ರಮದಾನ್ ಕೊನೆಗೊಳ್ಳುತ್ತಿದ್ದಂತೆ ಕೆಲವು ಹೃದಯಸ್ಪರ್ಶಿ ಉಪದೇಶಗಳು : ಅಶ್ಶೈಖ್ ಸಾಲಿಹ್ ಅಲ್-ಫೌಝಾನ್

w

Play Video
Play Video

ಸೌದಿ ಅರೇಬಿಯಾದ ಹಿರಿಯ ವಿದ್ವಾಂಸರಾದ ಅಶ್ಶೈಖ್ ಸಾಲಿಹ್ ಅಲ್-ಫೌಝಾನ್ (حَفِظَهُ اللَّهُ) ರವರು ಹೇಳಿದರು : 

ನೈಜ ವಿಶ್ವಾಸಿಗಳೇ, ಈ ತಿಂಗಳು (ರಮದಾನ್) ಈಗಾಗಲೇ ಕೊನೆಗೊಂಡಿದೆ ಅಥವಾ ಬಹುತೇಕವಾಗಿ ಕೊನೆಗೊಳ್ಳುತ್ತಿದೆ. ಆದ್ದರಿಂದ ಈ ಕುರಿತಾಗಿ ನಮ್ಮನ್ನು ಸ್ವತಃ ನಾವೇ ಆತ್ಮವಿಮರ್ಶೆ ಮಾಡಿಕೊಳ್ಳೋಣ. (ಅದೇನಂದರೆ) ಈ ಒಂದು ಶ್ರೇಷ್ಟವಾದ ತಿಂಗಳಿನಲ್ಲಿ ನಮಗಾಗಿ ನಾವು ಏನನ್ನು ಪೂರ್ವಭಾವಿಯಾಗಿ ಮಾಡಿಟ್ಟಿದ್ದೇವೆ. (ಈ ತಿಂಗಳಿನಲ್ಲಿ) ಒಳಿತು ಕಾರ್ಯಗಳನ್ನು ಮಾಡಿಕೊಂಡವನಾರೋ ಅವನು ಅಲ್ಲಾಹುವನ್ನು ಸ್ತುತಿಸಲಿ ಮತ್ತು ಉತ್ತಮವಾಗಿ ಅದನ್ನು ಪೂರ್ತೀಕರಿಸಲಿ.

ಇನ್ನು ನಿರ್ಲಕ್ಷ್ಯ ತಾಳಿದವನಾರೋ ಅವನು ಪಶ್ಚಾತ್ತಾಪದೊಂದಿಗೆ ಅದನ್ನು ಸರಿಪಡಿಸಿಕೊಳ್ಳಲಿ. ಯಾಕೆಂದರೆ ಖಂಡಿತವಾಗಿಯೂ ಅಲ್ಲಾಹು ತನ್ನ ದಾಸರಿಂದ ಪಶ್ಚಾತ್ತಾಪವನ್ನು ಸ್ವೀಕರಿಸುವನು ಹಾಗೂ ಅವರ ಪಾಪಗಳನ್ನು ಮನ್ನಿಸುವನು. ಆದ್ದರಿಂದ ಅಲ್ಲಾಹುವಿನ ಕಾರುಣ್ಯದ ಬಗ್ಗೆ ನೀವು ನಿರಾಶರಾಗದಿರಿ.

﴿ إِنَّهُ لَا يَيْأَسُ مِن رَّوْحِ اللَّـهِ إِلَّا الْقَوْمُ الْكَافِرُونَ

“ಸತ್ಯನಿಷೇಧಿಗಳ ಹೊರತು ಬೇರಾರೂ ಅಲ್ಲಾಹುವಿನ ಕಾರುಣ್ಯದ ಬಗ್ಗೆ ಖಂಡಿತ ನಿರಾಶರಾಗುವುದಿಲ್ಲ.” (ಸೂರಃ ಯೂಸುಫ್ : 87)

 

ಇನ್ನು ಒಳಿತು ಕಾರ್ಯಗಳಲ್ಲಿ ತೊಡಗಿಕೊಂಡವನು ಅಥವಾ (ಒಳಿತುಗಳನ್ನು ಮಾಡದೆ) ನಿರ್ಲಕ್ಷವನ್ನು ತಾಳಿದವನಾರೋ ಅವನು ಆ ತಿಂಗಳ (ರಮದಾನಿನ) ಅಂತ್ಯವನ್ನು ಅತ್ಯುತ್ತಮಗೊಳಿಸಲಿ. ಯಾಕೆಂದರೆ ಕರ್ಮಗಳನ್ನು ಅದರ ಅಂತಿಮವನ್ನು (ಕೊನಯ ಕರ್ಮಗಳನ್ನು) ನೋಡಿ ಪರಿಗಣಿಸುವುದಾಗಿದೆ. ಹಾಗೂ ನಿಮ್ಮ ಕರ್ಮಗಳನ್ನು ಅಲ್ಲಾಹು ನಿಮ್ಮಿಂದ ಸ್ವೀಕಾರ ಮಾಡದೇ ಇರಬಹುದು ಎಂಬುದರ ಬಗ್ಗೆ ನಿಮಗೆ ಆತಂಕ ಮತ್ತು ಭಯವಿರಲಿ, ಯಾಕೆಂದರೆ ಅಲ್ಲಾಹು ಹೇಳುತ್ತಾನೆ :

