w
ಸೌದಿ ಅರೇಬಿಯಾದ ಹಿರಿಯ ವಿದ್ವಾಂಸರಾದ ಅಶ್ಶೈಖ್ ಸಾಲಿಹ್ ಅಲ್-ಫೌಝಾನ್ (حَفِظَهُ اللَّهُ) ರವರೊಂದಿಗೆ ಪ್ರಶ್ನಿಸಲಾಯಿತು :
ಪ್ರಶ್ನೆ : ಗೌರವಾನ್ವಿತರಾದ ಅಶ್ಶೈಖ್ ಸಾಲಿಹ್ ಅಲ್ ಫೌಝಾನ್ (حَفِظَهُ اللَّهُ) ರವರೇ, ರಸೂಲ್ (H) ರವರನ್ನು ನಿಷ್ಕಳಂಕವಾಗಿ ಪ್ರೀತಿಸುವುದು ಹೇಗೆ? ಮತ್ತು ನನ್ನ ನಡೆ ಹಾಗೂ ನುಡಿಗಳಲ್ಲಿ ರಸೂಲ್ (H) ರವರನ್ನು ಅನುಸರಿಸುತ್ತಿದ್ದೇನೆಂದು ನಾನು ಹೇಗೆ ಅರಿಯಬಲ್ಲೆನು?
ಉತ್ತರ : ಪರಮ ದಯಾಮಯನೂ ಕರುಣಾಮಯಿಯೂ ಆದ ಅಲ್ಲಾಹುವಿನ ನಾಮದಿಂದ. ಸರ್ವಸ್ತುತಿಗಳೂ ಜಗದೊಡೆಯನಾದ ಅಲ್ಲಾಹುವಿಗೆ ಮೀಸಲು. ಅಲ್ಲಾಹುವಿನ ಸಲಾತ್ ಮತ್ತು ಸಲಾಮ್ ನಮ್ಮ ಪ್ರವಾದಿಯಾದ ಮುಹಮ್ಮದ್ (H) ರವರ ಮೇಲೆ, ಅವರ ಕುಟುಂಬದ ಮೇಲೆ ಹಾಗೂ ಅವರೆಲ್ಲಾ ಸಹಾಬಾಗಳ ಮೇಲೆ ಇರಲಿ.
ಮುಹಮ್ಮದ್ (H) ಅಲ್ಲಾಹುವಿನ ಸಂದೇಶವಾಹಕರಾಗಿರುವರೆಂದು ಸಾಕ್ಷ್ಯವಹಿಸಲು ಅನಿವಾರ್ಯತೆಗಳ ಪೈಕಿಯಿರುವ ಕಾರ್ಯವೇನೆಂದರೆ : ಅವರ ಸಂದೇಶದಲ್ಲಿ ವಿಶ್ವಾಸವನ್ನು ಹೊಂದಿದರೆ ಮತ್ತು ಅದಕ್ಕೆ ನೀನು ಸಾಕ್ಷ್ಯವಹಿಸಿದರೆ, ಆ ಬಳಿಕ ಖಂಡಿತವಾಗಿಯೂ ಪ್ರವಾದಿ ಮುಹಮ್ಮದ್ (H) ರವರಿಗೆ ನೀಡಬೇಕಾದ ಅನೇಕ ಹಕ್ಕುಗಳು ನಿನ್ನ ಮೇಲೆ ಕಡ್ಡಾಯವಾಗುತ್ತದೆ. ಅಲ್ಲಾಹುವನ್ನು ಪ್ರೀತಿಸಿದ ಬಳಿಕ ಇತರೆಲ್ಲರಿಗಿಂತಲೂ ಹೆಚ್ಚಾಗಿ ಪ್ರವಾದಿ (H) ರವರನ್ನು ಪ್ರೀತಿಸುವುದು ಅವುಗಳಲ್ಲಿ ಶ್ರೇಷ್ಟವಾದುದಾಗಿದೆ.
