w
ಉತ್ತರ : ಆಡಳಿತಗಾರರ ದೋಷ ಹಾಗೂ ನ್ಯೂನತೆಗಳನ್ನು ಮುಂದಿಟ್ಟುಕೊಂಡು ದೂಷಿಸುವುದು ಹಾಗೂ ಅವುಗಳನ್ನು ಮಿನ್‌ಬರ್‌ಗಳ ಮೇಲೆ ಮಾತೆತ್ತುವುದು (ಇವು ಯಾವುದೂ) ಸಜ್ಜನ ಪೂರ್ವಿಕರ (ಸಲಫ್‍ಗಳ) ರೀತಿಯಾಗಿರಲಿಲ್ಲ. ಯಾಕೆಂದರೆ ಇವುಗಳೆಲ್ಲವೂ ಅರಾಜಕತೆ, ಒಳಿತು ಕಾರ್ಯಗಳಲ್ಲಿ ಆಡಳಿತಗಾರರ ಆಜ್ಞಾಪಾಲನೆ ಮತ್ತು ಅನುಸರಣೆಯನ್ನು ಇಲ್ಲದಾಗಿಸುವ, ಹಾನಿಯನ್ನುಂಟು ಮಾಡುವ ಹಾಗೂ ಪ್ರಯೋಜನವಿಲ್ಲದ ಅನಾವಶ್ಯಕ ಕಾರ್ಯಗಳಿಗೆ ಎಡೆಮಾಡಿಕೊಡುತ್ತದೆ. ಆದರೆ ಸಜ್ಜನ ಪೂರ್ವಿಕರ ವಿಧಾನವೇನೆಂದರೆ: ತಮ್ಮ ಹಾಗೂ ಆಡಳಿತಗಾರನಿಗೆ (ಕೇವಲ ಇಬ್ಬರ ನಡುವೆ) ಮಾತ್ರ ಸೀಮಿತವಾಗಿರುವಂತೆ ಉಪದೇಶವನ್ನು ನೀಡುವುದಾಗಿದೆ, ಅವರಿಗೆ ಪತ್ರ ಬರೆಯುವುದು ಅಥವಾ ಅವರನ್ನು ಒಳಿತಿನೆಡೆಗೆ ಮಾರ್ಗದರ್ಶನ ಮಾಡುವ ಸಲುವಾಗಿ ಅವರನ್ನು ಸಂಪರ್ಕಿಸುವ ವಿದ್ವಾಂಸರಿಗೆ ತಿಳಿಸುವುದಾಗಿದೆ.
ಇನ್ನು ವ್ಯಭಿಚಾರ, ಮದ್ಯಪಾನ ಹಾಗೂ ಬಡ್ಡಿ ಮುಂತಾದ ಕೆಡುಕು ಕೃತ್ಯಗಳೆನ್ನೆಸಗಿದವರನ್ನು ಹೆಸರಿಸದೆ ಕೆಡುಕುಗಳನ್ನು ವಿರೋಧಿಸುವುದು – ಇದು (ಶರೀಅಃದ) ಸಾರ್ವತ್ರಿಕ ಪುರಾವೆಗಳ ಹಿನ್ನಲೆಯಲ್ಲಿ ಕಡ್ಡಾಯವಾಗಿದೆ. ಆಡಳಿತಗಾರನಾಗಲಿ ಅಥವಾ ಇನ್ನಿತರರಾಗಲಿ ಅವರ ಹೆಸರನ್ನು ಉಲ್ಲೇಖಿಸದೆ ಪಾಪಕೃತ್ಯಗಳನ್ನು ವಿರೋಧಿಸಿಕೊಂಡು ಅದರ ವಿರುದ್ಧ ಜನರಿಗೆ ಎಚ್ಚರಿಕೆಯನ್ನು ನೀಡಿದರೆ ಅದು ಸಾಕಾಗುವುದು.