﴿ إِنَّمَا يَتَقَبَّلُ اللَّـهُ مِنَ الْمُتَّقِينَ

“ಅಲ್ಲಾಹು ಭಯಭಕ್ತಿಯುಳ್ಳವರಿಂದ ಮಾತ್ರ ಸ್ವೀಕರಿಸುತ್ತಾನೆ.” (ಅಲ್-ಮಾಇದಃ : 27)

 

ಆದ್ದರಿಂದ ಸ್ವತಃ ನಿಮ್ಮ ಕುರಿತು ಹಾಗೂ ನಿಮ್ಮ ಉದ್ದೇಶ ಮತ್ತು ಗುರಿಗಳೇನೆಂಬುದರ ಬಗ್ಗೆ ಆಲೋಚಿಸಿರಿ. ನಿಮ್ಮ ಪೈಕಿ ಯಾರೊಬ್ಬರೂ ಕೂಡ ತನ್ನ ಸತ್ಕರ್ಮಗಳಿಂದ (ಸ್ವಯಂ) ಅಚ್ಚರಿಪಡದಿರಲಿ ಅಥವಾ ತನ್ನ ಮೇಲೆ ಕಡ್ಡಾಯವಾಗಿರುವುದನ್ನು ತಾನು ಮಾಡಿ ನಿರ್ವಹಿಸಿದ್ದೇನೆ ಹಾಗೂ ತಾನು ಅಲ್ಲಾಹುವಿನ ಹಕ್ಕನ್ನು ನೆರವೇರಿಸಿದ್ದೇನೆಂದು ನೀವು ಭಾವಿಸದಿರಿ. ಇದರ ಹೊರತಾಗಿ, ತಾನೋರ್ವ ಕೊರತೆಯುಳ್ಳವನೂ ಹಾಗೂ ಅಲಕ್ಷಗೊಂಡವನೂ ಆಗಿ ಸ್ವತಃ ಪರಿಗಣಿಸಬೇಕು ಮತ್ತು ತನ್ನ ರಬ್ಬ್‌ನ ಮುಂದೆ ತನ್ನನ್ನು ಸ್ವತಃ ಕೀಳಾಗಿ ಕಡೆಗಣಿಸಬೇಕು. ಒಂದು ವೇಳೆ ಸಾಸಿವೆ ಕಾಳಿನಷ್ಟು (ಸತ್ಕರ್ಮಗಳನ್ನು) ಅಲ್ಲಾಹು ನನ್ನಿಂದ ಸ್ವೀಕರಿಸುವನೆಂದು ನಾನು ಅರಿತಿದ್ದರೆ, ಖಂಡಿತವಾಗಿಯೂ ನಾನು ಮರಣವನ್ನು ಆಶಿಸುತ್ತಿದ್ದೆ ಎಂದು ಸಲಫ್‌ಗಳ ಪೈಕಿ ಕೆಲವರು ಹೇಳುತ್ತಿದ್ದರು. ಅದು (ಆ ಮಾತುಗಳು) ಅಲ್ಲಾಹುವಿನ ಮೇಲೆ ಅತೀವ ಭಯದ ಕಾರಣದಿಂದಾಗಿದ್ದವು. ಅಲ್ಲಾಹು ತನ್ನ ಅತ್ಯುತ್ತಮ ದಾಸರನ್ನು ವಿವರಿಸಿರುವನು ಮತ್ತು (ಹೀಗೆ) ಹೇಳಿದನು :

﴿ وَالَّذِينَ يُؤْتُونَ مَا آتَوا وَّقُلُوبُهُمْ وَجِلَةٌ أَنَّهُمْ إِلَىٰ رَبِّهِمْ رَاجِعُونَ  أُولَـٰئِكَ يُسَارِعُونَ فِي الْخَيْرَاتِ وَهُمْ لَهَا سَابِقُونَ

