ಮುಹರ್ರಮ್ ತಿಂಗಳ ಉಪವಾಸ ಮತ್ತು ಆಶೂರಾ ಉಪವಾಸ : ಅಶ್ಶೈಖ್ ಅಬ್ದುಲ್ ಅಝೀಝ್ ಬಿನ್ ಬಾಝ್

 

ಮುಹರ್ರಮ್’ನ ಉಪವಾಸ ಯಾವಾಗ ಪ್ರಾರಂಭಗೊಳ್ಳುತ್ತದೆ? ಅಶ್ಶೈಖ್ ಇಬ್ನ್ ಬಾಝ್ (رحمه الله) ರವರಿಗೊಂದು ಪ್ರಶ್ನೆ :

ಪ್ರಶ್ನೆ : ಮುಹರ್ರಮ್’ನ ಉಪವಾಸ ಅಥವಾ ಆಶೂರಾದ ಉಪವಾಸ ಯಾವಾಗ ಪ್ರಾರಂಭಗೊಳ್ಳುತ್ತದೆ? ಉಪವಾಸ ಪ್ರಾರಂಭವಾಗುವುದು ಮುಹರ್ರಮ್’ನ ಪ್ರಥಮ ದಿನದಲ್ಲೋ, ತಿಂಗಳ ಮಧ್ಯದಲ್ಲೋ ಅಥವಾ ತಿಂಗಳ ಅಂತ್ಯದಲ್ಲೋ? ಎಷ್ಟು ದಿನ ಉಪವಾಸವನ್ನು ಆಚರಿಸಬೇಕು? ಯಾಕೆಂದರೆ ಆಶೂರಾದ ಉಪವಾಸವು ಮುಹರ್ರಮ್ ತಿಂಗಳ ಒಂದರಿಂದ ಪ್ರಾರಂಭಗೊಂಡು ಮುಹರ್ರಮ್ ಹತ್ತರವರೆಗೆ ಇರುತ್ತದೆ ಎಂದು ನಾನು ಆಲಿಸಿರುವೆನು. ಅಲ್ಲಾಹು ನಿಮಗೆ ಯಶಸ್ಸು ಪ್ರಾಪ್ತಿಗೊಳಿಸಲಿ.

ಇಬ್ನ್ ಬಾಝ್ (رحمه الله) ಉತ್ತರಿಸುತ್ತಾರೆ :

ಪ್ರವಾದಿ (صلى الله عليه وسلم) ರವರು ಹೇಳಿರುವರು : ರಮದಾನ್ (ತಿಂಗಳ ಉಪವಾಸದ) ಬಳಿಕ ಅತ್ಯಂತ ಶ್ರೇಷ್ಠವಾದ ಉಪವಾಸವು ಅಲ್ಲಾಹುವಿನ ತಿಂಗಳಾದ ಮುಹರ್ರಮ್ ಆಗಿದೆ (ಅರ್ಥಾತ್ ಮುಹರ್ರಮ್’ನ ಉಪವಾಸವಾಗಿದೆ)”. ಅದಾಗಿದೆ ಆಶೂರಾ. ಅದರರ್ಥವೇನೆಂದರೆ ಅವರು (صلى الله عليه وسلم) ಆ ತಿಂಗಳ ಪ್ರಥಮ ದಿನದಿಂದ ಕೊನೆಯ ದಿನದವರೆಗೆ , (ಮುಹರ್ರಮ್) ತಿಂಗಳಾದ್ಯಂತ ಉಪವಾಸವನ್ನು ಆಚರಿಸುತ್ತಿದ್ದರು. ಇದಾಗಿದೆ ಈ ಹದೀಸಿನ ಅರ್ಥ. ಅದಾಗ್ಯೂ, ಯಾರಿಗೆ ಈ ತಿಂಗಳಾದ್ಯಂತ ಉಪವಾಸವನ್ನಾಚರಿಸಲು ಅಸಾಧ್ಯವೋ, ಅವನಿಗಾಗಿ ಈ ತಿಂಗಳ 9ನೇ ಮತ್ತು 10ನೇ ಅಥವಾ 10ನೇ ಮತ್ತು 11ನೇ ದಿನವನ್ನು ಉಪವಾಸ ಆಚರಿಸಲು ಅವರು (صلى الله عليه وسلم) ನಿರ್ದಿಷ್ಟಗೊಳಿಸಿರುವರು.

