ಪ್ರಶ್ನೆ :
ಯಾವ ರೀತಿ ವಿಶ್ವಾಸಪರವಾಗಿ ಮತ್ತು ಕ್ರಿಯಾತ್ಮಕವಾಗಿ ಹಾಗೂ ಕರ್ಮಪರವಾಗಿ ತೌಹೀದಿನ ನೈಜತೆಯನ್ನು ಯಥಾವತ್ತಾಗಿ ತಿಳಿದುಕೊಳ್ಳಬಹುದು?
ಉತ್ತರ :
ಅದರ ಮಾರ್ಗವು ಕಲಿಯುವುದಾಗಿದೆ (ಅಂದರೆ) ತೌಹೀದನ್ನು ಕಲಿಯುವುದು. ಯಾಕೆಂದರೆ ಜನರ ಪೈಕಿ ಬಹಳಷ್ಟು ಮಂದಿಯೊಂದಿಗೆ ತೌಹೀದ್ ಅಂದರೇನೆಂದು ನೀನೊಂದು ವೇಳೆ ಕೇಳುವುದೇ ಆದರೆ ಅವನು ನಿನಗೆ (ಸರಿಯಾದ) ಉತ್ತರವನ್ನು ನೀಡಲಾರನು. ಯಾಕೆಂದರೆ ಅದರ ಅರ್ಥವನ್ನು ಅವನು ಕಲಿಯಲಿಲ್ಲ. ಅದರ ತೌಹೀದ್ ಎಂಬುದರ ಉದ್ದೇಶವು – ಆರಾಧನೆಯಲ್ಲಿ (ಇಬಾದತ್) ಅಲ್ಲಾಹುವನ್ನು ಏಕೈಕಗೊಳಿಸುವುದಾಗಿದೆ.
ಅಶ್ಶೈಖ್ ಮುಹಮ್ಮದ್ ಬಿನ್ ಅಬ್ದುಲ್ ವಹ್ಹಾಬ್ رحمه الله ಹೇಳಿರುವರು :
ನೀನು ತಿಳಿದುಕೋ – ಅಲ್ಲಾಹು ನಿನ್ನನ್ನು ಅನುಗ್ರಹಿಸಲಿ – ತೌಹೀದ್ ಎಂದರೆ ಆರಾಧನೆಯಲ್ಲಿ ಅಲ್ಲಾಹುವನ್ನು ಏಕೈಕಗೊಳಿಸುವುದಾಗಿದೆ. ಅದು (ಕೇವಲ) ಸೃಷ್ಟಿ, ಅನ್ನಾಧಾರ, ಜೀವನ ಮತ್ತು ಮರಣ ನೀಡುವ ಕಾರ್ಯಗಳಲ್ಲಿ ಅಲ್ಲಾಹುವನ್ನು ಏಕೈಕಗೊಳಿಸುವುದು ಮಾತ್ರವಲ್ಲ ಅದು ಪರ್ಯಾಪ್ತವೂ ಅಲ್ಲ. ಇದು (ಕೇವಲ) ತೌಹೀದ್ ಅರ್ರುಬೂಬಿಯ್ಯಃ (ಸೃಷ್ಟಿಕರ್ತ-ಪರಿಪಾಲಕ, ಒಡೆಯ ಮತ್ತು ನಿಯಂತ್ರಕ ಮುಂತಾದವುಗಳಲ್ಲಿ ಅಲ್ಲಾಹುವನ್ನು ಏಕೈಕಗೊಳಿಸುವುದು) ಮಾತ್ರವಾಗಿದೆ. ಇದನ್ನು ಜಾಹಿಲಿಯ್ಯಃ ಕಾಲದ (ಜನರು) – [ಇಸ್ಲಾಮ್ ಪುನರಾಗಮನಕ್ಕಿಂತ ಮುಂಚಿನ ಜನರು ಹಾಗೂ ಮಕ್ಕಾದ ಮುಶ್ರಿಕರು] – ಕೂಡ (ರಬ್ಬ್-ಸೃಷ್ಟಿಕರ್ತ, ಒಡೆಯ ಮತ್ತು ನಿಯಂತ್ರಕ ಅಲ್ಲಾಹು ಮಾತ್ರ ಎಂಬ) ವಿಶ್ವಾಸವನ್ನು