“ತಮ್ಮ ರಬ್ಬ್‌ನೆಡೆಗೆ ತಾವು ಮರಳಲಿಕ್ಕಿದೆ ಎಂದು ಹೃದಯಗಳಲ್ಲಿ ಭಯವಿಟ್ಟುಕೊಂಡು ದಾನವಾಗಿ ಕೊಡುವುದನ್ನು ಅವರು ಕೊಡುತ್ತಲೇ ಇರುವವರು. (ಹೀಗೆ) ಸತ್ಕಾರ್ಯಗಳಲ್ಲಿ ತವಕ ಪಡುವವರು ಅವರೇ ಆಗಿರುವರು ಮತ್ತು ಅವುಗಳಲ್ಲಿ ಅವರು ಅಗ್ರಗಣ್ಯರಾಗಿರುವರು.” (ಸೂರಃ ಅಲ್-ಮುಅ್‌ಮಿನೂನ್ : 60-61)

 

ಸತ್ಯವಿಶ್ವಾಸಿಗಳ ಮಾತೆ, ಆಯಿಶಃ (J) ಕೇಳಿದರು :

“ಓ ಅಲ್ಲಾಹುವಿನ ರಸೂಲರೇ! ವ್ಯಭಿಚಾರ ಮತ್ತು ಮದ್ಯಪಾನ ಮಾಡಿ, ತಮ್ಮ ಪಾಪಗಳ ನಿಮಿತ್ತ ಶಿಕ್ಷಿಸಲ್ಪಡುವರೆಂಬುದನ್ನು ಅವರು ಭಯಪಡುವವರಾಗಿರುವರೇ? ಆಗ ಅವರು (ಪ್ರವಾದಿ) ಹೇಳಿದರು : ಅಲ್ಲ! ಓ ಸಿದ್ದೀಕ್‌ರ ಪುತ್ರಿ. ಅವರು ಅಲ್ಲಾಹುವಿನ ಆಜ್ಞೆಗಳನ್ನು ಅನುಸರಣೆ ಮಾಡಿದವರಾಗಿರುವರು ಹಾಗೂ ಒಳಿತುಗಳನ್ನು ಮಾಡಿಯೂ ತಮ್ಮ ಸತ್ಕರ್ಮಗಳು ಅವರಿಂದ ಸ್ವೀಕಾರಗೊಳ್ಳದೆ ತಿರಸ್ಕರಿಸಲ್ಪಡುವುದನ್ನು ಅವರು ಭಯಪಡುವವರಾಗಿರುವರು.”

 

ಆದ್ದರಿಂದ ನಮ್ಮ ಸತ್ಕರ್ಮಗಳು ತಿರಸ್ಕರಿಸಲ್ಪಡುವ ಸಾಧ್ಯತೆಯನ್ನು ನಾವು ಭಯಪಡಬೇಕಾಗಿದೆ ಮತ್ತು ಅದರಿಂದ (ಸತ್ಕರ್ಮಗಳಿಂದ) ನಾವು ಸ್ವತಃ ಅಚ್ಚರಿಪಡಬಾರದು ಹಾಗೂ ಅವುಗಳನ್ನು ಅತಿಯಾಗಿ ಮಾಡಿದ್ದೇವೆ ಎಂದು ಸಹ ನಾವು ಭಾವಿಸಬಾರದು. ಯಾಕೆಂದರೆ, (ನಮ್ಮ ಮೇಲಿರುವ) ಅಲ್ಲಾಹುವಿನ ಹಕ್ಕನ್ನು ಪರಿಗಣಿಸಿದರೆ ಅದು (ನಮ್ಮ ಸತ್ಕರ್ಮಗಳು) ಕೇವಲ ಅಲ್ಪ ಮಾತ್ರ. ಯಾಕೆಂದರೆ ನಮ್ಮ ಮೇಲಿರುವ ಅಲ್ಲಾಹುವಿನ ಹಕ್ಕು ಬಹು ದೊಡ್ಡದು. ಆದರೆ ಅವನು (ಅಲ್ಲಾಹು) ತನ್ನ ಔದಾರ್ಯತೆಯಿಂದ ಮನ್ನಿಸುವನು ಮತ್ತು ಅವನು ಉದಾರತೆ ಮತ್ತು ಕರುಣೆಯನ್ನು ತೋರುವನು. ಆದರೆ ಅದು ತನ್ನ ರಬ್ಬ್‌ನ ಕುರಿತು ಉತ್ತಮ ಊಹೆಯನ್ನಿಟ್ಟುಕೊಂಡವನಿಗಾಗಿದೆ. ಆದ್ದರಿಂದ ನಿಮ್ಮ ರಬ್ಬ್‌ನ ಕುರಿತು ನೀವು ಉತ್ತಮ ಊಹೆಯನ್ನಿಟ್ಟುಕೊಳ್ಳಿರಿ ಮತ್ತು (ಅವನಿಂದ) ಉತ್ತಮವಾದುದನ್ನು ನಿರೀಕ್ಷಿಸಿರಿ ಹಾಗೂ ಸತ್ಕಾರ್ಯಗಳನ್ನು ಮಾಡಿರಿ.

ಅನುವಾದ : ಅಬೂ ಹಮ್ಮಾದ್