ಭಯೋತ್ಪಾದನೆಯ ವಿರುದ್ಧ ಇಸ್ಲಾಮ್

w

ಸೃಷ್ಟಿಕರ್ತನೂ, ಜಗದೊಡಯನೂ, ಸರ್ವಲೋಕಗಳ ಪರಿಪಾಲಕನೂ ಆದ ಅಲ್ಲಾಹುವನ್ನು ಮಾತ್ರ ಆರಾಧಿಸಿರಿ, ಅವನೊಂದಿಗೆ ಇತರ ಯಾರನ್ನೂ ಅಥವಾ ಯಾವುದನ್ನೂ ಸಹಭಾಗಿಗಳನ್ನಾಗಿ ಮಾಡದಿರಿ ಎಂಬುದು ಇಸ್ಲಾಮಿನ ಪ್ರಮುಖ ಸಂದೇಶವಾಗಿದೆ. ಇದು ಪ್ರವಾದಿ ನೂಹ್ (S) ರಿಂದ ಪ್ರಾರಂಭವಾಗಿ, ಪ್ರವಾದಿ ಮೂಸ (S), ಪ್ರವಾದಿ ಈಸ (S) ಹಾಗೂ ಕೊನೆಯ ಪ್ರವಾದಿ ಮುಹಮ್ಮದ್ (H) ರವರೆಗಿನ ಎಲ್ಲಾ ಪ್ರವಾದಿಗಳ ಪ್ರಥಮ ಕರೆಯಾಗಿತ್ತು.

ಈ ಸಂದೇಶಗಳನ್ನು ಕಡೆಗಣಿಸಿಕೊಂಡು, ಸೃಷ್ಟಿಕರ್ತನಾದ ಅಲ್ಲಾಹುವಿಗೆ ಮಾತ್ರ ಸಲ್ಲಿಸಬೇಕಾದ ಪ್ರಾರ್ಥನೆ ಮತ್ತು ಆರಾಧನೆಯನ್ನು, ನಮ್ಮಂತೆಯೇ ಇರುವ ಮನುಷ್ಯರಿಗೆ ಹಾಗೂ ಇತರ ನಿರ್ಜೀವ ವಸ್ತುಗಳಿಗೆ ಅರ್ಪಿಸುವುದನ್ನು ಇಸ್ಲಾಮ್ ಸ್ಪಷ್ಟವಾಗಿ ವಿರೋಧಿಸುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ ಇಸ್ಲಾಮಿನ ಕರೆಯು – “ಸೃಷ್ಟಿಕರ್ತನನ್ನು ಮಾತ್ರ ಆರಾಧಿಸಿರಿ, ಸೃಷ್ಟಿಗಳನ್ನಲ್ಲ” ಎಂದಾಗಿದೆ.

﴿ يَا أَيُّهَا النَّاسُ اعْبُدُوا رَبَّكُمُ الَّذِي خَلَقَكُمْ وَالَّذِينَ مِن قَبْلِكُمْ

“ಓ ಜನರೇ, ನಿಮ್ಮನ್ನೂ ನಿಮ್ಮ ಪೂರ್ವಿಕರನ್ನೂ ಸೃಷ್ಟಿಸಿದ ನಿಮ್ಮ ರಬ್ಬ್ಅನ್ನು (ಪಾಲಕ ಪ್ರಭುವನ್ನು ಮಾತ್ರ) ಆರಾಧಿಸಿರಿ.” (ಕುರ್‌ಆನ್ 2 : 21)

 

ಹಾಗಿದ್ದರೂ ಎಲ್ಲಾ ಧರ್ಮೀಯರೊಂದಿಗೆ ಅತ್ಯುತ್ತಮ ನಡುವಳಿಕೆ ತೋರುವುದನ್ನು, ಸಂಕಷ್ಟದಲ್ಲಿರುವ ಜನರಿಗೆ ನೆರವಾಗುವುದನ್ನು ಹಾಗೂ ಅವರಿಗೆ ಒಳಿತೆಸಗುವುದನ್ನು ಇಸ್ಲಾಮ್ ಎಂದೆಂದಿಗೂ ಪ್ರೇರೇಪಿಸುತ್ತದೆ. ಮಾತ್ರವಲ್ಲ ಯಾವುದೇ ಜನತೆಯೊಂದಿಗೆ ಅವರು ಯಾವುದೇ ಧರ್ಮದವರಾಗಿದ್ದರೂ ಸರಿ, ಅವರೊಂದಿಗೆ ಅನ್ಯಾಯವೆಸಗುವುದನ್ನು, ಅನೀತಿ ತೋರುವುದನ್ನು ಇಸ್ಲಾಮ್ ಖಂಡತುಂಡವಾಗಿ ನಿಷೇಧಿಸಿದೆ. ಹೀಗೆ ಯಾವುದೇ ರೀತಿಯ ಅನ್ಯಾಯವನ್ನೆಸಗದೆ ಅವರೊಂದಿಗೆ ನ್ಯಾಯಯುತವಾಗಿ ವರ್ತಿಸಬೇಕೆಂಬುದು ಇಸ್ಲಾಮಿನ ಕಟ್ಟಪ್ಪಣೆಯಾಗಿದೆ.

ಜನರೊಂದಿಗೆ ಅತ್ಯುತ್ತಮ ರೀತಿಯಲ್ಲಿ ವರ್ತಿಸಬೇಕೆಂಬ ಇಸ್ಲಾಮಿನ ಆಜ್ಞೆಯಿದ್ದರೂ ಮಹಿಳೆಯರು, ಮಕ್ಕಳು, ಸನ್ಯಾಸಿಯರು, ರಾಯಭಾರಿಗಳು, ಗುರು-ಶಿಕ್ಷಕರು, ಶುಶ್ರೂಷೆ ಮಾಡುವವರು, ವೈದ್ಯರು ಹಾಗೂ ಜನ ಸೇವೆಗಳಲ್ಲಿ ನಿರತರಾಗಿರುವವರೆಂಬ ಯಾವ ವ್ಯತ್ಯಾಸವನ್ನು ಲೆಕ್ಕಿಸದೆ ಇಸ್ಲಾಮಿನ ಅತಿ ಸುಂದರವಾದ ಬೋಧನೆಗಳಿಗೆ ತದ್ವಿರುದ್ಧವಾಗಿ ಮುಗ್ಧರನ್ನು ನಿರ್ದಯವಾಗಿ ಹಿಂಸಿಸಿ, ಬರ್ಬರ ಹತ್ಯೆ ನಡೆಸಿ, ಘೋರ ಅಕ್ರಮವನ್ನೆಸಗಿ, ಭೀಕರ ಸ್ಪೋಟಗಳನ್ನು ನಡೆಸಿ, ಕ್ರೌರ್ಯದ ಅಟ್ಟಹಾಸವನ್ನು ಮೆರೆಯುವ ಉಗ್ರವಾದಿಗಳು ವಾಸ್ತವದಲ್ಲಿ ಇಸ್ಲಾಮಿನ ಶತ್ರುಗಳಾಗಿರುತ್ತಾರೆ. ಆದ್ದರಿಂದ ಇಂತಹ ಪಥಭೃಷ್ಟರಾದ ಉಗ್ರಗಾಮಿಗಳ ದುಷ್ಟತೆಯನ್ನು ಬಯಲಿಗೆಳೆದು, ಜನರಲ್ಲಿ ಈ ಕುರಿತು ಜಾಗೃತಿ ಮೂಡಿಸಿ, ಇಂತಹ ಪಾತಕಿಗಳನ್ನು ಮಟ್ಟಹಾಕಲು ನಾವೆಲ್ಲರೂ ಪ್ರಾಮಾಣಿಕವಾಗಿ ಶ್ರಮಿಸಬೇಕಾಗಿದೆ.

