪ್ರಾರ್ಥಿಸುವನೋ, ಪ್ರಾರ್ಥಿಸುವವನ ಆ ಪ್ರಾರ್ಥನೆಗೆ ನಾನು ಉತ್ತರ ನೀಡುವೆನು. ಹಾಗಾಗಿ, ಅವರು ನನ್ನನ್ನು ಅನುಸರಿಸಲಿ ಮತ್ತು ನನ್ನಲ್ಲಿ ವಿಶ್ವಾಸವಿಡಲಿ, ಆ ಮೂಲಕ ಅವರು ಸರಿ ದಾರಿಯನ್ನು ಪಡೆಯಲೂಬಹುದು.” (ಸೂರಃ ಅಲ್-ಬಕರಃ, 2 : 186)
ಓ ಅಲ್ಲಾಹ್, ನಮ್ಮ ರಬ್ಬ್, ನಮ್ಮ ರಕ್ಷಕನೇ, ನಾವು ನಿನ್ನ ದಾಸರಾಗಿರುವೆವು, ನಿನ್ನ ಅಗತ್ಯಯುಳ್ಳವರಾಗಿರುವೆವು, ನಿನ್ನ ಮುಂದೆ ಕೈದಿಗಳಾಗಿರುವೆವು (ನಿನ್ನ ನಿಯಂತ್ರಣದಡಿಯಲ್ಲಿರುವ ದಾಸರಾಗಿರುವೆವು), ಈ ಸಾಂಕ್ರಾಮಿಕ ರೋಗವನ್ನು ಹಾಗೂ ಈ ವಿಪತ್ತನ್ನು ಮುಖ್ಯವಾಗಿ ಮುಸ್ಲಿಮರಿಂದಲೂ ಹಾಗೂ ಒಟ್ಟಾರೆಯಾಗಿ ಜಗತ್ತಿನಿಂದಲೂ ನಿರ್ಮೂಲನೆ ಮಾಡಲು, ಸಾಮಾನ್ಯವಾಗಿಯೂ ವಿಶೇಷವಾಗಿಯೂ ಅದನ್ನು (ಪ್ರಸ್ತುತ ಸ್ಥಿತಿಯನ್ನು) ನೆಮ್ಮದಿ ಮತ್ತು ಒಳಿತಿನೊಂದಿಗೆ ಬದಲಿಸಲು ನಾವು ನಿನ್ನಲ್ಲಿ ಬೇಡುತ್ತೇವೆ. ಏಕೆಂದರೆ ಖಂಡಿತವಾಗಿಯೂ ನಿನ್ನ ಹೊರತು ಪಾಪಗಳನ್ನು ಕ್ಷಮಿಸುವವರು ಯಾರೂ ಇಲ್ಲ, ನಿನ್ನ ಹೊರತು ವಿಪತ್ತನ್ನು ನಿರ್ಮೂಲನೆ ಮಾಡುವವರು ಯಾರೂ ಇಲ್ಲ. ನೀನಾಗಿರುವೆ ನಮ್ಮ ರಬ್ಬ್, ನಮ್ಮ ರಕ್ಷಕನು, ನೀನೇ ನಮಗೆ ಸಾಕು, (ತನ್ನ ದಾಸರ ಕಾರ್ಯಗಳ ನಿಯಂತ್ರಿಸಲು ಹಾಗೂ ಅವರ ಹಿತವನ್ನು ಕಾಪಾಡಲು) ಅವನು ಅತ್ಯುತ್ತಮ ರಕ್ಷಕನಾಗಿರುವನು.
