ಶಬ್-ಎ-ಬರಾಅತ್ : ಶ‌ಅ್‌ಬಾನ್‍ 15 ರಂದು ವಿಶೇಷವಾಗಿ ಉಪವಾಸ ಹಾಗೂ ಇನ್ನಿತರ ಇಬಾದತ್‌ಗಳನ್ನು ನಿರ್ವಹಿಸುವುದರ ವಿಧಿಯೇನು?

w

ಉಪವಾಸ ಆಚರಿಸುವ ಮೂಲಕ ಅಥವಾ ಕುರ್‌ಆನ್ ಪಾರಾಯಣ ಮಾಡುವ ಮೂಲಕ ಅಥವಾ (ಐಚ್ಚಿಕ) ನಮಾಝ್‌ಗಳನ್ನು ನಿರ್ವಹಿಸುವ ಮೂಲಕ ಶ‌ಅ್‌ಬಾನ್‍ನ 15ನೇ ದಿನವನ್ನು ನಿರ್ದಿಷ್ಟಪಡಿಸುವುದರ ವಿಧಿಯೇನು?

ಸೌದಿ ಅರೇಬಿಯಾದ ಹಿರಿಯ ವಿದ್ವಾಂಸರಾದ ಶೈಖ್ ಮುಹಮ್ಮದ್ ಬಿನ್ ಸಾಲಿಹ್ ಅಲ್-ಉಸೈಮೀನ್ (V) ರವರೊಂದಿಗೆ ಈ ಕುರಿತು ಪ್ರಶ್ನಿಸಲಾಯಿತು :

ಪ್ರಶ್ನೆ : ಕೆಲವು ಜನರು ನಿರ್ದಿಷ್ಟ ದುಆಗಳನ್ನು (ಹೇಳುವ ಮೂಲಕ), ಕುರ್‌ಆನ್ ಪಾರಾಯಣ ಮತ್ತು ಐಚ್ಚಿಕ ನಮಾಝ್‌ಗಳನ್ನು ನಿರ್ವಹಿಸುವ ಮೂಲಕ ಶ‌ಅ್‌ಬಾನ್‍ನ 15ನೇ ದಿನವನ್ನು ನಿರ್ದಿಷ್ಟಪಡಿಸುತ್ತಿರುವುದನ್ನು ನಾವು ಕಾಣುತ್ತೇವೆ. ಹಾಗಾಗಿ ಇದರ ಕುರಿತು ಸರಿಯಾದ ನಿಲುವೇನು? ಅಲ್ಲಾಹು ನಿಮಗೆ ಒಳಿತನ್ನು ಪ್ರತಿಫಲವಾಗಿ ನೀಡಲಿ.

ಉತ್ತರ : (ಇದರ ಕುರಿತು) ಸರಿಯಾದುದೇನೆಂದರೆ, ಶ‌ಅ್‌ಬಾನ್‍ನ 15ನೇ ದಿನದ ಉಪವಾಸ ಆಚರಿಸುವುದು ಅಥವಾ (ಕುರ್‌ಆನ್) ಪಾರಾಯಣದ ಮೂಲಕ ಅದನ್ನು (ಆ ದಿನವನ್ನು) ನಿರ್ದಿಷ್ಟಪಡಿಸುವುದು ಅಥವಾ (ನಿರ್ದಿಷ್ಟ) ದುಆಗಳನ್ನು ಮಾಡುವುದು (ಇದ್ಯಾವುದಕ್ಕೂ ದೀನ್‍ನಲ್ಲಿ) ಯಾವುದೇ ಆಧಾರಗಳಿಲ್ಲ. ಹಾಗಾಗಿ ಶ‌ಅ್‌ಬಾನ್‍ನ 15ನೇ ದಿನವು ಇತರ ಯಾವುದೇ ತಿಂಗಳ 15ನೇ ದಿನದಂತೆ ಆಗಿದೆ. ಓರ್ವ ವ್ಯಕ್ತಿಗೆ ಪ್ರತೀ (ಚಂದ್ರಮಾನ) ತಿಂಗಳ 13ನೇ, 14ನೇ ಮತ್ತು 15ನೇ (ದಿನದಂದು) ಉಪವಾಸ ಆಚರಿಸುವುದನ್ನು (ಇಸ್ಲಾಮ್) ನಿಯಮಗೊಳಿಸಿರುವುದು ತಿಳಿದಿರುವ ವಿಚಾರವಾಗಿದೆ. ಅದಾಗ್ಯೂ, ಉಪವಾಸವನ್ನು ಅಧಿಕಗೊಳಿಸುವುದರಲ್ಲಿ ಇನ್ನಿತರ ತಿಂಗಳಿಗಿಂತ ಶ‌ಅ್‌ಬಾನ್‍ ತಿಂಗಳಿಗೆ ವಿಶಿಷ್ಟತೆಯಿದೆ, ಯಾಕೆಂದರೆ ಪ್ರವಾದಿ (H) ರವರು ಇನ್ನಿತರ ತಿಂಗಳಿಗಿಂತಲೂ ಹೆಚ್ಚು ಶ‌ಅ್‌ಬಾನ್‍ನಲ್ಲಿ ಉಪವಾಸ ಆಚರಿಸುತ್ತಿದ್ದರು, ಅದನ್ನವರು ತಿಂಗಳಿಡೀ ಅಥವಾ ಅವುಗಳ (ಶ‌ಅ್‌ಬಾನ್‍ ತಿಂಗಳ) ಪೈಕಿ ಸ್ವಲ್ಪ ದಿನವನ್ನು ಹೊರತುಪಡಿಸಿ, (ಇತರೆಲ್ಲಾ ದಿನಗಳಲ್ಲಿ) ಉಪವಾಸ ಆಚರಿಸುತ್ತಿದ್ದರು. ಹಾಗಾಗಿ, ಎಲ್ಲಿಯವರೆಗೆ ಅದು ಓರ್ವ ವ್ಯಕ್ತಿಗೆ ಪ್ರಯಾಸಕರವಾಗುವುದಿಲ್ಲವೋ (ಅಲ್ಲಿಯತನಕ) ಪ್ರವಾದಿ (H) ರವರ ಮಾದರಿಯನ್ನು ಅನುಸರಿಸಿಕೊಂಡು ಶ‌ಅ್‌ಬಾನ್‍ನಲ್ಲಿ ಉಪವಾಸ ಆಚರಿಸುವುದನ್ನು ಅಧಿಕಗೊಳಿಸಬೇಕಾಗಿದೆ.

(ಮೂಲ : ಅಲ್-ಬಿದಉ ವಲ್-ಮುಹ್‌ದಸಾತ್ ವಮಾ ಲಾ ಅಸ್ಲ ಲಹು, ಪುಟ 612
ಫಾತಾವಾ ಫದೀಲಃ ಅಶ್-ಶೈಖ್ ಮುಹಮ್ಮದ್ ಬಿನ್ ಸಾಲಿಹ್ ಅಲ್-ಉಸೈಮೀನ್, ಸಂಪುಟ 1, ಪುಟ 190)

ಶ‌ಅ್‌ಬಾನ್‍ನ 15ರ ರಾತ್ರಿಯಂದು (ವಿಶೇಷವಾಗಿ) ನಮಾಝ್ ನಿರ್ವಹಿಸುವುದು ಮತ್ತು ಅದರ ದಿನದಂದು ಉಪವಾಸ ಆಚರಿಸುವುದು

ಪ್ರಸಕ್ತ ಕಾಲಘಟ್ಟದ ಸೌದಿ ಅರೇಬಿಯಾದ ಹಿರಿಯ ವಿದ್ವಾಂಸರಾದ ಶೈಖ್ ಸಾಲಿಹ್ ಅಲ್-ಫೌಝಾನ್ (حَفِظَهُ اللَّهُ) ರೊಂದಿಗೆ ಈ ಕುರಿತು ಪ್ರಶ್ನಿಸಲಾಯಿತು :

ಪ್ರಶ್ನೆ : ಶ‌ಅ್‌ಬಾನ್‍ನ 15ನೇ ರಾತ್ರಿಯಂದು ನಮಾಝ್ ನಿರ್ವಹಿಸುವುದನ್ನು ಮತ್ತು ಅದರ ದಿನದಂದು ಉಪವಾಸ ಆಚರಿಸುವುದನ್ನು (ಇಸ್ಲಾಮ್) ನಿಯಮಗೊಳಿಸಿದೆಯೇ?

