ದುಲ್-ಹಿಜ್ಜಃ ಪ್ರಥಮ ಹತ್ತು ದಿನಗಳ ಶ್ರೇಷ್ಠತೆಗಳು : ಅಲ್-ಇಮಾಮ್ ಮುಹಮ್ಮದ್ ಬಿನ್ ಸಾಲಿಹ್ ಅಲ್-ಉಸೈಮೀನ್

w

ಸೌದಿ ಅರೇಬಿಯಾದ ಹಿರಿಯ ವಿದ್ವಾಂಸರಾದ ಅಶ್ಶೈಖ್ ಮುಹಮ್ಮದ್ ಬಿನ್ ಸಾಲಿಹ್ ಅಲ್-ಉಸೈಮೀನ್ (V) ರವರು ಹೇಳಿದರು :

ಹೇರಳ ಮತ್ತು ಅನುಗ್ರಹಪೂರ್ಣವಾದ ಸರ್ವಸ್ತುತಿಗಳೂ ಅಲ್ಲಾಹುವಿಗೆ ಮೀಸಲು. ಅಲ್ಲಾಹುವಿನ ಹೊರತು ಆರಾಧನೆಗೆ ನೈಜ ಹಕ್ಕುದಾರರು ಯಾರೂ ಇಲ್ಲವೆಂದು ನಾನು ಸಾಕ್ಷ್ಯವಹಿಸುತ್ತೇನೆ. ಅದೆಂತಹ ಸಾಕ್ಷ್ಯವಚನವೆಂದರೆ ಯಾರದನ್ನು ಹೇಳುವನೋ ಅವನನ್ನು ಅದು ಅಲ್ಲಾಹುವಿನ ಶಿಕ್ಷೆಯಿಂದ ರಕ್ಷಿಸುವುದು. ಮತ್ತು ಖಂಡಿತವಾಗಿಯೂ ಮುಹಮ್ಮದ್ (H) ರವರು ಅವನ (ಅರ್ಥಾತ್ ಅಲ್ಲಾಹುವಿನ) ದಾಸರೂ ಸಂದೇಶವಾಹಕರೂ ಆಗಿರುವರೆಂದು ನಾನು ಸಾಕ್ಷ್ಯವಹಿಸುತ್ತೇನೆ. ಅಲ್ಲಾಹುವಿನ ಸಲಾತ್ ಮತ್ತು ಸಲಾಮ್‌ಗಳು ಅವರ ಮೇಲೂ, ಅವರ ಕುಟುಂಬದ ಮೇಲೂ, ಅವರ ಸಹಚರರ ಮೇಲೂ ಮತ್ತು ಪ್ರತಿಫಲದ ದಿನದ ತನಕ ಅವರನ್ನು ಪರಿಪೂರ್ಣವಾಗಿ ಅನುಸರಿಸಿದವರ ಮೇಲೂ ಇರಲಿ. ಮುಂದುವರಿದು ಹೇಳುವುದೇನೆಂದರೆ,

ಓ ಅಲ್ಲಾಹುವಿನ ದಾಸರೇ, ಖಂಡಿತವಾಗಿಯೂ ನೀವು ಆ ಅನುಗ್ರಹಪೂರ್ಣವಾದ ಹತ್ತು ದಿನಗಳನ್ನು ಪ್ರವೇಶಿಸುತ್ತಿರುವಿರಿ -ಯಾವುದನ್ನು ಅಲ್ಲಾಹು ತನ್ನ ವಚನದ ಮೂಲಕ ಪ್ರಮಾಣ ಮಾಡಿರುವನೋ :

﴿وَالْفَجْرِ ١ وَلَيَالٍ عَشْرٍ ٢

“ಮುಂಜಾನೆಯ ಮೇಲಾಣೆ!, ಹತ್ತು ರಾತ್ರಿಗಳ ಮೇಲಾಣೆ!”” (ಸೂರಃ ಅಲ್-ಫಜ್ರ್ : 1-2)

 

