ಐಸಿಸ್ ಮತ್ತು ಅಲ್-ಖಾಯಿದ ಕುರಿತು ಮುಸ್ಲಿಮರ ನಿಲುವೇನು?

ಐಸಿಸ್ ಮತ್ತು ಅಲ್-ಖಾಯಿದ ಕುರಿತು ಮುಸ್ಲಿಮರ ನಿಲುವೇನು?

ಉಗ್ರವಾದಿಗಳ ಕುರಿತು ಇಸ್ಲಾಮ್ ಏನೆನ್ನುತ್ತದೆ? ಅವರ ಹಿನ್ನೆಲೆಯೇನು? ಉಗ್ರವಾದಿಗಳ ತತ್ವ-ಸಿದ್ಧಾಂತಗಳೇನು? ಆಧುನಿಕ ಕಾಲದಲ್ಲಿ ಉಗ್ರವಾದ ಹುಟ್ಟಿಕೊಂಡದ್ದು ಹೇಗೆ? ಅವರ ಉದ್ದೇಶಗಳೇನು? 

ಲೇಖಕರು : ಅಬೂ ಹಮ್ಮಾದ್ ಸಲಾಹುದ್ದೀನ್

ಈ ಪುಸ್ತಕದ PDF ಪ್ರತಿಯನ್ನು ಈ ಕೆಳಗಿನಿಂದ ಡೌನ್‍ಲೋಡ್ ಮಾಡಿಕೊಳ್ಳಿರಿ.  

w

“ತನ್ನ ಎಲ್ಲಾ ಸೃಷ್ಟಿಗಳ ಮೇಲೆ ಅತ್ಯಂತ ದಯೆವುಳ್ಳವನೂ, ತನ್ನ ಸತ್ಯ ವಿಶ್ವಾಸಿಗಳಾದ ದಾಸರ ಮೇಲೆ ಸದಾ ಕರುಣೆತೋರುವವನೂ ಆದ ಅಲ್ಲಾಹುವಿನ ನಾಮದಿಂದ.”

ಐಸಿಸ್ ಮತ್ತು ಅಲ್-ಖಾಯಿದ ಮುಂತಾದ ಉಗ್ರವಾದಿಗಳ ಕುರಿತು ಇಸ್ಲಾಮ್ ಏನೆನ್ನುತ್ತದೆ? ಅವರ ಹಿನ್ನೆಲೆಯೇನು?

ಐಸಿಸ್ ಮತ್ತು ಅಲ್-ಖಾಯಿದ ಮುಂತಾದ ಎಲ್ಲಾ ತೀವ್ರವಾದಿ ಹಾಗೂ ಉಗ್ರವಾದಿ ಗುಂಪುಗಳನ್ನು ಇಸ್ಲಾಮ್‌ನ ಪರಿಭಾಷೆಯಲ್ಲಿ ಖವಾರಿಜ್‌ಗಳು ಎಂದು ಕರೆಯೆಲಾಗುತ್ತದೆ. ಖವಾರಿಜ್‌ಗಳೆಂದರೆ, ಹಿಂದೆ ಪ್ರವಾದಿ ಮುಹಮ್ಮದ್ (H) ರವರ ಸಹಚರರಾದ ಸಹಾಬಿಗಳ ವಿರುದ್ಧ ಬಂಡಾಯವೆದ್ದ ಒಂದು ಉಗ್ರವಾದಿ ಪಂಗಡದ ಹೆಸರಾಗಿದೆ. ಪ್ರವಾದಿ ಮುಹಮ್ಮದ್ (H) ರವರು ನ್ಯಾಯ ಪಾಲಿಸುತ್ತಿಲ್ಲ ಎಂದು ಆರೋಪಿಸಿಕೊಂಡು ಈ ಉಗ್ರವಾದಿ ಸಿದ್ದಾಂತಕ್ಕೆ ತಳಪಾಯ ಹಾಕಿದವನು ದುಲ್ ಖುವೈಸಿರಃ ಅತ್ತಮೀಮೀ ಎಂಬ ವ್ಯಕ್ತಿಯಾಗಿದ್ದಾನೆ. ಅವನನ್ನು ಇಸ್ಲಾಮ್‌ನಿಂದ ಪಥಭ್ರಷ್ಟಗೊಂಡ ಕಪಟಿಗ ಎಂದು ಕುರ್‌ಆನ್ ಪ್ರಸ್ತಾಪಿಸಿದೆ. ವಾಸ್ತವದಲ್ಲಿ ಖವಾರಿಜ್‌ಗಳು ಪ್ರವಾದಿ ಮುಹಮ್ಮದ್ (H) ರವರ ಬೋಧನೆ, ಆಡಳಿತ ಮತ್ತು ಅವರು ತೋರಿಸಿಕೊಟ್ಟ ನ್ಯಾಯ ವ್ಯವಸ್ಥೆಗೆ ಧಕ್ಕೆ ತಂದ ಪಾತಕಿಗಳಾಗಿದ್ದಾರೆ.

ಪ್ರವಾದಿ ಮುಹಮ್ಮದ್ (H) ರವರ ಮರಣಾನಂತರ ಸಹಾಬಿಗಳನ್ನು (ಅರ್ಥಾತ್ ಪ್ರವಾದಿ ಮುಹಮ್ಮದ್ H ರವರ ಸಹಚರರನ್ನು) ಇಸ್ಲಾಮ್‌ನಿಂದ ಹೊರಹಾಕಿದರಲ್ಲದೆ ಇಸ್ಲಾಮ್‌ನ ನಾಲ್ವರು ಶ್ರೇಷ್ಠ ಖಲೀಫರ ಪೈಕಿ ಇಬ್ಬರಾದ ಉಸ್ಮಾನ್ ಬಿನ್ ಅಫ್ಫಾನ್ ಮತ್ತು ಅಲೀ ಬಿನ್ ಅಬೀ ತಾಲಿಬ್ (L) ರನ್ನು ದಾರುಣವಾಗಿ ಹತ್ಯೆಗೈದವರು ಇದೇ ಖವಾರಿಜ್‌ಗಳಾಗಿದ್ದಾರೆ. ಉಸ್ಮಾನ್ ಮತ್ತು ಅಲೀ (L) ಇವರಿಬ್ಬರೂ ಪ್ರವಾದಿ ಮುಹಮ್ಮದ್ (H) ರವರ ಅಳಿಯಂದಿರಾಗಿದ್ದರು, ಹಾಗೂ ಸಜ್ಜನ ಮುಸ್ಲಿಮರಾಗಿದ್ದರು. ತಮ್ಮ ಪಥಭ್ರಷ್ಟ ಸಿದ್ದಾಂತವನ್ನು ಅಂಗೀಕರಿಸದ ಯಾರೊಬ್ಬರನ್ನು ಖವಾರಿಜ್‌ಗಳು ಸುಮ್ಮನೆ ಬಿಡುತ್ತಿರಲಿಲ್ಲ. ಅವರ ಕ್ರೌರ್ಯದ ಪರಕಾಷ್ಠೆ ಎಷ್ಟು ತಲುಪಿತ್ತೆಂದರೆ ಗರ್ಭಾವತಿ ಮಹಿಳೆಯೋರ್ವಳ ಹೊಟ್ಟೆಯನ್ನು ಸೀಳಿ ಆಕೆಯನ್ನು ಬರ್ಬರವಾಗಿ ಕೊಂದು, ಆಕೆಯ ಪತಿಯ ರುಂಡವನ್ನೇ ಕತ್ತರಿಸಿ ವಿಕೃತಿ ಮೆರೆದಿದ್ದರು ಆ ದುರುಳರು.