ಹದೀಸ್‌ನಲ್ಲಿ ವರದಿಯಾದಂತೆ, ಪ್ರವಾದಿ (H) ಹೇಳಿರುವರು :
“ಇತರೆಲ್ಲರಿಗಿಂತಲೂ ಹೆಚ್ಚಾಗಿ ಅಲ್ಲಾಹು ಮತ್ತು ಅವನ ರಸೂಲ್ (H) ರನ್ನು ಇಷ್ಟಪಡುವವರೆಗೆ ಓರ್ವ ದಾಸನು ಈಮಾನಿನ ಮಾಧುರ್ಯವನ್ನು ಅನುಭವಿಸಲಾರನು. ಹಾಗೂ ಅಲ್ಲಾಹುವಿಗಾಗಿಯೇ ಹೊರತು ಅವನು ಇನ್ನೊಬ್ಬನನ್ನು ಪ್ರೀತಿಸಲಾರನು ಮತ್ತು ಅವನು ಬೆಂಕಿಗೆ ಎಸೆಯಲ್ಪಡುವುದನ್ನು ಹೇಗೆ ಅಸಹ್ಯಪಡುವನೋ ಅದೇ ರೀತಿ ಅಲ್ಲಾಹು ಅವನನ್ನು (ಕುಫ್ರ್‌ನಿಂದ) ಸಂರಕ್ಷಿಸಿದ ಬಳಿಕ ಅವನು ಸತ್ಯನಿಷೇಧದೆಡೆಗೆ ಮರಳುವುದನ್ನು ಅಸಹ್ಯಪಡುವನು.” (ಬುಖಾರಿ ಮತ್ತು ಮುಸ್ಲಿಮ್)
ಇನ್ನೊಂದು ಹದೀಸ್‌ನ ವರದಿಯಂತೆ, ಉಮರ್ ಬಿನ್ ಖತ್ತಾಬ್ (I) (ಒಮ್ಮೆ) ಪ್ರವಾದಿ (H) ರವರಿಗೆ ಹೇಳಿದರು :
“ಓ ಅಲ್ಲಾಹುವಿನ ಸಂದೇಶವಾಹಕರೇ!, ನನ್ನನ್ನು ಹೊರತುಪಡಿಸಿ ಇತರೆಲ್ಲರಿಗಿಂತಲೂ ಹೆಚ್ಚು ನೀವು ನನಗೆ ಇಷ್ಟವಾಗಿರುವಿರಿ. ಆಗ ಪ್ರವಾದಿ (H) ಹೇಳಿದರು : ಇಲ್ಲ, ಓ ಉಮರ್! ನಿನಗಿಂತಲೂ ಹೆಚ್ಚು ನೀನು ನನ್ನನ್ನು ಇಷ್ಟಪಡುವ ತನಕ (ನಿನ್ನ ಈಮಾನ್ ಪರಿಪೂರ್ಣವಾಗದು). ಆಗ ಉಮರ್ (I) ಹೇಳಿದರು : ಅಲ್ಲಾಹುವಿನಾಣೆ! ಅಲ್ಲಾಹನ ಸಂದೇಶವಾಹಕರೇ, ಈಗ ಇತರೆಲ್ಲರಿಗಿಂತಲೂ, ನನಗಿಂತಲೂ ನೀವು ನನಗೆ ಹೆಚ್ಚು ಇಷ್ಟವಾಗಿರುವಿರಿ. ಆಗ ಪ್ರವಾದಿ (H) ಹೇಳಿದರು : ಈಗ (ನಿನ್ನ ಈಮಾನ್ ಪರಿಪೂರ್ಣವಾಗಿದೆ), ಓ ಉಮರ್!.” (ಬುಖಾರಿ)