ಅನೇಕ ಕುರ್‌ಆನ್ ವ್ಯಾಖ್ಯಾನಕಾರರಾದ ವಿದ್ವಾಂಸರ ಪ್ರಕಾರ ಹತ್ತು ರಾತ್ರಿಗಳು ಎಂಬುದರ ಉದ್ದೇಶವೇನೆಂದರೆ ಅವುಗಳು ದುಲ್-ಹಿಜ್ಜಃ ತಿಂಗಳ (ಪ್ರಥಮ) ಹತ್ತು ದಿನಗಳಾಗಿವೆ. ಪ್ರವಾದಿ (H) ರವರು ಅವುಗಳ ಕುರಿತು ಹೇಳಿರುವರು :

“ಈ ದಿನಗಳಲ್ಲಿ (ಅರ್ಥಾತ್ ದುಲ್-ಹಿಜ್ಜಃ ತಿಂಗಳ ಮೊದಲ ಹತ್ತು ದಿನಗಳಲ್ಲಿ) ನಿರ್ವಹಿಸುವ ಸತ್ಕಾರ್ಯಗಳಿಗಿಂತ ಅಲ್ಲಾಹುವಿಗೆ ಹೆಚ್ಚು ಇಷ್ಟಕರವಾದ ಬೇರೆ ಯಾವುದೇ ದಿನಗಳಿಲ್ಲ.” ಅವರು (ಅರ್ಥಾತ್ ಸಹಾಬಿಗಳು) ಕೇಳಿದರು : ಓ ಅಲ್ಲಾಹುವಿನ ಸಂದೇಶವಾಹಕರೇ, ಅಲ್ಲಾಹುವಿನ ಮಾರ್ಗದಲ್ಲಿರುವ ಹೋರಾಟಕ್ಕಿಂತಲೂ (ಅದು ಶ್ರೇಷ್ಠವೇ)? ಅವರು (H) ಉತ್ತರಿಸಿದರು : ಅಲ್ಲಾಹುವಿನ ಮಾರ್ಗದಲ್ಲಿರುವ ಹೋರಾಟಕ್ಕಿಂತಲೂ (ಅದು ಶ್ರೇಷ್ಠವಾಗಿದೆ), ಆದರೆ ಸ್ವತಃ ತನ್ನ ಸಂಪತ್ತು ಮತ್ತು ಶರೀರದೊಂದಿಗೆ (ಹೋರಾಡುವುದಕ್ಕಾಗಿ) ಹೊರಟು ಅವುಗಳಾವುದರೊಂದಿಗೂ ಮರಳದವನನ್ನು ಹೊರತುಪಡಿಸಿ.” ಅರ್ಥಾತ್ ಅವನು (ಹೋರಾಟಕ್ಕೆ) ಹೊರಟು ಹುತಾತ್ಮನಾದನು ಮತ್ತು ಯಾವುದರೊಂದಿಗೂ ಹಿಂತಿರುಗಲಿಲ್ಲ. (ಈ ರೀತಿ ಹೋರಾಟದಲ್ಲಿ ಹುತಾತ್ಮನಾದವನನ್ನು ಹೊರತುಪಡಿಸಿ).

ಹಾಗಾಗಿ, ಈ ಹತ್ತು ದಿನಗಳಲ್ಲಿ ಅಧಿಕಗೊಳಿಸಿರಿ, ಓ ಸಹೋದರರೇ, ಸತ್ಕರ್ಮಗಳನ್ನು ಅಧಿಕಗೊಳಿಸಿರಿ. ನಮಾಝ್, ಕುರ್‌ಆನ್ ಪಾರಾಯಣ, ಮಹೋನ್ನತನಾದ ಅಲ್ಲಾಹುವಿನ ದಿಕ್ರ್, ದಾನ ನೀಡುವುದು, ಉಪವಾಸ ಆಚರಿಸುವುದು (ಮುಂತಾದವುಗಳನ್ನು ಅಧಿಕಗೊಳಿಸಿರಿ).

ಏಕೆಂದರೆ ಖಂಡಿತವಾಗಿಯೂ, ಸತ್ಕರ್ಮಗಳೆಡೆಗೆ ಧಾವಿಸಲು ಒಂದು ಉತ್ತೇಜನವಾಗಿಯೇ ಹೊರತು ಪ್ರವಾದಿ (H) ರವರು ಈ ಹೇಳಿಕೆಯನ್ನು ನೀಡಿಲ್ಲ.

