w
ಅಶ್ಶೈಖ್ ಬದ್ರ್ ಬಿನ್ ಮುಹಮ್ಮದ್ ಅಲ್ ಬದ್ರ್ ಅಲ್ ಅನಝೀ حفظه الله ಪ್ರಸಕ್ತ ಕಾಲದ ಖವಾರಿಜ್’ಗಳಾದ -ಐಸಿಸ್, ಅಲ್-ಖಾಯಿದ ಹಾಗೂ ಇನ್ನಿತರ ಉಗ್ರವಾದಿಗಳ ಕೆಲವೊಂದು ಲಕ್ಷಣಗಳನ್ನು ವಿವರಿಸುವ ಪೈಕಿ ಈ ಒಂದು ವಿಚಾರವನ್ನು ಪ್ರಸ್ತಾಪಿಸಿರುವರು :
“ಇಸ್ಲಾಮಿನ ವಿದ್ವಾಂಸರಿಗೆ (ಉಲಮಾಗಳಿಗೆ) ಯಾವ ಪರಿಗಣನೆಯನ್ನು ನೀಡದಿರುವುದು ಆರಂಭದಿಂದಲೂ (ಉಗ್ರವಾದಿಗಳಾದ) ಖವಾರಿಜ್’ಗಳಿಗಿರುವ ಒಂದು ಪ್ರಮುಖ ಮೂಲತತ್ವವಾಗಿದೆ.”
ಅವರ ಪ್ರಕಾರ ವಿದ್ವಾಂಸರಿಗೆ ಯಾವುದೇ ಮಾನ್ಯತೆಯಿಲ್ಲ, ಅವಹೇಳನಗಳ ಮೂಲಕ ಅವರನ್ನು ತಾತ್ಸಾರ ಮಾಡಿ ಅವರ ವಿರುದ್ಧ ಸುಳ್ಳಾರೋಪಗಳನ್ನು ಹೊರಿಸುತ್ತಾರೆ. ಸುಲ್ತಾನರ ವಿದ್ವಾಂಸರು (ಆಡಳಿತಗಾರರ ಕಪಿಮುಷ್ಠಿಯಲ್ಲಿರುವ ವಿದ್ವಾಂಸರು), ಋತುಸ್ರಾವದ ವಿದ್ವಾಂಸರು (ಕೇವಲ ಕರ್ಮಶಾಸ್ತ್ರಕ್ಕೆ ಸೀಮಿತರಾದ ವಿದ್ವಾಂಸರು) ಪ್ರಚಲಿತ ಸನ್ನಿವೇಶಗಳ ಬಗ್ಗೆ ಲೋಕಜ್ಞಾನವಿಲ್ಲದವರು – ಹೀಗೆ ಹಲವು ಬಗೆಯ ಆಕ್ಷೇಪಾರ್ಹವಾದ ಸುಳ್ಳಾರೋಪಗಳನ್ನು ವಿವಿಧ ರೀತಿಯಲ್ಲಿ ಹರಡಿ ಆ ಮೂಲಕ ಜನಸಾಮಾನ್ಯರನ್ನು ವಿದ್ವಾಂಸರಿಂದ ದೂರ ಸರಿಯುವಂತೆ ಮಾಡುತ್ತಾರೆ. ಇದು ದಾರಿಗೆಟ್ಟ, ಪಥಭ್ರಷ್ಟ (ಉಗ್ರವಾದಿ) ಗುಂಪುಗಳ ಒಂದು ಪ್ರಮುಖ ಮೂಲತತ್ವವಾಗಿದೆ.
ಆದರೆ ಅಲ್ಲಾಹು ಹೇಳುತ್ತಾನೆ :
“ನಿಮಗೆ ಅರಿವಿಲ್ಲವೆಂದಾದರೆ (ಗ್ರಂಥಗಳ ಮೂಲಕ) ಅರಿವು ಗಳಿಸಿರುವವರೊಂದಿಗೆ ಕೇಳಿ ನೋಡಿರಿ.”[1.ಅಲ್-ಕುರ’ಆನ್ 16 :43]
ಕುರ್’ಆನ್ ತಿಳಿಸಿದ ಈ ಒಂದು ಪ್ರಮುಖ ಮೂಲತತ್ವಕ್ಕೆ ತದ್ವಿರುದ್ಧವಾಗಿ ಅವರೆಂದೆಂದಿಗೂ (ಉಗ್ರವಾದಿಗಳು) ವಿದ್ವಾಂಸರನ್ನು ಅವಲಂಬಿಸುವುದಿಲ್ಲ.
ವಿದ್ವಾಂಸರ ಶ್ರೇಷ್ಟತೆಯನ್ನು ಎತ್ತಿ ಹಿಡಿಯುವ ಅನೇಕ ಪ್ರವಾದಿ ವಚನಗಳು ವರದಿಯಾಗಿವೆ. ಅವುಗಳ ಪೈಕಿ ಉಬಾದತ್ ಬಿನ್ ಅಸ್ಸಾಮಿತ್ رضي الله عنه ರಿಂದ ವರದಿಯಾದ ಹದೀಸ್’ನಲ್ಲಿ ಪ್ರವಾದಿ صلى الله عليه وسلم ಹೀಗೆ ಹೇಳಿರುವರು :
“ಯಾರು ಹಿರಿಯರಿಗೆ ಗೌರವವನ್ನು ನೀಡವುದಿಲ್ಲವೋ, ಕಿರಿಯರೊಂದಿಗೆ ಕರುಣೆ ತೋರುವುದಿಲ್ಲವೋ ಹಾಗೂ ವಿದ್ವಾಂಸರ ಸ್ಥಾನವನ್ನು ಅರಿತುಕೊಳ್ಳುವುದಿಲ್ಲವೋ ಅವನು ನಮ್ಮವನಲ್ಲ.”