ಉಸ್ಮಾನ್ (I) ರವರ ಆಡಳಿತಾವಧಿಯಲ್ಲಿ ದಂಗೆಯೆದ್ದಾಗ ಕೆಲವರು ಉಸಾಮಃ ಬಿನ್ ಝೈದ್ (I) ರೊಂದಿಗೆ ಕೇಳಿದರು, ಉಸ್ಮಾನ್ (I) ರೊಂದಿಗೆ ತಾವು ಉಪದೇಶ ನೀಡುವ ಸಲುವಾಗಿ ಮಾತುಕತೆ ನಡೆಸುವುದಿಲ್ಲವೇ? ಆಗ ಅವರು ಹೇಳಿದರು: ತಮಗೆಲ್ಲರಿಗೂ ಕೇಳಿಸುವಂತೆಯೇ ಹೊರತು (ಅರ್ಥಾತ್ ಬಹಿರಂಗವಾಗಿ ಹೇಳಿಯೇ ಹೊರತು) ನಾನು ಅವರೊಂದಿಗೆ ಮಾತನಾಡಲಾರೆ ಎಂದು ತಾವು ಭಾವಿಸುವಿರಾ? ಖಂಡಿತವಾಗಿಯೂ ಕ್ಷೋಭೆಯ ಬಾಗಿಲನ್ನು ತೆರೆಯಲು ಹಾಗೂ ಅದನ್ನು ತೆರೆದವರ ಪೈಕಿ ಮೊದಲನೆಯವನಾಗುವುದನ್ನು ನಾನು ಇಷ್ಟಪಡಲಾರೆ ಹಾಗಾಗಿ (ಎಲ್ಲರ ಮುಂದೆ ಬಹಿರಂಗವಾಗಿ ಹೇಳದೇ) ನಮ್ಮಿಬ್ಬರ ನಡುವೆ ಮಾತ್ರ ಸೀಮಿತವಾಗಿರುವಂತೆ ನಾನು ಅವರೊಡನೆ ಮಾತನಾಡುವೆನು.
ಉಸ್ಮಾನ್ (I) ರವರ ಕಾಲಾವಧಿಯಲ್ಲಿ ತಿಳಿಗೇಡಿಗಳಾದ ಖವಾರಿಜ್‌ಗಳು (ದಂಗೆಕೋರರು) ಕ್ಷೋಭೆಯನ್ನುಂಟುಮಾಡಿ, ಉಸ್ಮಾನ್ (I) ರವರ ವಿರುದ್ಧ ಬಹಿರಂಗವಾಗಿ ಟೀಕಿಸಿದರು, ಕ್ಷೋಭೆ, ಸಂಘರ್ಷ ಹಾಗೂ ಅರಾಜಕತೆಯು ತೀವ್ರವಾಯಿತು, ಇದರಿಂದಾಗಿ ಜನರ ಮೇಲೆ ಬೀರಿದ ಕೆಟ್ಟ ಪರಿಣಾಮವು ಇಂದಿನವರೆಗೂ ಕೊನೆಗೊಳ್ಳಲೇ ಇಲ್ಲ. ಇದು ಅಲಿಯ್ಯ್ (I) ಹಾಗೂ ಮುಆವಿಯಃ (I) ರವರ ನಡುವೆ ಭಿನ್ನತೆಗೆ ಕಾರಣವಾಯಿತು. ಉಸ್ಮಾನ್ (I) ಹಾಗೂ ಅಲಿಯ್ಯ್ (I) ಈ ಕಾರಣದಿಂದಾಗಿ ಹತ್ಯೆಗೀಡಾದರು. ಆಡಳಿತಗಾರರ ವಿರುದ್ಧ ಬಹಿರಂಗವಾಗಿ ವಿರೋಧಿಸಿದರಿಂದ ಅನೇಕ ಸಹಾಬಾಗಳು ಹಾಗೂ ಇತರರು ದಾರುಣವಾಗಿ ಕೊಲ್ಲಲ್ಪಟ್ಟರು. ಆಡಳಿತಗಾರರ ನ್ಯೂನತೆಗಳನ್ನು ಬಹಿರಂಗವಾಗಿ ದೂಷಿಸುವುದರಿಂದ ಬಹಳ ಜನರು ಅವರನ್ನು ದ್ವೇಷಿಸಲು ಹಾಗೂ ಅವರನ್ನು ಹತ್ಯೆಗೈಯಲು ಕಾರಣವಾಯಿತು.
