ಲಾ ಇಲಾಹ ಇಲ್ಲಲ್ಲಾಹ್ ಹಾಗೂ ಅದರ ಶರತ್ತುಗಳು ಮತ್ತು ಪುರಾವೆಗಳು -ಅಶ್ಶೈಖ್ ಮುಹಮ್ಮದ್ ಬಿನ್ ಝೈದ್ ಅಲ್-ಮದ್‍ಖಲೀ

ಲಾ ಇಲಾಹ ಇಲ್ಲಲ್ಲಾಹ್ ಹಾಗೂ ಅದರ ಶರತ್ತುಗಳು ಮತ್ತು ಪುರಾವೆಗಳು

ಲೇಖಕರು : ಅಶ್ಶೈಖ್ ಮುಹಮ್ಮದ್ ಬಿನ್ ಝೈದ್ ಅಲ್-ಮದ್‍ಖಲೀ (حَفِظَهُ اللَّهُ

ಈ ಪುಸ್ತಕದ PDF ಪ್ರತಿಯನ್ನು ಈ ಕೆಳಗಿನಿಂದ ಡೌನ್‍ಲೋಡ್ ಮಾಡಿಕೊಳ್ಳಿರಿ. 

w

ಪ್ರಶ್ನೆ: ಲಾ ಇಲಾಹ ಇಲ್ಲಲ್ಲಾಹ್ ಎಂಬುದರ ಅರ್ಥವೇನು? ಅದರ ಮೂಲಭೂತ ಸ್ತಂಭಗಳು ಹಾಗೂ ಶರತ್ತುಗಳೇನು? ತಾವು ಹೇಳುವ ಉತ್ತರಕ್ಕೆ ಪುರಾವೆಗಳನ್ನು ನೀಡಿರಿ.

ಅಶ್ಶೈಖ್ ಮುಹಮ್ಮದ್ ಬಿನ್ ಝೈದ್ ಅಲ್-ಮದ್‍ಖಲೀ (حَفِظَهُ اللَّهُ) ರವರು ಉತ್ತರಿಸುತ್ತಾರೆ: (ಲಾ ಇಲಾಹ ಇಲ್ಲಲ್ಲಾಹ್) ಎಂದರೆ, ಅಲ್ಲಾಹುವಿನ ಹೊರತು ಆರಾಧನೆಗೆ ನೈಜ ಹಕ್ಕುದಾರನು ಯಾರೂ/ಯಾವುದೂ ಇಲ್ಲ ಎಂದಾಗಿದೆ. ಅದಕ್ಕೆ ಎರಡು ಮೂಲಭೂತ ಸ್ತಂಭಗಳಿವೆ. ಅವುಗಳೆಂದರೆ:

1)
النَّفْيُ ಅನ್-ನಫ್‌ಯು -ಸಂಪೂರ್ಣ ನಿರಾಕರಣೆ ಮತ್ತು
2) الإِثْبَاتُ ಅಲ್-ಇಸ್‌ಬಾತ್ -ಖಚಿತವಾಗಿ ಧೃಡೀಕರಣ.

‘ಲಾ ಇಲಾಹ’ ಎಂಬ ವಚನವು ಅಲ್ಲಾಹುವಿನ ಹೊರತು ಆರಾಧಿಸಲ್ಪಡುವ ಸರ್ವವನ್ನೂ ಸಂಪೂರ್ಣವಾಗಿ ನಿರಾಕರಣೆ ಮಾಡುವುದಾಗಿದೆ. ‘ಇಲ್ಲಲ್ಲಾಹ್’ ಎಂಬ ವಚನವು ಅಲ್ಲಾಹುವಿಗೆ ಏಕಮಾತ್ರವಾಗಿ ಯಾವುದೇ ಸಹಭಾಗಿಗಳಿಲ್ಲದೆ ಆರಾಧನೆಯನ್ನು ಅರ್ಪಿಸುವುದನ್ನು ಖಚಿತವಾಗಿ ಧೃಡೀಕರಿಸುವುದಾಗಿದೆ. ಮಹೋನ್ನತನಾದ ಅಲ್ಲಾಹು ಹೇಳಿದನು:

﴿فَمَن يَكْفُرْ بِالطَّاغُوتِ وَيُؤْمِن بِاللَّهِ فَقَدِ اسْتَمْسَكَ بِالْعُرْوَةِ الْوُثْقَىٰ لَا انفِصَامَ لَهَا ۗ وَاللَّهُ سَمِيعٌ عَلِيمٌ ‎٢٥٦

“ಯಾರು ತಾಗೂತ್ಅನ್ನು (ಮಿಥ್ಯಾರಾಧ್ಯರನ್ನು) ಸಂಪೂರ್ಣವಾಗಿ ನಿರಾಕರಿಸುವನೋ ಮತ್ತು ಅಲ್ಲಾಹುವಿನಲ್ಲಿ ಖಚಿತವಾಗಿ ವಿಶ್ವಾಸವಿಡುವನೋ, ಅವನು ಮುರಿದುಹೋಗದ (ಅತ್ಯಂತ ಸುಭದ್ರವಾದ) ಪಾಶವೊಂದನ್ನು ಹಿಡಿದುಕೊಂಡಿರುವನು. ಅಲ್ಲಾಹು ಸರ್ವವನ್ನು ಆಲಿಸುವವನೂ, ಸರ್ವ-ಅರಿವುಳ್ಳವನೂ ಆಗಿರುವನು.” (ಸೂರಃ ಅಲ್-ಬಕರಃ 2:256)


(ಲಾ ಇಲಾಹ ಇಲ್ಲಲ್ಲಾಹ್) ಅದರ ಶರತ್ತುಗಳು ಏಳು ಆಗಿವೆ, ಅವುಗಳೆಂದರೆ:

1. العِلْمُ ಅಲ್-ಇಲ್ಮ್ (ಅರಿವು): ಅಂದರೆ ಅದರ ಅರ್ಥದ ಕುರಿತು ಹಾಗೂ ಆ (ಲಾ ಇಲಾಹ ಇಲ್ಲಲ್ಲಾಹ್) ಸಾಕ್ಷ್ಯವಚನವು ಯಾವುದನ್ನು ನಿರಾಕರಿಸುವುದೋ ಮತ್ತು ಧೃಡೀಕರಿಸುವುದೋ ಅದರ ಕುರಿತು ಅರಿವು ಹೊಂದಿರುವುದು. ಮಹೋನ್ನತನಾದ ಅಲ್ಲಾಹು ಹೇಳಿದನು :

﴿إِلَّا مَن شَهِدَ بِالْحَقِّ وَهُمْ يَعْلَمُونَ ‎٨٦﴾‏

“ಅರಿತುಕೊಂಡು ಯಾರು ಸತ್ಯಕ್ಕೆ (ಅರ್ಥಾತ್ ಅಲ್ಲಾಹುವಿನ ಏಕತ್ವ, ಪ್ರವಾದಿತ್ವ ಹಾಗೂ ಅವನ ಸಂದೇಶವಾಹಕರುಗಳು ಯಾವ ಸಂದೇಶಗಳನ್ನು ತಂದಿರುವರೋ ಅವೆಲ್ಲವನ್ನೂ ಸತ್ಯವೆಂದು ತಮ್ಮ ನಾಲಗೆಯಲ್ಲಿ ಉಚ್ಛರಿಸಿ, ಹೃದಯದಲ್ಲಿ ಅಂಗೀಕರಿಸಿ ಅದರ ಅರಿವನ್ನು ಹೊಂದಿರುತ್ತಾ) ಸಾಕ್ಷ ವಹಿಸುವರೋ ಅವರ ಹೊರತು.” (ಸೂರಃ ಅಝ್ಝುಖ್‌ರುಫ್ 43:86)


ಅರ್ಥಾತ್, ಅವರ ನಾಲಿಗೆಗಳು ಯಾವುದಕ್ಕೆ ಸಾಕ್ಷ್ಯ ವಹಿಸಿದೆಯೋ ಅದರ ಕುರಿತು ಅವರು ತಮ್ಮ ಹೃದಯದಿಂದ ಅರಿವು ಹೊಂದಿರುವರು.