ಪ್ರವಾದಿ (صلى الله عليه وسلم) ರವರು ಜಾಹಿಲಿಯ್ಯಃ ಕಾಲಘಟ್ಟದಲ್ಲಿ ಆಶೂರಾ ಉಪವಾಸವನ್ನು ಆಚರಿಸುತ್ತಿದ್ದರು, ಕುರೈಶ್’ನ ಜನರೂ ಸಹ ಉಪವಾಸವನ್ನು ಆಚರಿಸುತ್ತಿದ್ದರು. ನಂತರ ಯಾವಾಗ ರಸೂಲ್ (صلى الله عليه وسلم) ರವರು ಮದೀನಕ್ಕೆ ಬಂದರೋ, (ಅಲ್ಲಿದ್ದ) ಯಹೂದಿಗಳೂ ಕೂಡ ಉಪವಾಸ ಆಚರಿಸುತ್ತಿರುವುದನ್ನು ಕಂಡರು. ಅವರು (صلى الله عليه وسلم) ಅವರ (ಯಹೂದಿಗಳ) ಬಳಿ ಈ ಕುರಿತಂತೆ ವಿಚಾರಿಸಿದರು, ಅದಕ್ಕವರು ಉತ್ತರಿಸಿದರು :

“ಅಲ್ಲಾಹು ಮೂಸಾ ಮತ್ತು ಅವರ ಜನರನ್ನು ಸಂರಕ್ಷಿಸಿದ ದಿನವಾಗಿದೆ ಇದು, ಅವನು (ಅಲ್ಲಾಹು) ಫಿರ್’ಔನನ್ನೂ ಆತನ ಜನರನ್ನೂ ನಾಶಗೊಳಿಸದನು. ಹಾಗಾಗಿ ಅಲ್ಲಾಹುವಿಗೆ ಕೃತಜ್ಞಾಪೂರಕವಾಗಿ ಮೂಸಾ (عليه السلام) ಉಪವಾಸವನ್ನು ಆಚರಿಸುತ್ತಿದ್ದರು. ಹಾಗಾಗಿ ನಾವು ಕೂಡ ಉಪವಾಸ ಆಚರಿಸುತ್ತೇವೆ.”

ಅಲ್ಲಾಹುವಿನ ರಸೂಲ್ (صلى الله عليه وسلم) ಹೇಳಿದರು : “ಮೂಸಾ (عليه السلام)ರ ಕುರಿತಂತೆ ನಿಮಗಿಂತ ಹೆಚ್ಚಿನ ಅರ್ಹರು ಮತ್ತು ಆಪ್ತರು ನಾವಾಗಿರುವೆವು”. ಹೀಗೆ ಅವರು (صلى الله عليه وسلم) ಸ್ವತಃ ಉಪವಾಸವನ್ನು ಆಚರಿಸಿದರು ಮತ್ತು (ಇತರರಿಗೂ) ಆಚರಿಸುವಂತೆ ಆಜ್ಞಾಪಿಸಿದರು.

ಆದ್ದರಿಂದ ಈ ದಿನವಾದ ಆಶೂರಾ (ಮುಹರ್ರಮ್ 10ನೇ) ದಿನದಂದು ಉಪವಾಸವನ್ನಾಚರಿಸುವುದು ಸುನ್ನತ್ ಆಗಿದೆ, ಹಾಗೂ ಪ್ರವಾದಿ (صلى الله عليه وسلم) ರವರಿಂದ ವರದಿಯಾದಂತೆ ಆಶೂರಾ ದಿನಕ್ಕಿಂತ ಹಿಂದಿನ ದಿನ ಅಥವಾ ನಂತರದ ದಿನದಲ್ಲಿ ಉಪವಾಸವನ್ನಾಚರಿಸುವುದು ಸುನ್ನತ್ ಆಗಿದೆ, ಅವರು (صلى الله عليه وسلم) ಹೇಳಿದರು :

“ಅದಕ್ಕಿಂತ (ಆಶೂರಾ ದಿನಕ್ಕಿಂತ) ಹಿಂದಿನ ದಿನ ಮತ್ತು ನಂತರದ ದಿನದಲ್ಲಿ ಉಪವಾಸವನ್ನಾಚರಿಸಿರಿ”

ಇನ್ನೊಂದು ವರದಿಯ ಉಲ್ಲೇಖದಲ್ಲಿ : “ಅದಕ್ಕಿಂತ ಹಿಂದಿನ ದಿನ ಅಥವಾ ನಂತರದ ದಿನದಲ್ಲಿ (ಉಪವಾಸವನ್ನಾಚರಿಸಿರಿ)”