ಗಟ್ಟಿ ಧ್ವನಿಯಲ್ಲಿ ಹಾಗೂ ಹೇರಳವಾಗಿ ತಕ್ಬೀರ್‌ಅನ್ನು ಹೇಳಿರಿ. ಹೇರಳವಾಗಿ ಈ ವಚನವನ್ನು ಹೇಳಿರಿ :

“ಅಲ್ಲಾಹು ಅಕ್ಬರ್, ಅಲ್ಲಾಹು ಅಕ್ಬರ್, ಲಾ ಇಲಾಹ ಇಲ್ಲಲ್ಲಾಹ್, ಅಲ್ಲಾಹು ಅಕ್ಬರ್, ಅಲ್ಲಾಹು ಅಕ್ಬರ್, ವ ಲಿಲ್ಲಾಹಿಲ್ ಹಮ್ದ್.”

(ಅರ್ಥ : ಅಲ್ಲಾಹುವಾಗಿರುವನು ಮಹೋನ್ನತನು, ಅಲ್ಲಾಹುವಾಗಿರುವನು ಮಹೋನ್ನತನು, ಅಲ್ಲಾಹುವಿನ ಹೊರತು ಆರಾಧನೆಗೆ ನೈಜ ಹಕ್ಕುದಾರರು ಯಾರೂ ಇಲ್ಲ, ಅಲ್ಲಾಹುವಾಗಿರುವನು ಮಹೋನ್ನತನು, ಅಲ್ಲಾಹುವಾಗಿರುವನು ಮಹೋನ್ನತನು, ಮತ್ತು ಸರ್ವಸ್ತುತಿಗಳೂ ಅಲ್ಲಾಹುವಿಗೆ ಮೀಸಲು).

ಹೀಗಾಗಿ ತಮ್ಮ ಏರುಧ್ವನಿಯೊಂದಿಗೆ ತಲ್ಬಿಯಃವನ್ನು[1] ಹೇಳಿ ದಿಗಂತಗಳನ್ನು ತುಂಬಿರುವ ಹಜ್ ಯಾತ್ರಿಕರನ್ನು ಈ ಮೂಲಕ ನೀವು ಜೊತೆ ಸೇರಬಹುದಾಗಿದೆ.

ಹಾಗಾಗಿ, ಮಹೋನ್ನತನಾದ ಅಲ್ಲಾಹುವಿನ ಮಹಿಮೆ ಮತ್ತು ಪ್ರಶಂಸೆಗಳಲ್ಲಿ ನಿಮ್ಮ ಧ್ವನಿಗಳನ್ನು ಏರಿಸುವ ಮೂಲಕ ದಿಗಂತಗಳನ್ನು ಭರಿಸಿರಿ. ಖಂಡಿತವಾಗಿಯೂ, ಅಲ್ಲಾಹು ಅತ್ಯಂತ ವಿವೇಕವುಳ್ಳವನೂ, ಅತ್ಯಂತ ಕರುಣಾಳುವೂ ಆಗಿದ್ದಾನೆ.

ಹಜ್ ಯಾತ್ರಿಕರಿಗೆ ತಲ್ಬಿಯಃ ಹೇಳುವುದನ್ನು ಮತ್ತು ಅದರಲ್ಲಿ ತಮ್ಮ ಧ್ವನಿಯನ್ನು ಏರಿಸುವುದನ್ನು ಅವನು ವಿಧಿಗೊಳಿಸಿದಾಗ ಮತ್ತು ಪ್ರಾಣಿಯನ್ನು ಬಲಿಕೊಡಲು ಅವರಿಗೆ ವಿಧಿಗೊಳಿಸಿದಾಗ, ಇನ್ನಿತರ ಪ್ರದೇಶಗಳಲ್ಲಿರುವ ಜನರಿಗೆ ತಕ್ಬೀರ್ (ಅಲ್ಲಾಹು ಅಕ್ಬರ್), ತಹ್ಲೀಲ್ (ಲಾ ಇಲಾಹ ಇಲ್ಲಲ್ಲಾಹ್), ಮತ್ತು ತಹ್ಮೀದ್ (ಅಲ್-ಹಮ್ದುಲಿಲ್ಲಾಹ್) (ಹೇಳುವ) ಮೂಲಕ ತಮ್ಮ ಧ್ವನಿಯನ್ನು ಏರಿಸುವುದನ್ನು ಅವನು ವಿಧಿಗೊಳಿಸಿರುವನು.

