ಪ್ರವಾದಿಯವರ ಸುನ್ನತ್ ಪ್ರಕಾರ ವುದೂ ನಿರ್ವಹಿಸುವುದು ಹೇಗೆ?

w

ಅಬೂ ಹುರೈರಃ (I) ರಿಂದ ವರದಿ, ಪ್ರವಾದಿ (H) ಹೇಳಿದರು :

« إِنَّ أُمَّتِي يُدْعَوْنَ يَوْمَ القِيَامَةِ غُرًّا مُحَجَّلِينَ مِنْ آثَارِ الوُضُوءِ »

“ಖಂಡಿತವಾಗಿಯೂ ನನ್ನ ಸಮುದಾಯವನ್ನು ಪುನರುತ್ಥಾನ ದಿನದಂದು ವುದೂವಿನ ಗುರುತುಗಳಿಂದ ಗುರ್ರನ್ ಮುಹಜ್ಜಲೀನ್ ಎಂದು (ಅರ್ಥಾತ್ ಮುಖ, ಕೈ ಹಾಗೂ ಕಾಲುಗಳು ಪ್ರಜ್ವಲಿಸುವವರೆಂದು) ಕರೆಯಲಾಗುತ್ತದೆ.” (ಸಹೀಹ್ ಅಲ್-ಬುಖಾರಿ : 136)

ವುದೂ ನಿರ್ವಹಿಸುವ ಕ್ರಮಗಳು [1] :

1. ನಿಯ್ಯತ್ : ನಿಯ್ಯತ್ ಎಂಬುದು ಮನಸ್ಸಿನಲ್ಲಿ ದೃಢಸಂಕಲ್ಪವಿಡುವುದಾಗಿದೆ. ನಿಯ್ಯತ್ಅನ್ನು (ಬಾಯಲ್ಲಿ) ಉಚ್ಛರಿಸುವುದು ಬಿದ್ಅತ್ ಆಗಿದೆ.

2. ‘ಬಿಸ್ಮಿಲ್ಲಾಹ್’ ಎಂದು ಹೇಳುವುದು (ವುದೂವನ್ನು ಆರಂಭಿಸುವಾಗ ‘ಬಿಸ್ಮಿಲ್ಲಾಹ್’ ಎಂದು ಹೇಳಿರಿ).

3. ಅಂಗೈಯನ್ನು ಮೂರು ಬಾರಿ ತೊಳೆಯುವುದು.

01

4. ಮೂರು ಬಾರಿ ಬಾಯಿ ಮುಕ್ಕಳಿಸುವುದು ಹಾಗೂ ಅದೇ ವೇಳೆ ಕೈ ಮುಷ್ಟಿಯಷ್ಟು ನೀರನ್ನು ಮೂಗಿಗೆಳೆದು ಹೊರಬಿಡುವುದು. ನೀರನ್ನು ಮೂಗಿನೊಳಗೆ ಸಾಧ್ಯವಾದಷ್ಟು ಎಳೆಯುವುದು (ಅಲ್-ಇಸ್ತಿನ್‍ಶಾಕ್) ಮತ್ತು ಆ ನೀರನ್ನು ಹೊರಬಿಡುವುದು (ಅಲ್-ಇಸ್ತಿನ್‍ಸಾರ್).

02 v2

5. ಮುಖವನ್ನು ಮೂರು ಬಾರಿ ತೊಳೆಯುವುದು. (ಮುಖದ ವ್ಯಾಪ್ತಿಯು ಅಗಲದಲ್ಲಿ ಒಂದು ಕಿವಿಯಿಂದ ಇನ್ನೊಂದು ಕಿವಿಯವರೆಗೆ ಹಾಗೂ ಉದ್ದದಲ್ಲಿ ತಲೆಕೂದಲಿನ ಮುಂಜುಟ್ಟು ಭಾಗದ ಮುಂದಿರುವ ಕೂದಲಿನ ರೇಖೆಯಿಂದ ಗದ್ದದವರೆಗೆ ಆಗಿರುತ್ತದೆ).

