ಪ್ರವಾದಿ ಜನ್ಮದಿನಾಚರಣೆ ಸಮ್ಮತಾರ್ಹವೇ?

ಪ್ರವಾದಿ ಜನ್ಮದಿನಾಚರಣೆ ಸಮ್ಮತಾರ್ಹವೇ?

-ಅಶ್ಶೈಖ್ ಅಬ್ದುಲ್ ಅಝೀಝ್ ಬಿನ್ ಬಾಝ್ (V) ಹಿರಿಯ ವಿದ್ವಾಂಸರು, ಸೌದಿ ಅರೇಬಿಯಾ.

ಈ ಲೇಖನದ PDF ಪ್ರತಿಯನ್ನು ಈ ಕೆಳಗಿನಿಂದ ಡೌನ್‍ಲೋಡ್ ಮಾಡಿಕೊಳ್ಳಿರಿ. 

w

ಸರ್ವ ಸ್ತುತಿಗಳೂ ಅಲ್ಲಾಹುವಿಗಾಗಿದೆ, ಅಲ್ಲಾಹುವಿನ ಸಲಾತ್‍ಗಳು ಅವನ ಸಂದೇಶವಾಹಕರ ಮೇಲೂ, ಅವರ ಕುಟುಂಬದ ಮೇಲೂ, ಅವರ ಸಹಚರರ (ಸಹಾಬಿಗಳ) ಮೇಲೂ ಹಾಗೂ ಅವರ ಮಾರ್ಗದರ್ಶನವನ್ನು ಅನುಸರಿಸಿದವರ ಮೇಲೂ ಇರಲಿ. ಮುಂದುವರಿದು :

ರಸೂಲ್ (H) ರವರ ಜನ್ಮದಿನ (ಮಿಲಾದುನ್ನಬಿ) ಆಚರಿಸುವುದಾಗಲೀ ಅಥವಾ ಇನ್ನಿತರ ಯಾರದೇ ಜನ್ಮದಿನ ಆಚರಿಸುವುದಾಗಲೀ ಸಮ್ಮತಾರ್ಹವಲ್ಲ. ಏಕೆಂದರೆ ಅದು ದೀನಿಗೆ (ಇಸ್ಲಾಮ್ ಧರ್ಮಕ್ಕೆ) ನವೀನವಾಗಿ ಕಲ್ಪಿಸಲಾದ ಬಿದ್ಅತ್‍ನ [1] (ಅರ್ಥಾತ್ ನವೀನಾಚಾರದ) ಪೈಕಿ ಸೇರಿದ ಕಾರ್ಯವಾಗಿದೆ. ಯಾಕೆಂದರೆ ಅಲ್ಲಾಹುವಿನ ರಸೂಲ್ (H) ರವರಾಗಲೀ ಸನ್ಮಾರ್ಗಿಗಳಾದ ಖಲೀಫರುಗಳಾಗಲೀ (ಅಲ್-ಖುಲಫಾಉರ್ರಾಶಿದೂನ್‍ಗಳಾಗಲೀ), ಸಹಚರರಾಗಲೀ (ಸಹಾಬಿಗಳಾಗಲೀ), ಅಥವಾ ಅತ್ಯುತ್ತಮ ತಲೆಮಾರುಗಳಲ್ಲಿ ಒಳಿತು ಕಾರ್ಯಗಳೊಂದಿಗೆ ಅವರನ್ನು ಅನುಸರಿಸಿದವರಾರೂ ಈ ದಿನವನ್ನು (ಮೀಲಾದುನ್ನಬಿಯನ್ನು) ಆಚರಿಸಲಿಲ್ಲ – ಸುನ್ನತ್‍ನ ಕುರಿತು (ಪ್ರವಾದಿಯವರ ಮಾರ್ಗದರ್ಶನದ ಕುರಿತು) ಅತ್ಯಂತ ಹೆಚ್ಚು ಇಲ್ಮ್ ಹೊಂದಿದ್ದ (ಜ್ಞಾನವಿದ್ದ) ಜನರು ಅವರಾಗಿದ್ದರು ಹಾಗೂ ತಮ್ಮ ನಂತರ ಬಂದ ಜನರಿಗಿಂತಲೂ ಹೆಚ್ಚು ಅವರು ಅಲ್ಲಾಹುವಿನ ರಸೂಲ್ (H) ರವರಿಗೆ ಪರಿಪೂರ್ಣವಾಗಿ ಪ್ರೀತಿಯನ್ನು ತೋರಿದವರೂ ಹಾಗೂ ಅವರ ಆಜ್ಞೆ ನಿಯಮಗಳನ್ನು ಪಾಲಿಸಿ ಅನುಸರಿಸಿದವರೂ ಆಗಿದ್ದರು.

ಪ್ರವಾದಿ (H) ರವರಿಂದ ಸಹೀಹ್ಆಗಿ (ಅಧಿಕೃತವಾಗಿ) ವರದಿಯೊಂದು ಸಾಬೀತುಗೊಂಡಿದೆ, ಅವರು (H) ಹೇಳಿದರು :

« مَنْ عَمِلَ عَمَلاً لَيْسَ عَلَيهِ أَمْرُنا فَهُوَ رَدٌّ »

“ನಮ್ಮ ಆಜ್ಞೆಯಿಲ್ಲದ (ಅರ್ಥಾತ್ ಇಸ್ಲಾಮ್‍ನಲ್ಲಿಲ್ಲದ ಯಾವುದೇ ಒಂದು) ಆಚಾರವನ್ನು ಯಾರಾದರೂ ಆಚರಿಸಿದರೆ ಅದು ತಿರಸ್ಕೃತವಾಗಿದೆ.” (ಅಲ್-ಬುಖಾರಿ 2/166, ಮುಸ್ಲಿಮ್ 5/133)


ಇನ್ನೊಂದು ಸಹೀಹ್ಆದ (ಅಧಿಕೃತ) ವರದಿಯಲ್ಲಿ, ಅವರು (H) ಹೇಳಿದರು :

« عَلَيْكُمْ بِسُنَّتِي وَسُنَّةِ الْخُلَفَاءِ الْمَهْدِيِّينَ الرَّاشِدِينَ تَمَسَّكُوا بِهَا وَعَضُّوا عَلَيْهَا بِالنَّوَاجِذِ وَإِيَّاكُمْ وَمُحْدَثَاتِ الأُمُورِ فَإِنَّ كُلَّ مُحْدَثَةٍ بِدْعَةٌ وَكُلَّ بِدْعَةٍ ضَلاَلَةٌ »

“ನನ್ನ ಸುನ್ನತ್ಅನ್ನು (ಮಾರ್ಗದರ್ಶನವನ್ನು) ಮತ್ತು ಸನ್ಮಾರ್ಗಿಗಳಾದ ಖಲೀಫರುಗಳ (ಅಲ್-ಖುಲಫಾಉರ್ರಾಶಿದೂನ್‍ಗಳ) ಸುನ್ನತ್ಅನ್ನು ಬಿಗಿಯಾಗಿ ಹಿಡಿದುಕೊಳ್ಳಿರಿ, ಅದಕ್ಕೆ ಧೃಡವಾಗಿ ಹೊಂದಿಕೊಂಡಿರಿ, ಮತ್ತು ಹೊಸದಾಗಿ ಸೇರಿಸಲ್ಪಟ್ಟ ಕಾರ್ಯಗಳ ಕುರಿತು ಜಾಗರೂಕರಾಗಿರಿ, ಹೊಸದಾಗಿ ಸೇರಿಸಲ್ಪಟ್ಟ ಕಾರ್ಯಗಳೆಲ್ಲವೂ ಬಿದ್ಅತ್‍ಗಳಾಗಿವೆ (ನವೀನಾಚಾರಗಳಾಗಿವೆ), ಬಿದ್ಅತ್‍ಗಳೆಲ್ಲವೂ ಪಥಭ್ರಷ್ಟತೆಯಾಗಿದೆ. ” (ಅಬೂ ದಾವೂದ್ : 4607, ಅಹ್ಮದ್ 4/126)


ಈ ಎರಡು ವರದಿಗಳಲ್ಲಿ ದೀನ್‍ನಲ್ಲಿರುವ ಬಿದ್ಅತ್‍ಗಳ ವಿರುದ್ಧ ಹಾಗೂ ಅದರಂತೆ ಆಚಾರ ಮತ್ತು ಕರ್ಮವನ್ನು ಮಾಡುವುದರ ವಿರುದ್ಧ ಪ್ರಬಲವಾದ ಎಚ್ಚರಿಕೆಯು ಒಳಗೊಂಡಿದೆ.