ಪ್ರವಾದಿ (H) ರವರನ್ನು ಇಷ್ಟಪಡುವುದು ಕಡ್ಡಾಯವಾಗಿದೆ. ಅದು ಅವರಿಗಿರುವ ಹಕ್ಕುಗಳಾಗಿವೆ. ಮುಹಮ್ಮದ್ (H) ಅಲ್ಲಾಹುವಿನ ಸಂದೇಶವಾಹಕರೆಂದು ಸಾಕ್ಷ್ಯವಹಿಸಲು ಅಗತ್ಯವಿರುವ ಅನಿವಾರ್ಯತೆಗಳ ಪೈಕಿ (ಕೆಲವು ಕಾರ್ಯಗಳೇನೆಂದರೆ) :
ಪ್ರವಾದಿಯ (ಮೇಲಿನ) ಪ್ರೀತಿಯು ಪ್ರವಾದಿಯನ್ನು ಅನುಸರಿಸುವ ಅನಿವಾರ್ಯತೆಯನ್ನುಂಟುಮಾಡುತ್ತದೆ ಹಾಗೂ ಇತರರು ಯಾರೇ ಇರಲಿ ಅವರೆಲ್ಲರ ಮಾತುಗಳಿಗಿಂತ ಪ್ರವಾದಿ (H) ರವರ ಮಾತುಗಳಿಗೆ ಹೆಚ್ಚು ಆದ್ಯತೆಯನ್ನು ನೀಡಬೇಕಾಗಿದೆ.
ರಸೂಲ್ (H) ಅನುಸರಿಸದೆ ಅವರನ್ನು ಪ್ರೀತಿಸುತ್ತೇನೆಂದು ಯಾರು ವಾದಿಸುತ್ತಾನೋ ಅಥವಾ (ದೀನ್‌ನಲ್ಲಿ) ನೂತನಾಚಾರಗಳನ್ನು ನಿರ್ಮಿಸುತ್ತಾನೋ ಹಾಗೂ ನೂತನಾಚಾರಗಳನ್ನು ನಿರ್ಮಿಸಿ ತಾನು ರಸೂಲ್ (H) ರನ್ನು ಪ್ರೀತಿಸುತ್ತೇನೆಂದು ಯಾರು ಭಾವಿಸುತ್ತಾನೋ, ಖಂಡಿತವಾಗಿಯೂ ಅವನು ರಸೂಲ್ (H) ರನ್ನು ಪ್ರೀತಿಸುವ ವಿಷಯದಲ್ಲಿ ಸುಳ್ಳು ಹೇಳುತ್ತಿರುವನು.
(ಹೇಗೆ) ಪ್ರವಾದಿ ಜನ್ಮದಿನಾಚರಣೆಯನ್ನು ಆಚರಿಸಿಕೊಂಡು (ತಾವು) ಪ್ರವಾದಿ (H) ರನ್ನು ಪ್ರೀತಿಸುತ್ತಾರೆಂದು ವಾದಿಸುತ್ತಾರೋ (ಇವರು ಸುಳ್ಳು ಹೇಳಿದಂತೆ ಅವರೂ ಕೂಡ ಹೇಳುವರು).
ಈ ಜನ್ಮದಿನಾಚರಣೆಗಳೆಲ್ಲವೂ ನೂತನಾಚಾರವಾಗಿದೆ (ಬಿದ್ಅತ್‍ಗಳಾಗಿವೆ). ರಸೂಲ್ (H) ರವರ ಜನ್ಮದಿನಾಚರಣೆಗಳು. ಇದು ನೂತನಾಚಾರವಾಗಿದೆ. ಅವುಗಳ ಬಗ್ಗೆ ಅಲ್ಲಾಹು ಯಾವುದೇ ಆಧಾರ ಪ್ರಮಾಣವನ್ನು ಇಳಿಸಿಕೊಟ್ಟಿಲ್ಲ.