ಖವಾರಿಜ್‍ಗಳು (ಉಗ್ರವಾದಿಗಳು) ಯಾರು?

ಪ್ರವಾದಿ ಮುಹಮ್ಮದ್ H) ರವರ ಮರಣದ ಬಳಿಕ ಇಸ್ಲಾಮಿನ ನೈಜ ಸಂದೇಶಗಳಿಂದ ವ್ಯತಿಚಲಿಸಿ, ಸ್ವತಃ ಪ್ರವಾದಿಯ ಸಹಚರರಾದ ಸಹಾಬಿಗಳ ವಿರುದ್ಧವೇ ಬಂಡಾಯವೆದ್ದು, ಇಸ್ಲಾಮಿನ ಸಮಾಜದಿಂದ ಬೇರ್ಪಟ್ಟು ಪ್ರತ್ಯೇಕ ಗುಂಪನ್ನು ಕಟ್ಟಿಕೊಂಡು, ಪ್ರವಾದಿ ಮುಹಮ್ಮದ್ (H) ಕಲಿಸಿಕೊಡದ ನೂತನ ಸಿದ್ದಾಂತ ಮತ್ತು ವಾದಗಳನ್ನು ಮುಂದಿಟ್ಟುಕೊಂಡು, ಆ ಮೂಲಕ ಕೊಲೆ, ದರೋಡೆ, ಸುಲಿಗೆ ಮುಂತಾದ ಅಕ್ರಮ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ತದನಂತರ ಪ್ರವಾದಿ ಮುಹಮ್ಮದ್ (H) ರವರ ಆಪ್ತ ಸಹಚರರೂ, ಶ್ರೇಷ್ಟ ಸಹಾಬಿಗಳೂ, ಪ್ರವಾದಿಯ ಅಳಿಯಂದಿರೂ, ಇಸ್ಲಾಮಿನ ಖಲೀಫರೂ ಆಗಿದ್ದ ಉಸ್ಮಾನ್ ಬಿನ್ ಅಫ್ಫಾನ್ ಮತ್ತು ಅಲೀ ಬಿನ್ ಅಬೀ ತಾಲಿಬ್ (L) ರವರನ್ನು ಭೀಕರವಾಗಿ ಹತ್ಯೆಗೈದು ಆ ಮೂಲಕ ಶತಮಾನದುದ್ದಕ್ಕೂ ತಮ್ಮ ಉಗ್ರಗಾಮಿ ಚಟುವಟಿಕೆಗಳಿಗೆ ಮುನ್ನುಡಿಯನ್ನು ಬರೆದು ಆ ನಂತರ ತಮ್ಮ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿ ಅಮಾಯಕ ಅನ್ಯಧರ್ಮೀಯರ ಮೇಲೂ ತಮ್ಮ ಕ್ರೌರ್ಯದ ಅಟ್ಟಹಾಸವನ್ನು ಮೆರೆದು ಆ ಹತ್ಯಾಕಾಂಡಗಳನ್ನು ಸಮರ್ಥಿಸಲು ಧರ್ಮದ ಬಣ್ಣವನ್ನು ಹಚ್ಚಿ, ಆ ಮೂಲಕ ಧರ್ಮದ ಪ್ರಾಥಮಿಕ ಜ್ಞಾನವನ್ನೂ ಕಲಿಯದ ಯುವಕ ಯುವತಿಯರನ್ನು ತಮ್ಮತ್ತ ಸೆಳೆಯುವ ನಿಟ್ಟಿನಲ್ಲಿ ತಮ್ಮ ಹೇಯ ಕೃತ್ಯಗಳಿಗೆ “ಧರ್ಮ ರಕ್ಷಣೆ” “ಧರ್ಮ ಹೋರಾಟ” ಎಂಬ ಸ್ವಘೋಷಿತ ಬಿರುದುಗಳನ್ನು ಅಂಟಿಸಿ, ಕ್ರೌರ್ಯದ ಅಟ್ಟಹಾಸವನ್ನು ಮೆರೆಯುವ ಉಗ್ರವಾದಿಗಳೇ ಖವಾರಿಜ್‍ಗಳು.

ಐಸಿಸ್, ಅಲ್-ಖಾಯಿದ, ಜಬ್ ಹತುನ್ನುಸ್ರ, ಲಷ್ಕರೆ ತಯ್ಯಿಬಃ, ಜೈಶ್-ಎ-ಮುಹಮ್ಮದ್, ಜಮಾತ್ ಅದ್ದಅ್‍ವಾ, ಹಿಝ್ಬುತ್ತಹ್ರೀರ್, ಬೋಕೋ ಹರಾಮ್, ಹಿಝ್ಬುಲ್ ಮುಜಾಹಿದೀನ್, ಹಿಝ್ಬುಲ್ಲಾಹ್, ಹಮಾಸ್, ಇಖ್ವಾನುಲ್ ಮುಸ್ಲಿಮೀನ್, ಜೈಶ್ ರಿಜಾಲ್ ಅತ್ತರೀಖಃ ಅನ್ನಕ್ಷ್ ಬಂದೀಯ – ಮುಂತಾದ ಎಲ್ಲಾ ಸಮಾನ ಮನಸ್ಕ ತೀವ್ರವಾದಿಗಳು ಮತ್ತು ಉಗ್ರವಾದಿಗಳು ಖವಾರಿಜ್‍ಗಳಾಗಿರುವರು.