2. اليَقِينُ ಅಲ್-ಯಕೀನ್ (ದೃಢವಿಶ್ವಾಸ): (ದೃಢವಿಶ್ವಾಸವನ್ನು ಹೊಂದುವುದು -ಇದು ಸಂಶಯಗಳನ್ನು ಹೋಗಲಾಡಿಸುವುದು ಅಥವಾ ಇಲ್ಲದಾಗಿಸುವುದು). ಯಾವುದನ್ನು ಅದು (ಲಾ ಇಲಾಹ ಇಲ್ಲಲ್ಲಾಹ್) ಸೂಚಿಸುವುದೋ ಅದರ ಕುರಿತು ಸಾಕ್ಷ್ಯವಹಿಸುವವನು -ಯಾವುದೇ ಸಂಶಯಗಳಿಲ್ಲದೇ- ಖಚಿತತೆಯನ್ನು ಹೊಂದಿರಬೇಕಾಗಿದೆ. ಯಾಕೆಂದರೆ ಖಂಡಿತವಾಗಿಯೂ, ಒಂದುವೇಳೆ ಅದನ್ನು ಹೇಳುವವನು ಯಾವುದನ್ನು ಅದು ಸೂಚಿಸುವುದೋ ಅದರ ಕುರಿತು ಸಂಶಯಪಡುವುದಾದರೆ, ಅದು ಅವನಿಗೆ ಯಾವುದೇ ಉಪಕಾರ ನೀಡದು. ಮಹೋನ್ನತನಾದ ಅಲ್ಲಾಹು ಹೇಳಿದನು :

﴿إِنَّمَا الْمُؤْمِنُونَ الَّذِينَ آمَنُوا بِاللَّهِ وَرَسُولِهِ ثُمَّ لَمْ يَرْتَابُوا﴾‏

“ಖಂಡಿತವಾಗಿಯೂ ಸತ್ಯವಿಶ್ವಾಸಿಗಳು ಅವರೇ, -ಯಾರೆಂದರೆ- ಅಲ್ಲಾಹುವಿನಲ್ಲಿ ಮತ್ತು ಅವನ ಸಂದೇಶವಾಹಕರಲ್ಲಿ ಖಚಿತವಾಗಿ ವಿಶ್ವಾಸವಿಟ್ಟು, ಅದರಲ್ಲಿ ಯಾವುದೇ ಸಂಶಯಪಡದವರು.” (ಸೂರಃ ಅಲ್-ಹುಜರಾತ್ 49:15)


3.
القَبُولُ ಅಲ್-ಕಬೂಲ್ (ಸಂಪೂರ್ಣ ಅಂಗೀಕಾರ): ಇದು ತಿರಸ್ಕಾರಕ್ಕೆ ವಿರುದ್ಧವಾಗಿದೆ. ಅಲ್ಲಾಹುವನ್ನು ಏಕಮಾತ್ರವಾಗಿ ಆರಾಧಿಸುವುದು ಮತ್ತು ಅವನ ಹೊರತು ಆರಾಧಿಸಲ್ಪಡುವ ಸರ್ವವನ್ನೂ ತ್ಯಜಿಸುವುದು – ಎಂಬ ಈ ಸಾಕ್ಷ್ಯವಚನವು ಅಗತ್ಯಗೊಳಿಸುವುದನ್ನು ಸಂಪೂರ್ಣವಾಗಿ ಅಂಗೀಕರಿಸುವುದು ಕಡ್ಡಾಯವಾದುದಾಗಿದೆ. ಯಾರು ಇದನ್ನು ಹೇಳಿ, ಸ್ವೀಕಾರವನ್ನು ಮಾಡದೆ, ಇದರಲ್ಲಿ ದೃಢವಾಗಿರುವುದಿಲ್ಲವೋ, -ಅವನು ಯಾರ ಕುರಿತು ಅಲ್ಲಾಹು (ಈ ಕೆಳಗಿನ ಆಯತ್‌ನಲ್ಲಿ) ಹೇಳಿರುವನೋ ಅವರ ಪೈಕಿ ಸೇರಿದವನಾಗಿರುವನು:

﴿إِنَّهُمْ كَانُوا إِذَا قِيلَ لَهُمْ لَا إِلَٰهَ إِلَّا اللَّهُ يَسْتَكْبِرُونَ ‎٣٥‏ وَيَقُولُونَ أَئِنَّا لَتَارِكُو آلِهَتِنَا لِشَاعِرٍ مَّجْنُونٍ ‎٣٦﴾‏

