ಪ್ರತಿಭಟನೆಗಳ ಕುರಿತು ಇಸ್ಲಾಮಿನ ನಿಲುವೇನು?

w

ಸೌದಿ ಅರೇಬಿಯಾದ ಹಿರಿಯ ವಿದ್ವಾಂಸರಾದ ಅಶ್ಶೈಖ್ ಸಾಲಿಹ್ ಅಲ್-ಫೌಝಾನ್ (حَفِظَهُ اللَّهُ) ರವರೊಂದಿಗೆ ಪ್ರತಿಭಟನೆಗಳ ಕುರಿತು ಪ್ರಶ್ನಿಸಲಾಯಿತು :

ಪ್ರಶ್ನೆ : ಪ್ರತಿಭಟನೆಗಳಲ್ಲಿರುವ ಕೆಡುಕುಗಳಿಂದಾಗಿ ಅದು ನಿಷಿದ್ಧವಾಗಿದೆ ಎಂದು ಯಾವಾಗ ಹಿರಿಯ ಉಲಮಾಗಳ ಸಮಿತಿಯು ಫತ್ವಾವನ್ನು ಹೊರಡಿಸಿದರೋ, ಆಗ ಪ್ರತಿಭಟನೆಗಳು ಎರಡು ವಿಧವಾಗಿದೆ ಎಂದು ಹೇಳಿಕೊಳ್ಳುವ ಕೆಲವರನ್ನು ಕಂಡೆವು. ಅವರು ಹೇಳುತ್ತಾರೆ : ಒಂದುವೇಳೆ (ಪ್ರತಿಭಟನೆಗಳನ್ನು) ಶಾಂತಿಯುತವಾಗಿ, ವಿನಾಶ, ಧ್ವಂಸ, ಲೂಟಿ ಹಾಗೂ ಸ್ತ್ರೀ-ಪುರುಷರ ಮುಕ್ತ ಬೆರೆಯುವಿಕೆ ಮುಂತಾದವುಗಳಿಲ್ಲದೆ ಕೇವಲ ಹಕ್ಕೊತ್ತಾಯದ ಕಾರಣಕ್ಕಾಗಿ ಮಾಡುವುದಾದರೆ ಅವುಗಳು ಸಮ್ಮತಾರ್ಹವಾಗಿದೆ. ಒಂದುವೇಳೆ ಅವುಗಳು (ಪ್ರತಿಭಟನೆಗಳು) ವಿನಾಶ, ವಿಧ್ವಂಸಕ ಕೃತ್ಯಗಳು ಹಾಗೂ ಧ್ವಂಸಗಳನ್ನು ಒಳಗೊಂಡಿದ್ದರೆ ಆಗ ಅವುಗಳು ನಿಷಿದ್ಧವಾಗಿದೆ. ಹಾಗಾದರೆ ಅವರನ್ನು (ಅವರು ಮುಂದಿಡುವ ಹೇಳಿಕೆಗಳನ್ನು) ತಾವು ಹೇಗೆ ಖಂಡಿಸುವಿರಿ?

