w
ಸರ್ವಸ್ತುತಿಗಳೂ ಅಲ್ಲಾಹುವಿಗಾಗಿದೆ. ಅಲ್ಲಾಹುವಿನ ಸಲಾತ್ ಮತ್ತು ಸಲಾಮ್‌ಗಳು ಅವನ ರಸೂಲ್ (H) ರವರ ಮೇಲೂ ಅವರ ಕುಟುಂಬದ ಮೇಲೂ ಮತ್ತು ಅವರ ಸಹಾಬಿಗಳ ಮೇಲೂ ಇರಲಿ.
ಇಸ್ರಾಅ್ ಮತ್ತು ಮಿಅ್‌ರಾಜ್ ಎಂಬುದು ಹೇಗೆ ಅಲ್ಲಾಹುವಿನ ಮಹಾ ಶಕ್ತಿ ಸಾಮರ್ಥ್ಯ ಹಾಗೂ ಅವನ ಸರ್ವ ಸೃಷ್ಟಿಗಳ ಮೇಲೆ ಅವನಿಗಿರುವ ಮಹಾ ಔನ್ನತ್ಯವನ್ನು ತಿಳಿಯಪಡಿಸುವ ದೃಷ್ಟಾಂತವಾಗಿದೆಯೋ ಅದೇ ರೀತಿ ಅಲ್ಲಾಹು ತನ್ನ ಸಂದೇಶವಾಹಕರ (H) ಸತ್ಯಸಂಧತೆಯನ್ನು ಮತ್ತು ಅಲ್ಲಾಹುವಿನ ಬಳಿ ಅವರ ಅತ್ಯುನ್ನತ ಸ್ಥಾನವನ್ನು ತಿಳಿಯಪಡಿಸುವ ಮಹಾ ದೃಷ್ಟಾಂತವೂ ಆಗಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಅಲ್ಲಾಹು ಹೇಳುತ್ತಾನೆ :
﴿سُبْحَانَ الَّذِي أَسْرَىٰ بِعَبْدِهِ لَيْلًا مِّنَ الْمَسْجِدِ الْحَرَامِ إِلَى الْمَسْجِدِ الْأَقْصَى الَّذِي بَارَكْنَا حَوْلَهُ لِنُرِيَهُ مِنْ آيَاتِنَا ۚ إِنَّهُ هُوَ السَّمِيعُ الْبَصِيرُ﴾
“ತನ್ನ ದಾಸನನ್ನು (ಅರ್ಥಾತ್ ಪ್ರವಾದಿ H ರವರನ್ನು) ಒಂದು ರಾತ್ರಿಯಲ್ಲಿ ಮಸ್ಜಿದುಲ್-ಹರಾಮ್‌ನಿಂದ, ನಾವು ಅನುಗ್ರಹಿತಗೊಳಿಸಿರುವಂತಹ ಪರಿಸರವಾದ, ಮಸ್ಜಿದುಲ್-ಅಕ್‌ಸಾದೆಡೆಗೆ, ನಮ್ಮ ಕೆಲವು ದೃಷ್ಟಾಂತಗಳನ್ನು ತೋರಿಸಿಕೊಡಲಿಕ್ಕಾಗಿ ನಿಶಾಪ್ರಯಾಣ ಮಾಡಿಸಿದವನು (ಅರ್ಥಾತ್ ಅಲ್ಲಾಹು) ಪರಮ ಪಾವನನು (ಸಕಲ ನ್ಯೂನತೆಗಳಿಂದಲೂ ಮುಕ್ತನು). ಖಂಡಿತವಾಗಿಯೂ, ಅವನು ಸಕಲವನ್ನು ಆಲಿಸುವವನೂ, ವೀಕ್ಷಿಸುವವನೂ ಆಗಿರುವನು.” (ಸೂರಃ ಅಲ್-ಇಸ್ರಾಅ್ 17 : 1)
ಪ್ರವಾದಿ (H) ರಿಂದ ಹಲವರು ಉಲ್ಲೇಖಿಸಿದ ಅನೇಕ ವರದಿಗಳಲ್ಲಿ ಸಾಬೀತುಗೊಂಡಿರುವುದೇನೆಂದರೆ, ಅವರನ್ನು (ಪ್ರವಾದಿಯನ್ನು) ಆಕಾಶಕ್ಕೆ ಕೊಂಡೊಯ್ಯಲಾಗಿತ್ತು ಹಾಗೂ ಅವರು ಏಳನೇ ಆಕಾಶವನ್ನು ದಾಟುವವರೆಗೂ ಅವುಗಳ ಬಾಗಿಲುಗಳು ಅವರಿಗಾಗಿ ತೆರೆಯಲ್ಪಟ್ಟಿತ್ತು, ಅಲ್ಲಿ ಅವರ ರಬ್ಬ್ ತಾನು ಇಚ್ಚಿಸಿದ್ದನ್ನು ಅವರೊಂದಿಗೆ ಮಾತನಾಡಿದನು ಹಾಗೂ ದೈನಂದಿನ ಐದು ಹೊತ್ತು