ಹೀಗೆ ಈ ಖವಾರಿಜ್‌ಗಳಾದ ಉಗ್ರವಾದಿಗಳು ಮಹಿಳೆಯರು, ಮಕ್ಕಳು, ವೃದ್ದರು, ಅಮಾಯಕರು ಎನ್ನದೇ ಅವರನ್ನೆಲ್ಲಾ ಅತ್ಯಂತ ಕ್ರೂರ ಹಾಗೂ ಅಮಾನುಷವಾಗಿ ಹತ್ಯೆಗೈದು ತಮ್ಮ ಕ್ರೌರ್ಯದ ಅಟ್ಟಹಾಸವನ್ನು ಮುಂದುವರೆಸಿದರು. ಆ ನಂತರ ಅವರು ಸಿರಿಯಾ ಮತ್ತು ಈಜಿಪ್ಟ್‌ಗೆ ನಿಯೋಗಿಸಲ್ಪಟ್ಟಿದ್ದ ಆಡಳಿತಗಾರರೂ ಪ್ರವಾದಿ ಮುಹಮ್ಮದ್ (H) ರವರ ಆಪ್ತ ಸಹಚರರೂ ಆದ ಮುಆವಿಯಾ ಮತ್ತು ಅಮ್ರ್ ಬಿನ್ ಅಲ್-ಆಸ್ (L) ರವರನ್ನು ಹತ್ಯೆ ಮಾಡಲು ವಿಫಲ ಯತ್ನ ನಡೆಸಿದರು.

ಇಸ್ಲಾಮಿನ ಇತಿಹಾಸದಲ್ಲಿ ಪ್ರಥಮವಾಗಿ ರಾಜಾಡಳಿತವನ್ನು ನಡೆಸಿದ ಉಮವಿಯ್ಯಃ ಹಾಗೂ ಅಬ್ಬಾಸಿಯ್ಯಃ ಎಂಬ ಎರಡು ವಂಶಗಳ ಆಡಳಿತದ ವಿರುದ್ಧ ಖವಾರಿಜ್‌ಗಳು ದಂಗೆಗಳನ್ನು ಎಬ್ಬಿಸುತ್ತಾ ನಾಡಿನ ಶಾಂತಿ, ಸುರಕ್ಷತೆ ಮತ್ತು ಭದ್ರತೆಗೆ ಧಕ್ಕೆ ತರುವಂತಹ ಎಲ್ಲಾ ಪ್ರಯತ್ನಗಳನ್ನು ಅವರು ನಡೆಸುತ್ತಲೇ ಬಂದರು. ಈ ಖವಾರಿಜ್‌ಗಳಾದ ಉಗ್ರವಾದಿಗಳಿಂದಾಗಿ ಲಕ್ಷಾಂತರ ಮುಸ್ಲಿಮರು ಹತ್ಯೆಗೈಯಲ್ಪಟ್ಟಿರುವುದಾಗಿ ಪ್ರಸಿದ್ಧ ಮುಸ್ಲಿಮ್ ವಿದ್ವಾಂಸರಾದ ಇಮಾಮ್ ಅಝ್ಝಹಬೀ (V) ರವರು ತಮ್ಮ ಗ್ರಂಥಗಳಲ್ಲಿ ಉಲ್ಲೇಖಿಸಿದ್ದಾರೆ. ವಾಸ್ತವದಲ್ಲಿ ಈ ಉಗ್ರವಾದಿಗಳು ಇಸ್ಲಾಮ್ ಮತ್ತು ಮುಸ್ಲಿಮರ ವಿರುದ್ಧ ಹಾಗೂ ಅದರ ಶಾಂತಿಯುತ ಆಶಯಗಳ ವಿರುದ್ಧ ದಂಗೆಸಾರುವ ಗುಂಪಾಗಿದ್ದಾರೆ.

  • ಅವರು ಎರಡು ಸಂದರ್ಭ ಹಾಗೂ ಪರಿಸ್ಥಿತಿಗಳಲ್ಲಿ ಹುಟ್ಟಿಕೊಳ್ಳುತ್ತಾರೆ :
    1. ತಮ್ಮ ಧರ್ಮದ ಕುರಿತು ಸರಿಯಾಗಿ ತಿಳಿದುಕೊಳ್ಳದೆ ಅಜ್ಞಾನಿಗಳಾಗಿ ಉಳಿದುಕೊಂಡು ಅದರ ನೈಜ ಸಂದೇಶಗಳಿಂದ ದಾರಿತಪ್ಪಿದಾಗ ಹಾಗೂ
    2. ದೇಶದ ಜನರ ಆಂತರಿಕ ಕಲಹ ಮತ್ತು ರಾಜಕೀಯ ಅಸ್ಥಿರತೆ ಹಾಗೂ ಪ್ರಕ್ಷುಬ್ಧ ರಾಜಕೀಯ ಪರಿಸ್ಥಿತಿ ನಿರ್ಮಾಣವಾದಾಗ.

ಈ ಖವಾರಿಜ್‌ಗಳು ಪ್ರಥಮವಾಗಿ ಕಾಣಿಸಿಕೊಂಡಿರುವುದು ಇರಾಕ್‌ನ ಕಡೆಯಲ್ಲಾಗಿತ್ತು. ಇಂತಹ ಉಗ್ರವಾದಿಗಳು ಮುಂದೊಂದು ದಿನ ಬರುವರೆಂದು ಪ್ರವಾದಿ ಮುಹಮ್ಮದ್ (H) ರವರು ಮೊದಲೇ ದಿವ್ಯವಾಣಿಯಿಂದ ಭವಿಷ್ಯವನ್ನು ನುಡಿದಿದ್ದರು. ಅವರ ಹಲವಾರು ಲಕ್ಷಣಗಳ ಕುರಿತು ಪ್ರವಾದಿ ಮುಹಮ್ಮದ್ (H) ರವರು ನಮಗೆ ತಿಳಿಸಿಕೊಟ್ಟಿರುವರು ಹಾಗೂ ಅವರ ವಿರುದ್ಧ ಅನೇಕ ಎಚ್ಚರಿಕೆಗಳನ್ನು ನೀಡಿರುವರು, ಪ್ರವಾದಿ ಮುಹಮ್ಮದ್ (H) ರವರು ಉಗ್ರವಾದಿಗಳ ಕುರಿತು ಈ ರೀತಿ ಹೇಳಿರುವರು:

  1. ಅವರ ಪೈಕಿ ಬಹುತೇಕರು ಕಿರು ಪ್ರಾಯದ ಯುವಕರಾಗಿರುವರು ಮತ್ತು ಅವಿವೇಕಿಗಳಾಗಿರುವರು.
  2. ತಮ್ಮ ಧರ್ಮದ ಬಗ್ಗೆ ಯಾವುದೇ ಸರಿಯಾದ ತಿಳುವಳಿಕೆ ಇಲ್ಲದ ಅಜ್ಞಾನಿಗಳಾಗಿರುವರು.
  3. ಅವರು ಕುರ್‌ಆನ್ಅನ್ನು ಪಾರಾಯಣ ಮಾಡುವರು ಆದರೆ ಅದು ಅವರ ಗಂಟಲಿನಾಚೆಗೆ ತಲುಪುವುದಿಲ್ಲ (ಅರ್ಥಾತ್ ವಿಶ್ವಾಸವು ಅವರ ಹೃದಯದೊಳಗೆ ತಲುಪುವುದಿಲ್ಲ) ಹಾಗೂ ಅವರ ಮನಸ್ಸಿಗೆ ಅದು ಪರಿಣಾಮ ಬೀರದು.
  4. ಅವರು ತೋರಿಕೆಗಷ್ಟೇ ಧರ್ಮನಿಷ್ಠೆ ಹೊಂದಿರುವವರಾಗಿರುವರು.

ಅವರನ್ನು ಅಂಗೀಕರಿಸದ ಮುಸ್ಲಿಮರನ್ನು ಅವರು ಕೊಲ್ಲುವರು ಹಾಗೂ ಇಸ್ಲಾಮಿನ ಸನ್ಮಾರ್ಗದಿಂದ ಅತೀ ವೇಗವಾಗಿ ಅವರು ಹೊರಹೋಗುವರು. ಅವರು ಎಲ್ಲಾ ಕಾಲದಲ್ಲೂ ಕಾಣಿಸಿಕೊಳ್ಳುವರೆಂದೂ, ಆ ಸಮಯದಲ್ಲಿ ಮುಸ್ಲಿಮರು ತಮ್ಮ ಆಡಳಿತಗಾರರ ಜೊತೆಗೂಡಿ ಉಗ್ರವಾದಿಗಳ ವಿರುದ್ಧ ಹೋರಾಡಿ ಅವರನ್ನು ಮಟ್ಟ ಹಾಕಬೇಕೆಂದು ಪ್ರವಾದಿ ಮುಹಮ್ಮದ್ (H) ರವರು ಮುಸ್ಲಿಮರಿಗೆ ಆಜ್ಞಾಪಿಸಿರುವರು. ಪ್ರವಾದಿ ಮುಹಮ್ಮದ್ (H) ರವರ ಈ ವಚನಗಳ ಆಧಾರದಲ್ಲಿ ಅವರನ್ನು ಖವಾರಿಜ್‌ಗಳೆಂದು ಕರೆಯಲಾಗುತ್ತದೆ.

ಖವಾರಿಜ್ ಅಂದರೆ : ಇಸ್ಲಾಮ್ ಮತ್ತು ಮುಸ್ಲಿಮರ ಸನ್ಮಾರ್ಗದಿಂದ ಬೇರ್ಪಟ್ಟು ಉಗ್ರವಾದದ ಸಿದ್ಧಾಂತವನ್ನು ಮೈಗೂಡಿಸಿಕೊಂಡು ಅದನ್ನು ಪ್ರತಿಪಾದಿಸುವವರು ಅಥವಾ ಉಗ್ರ ಚಟುವಟಿಕೆಗಳಲ್ಲಿ ಭಾಗಿಯಾಗುವವರು ಎಂದಾಗಿದೆ. ಇಸ್ಲಾಮ್‌ನ ಅನೇಕ ಗೌರವಾನ್ವಿತ ಹಿರಿಯ ವಿದ್ವಾಂಸರು, ಖವಾರಿಜ್‌ಗಳನ್ನು ಇಸ್ಲಾಮ್ ಧರ್ಮದಿಂದ ಹೊರಹೋದ ಧರ್ಮಭ್ರಷ್ಟರೆಂದು ಪರಿಗಣಿಸಿರುವರು.

ಉಗ್ರವಾದಿಗಳ (ಖವಾರಿಜ್‌ಗಳ) ತತ್ವ-ಸಿದ್ಧಾಂತಗಳೇನು?

ಅವರ ತತ್ವ-ಸಿದ್ಧಾಂತಗಳೇನೆಂದರೆ: ಮುಸ್ಲಿಮ್ ರಾಷ್ಟ್ರದ ಆಡಳಿತಗಾರರು ಆರ್ಥಿಕ ಮತ್ತು ಸಾಮಾಜಿಕ ವಿಚಾರಗಳಲ್ಲಿ ನ್ಯಾಯ ಪಾಲಿಸುತ್ತಿಲ್ಲ, ಅಲ್ಲಾಹುವಿನ ಕಾನೂನಿನ ಪ್ರಕಾರ ಸಂಪೂರ್ಣವಾಗಿ ಆಡಳಿತ ನಡೆಸುತ್ತಿಲ್ಲ ಎಂದು ಆರೋಪಿಸುತ್ತಾ ಅವರು ಮುಸ್ಲಿಮ್ ಆಡಳಿತಗಾರರನ್ನು ಇಸ್ಲಾಮ್‌ನಿಂದ ಹೊರಹೋದ ಧರ್ಮಭ್ರಷ್ಟರೆಂದು ಘೋಷಿಸುವರು, ಇದಕ್ಕೆ ತಕ್ಫೀರ್ ಎಂದು ಕರೆಯಲಾಗುತ್ತದೆ. ಆಡಳಿತಗಾರರು ನ್ಯಾಯವನ್ನು ನೀಡುತ್ತಿಲ್ಲ ಎಂದು ತಿಳಿದೋ ತಿಳಿಯದೆಯೋ ಜನರೆಡೆಯಲ್ಲಿ ಅವರ ಕುರಿತ ತಪ್ಪಾಗಿ ಬಿಂಬಿಸುವುದಲ್ಲದೆ, ಅವರು ಅಲ್ಲಾಹುವಿನ ನಿಯಮಗಳನ್ನು ಸಂಪೂರ್ಣವಾಗಿ ಜಾರಿಗೆ ತರುತ್ತಿಲ್ಲ ಹಾಗಾಗಿ ನ್ಯಾಯ ಮತ್ತು ಕಾನೂನು ವ್ಯವಸ್ಥೆಯು ಹದೆಗೆಟ್ಟಿದ ಕಾರಣದಿಂದ ಅಥವಾ ನ್ಯಾಯ ವ್ಯವಸ್ಥೆಯೇ ಇಲ್ಲದಿರುವುದಿಂದ ನೈಜ ಇಸ್ಲಾಮ್ ಈಗ ಅಸ್ತಿತ್ವದಲ್ಲಿಲ್ಲ ಎಂದು ಅವರು ವಾದಿಸುತ್ತಾರೆ! ಇದು ಅವರ ಅಜ್ಞಾನದ ಪರಮಾವಧಿಯಾಗಿದೆ. ಅವರ ವಿಷಪೂರಿತ ಸಿದ್ದಾಂತದ ಪ್ರಕಾರ ಇಸ್ಲಾಮ್ ಎಂದರೆ ಬಹುತೇಕವಾಗಿ ಒಂದು ಆಡಳಿತ ಮತ್ತು ರಾಜಕೀಯ ಅಸ್ತಿತ್ವವನ್ನು ಸ್ಥಾಪಿಸಲು ಸೀಮಿತವಾದ ಒಂದು ಸಿದ್ಧಾಂತವಾಗಿದೆ. ಇಸ್ಲಾಮ್‌ನ ಪ್ರಮುಖ ಉದ್ದೇಶವು “ನ್ಯಾಯಯುತ” ಆಡಳಿತವನ್ನು ಸ್ಥಾಪಿಸುವುದು ಎಂಬಂತೆ ಅವರು ಇಸ್ಲಾಮ್‌ಗೆ ರಾಜಕೀಯ ಪ್ರೇರಿತ ದುರ್ವ್ಯಾಖ್ಯಾನವನ್ನು ನೀಡುತ್ತಾರೆ.

