ಆತ್ಮಹತ್ಯಾ ದಾಳಿಗಳ ವಿರುದ್ಧ ಇಸ್ಲಾಮಿನ ಸ್ಪಷ್ಟ ನಿಲುವು




ಅಶ್ಶೈಖ್ ಸಾಲಿಹ್ ಅಲ್-ಫೌಝಾನ್ (حَفِظَهُ اللَّهُ) :

ಸರ್ಕಾರಿ (ಸಾರ್ವಜನಿಕ) ಸವಲತ್ತುಗಳನ್ನು (ಹಾನಿಯನ್ನುಂಟು ಮಾಡದೆ) ಸುಸ್ಥಿತಿಯಲ್ಲಿಡುವುದು, ಅವುಗಳನ್ನು ಸಂರಕ್ಷಿಸುವುದು ಹಾಗೂ ಅವುಗಳ ಅಭಿವೃದ್ದಿಯನ್ನು ಖಾತ್ರಿಪಡಿಸುವುದು ಮುಸ್ಲಿಮರ ಮೇಲೆ ಕಡ್ಡಾಯವಾಗಿದೆ.

ಹಾಗಾದರೆ (ಸರ್ಕಾರಿ) ಸವಲತ್ತುಗಳನ್ನು ಧ್ವಂಸಗೊಳಿಸುವ ಮತ್ತು (ಬಾಂಬುಗಳನ್ನೆಸೆದು) ಸ್ಪೋಟಿಸುವ ಹಾಗೂ ಇನ್ನಿತರ ಉಗ್ರ ಚಟುವಟಿಕೆಗಳ ಮೂಲಕ ಅವುಗಳನ್ನು ನಿರ್ನಾಮಗೊಳಿಸುವವರ (ದುಃಸ್ಥಿತಿ) ಹೇಗಿರಬಹುದು ?

ಮಸೀದಿಗಳೂ (ಕೂಡ) ಅವರಿಂದ (ಉಗ್ರವಾದಿಗಳಿಂದ) ಸುರಕ್ಷಿತವೇನಲ್ಲ. ಅವರು ಅವುಗಳನ್ನು (ಮಸೀದಿಗಳನ್ನು) ಸ್ಪೋಟಿಸುತ್ತಾರೆ, ಹಾಗೂ (ಅವುಗಳೆಡೆಗೆ) ಬಾಂಬುಗಳನ್ನು ಎಸೆಯುತ್ತಾರೆ. ಅವರ ಮಸೀದಿಗಳಲ್ಲಿರುವವರನ್ನೂ (ಕೂಡ) ಅವರು ಕೊಲ್ಲುತ್ತಾರೆ ಹಾಗೂ ಅದರ ಕಟ್ಟಡ ಮತ್ತು ಸೌಲಭ್ಯಗಳನ್ನು ಸ್ಪೋಟಿಸಿ ಧ್ವಂಸಗೊಳಿಸುತ್ತಾರೆ. (ಇವೆಲ್ಲಾ ಕುಕೃತ್ಯವನ್ನೆಸಗಿ ನಂತರ) , ಇದು ಅಲ್ಲಾಹುವಿನ ಮಾರ್ಗದಲ್ಲಿ ನಡೆಸುವ ‘ಜಿಹಾದ್’ ಆಗಿದೆಯೆಂದೂ, ಹಾಗೂ ಅವರೆಲ್ಲರೂ ಮುಜಾಹಿದೀನ್’ಗಳೆಂದೂ (ಧರ್ಮದ ಹೋರಾಟಗಾರರೆಂದು ಭ್ರಮೆ ಪೀಡಿತರಾಗಿ) ವಾದಿಸುತ್ತಾರೆ.

ಇದರ ಬಗ್ಗೆ (ಪ್ರತಿಯೋರ್ವರೂ) ಜಾಗರೂಕತೆಯಿಂದಿರಬೇಕು, ಮತ್ತು ಈ ಬಗ್ಗೆ ಅಜ್ಞಾನದಲ್ಲಿರುವವನನ್ನು ಎಚ್ಚರಿಸಿ ತಿಳಿಗೊಳಿಸಬೇಕು ಹಾಗೂ ಇದರಿಂದಾಗಿ ವಂಚನೆಗೊಳಗಾದವನನ್ನು ಎಚ್ಚರಿಸಬೇಕು, – ಇದು ‘ಜಿಹಾದ್’ ಎಂದೂ ಹಾಗೂ ಇದರಲ್ಲಿ (ಈ ದುಷ್ಕೃತ್ಯಗಳಲ್ಲಿ) ಶ್ರೇಷ್ಟತೆಯಿದೆಯೆಂದು ಅವನು (ತಪ್ಪಾಗಿ) ಭಾವಿಸಿರುತ್ತಾನೆ, ಆದರೆ ವಾಸ್ತವದಲ್ಲಿ ಇದು ವಿನಾಶದ ಅಂಚಿನೆಡೆಗೆ ಕೊಂಡೊಯ್ಯುವ ಕಾರ್ಯಗಳಾಗಿವೆ.
ಅಲ್ಲಾಹು ಕ್ಷೋಭೆಯನ್ನುಂಟು ಮಾಡುವವರನ್ನು ಇಷ್ಟಪಡಲಾರನು. ಇದು ಭೂಮಿಯ ಮೇಲೆ ಕ್ಷೋಭೆಯನ್ನುಂಟು ಮಾಡುವ ಕಾರ್ಯಗಳ ಪೈಕಿಯಾಗಿದೆ. ಅಲ್ಲಾಹು ಕ್ಷೋಭೆ ಹರಡುವವರನ್ನು ಇಷ್ಟಪಡಲಾರನು.
ಇದಕ್ಕೂ ಮಿಗಿಲಾಗಿ, ಯಾರನ್ನು ಅಲ್ಲಾಹು ಅನ್ಯಾಯವಾಗಿ ಕೊಲ್ಲುವುದನ್ನು ನಿಷೆಧಿಸಿರುವನೋ (ಅಂತಹ) ಮುಗ್ದ ಜನರು ( ಉಗ್ರವಾದಿಗಳಿಂದ) ಹತ್ಯೆಗೀಡಾಗುತ್ತಿದ್ದಾರೆ.