ಅಲ್ಲಾಹು (E) ತನ್ನ ಸುಸ್ಪಷ್ಟ ಗ್ರಂಥದಲ್ಲಿ ಹೇಳಿರುವನು :

﴿وَمَا آتَاكُمُ الرَّسُولُ فَخُذُوهُ وَمَا نَهَاكُمْ عَنْهُ فَانتَهُوا﴾

“ಏನನ್ನು ಸಂದೇಶವಾಹಕರು ನಿಮಗೆ ನೀಡುತ್ತಾರೋ ಅದನ್ನು ಸ್ವೀಕರಿಸಿರಿ (ಅದನ್ನು ಬಿಗಿಯಾಗಿ ಹಿಡಿದುಕೊಳ್ಳಿರಿ). ಯಾವುದರಿಂದ ಅವರು ನಿಮ್ಮನ್ನು ತಡೆಯುತ್ತಾರೋ ಅದರಿಂದ ದೂರವಿರಿ.” (ಸೂರಃ ಅಲ್-ಹದೀದ್ 59 : 7)


ಅಲ್ಲಾಹು (E) ಹೇಳಿದನು :

﴿فَلْيَحْذَرِ الَّذِينَ يُخَالِفُونَ عَنْ أَمْرِهِ أَن تُصِيبَهُمْ فِتْنَةٌ أَوْ يُصِيبَهُمْ عَذَابٌ أَلِيمٌ ۝

“ಪ್ರವಾದಿಯವರ ಆಜ್ಞೆಗೆ ವಿರೋಧವಾಗಿ ಸಾಗುವವರು ತಮಗೇನಾದರೂ ಫಿತ್ನಃ (ಶಿರ್ಕ್, ಕುಫ್ರ್ ಇನ್ನಿತರ ಕೆಡುಕುಗಳು) ಬಾಧಿಸುವುದರ ಬಗ್ಗೆ ಅಥವಾ ವೇದನಾಯುಕ್ತ ಶಿಕ್ಷೆ ಬಾಧಿಸುವುದರ ಬಗ್ಗೆ ಭಯಪಡಲಿ.” (ಸೂರಃ ಅನ್ನೂರ್ 24 : 63)


ಅಲ್ಲಾಹು (E) ಹೇಳಿದನು :

﴿لَّقَدْ كَانَ لَكُمْ فِي رَسُولِ اللَّـهِ أُسْوَةٌ حَسَنَةٌ لِّمَن كَانَ يَرْجُو اللَّـهَ وَالْيَوْمَ الْآخِرَ وَذَكَرَ اللَّـهَ كَثِيرًا  ۝

“ಖಂಡಿತವಾಗಿಯೂ ನಿಮಗೆ ಅಲ್ಲಾಹುವಿನ ಸಂದೇಶವಾಹಕರಲ್ಲಿ ಅತ್ಯುತ್ತಮ ಮಾದರಿಯಿದೆ. (ನಿಮ್ಮ ಪೈಕಿ) ಯಾರು ಅಲ್ಲಾಹುವಿನ ಮೇಲೆ ಮತ್ತು ಅಂತ್ಯದಿನದ ಮೇಲೆ ನಿರೀಕ್ಷೆಯನ್ನಿಡುತ್ತಾರೋ ಹಾಗೂ ಅಲ್ಲಾಹುವನ್ನು ಅತ್ಯಧಿಕವಾಗಿ ಸ್ಮರಿಸುತ್ತಾರೋ- (ಅವರಿಗೆ).” (ಅಲ್-ಅಹ್‍ಝಾಬ್ 33 : 21)


ಅಲ್ಲಾಹು (E) ಹೇಳಿದನು :

﴿وَالسَّابِقُونَ الْأَوَّلُونَ مِنَ الْمُهَاجِرِينَ وَالْأَنصَارِ وَالَّذِينَ اتَّبَعُوهُم بِإِحْسَانٍ رَّضِيَ اللَّـهُ عَنْهُمْ وَرَضُوا عَنْهُ وَأَعَدَّ لَهُمْ جَنَّاتٍ تَجْرِي تَحْتَهَا الْأَنْهَارُ خَالِدِينَ فِيهَا أَبَدًا ۚ ذَٰلِكَ الْفَوْزُ الْعَظِيمُ ۝

“ಮುಹಾಜಿರ್‌ಗಳ ಮತ್ತು ಅನ್ಸಾರ್‌ಗಳ ಪೈಕಿ ಮೊತ್ತಮೊದಲು ಮುಂದೆ ಬಂದವರು ಮತ್ತು ಒಳಿತಿನ ಕಾರ್ಯಗಳೊಂದಿಗೆ ಅವರನ್ನು (ಸಂಪೂರ್ಣವಾಗಿ) ಅನುಸರಿಸಿದವರು, ಅಲ್ಲಾಹು ಅವರೊಂದಿಗೆ ಸಂತೃಪ್ತನಾಗಿರುವನು, ಮತ್ತು ಅವರು ಅವನೊಂದಿಗೆ (ಅಲ್ಲಾಹುವಿನೊಂದಿಗೆ) ಸಂತೃಪ್ತರಾಗಿರುವರು. ಅವನು ಅವರಿಗಾಗಿ ತಳಭಾಗದಿಂದ ನದಿಗಳು ಹರಿಯುವ ಸ್ವರ್ಗೊದ್ಯಾನಗಳನ್ನು ಸಿದ್ಧಗೊಳಿಸಿಟ್ಟಿರುವನು. ಅದರಲ್ಲಿ ಅವರು ಸದಾಕಾಲ ಶಾಶ್ವತವಾಗಿ ವಾಸಿಸುವರು. ಮಹಾ ವಿಜಯವು ಅದೇ ಆಗಿದೆ.” (ಸೂರಃ ಅತ್ತೌಬಃ 9 : 100)


ಅಲ್ಲಾಹು (E) ಹೇಳಿದನು :

﴿الْيَوْمَ أَكْمَلْتُ لَكُمْ دِينَكُمْ وَأَتْمَمْتُ عَلَيْكُمْ نِعْمَتِي وَرَضِيتُ لَكُمُ الْإِسْلَامَ دِينًا ۚ ﴾

“ಇಂದು ನಾನು ನಿಮಗೆ ನಿಮ್ಮ ಧರ್ಮವನ್ನು ಪೂರ್ಣಗೊಳಿಸಿರುವೆನು, ಹಾಗೂ ನಿಮ್ಮ ಮೇಲೆ ನನ್ನ ಅನುಗ್ರಹವನ್ನು ಪೂರ್ತೀಕರಿಸಿರುವೆನು ಮತ್ತು ಇಸ್ಲಾಮನ್ನು ನಿಮ್ಮ ಧರ್ಮವಾಗಿ ತೃಪ್ತಿಪಟ್ಟಿರುವೆನು.” (ಸೂರಃ ಅಲ್-ಮಾಇದಃ 5 : 3)


ಈ ಅರ್ಥವನ್ನು ಹೊಂದಿರುವ ಸೂಕ್ತಿಗಳು ಬಹಳಷ್ಟಿವೆ. ಈ ಜನ್ಮದಿನಾಚರಣೆಗಳಂತಹ ನೂತನಾಚಾರಗಳು ಸೂಚಿಸುವುದೇನೆಂದರೆ : ಅಲ್ಲಾಹು (E) ಈ ಉಮ್ಮತ್‍ಗೆ (ಸಮುದಾಯಕ್ಕೆ) ದೀನನ್ನು ಪೂರ್ತೀಕರಿಸಿಲ್ಲ ಮತ್ತು ಪರಿಪೂರ್ಣಗೊಳಿಸಿಲ್ಲ, ಹಾಗೂ ಅವುಗಳು (ಇಂತಹ ನವೀನಾಚಾರಗಳು) ತಮ್ಮನ್ನು ಅಲ್ಲಾಹುವಿನೆಡೆಗೆ ಹತ್ತಿರಗೊಳಿಸುವುದೆಂದು ವಾದಿಸುತ್ತಾ ತಮಗೆ ಯಾವುದೇ ಅನುಮತಿಯಿಲ್ಲದ ಅಲ್ಲಾಹುವಿನ ಧರ್ಮದಲ್ಲಿ ನವೀನಾಚಾರವನ್ನು ಕಲ್ಪಿಸಿದವರ (ಅರ್ಥಾತ್ ನೂತನಾಚಾರಗಳನ್ನು ನಿರ್ಮಿಸಿದ ನೂತನವಾದಿಗಳ) ಆಗಮನವಾಗುವವರೆಗೂ ತನ್ನ ಉಮ್ಮತ್‍ಗೆ ಆಚಾರ ಕರ್ಮಗಳನ್ನು ನಿರ್ವಹಿಸಲು ಅಗತ್ಯವಾಗಿರುವುದು ಯಾವುದೆಂದು ರಸೂಲ್ (H) ತಿಳಿಸಿಕೊಡಲಿಲ್ಲ ಎಂದಾಗಿದೆ!!

ಇದು – ನಿಸ್ಸಂದೇಹವಾಗಿಯೂ ಮಹಾ ಅಪಾಯವಾಗಿದೆ ಮತ್ತು ಮಹೋನ್ನತನಾದ ಅಲ್ಲಾಹುವನ್ನು ಹಾಗೂ ಅವನ ರಸೂಲ್ (H) ರವರನ್ನು ನಿಂದನೆ ಹಾಗೂ ಆಕ್ಷೇಪಣೆ ಮಾಡುವುದಕ್ಕೆ ಸಮವಾಗಿದೆ. ಖಂಡಿತವಾಗಿಯೂ ಅಲ್ಲಾಹು (E) ಈ ದೀನನ್ನು ತನ್ನ ದಾಸರಿಗೆ ಪರಿಪೂರ್ಣಗೊಳಿಸಿರುವನು, ಹಾಗೂ ಆತನ ಅನುಗ್ರಹವನ್ನು ಅವರ ಮೇಲೆ ಪೂರ್ತೀಕರಿಸಿರುವನು.