ಉತ್ತರ : ಅವರು (H) ಶ‌ಅ್‌ಬಾನ್‍ನ 15ನೇ ರಾತ್ರಿಯಂದು ನಮಾಝ್‌ನಲ್ಲಿ ನಿರ್ವಹಿಸಿದ್ದರೆಂದೋ ಅಥವಾ ಆ ದಿನದಲ್ಲಿ ಉಪವಾಸ ಆಚರಿಸಿದ್ದರೆಂದೋ ಧೃಢ ಮತ್ತು ವಿಶ್ವಾಸಾರ್ಹವಾದ (ಹದೀಸ್ ಪುರಾವೆಗಳಲ್ಲಿ) ಯಾವುದೂ ಕೂಡ ಪ್ರವಾದಿ (H) ರವರಿಂದ ಸ್ಥಿರಗೊಂಡಿಲ್ಲ. ಹಾಗಾಗಿ, ಶ‌ಅ್‌ಬಾನ್‍ನ 15ನೇ ರಾತ್ರಿಯು ಇತರ ಯಾವುದೇ (ತಿಂಗಳ) ರಾತ್ರಿಯಂತೆ ಆಗಿದೆ. ಒಂದು ವೇಳೆ ಓರ್ವನು ಇನ್ನಿತರ ರಾತ್ರಿಗಳಲ್ಲಿ ನಿರಂತರವಾಗಿ ಇಬಾದತ್ ನಿರ್ವಹಿಸುವವನಾಗಿದ್ದರೆ ಅವನು ಈ (ಶ‌ಅ್‌ಬಾನ್‍ನ 15ನೇ) ರಾತ್ರಿಯೂ (ಆ ಕುರಿತು) ಯಾವುದೇ ವಿಶೇಷತೆಯನ್ನು ನೀಡದೆ ನಮಾಝನ್ನು ನಿರ್ವಹಿಸಬಹುದು. ಅದೇಕೆಂದರೆ, ಯಾವುದೇ ಆರಾಧನಾ ಕರ್ಮಕ್ಕೆ ಒಂದು ಸಮಯವನ್ನು ನಿರ್ದಿಷ್ಟಪಡಿಸಲು ಸಹೀಹ್ ಆಗಿರುವ (ಧೃಢ ಮತ್ತು ವಿಶ್ವಾಸಾರ್ಹವಾದ) ಪುರಾವೆಯ ಅಗತ್ಯವಿದೆ. ಹಾಗಾಗಿ, ಅದಕ್ಕೆ (ಅರ್ಥಾತ್ ಆರಾಧನಾ ಕರ್ಮಕ್ಕೆ) ಒಂದುವೇಳೆ ಯಾವುದೇ ಸಹೀಹ್ಆದ ಪುರಾವೆಯಿಲ್ಲದಿದ್ದರೆ ಅದು (ಆ ಆರಾಧನಾ ಕರ್ಮವು) ಬಿದ್ಅತ್ (ನವೀನಾಚಾರ) ಆಗುವುದು ಹಾಗೂ ಬಿದ್ಅತ್‌ಗಳೆಲ್ಲವೂ ಪಥಭ್ರಷ್ಟತೆಯಾಗಿದೆ. ಅದರಂತೆಯೇ, ಶ‌ಅ್‌ಬಾನ್‍ನ 15ನೇ ದಿನದಂದು ಉಪವಾಸ ಆಚರಿಸುವುದರ ಕುರಿತು (ಹೇಳುವುದಾದರೆ), ಆ ನಿರ್ದಿಷ್ಟ ದಿನದಲ್ಲಿ ಉಪವಾಸವನ್ನು ನಿಯಮಗೊಳಿಸಲು ಬೇಕಾಗಿರುವ (ಸಹೀಹ್ಆದ) ಯಾವುದೇ ಪುರಾವೆಯೂ ಪ್ರವಾದಿ (H) ರವರಿಂದ ಸ್ಥಿರಗೊಂಡಿಲ್ಲ.

