بسم الله الرحمان الرحيم
ಏಕೈಕನಾದ ಅಲ್ಲಾಹುವನ್ನು ಮಾತ್ರ ಆರಾಧಿಸುವ ಜನರಾಗಿದ್ದರೂ ಕೂಡ ಸತ್ಯವಿಶ್ವಾಸಿಯರಲ್ಲಿ ಶಿರ್ಕ್ ಪ್ರಾರಂಭವಾಗಿ (ಅದು) ಹಬ್ಬಿಕೊಂಡದ್ದು ಹೇಗೆಂಬುವುದನ್ನು ಓರ್ವ ಮುಸ್ಲಿಮನು ಅರಿತುಕೊಳ್ಳುವುದು ಅತೀ ಮುಖ್ಯವಾಗಿದೆ.
ನೂಹ್ عليه السلام ರ ಜನತೆಯ ಬಗ್ಗೆ ಅಲ್ಲಾಹುವಿನ ವಚನದ (ಕುರ್’ಆನಿನ) ತಫ್ಸೀರ್’ನಲ್ಲಿ ಸಲಫ್’ಗಳ (ಸಜ್ಜನ ಪೂರ್ವಿಕರ) ಪೈಕಿ ಒಂದು ವಿಭಾಗವು ಅನೇಕ ವರದಿಗಳನ್ನು ಉಲ್ಲೇಖಿಸಿರುವರು. ಅಲ್ಲಾಹುವಿನ ವಚನ :
” ಅವರು ಹೇಳಿದರು : (ಜನರೇ!) ನೀವು ನಿಮ್ಮ ಆರಾಧ್ಯರನ್ನು ತೊರೆಯದಿರಿ. ವದ್ದ್, ಸುವಾಅ್, ಯಗೂಸ್, ಯಊಕ್ ಮತ್ತು ನಸ್ರ್’ರನ್ನು ಬಿಡದಿರಿ.”
(ಸೂರಃ ನೂಹ್ : 23)
ಈ ಐವರ ಪೈಕಿ ವದ್ದ್ ಮತ್ತು ಅವರ ಜೊತೆ ಉಲ್ಲೇಖಿಸಲ್ಪಟ್ಟವರೆಲ್ಲರೂ ಸಜ್ಜನ ದಾಸರಾಗಿದ್ದರು. ಅವರೆಲ್ಲರೂ ಮರಣ ಹೊಂದಿದಾಗ ಶೈತಾನನು ಅವರ ಗೋರಿಯ ಬಳಿ (ಕೇವಲ) ಆರಾಧನಾ ಮಗ್ನರಾಗಿ ಕುಳಿತುಕೊಳ್ಳಲು ಅವರ ಜನತೆಗೆ ದುರ್ಬೋಧನೆ ನೀಡಿದನು.
ಅವರ ನಂತರದ ಕಾಲದಲ್ಲಿ ಬಂದ ಜನರೊಡನೆ ಅವರ ( ಆ ಸಜ್ಜನರ) ವಿಗ್ರಹಗಳನ್ನು ಮಾಡಿಕೊಳ್ಳಲು ಶೈತಾನನು ದುರ್ಬೋಧನೆ ನೀಡಿದನು. (ಹಾಗೂ ಈ ರೀತಿ ಮಾಡುವುದರಿಂದ ನೀವು) ಅವರನ್ನು ಸ್ಮರಿಸಿಕೊಳ್ಳಬಹುದು ಮತ್ತು ಆ ಮೂಲಕ ತಮ್ಮ ಸತ್ಕಾರ್ಯಗಳಲ್ಲಿ ಅವರನ್ನು ಅನುಸರಿಸಬಹುದೆಂಬ ಕಲ್ಪನೆಯನ್ನು ಅವರ ಮುಂದಿಟ್ಟುಕೊಂಡು ಶೈತಾನನು ಅವರಿಗೆ ಆಕರ್ಷಣೀಯಗೊಳಿಸಿ ತೋರಿಸಿದನು.
ತದನಂತರ ಬಂದ ಮೂರನೆಯ ತಲೆಮಾರಿನ ಜನರೊಂದಿಗೆ ಅಲ್ಲಾಹುವಿನ ಹೊರತು ಮರಣ ಹೊಂದಿದ ಆ ಸಜ್ಜನರನ್ನು ಆರಾಧಿಸಲು ಶೈತಾನನು (ಮತ್ತೊಮ್ಮೆ) ಅವರಿಗೆ ದುರ್ಬೋಧನೆ ನೀಡಿದನು. (ಅದೂ ಅಲ್ಲದೆ) ಅವರ ಪೂರ್ವಜರು ಕೂಡ ಇದನ್ನೇ ಮಾಡುತ್ತಿದ್ದರೆಂದು (ಸುಳ್ಳನ್ನು ಹೇಳಿ) ಜನರನ್ನು ಶೈತಾನನು ದಾರಿತಪ್ಪಿಸಿದನು.