ರಸೂಲ್ (H) ಸುಸ್ಪಷ್ಟವಾಗಿ ಸಂದೇಶವನ್ನು ತಲುಪಿಸಿಕೊಟ್ಟಿರುವರು. ಸ್ವರ್ಗದೆಡೆಗೆ ತಲುಪುವ ಯಾವುದೇ ಮಾರ್ಗವನ್ನಾಗಲೀ, ಅಥವಾ ನರಕಾಗ್ನಿಯಿಂದ ಓರ್ವನನ್ನು ದೂರೀಕರಿಸುವ ಯಾವುದೇ ಮಾರ್ಗನ್ನಾಗಲೀ -ಅವರು ತಮ್ಮ ಉಮ್ಮತ್‍ಗೆ (ಸಮುದಾಯಕ್ಕೆ) ಸ್ಪಷ್ಟವಾಗಿ ವಿವರಿಸಿಕೊಡದೆ ಬಾಕಿಯುಳಿಸಿಲ್ಲ.

ಸಹೀಹ್ಆದ (ಅಧಿಕೃತವಾದ) ಹದೀಸ್‍ನಲ್ಲಿದು ಸಾಬೀತುಗೊಂಡಿದೆ, ಅಬ್ದುಲ್ಲಾಹ್ ಬಿನ್ ಅಮ್ರ್ (L) ರಿಂದ ವರದಿ, ಪ್ರವಾದಿ (H) ರವರು ಹೇಳಿದರು :

« مَا بَعَثَ اللهُ مِنْ نَبِيٌّ قَبْلِي إِلَّا كَانَ حَقًّا عَلَيْهِ أَنْ يَدُلَّ أُمَّتَهُ عَلَى خَيْرِ مَا يَعْلَمُهُ لَهُمْ ، وَيُنْذِرَهُمْ شَرَّ مَا يَعْلَمُهُ لَهُمْ »

“ತಮಗೆ ತಿಳಿದಿರುವ ಒಳಿತನ್ನು ತಮ್ಮ ಉಮ್ಮತ್‍ಗೆ ತಿಳಿಸಿಕೊಡುವುದು ಹಾಗೂ ತಮಗೆ ತಿಳಿದಿರುವ ಕೆಡುಕಿನಿಂದ ಅವರನ್ನು ಎಚ್ಚರಿಸುವುದು ತಮ್ಮ ಮೇಲಿರುವ ಒಂದು ಹೊಣೆಗಾರಿಕೆಯಾಗಿಯೇ ಹೊರತು ಅಲ್ಲಾಹು ಯಾವುದೇ ಪ್ರವಾದಿಯನ್ನು ನಿಯೋಗಿಸಿಲ್ಲ.” (ಸಹೀಹ್ ಮುಸ್ಲಿಮ್ : 1844)


ನಿಸ್ಸಂದೇಹವಾಗಿಯೂ ನಮ್ಮ ಪ್ರವಾದಿ (H) ರವರು ಪ್ರವಾದಿಗಳ ಪೈಕಿ ಅತ್ಯುತ್ತಮರೂ, ಕೊನೆಯ ಪ್ರವಾದಿಯೂ ಹಾಗೂ (ಇಸ್ಲಾಮಿನ ಸಂದೇಶಗಳನ್ನು) ತಲುಪಿಸುವ ಮತ್ತು ಉಪದೇಶಿಸುವ ಹೊಣೆಗಾರಿಕೆಯನ್ನು ನಿಭಾಯಿಸುವಲ್ಲಿ ಅತ್ಯಂತ ಪರಿಪೂರ್ಣತೆಯನ್ನು ಹೊಂದಿದ್ದರು ಎಂಬುದು ತಿಳಿದಿರುವ ವಿಚಾರವಾಗಿದೆ.

ಹಾಗಾಗಿ ಒಂದು ವೇಳೆ ಅವರ ಮೌಲಿದ್ಅನ್ನು (ಜನ್ಮದಿನವನ್ನು) ಆಚರಿಸುವುದು ಅಲ್ಲಾಹು (E) ಸಂತೃಪ್ತಿ ಹೊಂದಿದ ದೀನ್‍ನ ಅಂಗವಾಗಿರುತ್ತಿದ್ದರೆ, ರಸೂಲ್ (H) ರವರು ಖಂಡಿತವಾಗಿಯೂ ತಮ್ಮ ಉಮ್ಮತ್‍ಗೆ ಅದನ್ನು ವಿವರಿಸಿಕೊಡುತ್ತಿದ್ದರು, ಅಥವಾ ತನ್ನ ಜೀವಿತಾವಧಿಯಲ್ಲಿ ಅದನ್ನವರು ಸ್ವತಃ ಆಚರಿಸುತ್ತಿದ್ದರು, ಅಥವಾ ಅವರ ಅನುಚರರು (ಸಹಾಬಿಗಳು) ಅದನ್ನು ಆಚರಿಸುತ್ತಿದ್ದರು. ಅದಾಗ್ಯೂ, ಈ ರೀತಿ ಯಾವುದೂ ಸಂಭವಿಸದಿರುವ ಕಾರಣದಿಂದಾಗಿ (ನಮಗೆ) ತಿಳಿದುಬರುವುದೇನೆಂದರೆ, ಅಂತಹ (ಜನ್ಮದಿನಾಚರಣೆಗಳಂತಹ) ಯಾವೊಂದು ಆಚರಣೆಯು ಇಸ್ಲಾಮಿನಲ್ಲಿಲ್ಲ. ಬದಲಾಗಿ, ಹಿಂದಿನ (ಹದೀಸ್) ವರದಿಗಳಲ್ಲಿ ಉಲ್ಲೇಖಿಸಿದಂತೆ- ಇದು ರಸೂಲ್ (H) ರವರು ತಮ್ಮ ಉಮ್ಮತ್ಅನ್ನು ಎಚ್ಚರಿಸಿದ ನವೀನಚಾರಗಳ (ಬಿದ್ಅತ್‍ಗಳ) ಪೈಕಿ ಸೇರಿದ ನವೀನಾಚಾರವಾಗಿದೆ.

ಹಿಂದಿನ (ಹದೀಸ್) ವರದಿಗಳಿಗೆ ಸಮಾನವಾದ ಅರ್ಥವನ್ನು ಹೊಂದಿರುವ ಇತರ ಹದೀಸ್‍ಗಳು ವರದಿಯಾಗಿದೆ, ಉದಾಹರಣೆಗೆ – ಜುಮುಅಃ ಖುತ್‍ಬಾದಲ್ಲಿ ಅವರ (ಪ್ರವಾದಿ H ರವರ) ಹೇಳಿಕೆ :

« أَمَّا بَعْدُ فَإِنَّ خَيْرَ الْحَدِيثِ كِتَابُ اللَّهِ وَخَيْرُ الْهُدَى هُدَى مُحَمَّدٍ وَشَرُّ الأُمُورِ مُحْدَثَاتُهَا وَكُلُّ بِدْعَةٍ ضَلاَلَةٌ »

“ಖಂಡಿತವಾಗಿಯೂ, (ವಚನಗಳಲ್ಲಿ) ಅತ್ಯುತ್ತಮ ವಚನವು ಅಲ್ಲಾಹುವಿನ ಗ್ರಂಥವಾಗಿದೆ ಮತ್ತು (ಚರ್ಯೆಗಳಲ್ಲಿ) ಅತ್ಯುತ್ತಮ ಚರ್ಯೆಯು (ಮಾರ್ಗದರ್ಶನ ಹಾಗೂ ಉದಾಹರಣೆಯು) ಪ್ರವಾದಿ (H) ರವರ ಚರ್ಯೆಯಾಗಿದೆ. (ಕಾರ್ಯಗಳಲ್ಲಿ) ಅತ್ಯಂತ ಹೀನವಾದುದು ಹೊಸದಾಗಿ ಸೇರಿಸಲ್ಪಟ್ಟ ಕಾರ್ಯಗಳಾಗಿವೆ, ಹೊಸದಾಗಿ ಸೇರಿಸಲ್ಪಟ್ಟ ಕಾರ್ಯಗಳೆಲ್ಲವೂ ನವೀನಾಚಾರವಾಗಿದೆ, ನವೀನಾಚಾರಗಳೆಲ್ಲವೂ ಪಥಭ್ರಷ್ಟತೆಯಾಗಿದೆ.” (ಮುಸ್ಲಿಮ್ : 867)