ಹೊಂದಿದ್ದರು ಹಾಗೂ ಅದನ್ನು ಅವರು ಅಂಗೀಕರಿಸಿದ್ದರು. ಆದರೆ ಯಾವಾಗ ಅವರು ಅಲ್ಲಾಹುವಿನ ಜೊತೆ ಇತರರನ್ನು ಕೂಡ ಆರಾಧಿಸ ತೊಡಗಿದರೋ, ಅವರಲ್ಲಿ ಮರಣದ ಮುಂಚಿತವಾಗಿ ಪಶ್ಚಾತ್ತಾಪಟ್ಟು ಅಲ್ಲಾಹುವಿನೆಡೆಗೆ ಮರಳಿ, ಏಕೈಕನೂ, ಯಾವ ಸಹಭಾಗಿಯೂ ಇಲ್ಲದ ಅಲ್ಲಾಹುವಿನ ಮಾತ್ರ ಆರಾಧನೆಯಲ್ಲಿ ದೃಢನಿಷ್ಠರಾದವರನ್ನು ಹೊರತುಪಡಿಸಿ ಇತರೆಲ್ಲರೂ ಮುಶ್ರಿಕರೂ, ಶಾಶ್ವತ ನರಕವಾಸಿಗಳೂ ಆಗಿಬಿಟ್ಟರು.
ಆದ್ದರಿಂದ ತೌಹೀದ್ ಎಂಬುದು – ಅದು ಆರಾಧನೆಯಲ್ಲಿ ಅಲ್ಲಾಹುವನ್ನು ಏಕೈಕಗೊಳಿಸುವುದಾಗಿದೆ. ಈ ತೌಹೀದ್’ನೆಡೆಗೆ (ಅಲ್ಲಾಹುವನ್ನು ಮಾತ್ರ ಆರಾಧಿಸಲು) ಎಲ್ಲಾ ಪ್ರವಾದಿ ಹಾಗೂ ಸಂದೇಶವಾಹಕರುಗಳು ಜನರನ್ನು ಆಹ್ವಾನಿಸಿರುವರು. ಎಲ್ಲಾ ರಸೂಲ್’ಗಳು ಪ್ರಥಮವಾಗಿ ಜನರಿಗೆ ನೀಡುದ ಕರೆಯು (ಇದೇ ಆಗಿತ್ತು.);
“ಓ ನನ್ನ ಜನರೇ! ನೀವು ಅಲ್ಲಾಹುವನ್ನು (ಮಾತ್ರ) ಆರಾಧಿಸಿರಿ. ಅವನ ಹೊರತು ನಿಮಗೆ ಅನ್ಯ (ನೈಜ) ಆರಾಧ್ಯರಿಲ್ಲ.”
ಸೃಷ್ಟಿಕರ್ತನೂ, ಅನ್ನಾಧಾರ ಒದಗಿಸುವವನೂ, ಜೀವಂತಗೊಳಿಸುವವನು ಹಾಗೂ ಮೃತಪಡಿಸುವವನು ಅಲ್ಲಾಹು ಮಾತ್ರವೆಂದು (ಕೇವಲ) ನೀನು ವಿಶ್ವಾಸವನ್ನು ಹೊಂದುವುದು ಮಾತ್ರ ತೌಹೀದ್ ಅಲ್ಲ! ಹೌದು! ಇದು ತೌಹೀದ್, ಆದರೆ ತೌಹೀದ್ ಅರ್ರುಬೂಬಿಯ್ಯಃ ಮಾತ್ರ.! (ಅರ್ಥಾತ್ ಸೃಷ್ಟಿ, ಪರಿಪಾಲಕತ್ವ, ಹಾಗೂ ಒಡೆತನದಲ್ಲಿ ಅಲ್ಲಾಹುವನ್ನು ಏಕೈಕಗೊಳಿಸುವುದು ಮಾತ್ರವಾಗಿದೆ). ಇದನ್ನು ಅಬೂ ಜಹ್ಲ್ ಕೂಡ ಅಂಗೀಕರಿಸಿದ್ದನು, ಮಾತ್ರವಲ್ಲ ಅವರಿಗಿಂತ ಮುಂಚಿನ ಮುಶ್ರಿಕರು (ಕೂಡ) ಅಂಗೀಕರಿಸಿದ್ದರು.