ಅದರಂತೆಯೇ, ಅವರು ಬಲಿದಾನದ ಪ್ರಾಣಿಯನ್ನು ಅರ್ಪಿಸಬೇಕಾಗಿದೆ, ಏಕೆಂದರೆ ಅವುಗಳ ಮೂಲಕ ಓರ್ವನು ಮಹೋನ್ನತನಾದ ಅಲ್ಲಾಹುವಿನೆಡೆಗೆ ಸಾಮಿಪ್ಯವನ್ನು ಅರಸುವ ಹಜ್ಜ್‌‍ನ ಒಂದು ಕರ್ಮವಾಗಿದೆ.

ಹಾಗಾಗಿ ಸ್ವತಃ ನಿಮಗಾಗಿಯೂ ಮತ್ತು ನಿಮ್ಮ ಕುಟುಂಬಗಳಿಗಾಗಿಯೂ ಬಲಿದಾನ ನೀಡಿರಿ. ಓರ್ವ ವ್ಯಕ್ತಿ ಮತ್ತು ಆತನ ಕುಟುಂಬಕ್ಕಾಗಿ ಒಂದು ಬಲಿದಾನದ ಪ್ರಾಣಿಯು ಸಾಕಾಗುವುದು ಮತ್ತು (ಕುಟುಂಬದ) ಪ್ರತಿಯೋರ್ವ ವ್ಯಕ್ತಿಯೂ ಬಲಿದಾನ ನೀಡುವ ಅಗತ್ಯವಿಲ್ಲ ಅದು ಅವರ ಬಳಿ ಆರ್ಥಿಕ ಸಾಮರ್ಥ್ಯವಿದ್ದರೂ ಸರಿ. ಇದೇಕೆಂದರೆ, ಪ್ರವಾದಿ (H) ರವರು ಸೃಷ್ಟಿಗಳಲ್ಲಿ ಅತ್ಯಂತ ಉದಾರಿಯಾದವರಾಗಿಯೂ ಸಹ ಅವರು ತಮ್ಮ ಸ್ವಂತಕ್ಕೂ ಮತ್ತು ತಮ್ಮ ಕುಟುಂಬಕ್ಕೂ ಒಂದು ಪ್ರಾಣಿಯೇ ಹೊರತು (ಹೆಚ್ಚು ಪ್ರಾಣಿಗಳನ್ನು) ಬಲಿದಾನ ನೀಡುತ್ತಿರಲಿಲ್ಲ -ಅದು ಅವರ ಕುಟುಂಬದಲ್ಲಿ ಒಂಬತ್ತು ಮಹಿಳೆಯರು ಒಳಗೊಂಡಿದ್ದರೂ ಸಹ. ಇನ್ನು ಅವರು ಅರ್ಪಿಸಿದ ಎರಡನೇ ಬಲಿದಾನದ ಮೃಗದ ಕುರಿತು ಹೇಳುವುದಾದರೆ, ಅದು ತಮ್ಮ ಸಮುದಾಯಕ್ಕಾಗಿತ್ತು. – ಅದಕ್ಕಾಗಿ ಅಲ್ಲಾಹು ಅವರಿಗೆ ಅತ್ಯುತ್ತಮ ಪ್ರತಿಫಲವನ್ನು ನೀಡಲಿ.