ಪ್ರವಾದಿ (H) ಹೇಳಿರುವರು :
« عَلَيْكُمْ بِسُنَّتِي وَسُنَّةِ الْخُلَفَاءِ الْمَهْدِيِّينَ الرَّاشِدِينَ تَمَسَّكُوا بِهَا وَعَضُّوا عَلَيْهَا بِالنَّوَاجِذِ وَإِيَّاكُمْ وَمُحْدَثَاتِ الأُمُورِ فَإِنَّ كُلَّ مُحْدَثَةٍ بِدْعَةٌ وَكُلَّ بِدْعَةٍ ضَلاَلَةٌ »
“ನನ್ನ ಸುನ್ನತ್ಅನ್ನು (ಮಾರ್ಗದರ್ಶನವನ್ನು) ಮತ್ತು ಸನ್ಮಾರ್ಗಿಗಳಾದ ಖಲೀಫರುಗಳ (ಅಲ್-ಖುಲಫಾಉರ್ರಾಶಿದೂನ್‍ಗಳ) ಸುನ್ನತ್ಅನ್ನು ಬಿಗಿಯಾಗಿ ಹಿಡಿದುಕೊಳ್ಳಿರಿ, ಅದಕ್ಕೆ ಧೃಡವಾಗಿ ಹೊಂದಿಕೊಂಡಿರಿ, ಮತ್ತು ಹೊಸದಾಗಿ ಸೇರಿಸಲ್ಪಟ್ಟ ಕಾರ್ಯಗಳ ಕುರಿತು ಜಾಗರೂಕರಾಗಿರಿ, ಹೊಸದಾಗಿ ಸೇರಿಸಲ್ಪಟ್ಟ ಕಾರ್ಯಗಳೆಲ್ಲವೂ ಬಿದ್ಅತ್‍ಗಳಾಗಿವೆ (ನವೀನಾಚಾರಗಳಾಗಿವೆ), ಬಿದ್ಅತ್‍ಗಳೆಲ್ಲವೂ ಪಥಭ್ರಷ್ಟತೆಯಾಗಿದೆ.” (ಅಬೂ ದಾವೂದ್ : 4607, ಅಹ್ಮದ್ 4/126)
ಪ್ರವಾದಿ (H) ಹೇಳಿರುವರು :
« مَنْ أَحْدَثَ فِي أَمْرِنَا هَذَا مَا لَيْسَ مِنْهُ فَهُوَ رَدٌّ »
“ನಮ್ಮ (ದೀನ್‌ನ) ಕಾರ್ಯಕ್ಕೆ ಅದರಲ್ಲಿಲ್ಲದ ಹೊಸ ಆಚಾರವನ್ನು ಯಾರಾದರೂ ಹೊಸದಾಗಿ ಸೇರಿಸಿದರೆ ಅದು ತಿರಸ್ಕೃತವಾಗಿದೆ.” (ಸಹೀಹ್ ಅಲ್-ಬುಖಾರಿ : 2697, ಸಹೀಹ್ ಮುಸ್ಲಿಮ್ : 1718)
ಅಂದರೆ ಅವನಿಂದ ಅದು (ಕರ್ಮಗಳು) ತಿರಸ್ಕೃತವಾಗಿದೆ ಹಾಗೂ ಅವುಗಳನ್ನು ಅಲ್ಲಾಹು ಸ್ವೀಕರಿಸಲಾರನು. ಆದ್ದರಿಂದ ಪ್ರವಾದಿ (H) ರನ್ನು ನೈಜ ರೀತಿಯಲ್ಲಿ ಪ್ರೀತಿಸಲು ಅಗತ್ಯವಿರುವ ಅನಿವಾರ್ಯತೆಗಳ ಪೈಕಿಯಿರುವ (ಕಾರ್ಯವೇನೆಂದರೆ) ಅವರನ್ನು (H) ಅನುಸರಿಸುವುದಾಗಿದೆ.