ಆದ್ದರಿಂದ ಅವರು ಈ ಮೊದಲೇ ಹೇಗೆ ಮುಸ್ಲಿಮ್ ಆಡಳಿತಗಾರರನ್ನು ಧರ್ಮ ಭ್ರಷ್ಟರೆಂದು ತಪ್ಪಾಗಿ ಬಿಂಬಿಸಿರುವರೋ ಹಾಗೆಯೇ ಆ ದೇಶಗಳು ಹಾಗೂ ಆ ದೇಶವಾಸಿಗಳೆಲ್ಲರೂ ಧರ್ಮಭ್ರಷ್ಟರಾದ ಸತ್ಯನಿಷೇಧಿಗಳೆಂದು ಅವರು ಘೋಷಿಸುತ್ತಾರೆ. ಆ ದೇಶದ ಆಡಳಿತದ ವಿರುದ್ಧ ದಂಗೆದ್ದು “ನ್ಯಾಯಯುತವಾದ” ಆಡಳಿತ ವ್ಯವಸ್ಥೆಯನ್ನು ಸ್ಥಾಪಿಸಬೇಕೆನ್ನುವ ಕಾರಣವನ್ನು ಮುಂದಿಟ್ಟುಕೂಂಡು ಆ ನಾಡಿನ ಶಾಂತಿ ಮತ್ತು ಭದ್ರತೆಯ ವಾತಾವರಣವನ್ನೇ ಬುಡಮೇಲುಗೊಳಿಸಿ ಅಲ್ಲಿನ ಆಡಳಿತಗಾರರು, ಜನರು ಹೀಗೆ ಯಾರೆಲ್ಲಾ ಅವರೊಂದಿಗೆ ಸೇರುವುದಿಲ್ಲವೋ ಮತ್ತು ಒಪ್ಪಿಕೊಳ್ಳುವುದಿಲ್ಲವೋ ಅವರೆಲ್ಲರನ್ನೂ ಅತ್ಯಂತ ಕ್ರೂರ ರೀತಿಯಲ್ಲಿ ಹತ್ಯೆಗೈಯುತ್ತಾರೆ ಮತ್ತು ಈ ಮೂಲಕ ನ್ಯಾಯಯುತವಾದ ಖಿಲಾಫತ್ ವ್ಯವಸ್ಥೆ ಎಂಬ ಘೋಷ ವಾಕ್ಯದಡಿಯಲ್ಲಿ “ನ್ಯಾಯಸಮ್ಮತವಾದ” ಅಧಿಕಾರವನ್ನು ಸ್ಥಾಪಿಸಬಹುದೆಂಬುದು ಖವಾರಿಜ್‌ಗಳಾದ ಉಗ್ರವಾದಿಗಳ ಭ್ರಮೆಯಾಗಿದೆ. ಎಷ್ಟರವರೆಗೆ ಈ ರೀತಿಯ ಆಡಳಿತವು ಸ್ಥಾಪಿಸಲ್ಪಡುವುದಿಲ್ಲವೋ ಅಷ್ಟರವರೆಗೂ ಇಸ್ಲಾಮ್ ಮತ್ತು ಮುಸ್ಲಿಮ್ ಸಮಾಜ ಅಸ್ತಿತ್ವದಲ್ಲಿಲ್ಲ ಎಂಬುದು ಉಗ್ರವಾದಿಗಳ ಹಾಗೂ ಅವರ ಸಮರ್ಥಕರ ವಿತಂಡವಾದವಾಗಿದೆ.

ಆಧುನಿಕ ಕಾಲದಲ್ಲಿ ಉಗ್ರವಾದ ಹುಟ್ಟಿಕೊಂಡದ್ದು ಹೇಗೆ? ಅವರ ಉದ್ದೇಶಗಳೇನು?

ಇಪ್ಪತ್ತನೆಯ ಶತಮಾನದಲ್ಲಿ ಇಂತಹದೇ ಉಗ್ರ ಚಿಂತನೆ ಮತ್ತು ತತ್ವ-ಸಿದ್ಧಾಂತಗಳು ಬೆಳೆದು ಬಂದಿರುವುದು ಸಯ್ಯಿದ್ ಕುತ್‌ಬ್, ಹಸನ್ ಅಲ್-ಬನ್ನಾ, ತಕೀಯುದ್ದೀನ್ ಅನ್ನಬ್‌ಹಾನೀ, ಹಾಗೂ ಪಾಕಿಸ್ಥಾನದಲ್ಲಿ ನೆಲೆಯೂರಿ ಸಂಘಟನೆ, ಖಿಲಾಫತ್ ಹಾಗೂ ಆಂದೋಲನದ ಹೆಸರಿನಲ್ಲಿ ಉಗ್ರ ರಾಜಕೀಯ ಸಿದ್ಧಾಂತಗಳನ್ನು ಬಿತ್ತಿದ ಆಧುನಿಕ ಖವಾರಿಜ್‌ಗಳ ಪಿತಾಮಹರುಗಳ ಬರಹಗಳಿಂದಾಗಿದೆ.