ಉತ್ತರ : ನಾವು ಅವನೊಂದಿಗೆ ಪ್ರಶ್ನಿಸುತ್ತೇವೆ : ಅಂದಾಗಲೀ, ಇಂದಾಗಲೀ ಪ್ರತಿಭಟನೆಗಳಿಗೆ ಮುಸ್ಲಿಮರ ಬಳಿ ಯಾವುದೇ ಆಧಾರವಿದೆಯೇ? (ಅದು ಯಾವುದೇ ಕಾಲಘಟ್ಟವಾದರೂ ಸರಿ). ಪ್ರತಿಭಟನೆಗಳು ಪಾಶ್ಚಾತ್ಯರ ಮೂಲಕವೇ ಹೊರತು (ಮುಸ್ಲಿಮರಿಂದ) ಪರಿಚಿತವಾಗಿಲ್ಲ. ಅದು ಎಂದಿಗೂ ಇಸ್ಲಾಮಿನಲ್ಲಿಲ್ಲ. ಇಸ್ಲಾಮ್ ಶಿಸ್ತುಬದ್ಧತೆ, ಶಾಂತಿ ಮತ್ತು ಸಮಾಧಾನಕ್ಕಾಗಿ ಪ್ರೇರೇಪಿಸುತ್ತದೆ ಹಾಗೂ ಹಿಂಸೆ, ಅರಾಜಕತೆ ಅವ್ಯವಸ್ಥೆಗಳು ನಡೆಯದಂತೆ (ನೋಡಿಕೊಳ್ಳಲು) ಪ್ರೇರಣೆಯನ್ನು ನೀಡುತ್ತದೆ. ಅವ್ಯವಸ್ಥೆ ಹಾಗೂ ಅರಾಜಕತೆಯ ಮೂಲಕ ಹಕ್ಕುಗಳನ್ನು ಸಾಧಿಸಲಾಗುವುದಿಲ್ಲ. ಹಕ್ಕುಗಳನ್ನು ಸಾಧಿಸಲಾಗುವುದು ಕೇವಲ ನಿಗದಿಪಡಿಸಿದ (ಧರ್ಮಸಮ್ಮತವಾದ) ಮಾರ್ಗಗಳ ಮೂಲಕವಾಗಿದೆ, ಪ್ರತಿಭಟನೆಗಳಿಂದಲ್ಲ. ತಮ್ಮ ದೂರುಗಳನ್ನು ಸಲ್ಲಿಸುವುದರಿಂದ ಅಥವಾ ತಮ್ಮ ಹಕ್ಕುಗಳನ್ನು ಕೇಳುವುದರಿಂದ ಯಾರೂ ತಡೆಹಿಡಿಯಲ್ಪಟ್ಟಿಲ್ಲ. ಇದರಿಂದ ಯಾರೂ ಕೂಡ ತಡೆಹಿಡಿಯಲ್ಪಟ್ಟಿಲ್ಲ. ಇನ್ನು ಪ್ರತಿಭಟನೆಗಳ ಕುರಿತು ಹೇಳುವುದಾರೆ ಅದು ಇಸ್ಲಾಮ್ ಧರ್ಮಕ್ಕೆ ಸೇರಿದ್ದಲ್ಲ. ನಾನು ಹೇಳುತ್ತೇನೆ ಹಾಗೂ ಮತ್ತೊಮ್ಮೆ ನಾನದನ್ನು ಪುನರಾವರ್ತಿಸುತ್ತೇನೆ : ಅದು ಇಸ್ಲಾಮಿಗಾಗಲಿ ಅಥವಾ ಮುಸ್ಲಿಮರ ನಡವಳಿಕೆಗಾಗಲಿ ಸೇರಿದ್ದಲ್ಲ.

ಅವುಗಳು ನಮಗೆ ಕೇವಲ ಪಾಶ್ಚಾತ್ಯ ಸಮಾಜಗಳ ಮೂಲಕ ಪರಿಚಿತವಾಗಿರುವುದು (ಮುಸ್ಲಿಮ್) ಸಮುದಾಯವನ್ನು ಒಡೆಯುವುದಕ್ಕಾಗಿದೆ ಹಾಗೂ ಜನರಲ್ಲಿ ಒಡಕುಂಟು ಮಾಡಲು ಮತ್ತು ಅವರ ಮಧ್ಯೆ ಪರಸ್ಪರ ಶತ್ರುತ್ವವನ್ನು ಪ್ರಚೋದಿಸುವುದಕ್ಕಾಗಿದೆ. ಇದಾಗಿದೆ ಅವರ ಉದ್ದೇಶ.