“ಖಂಡಿತವಾಗಿಯೂ, ಅವರೊಂದಿಗೆ ‘ಲಾ ಇಲಾಹ ಇಲ್ಲಲ್ಲಾಹ್ (ಅರ್ಥಾತ್ ಅಲ್ಲಾಹುವಿನ ಹೊರತು ಆರಾಧನೆಗೆ ನೈಜ ಹಕ್ಕುದಾನು ಯಾರೂ ಇಲ್ಲ) ಎಂದು ಹೇಳಲಾದರೆ, ಅವರು ಅಹಂಕಾರ ಪಡುತ್ತಿದ್ದರು (ಅದನ್ನು ಸ್ವೀಕಾರ ಮಾಡದೆ ತಿರಸ್ಕರಿಸುತ್ತಿದ್ದರು). ಮತ್ತು “ಹುಚ್ಚನಾದ ಓರ್ವ ಕವಿಗಾಗಿ ನಾವು ನಮ್ಮ (ಮಿಥ್ಯ) ಆರಾಧ್ಯರುಗಳನ್ನು ಬಿಟ್ಟುಬಿಡಬೇಕೇ? ಎಂದು ಹೇಳುತ್ತಿದ್ದರು.” (ಸೂರಃ ಅಸ್ಸಾಫಾತ್ 37:35-36)


4.
الاِنْقِيَادُ ಅಲ್-ಇನ್‌ಕಿಯಾದ್ (ಸಂಪೂರ್ಣ ಶರಣಾಗತಿ ಅಥವಾ ವಿಧೇಯತೆ): ಇದು ತೊರೆಯುವಿಕೆ ಅಥವಾ ತ್ಯಜಿಸುವಿಕೆಗೆ ವಿರುದ್ಧವಾಗಿದೆ.
ಈ ಸಾಕ್ಷ್ಯವಚನವು ಯಾವುದನ್ನು ಸೂಚಿಸುವುದೋ ಅದಕ್ಕೆ ಸಂಪೂರ್ಣವಾಗಿ ಶರಣಾಗುವುದು (ವಿಧೇಯತೆ ತೋರುವುದು) ಕಡ್ಡಾಯವಾಗಿದೆ. ಮಹೋನ್ನತನಾದ ಅಲ್ಲಾಹು ಹೇಳಿದನು:

﴿وَمَن يُسْلِمْ وَجْهَهُ إِلَى اللَّهِ وَهُوَ مُحْسِنٌ فَقَدِ اسْتَمْسَكَ بِالْعُرْوَةِ الْوُثْقَىٰ﴾‏

“ಸತ್ಕರ್ಮವನ್ನು ಮಾಡುವವನಾಗಿದ್ದುಕೊಂಡು ತನ್ನ ಮುಖವನ್ನು (ಸ್ವತಃ ತನ್ನನ್ನು) ಅಲ್ಲಾಹುವಿಗೆ ಶರಣಾಗಿಸುವನೋ (ಅರ್ಥಾತ್ – ಅಲ್ಲಾಹುವಿಗಾಗಿ ನಿಷ್ಕಳಂಕತೆಯಿಂದ ಸತ್ಕಾರ್ಯವನ್ನೆಸಗಿ ಅವನ ಆಜ್ಞೆಗಳಿಗೆ ವಿಧೇಯನಾಗಿ ಅನುಸರಿಸುವನೋ) ಅವನು ಅತ್ಯಂತ ಸುಭದ್ರವಾದ ಪಾಶವೊಂದನ್ನು ಬಿಗಿಹಿಡಿದಿರುವನು.” (ಸೂರಃ ಅಲ್-ಲುಕ್‌ಮಾನ್ 31:22)


ಅತ್ಯಂತ ಸುಭದ್ರವಾದ ಪಾಶವೆಂದರೆ: “ಅಲ್ಲಾಹುವಿನ ಹೊರತು ಆರಾಧನೆಗೆ ನೈಜ ಹಕ್ಕುದಾರನು ಯಾರೂ ಇಲ್ಲ” ಎಂಬ ಸಾಕ್ಷ್ಯವಚನವಾಗಿದೆ. ಮತ್ತು ‘ಶರಣಾಗತಿ’ ಎಂಬ ಪದದ ಅರ್ಥವು ಅವನು ಅಲ್ಲಾಹುವನ್ನು ನಿಷ್ಕಕಳಂಕದೊಂದಿಗೆ (ಪರಿಪೂರ್ಣ ಪ್ರಾಮಾಣಿಕತೆಯಿಂದ) ಅನುಸರಿಸುವನು ಎಂದಾಗಿದೆ.

