ಉಪವಾಸವೆಂಬುದು ಕೇವಲ ಆಹಾರ ಮತ್ತು ಪಾನೀಯಗಳನ್ನು ತೊರೆಯುವುದು ಮಾತ್ರವೇ?

w

Play Video
Play Video

ಸೌದಿ ಅರೇಬಿಯಾದ ಹಿರಿಯ ವಿದ್ವಾಂಸರಾದ ಅಶ್ಶೈಖ್ ಸಾಲಿಹ್ ಅಲ್ ಫೌಝಾನ್ (حَفِظَهُ اللَّهُ) ಹೇಳುತ್ತಾರೆ :

ಇಂದಿನ ಈ ಕಾಲಾವಧಿಯಲ್ಲಿ ರಮದಾನ್ ತಿಂಗಳು ಸಮೀಪಿಸಿದರೆ, ಖಂಡಿತವಾಗಿಯೂ ಶೈತಾನನ ಸೈನ್ಯವು ಈ ರಮದಾನ್ ತಿಂಗಳಿನಿಂದ (ಸದುಪಯೋಗ ಪಡೆದುಕೊಳ್ಳುವುದರಿಂದ) ಜನರ ಮನ ತಿರುಗಿಸುವ ಆಕರ್ಷಕ (ಟಿವಿ) ಕಾರ್ಯಕ್ರಮಗಳನ್ನು ಮುಂದಿಡುತ್ತಾರೆ. ಅವುಗಳೆಡೆಗೆ ಜನರ ದೃಷ್ಟಿ ಮತ್ತು ಆಲಿಸುವಿಕೆಯನ್ನು ಸೆಳೆದುಕೊಳ್ಳುವ ಅನೈತಿಕ ಮತ್ತು ಅಪಖ್ಯಾತಿಕರವಾದ ಚಿತ್ರಗಳನ್ನು, ಹಾಸ್ಯ ಚಿತ್ರ ಮತ್ತು ಧಾರವಾಹಿಗಳನ್ನು ಹಾಗೂ (ಜನರನ್ನು ದಾರಿಗೆಡಿಸುವ ಇನ್ನಿತರ) ಕಾರ್ಯಕ್ರಮಗಳನ್ನು ರೂಪಿಸುತ್ತಾರೆ. (ಇವೆಲ್ಲಾ ಮಾಡಿಯೂ) ನಾವು ಉಪವಾಸಿಗರೆಂದು ಅವರು ಹೇಳಿಕೊಳ್ಳುತ್ತಾರೆ!

ಹೌದು! ಅವರು ಕೇವಲ ಆಹಾರ ಮತ್ತು ಪಾನೀಯಗಳನ್ನು ತೊರೆದ ಉಪವಾಸಿಗರೇ ಹೊರತು ಅಲ್ಲಾಹು ನಿಷಿದ್ಧಗೊಳಿಸಿದ (ಹರಾಮ್‍ಗೊಳಿಸಿದ ಕೆಟ್ಟ) ಕಾರ್ಯಗಳನ್ನು ತೊರೆದ (ನೈಜ) ಉಪವಾಸಿಗರಲ್ಲ!!. ನಿಷಿದ್ಧಗೊಳಿಸಿದ ಕಾರ್ಯಗಳನ್ನು ತೊರೆಯದೆ ಕೇವಲ ಸಮ್ಮತಾರ್ಹವಾದ ಕಾರ್ಯಗಳನ್ನು (ಆಹಾರ ಮತ್ತು ಪಾನೀಯಗಳನ್ನು) ತೊರೆದ ಮಾತ್ರಕ್ಕೆ ಅಲ್ಲಾಹುವಿನೆಡೆಗಿರುವ ಸಾಮಿಪ್ಯತೆಯು ಪರಿಪೂರ್ಣವಾಗುವುದಿಲ್ಲ. ಆದ್ದರಿಂದ ಈ ಎಲ್ಲಾ ಕೆಟ್ಟ ಕಾರ್ಯಗಳಿಂದ ತನ್ನ ಉಪವಾಸವನ್ನು ಕಾಪಾಡಿಕೊಳ್ಳುವುದು (ಪ್ರತಿಯೋರ್ವ) ಮುಸ್ಲಿಮನ ಮೇಲೆ ಕಡ್ಡಾಯವಾಗಿದೆ.