 

ಉಗ್ರಗಾಮಿಗಳ (ಖವಾರಿಜ್‍ಗಳ) ಕುರಿತು ಪ್ರವಾದಿ ಮುಹಮ್ಮದ್ (H) ರವರು ಈ ರೀತಿ ಹೇಳಿರುವರು :

“ಖವಾರಿಜ್‍ಗಳು ನರಕದ ನಾಯಿಗಳಾಗಿರುವರು” (ಇಬ್ನು ಮಾಜಃ – ಇಮಾಮ್ ಅಲ್-ಅಲ್ಬಾನಿ V ಇದನ್ನು ಸಹೀಹ್ ಎಂದು ದೃಢೀಕರಿಸಿರುವರು)

 

“ಅವರು (ಖವಾರಿಜ್‍ಗಳು) ಜನರ ಪೈಕಿ ಅತ್ಯಂತ ಕೆಟ್ಟವರೂ, ಸೃಷ್ಟಿ ಜೀವಿಗಳಲ್ಲಿ ಅತ್ಯಂತ ನಿಕೃಷ್ಟರೂ ಆಗಿರುತ್ತಾರೆ.” (ಸಹೀಹ್ ಮುಸ್ಲಿಮ್)

ಖವಾರಿಜ್‍ಗಳ ಕುರಿತು ಸಲಫಿ ವಿದ್ವಾಂಸರು ಹೇಳಿದ್ದೇನು?

ಸೌದಿ ಅರೇಬಿಯಾದ ಗ್ರಾಂಡ್ ಮುಫ್ತೀ, ವಿದ್ವಾಂಸ ಒಕ್ಕೂಟದ ಮುಖ್ಯಸ್ಥ, ಅತ್ಯಂತ ಹಿರಿಯ ವಿದ್ವಾಂಸರಾದ ಮುಫ್ತೀ ಅಶ್ಶೈಖ್ ಅಬ್ದುಲ್ ಅಝೀಝ್ ಬಿನ್ ಅಬ್ದುಲ್ಲಾಹ್ ಆಲ್-ಶೈಖ್ (حَفِظَهُ اللَّهُ) ಹೇಳುತ್ತಾರೆ :

”ಉಗ್ರಗಾಮಿ ಚಟುವಟಿಕೆಗಳಲ್ಲಿ ತೊಡಗಿರುವ ಪ್ರತಿಯೊಬ್ಬ ವ್ಯಕ್ತಿ, ಅದನ್ನು ಪ್ರಚೋದಿಸುವವನು, ಅದಕ್ಕೆ ಹಣ ಸಹಾಯ ನೀಡುವವನು ಅಥವಾ ಉಗ್ರವಾದ ಮತ್ತು ತೀವ್ರವಾದ ಚಟುವಟಿಕೆಗಳಲ್ಲಿ ಇನ್ನಿತರ ಯಾವುದೇ ರೀತಿಯ ಸಹಾಯ ನೀಡುವವನು ಅಥವಾ ಬೆಂಬಲ ನೀಡುವವನು (ಈ ಘೋರಾಪರಾಧವನ್ನು) ತಡೆಹಿಡಿಯುವ ಅತ್ಯಂತ ಕಠಿಣ ಶಿಕ್ಷೆಗೆ (ಮರಣ ದಂಡನೆ ಹಾಗೂ ಇನ್ನಿತರ ಘೋರಶಿಕ್ಷೆಗೆ) ಗುರಿಯಾಗಲು ಅರ್ಹನಾಗಿರುತ್ತಾನೆ.”

“ಯಾರು ನಮ್ಮ (ಮುಸ್ಲಿಮ್) ಯುವಕರನ್ನು ಐಸಿಸ್, ಅಲ್-ಖಾಯಿದ (ಮುಂತಾದ ಉಗ್ರವಾದಿಗಳ) ಆಶಯ ಸಿದ್ದಾಂತಗಳೆಡೆಗೆ ಸೇರಲು ಆಹ್ವಾನ ನೀಡುತ್ತಾನೋ ಅವನು (ಘೋರ) ಅಪರಾಧವನ್ನು ಎಸಗಿರುವನು ಹಾಗೂ (ಇಸ್ಲಾಮಿನ) ಸನ್ಮಾರ್ಗದಿಂದ ಸ್ಪಷ್ಟವಾಗಿ ವಿಮುಖನಾದನು.” 

 

ಪೂರ್ವಿಕ ಸಲಫಿ ವಿದ್ವಾಂಸರು ಕೂಡ ಉಗ್ರವಾದಿಗಳ ಕುರಿತು ಮುನ್ನೆಚರಿಕೆಯನ್ನು ನೀಡಿರುವರು.
ಇಮಾಮ್ ಅಬೂಬಕ್ರ್ ಮುಹಮ್ಮದ್ ಬಿನ್ ಅಲ್-ಹಸನ್ ಅಲ್-ಆಜುರ್ರೀ (V) (ಹಿಜರಿ 360 ರಲ್ಲಿ ಮರಣ ಹೊಂದಿದ ಅಹ್ಲುಸ್ಸುನ್ನಃದ ಶ್ರೇಷ್ಠ ವಿದ್ವಾಂಸರು) ತಮ್ಮ ಪ್ರಸಿದ್ಧ ಗ್ರಂಥವಾದ ಅಶ್ಶರೀಅಃದಲ್ಲಿ ಹೀಗೆ ಹೇಳಿರುವರು :

“ಖವಾರಿಜ್‍ಗಳು (ಉಗ್ರವಾದಿಗಳು) ಜನರ ಪೈಕಿ ಅತ್ಯಂತ ಕೆಟ್ಟವರೂ, ಅಲ್ಲಾಹು ಮತ್ತು ಅವನ ರಸೂಲ್ (H) ರನ್ನು  ಧಿಕ್ಕರಿಸುವವರೆಂಬುದರ ಬಗ್ಗೆ ಹಿಂದಿನ ಕಾಲದ ವಿದ್ವಾಂಸರು ಹಾಗೂ ಪ್ರಸ್ತುತ ಕಾಲದ ವಿದ್ವಾಂಸರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಅವರು ನಮಾಝ್ ನಿರ್ವಹಿಸಿದರೂ, ಉಪವಾಸ ವ್ರತವನ್ನು ಆಚರಿಸಿದರೂ ಮತ್ತು ಇಬಾದತ್’ನಲ್ಲಿ (ಆರಾಧನೆಯಲ್ಲಿ) ಮಗ್ನರಾಗಿದ್ದರೂ ಅವುಗಳಾವುದೂ ಅವರ ಪ್ರಯೋಜನಕ್ಕೆ ಬರಲಿಲ್ಲ.” (ಅಶ್ಶರೀಅಃ :1 /325)

