w
ಸೌದಿ ಅರೇಬಿಯಾದ ಹಿರಿಯ ವಿದ್ವಾಂಸರೊಂದಿಗೆ ಈ ಕೆಳಗಿನಂತೆ ಪ್ರಶ್ನಿಸಲಾಯಿತು :
1. ಮಾಸ್ಕ್ (ಮುಸುಕು) ಮತ್ತು ಗ್ಲೌಸ್‍ಗಳನ್ನು (ಕೈಗವಸುಗಳು) ಧರಿಸಿವುದರ ವಿಧಿ
ಪ್ರಶ್ನೆ : (ಕೊರೊನಾ) ವೈರಸ್ ಸೋಂಕಿಗೆ ತುತ್ತಾಗುವುದನ್ನು ಭೀತಿಗೊಳಗಾಗುವ ಸ್ಥಳದಲ್ಲಿ (ಸನ್ನಿವೇಶದಲ್ಲಿ) ಮಾಸ್ಕ್ ಮತ್ತು ಗ್ಲೌಸ್‍ಗಳನ್ನು ಧರಿಸಿ ನಮಾಝ್ ನಿರ್ವಹಿಸುವುದರ ವಿಧಿಯೇನು?
ಉತ್ತರ : ಆ ರೀತಿ ಮಾಡುವುದರಲ್ಲಿ ಯಾವುದೇ ವಿರೋಧವಿಲ್ಲ.
2. (ಕೊರೊನಾ) ವೈರಸ್ ಸೋಂಕಿಗೆ ತುತ್ತಾಗುವ ಭಯದಿಂದಾಗಿ ನಮಾಝ್ ನಿರ್ವಹಿಸುವವರ ಮಧ್ಯೆ ಅಂತರವಿರುವುದರ ವಿಧಿ
ಪ್ರಶ್ನೆ : ನಾವು ಕ್ಲಿನಿಕ್‌ನಲ್ಲಿ (ಚಿಕಿತ್ಸಾಲಯದಲ್ಲಿ) ಕೆಲಸಮಾಡುತ್ತೇವೆ ಮತ್ತು ಇಮಾಮ್ ನಮ್ಮ ಮುಂದೆ ನಿಂತು ನಾವೆಲ್ಲರೂ ಜಮಾಅತ್ಆಗಿ (ಸಾಮೂಹಿಕವಾಗಿ) ಒಂದೇ ಸಾಲಿನಲ್ಲಿ (ಪರಸ್ಪರ) ಬೇರ್ಪಟ್ಟು ವ್ಯಕ್ತಿಗಳ ನಡುವೆ ಒಂದು ಮೀಟರ್ ಅಂತರ ಕಾಯ್ದುಕೊಂಡು ನಮಾಝ್ ನಿರ್ವಹಿಸುತ್ತೇವೆ. ಈ ವಿಧಾನದಲ್ಲಿ ನಮಾಝ್ ನಿರ್ವಹಿಸುವುದು ಸರಿಯೇ?
ಉತ್ತರ : ಆ ರೀತಿಯಾಗಿ (ನಮಾಝ್ ನಿರ್ವಹಿಸುದರಲ್ಲಿ) ಯಾವುದೇ ಅಡ್ಡಿಯಿಲ್ಲ.
3. ಕೊರೊನಾ ವೈರಸ್‌ನ ಕಾರಣದಿಂದಾಗಿ ವುದೂ ನಿರ್ವಹಿಸಲು ಕಷ್ಟವಾಗುವವನು ನಮಾಝ್ ನಿರ್ವಹಿಸುವುದು ಹೇಗೆ?