ನಮಾಝ್ಅನ್ನು ಅವರ ಮೇಲೆ ಖಡ್ಡಾಯಗೊಳಿಸಿದನು, ಮೊದಲಿಗೆ, ಅಲ್ಲಾಹು (E) ಐವತ್ತು ಹೊತ್ತಿನ ನಮಾಝ್ಅನ್ನು ಖಡ್ಡಾಯಗೊಳಿಸಿದ್ದನು, ಆದರೆ ಕೊನೆಗೆ ಅವನದನ್ನು (ಕಡಿತಗೊಳಿಸಿ) ಐದು ಹೊತ್ತಾಗಿ ಮಾಡುವ ತನಕ ಪ್ರವಾದಿ (H) ರವರು ಅದನ್ನು (ಐವತ್ತು ಹೊತ್ತಿನ ನಮಾಝ್ಅನ್ನು) ಕಡಿತಗೊಳಿಸುವಂತೆ ಕೋರುತ್ತಾ ಅವನೆಡೆಗೆ ಮತ್ತೆ ಮತ್ತೆ ಹಿಂತಿರುಗುತ್ತಿದ್ದರು. ಹಾಗಾಗಿ, ಅದು ಐದು ಹೊತ್ತಿನ ಖಡ್ಡಾಯ ನಮಾಝ್ಆಗಿದೆ ಆದರೆ ಅದರ ಪ್ರತಿಫಲವು ಐವತ್ತು ಹೊತ್ತಿನದ್ದಾಗಿದೆ. ಏಕೆಂದರೆ, ಪ್ರತಿಯೊಂದು ಸತ್ಕರ್ಮಕ್ಕೂ ಹತ್ತುಪಟ್ಟು ಪ್ರತಿಫಲವನ್ನು ನೀಡಲಾಗುವುದು. ಸಕಲ ಅನುಗ್ರಹಗಳನ್ನು ದಯಪಾಲಿಸಿದ ಅಲ್ಲಾಹುವಿಗಾಗಿದೆ ಸರ್ವಸ್ತುತಿಗಳು ಹಾಗೂ ವಂದನೆಗಳು.
ಇನ್ನು, ಇಸ್ರಾಅ್ ವಲ್-ಮಿಅ್‌ರಾಜ್ ಸಂಭವಿಸಿದ ರಾತ್ರಿಯ ಕುರಿತು -ಅದು ರಜಬ್ ಎಂದಾಗಲೀ ಅಥವಾ ಇನ್ನಿತರ ಯಾವುದೇ ತಿಂಗಳಿನಲ್ಲೆಂದಾಗಲೀ- ಸಹೀಹ್ ಹದೀಸ್‌ಗಳಲ್ಲಿ ವಿವರಿಸಲಾಗಿಲ್ಲ. ಇದನ್ನು (ಯಾವುದೇ ದಿನಕ್ಕೆ) ನಿರ್ದಿಷ್ಟಗೊಳಿಸುವ ಕುರಿತು ಏನೆಲ್ಲಾ (ಹದೀಸ್ ಗ್ರಂಥಗಳಲ್ಲಿ) ಉಲ್ಲೇಖಿಸಲ್ಪಟ್ಟಿದೆಯೋ, ಹದೀಸ್ ವಿದ್ವಾಂಸರ ಪ್ರಕಾರ ಅದ್ಯಾವುದೂ ಪ್ರವಾದಿ (H) ರಿಂದ ಸಹೀಹ್ಆಗಿ ಸಾಬೀತುಗೊಂಡಿಲ್ಲ. ಮಹೋನ್ನತನಾದ ಅಲ್ಲಾಹುವಿನ ಅಪಾರ ಅರಿವು ಮತ್ತು ಜ್ಞಾನದಿಂದಾಗಿ ಅದನ್ನು (ಅರ್ಥಾತ್ ಅದು ಸಂಭವಿಸಿದ ನಿರ್ದಿಷ್ಟ ದಿನಾಂಕ ಅಥವಾ ತಿಂಗಳನ್ನು) ಜನರು ಮರೆತುಬಿಡುವಂತೆ ಅವನು ಮಾಡಿದ್ದಾನೆ. ಒಂದುವೇಳೆ ಅದರ (ದಿನಾಂಕದ) ವಿವರಗಳು (ಸಹೀಹ್ಆಗಿ) ಸಾಬೀತುಗೊಂಡರೂ, ಅದನ್ನು ಯಾವುದೇ ಒಂದು ಇಬಾದತ್ ನಿರ್ವಹಿಸಲಿಕ್ಕಾಗಿ ನಿರ್ದಿಷ್ಟಗೊಳಿಸುವುದು ಮುಸ್ಲಿಮರಿಗೆ ಎಂದಿಗೂ ಸಮ್ಮತಾರ್ಹವಲ್ಲ. ಅದನ್ನು ಆಚರಿಸುವುದು ಅವರಿಗೆ (ಅರ್ಥಾತ್ ಮುಸ್ಲಿಮರಿಗೆ) ಸಮ್ಮತಾರ್ಹವಲ್ಲ. ಯಾಕೆಂದರೆ ಪ್ರವಾದಿ (H) ರವರಾಗಲೀ ಅವರ ಸಹಾಬಿಗಲಾಗಲೀ ಅದನ್ನು ಎಂದಿಗೂ ಆಚರಿಸಲಿಲ್ಲ ಅಥವಾ ಯಾವುದೇ ನಿರ್ದಿಷ್ಟ ಆರಾಧನಾ ಕರ್ಮಗಳನ್ನು ನಿರ್ವಹಿಸುವ ಮೂಲಕ ಅದನ್ನು ವಿಶೇಷಗೊಳಿಸಲಿಲ್ಲ.