ಕುರ್‌ಆನ್ ವ್ಯಾಖ್ಯಾನಕಾರರ ಪೈಕಿ ಪ್ರಮುಖರಾದ (ಹಿಜರಿ 774 – ಅಂದರೆ 1373 ರ ಇಸವಿಯಲ್ಲಿ ಮರಣಗೊಂಡ) ಇಸ್ಲಾಮಿನ ಶ್ರೇಷ್ಠ ವಿದ್ವಾಂಸರಾದ ಇಮಾಮ್ ಇಬ್ನ್ ಕಸೀರ್ (V) – ರವರು ಉಗ್ರಗಾಮಿಗಳ (ಖವಾರಿಜ್‍ಗಳ) ಕುರಿತು ಈ ರೀತಿ ಹೇಳಿರುವರು :

”ಅವರು (ಖವಾರಿಜ್‍ಗಳು-ಐಸಿಸ್, ಅಲ್-ಖಾಯಿದ ಹಾಗೂ ಇತರ ಉಗ್ರರು) ಎಂದಾದರೂ ಅಧಿಕಾರ ಶಕ್ತಿಯನ್ನು ಪಡೆದುಕೊಂಡರೆ, ಖಂಡಿತವಾಗಿಯೂ ಅವರು ಭೂಮಿಯುದ್ದಕ್ಕೂ (ಅದರಲ್ಲೂ ವಿಶೇಷವಾಗಿ) ಇರಾಕ್ ಮತ್ತು ಸಿರಿಯಾದಲ್ಲಿ (ಭೀಕರ) ಕ್ಷೋಭೆಯನ್ನುಂಟು (ಫಸಾದ್) ಮಾಡುವರು. ಯಾವೊಂದು ಮಗುವನ್ನೂ – ಅದು ಗಂಡು ಅಥವಾ ಹೆಣ್ಣಾಗಲೀ, ಪುರುಷ ಅಥವಾ ಸ್ತ್ರೀಯಾಗಲೀ ಯಾರನ್ನೂ ಪರಿಗಣಿಸದೆ ಎಲ್ಲರನ್ನೂ ಅವರು (ನಿರ್ದಯವಾಗಿ ಕೊಲ್ಲದೆ) ಬಿಡಲಾರರು. ಏಕೆಂದರೆ ಅವರ (ಖವಾರಿಜ್‍ಗಳ) ಪ್ರಕಾರ ಕ್ಷೋಭೆಯನ್ನುಂಟು ಮಾಡುವವರು ಜನರೇ ಆಗಿರುವುದರಿಂದ (ಖವಾರಿಜ್‍ಗಳ ಭ್ರಮೆ), ಅವರನ್ನು (ಜನರನ್ನು) ಸಾಮೂಹಿಕವಾಗಿ ಹತ್ಯೆ ಮಾಡದ ಹೊರತು ಅವರು (ಜನರು) ಮಾಡಿದ ಕ್ಷೋಭೆಯನ್ನು ಸರಿಪಡಿಸಲಾಗದು!” (ಅಲ್-ಬಿದಾಯತು ವನ್ನಿಹಾಯಃ : 10/574-575)

ಉಗ್ರವಾದವನ್ನು ಸಮರ್ಥಿಸುವವನ ಕುರಿತು ಇಸ್ಲಾಮ್ ಏನು ಹೇಳುತ್ತದೆ?

ಉಗ್ರವಾದಿಗಳ ಇಂತಹ ಭೀಕರ ಅಮಾನವೀಯ, ಅನಿಸ್ಲಾಮಿಕ ಘೋರ ಕೃತ್ಯಗಳಿಗೆ ಯಾರಾದರೂ ಕುಮ್ಮಕ್ಕು ನೀಡುವುದಾದರೆ ಅದು ಅಕ್ಷಮ್ಯ ಅಪರಾಧವಾಗಿದೆ. ಈ ರೀತಿ ಸ್ವತಃ ಭಯೋತ್ಪಾದನಾ ಕೃತ್ಯಗಳಲ್ಲಿ ಭಾಗವಹಿಸದಿದ್ದರೂ ಪರೋಕ್ಷವಾಗಿ ಅವರಿಗೆ ಬೆಂಬಲ ಸೂಚಿಸುವ ಜನರ ಕುರಿತಂತೆ ಸೌದಿ ಅರೇಬಿಯಾದ ಹಿರಿಯ ಉಲಮಾ ಮಂಡಳಿಯ ಸದಸ್ಯರಾದ ಅಶ್ಶೈಖ್ ಸಾಲಿಹ್ ಅಲ್-ಫೌಝಾನ್ (حَفِظَهُ اللَّهُ) ಹೇಳುತ್ತಾರೆ :

ಅವರು (ಉಗ್ರವಾದಿಗಳು ಮಾಡಿರುವ) ಒಳಿತು ಕಾರ್ಯಗಳು ಯಾವುವು? ಮನೆ ಹೊತ್ತಿಸುವುದು, ಕೊಲೆ ಪಾತಕ ಕೃತ್ಯಗಳನ್ನು ನಡೆಸುವುದು, ಉಗ್ರ ಚಟುವಟಿಕೆಗಳಲ್ಲಿ ತೊಡಗುವುದು, ಸಂಪತ್ತು ಕೊಳ್ಳೆ ಹೊಡೆಯುವುದು, (ಸಾಮಾನ್ಯ)ಮುಸ್ಲಿಮರನ್ನು ಕೊಲ್ಲುವುದು ಮತ್ತು (ಅದೇ ರೀತಿ) ಮುಸ್ಲಿಮ್ ಆಡಳಿತಗಾರರ ಸಂರಕ್ಷಣದಡಿಯಲ್ಲಿ (ಮುಸ್ಲಿಮ್ ದೇಶಗಳಲ್ಲಿ) ಜೀವಿಸುವ ಮುಸ್ಲಿಮೇತರರನ್ನು (ಕೂಡ) ಹತ್ಯೆಗೈಯ್ಯುವುದು. ಇವುಗಳೆಲ್ಲವೂ ಒಳಿತು ಕಾರ್ಯಗಳೇ!?

ಮೇಲ್ನೋಟದಲ್ಲಿ (ನಮಗೆ ತಿಳಿದು ಬರುವುದೇನೆಂದರೆ) ಅವರಲ್ಲಿ ಯಾವುದೇ ಒಳಿತು ಕಾರ್ಯಗಳಿಲ್ಲ. ಇನ್ನು ಅವರ ಮತ್ತು ಅಲ್ಲಾಹುವಿನ ಮಧ್ಯೆಯಿರುವ (ಅವರ)ಕಾರ್ಯಗಳ ಕುರಿತು ಹೇಳುವುದಾದರೆ : ಅವುಗಳು ನಮ್ಮಿಂದ ಅಗೋಚರವಾಗಿದೆ (ನಾವ್ಯಾರೂ ಪ್ರತ್ಯಕ್ಷವಾಗಿ ನೋಡದ ಸಂಗತಿಗಳಾಗಿವೆ). ಆದರೆ ಪ್ರತ್ಯಕ್ಷವಾಗಿ ನಮಗೆ ಕಾಣುವುದೇನೆಂದರೆ “ಅವರಲ್ಲಿ (ಉಗ್ರವಾದಿ ಮತ್ತು ತೀವ್ರವಾದಿಗಳಲ್ಲಿ) ಯಾವುದೇ ಒಳಿತು ಕಾರ್ಯಗಳಿಲ್ಲ.

