w
ಮದೀನಃದ ವಿದ್ವಾಂಸರಾದ ಅಶ್ಶೈಖ್ ಅರಫಾತ್ ಬಿನ್ ಹಸನ್ (حَفِظَهُ اللَّهُ) ರವರೊಂದಿಗೆ ಈ ಕುರಿತು ಪ್ರಶ್ನಿಸಲಾಯಿತು :
ಪ್ರಶ್ನೆ : ರಮದಾನ್ ತಿಂಗಳು ಪ್ರಾರಂಭವಾಗುವುದಕ್ಕಿಂತಲೂ ಮೊದಲು ಕ್ಷಮೆಯಾಚಿಸುವುದು ಸುನ್ನಃ (ಪುಣ್ಯ ಲಭಿಸುವ ಕರ್ಮ) ಆಗಿದೆಯೆಂದು ವಾದಿಸುತ್ತಾ ಪ್ರತಿವರ್ಷವೂ, ರಮದಾನ್ ತಿಂಗಳಿಗಿಂತ ಮುಂಚಿತವಾಗಿ (ಕೆಲವು) ಜನರು (ಸಾಮಾಜಿಕ ಜಾಲತಾಣಗಳಲ್ಲಿ) ಸಂದೇಶಗಳನ್ನು ರವಾನಿಸುತ್ತಾರೆ. ಇದು ಸುನ್ನಃ ಆಗಿದೆಯೇ? ಒಂದು ವೇಳೆ (ಸುನ್ನಃ) ಅಲ್ಲ ಎಂದಾದಲ್ಲಿ, ಈ ರೀತಿ ಮಾಡುವುದರಲ್ಲಿ ತಪ್ಪೇನಾದರೂ ಇದೆಯೇ?
ಉತ್ತರ : ಇಲ್ಲ! ಇದು ಸುನ್ನಃ ಅಲ್ಲ, ಮುಸ್ಲಿಮರ ಪೈಕಿ ಯಾರೂ ಕೂಡ ಇದನ್ನು ಮಾಡಬಾರದು. ವಾಸ್ತವವಾಗಿ ಇದನ್ನು ಮಾಡುವುದು ಬಿದ್ಅತ್‍ಗೆ (ನೂತನಾಚಾರಗಳಿಗೆ) ಹೆಚ್ಚು ಸಮೀಪವಾಗಿದೆ.
ಯಾಕೆಂದರೆ (ಇಲ್ಲಿ ಎರಡು ಸಂಭಾವ್ಯ ಸನ್ನಿವೇಶಗಳಿವೆ) ಒಂದೋ ಅವನು ತನ್ನ ಸಹೋದರನ ಮೇಲೆ ಅನ್ಯಾಯವೆಸಗಿರುವನು ಅಥವಾ ಎಸಗಿರುವುದಿಲ್ಲ. ಆದ್ದರಿಂದ ಒಂದು ವೇಳೆ ಅವನ ಮೇಲೆ ಅನ್ಯಾಯವನ್ನೆಸಗಿದರೆ, ತಕ್ಷಣವೇ (ಅವನ ಬಳಿ) ಕ್ಷಮೆಯಾಚಿಸಬೇಕು. ರಮದಾನ್ ತಿಂಗಳು ಬರುವವರೆಗೆ ಅವನು ಕಾಯಬಾರದು.
ರಮದಾನ್ ತಿಂಗಳು ಬರುವವರೆಗೆ ಅವನು ಕಾಯಬಾರದು ಹಾಗೂ ಆ ಬಳಿಕ ಜನರಲ್ಲಿ “ನನ್ನನ್ನು ಕ್ಷಮಿಸಿ” ಎಂದು ಹೇಳುವುದಾಗಲೀ ಅಥವಾ ಈ ರೀತಿ (ರಮದಾನ್ ತಿಂಗಳಲ್ಲಿ ) ಕ್ಷಮೆಯಾಚನೆಯನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವುದಾಗಲೀ, (ಈ ರೀತಿಯ) ಸಂದೇಶಗಳನ್ನು ರವಾನಿಸುವುದಾಗಲೀ ಮಾಡಬಾರದು.
ಒಂದುವೇಳೆ ಇದರಲ್ಲಿ ಯಾವುದೇ ಒಳಿತಿರುತ್ತಿದ್ದರೆ, ಖಂಡಿತವಾಗಿಯೂ ಪ್ರವಾದಿ (H) ರವರು ಇದನ್ನು ಮಾಡುತ್ತಿದ್ದರು ಅಥವಾ ಅವರು ತಮ್ಮ ಸಹಾಬಿಗಳೊಂದಿಗೆ ಇದನ್ನು ಮಾಡಲು (ರಮದಾನಿನಲ್ಲಿ ಕ್ಷಮೆಯಾಚಿಸಲು) ಆಜ್ಞಾಪಿಸುತ್ತಿದ್ದರು. ಆದರೆ ಇದು ಯಾವುದನ್ನೂ ಪ್ರವಾದಿ (H) ರವರು ಸ್ವತಃ ಮಾಡಲಿಲ್ಲ, ಇತರರಿಗೂ ಇದನ್ನು ಆದೇಶಿಸಲಿಲ್ಲ ಹಾಗೂ ಸಹಾಬಿಗಳು (ಎಂದಿಗೂ) ಇದನ್ನು ಮಾಡಲಿಲ್ಲ.
ಆದ್ದರಿಂದ ಜನರ ಘನತೆ ಗೌರವದ ಬಗ್ಗೆ ಪ್ರತಿಯೋರ್ವ ವ್ಯಕ್ತಿಯು ಅಲ್ಲಾಹುವನ್ನು ಭಯಪಡಬೇಕು. ಒಂದು ವೇಳೆ ತನ್ನಿಂದ ಇತರರ ಘನತೆ ಗೌರವಕ್ಕೆ ಧಕ್ಕೆಯುಂಟಾದರೆ, ಅದು ರಮದಾನ್‍ನಲ್ಲಾದರೂ ಅಥವಾ ಇತರ ತಿಂಗಳಿನಲ್ಲಿ ಮಾಡಿದರೂ ತಕ್ಷಣವೇ ಅವನು (ಅನ್ಯಾಯಕ್ಕೊಳಪಟ್ಟ) ಮುಸ್ಲಿಮನ ಬಳಿ ಅದನ್ನು ಸರಿಪಡಿಸಿಕೊಂಡು ಅವನಲ್ಲಿ ಕ್ಷಮೆಯಾಚಿಸಬೇಕು. ಯಾಕೆಂದರೆ ರಮದಾನಿನಲ್ಲಾಗಲೀ ಅಥವಾ ಇನ್ನಿತರ ದಿನವೇ ಆಗಲಿ, (ಅವರ) ಪಾಪಗಳು ಅವರ ವಿರುದ್ಧ ದಾಖಲಿಸಲ್ಪಡುವುದು.
ಅನುವಾದ : ಅಬೂ ಹಮ್ಮಾದ್