ಈ ಕಾರಣದಿಂದಾಗಿ, ಮೇಲೆ ತಿಳಿಸಲಾದ ಮತ್ತು ಅವುಗಳ ಹೊರತು ಇನ್ನಿತರ (ಕುರ್‌ಆನ್ ಮತ್ತು ಸುನ್ನತ್‍ನ) ಪುರಾವೆಗಳನ್ನು (ಪರಿಗಣಿಸಿ ಆ ಪ್ರಕಾರ) ಕಾರ್ಯರೂಪಕ್ಕೆ ತರುತ್ತಾ, ಉಲಮಾಗಳ ಪೈಕಿ ಒಂದು ವಿಭಾಗವು ಮೌಲಿದ್ ಆಚರಣೆಯನ್ನು ತಿರಸ್ಕರಿಸುವ ಮೂಲಕ ಮತ್ತು ಅದರ ವಿರುದ್ಧ ಎಚ್ಚರಿಕೆಯನ್ನು ನೀಡಿ ಸ್ಪಷ್ಟಪಡಿಸಿರುವರು. ಆದಾಗ್ಯೂ, ತದನಂತರ ಕಾಲದಲ್ಲಿ ಬಂದ ಕೆಲವರು ವಿರುದ್ಧವಾದ ಅಭಿಪ್ರಾಯವನ್ನು ತಾಳಿದರು, ಹಾಗಾಗಿ ಅವರು ಅವುಗಳಲ್ಲಿ (ಆ ಆಚರಣೆಗಳಲ್ಲಿ) ಅಲ್ಲಾಹುವಿನ ರಸೂಲ್ (H) ರವರ ಕುರಿತು (ಇಸ್ಲಾಮ್ ಕಲಿಸಿಕೊಡದ ರೀತಿಯಲ್ಲಿ) ಅತಿರೇಕವಾದ ನಿಲುವನ್ನು ತಾಳುವುದು, ಪುರುಷ ಮತ್ತು ಸ್ತ್ರೀಯರ ಮುಕ್ತ ಬೆರೆಯುವಿಕೆ, ಸಂಗೀತ ವಾದ್ಯಗಳನ್ನು ನುಡಿಸುವುದು ಮತ್ತು ಹಾಡುವುದು ಹಾಗೂ ಅಪ್ಪಟವಾದ ಶರೀಅತ್‍ನಲ್ಲಿ (ಇಸ್ಲಾಮೀ ಕಾನೂನಿನಲ್ಲಿ) ತಿರಸ್ಕೃತವಾದ (ಅರ್ಥಾತ್ ನಿಷಿದ್ಧವಾದ) ಇತರ ಕಾರ್ಯಗಳನ್ನು ನಿರ್ವಹಿಸುವುದು – ಇಂತಹ ಯಾವುದೇ ಪಾಪಕೃತ್ಯಗಳು ಹಾಗೂ ದುರಾಚಾರಗಳು ಅದರಲ್ಲಿ ಒಳಗೊಳ್ಳದಿದ್ದರೆ ಅದಕ್ಕೆ ಅವರು (ತದನಂತರ ಬಂದ ಕೆಲವೊಂದು ವಿದ್ವಾಂಸರು) ಅನುಮತಿಯನ್ನು ನೀಡಿರುವರು ಮತ್ತು ಅದನ್ನವರು ಬಿದಅ್ ಅಲ್-ಹಸನಃ (ಉತ್ತಮ ಧಾರ್ಮಿಕ ನವೀನಾಚಾರದ) ಪೈಕಿ ಸೇರಿದ ಕಾರ್ಯಗಳೆಂದು ಪರಿಗಣಿಸಿರುವರು.

ಆದರೆ ಇಸ್ಲಾಮಿನ ಶರೀಅತ್‍ನ ನಿಯಮವೇನೆಂದರೆ : ಜನರು ಯಾವ ವಿಷಯದಲ್ಲಿ ಪರಸ್ಪರ ಭಿನ್ನಾಭಿಪ್ರಾಯ ತಾಳುವರೋ (ಅದನ್ನು) ಅಲ್ಲಾಹುವಿನ ಗ್ರಂಥದೆಡೆಗೂ ಹಾಗೂ ಅವನ ರಸೂಲ್ಆದ ಮುಹಮ್ಮದ್ (H) ರವರ ಸುನ್ನತ್‍ನೆಡೆಗೂ ಮರಳಿಸುವುದಾಗಿದೆ. ಅಲ್ಲಾಹು (E) ಹೇಳಿದಂತೆ :

﴿يَا أَيُّهَا الَّذِينَ آمَنُوا أَطِيعُوا اللَّـهَ وَأَطِيعُوا الرَّسُولَ وَأُولِي الْأَمْرِ مِنكُمْ ۖ فَإِن تَنَازَعْتُمْ فِي شَيْءٍ فَرُدُّوهُ إِلَى اللَّـهِ وَالرَّسُولِ إِن كُنتُمْ تُؤْمِنُونَ بِاللَّـهِ وَالْيَوْمِ الْآخِرِ ۚ ذَٰلِكَ خَيْرٌ وَأَحْسَنُ تَأْوِيلًا ۝

“ಓ ನೈಜವಿಶ್ವಾಸಿಗಳೇ! ಅಲ್ಲಾಹುವನ್ನು ಅನುಸರಿಸಿರಿ ಮತ್ತು ಸಂದೇಶವಾಹಕರನ್ನು ಅನುಸರಿಸಿರಿ ಹಾಗೂ ನಿಮ್ಮ ಪೈಕಿಯಿರುವ ‘ಉಲುಲ್ ಅಮ್ರ್‌ರನ್ನು’ (ವಿದ್ವಾಂಸರು ಹಾಗೂ ಆಡಳಿತಗಾರರನ್ನು) ಅನುಸರಿಸಿರಿ. ನೀವು ಅಲ್ಲಾಹುವಿನಲ್ಲಿ ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿಡುವವರಾಗಿದ್ದರೆ, ನಿಮ್ಮ ನಡುವೆ ಯಾವುದೇ ವಿಷಯದಲ್ಲಾದರೂ ಭಿನ್ನಾಭಿಪ್ರಾಯ ಉಂಟಾದರೆ ಅದನ್ನು (ತೀರ್ಪಿಗಾಗಿ) ಅಲ್ಲಾಹುವಿನೆಡೆಗೂ ಮತ್ತು ಅವನ ರಸೂಲ್‍ರವರೆಡೆಗೂ ಮರಳಿಸಿರಿ. ಅದು ಅಂತಿಮ ನಿರ್ಣಯಕ್ಕೆ ಉತ್ತಮವೂ ಯೋಗ್ಯವೂ ಆಗಿದೆ.” (ಸೂರಃ ಅನ್ನಿಸಾಅ್ : 4 : 59)


ಅಲ್ಲಾಹು (E) ಹೇಳಿದನು :

﴿وَمَا اخْتَلَفْتُمْ فِيهِ مِن شَيْءٍ فَحُكْمُهُ إِلَى اللَّـهِ ۚ ﴾

“ನೀವು ಯಾವುದರಲ್ಲೆಲ್ಲಾ ಭಿನ್ನಾರಾಗುತ್ತೀರೋ, (ಅದರ) ನಿರ್ಣಯವಿರುವುದು (ತೀರ್ಪಿಗಾಗಿ ಮರಳಬೇಕಾಗಿರುವುದು) ಅಲ್ಲಾಹುವಿನ (ಕುರ್‌ಆನ್ ಮತ್ತು ಅವನ ಪ್ರವಾದಿಯ ಸುನ್ನತ್ತಿನ) ಬಳಿಯಾಗಿದೆ.” (ಸೂರಃ ಅಶ್ಶೂರಾ 42 : 10)


ಹಾಗಾಗಿ ಈ ಜನ್ಮದಿನಾಚರಣೆಗೆ ಸಂಬಂಧಿಸಿದ ವಿಷಯವನ್ನು ಅಲ್ಲಾಹುವಿನ ಗ್ರಂಥದೆಡೆಗೆ ನಾವು ಮರಳಿಸಿರುವುದಾದರೆ ಅದು (ಕುರ್‌ಆನ್) ನಮಗೆ ಅಲ್ಲಾಹುವಿನ ರಸೂಲ್ (H) ಯಾವುದನ್ನು ತಂದಿರುವರೋ ಅದನ್ನು ಅನುಸರಿಸಲು ಆಜ್ಞಾಪಿಸುತ್ತಿರುವುದನ್ನೂ ಹಾಗೂ ಯಾವುದನ್ನು ವಿರೋಧಿಸಿರುವರೋ ಅದರ ವಿರುದ್ಧ ನಮ್ಮನ್ನು ಎಚ್ಚರಿಸುತ್ತಿರುವುದನ್ನೂ ನಮಗೆ ಕಾಣಬಹುದಾಗಿದೆ.
ಅದೂ ಅಲ್ಲದೆ, ಅಲ್ಲಾಹು ಈ ಉಮ್ಮತ್‍ಗೆ ಅವರ ಧರ್ಮವನ್ನು (ಇಸ್ಲಾಮನ್ನು) ಪರಿಪೂರ್ಣಗೊಳಿಸಿರುವನು ಎಂದು ಕುರ್‌ಆನ್ ನಮಗೆ ತಿಳಿಸುತ್ತದೆ.

ಆದ್ದರಿಂದ ಯಾವುದನ್ನು ರಸೂಲ್ (H) ತಂದಿರುವರೋ ಅದರಲ್ಲಿ (ಅರ್ಥಾತ್ ಇಸ್ಲಾಮಿನಲ್ಲಿ) ಈ ಆಚರಣೆಗಳಿಲ್ಲ. ಹಾಗಾಗಿ ಅದು ಅಲ್ಲಾಹು ನಮಗೆ ಪರಿಪೂರ್ಣಗೊಳಿಸಿರುವ ಹಾಗೂ ರಸೂಲ್ (H) ರವರನ್ನು ಅನುಸರಿಸಲು ಆಜ್ಞಾಪಿಸಿರುವ ಅವನ ಧರ್ಮದ (ಇಸ್ಲಾಮಿನ) ಅಂಗವಾಗಿರಲು ಸಾಧ್ಯವಿಲ್ಲ.