ಅದೇ ರೀತಿ, ಅವರನ್ನು (ಉಗ್ರವಾದಿಗಳನ್ನು) ಸಮರ್ಥಿಸುವವನು ಕೂಡ ಅವರಂತೆ ಉಗ್ರವಾದ ಮನೋಭಾವವನ್ನು ಹೊಂದಿರುವವನಾಗಿರುತ್ತಾನೆ. ಅವರಿಗಿರುವ (ಉಗ್ರವಾದಿಗಳಿಗಿರುವ) ಅದೇ ವಿಧಿಯು (ಶಿಕ್ಷೆ) ಅವನಿಗಿರುವುದು (ಸಮರ್ಥಿಕೊಳ್ಳುವವನಿಗೆ). ಅವರ (ಉಗ್ರವಾದಿಗಳ) ಜತೆಗೂಡಿ ಅವನು ಹೊರಹೋಗಿ ಸ್ಪೋಟಿಸದಿದ್ದರೂ (ಉಗ್ರವಾದಿಗಳು ಮಾಡುವಂತೆ ಆತ್ಮಹತ್ಯೆ ದಾಳಿ ಹಾಗೂ ಇನ್ನಿತರ ದಾಳಿ ನಡೆಸದೇ ಇದ್ದರೂ) ಅವರು ಸನ್ಮಾರ್ಗದಲ್ಲಿರುವರು ಎಂಬ (ಒಳಿತು ಕಾರ್ಯಗಳನ್ನು ಮಾಡುತ್ತಿದ್ದಾರೆಂಬ) ನಂಬಿಕೆಯನ್ನು ಹೊಂದಿದ್ದರೆ ಅಲ್ಲಾಹುವಿನ ಬಳಿ ಅವನು ಅವರಂತೆ ಇರುವವನಾಗಿರವನು (ಉಗ್ರವಾದಿಗಳ ದುಷ್ಕೃತ್ಯಗಳಲ್ಲಿ ಭಾಗಿಯಾಗಿದವನಂತಿರುವನು). ಅವರಿಗಿರುವ ಅದೇ ವಿಧಿಯು (ಶಿಕ್ಷೆಯು) ಅವನಿಗೂ ಅನ್ವಯವಾಗುವುದು.

ಆದ್ದರಿಂದ (ಪ್ರತಿಯೊಬ್ಬ) ಮುಸ್ಲಿಮನು ಈ ಬಗ್ಗೆ ಜಾಗೃತನಾಗಿರಬೇಕು.(ಇದರಿಂದ) ಅವನು ಅವರಂತೆ ಆಗುವ (ಎಲ್ಲಾ) ಸಾಧ್ಯತೆಗಳೂ ಇವೆ ಮತ್ತು ಅದನ್ನು ಅವನು ತಿಳಿಯದೇ ಇರಬಹುದು. ಯಾಕೆಂದರೆ ಅವನು ಅವರನ್ನು ಸಮರ್ಥಿಸಿಕೊಳ್ಳುತ್ತಾನೆ ಅಥವಾ ಅವರ ದುಷ್ಕೃತ್ಯಗಳನ್ನು ಧರ್ಮಸಮ್ಮತಗೊಳಿಸುತ್ತಾನೆ ಅಥವಾ ಅವರನ್ನು ಸಮರ್ಥಿಸಿಕೊಳ್ಳಲು ಅವನು ಸಬೂಬುಗಳನ್ನು ಹುಡುಕುತ್ತಾನೆ.

ಆತ್ಮಹತ್ಯಾ ದಾಳಿಗಳ ವಿರುದ್ಧ ಇಸ್ಲಾಮಿನ ಸ್ಪಷ್ಟ ನಿಲುವು

ಬಾಂಬ್, ಕ್ಷಿಪಣಿ ಮುಂತಾದ ಯುದ್ಧೋಪಕರಣಗಳನ್ನು ಉಪಯೋಗಿಸಿಕೊಂಡು ಉಗ್ರವಾದವನ್ನು ಮೆರೆದು ಇದೀಗ ಆತ್ಮಹತ್ಯಾ ದಾಳಿಗಳ ಮೂಲಕ ಉಗ್ರವಾದಿಗಳು ತಮ್ಮ ಅಮಾನುಷ ಕೃತ್ಯಗಳನ್ನು ಹಬ್ಬಿಸುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಆತ್ಮಹತ್ಯಾ ದಾಳಿಗಳನ್ನು ಇಸ್ಲಾಮಿಗಾಗಿ ನಡೆಸುವ “ಜಿಹಾದ್” ಎಂದು ತಪ್ಪಾಗಿ ಬಿಂಬಿಸಿ, ತನ್ನನ್ನು ಸ್ವತಃ ಸ್ಫೋಟಿಸಿ ಆತ್ಮಹತ್ಯೆಗೈಯ್ಯುವ ದುಷ್ಕರ್ಮಿಗಳನ್ನು ಹುತಾತ್ಮರೆಂದು (ಶಹೀದ್ ಎಂದು) ಬಣ್ಣಿಸಿ ಅಂತಹ ಪಾಪಿಗಳನ್ನು ವೈಭವೀಕರಿಸುವುದನ್ನು ನಾವು ಕಾಣುತ್ತಿದ್ದೇವೆ. ಇಂತಹ ನಾನಾ ಸನ್ನಿವೇಶಗಳಿಂದ ಮುಸ್ಲಿಮೇತರರಲ್ಲಿ ಹೆಚ್ಚೇಕೆ ಸಾಮಾನ್ಯ ಮುಸ್ಲಿಮರ ತಲೆಯಲ್ಲೂ ಈ ಕುರಿತು ತಪ್ಪುಕಲ್ಪನೆಗಳು ಗೂಡುಕಟ್ಟಿರುವುದು ಬಲು ಬೇಸರದ ಸಂಗತಿಯಾಗಿದೆ.