5. الصِّدْقُ ಅಸ್ಸಿದ್‌ಕ್ (ಸತ್ಯಸಂಧತೆ): ಇದು ಸುಳ್ಳು ನುಡಿಗೆ ವಿರುಧ್ಧವಾಗಿದೆ. “ಅಲ್ಲಾಹುವಿನ ಹೊರತು ಆರಾಧನೆಗೆ ನೈಜ ಹಕ್ಕುದಾರನು ಯಾರೂ ಇಲ್ಲ” ಎಂದು ಓರ್ವನು ತನ್ನ ಹೃದಯಾಂತರಾಳದಿಂದ ಸತ್ಯಸಂಧನಾಗಿ ಹೇಳುವುದು ಅನಿವಾರ್ಯವಾಗಿದೆ. ಅವನೊಂದುವೇಳೆ ಅದನ್ನು (ಸಾಕ್ಷ್ಯವಚನವನ್ನು) ತನ್ನ ನಾಲಗೆಯಲ್ಲಿ ಉಚ್ಚರಿಸಿದರೂ ತನ್ನ ಹೃದಯದಲ್ಲಿ ಅದರ ( ಅರ್ಥಾತ್ – ಸಾಕ್ಷ್ಯವಚನದಲ್ಲಿ) ವಿಶ್ವಾಸವನ್ನು ಹೊಂದಿಲ್ಲವಾದರೆ ಅವನೋರ್ವ ಕಪಟವಿಶ್ವಾಸಿ ಹಾಗೂ ಸುಳ್ಳುಗಾರನಾಗಿರುವನು. ಮಹೋನ್ನತನಾದ ಅಲ್ಲಾಹು ಹೇಳಿದನು:

﴿وَمِنَ النَّاسِ مَن يَقُولُ آمَنَّا بِاللَّهِ وَبِالْيَوْمِ الْآخِرِ وَمَا هُم بِمُؤْمِنِينَ ٨‏ يُخَادِعُونَ اللَّهَ وَالَّذِينَ آمَنُوا وَمَا يَخْدَعُونَ إِلَّا أَنفُسَهُمْ وَمَا يَشْعُرُونَ ‎٩

“ಜನರ ಪೈಕಿಯಿರುವ ಕೆಲವರು (ಅರ್ಥಾತ್ ಕಪಟವಿಶ್ವಾಸಿಗಳು) ಹೇಳುತ್ತಾರೆ : ನಾವು ಅಲ್ಲಾಹುವಿನ ಮೇಲೆ ಮತ್ತು ಅಂತ್ಯದಿನದ ಮೇಲೆ ವಿಶ್ವಾಸವಿಟ್ಟಿರುವೆವು. ಆದರೆ (ವಾಸ್ತವವಾಗಿ) ಅವರು ಸತ್ಯವಿಶ್ವಾಸಿಗಳಲ್ಲ. ಅವರು (ತಮ್ಮ ಕಪಟವಿಶ್ವಾಸದ ಮೂಲಕ) ಅಲ್ಲಾಹುನ್ನು ಹಾಗೂ ಸತ್ಯವಿಶ್ವಾಸಿಗಳನ್ನು ವಂಚಿಸಬಹುದೆಂದು ಭಾವಿಸಿರುವರು. ಆದರೆ ಅವರು ವಂಚಿಸುತ್ತಿರುವುದು ಸ್ವತಃ ತಮ್ಮನ್ನೇ ಆಗಿದೆ, ಅವರದನ್ನು ಗ್ರಹಿಸುವುದಿಲ್ಲ.” (ಸೂರಃ ಅಲ್-ಬಕರಃ 2:8-9)


6.
الإِخْلَاصُ ಅಲ್-ಇಖ್‌ಲಾಸ್ (ನಿಷ್ಕಳಂಕತೆ ಮತ್ತು ಪ್ರಾಮಾಣಿಕತೆ): ಇದು ಶಿರ್ಕ್‌ಗೆ (ಅಲ್ಲಾಹುವಿನೊಂದಿಗೆ ಇತರರನ್ನು ಸಹಭಾಗಿಗಳನ್ನಾಗಿ ಮಾಡುವುದಕ್ಕೆ) ವಿರುದ್ಧವಾಗಿದೆ. ಇದು ಶಿರ್ಕ್‌ನ ಸರ್ವ ಕಳಂಕಗಳಿಂದಲೂ ಕರ್ಮಗಳನ್ನು ಶುದ್ಧೀಕರಿಸುವುದಾಗಿದೆ.

