w
“ತನ್ನ ಎಲ್ಲಾ ಸೃಷ್ಟಿಗಳ ಮೇಲೆ ಅತ್ಯಂತ ದಯೆವುಳ್ಳವನೂ, ತನ್ನ ಸತ್ಯ ವಿಶ್ವಾಸಿಗಳಾದ ದಾಸರ ಮೇಲೆ ಸದಾ ಕರುಣೆತೋರುವವನೂ ಆದ ಅಲ್ಲಾಹುವಿನ ನಾಮದಿಂದ.”
ಸೌದಿ ಅರೇಬಿಯಾದ ಶ್ರೇಷ್ಠ ಸಲಫೀ ವಿದ್ವಾಂಸರಾದ ಅಲ್ಲಾಮಃ ಅಶ್ಶೈಖ್ ಅಬ್ದುಲ್ ಅಝೀಝ್ ಬಿನ್ ಬಾಝ್ (V) ರೊಂದಿಗೆ ಪ್ರಶ್ನಿಸಲಾಯಿತು :
ಪ್ರಶ್ನೆ : ಇಸ್ಲಾಮಿನ ರಾಷ್ಟ್ರಗಳಲ್ಲಿ ಹೊರದೇಶಗಳಿಂದ ಬರುವ ಪ್ರವಾಸಿಗರು ಹಾಗೂ ವಿದೇಶಗಳಿಂದ ಭೇಟಿ ನೀಡುವ ಸಲುವಾಗಿ ಬರುವ ಇತರ ಧರ್ಮೀಯರ ವಿರುದ್ಧ ಹಲ್ಲೆ ಅಥವಾ ದಾಳಿ ಮಾಡುವುದರ ವಿಧಿಯೇನು (ಅರ್ಥಾತ್ ಇದನ್ನು ಇಸ್ಲಾಮ್ನಲ್ಲಿ ಅನುಮತಿಸಿಲಾಗಿದೆಯೇ? ಇದರ ಕುರಿತು ಇಸ್ಲಾಮ್ನ ನಿಲುವೇನು)?
ಉತ್ತರ : ಇದು ನಿಷಿದ್ಧವಾಗಿದೆ. ಅದು ಪ್ರವಾಸಿಗರಾಗಲೀ ಅಥವಾ ಕಾರ್ಮಿಕರಾಗಲೀ -ಯಾರೊಬ್ಬರ ವಿರುದ್ಧವೂ ಹಲ್ಲೆ ಅಥವಾ ಆಕ್ರಮಣ ಮಾಡುವುದನ್ನು ಇಸ್ಲಾಮ್ ಅನುಮತಿಸಿಲ್ಲ, ಏಕೆಂದರೆ (ಪರಸ್ಪರ ರಾಷ್ಟ್ರಗಳ ಮಧ್ಯೆಯಿರುವ ಅಭಯದ) ಒಪ್ಪಂದದಡಿಯಲ್ಲಿ ಕಾನೂನುಬದ್ದವಾಗಿ ಮುಸ್ಲಿಮ್ ರಾಷ್ಟ್ರವನ್ನು ಪ್ರವೇಶಿಸಲು ಅವರಿಗೆ ಅನುಮತಿಸಲಾಗಿದೆ ಹಾಗೂ ಅವರಿಗೆ ಸುರಕ್ಷತೆ ಹಾಗೂ ಭದ್ರತೆಯನ್ನು ಖಾತರಿಪಡಿಸಲಾಗಿದೆ. ಅವರ ವಿರುದ್ಧ ಆಕ್ರಮಣ ಮಾಡುವುದು ಸಮ್ಮತಾರ್ಹವಲ್ಲ. ಇನ್ನು ಅವರಿಂದೇನಾದರೂ ಸಮಸ್ಯೆಗಳು ಉದ್ಭವಿಸಿದರೆ (ಅಪರಾಧಗಳನ್ನು ತಡೆಗಟ್ಟುವ ಸಲುವಾಗಿ) ಸಂಬಂಧಪಟ್ಟ ಅಧಿಕಾರಿಗಳಿಗೆ ಅದನ್ನು ತಿಳಿಸಬೇಕಾಗಿದೆ. (ಈ ಮೂಲಕ ಸಂಬಂಧಪಟ್ಟ ಅಧಿಕಾರಿಗಳು ಇದರ ಬಗ್ಗೆ ವಿಚಾರಣೆ ನಡೆಸಿ ಸೂಕ್ತ ಕ್ರಮವನ್ನು ಕೈಗೊಳ್ಳುವರು).