ಪ್ರಶ್ನೆ : ಕೊರೊನಾ ವೈರಸ್‌ಗೆ ತುತ್ತಾಗಿರುವ ಕೆಲವರಿಗೆ ವುದೂ ನಿರ್ವಸಲಾಗುವುದಿಲ್ಲ ಆದರೆ ತಯಮ್ಮುಮ್ ನಿರ್ವಹಿಸಲು (ಅವರಿಗೆ) ಸಾಧ್ಯವಿದೆ. ಅದಾಗ್ಯೂ, (ತಯಮ್ಮುಮ್ ನಿರ್ವಹಿಸುವುದರಿಂದಾಗಿ ಅದರ) ಧೂಳು/ ಕೊಳೆಯು ವೆಂಟಿಲೇಟರ್‌ನೊಳಗೆ (ಕೃತಕ ಶ್ವಾಸಯಂತ್ರದೊಳಗೆ) ಹೋಗಿ ಅದು ಅವರ ಸಾವಿಗೆ ಕಾರಣವಾಗಬಹುದೆಂದು ಅವರು ಆತಂಕಪಡುತ್ತಾರೆ. ಹಾಗಾಗಿ, ಶುದ್ಧಿಗೆ ಸಂಭಂಧಿಸಿದಂತೆ ಅದರ ವಿಧಿಯೇನು?
ಉತ್ತರ : ಒಂದುವೇಳೆ ತಯಮ್ಮುಮ್ ನಿರ್ವಹಿಸುವುದು ಅವರಿಗೆ ಹಾನಿಯನ್ನುಂಟು ಮಾಡುವುದಾದರೆ, ಅವರು ಯಾವ ಸ್ಥಿತಿಯಲ್ಲಿರುವರೋ ಅದರಲ್ಲೇ ಅವರು ನಮಾಝ್ ನಿರ್ವಹಿಸಲಿ.
4. ವೈದ್ಯಕೀಯ/ಆರೋಗ್ಯ ಸಿಬ್ಬಂದಿಗಳಿಗೆ ತಯಮ್ಮುಮ್‌ನ ವಿಧಿ
ಪ್ರಶ್ನೆ : ಕೊರೊನಾ ವೈರಸ್ ಸೋಂಕಿಗೆ ತುತ್ತಾದ ರೋಗಿಗಳಿಗೆ ಶುಶ್ರೂಷೆ ಮಾಡುವವರು ತಮ್ಮ (ವೈದ್ಯಕೀಯ) ರಕ್ಷಾಕವಚಗಳನ್ನು ಕಳಚಲು ಕಷ್ಟಸಾಧ್ಯವಾಗುವ ಕಾರಣದಿಂದಾಗಿ ತಯಮ್ಮುಮ್ ನಿರ್ವಹಿಸುವುದು ಅವರಿಗೆ ಸಮ್ಮತಾರ್ಹವೇ?
ಉತ್ತರ : ಅವರಿಗೆ ತಮ್ಮ ರಕ್ಷಾಕವಚವನ್ನು ಕಳಚಿಹಾಕಲು ಸಾಧ್ಯವಾಗದಿದ್ದರೆ ಅಥವಾ ಅವುಗಳನ್ನು ಕಳಚುವುದರಿಂದ ಅವರಿಗೆ ಹಾನಿಗೀಡಾಗುವುದಾದರೆ, ಆಗ ಅವರು ಯಾವ ಸ್ಥಿತಿಯಲ್ಲಿರುವರೋ ಅದರಲ್ಲೇ ಅವರು ನಮಾಝ್ ನಿರ್ವಹಿಸಬೇಕು.
5. ರೋಗಿಯನ್ನು (ಜೀವಪಾಯದಿಂದ) ಕಾಪಾಡುವುದಕ್ಕಾಗಿ ನಿಗದಿತ ಸಮಯಕ್ಕಿಂತ ಹೊರತಾಗಿ ನಮಾಝ್ಅನ್ನು ವಿಳಂಬಿಸುವುದು.