ಅಂದರೆ ಓರ್ವನು ಈ ವಚನವನ್ನು ಉಚ್ಚರಿಸುವುದು ಯಾವುದೇ ಐಹಿಕ ಲಾಭಗಳಿಸುವುದಕ್ಕಾಗಿ ಆಗಬಾರದು, ಅಥವಾ (ಜನರ ಮಧ್ಯೆ) ತೋರ್ಪಡಿಸುವಿಕೆಗಾಗಿಯೋ ಖ್ಯಾತಿಯನ್ನು ಗಳಿಸುವುದಕ್ಕಾಗಿಯೋ ಅವನು ಉದ್ದೇಶವನ್ನು ಹೊಂದಬಾರದಾಗಿದೆ. ಮಹೋನ್ನತನಾದ ಅಲ್ಲಾಹು ಹೇಳಿದನು:

﴿وَمَا أُمِرُوا إِلَّا لِيَعْبُدُوا اللَّهَ مُخْلِصِينَ لَهُ الدِّينَ حُنَفَاءَ

“(ಅವರ ಗ್ರಂಥಗಳಲ್ಲಿ) ಅವರೊಡನೆ ಅಲ್ಲಾಹುವನ್ನು (ಏಕಮಾತ್ರವಾಗಿ) -ಶರಣಾಗತಿಯನ್ನು ಸಂಪೂರ್ಣವಾಗಿ ಅವನಿಗೆ ಮೀಸಲಿಟ್ಟು (ಅವನನ್ನು ತೌಹೀದ್‌ನೊಂದಿಗೆ)- ಆರಾಧಿಸುವಂತೆಯೇ ಹೊರತು ಇನ್ನೇನನ್ನೂ ಅವರಿಗೆ ಆದೇಶಿಸಲಾಗಿಲ್ಲ.” (ಸೂರಃ ಅಲ್-ಬಯ್ಯಿನಃ 98:5)


ಸಹೀಹ್ಆದ ಹದೀಸ್‌ನಲ್ಲಿ, ಉತ್‌ಬಾನ್ (I) ರವರು ವರದಿಮಾಡುತ್ತಾರೆ, ಪ್ರವಾದಿ (H) ರವರು ಹೇಳಿದರು:

«إِنَّ اللَّهَ قَدْ حَرَّمَ عَلَى النَّارِ مَنْ قَالَ لاَ إِلَهَ إِلاَّ اللَّهُ، يَبْتَغِي بِذَلِكَ وَجْهَ اللَّهِ عَزَّ وَجَلَّ»

“ಯಾರು ಅಲ್ಲಾಹುವಿನ ಮುಖವನ್ನು ಅರಸಿಕೊಂಡು “ಅಲ್ಲಾಹುವಿನ ಹೊರತು ಆರಾಧನೆಗೆ ನೈಜ ಹಕ್ಕುದಾರನು ಯಾರೂ ಇಲ್ಲ” ಎಂದು (ಅದನ್ನು ಸಂಪೂರ್ಣವಾಗಿ ಅಂಗೀಕಾರದೊಂದಿಗೆ) ಹೇಳುತ್ತಾನೋ, ಖಂಡಿತವಾಗಿಯೂ ಅಲ್ಲಾಹು ಅವನಿಗೆ ನರಕಾಗ್ನಿಯನ್ನು ನಿಷಿದ್ಧಗೊಳಿಸಿರುವನು.” (ಸಹೀಹ್ ಅಲ್-ಬುಖಾರಿ)


