ಖವಾರಿಜ್‌ ಉಗ್ರವಾದಿಗಳು ಹಾಗೂ ಅವರ ಗುಣಲಕ್ಷಣಗಳು

w

“ತನ್ನ ಎಲ್ಲಾ ಸೃಷ್ಟಿಗಳ ಮೇಲೆ ಅತ್ಯಂತ ದಯೆವುಳ್ಳವನೂ, ತನ್ನ ಸತ್ಯ ವಿಶ್ವಾಸಿಗಳಾದ ದಾಸರ ಮೇಲೆ ಸದಾ ಕರುಣೆತೋರುವವನೂ ಆದ ಅಲ್ಲಾಹುವಿನ ನಾಮದಿಂದ.”

ಮುನ್ನುಡಿ

 ಸರ್ವಸ್ತುತಿಗಳೂ ಅಲ್ಲಾಹುವಿಗಾಗಿದೆ. ನಾವು ಅವನನ್ನು ಸ್ತುತಿಸುತ್ತೇವೆ ಹಾಗೂ ಅವನ ನೆರವು ಮತ್ತು ಪಾಪಮುಕ್ತಿಯನ್ನು ಬೇಡುತ್ತೇವೆ. ಸ್ವತಃ ನಮ್ಮಲ್ಲಿರುವ ಕೆಡುಕುಗಳಿಂದಲೂ ನಮ್ಮ ಕರ್ಮಗಳಲ್ಲಿರುವ ಕೆಡುಕುಗಳಿಂದಲೂ ನಾವು ಅಲ್ಲಾಹುವಿನ ರಕ್ಷಣೆಯನ್ನು ಬೇಡುತ್ತೇವೆ. ಯಾರಿಗೆ ಅಲ್ಲಾಹು ಮಾರ್ಗದರ್ಶನ ಮಾಡುತ್ತಾನೋ ಅವನನ್ನು ದಾರಿಗೆಡಿಸುವವರಾರೂ ಇಲ್ಲ, ಯಾರನ್ನು ಅಲ್ಲಾಹು ದಾರಿಗೆಡಿಸುತ್ತಾನೋ ಅವನನ್ನು ಮಾರ್ಗದರ್ಶನ ಮಾಡುವವರಾರೂ ಇಲ್ಲ. ಅಲ್ಲಾಹುವಿನ ಹೊರತು ಆರಾಧನೆಗೆ ನೈಜ ಹಕ್ಕುದಾರರು ಯಾರೂ ಇಲ್ಲ, ಮತ್ತು ಅವನು ಏಕೈಕನೂ ಸಹಭಾಗಿರಹಿತನೂ ಆಗಿರುವನೆಂದು ನಾನು ಸಾಕ್ಷಿವಹಿಸುತ್ತೇನೆ. ಮುಹಮ್ಮದ್ (H) ರವರು ಆತನ ದಾಸರೂ ಸಂದೇಶವಾಹಕರೂ ಆಗಿದ್ದಾರೆಂದು ನಾನು ಸಾಕ್ಷಿವಹಿಸುತ್ತೇನೆ.

ವಚನಗಳಲ್ಲಿ ಅತ್ಯುತ್ತಮ ವಚನವು ಅಲ್ಲಾಹುವಿನ ವಚನವಾಗಿದೆ (ಅರ್ಥಾತ್ ಕುರ್‌ಆನ್ ಆಗಿದೆ), ಮಾರ್ಗದರ್ಶನಗಳಲ್ಲಿ ಅತ್ಯುತ್ತಮ ಮಾರ್ಗದರ್ಶನವು ಪ್ರವಾದಿ ಮುಹಮ್ಮದ್ (H) ರವರ ಮಾರ್ಗದರ್ಶನವಾಗಿದೆ. ಕಾರ್ಯಗಳಲ್ಲಿ ಅತ್ಯಂತ ಹೀನವಾದುದು ದೀನ್‌ಗೆ ಹೊಸದಾಗಿ ಸೇರಿಸಲ್ಪಟ್ಟ ಕಾರ್ಯಗಳಾಗಿದೆ, ದೀನ್‌ಗೆ ಹೊಸದಾಗಿ ಸೇರಿಸಲ್ಪಟ್ಟ ಕಾರ್ಯಗಳೆಲ್ಲವೂ ಬಿದ್ಅತ್‌ಗಳಾಗಿವೆ, ಎಲ್ಲಾ ಬಿದ್ಅತ್‌ಗಳೂ ಪಥಭ್ರಷ್ಟತೆಯಾಗಿದೆ, ಹಾಗೂ ಎಲ್ಲಾ ಪಥಭ್ರಷ್ಟತೆಗಳೂ ತಲುಪುವುದು ನರಕದಲ್ಲಾಗಿದೆ.