ಓ ಅಲ್ಲಾಹ್!, ಏನನ್ನು ನೀನು ವಿಧಿಸಿರುವೆಯೋ ಅದನ್ನು ನಿರ್ಮೂಲನೆ ಮಾಡು, ಓ ಅಲ್ಲಾಹ್ ಏನನ್ನು ನೀನು ವಿಧಿಸಿರುವೆಯೋ ಅದನ್ನು ನಿರ್ಮೂಲನೆ ಮಾಡು, ಓ ಅಲ್ಲಾಹ್ ಈ ಸಾಂಕ್ರಾಮಿಕ ರೋಗದಿಂದ ಏನನ್ನು (ನಮಗೆ) ನೀನು ವಿಧಿಸಿರುವೆಯೋ ಅದನ್ನು ನಿರ್ಮೂಲನೆ ಮಾಡು, ವಿಶೇಷವಾಗಿ ಮುಸ್ಲಿಮರಿಗೂ ಒಟ್ಟಾರೆಯಾಗಿ ಜಗತ್ತಿಗೂ ನೆಮ್ಮದಿ, ಸಮಾಧಾನ, ಒಳಿತು ಹಾಗೂ ಕ್ಷೇಮ ಮತ್ತು ಸೌಖ್ಯದ ಮೂಲಕ ಅದರ ಸ್ಥಿತಿಯನ್ನು ಬದಲಾಯಿಸು. ಏಕೆಂದರೆ ಖಂಡಿತವಾಗಿಯೂ ನೀನು ಸರ್ವವನ್ನೂ ಮಾಡಲು ಸಾಮರ್ಥ್ಯವುಳ್ಳವನಾಗಿರುವೆ.
(ಅಲ್ಲಾಹು ಹೇಳಿದನು),
﴿ قُلْ مَن يُنَجِّيكُم مِّن ظُلُمَاتِ الْبَرِّ وَالْبَحْرِ تَدْعُونَهُ تَضَرُّعًا وَخُفْيَةً لَّئِنْ أَنجَانَا مِنْ هَـٰذِهِ لَنَكُونَنَّ مِنَ الشَّاكِرِينَ ٣٦ قُلِ اللَّـهُ يُنَجِّيكُم مِّنْهَا وَمِن كُلِّ كَرْبٍ ثُمَّ أَنتُمْ تُشْرِكُونَ ٤٦ قُلْ هُوَ الْقَادِرُ عَلَىٰ أَن يَبْعَثَ عَلَيْكُمْ عَذَابًا مِّن فَوْقِكُمْ أَوْ مِن تَحْتِ أَرْجُلِكُمْ أَوْ يَلْبِسَكُمْ شِيَعًا وَيُذِيقَ بَعْضَكُم بَأْسَ بَعْضٍ ۗ انظُرْ كَيْفَ نُصَرِّفُ الْآيَاتِ لَعَلَّهُمْ يَفْقَهُونَ ٥٦ ﴾
“(ಅಲ್ಲಾಹುವಿನೊಂದಿಗೆ ಇತರ ಆರಾಧ್ಯರನ್ನು ಕರೆದು ಪ್ರಾರ್ಥಿಸುವವರೊಂದಿಗೆ) ಹೇಳಿರಿ : ಒಂದು ವೇಳೆ ಈ ಆಪತ್ತಿನಿಂದ ಅವನು (ಅಲ್ಲಾಹು) ನಮ್ಮನ್ನು ಪಾರುಮಾಡಿಬಿಟ್ಟರೆ, ಖಂಡಿತವಾಗಿಯೂ ಅವನಿಗೆ ಕೃತಜ್ಞರಾಗುವವರ ಪೈಕಿ ನಾವು ಸೇರುತ್ತಿದ್ದೆವು ಎಂದು ಹೇಳುತ್ತಾ ವಿನಮ್ರತೆಯಿಂದಲೂ ರಹಸ್ಯವಾಗಿಯೂ ನೀವು ಅವನನ್ನು ಕರೆದು ಪ್ರಾರ್ಥಿಸುವಾಗ ನಿಮ್ಮನ್ನು ಭೂಮಿ ಮತ್ತು ಸಮುದ್ರದ (ಚಂಡಮಾರುತಗಳಂತಹ) ವಿಪತ್ತುಗಳಿಂದ ಪಾರುಮಾಡುವವನು ಯಾರು? ಹೇಳಿರಿ : ನಿಮ್ಮನ್ನು ಇದರಿಂದಲೂ ಹಾಗೂ (ಇನ್ನಿತರ) ಎಲ್ಲಾ ವಿಪತ್ತುಗಳಿಂದಲೂ ಪಾರುಮಾಡುವವನು ಅಲ್ಲಾಹುವಾಗಿರುವನು, ಆ ಬಳಿಕವೂ ನೀವು (ಸುಖ ಸೌಕರ್ಯಾವಸ್ಥೆಯಲ್ಲಿ) ಅಲ್ಲಾಹುವಿನ ಹೊರತು ಇತರರನ್ನು ಆರಾಧಿಸುವಿರಿ. ಹೇಳಿರಿ : ನಿಮ್ಮ ಮೇಲ್ಭಾಗದಿಂದಲೂ ಅಥವಾ ಪಾದಗಳ ಕೆಳಭಾಗದಿಂದಲೂ (ಯಾತನಾಮಯವಾದ) ಶಿಕ್ಷೆಯನ್ನು ವಿಧಿಸಲು ಅಥವಾ ನಿಮ್ಮನ್ನು ಗುಂಪು ಕಲಹದ ಗೊಂದಲದಲ್ಲಿ ಹೊದಿಸಿ (ಗುಂಪು ವಿಭಾಗಗಳನ್ನಾಗಿ ವಿಭಜಿಸಿ), ಇತರ ಕೆಲವರ ಹಿಂಸಾಚಾರವನ್ನು ನಿಮ್ಮ ಪೈಕಿ ಇನ್ನಿತರರು ಅನುಭವಿಸುವಂತೆ ಮಾಡಲೂ ಅವನಿಗೆ ಶಕ್ತಿಯಿದೆ…” (ಸೂರಃ ಅಲ್-ಅನ್ಆಮ್, 6 : 63-65)
ಹಾಗಾಗಿ, ಮಹೋನ್ನತನಾದ ಅಲ್ಲಾಹು ಸಕಲವನ್ನೂ ಮಾಡಲು ಸಾಮರ್ಥ್ಯವುಳ್ಳವಾನಾಗಿರುವನು. ಅವನು ತನ್ನ ದಾಸರನ್ನು ಪರೀಕ್ಷಿಸುವನು, ಒಂದುವೇಳೆ ಅವನ ಕರುಣೆ, ಕ್ಷಮೆ ಮತ್ತು ಕೃಪೆ ಇಲ್ಲದಿರುತ್ತಿದ್ದರೆ, ಭೂಮಿಯ ಮೇಲೆ ಯಾವೊಂದು ಜೀವಿಯೂ ಬಾಕಿಯಾಗುತ್ತಿರಲಿಲ್ಲ. ಆದರೆ ಮಹೋನ್ನತನಾದ ಅವನು, ಅತ್ಯಧಿಕ ಕೃಪೆಯುಳ್ಳವನೂ, ಅಪಾರ ಕರುಣಾಮಯಿಯೂ ಆಗಿದ್ದಾನೆ. ಅವನು ಎಲ್ಲದಕ್ಕೂ ಸಾಮರ್ಥ್ಯವುಳ್ಳವನಾಗಿದ್ದಾನೆ. ಅವನು ಅತಿ ಸಮೀಪವಿರುವವನೂ, (ಪ್ರಾರ್ಥನೆಗಳಿಗೆ) ಉತ್ತರಿಸುವವನೂ ಮತ್ತು ಸ್ತುತ್ಯರ್ಹನಾದ ರಕ್ಷಕನೂ ಆಗಿದ್ದಾನೆ.