ಒಂದುವೇಳೆ ಅದನ್ನು ಆಚರಿಸುವುದು ಸಮ್ಮತಾರ್ಹವಾಗಿದ್ದರೆ, ಪ್ರವಾದಿ (H) ರವರು ತಮ್ಮ ಸಮುದಾಯಕ್ಕೆ ಅದನ್ನು -ತಮ್ಮ ಮಾತಿನ ಮೂಲಕವಾಗಲೀ ಅಥವಾ ಕರ್ಮಗಳ ಮೂಲಕವಾಗಲೀ- ವಿವರಿಸಿಕೊಡುತ್ತಿದ್ದರು. ಒಂದುವೇಳೆ ಈ ರೀತಿಯದೇನಾದರೂ ನಡೆದಿರುತ್ತಿದ್ದರೆ, ಅದು ಸುಪರಿಚಿತವಾಗುತ್ತಿತ್ತು ಮತ್ತು ವ್ಯಾಪಕವಾಗುತ್ತಿತ್ತು. ಹಾಗೂ ಸಹಾಬಿಗಳು (M) ಅದನ್ನು ನಮಗೆ ತಿಳಿಸಿಕೊಡುತ್ತಿದ್ದರು. ವಾಸ್ತವವಾಗಿ ಅವರು (ಅರ್ಥಾತ್ ಸಹಾಬಿಗಳು) ಮುಸ್ಲಿಮರಿಗೆ ಯಾವುದೆಲ್ಲಾ ಅಗತ್ಯವಿದೆಯೋ ಅವುಗಳೆಲ್ಲವನ್ನೂ ಪ್ರವಾದಿ (H) ರಿಂದ ನಮಗೆ ಕಲಿಸಿಕೊಟ್ಟಿರುವರು. ದೀನ್‌ನ ಯಾವೊಂದು ವಿಷಯದಲ್ಲೂ ಅವರು ನಿರ್ಲಕ್ಷ್ಯವನ್ನು ತಾಳಲಿಲ್ಲ, ಪ್ರತಿಯೊಂದು ಒಳಿತಿನ ವಿಚಾರದಲ್ಲೂ ಅವರು ಮುಂಚೂಣಿಯಲ್ಲಿರುವವರಾಗಿದ್ದರು. ಒಂದುವೇಳೆ ಈ (ಮಿಅ್‌ರಾಜ್) ರಾತ್ರಿಯ ಆಚರಣೆಯು ಧರ್ಮಸಮ್ಮತವಾಗಿರುತ್ತಿದ್ದರೆ, ಅವರು ಖಂಡಿತವಾಗಿಯೂ ಅದನ್ನು ನಿರ್ವಹಿಸುವುದರಲ್ಲಿ ಜನರ ಪೈಕಿ ಮೊದಲಿಗರಾಗಿರುತ್ತಿದ್ದರು. ಪ್ರವಾದಿ (H) ರವರು ಜನರನ್ನು (ಒಳಿತಿಗೆ) ಮಾರ್ಗದರ್ಶನ ಮಾಡುವ ವಿಚಾರದಲ್ಲಿ ಅತ್ಯಂತ ಪ್ರಾಮಾಣಿಕತೆ ಹೊಂದಿವರಾಗಿದ್ದರು. ಅವರು ಸತ್ಯವಾಗಿಯೂ ಅವರ ಸಂದೇಶವನ್ನು ಪರಿಪೂರ್ಣವಾಗಿ ಜನರಿಗೆ ತಿಳಿಸಿಕೊಟ್ಟಿರುವರು. ಹಾಗೂ ತಮ್ಮ ಶ್ರೇಷ್ಠ ಕರ್ತವ್ಯವನ್ನು ನಿರ್ವಹಿಸಿರುವರು.