ಇನ್ನು ಈ (ಶ‌ಅ್‌ಬಾನ್‍ನ 15ನೇ ದಿನದ) ವಿಷಯದ ಕುರಿತು ಯಾವುದೆಲ್ಲಾ ಹದೀಸ್‌ಗಳು ವರದಿಯಾಗಿವೆಯೋ, ವಿದ್ವಾಂಸರು ತಿಳಿಸಿದಂತೆ ಅವೆಲ್ಲವೂ ದುರ್ಬಲವಾಗಿದೆ (ದಈಫ್ ಆಗಿದೆ). ಅದಾಗ್ಯೂ, ಯಾರಿಗೆಲ್ಲಾ (ಪ್ರತೀ ತಿಂಗಳಿನ) 13ನೇ, 14ನೇ ಮತ್ತು 15ನೇ (ದಿನದಂದು) ಉಪವಾಸ ಆಚರಿಸುವ ರೂಢಿಯಿದೆಯೋ, ಅವನು ಶ‌ಅ್‌ಬಾನ್‍ನ 15ರ ದಿನದಂದು (ಮಾತ್ರ) ಯಾವುದೇ ವಿಶೇಷತೆಯನ್ನು ನೀಡದೆ, ಇತರ (ತಿಂಗಳಿನ) ದಿನಗಳಲ್ಲಿ ಉಪವಾಸವಿರಿಸಿದಂತೆ, ಈ ದಿನಗಳಲ್ಲಿಯೂ (ಶ‌ಅ್‌ಬಾನ್‍ ತಿಂಗಳ 13ನೇ, 14ನೇ ಮತ್ತು 15ನೇ ದಿನಗಳಲ್ಲಿ) ಉಪವಾಸವನ್ನು ಆಚರಿಸಬಹುದಾಗಿದೆ. ಪ್ರವಾದಿ (H) ರವರು ಈ (ಶ‌ಅ್‌ಬಾನ್‍) ತಿಂಗಳಲ್ಲಿ ಉಪವಾಸ ಆಚರಿಸುವುದನ್ನು ಅಧಿಕಗೊಳಿಸುತ್ತಿದ್ದರು. ಅದಾಗ್ಯೂ, ಅವರು (ಶ‌ಅ್‌ಬಾನ್‍ನ) 15ನೇ ದಿನವನ್ನು ನಿರ್ದಿಷ್ಟಪಡಿಸಿರಲಿಲ್ಲ. ಬದಲಾಗಿ ಅವರು ರೂಢಿಯಂತೆಯೇ ಮುಂದುವರಿದಿದ್ದರು.

(ಮೂಲ : ಅಲ್-ಬಿದಉ ವಲ್-ಮುಹ್‌ದಸಾತ್ ವಮಾ ಲಾ ಅಸ್ಲ ಲಹು, ಪುಟ 614
ನೂರುನ್ ಅಲ-ದ್ದರ್ಬ್ ಫದೀಲಃ ಅಶ್- ಶೈಖ್ ಸಾಲಿಹ್ ಅಲ್-ಫೌಝಾನ್- ಸಂಪುಟ 1, ಪುಟ 87)

ದಾನ ನೀಡಲು ಶ‌ಅ್‌ಬಾನ್‍ನ 15ರ ರಾತ್ರಿಯನ್ನು ನಿರ್ದಿಷ್ಟಗೊಳಿಸುವುದು

ಸೌದಿ ಅರೇಬಿಯಾದ ಹಿರಿಯ ಉಲಮಾಗಳ ಫತ್ವಾ ಸಮಿತಿಯೊಂದಿಗೆ ಈ ಕುರಿತು ಪ್ರಶ್ನಿಸಲಾಯಿತು :

ಪ್ರಶ್ನೆ : ನನ್ನ ತಂದೆ ಬದುಕಿದ್ದಾಗ, ಪ್ರತಿವರ್ಷ ಶ‌ಅ್‌ಬಾನ್‍ನ 15ನೇ ರಾತ್ರಿಯಂದು ನನ್ನ ಸಾಧ್ಯದ ಮಟ್ಟಿಗೆ ದಾನ ನೀಡುವಂತೆ ಅವರು ನನಗೆ ಆಜ್ಞೆಯನ್ನು ನೀಡಿದ್ದರು. ಅದರಂತೆಯೇ ನಾನು ಅಂದಿನಿಂದಲೂ ಇದನ್ನು ನಿರ್ವಹಿಸುತ್ತಿದ್ದೇನೆ. ಅದಾಗ್ಯೂ, ಈ ರೀತಿ ಮಾಡುವುದಕ್ಕೆ ಕೆಲವು ಜನರು ಇದು ಸಮ್ಮತಾರ್ಹವಲ್ಲ ಎಂದು ಹೇಳುತ್ತಾ ನನ್ನನ್ನು ಎಚ್ಚರಿಸಿರುವರು. ಹಾಗಾಗಿ ಶ‌ಅ್‌ಬಾನ್‍ನ 15ನೇ ರಾತ್ರಿಯಂದು ನನ್ನ ತಂದೆಯ ಇಚ್ಛೆ ಪ್ರಕಾರ ದಾನ ನೀಡುವುದು ಸಮ್ಮತಾರ್ಹವೋ ಅಥವಾ ಅಲ್ಲವೋ? ದಯವಿಟ್ಟು ನಮಗೆ (ಈ ಕುರಿತು ಇಸ್ಲಾಮಿನ ವಿಧಿಯೇನೆಂದು) ಸಲಹೆ ನೀಡಿ. ಅಲ್ಲಾಹು ನಿಮಗೆ ಒಳಿತನ್ನು ಪ್ರತಿಫಲವಾಗಿ ನೀಡಲಿ.