03

ತಖ್ಲೀಲ್ ಅಲ್-ಲಿಹ್ಯಃ : ಗಡ್ಡದೆಡೆಯಲ್ಲಿ ಬೆರಳುಗಳಿಂದ ನೀರನ್ನು ಹರಿಬಿಟ್ಟು ತೊಳೆಯುವುದು ಪ್ರವಾದಿಯ (H) ಸುನ್ನತ್ ಆಗಿರುತ್ತದೆ.

6. ಬಲ ಕೈಯಿಂದ ಆರಂಭಿಸಿ ತನ್ನೆರಡು ಕೈಗಳನ್ನು ಬೆರಳುಗಳ ತುದಿಯಿಂದ ಮೊಣಕೈಗಳ ವರೆಗೆ ಮೂರುಬಾರಿ ತೊಳೆಯುವುದು.

05 v3

7. ತಲೆ ಮತ್ತು ಕಿವಿಗಳನ್ನು ಒಂದು ಬಾರಿ ಸವರುವುದು. 

06 v2

ತಲೆಯ ಮುಂಭಾಗದಿಂದ ಆರಂಭಿಸಿ ಹಿಂಭಾಗವರೆಗೂ ಒದ್ದೆಯಾದ ಕೈಗಳಿಂದ ಸವರುವುದು ಮತ್ತು ಅಲ್ಲಿಂದ ಪುನಃ ತಲೆಯ ಮುಂಭಾಗದವರೆಗೆ ಸವರುವುದು, ನಂತರ ಕಿವಿಗಳ ಒಳಗೆ ತೋರುಬೆರಳಿನಿಂದಲೂ ಹೊರಗೆ ಹೆಬ್ಬೆರಳಿನಿಂದಲೂ ಸವರುವುದು.

07

8. ಬಲ ಕಾಲಿನಿಂದ ಆರಂಭಿಸಿ ಕಾಲುಗಳು ಮತ್ತು ಹರಡುಗಂಟುಗಳನ್ನು ಮೂರು ಬಾರಿ ತೊಳೆಯುವುದು. ಕಾಲುಗಳು ಮತ್ತು ಹರಡುಗಂಟುಗಳನ್ನು ತೊಳೆಯುವುದು ಮತ್ತು ಕಾಲ್ಬೆರಳುಗಳ ನಡುವೆ ಸವರುವುದು.

08

9. ವುದೂ ಪೂರ್ಣವಾದ ನಂತರ ಶಹಾದಃ ಹಾಗೂ ದುಆವನ್ನು ಹೇಳುವುದು.

« أَشْهَدُ أَنْ لَا إِلَهَ إِلَّا اللَّهُ وَحْدَهُ لَا شَرِيكَ لَهُ، وَأَشْهَدُ أَنَّ مُحَمَّدًا عَبْدُهُ وَرَسُولُهُ، اللَّهُمَّ اجْعَلْنِي مِنَ التَّوَّابِينَ، وَاجْعَلْنِي مِنَ المُتَطَهِّرِينَ »

“ಅಲ್ಲಾಹುವಿನ ಹೊರತು ಆರಾಧನೆಗೆ ನೈಜ ಹಕ್ಕುದರಾರು ಯಾರೂ ಇಲ್ಲ, ಅವನು ಏಕೈಕನಾಗಿರುವನು, ಅವನಿಗೆ ಸಹಭಾಗಿಗಳಾರೂ ಇಲ್ಲವೆಂದು ನಾನು ಸಾಕ್ಷ್ಯವಹಿಸುತ್ತೇನೆ ಮತ್ತು ಮುಹಮ್ಮದ್ (H) ರವರು ಆತನ ದಾಸರೂ ಸಂದೇಶವಾಹಕರೂ ಆಗಿದ್ದಾರೆಂದು ನಾನು ಸಾಕ್ಷ್ಯವಹಿಸುತ್ತೇನೆ. ಓ ಅಲ್ಲಾಹ್! ನಿನ್ನೆಡೆಗೆ ಸದಾ ಪಶ್ಚಾತ್ತಾಪಪಟ್ಟು ಮರಳುವವರ ಪೈಕಿ ಮತ್ತು ಶುಚಿತ್ವವನ್ನು ಪಾಲಿಸುವವರ ಪೈಕಿ ನನ್ನನ್ನು ಸೇರಿಸು.”