ಆಗ ಏಕೈಕನಾದ ಅಲ್ಲಾಹುವನ್ನು ಮಾತ್ರ ಆರಾಧಿಸಬೇಕೆಂದು ಅವರನ್ನು (ಜನರನ್ನು) ಆಜ್ಞಾಪಿಸುವ ಸಲುವಾಗಿ ಅಲ್ಲಾಹು ನೂಹ್ عليه السلام ರನ್ನು ಕಳುಹಿಸಿಕೊಟ್ಟನು. ಆದರೆ ಅವರ ಪೈಕಿ ಕೆಲವರನ್ನು ಹೊರತುಪಡಿಸಿ ಯಾರೂ ಕೂಡ (ಅವರ ಕರೆಗೆ) ಓಗೊಡಲಿಲ್ಲ. ಈ ವೃತ್ತಾಂತವನ್ನು ಅಲ್ಲಾಹು ಸೂರಃ ನೂಹ್’ನಲ್ಲಿ ಪ್ರಸ್ತಾಪಿಸಿರುವನು.
ಸಹೀಹ್ ಅಲ್ ಬುಖಾರಿಯಲ್ಲಿ ಇಬ್ನ್ ಅಬ್ಬಾಸ್ رضي الله عنهما ರಿಂದ (ಈ ಕುರಿತು) ವರದಿಯಾಗಿದೆ.
“ಈ ಐದು ಜನರು ನೂಹ್ عليه السلام ರ ಜನತೆಯ ಸಜ್ಜನ ವ್ಯಕ್ತಿಗಳಾಗಿದ್ದರು. ಅವರು ಮರಣ ಹೊಂದಿದಾಗ, ಅವರ (ಸಜ್ಜನರ) ವಿಗ್ರಹವನ್ನು ನಿರ್ಮಿಸಿ ಅವರು ಆಸೀನರಾಗಿದ್ದ ಸ್ಥಳಗಳಲ್ಲಿ ಅದನ್ನು ಪ್ರತಿಷ್ಠಾಪಿಸಲು ಮತ್ತು ಅವರ ಹೆಸರಿನಿಂದ ಅದರ (ವಿಗ್ರಹಗಳ) ನಾಮಕರಣ ಮಾಡಲು ಶೈತಾನನು ಅವರ ಜನರೆಡೆಯಲ್ಲಿ ದುರ್ಬೋಧನೆ ನೀಡಿದನು. ಹಾಗೆ ಜನರು ಪ್ರತಿಷ್ಠಾಪನೆ ಮಾಡಿದರು. ಆದರೆ ಅವುಗಳನ್ನು ನಿರ್ಮಿಸಿ ಪ್ರತಿಷ್ಠಾಪಿಸಿದವರು ಮರಣ ಹೊಂದುವ ತನಕ ಆ ವಿಗ್ರಹಗಳು ಆರಾಧಿಸಲ್ಪಡಲಿಲ್ಲ. ಆ ವಿಗ್ರಹಗಳ ಪ್ರತಿಷ್ಠಾಪನೆಯ ಉದ್ದೇಶ ಮತ್ತು ಕಾರಣಗಳು ಅವರ (ಅದನ್ನು ನಿರ್ಮಿಸಿದ ಜನರ) ಮರಣದ ಬಳಿಕ ಮರೆಯಾಗಿ ಹೋಯಿತು. (ಹೀಗೆ ನಂತರದ ಕಾಲದ ಜನರು) ಅದನ್ನು ಆರಾಧಿಸತೊಡಗಿದರು.
(ಅಲ್ಲಾಮ ಅಶ್ಶೈಖ್ ಮುಹಮ್ಮದ್ ನಾಸಿರುದ್ದೀನ್ ಅಲ್ಬಾನೀ رحمه الله ರವರು ಬರೆದ – ತಹ್ಝೀರ್ ಅಸ್ಸಾಜಿದ್ ಮಿನ್ ಇತ್ತಿಖಾಝಿಲ್ ಕುಬೂರಿ ಮಸಾಜಿದ್ ಎಂಬ ಗ್ರಂಥದ ಪುಟ : 103 – 104 ರ ಭಾವಾನುವಾದ)