ಉತ್ತರ : ಪ್ರತಿವರ್ಷ ಶ‌ಅ್‌ಬಾನ್‍ನ 15ನೇ ರಾತ್ರಿಯಂದು ದಾನ ನೀಡುವುದನ್ನು ನಿರ್ದಿಷ್ಟಗೊಳಿಸುವುದು ಸಮ್ಮತಾರ್ಹವಲ್ಲ. ನಿಮ್ಮ ತಂದೆ ನಿಮಗೆ ಅದನ್ನು ವಹಿಸಿಕೊಟ್ಟಿದ್ದರೂ ಸಹ (ಅದು ಸಮ್ಮತಾರ್ಹವಲ್ಲ). ನೀವು ದಾನ ನೀಡುವ ಕರ್ಮವನ್ನು ಕೈಗೊಳ್ಳಬೇಕಾಗಿದೆ ಆದರೆ ಶ‌ಅ್‌ಬಾನ್‍ನ 15ನೇ ರಾತ್ರಿಯನ್ನು ನಿರ್ದಿಷ್ಟಪಡಿಸದೆ (ಅಥವಾ) ಯಾವುದೇ ಒಂದು ತಿಂಗಳನ್ನು ನಿರ್ದಿಷ್ಟಪಡಿಸದೇ ಪ್ರತಿವರ್ಷವೂ ಯಾವುದಾದರೊಂದು ತಿಂಗಳಲ್ಲಿ ಈ ರೀತಿ ಈ ದಾನವನ್ನು ನೀಡಿರಿ. ಅದಾಗ್ಯೂ, (ಪುರಾವೆಗಳಿರುವ ಕಾರಣದಿಂದಾಗಿ) ರಮದಾನ್ ತಿಂಗಳಿನಲ್ಲಿ ಇದನ್ನು (ದಾನ) ನೀಡುವುದು ಅತ್ಯುತ್ತಮವಾಗಿದೆ.

ಸರ್ವ ಸಫಲತೆಯೂ ಅಲ್ಲಾಹುವಿನಿಂದಾಗಿದೆ. ಅಲ್ಲಾಹುವಿನ ಸಲಾತ್ ಮತ್ತು ಸಲಾಮ್‌ಗಳು ನಮ್ಮ ಪ್ರವಾದಿ (H) ರವರ ಮೇಲೂ ಅವರ ಕುಟುಂಬದ ಮೇಲೂ ಮತ್ತು ಅವರ ಸಹಾಬಿಗಳ ಮೇಲೂ ಇರಲಿ.

(ಮೂಲ : ಅಲ್-ಬಿದಉ ವಲ್-ಮುಹ್‌ದಸಾತ್ ವಮಾ ಲಾ ಅಸ್ಲ ಲಹು, ಪುಟ 61೦
ಫತಾವಾ ಅಲ್-ಲಜ್‌ನಃ ಅದ್ದಾಇಮಃ ಲಿಲ್-ಬುಹೂಸಿಲ್ ಇಲ್ಮಿಯ್ಯತಿ ವಲ್-ಇಫ್ತಾ, ಫತ್ವಾ ಸಂಖ್ಯೆ : 9760)

ಅನುವಾದ : ಅಬೂ ಹಮ್ಮಾದ್ ಸಲಾಹುದ್ದೀನ್

ಈ ಲೇಖನದ PDF ಪ್ರತಿಯನ್ನು ಇಲ್ಲಿಂದ ಡೌನ್‍ಲೋಡ್ ಮಾಡಿಕೊಳ್ಳಿ