 

10. ತರ್ತೀಬ್ (ಕ್ರಮಪ್ರಕಾರ ನಿರ್ವಹಿಸುವುದು) : ವುದೂ ನಿರ್ವಹಿಸುವಾಗ ಈ ಮೇಲೆ ಉಲ್ಲೇಖಿಸಲಾದ ಸರದಿಯನ್ನು ಪಾಲಿಸುವುದು.

11. ಪ್ರತಿಯೊಂದು ಅಂಗಾಂಗವನ್ನೂ ಒಂದರ ನಂತರ ಒಂದರಂತೆ ಕೊನೆಯವರೆಗೂ ಎಡೆಬಿಡದೆ ತೊಳೆಯುವುದು – ಮೊದಲು ತೊಳೆದ ಅಂಗಾಂಗವು ಒಣಗಲು ಸಮಯ ಹಾಗೂ ಅಂತರ ಕೊಡದಂತೆ ತೊಳೆಯುವುದು.

12. ಋತುಸ್ರಾವ ಅಥವಾ ಲೈಂಗಿಕ ಅಶುದ್ಧಿಯು ಸಂಭವಿಸಿದರೆ ಸಂಪೂರ್ಣ ಗುಸ್‌ಲ್ (ಸ್ನಾನ) ಮಾಡಬೇಕಾಗಿದೆ.

ವುದೂವನ್ನು ಅಸಿಂಧುಗೊಳಿಸುವ ಕೆಲವು ಕಾರ್ಯಗಳು :

1. ಗುಪ್ತಾಂಗಗಳಿಂದ ಮಲ, ಮೂತ್ರ ಅಥವಾ ವಾಯು ಹೊರಬರುವುದು.
2. ನಿದ್ದೆ, ಬುದ್ಧಿಭ್ರಮಣೆ, ಪ್ರಜ್ಞ್ಜಾಹೀನತೆ ಅಥವಾ ಮಾದಕತೆ.
3. ಗುಪ್ತಾಂಗಗಳನ್ನು ಯಾವುದೇ ಮರೆಯಿಲ್ಲದೆ ನೇರವಾಗಿ ಸ್ಪರ್ಶಿಸುವುದು.
4. ವೀರ್ಯಾಣು ಹೊರಬರಲು ಕಾರಣವಾಗುವ ಲೈಂಗಿಕ ಪ್ರಕ್ರಿಯೆ.
5. ಒಂಟೆ ಮಾಂಸ ಸೇವಿಸುವುದು.

ಪ್ರವಾದಿ (H) ರವರ ವುದೂ ನಿರ್ವಹಿಸುವ ಕ್ರಮ [2] :

ಸೌದಿ ಅರೇಬಿಯಾದ ಹಿರಿಯ ವಿದ್ವಾಂಸರಾದ ಅಲ್-ಇಮಾಮ್ ಇಬ್ನ್ ಬಾಝ್ (V) ರವರೊಂದಿಗೆ ಪ್ರಶ್ನಿಸಲಾಯಿತು :

ಪ್ರಶ್ನೆ : ವುದೂ ಹಾಗೂ ನಮಾಝಿನ ಕ್ರಮವನ್ನು ಪ್ರವಾದಿ (H) ರವರಿಂದ ದೃಢಪಟ್ಟ ವರದಿಯ ಹಿನ್ನಲೆಯಲ್ಲಿ , ಅವುಗಳ ಅತೀವ ಅಗತ್ಯವಿರುವುದರಿಂದ ಅದನ್ನು ವಿವರಿಸಿಕೊಡಬೇಕೆಂದು ನಾನು ನಿಮ್ಮಲ್ಲಿ ಕೋರುತ್ತೇನೆ. ಅಲ್ಲಾಹು ತಮಗೆ ಒಳಿತನ್ನು ಪ್ರತಿಫಲವಾಗಿ ನೀಡಲಿ.