ಶ್ರೇಷ್ಠ ವಿದ್ವಾಂಸರಾದ ಅಶ್ಶೈಖ್ ಸಾಲಿಹ್ ಅಲ್-ಉಸೈಮೀನ್ (V) ರವರೊಂದಿಗೆ ಪ್ರತಿಭಟನೆಗಳ ಕುರಿತು ಪ್ರಶ್ನಿಸಲಾಯಿತು. ಅವರು ಉತ್ತರಿಸಿದರು :

ಸರ್ವಸ್ತುತಿಗಳು ಸಕಲ ಲೋಕಗಳ ರಬ್ಬ್ಆದ (ಪಾಲಕ ಪ್ರಭುವಾದ) ಅಲ್ಲಾಹುವಿಗೆ ಮೀಸಲು. ಅವನ ಸಲಾತ್ ಮತ್ತು ಸಲಾಮ್‍ಗಳು ನಮ್ಮ ನಾಯಕರಾದ ಮುಹಮ್ಮದ್ (H) ರವರ ಮೇಲೂ, ಅವರ ಕುಟುಂಬದ ಮೇಲೂ, ಅವರ ಅನುಚರರ (ಸಹಾಬಿಗಳ) ಮೇಲೂ, ಹಾಗೂ ಲೋಕಾಂತ್ಯದ ವರೆಗೆ ಅವರನ್ನು ಅತ್ಯುತ್ತಮ ರೀತಿಯಲ್ಲಿ ಅನುಸರಿಸಿದವರ ಮೇಲೂ ವರ್ಷಿಸುತ್ತಿರಲಿ.

ಮುಂದುವರಿದು :

ಖಂಡಿತವಾಗಿಯೂ, ಪ್ರತಿಭಟನೆಗಳು (ಆಧುನಿಕವಾದ) ನೂತನ ವಿಚಾರವಾಗಿದೆ. ಅದು ಪ್ರವಾದಿ (H) ರವರ ಕಾಲದಲ್ಲಾಗಲೀ, ಸನ್ಮಾರ್ಗಿಗಳಾದ ಖಲೀಫರುಗಳ ಕಾಲದಲ್ಲಾಗಲೀ ಅಥವಾ ಯಾವುದೇ ಸಹಾಬಿಗಳ ಕಾಲದಲ್ಲಾಗಲೀ ಪರಿಚಿತವಾಗಿರಲಿಲ್ಲ.

ಹಾಗೂ ಅದರಲ್ಲಿ (ಪ್ರತಿಭಟನೆಗಳಲ್ಲಿ) ಒಳಗೊಂಡಿರುವ ಅವ್ಯವಸ್ಥೆ ಹಾಗೂ ಅರಾಜಕತೆಯು ಅದನ್ನು ನಿಷಿದ್ಧಗೊಳಿಸುತ್ತದೆ. ಎಷ್ಟರವರೆಗೆಂದರೆ ಗಾಜು, ಬಾಗಿಲು ಇತ್ಯಾದಿಗಳನ್ನು ಪುಡಿಮಾಡಿ ನಾಶಗೊಳಿಸುವುದು ಮುಂತಾದವುಗಳು ನಡೆಯುತ್ತದೆ ಅದೂ ಅಲ್ಲದೆ ಅವುಗಳಲ್ಲಿ ಸ್ತ್ರೀ-ಪುರುಷರು, ಯುವಕರು ಮತ್ತು ವೃದ್ಧರ ನಡುವೆ ಮುಕ್ತ ಬೆರೆಯುವಿಕೆ, ಹಾಗೂ ಅದಕ್ಕೆ ಹೋಲುವ ಕೆಡುಕು ಹಾಗೂ ಅಸಹ್ಯಕರವಾದ ಕೃತ್ಯಗಳೆಲ್ಲವೂ ಸಂಭವಿಸುತ್ತದೆ.