ಇನ್ನು ಬಲಿದಾನ ನೀಡಲು ಇಚ್ಛಿಸುವವನು (ದುಲ್-ಹಿಜ್ಜಃ ತಿಂಗಳ ಮೊದಲ) ಹತ್ತುದಿನಗಳು ಪ್ರಾರಂಭವಾದಂತೆ ತನ್ನ ಯಾವುದೇ ಕೂದಲನ್ನು, ಉಗುರುಗಳನ್ನು ಅಥವಾ ಯಾವುದೇ ಹೊರಚರ್ಮವನ್ನು ತೆಗೆಯಬಾರದಾಗಿದೆ. ಯಾಕೆಂದರೆ ಪ್ರವಾದಿ (H) ಇದನ್ನು ನಿಷೇಧಿಸಿರುವರು. ಈ ಕಾರಣದಿಂದಾಗಿ, ತಮ್ಮ ಮೀಸೆಯನ್ನು ಕತ್ತರಿಸುವ ಮೂಲಕ, ಕಂಕುಳವನ್ನು ತರಿದುಹಾಕುವ ಮೂಲಕ, ಉಗುರಗಳನ್ನು ಕತ್ತರಿಸುವ ಮೂಲಕ ಅಥವಾ ಗುಪ್ತಾಂಗದ ಭಾಗದಲ್ಲಿನ ಕೂದಲನ್ನು ಬೋಳಿಸುವ ಮೂಲಕ ಯಾರು ಸುನ್ನತ್‌ನ ಮೇಲೆ ಕರ್ಮವೆಸಗಲು ಬಯಸುತ್ತಾನೋ ಅವನು ಈ ಹತ್ತು ದಿನಗಳು ಪ್ರಾರಂಭವಾಗುವುದಕ್ಕಿಂತಲೂ ಮುಂಚಿತವಾಗಿ ಆ ರೀತಿ ಮಾಡಲಿ. ಏಕೆಂದರೆ ಯಾವಾಗ ಈ ಹತ್ತು ದಿನಗಳು ಪ್ರಾರಂಭವಾಗುವುದೋ ಆಗ ಪ್ರವಾದಿ (H) ರವರು ನಿಷೇಧಿಸಿರುವುದರಿಂದ ಇವುಗಳಾವುದನ್ನೂ ಅವನು ತೆಗೆಯಬಾರದಾಗಿದೆ. ಅಲ್ಲಾಹುವಿನ ಸಲಾತ್ ಮತ್ತು ಸಲಾಮ್‌ಗಳು ಅವರ ಮೇಲೆ (ಅರ್ಥಾತ್ ಪ್ರವಾದಿ H ರವರ ಮೇಲೆ) ಮತ್ತು ಅವರ ಕುಟುಂಬದ ಮೇಲಿರಲಿ.

ಅನುವಾದ : ಅಬೂ ಹಮ್ಮಾದ್

ಟಿಪ್ಪಣಿ :

[1] ತಲ್ಬಿಯಃ : ಅಂದರೆ ಹಜ್ ಮತ್ತು ಉಮ್ರಃ ನಿರ್ವಹಿಸುವವರು ಹೇಳುವ ಈ ವಚನವಾಗಿದೆ :

« لَبَّيْكَ اللَّهُمَّ لَبَّيْكَ، لَبَّيْكَ لاَ شَرِيكَ لَكَ لَبَّيْكَ، إِنَّ الْحَمْدَ، وَالنِّعْمَةَ، لَكَ وَالْمُلْكَ، لاَ شَرِيكَ لَكَ »

ಅರ್ಥ : ನಿನಗೆ ಓಗೊಡುತ್ತಿದ್ದೇನೆ, ಓ ಅಲ್ಲಾಹ್ ನಿನಗೆ ಓಗೊಡುತ್ತಿದ್ದೇನೆ. ನಿನಗೆ ಓಗೊಡುತ್ತಿದ್ದೇನೆ, ನಿನಗೆ ಯಾವುದೇ ಸಹಭಾಗಿಯಿಲ್ಲ, ನಿನಗೆ ಓಗೊಡುತ್ತಿದ್ದೇನೆ. ಖಂಡಿತವಾಗಿಯೂ ಸರ್ವಸ್ತುತಿ, ಅನುಗ್ರಹ ಮತ್ತು ಸಕಲ ಆಧಿಪತ್ಯವು ನಿನ್ನದೇ ಆಗಿವೆ. ನಿನಗೆ ಯಾವುದೇ ಸಹಭಾಗಿಯಿಲ್ಲ.