ಇಸ್ಲಾಮಿನ ಮೇಲೆ ಹೇರಲಾದ ಈ ತಪ್ಪುಕಲ್ಪನೆಯನ್ನು ಛಿದ್ರಗೊಳಿಸುತ್ತಾ ಆತ್ಮಹತ್ಯಾ ದಾಳಿಗಳ ವಿರುದ್ಧ ಇಸ್ಲಾಮಿನ ಸ್ಪಷ್ಟ ನಿಲುವಿನ ಬಗ್ಗೆ ಸೌದಿ ಅರೇಬಿಯಾದ ಹಿರಿಯ ವಿದ್ವಾಂಸರ ಪೈಕಿ ಓರ್ವರಾದ ಅಶ್ಶೈಖ್ ಅಬ್ದುಲ್ ಮುಹ್ಸಿನ್ ಬಿನ್ ಹಮದ್ ಅಲ್-ಅಬ್ಬಾದ್ ಅಲ್-ಬದ್ರ್ (حَفِظَهُ اللَّهُ) ಹೇಳುತ್ತಾರೆ :

ಅನ್ಯಾಯವಾಗಿ ಅಮಾಯಕರ ಹತ್ಯೆ ನಡೆಸುವುದು ಮಹಾಪಾಪಗಳ ಪೈಕಿ ಸೇರಿದ ಮಹಾ ದುಷ್ಕೃತ್ಯವಾಗಿದೆ. ನಮಾಝ್’ನಲ್ಲಿ ನಿರತರಾಗಿರುವವರನ್ನು ಹತ್ಯೆಗೈಯ್ಯುವುದು ಅದರ ದುಷ್ಟತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಆಶ್ರಮಗಳಲ್ಲಿರುವ ಸನ್ಯಾಸಿಯರನ್ನು ಹತ್ಯೆಗೈಯ್ಯುವುದನ್ನು ಹೇಗೆ ಇಸ್ಲಾಮೀ ಶರೀಅತ್ ನಿಷೇಧಿಸಿದೆಯೋ ಅದೇ ರೀತಿ ಮಸೀದಿಗಳಲ್ಲಿ ನಮಾಝ್ ನಿರ್ವಹಿಸುವವರ ಹತ್ಯೆಗೈಯ್ಯುವುದನ್ನು ಮೊಟ್ಟಮೊದಲನೆಯದಾಗಿ ನಿಷೇಧಿಸಿದೆ.

ಸೊಂಟಪಟ್ಟಿಯಲ್ಲಿ ಸ್ಫೋಟಕವನ್ನಿಟ್ಟುಕೊಂಡು ಆತ್ಮಹತ್ಯಾ ದಾಳಿ ನಡೆಸಿ ತನ್ನನ್ನು ಸ್ವತಃ ಸ್ಪೋಟಿಸಿಕೊಳ್ಳಲು ಯಾವೊಬ್ಬ ಮುಸ್ಲಿಮನಿಗೂ ಯಾವುದೇ ಕಾರಣಕ್ಕೂ ಅಥವಾ ಯಾವುದೇ ಸಂದರ್ಭದಲ್ಲೂ ಸಮ್ಮತಾರ್ಹವಲ್ಲ. ಯಾಕೆಂದರೆ ಅಲ್ಲಾಹು ಹೇಳುತ್ತಾನೆ :

﴿ وَلَا تَقْتُلُوا أَنفُسَكُمْ 

“ನೀವು ನಿಮ್ಮನ್ನೇ ವಧಿಸದಿರಿ (ಪರಸ್ಪರ ಕೊಲ್ಲಬೇಡಿರಿ).” (ಕುರ್‌ಆನ್ 4 :29)

 

ಸೌದಿ ಅರೇಬಿಯಾದ ಹಿರಿಯ ಉಲಮಾ ಮಂಡಳಿಯ ಸದಸ್ಯರಾದ ಅಶ್ಶೈಖ್ ಸಾಲಿಹ್ ಅಲ್-ಫೌಝಾನ್ (حَفِظَهُ اللَّهُ) ಹೇಳುತ್ತಾರೆ :

ಸರ್ಕಾರಿ (ಸಾರ್ವಜನಿಕ) ಸವಲತ್ತುಗಳನ್ನು (ಹಾನಿಯನ್ನುಂಟು ಮಾಡದೆ) ಸುಸ್ಥಿತಿಯಲ್ಲಿಡುವುದು, ಅವುಗಳನ್ನು ಸಂರಕ್ಷಿಸುವುದು ಹಾಗೂ ಅವುಗಳ ಅಭಿವೃದ್ದಿಯನ್ನು ಖಾತ್ರಿಪಡಿಸುವುದು ಮುಸ್ಲಿಮರ ಮೇಲೆ ಕಡ್ಡಾಯವಾಗಿದೆ. ಹಾಗಾದರೆ (ಸರ್ಕಾರಿ) ಸವಲತ್ತುಗಳನ್ನು ಧ್ವಂಸಗೊಳಿಸುವ ಮತ್ತು (ಬಾಂಬುಗಳನ್ನೆಸೆದು) ಸ್ಪೋಟಿಸುವ ಹಾಗೂ ಇನ್ನಿತರ ಉಗ್ರ ಚಟುವಟಿಕೆಗಳ ಮೂಲಕ ಅವುಗಳನ್ನು ನಿರ್ನಾಮಗೊಳಿಸುವವರ (ದುಃಸ್ಥಿತಿ) ಹೇಗಿರಬಹುದು ? ಮಸೀದಿಗಳೂ (ಕೂಡ) ಅವರಿಂದ (ಉಗ್ರವಾದಿಗಳಿಂದ) ಸುರಕ್ಷಿತವೇನಲ್ಲ. ಅವರು ಅವುಗಳನ್ನು (ಮಸೀದಿಗಳನ್ನು) ಸ್ಪೋಟಿಸುತ್ತಾರೆ, ಹಾಗೂ (ಅವುಗಳೆಡೆಗೆ) ಬಾಂಬುಗಳನ್ನು ಎಸೆಯುತ್ತಾರೆ. ಅವರ ಮಸೀದಿಗಳಲ್ಲಿರುವವರನ್ನೂ (ಕೂಡ) ಅವರು ಕೊಲ್ಲುತ್ತಾರೆ ಹಾಗೂ ಅದರ ಕಟ್ಟಡ ಮತ್ತು ಸೌಲಭ್ಯಗಳನ್ನು ಸ್ಪೋಟಿಸಿ ಧ್ವಂಸಗೊಳಿಸುತ್ತಾರೆ.(ಇವೆಲ್ಲಾ ಕುಕೃತ್ಯವನ್ನೆಸಗಿ ನಂತರ), ಇದು ಅಲ್ಲಾಹುವಿನ ಮಾರ್ಗದಲ್ಲಿ ನಡೆಸುವ ‘ಜಿಹಾದ್’ ಆಗಿದೆಯೆಂದೂ, ಹಾಗೂ ಅವರೆಲ್ಲರೂ ಮುಜಾಹಿದೀನ್’ಗಳೆಂದೂ (ಧರ್ಮದ ಹೋರಾಟಗಾರರೆಂದು ಭ್ರಮೆ ಪೀಡಿತರಾಗಿ) ವಾದಿಸುತ್ತಾರೆ!.