ಒಂದುವೇಳೆ, ಆ ರಾತ್ರಿಯ ಮನ್ನಣೆ ಮತ್ತು ಆಚರೆಣೆಯು ಅಲ್ಲಾಹುವಿನ ದೀನ್ನನ ಪೈಕಿ ಸೇರಿದ ಕಾರ್ಯವಾಗಿದ್ದರೆ (ಇಸ್ಲಾಮ್‌ನೊಂದಿಗೆ ಸಂಬಂಧಹೊಂದಿರುತ್ತಿದ್ದರೆ), ಪ್ರವಾದಿ (H) ರವರು ಅದನ್ನೆಂದಿಗೂ ನಿರ್ಲಕ್ಷಿಸುತ್ತಿರಲಿಲ್ಲ. ಅಥವಾ ಅವರೆಂದಿಗೂ ಅದನ್ನು ಮರೆಮಾಚುತ್ತಿರಲಿಲ್ಲ. ಇಂತಹ ಯಾವುದೇ ಕಾರ್ಯವೂ ಸಂಭವಿಸದ ಕಾರಣ ನಮಗೆ ತಿಳಿದುಬರುವುದೇನೆಂದರೆ ಆ ರಾತ್ರಿಯ ಮನ್ನಣೆ ಮತ್ತು ಆಚರಣೆಗೂ ಇಸ್ಲಾಮಿಗೂ ಯಾವುದೇ ಸಂಬಂಧವಿಲ್ಲ, ಯಾಕೆಂದರೆ ಮಹೋನ್ನತನಾದ ಅಲ್ಲಾಹು ಈ ಉಮ್ಮತ್‌ಗೆ ಅದರ ದೀನ್ಅನ್ನು (ಅರ್ಥಾತ್ ಇಸ್ಲಾಮ್ಅನ್ನು) ಪರಿಪೂರ್ಣಗೊಳಿಸಿರುವನು, ತನ್ನ ಅನುಗ್ರಹವನ್ನು ಅದರ ಮೇಲೆ ಪೂರ್ತೀಕರಿಸಿರುವನು, ಮತ್ತು ಅಲ್ಲಾಹು ಅನುಮತಿಸದ ಕಾರ್ಯಗಳನ್ನು ಹೊಸದಾಗಿ ದೀನ್‌ಗೆ ಸೇರಿಸುವವರನ್ನು (ನೂತನವಾದಿಗಳನ್ನು) ಖಂಡಿಸಿರುವನು.
ಮಹೋನ್ನತನಾದ ಅಲ್ಲಾಹು ಸೂರಃ ಅಲ್-ಮಾಇದಃದಲ್ಲಿ ಹೇಳುತ್ತಾನೆ :
﴿الْيَوْمَ أَكْمَلْتُ لَكُمْ دِينَكُمْ وَأَتْمَمْتُ عَلَيْكُمْ نِعْمَتِي وَرَضِيتُ لَكُمُ الْإِسْلَامَ دِينًا ۚ﴾
“ಇಂದು ನಾನು ನಿಮಗೆ ನಿಮ್ಮ ಧರ್ಮವನ್ನು ಪೂರ್ಣಗೊಳಿಸಿರುವೆನು, ಹಾಗೂ ನಿಮ್ಮ ಮೇಲೆ ನನ್ನ ಅನುಗ್ರಹವನ್ನು ಪೂರ್ತೀಕರಿಸಿರುವೆನು ಮತ್ತು ಇಸ್ಲಾಮನ್ನು ನಿಮ್ಮ ಧರ್ಮವಾಗಿ ತೃಪ್ತಿಪಟ್ಟಿರುವೆನು.” (ಸೂರಃ ಅಲ್-ಮಾಇದಃ 5 : 3)
ಮಹೋನ್ನತನಾದ ಅಲ್ಲಾಹು ಸೂರಃ ಅಶ್ಶೂರಾದಲ್ಲಿ ಹೇಳುತ್ತಾನೆ :
﴿أَمْ لَهُمْ شُرَكَاءُ شَرَعُوا لَهُم مِّنَ الدِّينِ مَا لَمْ يَأْذَن بِهِ اللَّـهُ ۚ وَلَوْلَا كَلِمَةُ الْفَصْلِ لَقُضِيَ بَيْنَهُمْ ۗ وَإِنَّ الظَّالِمِينَ لَهُمْ عَذَابٌ أَلِيمٌ ﴾
“ಅಲ್ಲಾಹು ಅನುಮತಿಸದ ಕಾರ್ಯವನ್ನು ಅವರಿಗೆ ಧರ್ಮವಾಗಿ ನಿರ್ಣಯಿಸಿಕೊಟ್ಟ ಸಹಭಾಗಿಗಳು ಅವರಿಗಿರುವರೇ? ನಿರ್ಣಾಯಕ ವಿಧಿಯ ಕುರಿತು ಆಜ್ಞೆಯು ಇಲ್ಲದಿರುತ್ತಿದ್ದರೆ, ಅವರ ಮಧ್ಯೆ ತಕ್ಷಣವೇ ತೀರ್ಮಾನ ಮಾಡಿ ಬಿಡಲಾಗುತ್ತಿತ್ತು. ಖಂಡಿತವಾಗಿಯೂ, ಅಕ್ರಮಿಗಳಿಗೆ ವೇದನಾಜನಕ ಶಿಕ್ಷೆಯಿದೆ.” (ಸೂರಃ ಅಶ್ಶೂರಾ 42 : 21)