ಉತ್ತರ : ಸರ್ವಸ್ತುತಿಗಳೂ ಅಲ್ಲಾಹುವಿಗಾಗಿದೆ. ಅಲ್ಲಾಹುವಿನ ಸಲಾತ್ ಮತ್ತು ಸಲಾಮ್‌ಗಳು ನಮ್ಮ ಪ್ರವಾದಿವರ್ಯರಾದ ಮುಹಮ್ಮದ್ (H) ರವರ ಮೇಲೂ, ಅವರ ಕುಟುಂಬದ ಮೇಲೂ ಹಾಗೂ ಅವರ ಸಹಚರರ ಮೇಲೂ ಇರಲಿ.

ಪ್ರವಾದಿ (H) ರವರ ಸಹೀಹ್ಆದ ಹದೀಸ್‌ಗಳು ಸೂಚಿಸುವುದೇನೆಂದರೆ : ಅವರು (H) ವುದೂ ನಿರ್ವಹಿಸುವ ನಿಯ್ಯತ್ಅನ್ನು (ಮನಸ್ಸಿನಲ್ಲಿ ದೃಢಸಂಕಲ್ಪ) ಇಟ್ಟುಕೊಂಡು ವುದೂವಿನ ಪ್ರಾರಂಭದಲ್ಲಿ ತಮ್ಮ ಅಂಗೈಯನ್ನು ಮೂರು ಬಾರಿ ತೊಳೆಯುತ್ತಿದ್ದರು ಮತ್ತು (ಅದೇವೇಳೆ) “ಬಿಸ್ಮಿಲ್ಲಾಹ್” (ಅರ್ಥಾತ್) ಅಲ್ಲಾಹುವಿನ ನಾಮದಿಂದ (ನಾನು ಆರಂಭಿಸುತ್ತಿರುವೆನು) ಎಂದು ಹೇಳುತ್ತಿದ್ದರು – ಇದು (ಅರ್ಥಾತ್ ಈ ರೀತಿ ಬಿಸ್ಮಿಲ್ಲಾಹ್ ಎಂದು ಹೇಳುವುದು) ಸ್ಥಿರೀಕರಿಸಲಾಗಿದೆ. ಅನೇಕ ಹದೀಸ್‌ಗಳಲ್ಲಿ ಇದು ವರದಿಯಾಗಿದೆ, ಪ್ರವಾದಿ (H) ಹೇಳಿದರು :

« لَا وُضُوءَ لِمَنْ لَمْ يَذْكُرْ اسْمَ اللَّهِ عَلَيْهِ »

“ಯಾರು (ವುದೂ ನಿರ್ವಹಿಸುವಾಗ) ಅಲ್ಲಾಹುವಿನ ನಾಮವನ್ನು ಉಚ್ಛರಿಸುವುದಿಲ್ಲವೋ ಅವನಿಗೆ ವುದೂ ಇಲ್ಲ (ಅರ್ಥಾತ್ ಅವನ ವುದೂ ಸಿಂಧುವಲ್ಲ).” (ಸುನನ್ ಅಬೀದಾವುದ್ : 102, ಸುನನ್ ಅತ್ತಿರ್ಮಿದೀ : 25, ಸುನನ್ ಇಬ್ನ್ ಮಾಜಃ : 397)


ವುದೂ ನಿರ್ವಹಿಸುವವನು ವುದೂವಿನ ಪ್ರಾರಂಭದಲ್ಲಿ ‘ಬಿಸ್ಮಿಲ್ಲಾಹ್’ ಅರ್ಥಾತ್ ಅಲ್ಲಾಹುವಿನ ನಾಮದಿಂದ (ನಾನು ಪ್ರಾರಂಭಿಸುತ್ತಿರುವೆನು) ಎಂದು ಹೇಳುವುದರ ಮೂಲಕ ಆರಂಭಿಸಬೇಕಾಗಿದೆ. ಕೆಲವು ಉಲಮಾಗಳು ಇದನ್ನು ನೆನಪಿರುವ ಸಂದರ್ಭದಲ್ಲಿ ಹೇಳುವುದನ್ನು ಕಡ್ಡಾಯವೆಂದು ಪರಿಗಣಿಸಿರುವರು, ಆದರೆ ಓರ್ವನು ಅದನ್ನು (ಬಿಸ್ಮಿಲ್ಲಾಹ್ ಹೇಳುವುದನ್ನು) ಮರೆತರೆ ಅಥವಾ (ಹೇಳುವುದು ಕಡ್ಡಾಯವೆಂದು) ತಿಳಿಯದೆ ಹೋದರೆ ಯಾವುದೇ ತೊಂದರೆಯಿಲ್ಲ.