(ಓ ಅಲ್ಲಾಹ್) ನೀನು ನಮ್ಮ ರಕ್ಷಕನಾಗಿರುವೆ, ಎಂತಹ ಅತ್ಯುನ್ನತ ರಕ್ಷನೂ, ಎಂತಹ ಅತ್ಯುನ್ನತ ಸಹಾಯಕನೂ ಆಗಿರುವೆ. ಓ ಅಲ್ಲಾಹ್ ಏನನ್ನು ನೀನು ವಿಧಿಸಿರುವೆಯೋ ಅದನ್ನು ನಿರ್ಮೂಲನೆ ಮಾಡು, ಓ ಅಲ್ಲಾಹ್ ಏನನ್ನು ನೀನು ವಿಧಿಸಿರುವೆಯೋ ಅದನ್ನು ನಮ್ಮಿಂದಲೂ ವಿಶೇಷವಾಗಿ ಮುಸ್ಲಿಮರಿಂದಲೂ ಹಾಗೂ ಒಟ್ಟಾರೆಯಾಗಿ ಜಗತ್ತಿನಿಂದಲೂ ನಿರ್ಮೂಲನೆ ಮಾಡು. ಓ ಅಲ್ಲಾಹ್! ಕೆಟ್ಟವರ ಕೆಡುಕಿನಿಂದಲೂ, ದುಷ್ಟರ ಸಂಚುಗಳಿಂದಲೂ, ರಾತ್ರಿಯಲ್ಲೂ ಹಗಲಿನಲ್ಲೂ ಏನು ಸಂಭವಿಸುವುದೋ ಅದರ ಕೆಡುಕಿನಿಂದಲೂ ನಮ್ಮನ್ನು ಸಂರಕ್ಷಿಸು. ಏಕೆಂದರೆ ನೀನು ಎಲ್ಲದಕ್ಕೂ ಸಾಮರ್ಥ್ಯವುಳ್ಳವನಾಗಿರುವೆ, ನಿನ್ನ ಹೊರತು ಯಾವುದೇ ಆಶ್ರಯವಾಗಲೀ ರಕ್ಷಣೆಯಾಗಲೀ ಇಲ್ಲ. ನೀನು ಸರ್ವ ನ್ಯೂನತೆಗಳಿಂದಲೂ ಮುಕ್ತನಾಗಿರುವವನೂ ಮಹೋನ್ನತನೂ ಆಗಿರುವೆ, ನಾವು ಅಕ್ರಮಿಗಳ ಪೈಕಿ ಸೇರಿದವರಾಗಿರುವೆವು, ಓ ಅಲ್ಲಾಹ್! ಸರ್ವ ವಿಪತ್ತುಗಳನ್ನೂ, ಸಾಂಕ್ರಾಮಿಕ ರೋಗಗಳನ್ನೂ, ಸರ್ವ ಕೆಡುಕು ಮತ್ತು ಪರೀಕ್ಷೆಗಳನ್ನೂ ನಮ್ಮಿಂದ ನಿರ್ಮೂಲನೆ ಮಾಡು.
ಖಂಡಿತವಾಗಿಯೂ, ನೀನು ಸರ್ವವನ್ನೂ ಮಾಡಲು ಸಾಮರ್ಥ್ಯವುಳ್ಳವನಾಗಿರುವೆ, ನೀನು ನಮ್ಮ ರಕ್ಷಕನಾಗಿರುವೆ, ಅದೆಂತಹ ಅತ್ಯುತ್ತಮ ರಕ್ಷಕನೂ ಸಹಾಯಕನೂ ಆಗಿರುವೆ, ನಮಗೆ ಅಲ್ಲಾಹು ಸಾಕು ಅವನು ಅತ್ಯುತ್ತಮ ರಕ್ಷಕನಾಗಿರುವನು…
ಅಲ್ಲಾಹುವಿನ ಸಲಾತ್ ಮತ್ತು ಸಲಾಮ್ಗಳು ನಮ್ಮ ಪ್ರವಾದಿಯಾದ ಮುಹಮ್ಮದ್ (H) ರವರ ಮೇಲೂ ಅವರ ಕುಟುಂಬದ ಮೇಲೂ ಮತ್ತು ಅವರ ಎಲ್ಲಾ ಸಹಾಬಿಗಳ ಮೇಲೂ ಇರಲಿ.
-ಶೈಖ್ ಸಾಲಿಹ್ ಅಲ್ ಫೌಝಾನ್ (حَفِظَهُ اللَّهُ) ಹಿರಿಯ ವಿದ್ವಾಂಸರು, ಸೌದಿ ಅರೇಬಿಯಾ.
ಅನುವಾದ : ಅಬೂ ಹಮ್ಮಾದ್