ನೂತನಾಚಾರಗಳ (ಬಿದಅ್‌ಗಳ) ವಿರುದ್ಧ ಎಚ್ಚರಿಕೆ ನೀಡುವುದು, ಅವರ ಭೀಕರ ಅಪಾಯಗಳನ್ನು ಸಮುದಾಯಕ್ಕೆ ಎಚ್ಚರಿಸುವ ಮೂಲಕ ಅವುಗಳು (ಅರ್ಥಾತ್ ಬಿದ್ಅತ್) ಪಥಭ್ರಷ್ಟಗಳಾಗಿವೆ ಎಂದು ಬಹಿರಂಗಪಡಿಸುವುದು, ಮತ್ತು ಅವುಗಳನ್ನು ನಿರ್ವಹಿಸದಂತೆ ಜನರನ್ನು ದೂರವಿಡುವುದು -ಇವೆಲ್ಲವೂ ಪ್ರವಾದಿ (H) ರವರ ಸಹೀಹ್ಆದ ಹದೀಸ್‌ಗಳಲ್ಲಿ ಸಾಬೀತುಗೊಂಡಿದೆ. ಅವುಗಳನ್ನು ಸಹೀಹ್ ಮುಸ್ಲಿಮ್ ಮತ್ತು ಸಹೀಹ್ ಅಲ್-ಬುಖಾರಿ ಸೇರಿದಂತೆ ಇನ್ನಿತರ ಹದೀಸ್‌ಗಳಲ್ಲಿ ಸಹೀಹ್ಆಗಿ ದೃಢೀಕರಿಸಲ್ಪಟ್ಟಿದೆ. ಆಯಿಶಃ (J) ರವರಿಂದ ವರದಿ, ಪ್ರವಾದಿ (H) ರವರು ಹೇಳಿದರು :
« مَنْ أَحْدَثَ فِي أَمْرِنَا هَذَا مَا لَيْسَ مِنْهُ فَهُوَ رَدٌّ »
“ನಮ್ಮ (ದೀನ್‌ನ) ಕಾರ್ಯಕ್ಕೆ ಅದರಲ್ಲಿಲ್ಲದ ಹೊಸ ಆಚಾರವನ್ನು ಯಾರಾದರೂ ಹೊಸದಾಗಿ ಸೇರಿಸಿದರೆ ಅದು ತಿರಸ್ಕೃತವಾಗಿದೆ.” (ಸಹೀಹ್ ಅಲ್-ಬುಖಾರಿ : 2697, ಸಹೀಹ್ ಮುಸ್ಲಿಮ್ : 1718)
ಸಹೀಹ್ ಮುಸ್ಲಿಮ್‌ನ ಇನ್ನೊಂದು ವರದಿಯಲ್ಲಿ, ಪ್ರವಾದಿ (H) ರವರು ಹೇಳಿದರು :
« مَنْ عَمِلَ عَمَلاً لَيْسَ عَلَيهِ أَمْرُنا فَهُوَ رَدٌّ »
“ನಮ್ಮ ಆಜ್ಞೆಯಿಲ್ಲದ (ಅರ್ಥಾತ್ ಇಸ್ಲಾಮ್ನ ಲ್ಲಿಲ್ಲದ ಯಾವುದೇ ಒಂದು) ಆಚಾರವನ್ನು ಯಾರಾದರೂ ಆಚರಿಸಿದರೆ ಅದು ತಿರಸ್ಕೃತವಾಗಿದೆ.” (ಅಲ್-ಬುಖಾರಿ 2/166, ಮುಸ್ಲಿಮ್ 5/133)
ಮುಸ್ಲಿಮ್ ತಮ್ಮ ಸಹೀಹ್‌ನಲ್ಲಿ ಇದನ್ನು ಉಲ್ಲೇಖಿಸಿರುವರು, ಜರೀರ್ (I) ರವರಿಂದ ವರದಿ : ಪ್ರವಾದಿ (H) ರವರು ತಮ್ಮ ಎಲ್ಲಾ ಶುಕ್ರವಾರದ (ಜುಮುಅಃ) ಪ್ರವಚನಗಳಲ್ಲಿ ಹೇಳುತ್ತಿದ್ದರು :
“ವಚನಗಳಲ್ಲಿ ಅತ್ಯುತ್ತಮ ವಚನವು ಅಲ್ಲಾಹುವಿನ ವಚನ (ಅರ್ಥಾತ್ ಕುರ್‌ಆನ್) ಆಗಿದೆ. ಮಾರ್ಗದರ್ಶನದಲ್ಲಿ ಅತ್ಯುತ್ತಮವಾದ ಮಾರ್ಗದರ್ಶನವು ಪ್ರವಾದಿ (H) ರವರ ಮಾರ್ಗದರ್ಶನವಾಗಿದೆ. ಕಾರ್ಯಗಳಲ್ಲಿ ಅತ್ಯಂತ ಹೀನವಾದುದು ಬಿದ್ಅತ್‌ಗಳಾಗಿವೆ ಮತ್ತು ಬಿದ್ಅತ್‌ಗಳೆಲ್ಲವೂ ಪಥಭ್ರಷ್ಟತೆಗಳಾಗಿವೆ.”