ನಂತರ ಅವನು ಮೂರು ಬಾರಿ ತನ್ನ ಬಾಯನ್ನು ಮುಕ್ಕಳಿಸಬೇಕಾಗಿದೆ ಮತ್ತು (ಮೂಗಿನೊಳಗೆ) ನೀರೆಳೆಯಬೇಕಾಗಿದೆ ಮತ್ತು (ಅದರ ನಂತರ) ತನ್ನ ಮುಖವನ್ನು ಮೂರು ಬಾರಿ ತೊಳೆಯಬೇಕಾಗಿದೆ. ನಂತರ ತನ್ನ ಬಲ ಕೈಯಿಂದ ಆರಂಭಿಸಿ ಬಳಿಕ ಎಡಗೈಯನ್ನೂ, ಮೊಣಕೈಗಳವರೆಗೆ ಮೂರು ಬಾರಿ ತೊಳೆಯಬೇಕಾಗಿದೆ. ಅದಾದನಂತರ, ಅವನು ತನ್ನ ತಲೆ ಮತ್ತು ಕಿವಿಗಳನ್ನು ಒಂದು ಬಾರಿ ಸವರಬೇಕಾಗಿದೆ. ಆನಂತರ, ಬಲ ಕಾಲಿನಿಂದ ಆರಂಭಿಸಿ, ತನ್ನ ಕಾಲುಗಳನ್ನು ಹರಡುಗಂಟುಗಳ ತನಕ ಮೂರು ಬಾರಿ ತೊಳೆಯಬೇಕಾಗಿದೆ.

ಅವನೊಂದು ವೇಳೆ (ತನ್ನ ಅಂಗಾಗಗಳನ್ನು) ಒಂದು ಅಥವಾ ಎರಡು ಬಾರಿ ತೊಳೆದರೆ, ಅದರಲ್ಲಿ ಯಾವುದೇ ತೊಂದರೆಯಿಲ್ಲ. ಯಾಕೆಂದರೆ (ಹದೀಸ್‌ಗಳಲ್ಲಿ ವರದಿಯಾದ ಪ್ರಕಾರ) ಪ್ರವಾದಿ (H) ರವರು (ತನ್ನ ಪ್ರತಿಯೊಂದು ಅಂಗಾಗವನ್ನು) ಒಂದು ಬಾರಿ, ಎರಡು ಬಾರಿ ಮತ್ತು ಮೂರು ಬಾರಿಯಾಗಿ ತೊಳೆಯುತ್ತಾ ವುದೂ ನಿರ್ವಹಿಸುತ್ತಿದ್ದರು, ಹಾಗೂ ಕೆಲವೊಮ್ಮೆ ಅವರು (H) ತಮ್ಮ ಕೆಲವು ಅಂಗಾಗಗಳನ್ನು ಎರಡು ಬಾರಿ ಮತ್ತು ಇನ್ನು ಕೆಲವನ್ನು ಮೂರುಬಾರಿ ತೊಳೆದುಕೊಳ್ಳುತ್ತಿದ್ದರು. ಇದು ಸೂಚಿಸುವುದೇನೆಂದರೆ ಈ ವಿಷಯದಲ್ಲಿ (ಈ ರೀತಿ ವುದೂ ನಿರ್ವಹಿಸುವ ಕ್ರಮವು) ವಿಶಾಲತೆಯನ್ನೊಳಗೊಂಡಿದೆ (ಅರ್ಥಾತ್ ಮೇಲೆ ತಿಳಿಸಿದ ವುದೂವಿನ ಕ್ರಮದಲ್ಲಿ ಯಾವುದಾದರೂ ಮಾಡಬಹುದು), ಸರ್ವಸ್ತುತಿಗಳೂ ಅಲ್ಲಾಹುವಿಗೆ ಮೀಸಲು. ಅದಾಗ್ಯೂ, ಮೂರುಬಾರಿ ತೊಳೆಯುವುದು ಉತ್ತಮವಾಗಿದೆ.