وَلَئِن سَأَلْتَهُم مَّنْ خَلَقَ السَّمَاوَاتِ وَالْأَرْضَ لَيَقُولُنَّ اللَّـهُ
“ಆಕಾಶಗಳನ್ನು ಮತ್ತು ಭೂಮಿಯನ್ನು ಸೃಷ್ಟಿಸಿದವನು ಯಾರು?’ ಎಂದು ತಾವು ಅವರೊಂದಿಗೆ ಕೇಳಿದರೆ ಖಂಡಿತವಾಗಿಯೂ ಅವರು ‘ಅಲ್ಲಾಹು’ ಎನ್ನುವರು.” (ಸೂರಃ ಲುಕ್ಮಾನ್ : 25)
وَلَئِن سَأَلْتَهُم مَّنْ خَلَقَهُمْ لَيَقُولُنَّ اللَّـهُ
“ಅವರನ್ನು ಸೃಷ್ಟಿಸಿದ್ದು ಯಾರು?’ ಎಂದು ತಾವು ಅವರೊಂದಿಗೆ ಕೇಳಿದರೆ ಖಂಡಿತವಾಗಿಯೂ ಅವರು ‘ಅಲ್ಲಾಹು’ ಎನ್ನುವರು.”
(ಸೂರಃ ಅಝ್ಝುಖ್ರುಫ್ : 87)
قُلْ مَن رَّبُّ السَّمَاوَاتِ السَّبْعِ وَرَبُّ الْعَرْشِ الْعَظِيمِ سَيَقُولُونَ لِلَّـهِ
“ಕೇಳಿರಿ: ‘ಏಳು ಆಕಾಶಗಳ ರಬ್ಬ್ ಮತ್ತು ಮಹಾ ಸಿಂಹಾಸನದ ರಬ್ಬ್ ಯಾರು?’ಅವರು ಹೇಳುವರು: ‘(ಅವೆಲ್ಲವೂ) ಅಲ್ಲಾಹು ವಿನದ್ದಾಗಿದೆ’.”
(ಸೂರಃ ಅಲ್-ಮುಅ್’ಮಿನೂನ್ : 87)
ಇದನ್ನು ಅವರು ಒಪ್ಪಿಕೊಳ್ಳುತ್ತಾರೆ ಆದರೆ ಅತ್ಯುನ್ನತನಾದ ಅಲ್ಲಾಹುವಿಗೆ ಮಾತ್ರ ಆರಾಧನೆಯನ್ನು ಏಕೈಕಗೊಳಿಸದೆ ಮತ್ತು ಅವನ ಹೊರತು ಇತರರ ಆರಾಧನೆಯನ್ನು ತೊರೆಯದೆ ಅದರ (ನೈಜ) ಅರ್ಥ ಉದ್ದೇಶದಲ್ಲಿ ಅವರು (ಮುಶ್ರಿಕರು) ದೃಢಗೊಳ್ಳಲಿಲ್ಲ.
ಮೂಲ : ಅಶ್ಶೈಖ್ ಸ್ವಾಲಿಹ್ ಅಲ್ ಫೌಝಾನ್ حفظه الله
( ಹಿರಿಯ ಉಲಮಾ ಮಂಡಳಿಯ ಸದಸ್ಯರು, ಸೌದಿ ಅರೇಬಿಯಾ )
ಅನುವಾದ : ಅಬೂ ಹಮ್ಮಾದ್ ಸಲಾಹುದ್ದೀನ್