ಐಸಿಸ್ ಉಗ್ರವಾದಿ ಗುಂಪಿಗೆ ಸೇರಿದ ಬಹುತೇಕ ಜನರು ಇಸ್ಲಾಮ್‌ನ ಬಗ್ಗೆ ಅರಿವಿಲ್ಲದ ಅಜ್ಞಾನಿಗಳೂ, ಕ್ರಿಮಿನಲ್ ಮನೋಸ್ಥಿತಿಯ ಹಿನ್ನಲೆಯಿರುವವರೂ ಆಗಿದ್ದಾರೆ. ಈ ಉಗ್ರರು ಮುಸ್ಲಿಮ್ ಸಮಾಜದ ವಿರುದ್ಧ ಬಂಡಾಯ, ದಂಗೆ ಕ್ರಾಂತಿ ಮುಂತಾದವುಗಳನ್ನು ನಡೆಸುವುದರಲ್ಲಿ ಕಾರ್ಯನಿರತರಾಗಿದ್ದಾರೆ ಹಾಗೂ ನಕಲಿ ಧರ್ಮನಿಷ್ಠೆಯನ್ನು ಪ್ರಕಟಿಸುವವರಾಗಿರುವರು, ವಾಸ್ತವಿಕವಾಗಿ ಅವರ ಉದ್ದೇಶವು ರಾಜಕೀಯ, ಲೌಕಿಕ ಸಂಪತ್ತು, ಸ್ಥಾನಮಾನ ಮುಂತಾದವುಗಳನ್ನು ಗಳಿಸುವುದಾಗಿದೆ, ಆದರೆ ಮುಸ್ಲಿಮರನ್ನು ತಮ್ಮ ಗುಲಾಮರಾಗಿಸಲು, ಅವರನ್ನು ತಮ್ಮ ಗುಂಪಿನೆಡೆಗೆ ಆಕರ್ಷಿಸಲು ಅವರು ಧಾರ್ಮಿಕ ಉಡುಪುಗಳನ್ನು ಧರಿಸಿಕೊಂಡು, ಧರ್ಮರಕ್ಷಣೆ ಎಂಬ ಹೆಸರನ್ನು ಅಂಟಿಸಿಕೊಂಡು ಜನರನ್ನು ವಂಚಿಸುತ್ತಾರೆ.

ಅವರು ಇಸ್ಲಾಮಿನ ಒಳಿತಿಗಾಗಲೀ ಅಥವಾ ಮುಸ್ಲಿಮರ ಒಳಿತಿಗಾಗಲೀ ಸೇವೆ ಮಾಡುವ ಜನರಲ್ಲ. ವಾಸ್ತವ ಅಂಕಿಅಂಶಗಳ ಪ್ರಕಾರ ಅವರಿಂದ ಹತ್ಯೆಗೊಳಗಾದ ಶೇಕಡ 90% ಜನರು ಮುಸ್ಲಿಮರಾಗಿರುವರು ಮತ್ತು ಅವರು ಬಂಡಾಯ, ಕ್ರಾಂತಿ, ಅಸ್ಥಿರತೆ, ಯುದ್ಧ ಹಾಗೂ ದಾಳಿಗಳನ್ನು ನಡೆಸುವ ಮೂಲಕ ಭಯೋತ್ಪಾದನಾ ಚಟುವಟಿಕೆಗಳನ್ನು ಪ್ರಮುಖವಾಗಿ ತೊಡಗಿಸಿಕೊಳ್ಳುವುದು ಮುಸ್ಲಿಮ್ ರಾಷ್ಟ್ರಗಳ ವಿರುದ್ಧವಾಗಿದೆ. ಅವರ ಮೊದಲ ಶತ್ರುಗಳು ಅವರನ್ನು ಒಪ್ಪಿಕೊಳ್ಳದ ಮುಸ್ಲಿಮರಾಗಿದ್ದಾರೆ, ಅವರನ್ನು ಅಂಗೀಕರಿಸದ ಮುಸ್ಲಿಮ್ ಸಮಾಜವನ್ನು ತಮ್ಮ ನಿಕಟ ಶತ್ರುಗಳಾಗಿ ಅವರು ಪರಿಗಣಿಸುತ್ತಾರೆ.

ಮುಸ್ಲಿಮ್ ರಾಷ್ಟ್ರಗಳ ಅಧಿಕಾರವನ್ನು ಪಡೆಯುವುದು ಅವರ ಪ್ರಮುಖ ಉದ್ದೇಶವಾಗಿದೆ. ಮುಸ್ಲಿಮ್ ರಾಷ್ಟ್ರಗಳ ಹೊರತಾಗಿ ಅವರು ಜಗತ್ತಿನ ಇತರ ರಾಷ್ಟಗಳಲ್ಲಿ ತಮ್ಮ ವಿಕೃತ ಉಗ್ರ ಕೃತ್ಯಗಳನ್ನು ನಡೆಸಿರುವುದು ಕೇವಲ ಅದರ ಮುಂದುವರಿದ ಭಾಗವಾಷ್ಟೇ ಹೊರತು, ಅದು ಅವರ ಪ್ರಮುಖ ಅಜೆಂಡಾ ಅಥವಾ ಲಕ್ಷ್ಯವಾಗಿರಲಿಲ್ಲ. ಮುಸ್ಲಿಮ್ ಆಡಳಿತಗಾರರ ವಿರುದ್ಧ ದಂಗೆ ಎದ್ದು ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಕಾರ್ಯದಲ್ಲಿ ಈ ಉಗ್ರವಾದಿಗಳು ತೊಡಗಿದ್ದಾಗ ಹೊರ ರಾಷ್ಟ್ರವು ಇವರದೇ ದಾರಿಯಲ್ಲಿ ದುರುದ್ದೇಶದಿಂದ ಅಲ್ಲಿನ ಆಡಳಿತರೂಡ ಸರ್ಕಾರ ಅಥವಾ ಆಡಳಿತಗಾರರನ್ನು ಕೆಳಗಿಳಿಸಿ ತಮ್ಮ ಸೇನಾ ಬಲದೊಂದಿಗೆ ಬಲವಂತವಾಗಿ ಅಧಿಕಾರವನ್ನು ಕಸಿಯಲು ಯತ್ನಿಸಿರುವುದು ಉಗ್ರವಾದಿಗಳಿಗೆ ತಡೆಯಾಗಿ ಬಿಟ್ಟಿತು, ಇದರಿಂದ ಕುಪಿತರಾದ ಅವರು ಆ ರಾಷ್ಟ್ರಗಳ ವಿರುದ್ಧವೂ ತಮ್ಮ ಕುಕೃತ್ಯಗಳನ್ನು ಮುಂದುವರಿಸಿದ್ದಾರೆ ಅಷ್ಟೇ. ಅನ್ಯಾಯ, ಹಿಂಸೆ, ಅಭದ್ರತೆ, ರಾಜಕೀಯ ಅಸ್ಥಿರತೆಯು ದೇಶದಲ್ಲಿ ಉದಯವಾದಾಗ, ಕೊಲೆ, ಸಾಮೂಹಿಕ ಹತ್ಯೆಗಳು ದೇಶದಲ್ಲಿ ತಾಂಡವಾಡುವಾಗ ಹಾಗೂ ನ್ಯಾಯವು ಮರೀಚಿಕೆಯಾದರೆ, ಈ ಅಭದ್ರತೆಯನ್ನೇ ದಾಳವಾಗಿ ಪರಿವರ್ತಿಸಿಕೊಂಡು ಅದರಿಂದ ದುರ್ಲಾಭವನ್ನು ಪಡೆಯಲು ಯುವಜನರನ್ನು ಉಗ್ರವಾದದತ್ತ ಸೆಳೆದು ಅವರನ್ನು ಮರುಳು ಮಾಡುವ ಉಗ್ರವಾದಿಗಳ ವ್ಯವಸ್ಥಿತ ಒಳಸಂಚಗಳನ್ನು ಮುಸ್ಲಿಮರು ಅರಿತುಕೊಳ್ಳಬೇಕಾಗಿದೆ.