ಇದರ ಬಗ್ಗೆ (ಪ್ರತಿಯೋರ್ವರೂ) ಜಾಗರೂಕತೆಯಿಂದಿರಬೇಕು, ಮತ್ತು ಈ ಬಗ್ಗೆ ಅಜ್ಞಾನದಲ್ಲಿರುವವನನ್ನು ಎಚ್ಚರಿಸಿ ತಿಳಿಗೊಳಿಸಬೇಕು ಹಾಗೂ ಇದರಿಂದಾಗಿ ವಂಚನೆಗೊಳಗಾದವನನ್ನು ಎಚ್ಚರಿಸಬೇಕು, – ಇದು ‘ಜಿಹಾದ್’ ಎಂದೂ ಹಾಗೂ ಇದರಲ್ಲಿ (ಈ ದುಷ್ಕೃತ್ಯಗಳಲ್ಲಿ) ಶ್ರೇಷ್ಟತೆಯಿದೆಯೆಂದು ಅವನು (ತಪ್ಪಾಗಿ) ಭಾವಿಸಿರುತ್ತಾನೆ, ಆದರೆ ವಾಸ್ತವದಲ್ಲಿ ಇದು ವಿನಾಶದ ಅಂಚಿನೆಡೆಗೆ ಕೊಂಡೊಯ್ಯುವ ಕಾರ್ಯಗಳಾಗಿವೆ.

ಅಲ್ಲಾಹು ಕ್ಷೋಭೆಯನ್ನುಂಟು ಮಾಡುವವರನ್ನು ಇಷ್ಟಪಡಲಾರನು. ಇದು ಭೂಮಿಯ ಮೇಲೆ ಕ್ಷೋಭೆಯನ್ನುಂಟು ಮಾಡುವ ಕಾರ್ಯಗಳ ಪೈಕಿಯಾಗಿದೆ. ಅಲ್ಲಾಹು ಕ್ಷೋಭೆ ಹರಡುವವರನ್ನು ಇಷ್ಟಪಡಲಾರನು. ಇದಕ್ಕೂ ಮಿಗಿಲಾಗಿ, ಯಾರನ್ನು ಅಲ್ಲಾಹು ಅನ್ಯಾಯವಾಗಿ ಕೊಲ್ಲುವುದನ್ನು ನಿಷೆಧಿಸಿರುವನೋ (ಅಂತಹ) ಮುಗ್ದ ಜನರು ( ಉಗ್ರವಾದಿಗಳಿಂದ) ಹತ್ಯೆಗೀಡಾಗುತ್ತಿದ್ದಾರೆ. 
ಅವರು (ಉಗ್ರವಾದಿಗಳು) ಅಪರಾಧ ಕೃತ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದಲ್ಲದೆ , ತಮ್ಮ ಮೇಲೆ (ಬಾಂಬ್) ಸಿಡಿಸಿ ಆತ್ಮಹತ್ಯಾ ದಾಳಿ ನಡೆಸಿಕೊಂಡು ಸ್ವತಃ ತಮ್ಮನ್ನು ತಾವೇ ಕೊಲ್ಲಲೂಬಹುದು ಹಾಗೂ (ಇವೆಲ್ಲಾ ಕುಕೃತ್ಯವನ್ನೆಸಗಿಯೂ ಅವರು) ಇದು ಹುತಾತ್ಮತೆಯೆನ್ನುತ್ತಾರೆ.

ಆತ್ಮಹತ್ಯೆ ಮಾಡಿಕೊಂಡವನು ನರಕಾಗ್ನಿಯಲ್ಲಿರುವನೆಂದು ರಸೂಲ್ (H) ರವರು ಹೇಳಿರುವಾಗ ಹೇಗೆ ತಾನೇ ಅವನು ಹುತಾತ್ಮನಾಗುತ್ತಾನೆ? ಅಲ್ಲಾಹು (E) ಹೇಳಿದ್ದಾನೆ :

﴿ وَلَا تَقْتُلُوا أَنفُسَكُمْ ۚ إِنَّ اللَّـهَ كَانَ بِكُمْ رَحِيمًا ٩٢ وَمَن يَفْعَلْ ذَٰلِكَ عُدْوَانًا وَظُلْمًا فَسَوْفَ نُصْلِيهِ نَارًا 

“ನೀವು ನಿಮ್ಮನೇ ವಧಿಸದಿರಿ, ಖಂಡಿತವಾಗಿಯೂ ಅಲ್ಲಾಹು ನಿಮ್ಮೊಂದಿಗೆ ಅಪಾರ ಕರುಣೆಯುಳ್ಳವನಾಗಿರುವನು. ಯಾರು ಅತಿಕ್ರಮವಾಗಿ ಮತ್ತು ಅನ್ಯಾಯವಾಗಿ ಅದನ್ನು ಮಾಡುವನೋ, ಅವನನ್ನು ನಾವು ನರಕಾಗ್ನಿಯಲ್ಲಿ ಉರಿಸುವೆವು. ಅದು ಅಲ್ಲಾಹುವಿಗೆ ಅತಿ ಸುಲಭವಾದುದಾಗಿದೆ.” (ಕುರ್‌ಆನ್ 4 : 29-30)

 

ಸಹೀಹ್ (ಅಧಿಕೃತವಾದ) ಹದೀಸ್’ನ ಉಲ್ಲೇಖದಂತೆ ರಸೂಲ್ (H) ಹೇಳಿರುವರು :

“ಯಾರು ವಿಷ ಸೇವಿಸಿ ತನ್ನನು ತಾನೇ ಕೊಲ್ಲುವನೋ (ಆತ್ಮಹತ್ಯೆ ಮಾಡಿಕೊಳ್ಳುತ್ತಾನೋ) ನರಕಾಗ್ನಿಯಲ್ಲಿ ಅದನ್ನು (ವಿಷವನ್ನು) ತನ್ನ ಕೈಯಲ್ಲಿ ಹಿಡಿದು ಎಡೆಬಿಡದೆ ಸೇವಿಸುತ್ತಲೇ ಇರುವನು. ಯಾರು ಕಬ್ಬಿಣದಿಂದ ತನ್ನನು ತಾನೇ ಇರಿದು ಕೊಲ್ಲುವನೋ (ಆತನು) ನರಕಾಗ್ನಿಯಲ್ಲಿ ಅದನ್ನು (ಕಬ್ಬಿಣವನ್ನು) ತನ್ನ ಕೈಯಲ್ಲಿ ಹಿಡಿದು ತನ್ನನೇ ಇರಿದುಕೊಳ್ಳುತ್ತಾ ಇರುವನು . ಯಾರು ತನ್ನನು ತಾನೇ ಬೆಟ್ಟದ ಕೆಳಗೆ ಧುಮುಕುವ ಮೂಲಕ ಕೊಲ್ಲುವನೋ (ಬೆಟ್ಟದಿಂದ ಹಾರಿ ಆತ್ಮಹತ್ಯೆಗೈಯ್ಯುತ್ತಾನೋ) ಆತನನ್ನು ನರಕಾಗ್ನಿಯ ಕೆಳಗೆ (ನಿರಂತರವಾಗಿ) ಎಸಯಲಾಗುವುದು. (ಮುಸ್ಲಿಮ್ : 175)