ಅಲ್ಲಾಹುವಿನ (ಮೇಲಿನ) ಪ್ರೀತಿ ಹಾಗೂ ಅವನ ವಚನಗಳಿಗೆ (ಮೊದಲ) ಆದ್ಯತೆಯನ್ನು ನೀಡಿ, ಆ ಬಳಿಕ ಇತರರು ಯಾರೇ ಇರಲಿ ಅವರೆಲ್ಲರಿಗಿಂತಲೂ ಪ್ರವಾದಿ (H) ರವರ ಮಾತುಗಳಿಗೆ ಆದ್ಯತೆಯನ್ನು ನೀಡುವುದಾಗಿದೆ. ಇದುವೇ ಪ್ರವಾದಿ (H) ರವರ (ಮೇಲಿನ) ಪ್ರೀತಿಯ ನೈಜ ಸಂಕೇತ. ಹಾಗೆಯೇ ಪ್ರವಾದಿ (H) ರನ್ನು ಪ್ರೀತಿಸಲು ಬೇಕಾದ ಅತ್ಯಗತ್ಯ ಕಾರ್ಯವೇನೆಂದರೆ – ಅವರನ್ನು (H) ಅನುಸರಿಸುವುದು ಮತ್ತು ಅವರಿಗೆ (H) ಅವಿಧೇಯತೆಯನ್ನು ತೋರದಿರುವುದು.
ಕವಿಯೊಬ್ಬನು ಹೇಳಿದಂತೆ : “ಒಂದು ವೇಳೆ ನಿನ್ನ ಪ್ರೀತಿಯು ನಿಜವೇ ಆಗಿದ್ದರೆ ಖಂಡಿತವಾಗಿಯೂ ನೀನು ಅವರಿಗೆ (ಪ್ರೀತಿಸಲ್ಪಟ್ಟವರಿಗೆ) ವಿಧೇಯನಾಗುತ್ತಿದ್ದೆ. ಯಾಕೆಂದರೆ ಪ್ರೀತಿಸುವವರು ತಾನು ಪ್ರೀತಿ ಮಾಡುವವರಿಗೆ ವಿಧೇಯತೆಯನ್ನು ತೋರುತ್ತಾರೆ.”
ಆದ್ದರಿಂದ ರಸೂಲ್ (H) ರವರ ಆಜ್ಞೆ ಮತ್ತು ನಿಷೇಧಗಳನ್ನು ಪಾಲಿಸಲು ಪ್ರತಿಯೋರ್ವ ವ್ಯಕ್ತಿಯ ಮೇಲೂ ಕಡ್ಡಾಯವಾಗಿದೆ.
ಜನರ ಪೈಕಿ ಅಲ್ಲಾಹುವಿನ ಸಂದೇಶವಾಹಕರ (H) ಮೇಲೆ ಅತ್ಯಂತ ಹೆಚ್ಚು ಪ್ರೀತಿಯನ್ನು ತೋರಿದವರು ಅವರ ಸಹಾಬಾಗಳಾಗಿರುವರು. ಆದ್ದರಿಂದಲೇ ಅವರು (ಸಹಾಬಾಗಳು) ಪ್ರವಾದಿ (H) ರವರ (ಕಾಲದಲ್ಲಿ) ಜೊತೆ ನಿಂತು ಹಾಗೂ ತದನಂತರವೂ ಕೂಡ ಹೋರಾಡಿದರು. ಅಲ್ಲಾಹುವಿನ ಸಂದೇಶವಾಹಕ (H) ರವರ ನೆರವಿಗಾಗಿ ತಮ್ಮ ಸಂಪತ್ತು ಮತ್ತು ಪ್ರಾಣವನ್ನೇ ಮುಡಿಪಾಗಿಟ್ಟರು. ಹೀಗೆ ಅವರನ್ನು ಆದರಿಸಿ ಗೌರವಿಸಿ ಬೆಳೆದರು.