ಮುಂದುವರಿದು ಹೇಳುವುದೇನೆಂದರೆ :

ಖವಾರಿಜ್‌ ಉಗ್ರವಾದಿಗಳು ಯಾರು?

ಖವಾರಿಜ್‌ಗಳ ಕುರಿತು ಶೈಖುಲ್ ಇಸ್ಲಾಮ್ ಇಬ್ನ್ ತಯ್‌ಮಿಯ್ಯಃ (V) ಹೀಗೆ ಹೇಳಿರುವರು:

1. ಅಹ್ಲುಲ್ ಬಿದ್ಅತ್‌ಗಳ ಪೈಕಿ (ಅಂದರೆ ಪ್ರವಾದಿ ಮತ್ತು ಸಹಾಬಿಗಳ ಮಾರ್ಗದಿಂದ ವಿಚಲಿಸಿದ ನೂತನವಾದಿಗಳ ಪೈಕಿ) ಮುಸ್ಲಿಮ್ ಸಮುದಾಯದಿಂದ ಮೊಟ್ಟಮೊದಲು ಬೇರ್ಪಟ್ಟವರು ಪಥಭ್ರಷ್ಟರಾದ ಖವಾರಿಜ್‌ಗಳಾಗಿದ್ದಾರೆ. [ಮಜ್ಮೂಅ್ ಅಲ್-ಫತಾವಾ 3/349]

2. (ಧರ್ಮದಿಂದ ಭ್ರಷ್ಟರಾಗಿ ಹೊರಹೋಗದ) ಪಾಪಕೃತ್ಯಗಳಿಗಾಗಿ ಅಥವಾ (ಅಜ್ಞಾನದಿಂದ) ಯಾವುದನ್ನು ತಾವು ಪಾಪಕೃತ್ಯಗಳೆಂದು ಭಾವಿಸಿರುವರೋ ಅವುಗಳಿಗಾಗಿ ಮುಸ್ಲಿಮರನ್ನು ಮೊಟ್ಟಮೊದಲು ತಕ್ಫೀರ್ (ಧರ್ಮದಿಂದ ಭ್ರಷ್ಟರಾದ ಸತ್ಯನಿಷೇಧಿಗಳೆಂದು) ಘೋಷಿಸಿದವರು ಖವಾರಿಜ್‌ಗಳಾಗಿದ್ದಾರೆ. ಈ ಕಾರಣಕ್ಕಾಗಿಯೇ ಅವರು ಮುಸ್ಲಿಮರ ಕಗ್ಗೊಲೆ ನಡೆಸುವುದನ್ನು ಧರ್ಮಸಮ್ಮತಗೊಳಿಸಿರುವರು. [ಮಜ್ಮೂಅ್ ಅಲ್-ಫತಾವಾ 7/481]