ಆದ್ದರಿಂದ ಆತ್ಮಹತ್ಯೆ ಮಾಡಿಕೊಂಡವನು ಮಹಾಪಾಪವನ್ನು ಎಸಗಿರುತ್ತಾನೆ. (ಹೀಗೆ ) ನರಕಾಗ್ನಿಗೆ ಗುರಿಯಾಗುವವನನ್ನು ಹುತಾತ್ಮನೆಂದು ಕರೆಯುವುದಾದರೂ ಹೇಗೆ ?ಆತನು ನರಕಾಗ್ನಿಗೆ ಹೋಗುವನೆಂದು ರಸೂಲ್ (H) ರವರು ಹೇಳಿರುವಾಗ ಅವನನ್ನು ಸ್ವರ್ಗವಾಸಿಯೆಂದು ಹೇಳುವುದಾದರೂ ಹೇಗೆ?? 

ಇಂದಿನ ಕಾಲದ ಹಿರಿಯ ಶ್ರೇಷ್ಠ ವಿದ್ವಾಂಸರುಗಳಾದ ಅಶ್ಶೈಖ್ ರಬೀಅ್ ಅಲ್-ಮದ್‍ಖಲೀ, ಅಶ್ಶೈಖ್ ಸಾಲಿಹ್ ಅಲ್ ಫೌಝಾನ್, ಅಶ್ಶೈಖ್ ಉಬೈದ್ ಅಲ್ ಜಾಬಿರೀ, ಅಶ್ಶೈಖ್ ಅಬ್ದುಲ್ ಮುಹ್ಸಿನ್ ಅಲ್-ಅಬ್ಬಾದ್ ಮುಂತಾದ ಸೌದಿ ಅರೇಬಿಯಾದ ಅಹ್ಲುಸ್ಸುನ್ನಃದ ವಿದ್ವಾಂಸರೆಲ್ಲರೂ ಕೂಡಾ ಉಗ್ರವಾದವನ್ನು ಮತ್ತು ಆತ್ಮಹತ್ಯಾ ದಾಳಿಗಳನ್ನು ತೀವ್ರವಾಗಿ ಖಂಡಿಸಿರುತ್ತಾರೆ ಹಾಗೂ ಅಂತಹ ಪಾತಕಿಗಳನ್ನು ಬೇರು ಸಹಿತ ಕಿತ್ತೆಸೆಯಲು ಜಗತ್ತಿನ ಮುಸ್ಲಿಮರಿಗೆ ಅವರು ಕರೆ ನೀಡಿರುತ್ತಾರೆ.

ಕೊನೆಯ ಮಾತು

ಇಸ್ಲಾಮಿನ ಜ್ಞಾನವನ್ನು ಅದರ ನೈಜ ವಿದ್ವಾಂಸರಿಂದ ಪಡೆಯದೆ ಕೇವಲ ಸಾಮಾಜಿಕ ಜಾಲತಾಣದಲ್ಲಿ ಅನಾಮಧೇಯರಿಂದ ಬರುವ ಸಂದೇಶಗಳನ್ನು ಓದಿ ಅಥವಾ ಪ್ರವಚನಗಳನ್ನು ಆಲಿಸಿ, ತಮ್ಮ ದೇಹೇಚ್ಚೆಗಳಿಗೆ ಅನುಗುಣವಾಗಿ ಇಸ್ಲಾಮಿನ ಸಂದೇಶಗಳನ್ನು ತಿಳಿದೋ ತಿಳಿಯದೆಯೋ ದುರ್ವ್ಯಾಖ್ಯಾನಿಸುವುದರಿಂದ ಉಗ್ರವಾದದೆಡೆಗೆ ಮರುಳಾಗುವ ಎಲ್ಲಾ ಸಾಧ್ಯತೆಗಳಿವೆ.

ಆದ್ದರಿಂದ ಇಂತಹ ಸನ್ನಿವೇಶಗಳಲ್ಲಿ, ಕುರ್‌ಆನ್ ಮತ್ತು ಪ್ರವಾದಿ ಜೀವನ ಸಂದೇಶಗಳಿಗೆ ಅನುಸಾರವಾಗಿ ಇಸ್ಲಾಮನ್ನು ಕಲಿಸಿಕೊಡುವ ಹಿರಿಯ ವಿದ್ವಾಂಸರ ಮಾರ್ಗದರ್ಶನವನ್ನು ಪಡೆಯುವುದು ಅನಿವಾರ್ಯತೆಯಾಗಿದೆ. ಇದರ ಜೊತೆಗೆ ಪೋಷಕರು ಕೂಡ ತಮ್ಮ ಮಕ್ಕಳ ಕಾರ್ಯಚಟುವಟಿಕೆಗಳ ಬಗ್ಗೆ ನಿಗಾ ವಹಿಸಿ ಅವರಿಗೆ ಇಸ್ಲಾಮಿನ ನೈಜ ಸಂದೇಶದ ತರಬೇತಿಯನ್ನು ನೀಡುವುದರ ಜೊತೆಗೆ ಇಸ್ಲಾಮಿನ ಸನ್ಮಾರ್ಗದಿಂದ ವ್ಯತಿಚಲಿಸಿದ ದಾರಿಗೆಟ್ಟ ಗುಂಪು ಹಾಗೂ ಸಂಘಟನೆಗಳ ಬಗ್ಗೆ ಎಚ್ಚರಿಕೆಯನ್ನು ನೀಡಬೇಕಾಗಿದೆ. ಹೀಗೆ ಧಾರ್ಮಿಕ ಜ್ಞಾನವನ್ನು ಸರಿಯಾದ ಮೂಲಗಳಿಂದ ಪಡೆದರೆ ಮಾತ್ರವೇ ಶಾಂತಿ ಮತ್ತು ಭದ್ರತೆಯನ್ನು ಕಾಪಾಡಿಕೊಳ್ಳಲು ಸಾಧ್ಯ. ಅಲ್ಲಾಹು ಅನುಗ್ರಹಿಸಲಿ.

– ಅಬೂ ಹಮ್ಮಾದ್ ಸಲಾಹುದ್ದೀನ್