ಪ್ರಶ್ನೆ : ಅತ್ಯಂತ ಸಂದಿಗ್ಧ ಸಂದರ್ಭಗಳಲ್ಲಿ ಕಾರ್ಯನಿರ್ವಹಿಸುವ ವೈದ್ಯಕೀಯ/ಆರೋಗ್ಯ ಸಿಬ್ಬಂದಿಯು ನಮಾಝ್ಅನ್ನು ಅದರ ನಿಗದಿತ ಸಮಯದಲ್ಲಿ ನಿರ್ವಹಿಸಲು ಸಾಧ್ಯವಾಗುವುದಿಲ್ಲ ಹಾಗೂ ರೋಗಿಯೋರ್ವನನ್ನು ಸಾಯುವುದರಿಂದ ರಕ್ಷಿಸುವ ಪ್ರಯತ್ನದಲ್ಲಿ ನಮಾಝ್‌ನ ನಿಗದಿತ ಸಮಯವು ದಾಟುವ ತನಕ (ರೋಗಿಯನ್ನು ಕಾಪಾಡುವ ಕಾರ್ಯದಲ್ಲಿ ಅವರು) ನಿರತರಾಗಿರುವರು. (ಆದ್ದರಿಂದ ಇದಕ್ಕೆ ಸಂಬಂಧಿಸಿದಂತಿರುವ ವಿಧಿಯೇನು?)
ಉತ್ತರ : ಅವರಿಗೆ ಸಾಧ್ಯವಾದಷ್ಟು ಬೇಗನೆ ಅವರು ನಮಾಝ್ ನಿರ್ವಹಿಸಬೇಕು, ಅದು ಅದರ (ನಮಾಝಿನ) ನಿಗದಿತ ಸಮಯ ಕಳೆದ ನಂತರವಾದರೂ ಸರಿ.
6. ನಿಗದಿತ ಸಮಯವು ಬಂದಾಗ ವುದೂ ನಿರ್ವಹಿಸಲು ಸಾಧ್ಯವಾಗದ ರೋಗಿಯ ನಮಾಝ್
ಪ್ರಶ್ನೆ : ಓರ್ವ ವ್ಯಕ್ತಿಯು ಕೊರೊನಾ ವೈರಸ್‌ನಿಂದ ರೋಗಪೀಡಿತನಾಗಿದ್ದು ಶುದ್ಧಿಯ ಸ್ಥಿತಿಯಲ್ಲಿರದಿದ್ದರೆ ಹಾಗೂ ಸುತ್ತಮುತ್ತ (ಶುಚಿಯಾಗಲು ಯಾವುದೇ) ಶೌಚಾಲಯ/ ಸ್ನಾನಕೊಠಡಿಯಿಲ್ಲದ ಪ್ರದೇಶದಲ್ಲಿ ಉಳಿದುಕೊಂಡಿರುವಾಗ (ಆ ವೇಳೆ) ನಮಾಝಿನ ವೇಳೆಯು ಸಮೀಪಿಸಿದರೆ (ಶುಚಿಯಾಗಲು) ಅವರು ತಮ್ಮ ಜಾಗವನ್ನು ತೊರೆಯುವುದರಿಂದ ಅವರು ಹಾನಿಗೊಳಗಾಗುತ್ತಾರೆ, ಹಾಗಾದರೆ ಅವರು ವುದೂ ಮತ್ತು ನಮಾಝ್ಅನ್ನು ನಿರ್ವಹಿಸುವುದು ಹೇಗೆ?
ಉತ್ತರ : ಅವರು ತಮ್ಮ ಪ್ರಸ್ತುತ ಸ್ಥಿತಿಗೆ ಅನುಸಾರವಾಗಿ ನಮಾಝ್ ನಿರ್ವಹಿಸಬೇಕಾಗಿದೆ. ಅವರೊಂದುವೇಳೆ ನೀರನ್ನು ಉಪಯೋಗಿಸಿಕೊಂಡು ತಮ್ಮನ್ನು ಶುದ್ಧಿಗೊಳಿಸಲು ಸಮರ್ಥರಾಗಿದ್ದರೆ ಅವರು ಆ ರೀತಿ ಮಾಡುವುದು ಕಡ್ಡಾಯವಾಗಿದೆ. ಒಂದುವೇಳೆ ಅವರು ಅಸಮರ್ಥರಾಗಿದ್ದರೆ, (ಅವರು) ತಯಮ್ಮುಮ್ ನಿರ್ವಹಿಸಲಿ, ಒಂದುವೇಳೆ ಅವರಿಗೆ ವುದೂ ಆಗಲೀ ತಯಮ್ಮುಮ್ ಆಗಲೀ (ಇವೆರಡೂ) ನಿರ್ವಹಿಸಲು ಸಾಧ್ಯವಾಗದಿದ್ದರೆ, ಅವರು ತಮ್ಮ ಯಥಾಸ್ಥಿತಿಯಲ್ಲಿ ನಮಾಝ್ ನಿರ್ವಹಿಸಬೇಕು.