7.
المَحَبَّةُ ಅಲ್-ಮಹಬ್ಬಃ (ಪ್ರೀತಿ): ಇದು ದ್ವೇಷಕ್ಕೆ ವಿರುಧ್ಧವಾಗಿದೆ. ಹಾಗಾಗಿ, ಈ (ಶಹಾದತ್‌ನ) ವಚನವು ಯಾವುದನ್ನು ಸೂಚಿಸುವುದೋ ಅದನ್ನು ಪ್ರೀತಿಸುವುದು (ಅರ್ಥಾತ್ – ಅಲ್ಲಾಹು, ಅವನ ರಸೂಲ್ (H) ಇಸ್ಲಾಮ್ ದೀನ್ ಹಾಗೂ ಅಲ್ಲಾಹುವಿನ ಆಜ್ಞೆ ಮತ್ತು ನಿಷೇಧಗಳನ್ನು ಪಾಲಿಸುವ ಮುಸ್ಲಿಮರನ್ನು ಪ್ರೀತಿಸುವುದು) ಓರ್ವನ ಮೇಲೆ ಕಡ್ಡಾಯವಾದುದಾಗಿದೆ. ಅದು ಏನನ್ನು ಸೂಚಿಸುವುದೋ ಅದರಂತೆ ಕರ್ಮವೆಸಗುವ ಜನರನ್ನು ಅವನು ಪ್ರೀತಿಸಬೇಕಾಗಿದೆ. ಮಹೋನ್ನತನಾದ ಅಲ್ಲಾಹು ಹೇಳಿದನು:

﴿وَالَّذِينَ آمَنُوا أَشَدُّ حُبًّا لِّلَّهِ ۗ

“ಆದರೆ ಯಾರು ಅಲ್ಲಾಹುವಿನ ಮೇಲೆ ಖಚಿತವಾಗಿ ವಿಶ್ವಾಸವಿಡುತ್ತಾರೋ ಅವರು ಅಲ್ಲಾಹುವನ್ನು (ಎಲ್ಲಕ್ಕಿಂತಲೂ) ಹೆಚ್ಚಾಗಿ ಪ್ರೀತಿಸುತ್ತಾರೆ.” (ಸೂರಃ ಅಲ್-ಬಕರಃ 2:165)


ಹಾಗಾಗಿ ‘ಲಾ ಇಲಾಹ ಇಲ್ಲಲ್ಲಾಹ್’ ಅನ್ನು ಅಂಗೀಕರಿಸುವ ಜನರು ಅಲ್ಲಾಹುವನ್ನು ನಿಷ್ಕಳಂಕವಾಗಿ ಪ್ರೀತಿಸುತ್ತಾರೆ.

ಕೆಲವು ಉಲಮಾಗಳು ಎಂಟನೆಯದೊಂದು ಶರತ್ತನ್ನು ಸೇರಿಸಿದ್ದಾರೆ, ಅದೇನೆಂದರೆ:

8. الكُفْرُ ಅಲ್-ಕುಫ್ರ್ (ಅವಿಶ್ವಾಸ): ಅಂದರೆ ಅಲ್ಲಾಹುವಿನ ಹೊರತು ಆರಾಧಿಸಲ್ಪಡುವ (ಸರ್ವ) ಮಿಥ್ಯಾರಾಧ್ಯರುಗಳನ್ನು ಸಂಪೂರ್ಣವಾಗಿ ತಿರಸ್ಕರಿಸಬೇಕಾಗಿದೆ (ಅರ್ಥಾತ್ ಅವಿಶ್ವಾಸವಿಡಬೇಕಾಗಿದೆ ). ಮಹೋನ್ನತನಾದ ಅಲ್ಲಾಹು ಹೇಳಿದನು:

﴿فَمَن يَكْفُرْ بِالطَّاغُوتِ وَيُؤْمِن بِاللَّهِ فَقَدِ اسْتَمْسَكَ بِالْعُرْوَةِ الْوُثْقَىٰ لَا انفِصَامَ لَهَا ۗ وَاللَّهُ سَمِيعٌ عَلِيمٌ ٢٥٦﴾‏