3. ಇಸ್ಲಾಮ್‌ನಲ್ಲಿ ಮೊಟ್ಟಮೊದಲು ಕಾಣಿಸಿಕೊಂಡ ಬಿದ್ಅತ್ ಖವಾರಿಜ್ ಮತ್ತು ಶಿಯಾಗಳ ಬಿದ್ಅತ್ಆಗಿದೆ. ಅದು ಕಾಣಿಸಿಕೊಂಡದ್ದು ಸತ್ಯ ವಿಶ್ವಾಸಿಗಳ ನೇತಾರರಾದ ಅಲೀ ಬಿನ್ ಅಬೀ ತಾಲಿಬ್ (I) ರವರ ಆಡಳಿತಾವಧಿಯಲ್ಲಾಗಿದೆ, ಇವೆರಡೂ (ಪಥಭ್ರಷ್ಟ) ಗುಂಪುಗಳಿಗೆ ಅವರು ಶಿಕ್ಷೆಯನ್ನು ವಿಧಿಸಿದ್ದರು. ಖವಾರಿಜ್‌ಗಳು ಅಲೀ ಬಿನ್ ಅಬೀ ತಾಲಿಬ್ (I) ರವರ ವಿರುದ್ಧ ಯುದ್ಧ ನಡೆಸಿದ್ದರಿಂದ ಅವರು ಖವಾರಿಜ್‌ಗಳನ್ನು ಕೊಂದು ಹಾಕಿದರು. ಇನ್ನು ಶಿಯಾಗಳ ಪೈಕಿಯಿದ್ದ ತೀವ್ರವಾದಿಗಳನ್ನು ಅವರು ಕೊಂದು ಸುಟ್ಟು ಹಾಕಿದರು. (ಅವರ ನೇತಾರರಾದ) ಅಬ್ದುಲ್ಲಾಹ್ ಬಿನ್ ಸಬಅ್‌ನನ್ನು ವಧಿಸುವಂತೆ ಅವರು ಆದೇಶವನ್ನು ಹೊರಡಿಸಿದ್ದರು ಆದರೆ ಅವನು ಅವರಿಂದ ತಪ್ಪಿಸಿಕೊಂಡು ಪರಾರಿಯಾದನು ಹಾಗೂ ಯಾರು ತನ್ನನ್ನು (ಅರ್ಥಾತ್ ಅಲೀ ಬಿನ್ ಅಬೀ ತಾಲಿಬ್ I ರಿಗೆ) ಅಬೂ ಬಕ್ರ್ ಮತ್ತು ಉಮರ್ (I) ಗಿಂತಲೂ ಹೆಚ್ಚು ಮನ್ನಣೆ ಹಾಗೂ ಶ್ರೇಷ್ಠತೆಯನ್ನು ನೀಡುವರೋ ಅವರಿಗೆ ಚಡಿಯೇಟು ಶಿಕ್ಷೆಯನ್ನು ನೀಡುವಂತೆ ಅಲೀ ಬಿನ್ ಅಬೀ ತಾಲಿಬ್ (I) ರವರು ಆದೇಶಿಸಿದ್ದರು.
[ಮಜ್ಮೂಅ್ ಅಲ್-ಫತಾವಾ 3/279]

4. ಖವಾರಿಜ್‌ಗಳು ದೀನ್‌ನ ವಿಚಾರದಲ್ಲಿ ಅಜ್ಞಾನಿಗಳಾಗಿರುವರು, ಅವರು ಸುನ್ನತ್‌ನಿಂದ (ಅರ್ಥಾತ್ ಪ್ರವಾದಿ ಮುಹಮ್ಮದ್ H ರವರ ಮಾರ್ಗದರ್ಶನದಿಂದ) ಮತ್ತು ಮುಸ್ಲಿಮ್ ಸಮಾಜದಿಂದ ಬೇರ್ಪಟ್ಟಿದ್ದು ಅಜ್ಞಾನದ ಮೇಲಾಗಿತ್ತು. [ಮಿನ್‌ಹಾಜ್ ಅಸ್ಸುನ್ನಃ 3/464]