ಇಯಾದ್ ಬಿನ್ ಗುನ್‍ಮ್ ಅಲ್-ಅಶ್‍ಅರಿಯ್ಯ್ (I) ರಿಂದ ವರದಿ, ಅಲ್ಲಾಹುವಿನ ಸಂದೇಶವಾಹಕರು (H) ಹೇಳಿದರು:
«مَنْ أَرَادَ أَنْ يَنْصَحَ لِسُلْطَانٍ بِأَمْرٍ، فَلَا يُبْدِ لَهُ عَلَانِيَةً، وَلَكِنْ لِيَأْخُذْ بِيَدِهِ، فَيَخْلُوَ بِهِ، فَإِنْ قَبِلَ مِنْهُ فَذَاكَ، وَإِلَّا كَانَ قَدْ أَدَّى الَّذِي عَلَيْهِ لَهُ»
“ಯಾರು ಆಡಳಿತಗಾರರಿಗೆ ಏನಾದರೊಂದು ಉಪದೇಶ ನೀಡಲು ಬಯಸಿದರೆ ಅದನ್ನು ಬಹಿರಂಗವಾಗಿ ಮಾಡದೆ ಆತನು ಅವರ ಕೈ ಹಿಡಿದು ಏಕಾಂತದಲ್ಲಿ (ರಹಸ್ಯವಾಗಿ) ಉಪದೇಶವನ್ನು ನೀಡಲಿ, ಅವರದನ್ನು ಸ್ವೀಕರಿಸಿದರೆ ಅದು ಒಳ್ಳೆಯದು. ಇನ್ನು ಅವರದನ್ನು ನಿರಾಕರಿಸಿದರೆ ಅವನಂತೂ ತನ್ನ ಜವಾಬ್ದಾರಿಯನ್ನು ನಿರ್ವಹಿಸಿರುವನು.” [ಮುಸ್ನದ್ ಅಹ್ಮದ್ : 3/403]
ನಮಗೂ ನಮ್ಮೆಲ್ಲಾ ಮುಸ್ಲಿಮ್ ಸಹೋದರರಿಗೂ ಎಲ್ಲಾ ಕೆಡುಕುಗಳಿಂದ ಕ್ಷೇಮ ಮತ್ತು ಸುರಕ್ಷತೆಗಾಗಿ ಅಲ್ಲಾಹುವಿನೊಂದಿಗೆ ನಾವು ಬೇಡುತ್ತೇವೆ.
ಖಂಡಿತವಾಗಿಯೂ ಅವನು ಎಲ್ಲವನ್ನು ಆಲಿಸುವವನೂ, ಪ್ರಾರ್ಥನೆಗೆ ಉತ್ತರ ನೀಡುವವನೂ ಆಗಿರುವನು. ಅಲ್ಲಾಹುವಿನ ಸಲಾತ್ ಮತ್ತು ಸಲಾಮ್ ನಮ್ಮೆಲ್ಲರ ಪ್ರವಾದಿಯಾದ ಮುಹಮ್ಮದ್ (H) ರವರ ಮೇಲೂ, ಅವರ ಕುಟುಂಬದ ಮೇಲೂ ಅವರ ಸಹಚರರ ಮೇಲೂ ಸದಾ ಇರಲಿ. [ಫತಾವಾ ಇಬ್ನ್ ಬಾಝ್ : 8 /211 – ಮೂಲ: alifta.gov.sa)
ಜನರಿಗೆ ಮಾರ್ಗದರ್ಶನ ನೀಡುವ ವೇಳೆ ವಿದ್ವಾಂಸರು ತಾಳುವ ಸ್ಪಷ್ಟ ನಿಲುವು ಹಾಗೂ ವಿಧಾನವನ್ನು ತಾವು ಗಮನಿಸಬಹುದು. ಅವರು ತಮ್ಮನ್ನು ಆಳುವ ಮುಸ್ಲಿಮ್ ಆಡಳಿತಗಾರರ ಹೆಸರನ್ನು ಕೆಟ್ಟದಾಗಿ ಉಲ್ಲೇಖಿಸುವುದಿಲ್ಲ ಅಥವಾ ಅವರನ್ನು ಸಾರ್ವಜನಿಕವಾಗಿ ಟೀಕಿಸುವುದಿಲ್ಲ. ಅವರ ಉಪದೇಶವು ಸಾಮಾನ್ಯವಾಗಿ ಎಲ್ಲಾ ಜನರಿಗೆ ಮತ್ತು ದೇಶದ ನಾಗರಿಕರಿಗೆ ಒಳಗೊಂಡಿರುತ್ತದೆ. ಏಕೆಂದರೆ ಅಲ್ಲಾಹು ಪ್ರತಿಯೊಬ್ಬ ವ್ಯಕ್ತಿಯನ್ನು ತನ್ನ ಸ್ವಂತ ಕಾರ್ಯಗಳು ಮತ್ತು ನಡವಳಿಕೆಗೆ ಹೊಣೆಗಾರನನ್ನಾಗಿ ಮಾಡಿರುವನು. ಅಲ್ಲಾಹು ಆಜ್ಞಾಪಿಸಿದಂತೆ ಪ್ರತಿಯೊಬ್ಬ ವ್ಯಕ್ತಿಯು ತನ್ನನ್ನು ತಾನು ಪಾಪಕೃತ್ಯಗಳಿಂದ ತಡೆಹಿಡಿಯಬಹುದಾಗಿದೆ.