ಇದರ ಹೊರತಾಗಿ ಸಾಮಾನ್ಯ ಜನರು (ಕಾನೂನನ್ನು ಕೈಗೆತ್ತಿಕೂಂಡು) ಅವರನ್ನು ಕೊಲ್ಲುವುದಕ್ಕಾಗಲೀ, ಅವರಿಗೆ ಹೊಡೆಯುವುದಕ್ಕಾಗಲೀ ಅಥವಾ ಯಾವುದೇ ರೀತಿಯಲ್ಲಿ ಅವರಿಗೆ ತೊಂದರೆ ಹಾಗೂ ಹಾನಿಪಡಿಸುವುದಕ್ಕಾಗಲೀ ಯಾರೊಬ್ಬರಿಗೂ ಹಕ್ಕಿಲ್ಲ, ಅದು (ಇಸ್ಲಾಮಿನಲ್ಲಿ) ಸಮ್ಮತಾರ್ಹವೂ ಅಲ್ಲ, ಅದು ಸಂಪೂರ್ಣವಾಗಿ ನಿಷಿದ್ಧವಾಗಿದೆ. ಅವರ ಅಪರಾಧ ಕೃತ್ಯಗಳನ್ನು ತಡೆಗಟ್ಟಲು ದೇಶದ ಕಾನೂನುಗಳನ್ನು ಸ್ವತಃ ಕೈಗೆತ್ತಿಗೊಳ್ಳದೆ ಅದನ್ನು ಆಡಳಿತಧಿಕಾರಿಗಳ ಗಮನಕ್ಕೆ ತರುವುದು ಅವರ ಕರ್ತವ್ಯವಾಗಿದೆ.
ಹೊರದೇಶಗಳಿಂದ ಬರುವ ಪ್ರವಾಸಿಗರು ಅಥವಾ ಅನಿವಾಸಿಗರ ಮೇಲೆ ಮಾಡುವ ಯಾವುದೇ ಆಕ್ರಮಣವು ಅಭಯ ಒಪ್ಪಂದದ ಕರಾರಿನಡಿಯಲ್ಲಿ ರಾಷ್ಟ್ರಕ್ಕೆ ಪ್ರವೇಶಿಸಿದ, ಸುರಕ್ಷತೆ ಹಾಗೂ ಭದ್ರತೆಯನ್ನು ಖಾತರಿಪಡಿಸಲಾದ ಓರ್ವನ ವಿರುದ್ಧ ನಡೆಸಿದ ಅತಿಕ್ರಮಣವೆಂದು ಪರಿಗಣಿಸಲಾಗುವುದು. ಆದ್ದರಿಂದ ಇದು ಸಮ್ಮತಾರ್ಹವಲ್ಲ. ಇದು ಸಂಪೂರ್ಣವಾಗಿ ನಿಷಿದ್ಧವಾಗಿದೆ. ಒಂದು ವೇಳೆ ವಿದೇಶಿಗರಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ಕಂಡುಬಂದಲ್ಲಿ ಅದನ್ನು ತಡೆಗಟ್ಟಲು ಕಾನೂನುಗಳನ್ನು ಸ್ವತಃ ಕೈಗೆತ್ತಿಗೊಳ್ಳದೆ, ಅಂತಹ ಅಪರಾಧಿಗಳನ್ನು ರಾಷ್ಟ್ರಕ್ಕೆ ಪ್ರವೇಶಿಸುವುದನ್ನು ಪ್ರತಿಬಂಧ ಹೇರಲು ಅಥವಾ ಅವರ ಅಪರಾಧಗಳನ್ನು ತಡೆಯುವ ಅಧಿಕಾರ ಮತ್ತು ಸಾಮರ್ಥ್ಯವನ್ನು ಹೊಂದಿರುವ ಆಯಾ ದೇಶದ ಸಂಬಂಧಪಟ್ಟ ಆಡಳಿತಧಿಕಾರಿಗಳ ಗಮನಕ್ಕೆ ತರಬೇಕಾಗಿದೆ.