“ಯಾರು ತಾಗೂತ್ಅನ್ನು (ಮಿಥ್ಯಾರಾಧ್ಯರನ್ನು) ಸಂಪೂರ್ಣವಾಗಿ ನಿರಾಕರಿಸುವನೋ ಮತ್ತು ಅಲ್ಲಾಹುವಿನಲ್ಲಿ ಖಚಿತವಾಗಿ ವಿಶ್ವಾಸವಿಡುವನೋ, ಅವನು ಮುರಿದುಹೋಗದ (ಅತ್ಯಂತ ಸುಭದ್ರವಾದ) ಪಾಶವೊಂದನ್ನು ಹಿಡಿದುಕೊಂಡಿರುವನು. ಅಲ್ಲಾಹು ಸರ್ವವನ್ನು ಆಲಿಸುವವನೂ, ಸರ್ವ-ಅರಿವುಳ್ಳವನೂ ಆಗಿರುವನು.” (ಸೂರಃ ಅಲ್-ಬಕರಃ 2:256)


ಈ (ಶಹಾದತ್) ವಚನದ ಸಾಕ್ಷಾತ್ಕಾರವೇನೆಂದರೆ ಓರ್ವನು ಅಲ್ಲಾಹುವಿನ ಹೊರತು ಏನಲ್ಲಾ ಆರಾಧಿಸಲ್ಪಡುವುದೋ ಅವುಗಳೆಲ್ಲವನ್ನೂ ಎಲ್ಲಾ ವಿಧದಲ್ಲೂ ಸಂಪೂರ್ಣವಾಗಿ ನಿರಾಕರಿಸಬೇಕಾಗಿದೆ. ಅದರಂತೆಯೇ, ಅಲ್ಲಾಹುವನ್ನು ಏಕಮಾತ್ರವಾಗಿ -(ಅವನಿಗೆ) ಯಾವುದೇ ಸಹಭಾಗಿಗಳನ್ನು ಮಾಡದೆ- ಆರಾಧಿಸಬೇಕಾಗಿದೆ.

ಈ ವಚನದ ಮೂಲಕ (ಓರ್ವನ ಮೇಲಿರುವ) ಹೊಣೆಗಾರಿಕೆಯೇನೆಂದರೆ: ಓರ್ವನು (ಅಲ್ಲಾಹುವಿನ ಎಲ್ಲಾ) ಆಜ್ಞೆಗಳನ್ನು ಪಾಲಿಸುವುದಾಗಿದೆ ಹಾಗೂ (ಅಲ್ಲಾಹು ನಿರ್ದೇಶಿಸಿದ ಎಲ್ಲಾ) ನಿಷೇಧಿತ ಕಾರ್ಯಗಳಿಂದ ದೂರವುಳಿಯುವುದಾಗಿದೆ.

(ಮೂಲ : ಇಆನತುಲ್ ಖುತಬಾಇ ವಲ್-ಅಇಮ್ಮಃ ಬಿ-ಫಿಖ್‍ಹಿ ಇಮಾಮತಿಲ್ ಉಮ್ಮಃ, ಪ್ರಶ್ನೆ ಸಂಖ್ಯೆ:2)
ಅನುವಾದ : ಅಬೂ ಹಮ್ಮಾದ್

ಹೆಚ್ಚಿನ ಓದಿಗಾಗಿ : 

ಮರಣಹೊಂದಿದವರೊಡನೆ ಬೇಡುವುದು ಮತ್ತು ಅವರೊಂದಿಗೆ ಸಹಾಯ ಯಾಚಿಸುವುದರ ವಿಧಿಯೇನು? -ಅಲ್-ಇಮಾಮ್ ಇಬ್ನ್ ಬಾಝ್ (V) ಹಿರಿಯ ವಿದ್ವಾಂಸರು, ಸೌದಿ ಅರೇಬಿಯಾ.

ಅಲ್ಲಾಹುವಿನ ಹೊರತು ಇತರರಿಗೆ ಬಲಿಯರ್ಪಿಸುವುದು ಶಿರ್ಕ್ಆಗಿದೆ -ಅಲ್-ಇಮಾಮ್ ಇಬ್ನ್ ಬಾಝ್ (V) ಹಿರಿಯ ವಿದ್ವಾಂಸರು, ಸೌದಿ ಅರೇಬಿಯಾ.

ತೌಹೀದ್‍ನ ವಿಧಗಳಾವುವು? ಹಾಗೂ ಅವುಗಳ ಅರ್ಥವಿವರಣೆಯೇನು? -ಹಿರಿಯ ಉಲಮಾಗಳ ಫತ್ವ ಸಮಿತಿ, ಸೌದಿ ಅರೇಬಿಯಾ