ಅಲ್ಲದೆ ನಾವು ರಸೂಲ್ (H) ರವರ ಸುನ್ನತ್‍ನೆಡೆಗೆ ಮರಳಿದಾಗ, ಅವರು (H) ಸ್ವತಃ ತಮ್ಮ ಜನ್ಮದಿನ ಆಚರಿಸಿರುವುದಾಗಲೀ, ಅಥವಾ ಅದನ್ನು ಆಚರಿಸುವಂತೆ ಆಜ್ಞಾಪಿಸಿರುವುದಾಗಲೀ, ಅವರ ಸಹಚರರಾಗಲೀ (ಸಹಾಬಿಗಳಾಗಲೀ) ಅದನ್ನು ಆಚರಿಸಿರುವುದನ್ನು ನಮಗೆ ಕಾಣಲು ಸಾಧ್ಯವಿಲ್ಲ. ಆದ್ದರಿಂದ ನಾವು ತಿಳಿದುಕೊಳ್ಳುವುದೇನೆಂದರೆ ಇದ್ಯಾವುದೂ ಇಸ್ಲಾಮಿಗೆ ಸೇರಿದ ಆಚರಣೆಗಳಲ್ಲ, ಬದಲಾಗಿ ಅದು ನವೀನಾಚಾರಗಳ (ಬಿದಅ್‍ಗಳ) ಪೈಕಿ ಹೊಸದಾಗಿ ಸೇರಿಸಲ್ಪಟ್ಟ ಆಚರಣೆಯಾಗಿದೆ, ಹಾಗೂ ತಮ್ಮ ಹಬ್ಬ ಆಚರಣೆಗಳಲ್ಲಿ ಅಹ್ಲುಲ್ ಕಿತಾಬ್‍ಗಳಾದ ಯಹೂದಿ ಹಾಗೂ ನಸಾರಾಗಳ ಅನುಕರಣೆ ಮಾಡುವ ಪೈಕಿ ಸೇರಿದ ಕಾರ್ಯವಾಗಿದೆ.

ಖಂಡಿತವಾಗಿಯೂ ಜನ್ಮದಿನಾಚರಣೆಯು (ಇಸ್ಲಾಮ್) ಧರ್ಮದ ಅಂಗವಲ್ಲ. ಬದಲಾಗಿ ಅದು – ಅಲ್ಲಾಹು ಮತ್ತು ಅವನ ರಸೂಲ್ (H) ತೊರೆಯಲು ಹಾಗೂ ಎಚ್ಚರಿಕೆವಹಿಸಲು ಆಜ್ಞಾಪಿಸಿದ-(ಇಸ್ಲಾಮಿಗೆ) ಸೇರಿಸಲ್ಪಟ್ಟಿರುವ ನೂತನಾಚಾರಗಳ (ಬಿದಅ್‍ಗಳ) ಪೈಕಿ ಸೇರಿದ ಆಚರಣೆಯಾಗಿದೆ ಎಂಬುದು ಸ್ವಲ್ಪವಾದರೂ ಪರಿಜ್ಞಾನ ಹೊಂದಿರುವ ಮತ್ತು ಸತ್ಯ ಹಾಗೂ ನ್ಯಾಯ ನೀತಿಯನ್ನು ಬಯಸುವ ಪ್ರತಿಯೊಬ್ಬರಿಗೂ ಇದು ಸ್ಪಷ್ಟವಾಗುವುದು.

ಆದುದರಿಂದ, ಜಗತ್ತಿನ ವಿವಿಧ ದಿಕ್ಕುಗಳಲ್ಲಿ ಇದನ್ನು ಆಚರಿಸುವ ಜನರ ಬೃಹತ್ ಸಂಖ್ಯೆಯಿಂದಾಗಿ, ವಿವೇಕವುಳ್ಳ ವ್ಯಕ್ತಿಯು ವಂಚನೆಗೊಳಗಾಗಬಾರದು, ಏಕೆಂದರೆ ಸತ್ಯವು ಅರಿಯಲ್ಪಡುವುದು ಆಚಾರ ಕರ್ಮಗಳನ್ನು ನಿರ್ವಹಿಸುವವರ ಸಂಖ್ಯಾಬಲದಿಂದಲ್ಲ, ಬದಲಾಗಿ ಅದು ಅರಿಯಲ್ಪಡುವುದು ಶರೀಅತ್‍ನ (ಅರ್ಥಾತ್ ಕುರ್‌ಆನ್ ಮತ್ತು ಸುನ್ನತ್‍ನ) ಪುರಾವೆಗಳಿಂದಾಗಿದೆ.

ಯಹೂದಿ ಮತ್ತು ನಸಾರಗಳ ಕುರಿತು ಅಲ್ಲಾಹು (E) ಹೇಳಿದಂತೆ :

﴿وَقَالُوا لَن يَدْخُلَ الْجَنَّةَ إِلَّا مَن كَانَ هُودًا أَوْ نَصَارَىٰ ۗ تِلْكَ أَمَانِيُّهُمْ ۗ قُلْ هَاتُوا بُرْهَانَكُمْ إِن كُنتُمْ صَادِقِينَ ۝

“ಅವರು ಹೇಳುತ್ತಾರೆ : ‘ಅವನು ಯಹೂದಿಯೋ ಅಥವಾ ಕ್ರೈಸ್ತನೋ ಆಗಿಯೇ ಹೊರತು ಯಾರೊಬ್ಬನೂ ಸ್ವರ್ಗ ಪ್ರವೇಶಿಸಲಾರನು!’ ಅದು ಅವರ ವ್ಯರ್ಥ ನಿರೀಕ್ಷೆಗಳಾಗಿವೆ. ಅವರೊಂದಿಗೆ ಹೇಳಿರಿ : ‘ಒಂದು ವೇಳೆ ಖಂಡಿತವಾಗಿಯೂ ನೀವು ಸತ್ಯವಂತರಾಗಿದ್ದಾರೆ ನಿಮ್ಮ ಪುರಾವೆಗಳನ್ನು ತನ್ನಿರಿ.” (ಸೂರಃ ಅಲ್-ಬಕರಃ 2 : 111)


ಅಲ್ಲಾಹು (E) ಹೇಳಿದನು :

﴿وَإِن تُطِعْ أَكْثَرَ مَن فِي الْأَرْضِ يُضِلُّوكَ عَن سَبِيلِ اللَّـهِ ۚ ﴾

“ಒಂದು ವೇಳೆ ತಾವು ಭೂಮಿಯ ಮೇಲಿರುವವರ ಪೈಕಿ ಹೆಚ್ಚಿನವರನ್ನು ಅನುಸರಿಸುವುದಾದರೆ, ಅವರು ತಮ್ಮನ್ನು ಅಲ್ಲಾಹುವಿನ ಮಾರ್ಗದಿಂದ ತಪ್ಪಿಸಿಬಿಡುವರು (ಪಥಭ್ರಷ್ಟಗೊಳಿಸುವರು).” (ಸೂರಃ ಅಲ್-ಅನ್ಆಮ್ 6 : 116)


ಇಂತಹ ಹೆಚ್ಚಿನ ಜನ್ಮದಿನಾಚರಣೆಗಳು ನೂತನಾಚಾರವನ್ನು (ಬಿದ್ಅತ್) ಒಳಗೊಂಡಂತೆ- ಇನ್ನಿತರ ಕೆಡುಕುಗಳನ್ನೂ ಒಳಗೊಳ್ಳುವುದರಿಂದ ಮುಕ್ತವಾಗಿಲ್ಲ. ಉದಾಹರಣೆಗೆ : ಪುರುಷ ಹಾಗೂ ಸ್ತ್ರೀಯರ ಮಧ್ಯೆ ಮುಕ್ತ ಬೆರೆಯುವಿಕೆ, ಹಾಡುವುದು ಮತ್ತು ಸಂಗೀತ ವಾದ್ಯ ನುಡಿಸುವುದು, ಮಾದಕ ಪದಾರ್ಥಗಳನ್ನು ಕುಡಿಯುವುದು ಹಾಗೂ ಸೇದಿಸುವುದು (ಇತ್ಯಾದಿ). ಇಂತಹ ಆಚರಣೆಗಳಲ್ಲಿ ಇವೆಲ್ಲಕ್ಕಿಂತಲೂ ಮಹಾ ಪಾಪವಾದ ದೊಡ್ಡ ಶಿರ್ಕ್ (ಶಿರ್ಕ್ ಅಲ್-ಅಕ್ಬರ್ : ಅಲ್ಲಾಹುವಿನ ಹೊರತು ಅನ್ಯರಿಗೆ ಆರಾಧನೆಯನ್ನು ಅರ್ಪಿಸುವುದು) (ಕೂಡ) ಒಳಗೊಂಡಿದೆ, ಅಲ್ಲಾಹುವಿನ ರಸೂಲ್ (H) ರನ್ನು ಅಥವಾ ಔಲಿಯಾಗಳನ್ನು ಅತಿಶಯಗೊಳಿಸುವುದು, ಅವರೊಂದಿಗೆ ಪ್ರಾರ್ಥಿಸುವುದು, ಅವರ ಸಹಾಯ ಹಾಗೂ ನೆರವು ಯಾಚಿಸುವುದು, ಅಥವಾ ಅವರಿಗೆ ಗೈಬ್‍ನ (ಅಗೋಚರವಾಗಿರುವುದರ) ಜ್ಞಾನವಿದೆ ಎಂದು ವಿಶ್ವಾಸವಿಡುವುದು ಹಾಗೂ ಇಂತಹ ಇನ್ನಿತರ ಕುಫ್ರ್ (ಇಸ್ಲಾಮ್‍ನಿಂದ ಹೊರತಳ್ಳಲ್ಪಡುವ ಸತ್ಯನಿಷೇಧವನ್ನು) ಕೈಗೊಳ್ಳುವುದು (ಇವೆಲ್ಲವೂ ಅದರಲ್ಲಿ ಸೇರಿದೆ).