ಅನ್ನಸಾಈ ತಮ್ಮ ವರದಿಯಲ್ಲಿ ಸೇರಿಸಿ ಉಲ್ಲೇಖಿಸಿರುವರು : “ಎಲ್ಲಾ ಪಥಭ್ರಷ್ಟತೆಗಳು ನರಕದಲ್ಲಾಗಿವೆ.”
ಇದು ಸುನನ್‌ನಲ್ಲಿ ಉಲ್ಲೇಖಿಸಲ್ಪಟ್ಟಿದೆ, ಅಲ್-ಇರ್‌ಬಾದ್ ಬಿನ್ ಸಾರಿಯಃ (I) ರಿಂದ ವರದಿ : ಅವರು ಹೇಳಿದರು :
“ಪ್ರವಾದಿ (H) ರವರು ನಮಗೊಂದು ಉಪದೇಶ ನೀಡಿದರು. ಅದು ನಮ್ಮ ಹೃದಯಗಳನ್ನು ನಡುಗಿಸಿದವು ಮತ್ತು (ಅದರಿಂದಾಗಿ) ನಮ್ಮ ಕಣ್ಣುಗಳಿಂದ ಕಣ್ಣೀರು ಹರಿದವು, ನಾವು ಕೇಳಿದೆವು, ಓ ಅಲ್ಲಾಹುವಿನ ಸಂದೇಶವಾಹಕರೇ, ಇದೊಂದು ವಿದಾಯದ ಉಪದೇಶದಂತಿದೆ, ಹಾಗಾಗಿ, ತಾವು ನಮಗೇನು ಆಜ್ಞಾಪಿಸುವಿರಿ? ಅವರು (H) ಹೇಳಿದರು : ಅಲ್ಲಾಹುವನ್ನು ಭಯಪಡುವಂತೆಯೂ ಮತ್ತು ನಿಮ್ಮ ಆಡಳಿತಗಾರನನ್ನು -ಅವನೋರ್ವ ಗುಲಾಮನಾಗಿದ್ದರೂ ಸರಿ- ಅವನನ್ನು ಆಲಿಸಿ ಅನುಸರಿಸುವಂತೆಯೂ ನಾನು ನಿಮಗೆ ಆಜ್ಞಾಪಿಸುತ್ತಿರುವೆನು. ನನ್ನ ಬಳಿಕ ಬದುಕಿರುವವರು ಖಂಡಿತವಾಗಿಯೂ, ಅನೇಕ ಭಿನ್ನಾಭಿಪ್ರಾಯಗಳನ್ನು ಕಾಣುವರು. ಆಗ ನೀವು ನನ್ನ ಸುನ್ನತ್ಅನ್ನೂ (ಅರ್ಥಾತ್ ಮಾರ್ಗದರ್ಶನವನ್ನೂ) ಹಾಗೂ ಸನ್ಮಾರ್ಗಿಗಳಾದ ಅಲ್-ಖುಲಫಾಉರ್ರಾಶಿದೂನ್‌ಗಳ ಸುನ್ನತ್ಅನ್ನೂ ಅನುಸರಿಸಿರಿ. ಅವುಗಳನ್ನು ಬಿಗಿಯಾಗಿ ಹಿಡಿದುಕೊಳ್ಳಿರಿ, ಮತ್ತು ಅದಕ್ಕೆ ಧೃಢವಾಗಿ ಹೊಂದಿಕೊಂಡಿರಿ. ಹಾಗೂ ಹೊಸತಾಗಿ ಸೇರಿಸಲ್ಪಡುವ ಕಾರ್ಯಗಳ ಕುರಿತು ಜಾಕರೂಕರಾಗಿರಿ. ಯಾಕೆಂದರೆ ಹೊಸದಾಗಿ ಸೇರಿಸಲ್ಪಟ್ಟ ಕಾರ್ಯಗಳೆಲ್ಲವೂ ಬಿದ್ಅತ್‌ಗಳಾಗಿವೆ, ಮತ್ತು ಬಿದ್ಅತ್‌ಗಳೆಲ್ಲವೂ ಪಥಭ್ರಷ್ಟತೆಯಾಗಿದೆ.”
ಈ ರೀತಿಯ ಅರ್ಥವನ್ನು ಹೊಂದಿರುವ ಹದೀಸ್‌ಗಳು ಹಲವಾರಿದೆ.
ನೂತನಾಚಾರಗಳ (ಬಿದ್ಅತ್‌ಗಳ) ವಿರುದ್ಧ ಎಚ್ಚರಿಕೆ ನೀಡುವುದು ಮತ್ತು ಅವುಗಳ ಕುರಿತು ಆತಂಕ ತಾಳುವುದನ್ನು ಪ್ರವಾದಿ (H) ರವರ ಸಹಾಬಿಗಳಿಂದ ಮತ್ತು ತದನಂತರ ಬಂದ ಸಲಫುಸ್ಸಾಲಿಹೀನ್‌ಗಳಿಂದ ಸಾಬೀತುಗೊಂಡಿದೆ.