﴿ فَالَّذِينَ آمَنُوا بِهِ وَعَزَّرُوهُ وَنَصَرُوهُ وَاتَّبَعُوا النُّورَ الَّذِي أُنزِلَ مَعَهُ ۙ أُولَـٰئِكَ هُمُ الْمُفْلِحُونَ ٧٥١ ﴾
“ಆದ್ದರಿಂದ ಆ ಪ್ರವಾದಿಯಲ್ಲಿ ವಿಶ್ವಾಸವಿಡುವವರು, ಅವರನ್ನು ಆದರಿಸಿ ಗೌರವಿಸುವವರು, ಸಹಾಯ ಮಾಡುವವರು ಮತ್ತು ಅವರೊಂದಿಗೆ ಅವತೀರ್ಣಗೊಂಡಿರುವ ಪ್ರಕಾಶವನ್ನು ಅನುಸರಿಸುವವರು ಯಾರೋ ಅವರೇ ಯಶಸ್ವಿಯಾದವರಾಗಿರುವರು.” (ಸೂರಃ ಅಲ್-ಅಅ್‍ರಾಫ್ :157)
ಅವರು (ಸಹಾಬಗಳು) ಪ್ರವಾದಿ (H) ರವರ ಮೇಲೆ ವಿಶ್ವಾಸವನ್ನಿಟ್ಟರು, ಅವರನ್ನು ಆದರಿಸಿ ಗೌರವಿಸಿದರು ಮತ್ತು ಅವರಿಗೆ ಸಹಾಯವನ್ನು ನೀಡಿದರು ಅಂದರೆ ಅವರ ದೀನ್‍ಗೆ ಸಹಾಯ ಮಾಡಿದರು ಹಾಗೂ ಅವರಿಗೆ ಅವತೀರ್ಣಗೊಂಡ ಪ್ರಕಾಶವನ್ನು ಅನುಸರಿಸಿದರು.
(ಆದ್ದರಿಂದ) ರಸೂಲ್ (H) ರವರಿಗೆ ಅವತೀರ್ಣಗೊಂಡ ಪ್ರಕಾಶವನ್ನು (ಮಾರ್ಗದರ್ಶನವನ್ನು) ಅನುಸರಿಸದೆ ತಾನು (ಕೇವಲ) ರಸೂಲ್ H ರನ್ನು ಪ್ರೀತಿಸುತ್ತೇನೆಂದು ಯಾರು ವಾದಿಸುತ್ತಾನೋ ವಾಸ್ತವದಲ್ಲಿ ಅವನು ಪ್ರವಾದಿ (H) ರನ್ನು ಪ್ರೀತಿಸುವ ವಿಷಯದಲ್ಲಿ ಸುಳ್ಳನ್ನು ಹೇಳುತ್ತಿರುವನು.
ಅನುವಾದ : ಅಬೂ ಹಮ್ಮಾದ್
ಹೆಚ್ಚಿನ ಓದಿಗಾಗಿ :
ಪ್ರವಾದಿ ಜನ್ಮದಿನಾಚರಣೆ ಸಮ್ಮತಾರ್ಹವೇ? -ಅಶ್ಶೈಖ್ ಅಬ್ದುಲ್ ಅಝೀಝ್ ಬಿನ್ ಬಾಝ್ (V) ಹಿರಿಯ ವಿದ್ವಾಂಸರು, ಸೌದಿ ಅರೇಬಿಯಾ.
ಪ್ರವಾದಿಯವರ ಜನ್ಮದಿನವನ್ನು ಆಚರಿಸುವುದು ಅವರನ್ನು ಪ್ರೀತಿಸುವುದರ ಸಂಕೇತವಾಗಿದೆಯೇ? – ಅಶ್ಶೈಖ್ ಸಾಲಿಹ್ ಅಲ್-ಫೌಝಾನ್ (حَفِظَهُ اللَّهُ) ಹಿರಿಯ ವಿದ್ವಾಂಸರು, ಸೌದಿ ಅರೇಬಿಯಾ.