ಅಲ್ಲಾಹುವಿನ ರಸೂಲ್ (H) ರವರಿಂದ ಇದು ಸಹೀಹ್ಆಗಿ ವರದಿಯಾಗಿದೆ, ಅವರು ಹೇಳಿದರು :

« إِيَّاكُمْ وَالْغُلُوَّ فِي الدِّينِ فَإِنَّمَا أَهْلَكَ مَنْ كَانَ قَبْلَكُمْ الْغُلُوُّ فِي الدِّينِ »

“ಧರ್ಮದಲ್ಲಿ ಅತಿಶಯೋಕ್ತಿಯ ಕುರಿತು ಜಾಗರೂಕರಾಗಿರಿ. ಏಕೆಂದರೆ ಖಂಡಿತವಾಗಿಯೂ ನಿಮಗಿಂತ ಮುಂಚೆ ಬಂದವರು ಧರ್ಮದಲ್ಲಿ ಅವರಿಗಿದ್ದ ಅತಿಶಯೋಕ್ತಿಯ ಕಾರಣದಿಂದಾಗಿ ನಾಶಹೊಂದಿರುವರು.” (ಇಬ್ನ್ ಮಾಜಃ : 3064, ಅಹ್ಮದ್ : 1/215)


ಮತ್ತು ಅವರು (H) ಹೇಳಿರುವರು :

« لاَ تُطْرُونِي كَمَا أَطْرَتِ النَّصَارَى ابْنَ مَرْيَمَ، فَإِنَّمَا أَنَا عَبْدُهُ، فَقُولُوا عَبْدُ اللَّهِ وَرَسُولُه. »

“ನಸಾರಾಗಳು ಮರ್ಯಮ್‍ರ ಪುತ್ರ ಈಸಾರನ್ನು ಮಿತಿಮೀರಿ ಹೊಗಳಿದಂತೆ ನೀವು ನನ್ನನ್ನು ಮಿತಿಮೀರಿ ಹೊಗಳದಿರಿ, ನಾನು ಕೇವಲ ಅಲ್ಲಾಹುವಿನ ಓರ್ವ ದಾಸನಾಗಿರುವೆನು. ಹಾಗಾಗಿ ನನ್ನನ್ನು ಅಲ್ಲಾಹುವಿನ ದಾಸ ಹಾಗೂ ಅವನ ರಸೂಲ್ ಎಂದೇ ಕರೆಯಿರಿ.” (ಅಲ್-ಬುಖಾರಿ : 3445, ಮುಸ್ಲಿಮ್ : 1691)


ಒಂದು ಆಶ್ಚರ್ಯಕರ ಹಾಗೂ ವಿಚಿತ್ರವಾದ ಸಂಗತಿಯೇನೆಂದರೆ, ಈ ಬಿದ್ಅತ್‍ನ ಆಚರಣೆಯಲ್ಲಿ ಪಾಲ್ಗೊಳ್ಳಲು ಹುರುಪನ್ನು ತೋರುವ ಮತ್ತು ಅದಕ್ಕಾಗಿ ಶ್ರಮಿಸುವ, ಹಾಗೂ ಅದನ್ನು ತೀವ್ರವಾಗಿ ಬೆಂಬಲಿಸುವ ಹೆಚ್ಚಿನ ಸಂಖ್ಯೆಯ ಜನರು, ಅಲ್ಲಾಹು ಅವರ ಮೇಲೆ ಕಡ್ಡಾಯಗೊಳಿಸಿದ ಜುಮುಅಃ ಮತ್ತು ಜಮಾತ್‍ನಲ್ಲಿ (ಸಾಮೂಹಿಕ ನಮಾಝಿನಲ್ಲಿ) ಭಾಗಿಯಾಗುವುದರಿಂದ ಹಿಂದೆ ಉಳಿಯುತ್ತಾರೆ. ಹಾಗೂ ಅವುಗಳ ಬಗ್ಗೆ ಕಿಂಚಿತ್ತೂ ಗಮನ ಹರಿಸದೆ ತಾನೊಂದು ಘೋರ ದುಷ್ಕೃತ್ಯವನ್ನು ಎಸಗುತ್ತಿದ್ದೇನೆ ಎಂಬುದನ್ನು ಕೂಡ ಅವರು ಅರಿಯುವುದಿಲ್ಲ..

ನಿಸ್ಸಂದೇಹವಾಗಿಯೂ, ಇವುಗಳೆಲ್ಲವೂ ಅವರ ದುರ್ಬಲ ಈಮಾನ್ (ವಿಶ್ವಾಸ) ಹಾಗೂ ಪರಿಜ್ಞಾನದ ಕೊರತೆ, ಹಾಗೂ ಹಲವು ರೀತಿಯ ಪಾಪಕೃತ್ಯಗಳು ಹಾಗೂ ಕೆಡುಕುಗಳಿಂದ ಅವರ ಹೃದಯಗಳ ಮೇಲೆ ತುಕ್ಕು ವಿಪರೀತವಾಗಿ ಹತ್ತಿಕೊಂಡಿರುವ ಕಾರಣದಿಂದಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ನಮ್ಮನ್ನು ಹಾಗೂ ಸರ್ವ ಮುಸ್ಲಿಮರನ್ನು ಸಂರಕ್ಷಿಸುವಂತೆಯೂ, (ನಮ್ಮೆಲ್ಲರ ಪಾಪಗಳನ್ನು) ಮನ್ನಿಸುವಂತೆಯೂ ನಾವು ಅಲ್ಲಾಹುವಿನಲ್ಲಿ ಬೇಡುತ್ತೇವೆ.

ಅವುಗಳ ಪೈಕಿ ವಿಚಿತ್ರವಾದ ಇನ್ನೊಂದು ಸಂಗತಿಯೇನೆಂದರೆ, ಅವರಲ್ಲಿ ಕೆಲವರು ಅಲ್ಲಾಹುವಿನ ರಸೂಲ್ (H) ರವರು ವಾಸ್ತವವಾಗಿಯೂ ತಮ್ಮ ಜನ್ಮದಿನಾಚರಣೆಯಲ್ಲಿ ಹಾಜರಾಗವರು ಎಂದು ಭಾವಿಸುತ್ತಾರೆ, ಈ ಕಾರಣದಿಂದಾಗಿ ಅದರಲ್ಲಿ ಭಾಗವಹಿಸಿದವರು ಅವರನ್ನು ಸ್ವಾಗತಿಸಲಿಕ್ಕಾಗಿ ನಿಂತುಕೊಳ್ಳುವರು. ಇದು ಅತ್ಯಂತ ಮಹಾ ಸುಳ್ಳಾಗಿದೆ ಮತ್ತು ಅಜ್ಞಾನದ ಪರಮಾವಧಿಯಾಗಿದೆ, ಏಕೆಂದರೆ ರಸೂಲ್ (H) ರವರು ಅಂತ್ಯ ದಿನಕ್ಕಿಂತಲೂ ಮುಂಚಿತವಾಗಿ ತಮ್ಮ ಸಮಾಧಿಯಿಂದ ಹೊರಬರುವುದಿಲ್ಲ, ಅಥವಾ ಯಾರನ್ನೂ ಅವರು ಭೇಟಿಯಾಗುವುದಿಲ್ಲ, ಅಥವಾ ಅವರ ಸಭೆ ಸಮಾರಂಭಗಳಿಗೆ ಅವರು ಹಾಜರಾಗುವುದಿಲ್ಲ. ಬದಲಾಗಿ, ಅಂತ್ಯ ದಿನದ ತನಕವೂ ಅವರು ತಮ್ಮ ಸಮಾಧಿಯಲ್ಲೇ ಉಳಿದುಕೊಂಡಿರುವರು ಹಾಗೂ ಅವರ ರೂಹ್ (ಆತ್ಮವು) ತನ್ನ ರಬ್ಬ್‌ನ ಬಳಿ ಅತ್ಯುನ್ನತ ಸ್ಥಾನದಲ್ಲಿ ನೆಲೆಗೊಂಡಿರುವುದು.