ಇದು (ವುದೂ ನಿರ್ವಹಿಸುವ ಈ ಕ್ರಮವು) ಅವನು ಮೂತ್ರ ವಿಸರ್ಜನೆ ಅಥವಾ ಮಲವಿಸರ್ಜನೆ ಮಾಡದಿದ್ದರೆ ನಿರ್ವಹಿಸಬೇಕಾದ ಕ್ರಮವಾಗಿದೆ.

ಅವನೊಂದು ವೇಳೆ ಮೂತ್ರ ವಿಸರ್ಜನೆ ಅಥವಾ ಮಲವಿಸರ್ಜನೆ ಮಾಡಿದ್ದರೆ, ಮೊದಲನೆಯದಾಗಿ ಅವನು ಇಸ್ತಿನ್‌ಜಾಅ್ (الاستنجاء) ಅನ್ನು ನಿರ್ವಹಿಸಬೇಕಾಗಿದೆ. (ಅರ್ಥಾತ್ ಗುಪ್ತಾಂಗಗಳಿಂದ ಮಾಲಿನ್ಯವು ನೀಗುವವರೆಗೆ ನೀರಿನಿಂದ ತೊಳೆದು ಅದನ್ನು ಶುಚಿಗೊಳಿಸಬೇಕಾಗಿದೆ), ನಂತರ ಮೇಲೆ ತಿಳಿಸಲಾದ ರೀತಿಯಲ್ಲಿ ವುದೂ ನಿರ್ವಹಿಸಬೇಕಾಗಿದೆ. ಇನ್ನು (ಗುದದ್ವಾರದಿಂದ) ವಾಯು ಹೊರಬರುವುದು, ನಿದ್ದೆ, ಗುಪ್ತಾಂಗಗಳನ್ನು ಸ್ಪರ್ಶಿಸುವುದು ಮತ್ತು ಒಂಟೆ ಮಾಂಸವನ್ನು ತಿನ್ನುವುದು ಮುಂತಾದವುಗಳಿಗೆ ಇಸ್ತಿನ್‌‍ಜಾಅ್ ನಿರ್ವಹಿಸಬೇಕಾಗಿಲ್ಲ ಬದಲಾಗಿ ಮೇಲೆ ತಿಳಿಸಲಾದ ರೀತಿಯಲ್ಲಿ ವುದೂ ನಿರ್ವಹಿದರೆ ಸಾಕಾಗುವುದು.

ವುದೂ ನಿರ್ವಹಿಸಿದ ನಂತರ ಸತ್ಯವಿಶ್ವಾಸಿಗರಾದ ಸ್ತ್ರೀ-ಪುರುಷನು ಈ ಕೆಳಗಿನ ದುಆವನ್ನು ಹೇಳುವುದು ಅಪೇಕ್ಷಣೀಯವಾದುದಾಗಿದೆ, ಪ್ರವಾದಿ (H) ರಿಂದ ಸಹೀಹ್ಆಗಿ ವರದಿಯಾಗಿರುವಂತೆ :

« أَشْهَدُ أَنْ لَا إِلَهَ إِلَّا اللَّهُ وَحْدَهُ لَا شَرِيكَ لَهُ، وَأَشْهَدُ أَنَّ مُحَمَّدًا عَبْدُهُ وَرَسُولُهُ، اللَّهُمَّ اجْعَلْنِي مِنَ التَّوَّابِينَ، وَاجْعَلْنِي مِنَ المُتَطَهِّرِينَ »