5. ಖವಾರಿಜ್‌ಗಳ ಪಥಭ್ರಷ್ಟತೆಗೆ ಮೂಲ ಕಾರಣವು ಖುಲಫಾಉರ್ರಾಶಿದೂನ್‌ಗಳು (ಅರ್ಥಾತ್ ಸನ್ಮಾರ್ಗಿಗಳಾದ ಖಲೀಫರುಗಳು – ಅಬೂ ಬಕ್ರ್, ಉಮರ್, ಉಸ್ಮಾನ್ ಹಾಗೂ ಅಲೀ I) ಹಾಗೂ ಅವರ ಆಡಳಿತಾವಧಿಯಲ್ಲಿದ್ದ ಮುಸ್ಲಿಮ್ ಸಮಾಜವು ನ್ಯಾಯ ನೀತಿಯನ್ನು ಪಾಲಿಸದವರೂ ಪಥಭ್ರಷ್ಟರೂ ಆಗಿರುತ್ತಾರೆ ಎಂಬುದು ಅವರಿಗಿದ್ದ (ಖವಾರಿಜ್‌ಗಳ) ತಪ್ಪಾದ ನಂಬಿಕೆಯಾಗಿತ್ತು. ಅವರು ತಮ್ಮ ಈ ವಿಕೃತ ಸಿದ್ಧಾಂತಗಳನ್ನು ಪಡೆದಿರುವುದು ರಾಫಿದಃ ಶಿಯಾಗಳಿಂದಾಗಿದೆ ಹಾಗೂ ಅವರಂತೆ ಇರುವ ಜನರಿಂದಾಗಿದೆ. ಅವರು ಸ್ವತಃ ಏನನ್ನು ಅನ್ಯಾಯವೆಂದು ಭಾವಿಸಿರುವರೋ (ವಾಸ್ತವದಲ್ಲಿ ಅದು ಕುಫ್ರ್ ಅಲ್ಲದಿದ್ದರೂ ಸಹ) ಅದನ್ನು ಕುಫ್ರ್ (ಸತ್ಯನಿಷೇಧ) ಎಂದು ಪರಿಗಣಿಸಿರುವರು, ಹೀಗೆ ಅವರು ತಮ್ಮ ನೂತನವಾದ ಆಶಯಗಳ ಆಧಾರದ ಮೇಲೆ ಕುಫ್ರ್‌ನ ತೀರ್ಪುಗಳನ್ನು (ಅನ್ಯಾಯವಾಗಿ ಜನರ ಮೇಲೆ) ವಿಧಿಸುತ್ತಾರೆ. [ಮಜ್ಮೂಅ್ ಅಲ್-ಫತಾವಾ 28/497]

ಹಿಜ್ರೀ 852ರಲ್ಲಿ ಮರಣ ಹೊಂದಿದ, ಇಮಾಮ್ ಇಬ್ನ್ ಹಜರ್ (V) ಹೇಳಿದರು: “ಅವರು (ಖವಾರಿಜ್‌ಗಳು) ಅಹ್ಲುಲ್ ಬಿದ್ಅತ್‌ನ ಗುಂಪಾಗಿರುವರು. ಅವರನ್ನು ಖವಾರಿಜ್‌ಗಳೆಂದು ಕರೆಯಲು ಕಾರಣವೇನೆಂದರೆ ಅವರು ಇಸ್ಲಾಮ್‌ನ ವಿರುದ್ಧ ಬಂಡಾಯವೆದ್ದವರಾಗಿದ್ದಾರೆ, ಹಾಗೂ ಮುಸ್ಲಿಮರ ಪೈಕಿ ಅತ್ಯಂತ ಶ್ರೇಷ್ಠರಾದ ಜನರ (ಸಹಾಬಾಗಳ) ವಿರುದ್ಧ ಬಂಡಾಯವೆದ್ದವರಾಗಿದ್ದಾರೆ. [ಫತ್‌ಹುಲ್ ಬಾರೀ 2/283]

ಹಿಜ್ರಃ 360 ರಲ್ಲಿ ಮರಣಹೊಂದಿದ, ಇಮಾಮ್ ಅಬೂ ಬಕ್ರ್ ಅಲ್-ಆಜುರ್ರೀ (V) ಹೇಳಿದರು: “ಖವಾರಿಜ್‍ಗಳು (ಉಗ್ರವಾದಿಗಳು) ಜನರ ಪೈಕಿ ಅತ್ಯಂತ ಕೆಟ್ಟವರೂ, ಅಲ್ಲಾಹು ಮತ್ತು ಅವನ ರಸೂಲ್ (H) ರನ್ನು ಧಿಕ್ಕರಿಸುವವರೆಂಬುದರ ಬಗ್ಗೆ ಹಿಂದಿನ ಕಾಲದ ವಿದ್ವಾಂಸರು ಹಾಗೂ ಪ್ರಸ್ತುತ ಕಾಲದ ವಿದ್ವಾಂಸರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಅವರು ನಮಾಝ್ ನಿರ್ವಹಿಸಿದರೂ, ಉಪವಾಸ ವ್ರತವನ್ನು ಆಚರಿಸಿದರೂ ಮತ್ತು ಇಬಾದತ್‌ನಲ್ಲಿ (ಆರಾಧನೆಯಲ್ಲಿ) ಮಗ್ನರಾಗಿದ್ದರೂ ಅವುಗಳಾವುದೂ ಅವರ ಪ್ರಯೋಜನಕ್ಕೆ ಬರಲಿಲ್ಲ. ಅವರು ಒಳಿತನ್ನು ಆದೇಶ ನೀಡುವುದು ಮತ್ತು ಕೆಡುಕನ್ನು ತಡೆಯುವುದು ಮೇಲ್ನೋಟಕ್ಕೆ ಕಂಡುಬಂದರೂ ಅದ್ಯಾವುದೂ ಅವರ ಪ್ರಯೋಜನಕ್ಕೆ ಬರದು, ಏಕೆಂದರೆ ಅವರು ಕುರ್‌ಆನನ್ನು ತಮ್ಮ ಇಚ್ಚೆಗನುಸಾರವಾಗಿ ದುರ್ವ್ಯಾಖಾನ ಮಾಡುವ ಜನರಾಗಿದ್ದಾರೆ.” [ಅಶ್ಶರೀಅಃ :1 /325]