ಅಲ್ಲಾಹು (E) ಹೇಳಿದಂತೆ :

﴿ثُمَّ إِنَّكُم بَعْدَ ذَٰلِكَ لَمَيِّتُونَ ۝ ثُمَّ إِنَّكُمْ يَوْمَ الْقِيَامَةِ تُبْعَثُونَ ﴾

“ನಂತರ ಖಂಡಿತವಾಗಿಯೂ ನೀವು ಮರಣಹೊಂದುವಿರಿ, ಬಳಿಕ ಖಂಡಿತವಾಗಿಯೂ ಪುನರುತ್ಥಾನದ ದಿನದಂದು ನಿಮ್ಮನ್ನು ಪುನಃ ಎಬ್ಬಿಸಲಾಗುವುದು.” (ಸೂರಃ ಅಲ್-ಮುಅ್‍ಮಿನೂನ್ 23 : 15-16)


ಪ್ರವಾದಿ (H) ರವರು ಹೇಳಿದರು :

« أنا سَيِّدُ ولَدِ آدَمَ يَومَ القِيامَةِ، وأَوَّلُ مَن يَنْشَقُّ عنْه القَبْرُ، وأَوَّلُ شافِعٍ وأَوَّلُ مُشَفَّعٍ »

“ಪುನರುತ್ಥಾನದ ದಿನದಂದು ಆದಮ್‍ರ ಮಕ್ಕಳಿಗೆ ನಾನು ನಾಯಕನಾಗಿರುವೆನು, (ಪುನರುತ್ಥಾನದ ದಿನದಂದು) ಖಬ್ರ್ ಯಾರಿಗಾಗಿ ತೆರೆಯಲ್ಪಡುವುದೋ ಅವರ ಪೈಕಿ ನಾನು ಮೊದಲಿಗನೂ, ಮತ್ತು ಮೊಲನೆಯದಾಗಿ ಶಿಫಾರಸು ಮಾಡುವವನೂ, ಹಾಗೂ ಯಾರ ಶಿಫಾರಸುಗಳನ್ನು ಸ್ವೀಕರಿಸಲ್ಪಡುವುದೋ ಅವರಲ್ಲಿ ಮೊದಲಿಗನೂ ಆಗಿರುವೆನು.” (ಸಹೀಹ್ ಮುಸ್ಲಿಮ್ : 2278)


ಪ್ರವಾದಿ (H) ರವರಾಗಲೀ ಅಥವಾ ಮರಣ ಹೊಂದಿದ ಇನ್ನಿತರರು ಯಾರೇ ಆಗಲೀ ಅವರೆಲ್ಲರೂ ತಮ್ಮ ಸಮಾಧಿಯಿಂದ ಹೊರಬರುವುದು ಪುನರುತ್ಥಾನದ ದಿನದಂದು ಮಾತ್ರವಾಗಿದೆ ಎಂಬುದು (ಮೇಲೆ ಉಲ್ಲೇಖಿಸಲಾದ) ಕುರ್‌ಆನ್ ಮತ್ತು ಹದೀಸಿನ ವಚನಗಳೆಲ್ಲವೂ ಸಾಬೀತುಪಡಿಸುತ್ತದೆ.

ಇದು ಮುಸ್ಲಿಮ್ ವಿದ್ವಾಂಸರ ನಡುವೆ ಭಿನ್ನತೆಯಿಲ್ಲದ ಒಮ್ಮತ್ತವಾದ ಅಭಿಪ್ರಾಯವಾಗಿದೆ.

ಹಾಗಾಗಿ, ಇಂತಹ ವಿಷಯಗಳನ್ನು ಸೂಕ್ಷ್ಮವಾಗಿ ಪರಿಗಣಿಸಿಕೊಂಡು, ಜಾಹಿಲ್‍ಗಳು (ಅಜ್ಞಾನಿಗಳು) ಹಾಗೂ ಅವರಂತೆ ಇರುವವರು ಹೊಸದಾಗಿ ಸೇರಿಸಿದ -ಅಲ್ಲಾಹು ಯಾವುದೇ ಪುರಾವೆಗಳನ್ನು ಇಳಿಸಿಕೊಡದ- ಇಂತಹ ನವೀನಾಚಾರಗಳಿಂದ (ಬಿದ್ಅತ್‍ಗಳಿಂದ) ಹಾಗೂ ಅಂಧವಿಶ್ವಾಸಗಳಿಂದ ಪ್ರತಿಯೊಬ್ಬ ಮುಸ್ಲಿಮನು ಜಾಗರೂಕನಾಗಿರಬೇಕು. ಸಹಾಯ ಬೇಡಲಾಗುವವನು ಅಲ್ಲಾಹು ಮಾತ್ರವಾಗಿರುವನು ಹಾಗೂ ಅವನ ಮೇಲೆ ಮಾತ್ರ ಭರವಸೆಯಿಡಲಾಗುವುದು. ಅವನ ಹೊರತು ಯಾವುದೇ ಸಾಮರ್ಥ್ಯವಾಗಲಿ ಅಥವಾ ಯಾವುದೇ ಶಕ್ತಿಯಾಗಲಿ ಇಲ್ಲ.

ಇನ್ನು ಅಲ್ಲಾಹುವಿನ ರಸೂಲ್ (H) ರವರ ಮೇಲೆ ಸಲಾತ್ [2] ಮತ್ತು ಸಲಾಮ್‍ಗಳನ್ನು ಹೇಳುವುದಾದರೆ-ಅದು ಅಲ್ಲಾಹುವಿನೆಡೆಗೆ ಹತ್ತಿರಗೊಳಿಸುವ ಅತ್ಯುತ್ತಮ ಮಾರ್ಗವಾಗಿದೆ ಹಾಗೂ ಸತ್ಕರ್ಮಗಳ ಪೈಕಿ ಸೇರಿದ ಸತ್ಕಾರ್ಯವಾಗಿದೆ.

ಅಲ್ಲಾಹು (E) ಹೇಳಿದನು :

﴿إِنَّ اللَّـهَ وَمَلَائِكَتَهُ يُصَلُّونَ عَلَى النَّبِيِّ ۚ يَا أَيُّهَا الَّذِينَ آمَنُوا صَلُّوا عَلَيْهِ وَسَلِّمُوا تَسْلِيمًا ۝

“ಖಂಡಿತವಾಗಿಯೂ, ಅಲ್ಲಾಹು ಮತ್ತು ಅವನ ಮಲಕ್‍ಗಳು ಪ್ರವಾದಿಯ ಮೇಲೆ ಸಲಾತ್‍ಗಳನ್ನು ಹೇಳುತ್ತಾರೆ. ಓ ನೈಜ ವಿಶ್ವಾಸಿಗಳೇ, (ನೀವೂ ಸಹ) ಅವರ ಮೇಲೆ ಸಲಾತ್ ಮತ್ತು ಸಲಾಮ್ ಸಲ್ಲಿಸುತ್ತಲಿರಿ .” (ಸೂರಃ ಅಲ್-ಅಹ್‍ಝಾಬ್ 33 : 56)


ಪ್ರವಾದಿ (H) ರವರು ಹೇಳಿದರು :

« مَنْ صَلَّى عَلَىَّ وَاحِدَةً صَلَّى اللَّهُ عَلَيْهِ عَشْرًا »

“ಯಾರು ನನ್ನ ಮೇಲೆ ಒಂದು ಸಲಾತನ್ನು ಸಲ್ಲಿಸುವನೋ, ಆಗ ಅಲ್ಲಾಹು ಅವರ ಮೇಲೆ ಹತ್ತು ಸಲಾಮ್‍ಗಳನ್ನು ಸಲ್ಲಿಸುವನು.” (ಸಹೀಹ್ ಮುಸ್ಲಿಮ್ : 408)


ಇದನ್ನು (ಸಲಾತ್ ಹೇಳುವುದನ್ನು) ಎಲ್ಲಾ ಸಂದರ್ಭಗಳಲ್ಲೂ ನಿರ್ದೇಶಿಸಲಾಗಿದೆ, ವಿಶೇಷವಾಗಿ ಎಲ್ಲಾ ನಮಾಝ್‍ನ ಕೊನೆಯಲ್ಲಿ. ಇದಕ್ಕೂ ಮಿಗಿಲಾಗಿ, ಉಲಮಾಗಳ ಪೈಕಿ ಹಲವರು ಇದನ್ನು ಎಲ್ಲಾ ನಮಾಝ್‍ಗಳ ಕೊನೇಯ ತಶಹ್ಹುದ್‍ನಲ್ಲಿ (ಕುಳಿತುಕೊಳ್ಳುವಿಕೆಯಲ್ಲಿ) ಹೇಳುವುದನ್ನು ಕಡ್ಡಾಯವೆಂದು ಪರಿಗಣಿಸಿದ್ದಾರೆ, ಹಾಗೂ ಇದನ್ನು ಇತರ ಹಲವು ಸಂದರ್ಭಗಳಲ್ಲಿ ಹೇಳುವುದು ಪ್ರಬಲವಾದ ಸುನ್ನತ್ ಎಂದು ಪರಿಗಣಿಸಿದ್ದಾರೆ. ಅವುಗಳ ಪೈಕಿ ಅನೇಕ ಹದೀಸ್‍ಗಳಲ್ಲಿ ಸಾಬೀತಾದಂತೆ : ಅದಾನ್‍ನ ನಂತರ, ಪ್ರವಾದಿ (H) ರವರ ನಾಮ ಉಲ್ಲೇಖಿಸಿದಾಗ, ಜುಮುಅಃದ ರಾತ್ರಿ ಮತ್ತು ದಿನದ ವೇಳೆಗಳಲ್ಲಿ (ಇತ್ಯಾದಿ ಒಳಗೊಂಡಿದೆ).