ಹಿಜರಿ ವರ್ಷ 329ರಲ್ಲಿ ಮರಣ ಹೊಂದಿದ ಅಹ್ಲುಸ್ಸುನ್ನಃದ ಶ್ರೇಷ್ಠ ವಿದ್ವಾಂಸರಾದ ಇಮಾಮ್ ಅಲ್-ಬರ್‌ಬಹಾರಿಯ್ಯ್ (V) (ಅಲ್-ಹಸನ್ ಬಿನ್ ಅಲಿಯ್ಯ್ ಬಿನ್ ಖಲಫ್ ಅಲ್-ಬರ್‌ಬಹಾರಿಯ್ಯ್) ಹೇಳುತ್ತಾರೆ :
«وَإِذَا رَأَيْتَ الرَّجُلَ يَدْعُو عَلَى السُّلْطَانِ فَاعْلَمْ أَنَّهُ صَاحِبُ هَوًى، وَإِذَا رَأَيْتَ الرَّجُلَ يَدْعُو لِلسُّلْطَانِ بِالصَّلاَحِ فَاعْلَمْ أَنَّهُ صَاحِبُ سُنَّةٍ إِنْ شَاءَ اللهُ»
“ಓರ್ವನು ಆಡಳಿತಗಾರನ ವಿರುದ್ಧ ಪ್ರಾರ್ಥಿಸುವುದನ್ನು ನೀನು ಕಂಡರೆ, ನಿನಗೆ ತಿಳಿದಿರಲಿ! ಆತನೋರ್ವ ದೇಹೇಚ್ಚೆಯ ವ್ಯಕ್ತಿಯಾಗಿರುವನು (ನೂತನವಾದಿಯಾಗಿರುವನು) ಹಾಗೆಯೇ ಇನ್ನೋರ್ವನು ಆಡಳಿತಗಾರನ ಒಳಿತು ಮತ್ತು ಸುಧಾರಣೆಗಾಗಿ ಪ್ರಾರ್ಥಿಸುವುದನ್ನು ನೀನು ಕಂಡರೆ, ನಿನಗೆ ತಿಳಿದಿರಲಿ! (ಈ ವಿಚಾರದಲ್ಲಿ) ಆತನು ಸುನ್ನಃದ ಮಾರ್ಗದಲ್ಲಿರುವವನಾಗಿರುವನು. (ಸನ್ಮಾರ್ಗದಲ್ಲಿ ಮುನ್ನಡೆದ ಸಜ್ಜನ ಪೂರ್ವಿಕರ ಮಾರ್ಗವನ್ನು ಅನುಸರಿಸಿದವನಾಗಿರುವನು). ಇನ್‍ಶಾ ಅಲ್ಲಾಹ್.” [ಶರ್ಹ್ ಅಸ್ಸುನ್ನಃ : 127]
ಅನುವಾದ: ಅಬೂ ಹಮ್ಮಾದ್ ಸಲಾಹುದ್ದೀನ್