ಉಗ್ರವಾದಿಗಳ ದುಷ್ಟ ಸಂಚುಗಳು ಹಾಗೂ ಕಾರ್ಯತಂತ್ರಗಳು

ಈ ಉಗ್ರವಾದಿಗಳನ್ನು ಮುಸ್ಲಿಮರು ತಿರಸ್ಕರಿಸುತ್ತಾರೆ ಎಂದು ಸ್ವತಃ ಅವರಿಗೇ ಸ್ಪಷ್ಟವಾಗಿ ತಿಳಿದಿದೆ, ಅದಕ್ಕಾಗಿ ತಮ್ಮ ನಿಲುವುಗಳು ಮತ್ತು ಸಿದ್ಧಾಂತಗಳಿಗೆ ಜನಮನ್ನಣೆ ಪಡೆಯಲು ಅವರು ಹಲವಾರು ಹೊಸ ತಂತ್ರಗಳನ್ನು ರೂಪಿಸುತ್ತಾರೆ. ಈ ಪೈಕಿ ಅಜ್ಞಾನಿಗಳಾದ ಮುಸ್ಲಿಮ್ ಯುವಕರ ಭಾವನೆಗಳನ್ನು ಕೆರಳಿಸುವುದು ಸಹ ಅವರ ಒಂದು ತಂತ್ರಗಾರಿಕೆಯಾಗಿದೆ. ಇದರ ಮುಂದುವರಿದ ಭಾಗವಾಗಿ ಅವರು ಮುಸ್ಲಿಮೇತರ ರಾಷ್ಟಗಳಲ್ಲಿ ಭಯೋತ್ಪಾದನಾ ಕೃತ್ಯಗಳನ್ನು ನಡೆಸುತ್ತಾರೆ ಈ ಮೂಲಕ ಅಲ್ಲಿನ ಬಹುಸಂಖ್ಯಾತ ಸಮಾಜವು ಮುಸ್ಲಿಮರ ವಿರುದ್ಧ ಮುಗಿಬೀಳುವಂತಹ ಸನ್ನಿವೇಶಗಳನ್ನು ನಿರ್ಮಿಸುತ್ತಾರೆ, ತಮ್ಮ ಸುತ್ತ ಮುತ್ತಲಿನ ಜನರು ತಮ್ಮ ವಿರುದ್ಧ ಬಹಿಷ್ಕಾರ ಮನೋಭಾವದಿಂದ ಕಠೋರವಾಗಿ ವರ್ತಿಸುತ್ತಿರುವುದನ್ನು ಕಂಡು, ಆ ಸಮಾಜವು ತಮ್ಮ ವಿರುದ್ಧ ದಾಳಿ ನಡೆಸುತ್ತಿವೆ ಎಂಬ ಭೀತಿಯಲ್ಲಿ ಭಾವನಾತ್ಮಕವಾಗಿ ಕುಗ್ಗಿ ಹೋಗುವ ಮುಸ್ಲಿಮ್ ಯುವಕರು ಇವರ ಉಗ್ರ ಸಿದ್ದಾಂತಗಳೆಡೆಗೆ ಆಕರ್ಷಿತಗೊಂಡು ಕೊನೆಗೆ ಇವರ ಜಾಲಕ್ಕೆ ಬಹುಬೇಗನೆ ಬೀಳಲು ಇದೊಂದು ಪ್ರಮುಖ ಕಾರಣವೂ ಹೌದು. ಯುದ್ಧಪ್ರಚೋದನೆ ನೀಡುವ, ಜನರ ಭಾವನೆಗಳನ್ನು ಕೆರಳಿಸಿ ಸಂಘರ್ಷಗಳನ್ನು ಬಯಸುವ ಬಲಪಂಥೀಯ ಜನಾಂಗೀಯವಾದಿಗಳಿಗೆ ಹಾಗೂ ಉಗ್ರವಾದಿಗಳಿಗೆ ಈ ತಕ್ಫೀರೀ ಜಿಹಾದಿಗಳು (ಉಗ್ರವಾದಿಗಳು) ಒಂದು ಸಂತೋಷದಾಯಕ ಹಾಗೂ ಲಾಭದಾಯಕವಾದ ಉಪಕರಣವಾಗಿ ಮಾರ್ಪಟ್ಟಿರುವರು. ಅವರು ಈ ಖವಾರಿಜ್ ಉಗ್ರವಾದಿಗಳ ವಿಕೃತಿಗಳನ್ನು ತೋರಿಸಿಕೊಂಡು ಎಲ್ಲಾ ಮುಸ್ಲಿಮ್ ಸಮುದಾಯವನ್ನು ಆರೋಪಿಸ್ಥಾನದಲ್ಲಿ ಕೂರಿಸಿ ತಮ್ಮ ಗುಪ್ತ ಉದೇಶಗಳನ್ನು ಪೂರೈಸುತ್ತಿರುವರು. ಈ ಖವಾರಿಜ್ ಭಯೋತ್ಪಾದಕರಿಂದಾಗಿ ಇಸ್ಲಾಮಿಗಾಗಲೀ, ಮುಸ್ಲಿಮರಿಗಾಗಲೀ ಯಾವುದೇ ಲಾಭವಿಲ್ಲ ಬದಲಾಗಿ ನಷ್ಟವಾಗಿದೆ ಹಾಗೂ ಅವರಿಂದ ಅತ್ಯಂತ ಹೆಚ್ಚು ಬಲಿಯಾದವರು ಮುಸ್ಲಿಮರೇ ಆಗಿರುತ್ತಾರೆ ಎಂಬುದು ಬುದ್ಧಿಯಿರುವ ಯಾವುದೇ ಪ್ರಾಮಾಣಿಕ ವ್ಯಕ್ತಿಗೂ ಮನವರಿಕೆಯಾಗುವುದು.