ಇನ್ನು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವವರು ಮುಸ್ಲಿಮರಾಗಿದ್ದರೆ ಅವರಿಗೆ ಸರಿಯಾದ ಇಸ್ಲಾಮ್ಅನ್ನು ತಿಳಿಸಿಕೊಡಬೇಕಾಗಿದೆ ಹಾಗೂ ನೈಜ ಇಸ್ಲಾಮಿನ ಸಂದೇಶಗಳನ್ನು ಪಾಲಿಸಲು ಅಥವಾ ದುಷ್ಕೃತ್ಯವನ್ನು ತೊರೆಯಲು ಅವರಿಗೆ ಉಪದೇಶವನ್ನು ನೀಡುವುದು ಅತ್ಯಗತ್ಯವಾಗಿದೆ. ಇದನ್ನು ಶರೀಅತ್ನ ಪುರಾವೆಗಳು ಕೂಡ ಸೂಚಿಸುತ್ತದೆ.
ನಾವು ಅಲ್ಲಾಹುವಿನಲ್ಲಿ ಸಹಾಯವನ್ನು ಯಾಚಿಸುತ್ತೇವೆ, ಏಕೆಂದರೆ ಅಲ್ಲಾಹುವಿನ ಹೊರತು ಯಾವುದೇ ಶಕ್ತಿಯಾಗಲೀ ಅಥವಾ ಸಾಮರ್ಥ್ಯವಾಗಲೀ ಇಲ್ಲ. ಅಲ್ಲಾಹುವಿನ ಸಲಾತ್ ಮತ್ತು ಸಲಾಮ್ಗಳು ನಮ್ಮ ಪ್ರವಾದಿ ಮುಹಮ್ಮದ್ (H) ರವರ ಮೇಲೂ, ಅವರ ಕುಟುಂಬ ಹಾಗೂ ಸಹಾಬಿಗಳ ಮೇಲೂ ಇರಲಿ.
[ಮೂಲ : ಮಜ್ಮೂಅ್ ಅಲ್-ಫತಾವಾ 8/239]
ಅನುವಾದ : ಅಬೂ ಹಮ್ಮಾದ್
ಹೆಚ್ಚಿನ ಓದಿಗಾಗಿ :
ಭಯೋತ್ಪಾದನೆಯನ್ನು ಇಸ್ಲಾಮ್ ಕಟುವಾಗಿ ಖಂಡಿಸುತ್ತದೆ -ಅಬೂ ಹಮ್ಮಾದ್
ಆತ್ಮಹತ್ಯಾ ದಾಳಿಗಳ ವಿರುದ್ಧ ಇಸ್ಲಾಮಿನ ಸ್ಪಷ್ಟ ನಿಲುವು -ಅಶ್ಶೈಖ್ ಸಾಲಿಹ್ ಅಲ್-ಫೌಝಾನ್ (حَفِظَهُ اللَّهُ) ಹಿರಿಯ ವಿದ್ವಾಂಸರು, ಸೌದಿ ಅರೇಬಿಯಾ.
ಇಸ್ಲಾಮ್ ಭಯೋತ್ಪಾದನೆಯಿಂದ ಮುಕ್ತವಾಗಿದೆ -ಅಶ್ಶೈಖ್ ಹಾಮಿದ್ ಬಿನ್ ಖಮೀಸ್ ಅಲ್-ಜುನೈಬೀ (حَفِظَهُ اللَّهُ) ಮತ್ತು ಅಶ್ಶೈಖ್ ಡಾ. ಮುಹಮ್ಮದ್ ಬಿನ್ ಘಾಲಿಬ್ ಅಲ್-ಉಮರೀ (حَفِظَهُ اللَّهُ), ಸಲಫೀ ವಿದ್ವಾಂಸರು, ದುಬೈ – ಯು.ಎ.ಇ.