ಹಿಜ್ರಃ 597ರಲ್ಲಿ ಮರಣಹೊಂದಿದ, ಇಮಾಮ್ ಇಬ್ನುಲ್ ಜೌಝೀ (V) ರವರು ಖವಾರಿಜ್‌ಗಳ ನೇತಾರನಾದ ದುಲ್ ಖುವೈಸಿರಃನ ಬಗ್ಗೆ ಈ ರೀತಿ ಹೇಳಿರುವರು: ಇಸ್ಲಾಮ್‌ನ ವಿರುದ್ಧ ಬಂಡಾಯವೆದ್ದ ಖವಾರಿಜ್‌ಗಳ ಪೈಕಿ ಮೊದಲಿಗನು “ದುಲ್ ಖುವೈಸಿರಃ” ಎಂಬಾತನಾಗಿದ್ದಾನೆ. ಆತನ ಸಮಸ್ಯೆಯೇನೆಂದರೆ ತನ್ನ ಸ್ವಂತ ಅನಿಸಿಕೆ-ಅಭಿಪ್ರಾಯಗಳಲ್ಲಿ ಆತನು ಸಂತುಷ್ಟನಾಗಿದ್ದನು. ಹಾಗೇನಾದರೂ ಅವನು ಮಾಡದಿದ್ದರೆ (ಸಂಕುಚಿತ ಭಾವನೆಯನ್ನು ತೊರೆದಿದ್ದರೆ) ಖಂಡಿತವಾಗಿಯೂ ಅಲ್ಲಾಹುವಿನ ರಸೂಲ್ (H) ರವರ ಅಭಿಪ್ರಾಯಕ್ಕೆ ಮಿಗಿಲಾಗಿ ಯಾರೊಬ್ಬರ ಅಭಿಪ್ರಾಯವೂ ಇರಲಾರದು ಎಂಬುದನ್ನು ಅರಿತುಕೊಳ್ಳುತ್ತಿದ್ದನು. ಅಲೀ ಬಿನ್ ಅಬೀ ತಾಲಿಬ್ (I) ರವರ ವಿರುದ್ಧ ಯುದ್ಧ ಸಾರಿದ ಜನರು ಇದೇ ವ್ಯಕ್ತಿಯ ಅನುಯಾಯಿಗಳಾಗಿರುವರು. ಅವರ ಕುರಿತು ಹಾಗೂ ಅವರ ವಿಕೃತ ಸಿದ್ಧಾಂತಗಳ ಕುರಿತು ಅನೇಕ ದೀರ್ಘವಾದ ಚರಿತ್ರೆಗಳು ದಾಖಲೆಯಲ್ಲಿದೆ. ನಾನು ಅವುಗಳನ್ನು ಉಲ್ಲೇಖಿಸಿವುದರ ಮೂಲಕ ಹೆಚ್ಚಾಗಿ ವಿವರಿಸಲು ಬಯಸುವುದಿಲ್ಲ. ಬದಲಾಗಿ, ತಮ್ಮನ್ನು ವಿರೋಧಿಸುವವರೊಂದಿಗೆ (ಪ್ರತಿಕಾರದ ಮೂಲಕ) ವರ್ತಿಸಿದ ಈ ಮೂರ್ಖರನ್ನು ಇಬ್ಲೀಸ್ ಹೇಗೆ ವಂಚಿಸಿದ್ದಾನೆ (ಹಾಗೂ ದಾರಿ ತಪ್ಪಿಸಿದ್ದಾನೆ) ಎಂದು ಕಲಿಯುವ ಉದ್ದೇಶವಾಗಿದೆ .