ದೀನ್‍ನ ಉತ್ತಮ ತಿಳುವಳಿಕೆಯನ್ನು ಗಳಿಸಲು ಹಾಗೂ ಅದರಲ್ಲಿ ಅಚಲರಾಗಿ ನಿಲ್ಲಲು ನಮಗೂ ಹಾಗೂ ಸರ್ವ ಮುಸ್ಲಿಮರಿಗೂ ಅಲ್ಲಾಹು ಅನುಗ್ರಹಿಸಲಿ, ಮತ್ತು ಸುನ್ನತ್‍ಗೆ ಹೊಂದಿಕೊಂಡು ದೃಢವಾಗಿ ನಿಂತುಕೊಳ್ಳಲು ಹಾಗೂ ಬಿದ್ಅತ್‍ಗಳಿಂದ ಜಾಗರೂಕರಾಗಲು ಅಲ್ಲಾಹು ಎಲ್ಲರಿಗೂ ಔದಾರ್ಯವನ್ನು ನೀಡಲಿ. ಖಂಡಿತವಾಗಿಯೂ ಅವನು ಅತ್ಯಂತ ಉದಾರಿಯೂ ಅತ್ಯಂತ ದಯಾಳುವೂ ಆಗಿರುವನು. ಅಲ್ಲಾಹುವಿನ ಸಲಾತ್ ಮತ್ತು ಸಲಾಮ್‍ಗಳು ನಮ್ಮ ಪ್ರವಾದಿಯವರ ಮೇಲೂ, ಅವರ ಕುಟುಂಬದವರ ಮೇಲೂ, ಅವರ ಸಹಚರರ ಮೇಲೂ ಹಾಗೂ ಅವರನ್ನು ಅನುಸರಿಸಿದವರ ಮೇಲೂ ಸದಾ ಇರಲಿ.

-ಅಶ್ಶೈಖ್ ಅಬ್ದುಲ್ ಅಝೀಝ್ ಬಿನ್ ಬಾಝ್ (V) ಹಿರಿಯ ವಿದ್ವಾಂಸರು, ಸೌದಿ ಅರೇಬಿಯಾ.

ಮೂಲ : ಅತ್ತಹ್‍ಝೀರ್ ಮಿನಲ್-ಬಿದಅ್, ಪುಟ : 2 – 11
ಅನುವಾದ : ಅಬೂ ಹಮ್ಮಾದ್ ಸಲಾಹುದ್ದೀನ್

ಟಿಪ್ಪಣಿಗಳು : 

[1] ಬಿದ್ಅತ್ ಅಂದರೆ – ವಿಶ್ವಾಸ (ಅಕೀದಃ) ಕಾರ್ಯಗಳಲ್ಲಾಗಲೀ, ನುಡಿಯಲ್ಲಾಗಲೀ ಅಥವಾ ಆಚಾರ ಕರ್ಮಗಳಲ್ಲಾಗಲೀ ಅಲ್ಲಾಹು ನಿರ್ಣಯಿಸಿರುವುದಕ್ಕಿಂತ ಹೊರತಾದ ರೀತಿಯಲ್ಲಿ ಅಲ್ಲಾಹುವನ್ನು ಆರಾಧಿಸುವುದಾಗಿದೆ. (ನೋಡಿರಿ : ಶೈಖ್ ಸಾಲಿಹ್ ಅಲ್-ಉಸೈಮೀನ್ (V) ರವರ ಶರ್ಹ್ ರಿಯಾದ್ ಅಸ್ಸಾಲಿಹೀನ್ 2 : 328)

[2] ಪ್ರವಾದಿ (H) ರವರ ಮೇಲೆ ಹೇಳುವ ಸಲಾತ್ ಎಂಬುದು – ಪ್ರವಾದಿ (H) ಕಲಿಸಿದ ರೀತಿಯಲ್ಲಿ ಸಲಾತ್ ಹೇಳುವುದಾಗಿದೆ. ಇಂದು ಜನರೆಡೆಯಲ್ಲಿ ವ್ಯಾಪಕವಾಗಿ ಚಾಲ್ತಿಯಲ್ಲಿರುವ ವಿವಿಧ ಬಗೆಯ ಹೊಸದಾಗಿ ಸೇರಿಸಲ್ಪಟ್ಟ ನವೀನ ರೀತಿಯ ಹಾಗೂ ಸಲಾತ್ ಮಜ್ಲಿಸ್ ಎಂಬ ಹೆಸರನ್ನಿಟ್ಟು, ಸಾಮೂಹಿಕವಾಗಿ ಏಕ ಸ್ವರದಲ್ಲಿ ಹೇಳುವ ಸಲಾತ್‍ಗಳಾವುದನ್ನೂ ನಮ್ಮ ಪ್ರವಾದಿ (H) ಕಲಿಸಿಕೊಡಲಿಲ್ಲ.

ಪ್ರವಾದಿ (H) ತಮ್ಮ ಸಹಾಬಿಗಳಿಗೆ ಸಲಾತ್ ಹೇಳುವ ಅತ್ಯುತ್ತಮ ವಿಧಾನವನ್ನು ಕಲಿಸಿಕೊಟ್ಟಿರುವರು. ಅವುಗಳ ಪೈಕಿ – ಇದೂ ಕೂಡ ಒಂದು :

« اللَّهُمَّ صَلِّ عَلَى مُحَمَّدٍ، وَعَلَى آلِ مُحَمَّدٍ، كَمَا صَلَّيْتَ عَلَى إِبْرَاهِيمَ وَعَلَى آلِ إِبْرَاهِيمَ، إِنَّكَ حَمِيدٌ مَجِيدٌ، اللَّهُمَّ بَارِكْ عَلَى مُحَمَّدٍ، وَعَلَى آلِ مُحَمَّدٍ، كَمَا بَارَكْتَ عَلَى إِبْرَاهِيمَ، وَعَلَى آلِ إِبْرَاهِيمَ، إِنَّكَ حَمِيدٌ مَجِيدٌ »

ಅರ್ಥ : “ಓ ಅಲ್ಲಾಹ್! ಇಬ್ರಾಹೀಮ್ ಮತ್ತು ಅವರ ಕುಟುಂಬಗಳಿಗೆ ಅನುಗ್ರಹಿಸಿರುವಂತೆ ಮುಹಮ್ಮದ್ (H) ಮತ್ತು ಅವರ ಕುಟುಂಬಗಳಿಗೆ ಅನುಗ್ರಹಿಸು. ಖಂಡಿತವಾಗಿಯೂ ನೀನು ಸ್ತುತ್ಯರ್ಹನೂ ಮಹಿಮೆಯುಳ್ಳವನೂ ಆಗಿರುವೆ. ಓ ಅಲ್ಲಾಹ್! ಇಬ್ರಾಹೀಮ್ ಮತ್ತು ಅವರ ಕುಟುಂಬಗಳಿಗೆ ಸಮೃದ್ಧಿ ನೀಡಿರುವಂತೆ ಮುಹಮ್ಮದ್ (H) ಮತ್ತು ಅವರ ಕುಟುಂಬಗಳಿಗೆ ಸಮೃದ್ಧಿ ನೀಡು. ಖಂಡಿತವಾಗಿಯೂ ನೀನು ಸ್ತುತ್ಯರ್ಹನೂ ಮಹಿಮೆಯುಳ್ಳವನೂ ಆಗಿರುವೆ.” (ಸಹೀಹ್ ಅಲ್ – ಬುಖಾರಿ : 3370)

﴿وَإِذَا قِيلَ لَهُمُ اتَّبِعُوا مَا أَنزَلَ اللَّـهُ قَالُوا بَلْ نَتَّبِعُ مَا أَلْفَيْنَا عَلَيْهِ آبَاءَنَا ۗ أَوَلَوْ كَانَ آبَاؤُهُمْ لَا يَعْقِلُونَ شَيْئًا وَلَا يَهْتَدُونَ ۝

“ಅಲ್ಲಾಹು ಯಾವುದನ್ನು ಅವತೀರ್ಣಗೊಳಿಸಿರುವನೋ ಅದನ್ನು ಅನುಸರಿಸಿರಿ ಎಂದು ಅವರೊಡನೆ ಹೇಳಲಾದರೆ, ಅವರು ಹೇಳುವರು : ‘ಇಲ್ಲ (ಅದರ ಬದಲಾಗಿ), ಯಾವುದನ್ನು ನಮ್ಮ ಪೂರ್ವಜರು ಮಾಡುವುದಾಗಿ ನಾವು ಕಂಡಿರುವೆವೋ ಅದನ್ನೇ ನಾವು ಅನುಸರಿಸುವೆವು’. ಅವರ ಪೂರ್ವಜರು ಏನನ್ನೂ ಅರಿಯದಿದ್ದರೂ ಹಾಗೂ ಸನ್ಮಾರ್ಗದರ್ಶನ ಪಡೆಯದವರಾಗಿದ್ದರೂ ಸಹ. (ಇವರು ಅವರನ್ನೇ ಅನುಸರಿಸುವರೇ?)” (ಕುರ್‌ಆನ್ 2 : 170)