7. ವೈದ್ಯಕೀಯ/ಆರೋಗ್ಯ ಸಿಬ್ಬಂದಿಗಳಲ್ಲಿ ಅಸಮರ್ಥತೆಯ ಭಾವನೆಗಳು
ಪ್ರಶ್ನೆ : ಕೊರೊನಾ ವೈರಸ್‌ನಿಂದ ರೋಗಪೀಡಿತನಾದ ವ್ಯಕ್ತಿಯು ಅತ್ಯಂತ ಭೀಕರ ಸ್ಥಿತಿಯಲ್ಲಿ ಬಂದಾಗ, ವೈದ್ಯಕೀಯ ಸಿಬ್ಬಂದಿಯು (ಪ್ರಥಮವಾಗಿ) ರಕ್ಷಾಕವಚವನ್ನು ಧರಿಸಬೇಕಾಗಿದೆ, ಅದು (ರೋಗಿಗೆ) ಚಿಕಿತ್ಸೆ ನೀಡಲು ಆರಂಭಿಸುವುದರಲ್ಲಿ ಕೆಲವು ನಿಮಿಷಗಳ ವಿಳಂಬಕ್ಕೆ ಕಾರಣವಾಗುತ್ತದೆ, ಅದು ಕೆಲವು ವೈದ್ಯಕೀಯ ಸಿಬ್ಬಂದಿಗಳಲ್ಲಿ ಅಸಮರ್ಥತೆಯ ಭಾವನೆಗಳನ್ನು ಉಂಟುಮಾಡುತ್ತದೆ, ಹಾಗಾಗಿ ಇದರಿಂದ (ಈ ವಿಳಂಬದಿಂದ) ಅವರು ಪಾಪಗ್ರಸ್ತರೇ?
ಉತ್ತರ : (ಇದರಲ್ಲಿ) ಅವರ ಮೇಲೆ ಯಾವುದೇ ಆಕ್ಷೇಪಣೆಯಿಲ್ಲ.
8. ಕೊರೊನಾ ವೈರಸ್ ಸೋಂಕಿಗೆ ತುತ್ತಾದ ರೋಗಿಗಳಿಗೆ ಚಿಕಿತ್ಸೆ ನೀಡುವ ಕಾರ್ಯದಲ್ಲಿ ತಾಳ್ಮೆ ವಹಿಸುವುದು ಮತ್ತು (ಅಲ್ಲಾಹುವಿನ) ಪ್ರತಿಫಲವನ್ನು ಅರಸುವುದು.
ಪ್ರಶ್ನೆ : ರೋಗಿಗಳಿಗೆ ಚಿಕಿತ್ಸೆ ನೀಡುವಾಗ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳು (ಕೊರೊನಾ ವೈರಸ್‌ಗೆ) ತುತ್ತಾಗುವ ಭೀತಿಯಿದೆ. ಅವರಿಗೆ ಉಪದೇಶ ಮತ್ತು ಉತ್ತೇಜನದ ಕೆಲವು ನುಡಿಗಳನ್ನು ತಾವು ನೀಡಬಲ್ಲಿರಾ?