ಅವರು (ಉಗ್ರವಾದಿಗಳು) ಅಪರಾಧ ಕೃತ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದಲ್ಲದೆ , ತಮ್ಮ ಮೇಲೆ (ಬಾಂಬ್) ಸಿಡಿಸಿ ಆತ್ಮಹತ್ಯಾ ದಾಳಿ ನಡೆಸಿಕೊಂಡು ಸ್ವತಃ ತಮ್ಮನ್ನು ತಾವೇ ಕೊಲ್ಲಲೂಬಹುದು ಹಾಗೂ (ಇವೆಲ್ಲಾ ಕುಕೃತ್ಯವನ್ನೆಸಗಿಯೂ ಅವರು) ಇದು ಹುತಾತ್ಮತೆಯೆನ್ನುತ್ತಾರೆ.

ಆತ್ಮಹತ್ಯೆ ಮಾಡಿಕೊಂಡವನು ನರಕಾಗ್ನಿಯಲ್ಲಿರುವನೆಂದು ರಸೂಲ್ (H) ರವರು ಹೇಳಿರುವಾಗ ಹೇಗೆ ತಾನೆ ಅವನು ಹುತಾತ್ಮನಾಗುತ್ತಾನೆ?

ಅಲ್ಲಾಹು (E) ಹೇಳಿದ್ದಾನೆ :
“ನೀವು ನಿಮ್ಮನೇ ವಧಿಸದಿರಿ, ಖಂಡಿತವಾಗಿಯೂ ಅಲ್ಲಾಹು ನಿಮ್ಮೊಂದಿಗೆ ಅಪಾರ ಕರುಣೆಯುಳ್ಳವನಾಗಿರುವನು. ಯಾರು ಅತಿಕ್ರಮವಾಗಿ ಮತ್ತು ಅನ್ಯಾಯವಾಗಿ ಅದನ್ನು ಮಾಡುವನೋ, ಅವನನ್ನು ನಾವು ನರಕಾಗ್ನಿಯಲ್ಲಿ ಉರಿಸುವೆವು. ಅದು ಅಲ್ಲಾಹುವಿಗೆ ಅತಿ ಸುಲಭವಾದುದಾಗಿದೆ.”
(ಕುರ್’ಆನ್ 4 : 29-30)

ಸಹೀಹ್’ (ಅಧಿಕೃತವಾದ) ಹದೀಸ್’ನ ಉಲ್ಲೇಖದಂತೆ (ರಸೂಲ್ H) ಹೇಳಿರುವರು :

“ಯಾರು ವಿಷ ಸೇವಿಸಿ ತನ್ನನು ತಾನೇ ಕೊಲ್ಲುವನೋ (ಆತ್ಮಹತ್ಯೆ ಮಾಡಿಕೊಳ್ಳುತ್ತಾನೋ) ನರಕಾಗ್ನಿಯಲ್ಲಿ ಅದನ್ನು (ವಿಷವನ್ನು) ತನ್ನ ಕೈಯಲ್ಲಿ ಹಿಡಿದು ಎಡೆಬಿಡದೆ ಸೇವಿಸುತ್ತಲೇ ಇರುವನು. ಯಾರು ಕಬ್ಬಿಣದಿಂದ ತನ್ನನು ತಾನೇ ಇರಿದು ಕೊಲ್ಲುವನೋ (ಆತನು) ನರಕಾಗ್ನಿಯಲ್ಲಿ ಅದನ್ನು (ಕಬ್ಬಿಣವನ್ನು) ತನ್ನ ಕೈಯಲ್ಲಿ ಹಿಡಿದು ತನ್ನನೇ ಇರಿದುಕೊಳ್ಳುತ್ತಾ ಇರುವನು . ಯಾರು ತನ್ನನು ತಾನೇ ಬೆಟ್ಟದ ಕೆಳಗೆ ಧುಮುಕುವ ಮೂಲಕ ಕೊಲ್ಲುವನೋ (ಬೆಟ್ಟದಿಂದ ಹಾರಿ ಆತ್ಮಹತ್ಯೆಗೈಯ್ಯುತ್ತಾನೋ) ಆತನನ್ನು ನರಕಾಗ್ನಿಯ ಕೆಳಗೆ (ನಿರಂತರವಾಗಿ) ಎಸಯಲಾಗುವುದು. (ಮುಸ್ಲಿಮ್ : 175)

ಆದ್ದರಿಂದ ಆತ್ಮಹತ್ಯೆ ಮಾಡಿಕೊಂಡವನು ಮಹಾಪಾಪವನ್ನು ಎಸಗಿರುತ್ತಾನೆ. (ಹೀಗೆ ) ನರಕಾಗ್ನಿಗೆ ಗುರಿಯಾಗುವವನನ್ನು ಹುತಾತ್ಮನೆಂದು ಕರೆಯುವುದಾದರೂ ಹೇಗೆ ?
ಆತನು ನರಕಾಗ್ನಿಗೆ ಹೋಗುವನೆಂದು ರಸೂಲ್ (H) ರವರು ಹೇಳಿರುವಾಗ ಅವನನ್ನು ಸ್ವರ್ಗವಾಸಿಯೆಂದು ಹೇಳುವುದಾದರೂ ಹೇಗೆ??