ಇದು ದೀನ್‌ಗೆ ಅನಗತ್ಯವಾದ ಸೇರ್ಪಡಿಸುವಿಕೆಯಾಗಿದೆ, ಅಲ್ಲಾಹುವಿನ ಅನುಮತಿಯಿಲ್ಲದೆ ಯಾವುದಾದರೊಂದನ್ನು ಶ್ರೇಷ್ಠವೆಂದು ನಿಗದಿಪಡಿಸುವುದಾಗಿದೆ, ಮತ್ತು ಅಲ್ಲಾಹುವಿನ ವಿರೋಧಿಗಳ ಅನುಕರಣೆಯಾಗಿದೆ, ಅದು ಯಹೂದಿಯರು ಮತ್ತು ನಸಾರಾಗಳು ತಮ್ಮ ಧರ್ಮಕ್ಕೆ ಹೊಸ ಆಚರಣೆಗಳನ್ನು ಸೇರಿಸಿದಂತಾಗಿದೆ, ಹಾಗೂ ಅಲ್ಲಾಹುವಿನ ಅನುಮತಿಯನ್ನು ಮೀರಿ ನವೀನಾಚಾರ ನಿರ್ಮಿಸುವುದಾಗಿದೆ. ಏಕೆಂದರೆ ಅವರ ಈ ಕಾರ್ಯವು ಇಸ್ಲಾಮ್ ದೀನ್‌ಗೆ ಪರಿಪೂರ್ಣತೆಯ ಕೊರತೆಯಿದೆ ಎಂದು ಸೂಚಿಸುವುದಾಗಿದೆ, ಅದು ಪರಿಪೂರ್ಣವಲ್ಲ ಎಂಬ ಆರೋಪವನ್ನು ಎಸಗುವುದಾಗಿದೆ. ಈ ಕಾರ್ಯವು ಅತ್ಯಂತ ಭೀಕರ ಪಥಭ್ರಷ್ಟತೆಯಿಂದ ಕೂಡಿರುವ ಅತಿ ನೀಚವಾದ ಕರ್ಮಗಳಾಗಿವೆ ಎಂಬುದು ತಿಳಿದಿರುವ ವಿಚಾರವಾಗಿದೆ ಹಾಗೂ “ಇಂದು ನಾನು ನಿಮ್ಮ ಧರ್ಮವನ್ನು ನಿಮಗೆ ಪರಿಪೂರ್ಣಗೊಳಿಸಿರುವೆನು” (ಎಂಬ) ಅಲ್ಲಾಹುವಿನ (ಈ ವಚನಕ್ಕೆ ಅದು) ವಿರುದ್ಧವಾಗಿದೆ. ಮತ್ತು ಬಿದ್ಅತ್‌ಗಳ ವಿರುದ್ಧ ಎಚ್ಚರಿಕೆ ನೀಡುವ ಪ್ರವಾದಿ (H) ರವರ ವಚನಗಳಿಗೆ ಸ್ಪಷ್ಟವಾಗಿ ವಿರುದ್ಧವಾಗಿದೆ.
ಈ ಬಿದ್ಅತ್ಅನ್ನು ತಿರಸ್ಕರಿಸಲು ಅರ್ಥಾತ್ ಇಸ್ರಾಅ್ ವಲ್-ಮಿಅ್‌ರಾಜ್ ರಾತ್ರಿಯ ಆಚರಣೆಯನ್ನು (ತಿರಸ್ಕರಿಸಲು), ಅದರ ವಿರುದ್ಧ ಎಚ್ಚರಿಕೆ ನೀಡಲು, ಮತ್ತು ಅದಕ್ಕೂ ಇಸ್ಲಾಮಿಗೂ ಯಾವುದೇ ಸಂಬಂಧವಿಲ್ಲವೆಂದು ಅರಿತುಕೊಳ್ಳಲು ಈ ಮೇಲೆ ಉಲ್ಲೇಖಿಸಲಾದ ಪುರಾವೆಗಳು ಓರ್ವ ಸತ್ಯಾನ್ವೇಷಿಗೆ ಸಾಕಾಗುವುದೆಂದು ನಾನು ಭಾವಿಸುತ್ತೇನೆ. ಏಕೆಂದರೆ ಮುಸ್ಲಿಮರಿಗೆ ಪ್ರಾಮಾಣಿಕ ಉಪದೇಶವನ್ನು ನೀಡಲು, ಅವರಿಗೆ ದೀನ್‌ನ ಪೈಕಿ ಏನನ್ನು ಅಲ್ಲಾಹು ಅವರಿಗೆ ಆಜ್ಞಾಪಿಸಿರುವನೋ ಅದನ್ನು ಸ್ಪಷ್ಟಪಡಿಸಲು ಅಲ್ಲಾಹು ಆದೇಶಿಸಿರುವನು, ಮತ್ತು ಧಾರ್ಮಿಕ ಜ್ಞಾನವನ್ನು ಮರೆಮಾಚುವುದು ನಿಷಿದ್ಧವಾಗಿರುವುದರಿಂದ ಈ ಬಿದ್ಅತ್ಅನ್ನು (ಅದರ ವಾಸ್ತವಿಕತೆಯನ್ನು) ನನ್ನ ಮುಸ್ಲಿಮ್ ಸಹೋದರರ ಗಮನಕ್ಕೆ ತರಲು ನಾನು ನಿರ್ಧರಿಸಿದೆನು, ಅದು (ಅರ್ಥಾತ್ ಈ ಆಚರಣೆಯು) ಅನೇಕ ಸ್ಥಳಗಳಲ್ಲಿ ಪ್ರಚಲಿತವಾಗಿದೆ, ಕೆಲವರು ಇದನ್ನು (ಈ ಆಚರಣೆಯನ್ನು) ದೀನ್‌ನ ಭಾಗವೆಂದೇ ಭಾವಿಸಿಕೊಂಡಿದ್ದಾರೆ. ಸಕಲ ಮುಸ್ಲಿಮರ ಕಾರ್ಯವನ್ನು ಸುಧಾರಣೆಗೊಳಿಸಿ ಸರಿಪಡಿಸುವಂತೆ, ಅವರಿಗೆ ಇಸ್ಲಾಮ್‌ನ ಜ್ಞಾನವನ್ನು ಅನುಗ್ರಹಿಸುವಂತೆ, ಮತ್ತು ಸತ್ಯಕ್ಕೆ ದೃಢವಾಗಿ ಹೊಂದಿಕೊಳ್ಳಲು ಹಾಗೂ ಅದಕ್ಕೆ ವಿರುದ್ಧವಾದ ಎಲ್ಲವನ್ನು ತ್ಯಜಿಸಲು ನಮಗೂ ಅವರಿಗೂ ಸಹಾಯಮಾಡುವಂತೆ, ಅಲ್ಲಾಹುವಿನಲ್ಲಿ ಬೇಡುತ್ತೇವೆ, ಖಂಡಿತವಾಗಿಯೂ ಅವನು ಅದನ್ನು ಮಾಡಲು ಸಾಮರ್ಥ್ಯವುಳ್ಳವನಾಗಿರುವನು.
ಅಲ್ಲಾಹುವಿನ ಸಲಾತ್ ಮತ್ತು ಸಲಾಮ್‌ಗಳು ಅವನ ದಾಸರೂ, ಸಂದೇಶವಾಹಕರೂ ಆಗಿರುವ, ನಮ್ಮ ಪ್ರವಾದಿ ಮುಹಮ್ಮದ್ (H) ರವರ ಮೇಲೂ ಅವರ ಕುಟುಂಬದ ಮೇಲೂ ಮತ್ತು ಅವರ ಸಹಾಬಿಗಳ ಮೇಲೂ ಇರಲಿ.
-ಅಶ್ಶೈಖ್ ಅಬ್ದುಲ್ ಅಝೀಝ್ ಬಿನ್ ಬಾಝ್ (V), ಹಿರಿಯ ವಿದ್ವಾಂಸರು, ಸೌದಿ ಅರೇಬಿಯಾ
ಮೂಲ : ಮಜ್ಮೂಅ್ ಫತಾವಾ ವಮಕಾಲಾತ್ ಅಶ್ಶೈಖ್ ಇಮಾಮ್ ಇಬ್ನ್ ಬಾಝ್ : 1/183
ನೋಡಿರಿ : https://binbaz.org.sa/articles/23/حكم-الاحتفال-بليلة-الاسراء-والمعراج
ಅನುವಾದ : ಅಬೂ ಹಮ್ಮಾದ್
ಹೆಚ್ಚಿನ ಓದಿಗಾಗಿ :
ಪ್ರವಾದಿ ಜನ್ಮದಿನಾಚರಣೆ ಸಮ್ಮತಾರ್ಹವೇ? -ಅಲ್-ಇಮಾಮ್ ಇಬ್ನ್ ಬಾಝ್ (V) ಹಿರಿಯ ವಿದ್ವಾಂಸರು, ಸೌದಿ ಅರೇಬಿಯಾ.
ಲಾ ಇಲಾಹ ಇಲ್ಲಲ್ಲಾಹ್ ಮುಹಮ್ಮದುರ್ರಸೂಲುಲ್ಲಾಹ್ ಎಂಬ ಸಾಕ್ಷ್ಯವಚನದ ಅರ್ಥವೇನು? -ಅಲ್-ಇಮಾಮ್ ಇಬ್ನ್ ಬಾಝ್ (V) ಹಿರಿಯ ವಿದ್ವಾಂಸರು, ಸೌದಿ ಅರೇಬಿಯಾ.
ಮರಣಹೊಂದಿದವರೊಡನೆ ಬೇಡುವುದು ಮತ್ತು ಅವರೊಂದಿಗೆ ಸಹಾಯ ಯಾಚಿಸುವುದರ ವಿಧಿಯೇನು? ಅಲ್-ಇಮಾಮ್ ಇಬ್ನ್ ಬಾಝ್ (V) ಹಿರಿಯ ವಿದ್ವಾಂಸರು, ಸೌದಿ ಅರೇಬಿಯಾ.