ಇನ್ನು ತಂತ್ರಗಾರಿಕೆಯನ್ನು ರೂಪಿಸುವ ವಿಚಾರಲ್ಲಿ ಹೇಳುವುದಾದರೆ, ಅಪ್ರಾಮಾಣಿಕ ಶಿಕ್ಷಣತಜ್ಞರಿಗಿಂತಲೂ ಹಾಗೂ ಮಾನಸಿಕವಾಗಿ ವಿಚಲಿತರಾಗಿರುವ ಬಲಪಂಥೀಯವಾದಿಗಳಿಗಿಂತಲೂ ಹೆಚ್ಚು ಈ ಖವಾರಿಜ್‌ಗಳು ಚುರುಕುತನವನ್ನು ಹೊಂದಿದ್ದಾರೆ. ಈ ಬಲಪಂಥೀಯವಾದಿಗಳೂ ಕೂಡ ಅವರ ತಂತ್ರಗಾರಿಕೆಗೆ ಮೋಸಹೋಗಿದ್ದಾರೆ, ಏಕೆಂದರೆ ಈ ಉಗ್ರ ಐಸಿಸ್ ಅಲ್-ಖಾಯಿದ ಜಿಹಾದಿಗಳು ಹೇಗೆ ಕುರ್‌ಆನನ್ನು ದುರ್ವ್ಯಾಖ್ಯಾನಿಸುತ್ತಾರೋ ಅವರ ಅದೇ ಶೈಲಿಯಲ್ಲಿ ಈ ಬಲಪಂಥೀಯವಾದಿಗಳೂ ಕುರ್‌ಆನನ್ನು ಮತ್ತು ಇಸ್ಲಾಮ್‌ನ ಸಂದೇಶಗಳನ್ನು ದುರ್ವ್ಯಾಖ್ಯಾನಿಸುತ್ತಾರೆ. ಈ ದುರ್ವ್ಯಾಖ್ಯಾನವನ್ನು ಜನರ ಮಧ್ಯೆ ಹರಡುವಲ್ಲಿ ಉಗ್ರವಾದಿಗಳಂತೆ ಈ ಜನರೂ ಹರಡುತ್ತಿದ್ದಾರೆ, ಈ ಮೂಲಕ ಆ ಉಗ್ರವಾದಿಗಳ ಉದ್ದೇಶ ಮತ್ತು ಕೆಲಸವನ್ನು ಇವರು ಪುಕ್ಕಟೆಯಾಗಿ ಮಾಡುತ್ತಿದ್ದಾರೆ. ಕುರ್‌ಆನನ್ನು ಅರ್ಥೈಸುವ ಶೈಲಿಯಲ್ಲಿ ಇವರಿಬ್ಬರೂ ಒಂದೇ ನಾಣ್ಯದ ಎರಡು ಮುಖಗಳಂತಾಗಿದ್ದಾರೆ.! ಈ ಜನಾಂಗೀಯ ವಾದಿಗಳಿಗೆ ಮೊದಲೇ ಇಸ್ಲಾಮಿನ ಮೇಲೆ ದ್ವೇಷವಿತ್ತು, ಯಾವಾಗ ಐಸಿಸ್, ಅಲ್-ಖಾಯಿದಗಳಂತಹ ಗುಂಪುಗಳು ಹುಟ್ಟಿಕೊಂಡಿತೋ ಅದು ಇವರಿಗೆ ಇಸ್ಲಾಮಿನ ವಿರುದ್ಧ ಅಪಪ್ರಚಾರ ನಡೆಸಲು ಇನ್ನಷ್ಟು ಗಟ್ಟಿಯಾದ ಉಪಕರಣವಾಗಿ ಬಳಕೆಯಾಯಿತು. ವಾಸ್ತವವಾಗಿ ಇವರ ಇಂತಹ ಕೃತ್ಯಗಳಿಂದ ಬಲವಾಗುವುದು ಐಸಿಸ್ ಅಲ್-ಖಾಯಿದಗಳಂತಹ ಉಗ್ರ ಸಂಘಟನೆಗಳಾಗಿವೆ. ಇವರು ಸ್ವತಃ ಅವರ ವರ್ತಕರಂತೆ ಅರಿತೋ ಅರಿವಿಲ್ಲದೆಯೋ ಕೆಲಸಮಾಡುತ್ತಿದ್ದಾರೆ.

1990ರ ಹಿಂದಿನ ಇತಿಹಾಸ ತೆರೆದು ನೋಡಿದರೆ, “ಇಸ್ಲಾಮಿಕ ಭಯೋತ್ಪಾದನೆ” ಎಂಬ ಯಾವುದೊಂದೂ ಅಸ್ತಿತ್ವದಲ್ಲಿರಲಿಲ್ಲ. ಇದರಲ್ಲಿ ಮನವರಿಕೆಯಾಗುವುದೇನೆಂದರೆ ಭಯೋತ್ಪಾದನೆಯನ್ನು ಇಸ್ಲಾಮಿನ ಆದರ್ಶವೆಂಬಂತೆ ಚಿತ್ರಿಸಿರುವ ನೈಜ ಕಾರಣವು ರಾಜಕೀಯ ಪ್ರೇರಿತ ದುರುದ್ದೇಶಗಳಾಗಿವೆ. ಇಸ್ಲಾಮ್ ಭಯೋತ್ಪಾದನೆಯನ್ನು ಪ್ರಚೋದಿಸುತ್ತದೆ ಎಂಬ ವಾದವನ್ನು ವಾಸ್ತವಿಕತೆಯನ್ನು ಆಧಾರವಾಗಿಟ್ಟುಕೊಂಡು ನಡೆಸಲಾದ ಅಧ್ಯಯನಗಳು ತಿರಸ್ಕರಿಸುವುದನ್ನು ನಿಮಗೆ ಕಾಣಬಹುದಾಗಿದೆ. ಹಾಗಾಗಿ, ಈ ಬಲಪಂಥೀಯವಾದಿಗಳ ಪರಿಸ್ಥಿತಿ ಹೇಗೆಂದರೆ ಇವರು ಸ್ವತಃ ಆ ಉಗ್ರವಾದಿಗಳ ತಂತ್ರಗಾರಿಕೆಗೆ ಬಲಿಯಾಗಿದ್ದಾರೆ ಆದರೆ ಅವರಿಗೇ ಅದರ ಅರಿವಿಲ್ಲ ಎಂಬುದು ಅಚ್ಚರಿಯ ಸಂಗತಿಯಾಗಿದೆ. ಆ ಉಗ್ರ ಜಿಹಾದಿಗಳ ವಾದಗಳನ್ನು ತಡೆಯಬೇಕಾದ ಸಂದರ್ಭದಲ್ಲಿ ಸ್ವತಃ ಇವರೇ ಅವರ ಬಾಯಿಯಿಂದ ಕೇಳಿದ ದುರ್ವ್ಯಾಖ್ಯಾನಗೊಂಡ ಸಿದ್ಧಾಂತಗಳನ್ನು ಮುಸ್ಲಿಮರ ನಡುವೆ ಹರಿಯಬಿಟ್ಟು ಅಜ್ಞಾನಿಗಳಾದ ಮುಸ್ಲಿಮರು ಉಗ್ರ ಜಿಹಾದಿಗಳ ಸಿದ್ಧಾಂತವನ್ನು ಅಂಗೀಕರಿಸುವಂತೆ ಮಾಡಿಬಿಟ್ಟಿದ್ದಾರೆ. ಈ ಮೂಲಕ ಉಗ್ರ ಜಿಹಾದಿಗಳನ್ನು ಬಲಪಡಿಸುತ್ತಿದ್ದಾರೆ.

ಕೊನೆಯ ಮಾತು

ಒಟ್ಟಾರೆಯಾಗಿ ಹೇಳುವುದಾದರೆ, ಈ ಖವಾರಿಜ್ ಉಗ್ರವಾದಿಗಳ ಪ್ರಮುಖ ಸಮರವು ಇಸ್ಲಾಮ್, ಮುಸ್ಲಿಮ್ ಹಾಗೂ ಅವರ ಆಡಳಿತಗಾರರ ವಿರುದ್ಧವಾಗಿದೆ. ಮುಸ್ಲಿಮೇತರ ರಾಷ್ಟಗಳಲ್ಲಿ ಇವರು ಬಹುತೇಕವಾಗಿ ಕುಕೃತ್ಯಗಳನ್ನು ನಡೆಸಿರುವುದು ತಮ್ಮ ದಾರಿಗೆ ಅಡ್ಡಿಪಡಿಸಿದ ಕಾರಣಕ್ಕಾಗಿದೆ ಮತ್ತು ತಮ್ಮ ಗುಂಪನ್ನು ಬಲಪಡಿಸಲು ಮುಸ್ಲಿಮರನ್ನು ತಮ್ಮೆಡೆಗೆ ಆಕರ್ಷಿಸಲು ಪ್ರಚಾರದ ಒಂದು ತಂತ್ರಗಾರಿಕೆಯಾಗಿ ಮಾತ್ರವಾಗಿದೆ. ಇಂದಿನ ಕಾಲದ ಖವಾರಿಜ್ ಉಗ್ರವಾದಿಗಳ ಸಿದ್ಧಾಂತಗಳು ಹೆಚ್ಚಾಗಿಯೂ 19ನೇ ಮತ್ತು 20ನೇ ಶತಮಾನದಲ್ಲಿ “ಸಾಮಾಜಿಕ ನ್ಯಾಯ” ಎಂಬ ಹೆಸರಿನಲ್ಲಿ ನಡೆದ ಪಾಶ್ಚಾತ್ಯ ಕ್ರಾಂತಿಕಾರಿ ಆಂದೋಲನಗಳ ಉದಾಹರಣೆಯಂತಾಗಿದೆ. ಅವರು ಜನರನ್ನು ಒಗ್ಗೂಡಿಸಿಕೊಂಡು ಆಡಳಿತವನ್ನು ನೆಲೆಕಚ್ಚಿಸುವಲ್ಲಿ ಸಫಲರಾದರು, ಆದರೆ ಯಾವಾಗ ಮರು ಕ್ರಾಂತಿಯು ಇವರ ಬೆನ್ನಿಗೆ ತಿರುಗಿಬರುವುದೆಂದು ಕಂಡರೋ ಆಗ ಅವರು ವಿರೋಧಿಗಳನ್ನು ಹತ್ಯೆಮಾಡಲು ಪ್ರಾರಂಭಿಸಿದರು. ಖವಾರಿಜ್ ಉಗ್ರವಾದಿಗಳು ಈ ಕ್ರಾಂತಿಕಾರಿ ಸಿದ್ಧಾಂತಗಳಿಗೆ ತಮ್ಮ ಲಾಭಕ್ಕಾಗಿ ಇಸ್ಲಾಮ್‌ನ ಬಟ್ಟೆಯನ್ನು ಹೊದಿಸಿಕೊಂಡಿರುವರು ಅಷ್ಟೇ. ಸ್ವತಃ ಇಸ್ಲಾಮ್ ಎಂದಿಗೂ ಇಂತಹ ಸಿದ್ಧಾಂತಗಳನ್ನು ಪ್ರತಿಪಾದಿಸಿಲ್ಲ, ಇದನ್ನು ವಿರೋಧಿಸುವಲ್ಲಿ ಮುಂಚೂಣಿಯಲ್ಲಿ ನಿಂತು ಅತ್ಯಂತ ಹೆಚ್ಚು ಕಠೋರವಾಗಿ ಖಂಡಿಸಿದವರು ಇಸ್ಲಾಮಿನ ಉಲಮಾಗಳಾಗಿರುವರು (ವಿದ್ವಾಂಸರಾಗಿರುವರು). ಈ ಉಗ್ರವಾದಿಗಳ ಗುಂಪುಗಳೆಲ್ಲವೂ ವಾಸ್ತಕವಿಕವಾಗಿ ಖವಾರಿಜ್ ಸಿದ್ಧಾಂತ ಮತ್ತು ಪಾಶ್ಚಾತ್ಯ ಕ್ರಾಂತಿಕಾರಿ ಸಿದ್ಧಾಂತಗಳು ಮಿಲನವಾಗಿ ಹುಟ್ಟಿಕೊಂಡ ಪಾಪದ ಕೂಸಾಗಿದೆ. ಈ ಉಗ್ರ ಸಿದ್ಧಾಂತಗಳೆಲ್ಲವೂ ಇಸ್ಲಾಮ್‌ಗೆ ಅಪರಿಚಿತವಾದುದಾಗಿದೆ. ಇಸ್ಲಾಮ್ ಈ ವಿಷಪೂರಿತ, ವಿನಾಶಕಾರಿಯಾದ ಎಲ್ಲಾ ಸಿದ್ಧಾಂತಗಳಿಂದಲೂ ಸಂಪೂರ್ಣವಾಗಿ ಮುಕ್ತವಾಗಿದೆ.

ಅಬೂ ಹಮ್ಮಾದ್ ಸಲಾಹುದ್ದೀನ್ 
(ಮುಹರ್ರಮ್ 04, 1444/ಆಗಸ್ಟ್ 03, 2022)