ಇನ್ನು ಸರ್ಕಾರದ ಮೇಲೆ ಒತ್ತಡ ಹಾಕುವುದರ ಕುರಿತು ಹೇಳುವುದಾದರೆ, ಒಂದುವೇಳೆ ಅದು ಮುಸ್ಲಿಮ್ ಆಡಳಿತವಾಗಿದ್ದರೆ ಅಲ್ಲಾಹುವಿನ ಗ್ರಂಥ ಹಾಗೂ ಅವನ ರಸೂಲ್ (H) ರವರ ಜೀವನ ಸಂದೇಶವು (ಆಡಳಿತಗಾರರಿಗೆ) ಒಂದು ಉಪದೇಶವಾಗಿ (ನೀಡಿದರೆ) ಅದು ಸಾಕಾಗುವುದು. ಇದು ಓರ್ವ ಮುಸ್ಲಿಮನ ಮುಂದೆ ತರಬಹುದಾದ ಒಂದು ಅತ್ಯುತ್ತಮವಾದ ರೀತಿಯಾಗಿದೆ. ಇನ್ನು ಒಂದುವೇಳೆ ಅದು ಮುಸ್ಲಿಮೇತರ ಆಡಳಿತವಾಗಿದ್ದರೆ, ಅದು ಈ ಪ್ರತಿಭಟನಾಕಾರರ ಬಗ್ಗೆ (ಸಾಮಾನ್ಯವಾಗಿ) ಕಾಳಜಿವಹಿಸುವುದಿಲ್ಲ. ಬಹುಶಃ ಅದು ಮೇಲ್ನೋಟಕ್ಕೆ (ಅವರ ಪ್ರತಿಭಟನೆಯಿಂದಾಗಿ) ಅವರೊಂದಿಗೆ ನಯವಾಗಿ ವರ್ತಿಸಿದರೂ, ಅದು ಅವರ ಒಳಗೆ ಗುಪ್ತವಾಗಿ ಕೆಟ್ಟ ಉದ್ದೇಶದಿಂದ ಕೂಡಿರುತ್ತದೆ. ಆದ್ದರಿಂದ ಈ ಎಲ್ಲಾ ಕಾರಣದಿಂದಾಗಿ ಪ್ರತಿಭಟನೆಗಳು ದುರಾಚಾರವಾದ ಕೃತ್ಯಗಳಾಗಿವೆ ಎಂದು ನಾವು ಭಾವಿಸುತ್ತೇವೆ.

ಇನ್ನು ಈ ಪ್ರತಿಭಟನೆಗಳು ಶಾಂತಿಯುತವಾಗಿದೆ ಎಂಬ ಅವರ ಹೇಳಿಕೆಯ ಕುರಿತು ಹೇಳುವುದಾದರೆ, ಅದು ಬಹುಶಃ ಆರಂಭದಲ್ಲಿ ಅಥವಾ ಮೊದಲ ಬಾರಿಗೆ ಶಾಂತಿಯುತವಾಗಿರಬಹುದು ಆದರೆ ನಂತರ ಅವು ವಿನಾಶಕಾರಿಯಾಗಿ (ಅನೇಕ ಜೀವ ಹಾನಿ ಮತ್ತು ಸೊತ್ತು ನಷ್ಟಗಳಿಗೆ ಕಾರಣವಾಗಿ) ಪರಿಣಮಿಸುತ್ತದೆ. ಹಾಗಾಗಿ ಪ್ರವಾದಿ (H) ಮತ್ತು ಸಹಾಬಿಗಳ ಮಾರ್ಗವನ್ನು ಅನುಸರಿಸುವಂತೆ ಮುಸ್ಲಿಮ್ ಯುವ ಜನತೆಯೊಂದಿಗೆ ನಾನು ಉಪದೇಶಿಸುತ್ತೇನೆ. ಏಕೆಂದರೆ ಖಂಡಿತವಾಗಿಯೂ, ಅಲ್ಲಾಹು (H) ಮುಹಾಜಿರೀನ್ ಮತ್ತು ಅನ್ಸಾರ್‌ಗಳನ್ನು ಹಾಗೂ ಅವರನ್ನು ಒಳಿತಿನಲ್ಲಿ ಅನುಸರಿಸಿದವರನ್ನು ಪ್ರಶಂಸಿಸಿರುವನು.

(ಮೂಲ : ಅಲ್-ಜವಾಬ್ ಅಲ್-ಅಬ್‍ಹರ್ ಲಿ ಫುಆದ್ ಸಿರಾಜ್, ಪುಟ : 75)