(ಅಹ್ಮದ್ – ಇಮಾಮ್ ಅಲ್ಬಾನೀ رحمــه الله ಇದನ್ನು ‘ಹಸನ್’ ಎಂದು ದೃಢೀಕರಿಸಿರುವರು)
ಯಾರು ವಿದ್ವಾಂಸರಿಗಿರುವ (ಅರ್ಹ) ಸ್ಥಾನವನ್ನು ಅರಿತುಕೊಂಡು ಅವರಿಗೆ ಗೌರವವನ್ನು ನೀಡವುದಿಲ್ಲವೋ ಅವನು ನಮ್ಮ ಸನ್ಮಾರ್ಗದ ಹಾದಿಯಲ್ಲಿ ಇಲ್ಲ.
ಇಮಾಮ್ ಅಬೂ ಉಸ್ಮಾನ್ ಇಸ್ಮಾಯೀಲ್ ಅಸ್ಸಾಬೂನೀ (ಹಿಜರಿ 449 ರಲ್ಲಿ ಮರಣ ಹೊಂದಿದ ಅಹ್ಲುಸ್ಸುನ್ನಃದ ಶ್ರೇಷ್ಠ ವಿದ್ವಾಂಸರು) ಹೇಳುತ್ತಾರೆ :
“ಅದರ (ಅಹ್ಲುಸ್ಸುನ್ನಃದ) ವಿದ್ವಾಂಸರನ್ನು ಇಷ್ಟಪಡುವುದು ಅಹ್ಲುಸ್ಸುನ್ನಃದ ಲಕ್ಷಣಗಳ ಪೈಕಿಗಳೊಲ್ಲೊಂದಾಗಿದೆ.”[2.ಅಖೀದತು ಅಸ್ಸಲಫ್ ಅಸ್’ಹಾಬುಲ್ ಹದೀಸ್ :37]
ಆದ್ದರಿಂದ ಪ್ರತಿಯೊಬ್ಬ ಮುಸ್ಲಿಮನು ಈ ಒಂದು ಪ್ರಮುಖ ಮೂಲತತ್ವವನ್ನು ಅರಿತುಕೊಳ್ಳಲೇಬೇಕು.
ಸಲಫೀ ವಿದ್ವಾಂಸರ ಬಗ್ಗೆ ಯಾರಾದರೂ (ಕೆಟ್ಟದಾಗಿ) ಮಾತನಾಡುವುದನ್ನು, ಅವರನ್ನು ಆಕ್ಷೇಪಿಸುವುದನ್ನು ನೀನು ಕಂಡರೆ, ಅವನು ಸುನ್ನತ್ತ್’ನಲ್ಲಿಲ್ಲ (ಅಹ್ಲುಸ್ಸುನ್ನಃದ ಮಾರ್ಗದಲ್ಲಿಲ್ಲ) ಬದಲಾಗಿ ಅವನು ಬಿದ್ಅತ್’ನಲ್ಲಿರುವನೆಂಬುದನ್ನು ನೀನು ಅರಿತುಕೊಳ್ಳಬೇಕು. ಯಾಕೆಂದರೆ ಅಹ್ಲುಸ್ಸುನ್ನಃದ ಜನರು ವಿದ್ವಾಂಸರ ಸ್ಥಾನಗಳನ್ನು ಅರಿತುಕೊಂಡು ಅವರನ್ನು (ಅವರ ಮಾರ್ಗದರ್ಶನವನ್ನು) ಅವಲಂಬಿಸುತ್ತಾರೆ.
أصول داعش خوارج العصر
ಎಂಬ ವಿಷಯದಲ್ಲಿ ಪ್ರವಚನ ನೀಡಿದ ಸೌದಿ ಅರೇಬಿಯಾದ ಅಗ್ರಗಣ್ಯ ವಿದ್ವಾಂಸರೀರ್ವರಾದ ಅಶ್ಶೈಖ್ ಸಾಲಿಹ್ ಅಲ್-ಫೌಝಾನ್ ಮತ್ತು ಅಶ್ಶೈಖ್ ಸಾಲಿಹ್ ಅಲ್-ಲುಹೈದಾನ್ حفظهما الله ರವರ ಪ್ರಮುಖ ಶಿಷ್ಯರಾದ ಅಶ್ಶೈಖ್ ಬದ್ರ್ ಬಿನ್ ಮುಹಮ್ಮದ್ ಅಲ್ ಬದ್ರ್ ಅಲ್ ಅನಝೀ حفظه الله ರವರು ನೀಡಿದ ಪ್ರವಚನದ ಕೆಲವೊಂದು ಆಯ್ದಭಾಗಗಳು) [3.https://miraath.net/sites/default/files/ميراث%20الأنبياء/mohadarat//usool_daish_khawarij_il_asr_sh_badr.mp3]