ಅಲ್ಲಾಹು ನಿಷಿದ್ಧಗೊಳಿಸಿದ ಎಲ್ಲಾ ಕೆಟ್ಟ ಕಾರ್ಯಗಳಿಂದ ತನ್ನ ಕಣ್ಣು, ಕಿವಿ ಮತ್ತು ನಾಲಗೆಯನ್ನು ಕಾಪಾಡಿಕೊಳ್ಳಬೇಕು. (ಇವುಗಳನ್ನು ಮಾಡಿದವನು) ಅವನೇ ನೈಜ ಉಪವಾಸಿಗನು. ಆದರೆ ಯಾರಾದರೂ ಕೆಟ್ಟ ಮತ್ತು ಅಶ್ಲೀಲ ಮಾತುಗಳನ್ನಾಡಲು ತನ್ನ ನಾಲಗೆಯನ್ನು ಹರಿಬಿಟ್ಟರೆ ಮತ್ತು ಹರಾಮ್‍ನೆಡೆಗೆ ತನ್ನ ದೃಷ್ಟಿ ಹಾಯಿಸುವುದಾದರೆ ಹಾಗೂ ಹರಾಮನ್ನು ಆಲಿಸುವುದಾದರೆ ಅಂತಹವನು ತನ್ನ ಆಹಾರ ಮತ್ತು ದೇಹದ ಬಯಕೆಯನ್ನು ತೊರೆದರೂ ಅವನಿಂದ (ಅವನ ಉಪವಾಸವನ್ನು) ಅಲ್ಲಾಹು ಸ್ವೀಕರಿಸುವುದಿಲ್ಲ.
ಉಪವಾಸವೆಂಬುದು ಕೇವಲ ಆಹಾರ ಮತ್ತು ಪಾನೀಯಗಳನ್ನು ಮಾತ್ರ ತೊರೆಯುವುದಲ್ಲ ಅವೆಲ್ಲವುಗಳಿಗಿಂತ ಮೊದಲು ಅಲ್ಲಾಹು ನಿಷಿದ್ಧಗೊಳಿಸಿದ ಕಾರ್ಯಗಳನ್ನು ತೊರೆಯುವುದಾಗಿದೆ. ಆದ್ದರಿಂದ ತನ್ನ ನಾಲಗೆ, ಕಿವಿ, ಕಣ್ಣು, ಕೈ, ಕಾಲು ಹಾಗೂ ದೇಹದ ಎಲ್ಲಾ ಅಂಗಗಳನ್ನು ಅಲ್ಲಾಹು ನಿಷಿದ್ಧಗೊಳಿಸಿದ ಕಾರ್ಯಗಳಿಂದ ರಕ್ಷಿಸಿಕೊಳ್ಳುವುದು ಪ್ರತಿಯೊಬ್ಬ ಮುಸ್ಲಿಮನ ಮೇಲೆ ಕಡ್ಡಾಯವಾಗಿದೆ.

ಹೀಗೆ ಬಾಹ್ಯ ಮತ್ತು ಆಂತರಿಕವಾಗಿ ಉಪವಾಸವನ್ನು ಆಚರಿಸಿಕೊಂಡವನೇ ನೈಜ ಉಪವಾಸಿಗನು ಹಾಗೂ ಅಲ್ಲಾಹುವಿಗಾಗಿ ನಿಷ್ಕಳಂಕದಿಂದ ಉಪವಾಸವನ್ನು ಆಚರಿಸಿಕೊಂಡವನಾರೋ ಅವನೇ ಉಪವಾಸದ ಅತ್ಯುನ್ನತ ಪ್ರತಿಫಲವನ್ನು ಪಡೆಯುವ ಮಹಾಭಾಗ್ಯವಂತನು. ಆದರೆ ವಾಸ್ತವಿಕತೆಗೆ ಹೊರತಾಗಿ ಹಲವು ತಪ್ಪುಗಳೊಂದಿಗೆ ಕೇವಲ ಔಪಚಾರಿಕವಾಗಿ ಉಪವಾಸವನ್ನು ಆಚರಿಸಿಕೊಂಡವನು ಅವನ ಉಪವಾಸದಿಂದ ನಿಜವಾಗಿ ಗಳಿಸುವುದು ಕೇವಲ ಹಸಿವು ಮತ್ತು ಬಾಯಾರಿಕೆ ಮಾತ್ರ!!

ಪ್ರವಾದಿ (H) ರವರು ಹೇಳಿರುವರು :

« مَنْ لَمْ يَدَعْ قَوْلَ الزُّورِ وَالْعَمَلَ بِهِ فَلَيْسَ لِلَّهِ حَاجَةٌ فِي أَنْ يَدَعَ طَعَامَهُ وَشَرَابَهُ »

“ಯಾರು ಸುಳ್ಳು ಮತ್ತು ಕೆಟ್ಟ ಮಾತನ್ನು ಹಾಗೂ ಆ ಮೂಲಕ ಇರುವ ಕೆಟ್ಟ ಕೃತ್ಯಗಳನ್ನು ಬಿಡುವುದಿಲ್ಲವೋ ಅವರು ತಮ್ಮ ಆಹಾರ ಮತ್ತು ಪಾನೀಯಗಳನ್ನು ತೊರೆಯಬೇಕಾದ ಯಾವ ಅಗತ್ಯವೂ ಅಲ್ಲಾಹುವಿಗಿಲ್ಲ.” (ಸಹೀಹ್ ಅಲ್-ಬುಖಾರಿ : 1903)

 

ಅನುವಾದ : ಅಬೂ ಹಮ್ಮಾದ್