ಉತ್ತರ : ತಮ್ಮ ಈ ಕೆಲಸದಲ್ಲಿ ಅವರು ಸಹನೆಯನ್ನು ಕೈಗೊಂಡು, (ಈ ಸೇವೆಗಳಿಗೆ) ಅಲ್ಲಾಹುವಿನ ಬಳಿ ಪ್ರತಿಫಲವನ್ನು ಅರಸಬೇಕಾಗಿದೆ. ಆದ್ದರಿಂದ ಇದರಲ್ಲಿ (ಈ ಸೇವೆಯನ್ನು ನಿರ್ವಹಿಸುವುದರಿಂದ) ತಮ್ಮ ರೋಗಪೀಡಿತ ಸಹೋದರರು ಮತ್ತು ಸಹೋದರಿಯರಿಗೆ ಪ್ರಯೋಜನವಾಗುವುದು.
9. ಕೊರೊನಾ ವೈರಸ್ ಸೋಂಕಿನ ಭೀತಿಯಿಂದಾಗಿ ಪೋಷಕರನ್ನು ಸಂದರ್ಶಿಸದೆ ಇರುವುದರ ವಿಧಿ
ಪ್ರಶ್ನೆ : ಒಂದುವೇಳೆ ಕೊರೊನಾ ವೈರಸ್ ರೋಗಿಗಳೊಂದಿಗೆ ಬೆರೆಯುವ ವೈದ್ಯಕೀಯ ಸಿಬ್ಬಂದಿಯು ಸೋಂಕು ಹರಡುವ ಭೀತಿಯಿಂದ ತಮ್ಮ ಮಾತಾಪಿತರನ್ನು ಸಂದರ್ಶಿಸುವುದನ್ನು ಬಿಟ್ಟರೆ ಅದನ್ನು (ಪೋಷಕರಿಗೆ ತೋರುವ) ಅವಿಧೇಯತೆಯೆಂದು ಪರಿಗಣಿಸಲಾಗುವುದೇ?
ಉತ್ತರ : ಏನನ್ನು (ಈ ಮೇಲೆ ಮುಂಜಾಗ್ರತಾ ಕ್ರಮವಾಗಿ) ಉಲ್ಲೇಖಿಸಲಾಗಿದೆಯೋ ಅದನ್ನು (ಮಾತಾಪಿತರಿಗೆ ತೋರುವ) ಅವಿಧೇಯತೆಯೆಂದು ಪರಿಗಣಿಸಲಾಗುವುದಿಲ್ಲ.
ಸೌದಿ ಅರೇಬಿಯಾದ ಫತ್ವಾ ಸಮಿತಿ :
ಅಶ್ಶೈಖ್ ಅಬ್ದುಲ್ ಅಝೀಝ್ ಬಿನ್ ಅಬ್ದುಲ್ಲಾಹ್ ಬಿನ್ ಮುಹಮ್ಮದ್ ಆಲ್ ಅಶ್ಶೈಖ್
ಅಶ್ಶೈಖ್ ಸಾಲಿಹ್ ಬಿನ್ ಫೌಝಾನ್ ಅಲ್-ಫೌಝಾನ್
ಅಶ್ಶೈಖ್ ಮುಹಮ್ಮದ್ ಬಿನ್ ಹಸನ್ ಆಲ್ ಅಶ್ಶೈಖ್
ಅಶ್ಶೈಖ್ ಅಬ್ದುಸ್ಸಲಾಮ್ ಬಿನ್ ಅಬ್ದುಲ್ಲಾಹ್ ಅಸ್-ಸುಲೈಮಾನ್
ಫತ್ವಾ ಸಂಖ್ಯೆ : #28068, ದಿನಾಂಕ : 17 ರಮದಾನ್, 1441 ಹಿಜ್ರಿ
ಅನುವಾದ : ಅಬೂ ಹಮ್ಮಾದ್
ಅರಬಿಕ್ ಆವೃತ್ತಿಗಾಗಿ ಇಲ್ಲಿ ಕ್ಲಿಕ್ ಮಾಡಿ