“ಅಲ್ಲಾಹುವಿನ ಹೊರತು ಆರಾಧನೆಗೆ ನೈಜ ಹಕ್ಕುದರಾರು ಯಾರೂ ಇಲ್ಲ, ಅವನು ಏಕೈಕನಾಗಿರುವನು, ಅವನಿಗೆ ಸಹಭಾಗಿಗಳಾರೂ ಇಲ್ಲವೆಂದು ನಾನು ಸಾಕ್ಷ್ಯವಹಿಸುತ್ತೇನೆ ಮತ್ತು ಮುಹಮ್ಮದ್ (H) ರವರು ಆತನ ದಾಸರೂ ಸಂದೇಶವಾಹಕರೂ ಆಗಿದ್ದಾರೆಂದು ನಾನು ಸಾಕ್ಷ್ಯವಹಿಸುತ್ತೇನೆ. ಓ ಅಲ್ಲಾಹ್! ನಿನ್ನೆಡೆಗೆ ಸದಾ ಪಶ್ಚಾತ್ತಾಪಪಟ್ಟು ಮರಳುವವರ ಪೈಕಿ ಮತ್ತು ಶುಚಿತ್ವವನ್ನು ಪಾಲಿಸುವವರ ಪೈಕಿ ನನ್ನನ್ನು ಸೇರಿಸು.” (ಸುನನ್ ಅತ್ತಿರ್ಮಿದೀ : 55)


ಇನ್ನು. ವುದೂ ನಿರ್ವಹಿಸಿದವರು ‘ಸುನ್ನಃ ಅಲ್-ವುದೂ’ ಎಂದು ಕರೆಯಲ್ಪಡುವ ಎರಡು ರಕ್ಅತ್ (ಸುನ್ನತ್ ನಮಾಝ್) ನಿರ್ವಹಿಸುವುದು ಅಪೇಕ್ಷಣೀಯವಾದುದಾಗಿದೆ ಹಾಗೂ ಅವನೊಂದು ವೇಳೆ ವುದೂವಿನ ನಂತರ ರವಾತಿಬ್ಆದ ಸುನ್ನತ್ ನಮಾಝ್ (ಅರ್ಥಾತ್ ಫರ್ದ್ ನಮಾಝ್‌ಗಳ ಜೊತೆಗೆ ನಿರ್ವಹಿಸಲಾಗುವ ನಮಾಝ್) ನಿರ್ವಹಿಸಿದ್ದಲ್ಲಿ, ಅದು ಸುನ್ನಃ ಅಲ್-ವುದೂವಿನ ಸ್ಥಾನವನ್ನು ಪೂರೈಸುತ್ತದೆ.

ಟಿಪ್ಪಣಿಗಳು :

[1] ಮೂಲ :
-ಸಿಫತ್ ಅಲ್-ವುದೂ – ಅಶ್ಶೈಖ್ ಅಹ್ಮದ್ ಅಲ್-ಮಝ್‌ರೂಈ (حَفِظَهُ اللَّهُ)
-ಸಿಫತು ವುದೂ ಅನ್ನಬಿಯ್ಯ್ (H) – ಅಶ್ಶೈಖ್ ಫಹ್ದ್ ಬಿನ್ ಅಬ್ದಿರ್ರಹ್ಮಾನ್ ಅಶ್-ಶುವೈಬ್ (حَفِظَهُ اللَّهُ)
-ಡಾ. ಅಶ್ಶೈಖ್ ಸಾಲಿಹ್ ಅಸ್-ಸಾಲಿಹ್ (V) ರವರ ವುದೂವಿನ ಕ್ರಮದ ಕುರಿತು ಬರೆದ ಲೇಖನಗಳ ಕೆಲವೊಂದು ಆಯ್ದ ಭಾಗಗಳು.

[2] ಮೂಲ : ಮಜ್ಮೂಅ್ ಫತಾವಾ ವಮಕಾಲಾತ್ ಅಶ್ಶೈಖ್ ಇಮಾಮ್ ಇಬ್ನ್ ಬಾಝ್ : 10/98
ನೋಡಿರಿ : https://binbaz.org.sa/fatwas/3649/صفة-وضوء-النبي-صلى-الله-عليه-وسلم
ಅನುವಾದ : ಅಬೂ ಹಮ್ಮಾದ್