ಅಲೀ ಬಿನ್ ಅಬೀ ತಾಲಿಬ್ (I) ರವರು ಪಥಭ್ರಷ್ಟರಾಗಿದ್ದಾರೆ ಹಾಗೂ ಅವರ ಜೊತೆಗಿದ್ದ ಮುಹಾಜಿರ್ ಮತ್ತು ಅನ್ಸಾರ್‌ಗಳು ಸಹ ಪಥಭ್ರಷ್ಟರಾಗಿರುವರು ಹಾಗೂ ಸತ್ಯದ ಮೇಲಿರುವುದು ತಾವುಗಳು ಮಾತ್ರ ಎಂಬುದು ಖವಾರಿಜ್‌ಗಳ ವಿಶ್ವಾಸವಾಗಿತ್ತು. ಮಕ್ಕಳ ಹತ್ಯೆ ನಡೆಸುವುದನ್ನು ಅವರು ಧರ್ಮಸಮ್ಮತಗೊಳಿಸಿದ್ದರು. ಆದರೆ ಅದೇ ವೇಳೆ ಮರದ ಯಾವುದೇ ಹಣ್ಣುಗಳನ್ನು ಕೊಂಡುಕೊಳ್ಳದೆ (ಪುಕ್ಕಟೆಯಾಗಿ) ತಿನ್ನುವುದನ್ನು ಸಮ್ಮತಿಸುತ್ತಿರಲಿಲ್ಲ. ಅವರು ಇಬಾದತ್‌ಗಳಲ್ಲಿ ತಲ್ಲೀನರಾಗುತ್ತಿದ್ದರು, ಹಾಗೂ ರಾತ್ರಿ ವೇಳೆಗಳಲ್ಲಿ (ಆರಾಧನೆಗಾಗಿ) ಎಚ್ಚರದಲ್ಲಿರುತ್ತಿದ್ದರು, ಅದರೂ ಅವರು ಮುಸ್ಲಿಮರ ವಿರುದ್ಧ (ಹತ್ಯೆಗೈಯ್ಯಲು) ತಮ್ಮ ಖಡ್ಗಗಳನ್ನು ಎತ್ತಿದರು.

ಅವರ ಸ್ವಂತ ಅರಿವು ಮತ್ತು ವಿಶ್ವಾಸವು ಅವರನ್ನು ಅಲೀ (I) ರವರಿಗಿಂತ ಹೆಚ್ಚು ಅರಿವುಳ್ಳವರಾಗಿ ಮಾಡಿತೆಂದು ಅವರು ಭಾವಿಸಿದರೂ ಅದು ನನಗೆ ಆಶ್ಚರ್ಯವಾಗುವುದಿಲ್ಲ. ಏಕೆಂದರೆ ಅವರ ನೇತಾರನಾದ ದುಲ್ ಖುವೈಸಿರಃ ಅಲ್ಲಾಹುವಿನ ರಸೂಲ್ (H) ರೊಂದಿಗೆ : “ಓ ಮುಹಮ್ಮದ್, ನೀನು ನ್ಯಾಯ ಪಾಲಿಸು, ಏಕೆಂದರೆ ನೀನು ನ್ಯಾಯ ಪಾಲಿಸುತ್ತಿಲ್ಲ.” ಎಂದು ಹೇಳಿದ್ದನು.!

ಈ ದುಷ್ಟತೆಯನ್ನು ಇಷ್ಟರ ಮಟ್ಟಿಗೆ ಸ್ವತಃ ಇಬ್ಲೀಸ್ ಕೂಡ ಯೋಚಿಸುತ್ತಿರಲಿಲ್ಲ!. ಸತ್ಯಹಾದಿಯಿಂದ ಪಥಭ್ರಷ್ಟರಾಗುವುದರಿಂದ ಅಲ್ಲಾಹುವಿನ ರಕ್ಷಣೆಯನ್ನು ನಾವು ಬೇಡುತ್ತೇವೆ. [ತಲ್ಬೀಸ್ ಇಬ್ಲೀಸ್, ಪುಟ ಸಂಖ್ಯೆ 82, 86]

ಅನುವಾದ : ಅಬೂ ಹಮ್ಮಾದ್ ಸಲಾಹುದ್ದೀನ್