ಇನ್ನೊಂದು ವರದಿಯಲ್ಲಿ : “ಒಂದು ವೇಳೆ ನಾನು ಮುಂದಿನ ವರ್ಷದ ತನಕ ಬದುಕಿರುವುದಾದರೆ, ಖಂಡಿತವಾಗಿಯೂ ನಾನು ಒಂಭತ್ತರಂದು ಉಪವಾಸ ಆಚರಿಸುವೆನು”. ಅರ್ಥಾತ್ ಹತ್ತನೇ ದಿನದ ಉಪವಾಸದ ಜೊತೆಗೆ (ಒಂಭತ್ತನೇ ದಿನದ ಉಪವಾಸನ್ನೂ ಆಚರಿಸುವೆನು ಎಂದಾಗಿದೆ) – ಹಾಗಾಗಿ ಹತ್ತನೇ ದಿನದಂದು ಉಪವಾಸವನ್ನು ಆಚರಿಸುವುದು ಅತ್ಯುತ್ತಮವಾದುದಾಗಿದೆ, ಯಾಕೆಂದರೆ ಇದೊಂದು ಶ್ರೇಷ್ಠ ದಿನವಾಗಿದ್ದು, ಮೂಸ (عليه السلام) ಮತ್ತು (ಅವರ ಜೊತೆಗಿದ್ದ) ಮುಸ್ಲಿಮರಿಗೆ ಈ ದಿನದಲ್ಲಿ ಮಹಾ ಒಳಿತು ಪ್ರಾಪ್ತಿಯಾಗಿದೆ.

ಮತ್ತು ನಮ್ಮ ಪ್ರವಾದಿ (صلى الله عليه وسلم) ರವರು ಆ ದಿನದಂದು ಉಪವಾಸವನ್ನಾಚರಿಸಿದ್ದರು. ಹಾಗಾಗಿ ನಮ್ಮ ಪ್ರವಾದಿಯೊಂದಿಗೆ ಅವರು ನಿರ್ಣಯಿಸಿರುವುದನ್ನು ಕಾರ್ಯಗತಗೊಳಿಸುವ ಸಲುವಾಗಿ ನಾವು (ಮುಹರ್ರಮ್ ತಿಂಗಳ) ಒಂಭತ್ತರಂದು ಉಪವಾಸವನ್ನಾಚರಿಸುತ್ತೇವೆ. ಇನ್ನು ನಾವು ಯಹೂದಿಗಳಿಂದ ಭಿನ್ನರಾಗುವ ಸಲುವಾಗಿ ಹತ್ತರೊಡನೆ, ಅದಕ್ಕಿಂತ ಹಿಂದಿನ ಅಥವಾ ನಂತರದ ದಿನದಲ್ಲಿ ಉಪವಾಸವನ್ನಾಚರಿಸುವೆವು. “ಒಂದು ವೇಳೆ ನಾನು ಮುಂದಿನ ವರ್ಷದ ತನಕ ಬದುಕಿರುವುದಾದರೆ, ನಾನು ಖಂಡಿತವಾಗಿಯೂ ಒಂಭತ್ತರಂದು ಉಪವಾಸ ಆಚರಿಸುವೆನು” ಎಂಬ ಈ ಹದೀಸಿನ ವರದಿಯನ್ನು ಆಧರಿಸಿ ಒಂಭತ್ತು ಮತ್ತು ಹತ್ತರಂದು ಉಪವಾಸ ಆಚರಿಸುವುದು ಅತ್ಯುತ್ತಮವಾದುದಾಗಿದೆ.

ಹೀಗೆ ಒಂದು ವೇಳೆ ಓರ್ವ ವ್ಯಕ್ತಿಯು ಹತ್ತು ಮತ್ತು ಹನ್ನೊಂದರಂದು, ಅಥವಾ ಎಲ್ಲಾ ಮೂರು ದಿನಗಳಲ್ಲಿ : ಒಂಬತ್ತು, ಹತ್ತು ಮತ್ತು ಹನ್ನೊಂದರಂದು ಉಪವಾಸ ಆಚರಿಸುವುದಾದರೆ ಅವೆಲ್ಲವೂ ಒಳಿತೇ ಆಗಿದೆ. ಮತ್ತು ಅದರಲ್ಲಿ ಯಹೂದಿಗಳೊಂದಿಗಿನ ಭಿನ್ನತೆಯಿದೆ. ಹಾಗೆಯೇ ಒಂದು ವೇಳೆ ಓರ್ವನು ತಿಂಗಳಾದ್ಯಂತ ಉಪವಾಸವನ್ನು ಆಚರಿಸುವುದಾದರೆ ಅದು ಅವನಿಗೆ ಅತ್ಯುತ್ತಮವಾದುದಾಗಿದೆ.

 

ಮೂಲ : https://binbaz.org.sa/old/38982

ಅನುವಾದ : ಅಬೂ ಹಮ್ಮಾದ್ ಸಲಾಹುದ್ದೀನ್

ಈ ಫತ್ವಾದ PDF ಪ್ರತಿಯನ್ನು ಇಲ್ಲಿಂದ ಡೌನ್’ಲೋಡ್ ಮಾಡಿಕೊಳ್ಳಿ.

 

⠀ ⠀ ⠀