“ಇಂದಿನ ಆಧುನಿಕ ಕಾಲದ ಉಗ್ರವಾದಿ ಗುಂಪುಗಳೆಲ್ಲವೂ ದಾರಿಗೆಟ್ಟ ಹಾಗೂ ಸನ್ಮಾರ್ಗದಿಂದ ವ್ಯತಿಚಲಿಸಿದ ಗುಂಪುಗಳಾಗಿವೆ. ಅವರಿಗೂ ಇಸ್ಲಾಮಿಗೂ ಕಿಂಚಿತ್ತೂ ಸಂಬಂಧವಿಲ್ಲವೆಂದು ನೀನು ಅವರನ್ನು ಸರಿಯಾಗಿ ಗಮನಿಸಿದರೆ ನಿನಗೆ ಮನವರಿಕೆಯಾಗುವುದು. ಅವರು ತಮ್ಮ ಸ್ವಂತ ಅಭಿಪ್ರಾಯ ಮತ್ತು ದೇಹೇಚ್ಚೆಗಳಿಂದ ಇಸ್ಲಾಮನ್ನು ದುರ್ವ್ಯಾಖ್ಯಾನಿಸಿ ಆ ಮೂಲಕ ಜನರನ್ನು ವಂಚಿಸುತ್ತಾರೆ.”
– ಅಶ್ಶೈಖ್ ಅಬ್ದುಲ್ ಅಝೀಝ್ ಬಿನ್ ಅಬ್ದುಲ್ಲಾಹ್ ಆಲ್ ಶೈಖ್ (حَفِظَهُ اللَّهُ) ಗ್ರಾಂಡ್ ಮುಫ್ತೀ, ಸೌದಿ ಅರೇಬಿಯಾ.
ಈ ಪುಸ್ತಕದ PDF ಪ್ರತಿಯನ್ನು ಈ ಕೆಳಗಿನಿಂದ ಡೌನ್ಲೋಡ್ ಮಾಡಿಕೊಳ್ಳಿರಿ.
w
ಇಸ್ಲಾಮ್ ಹಾಗೂ ಮುಸ್ಲಿಮರು ಎಂದ ಕೂಡಲೇ ನಿಮ್ಮ ಮನದಲ್ಲಿ ಮೂಡುವುದು ಇಂತಹ ಭಯಾನಕ ಚಿತ್ರಣಗಳಾಗಿವೆಯೇ?
![](https://salafikannada.com/storage/2020/01/Mumbai-1.jpg)
![](https://salafikannada.com/storage/2020/01/Mumbai-1.jpg)
ಹಾಗಾದರೆ, ಇಸ್ಲಾಮ್ ಅಂದರೇನು ಹಾಗೂ ಅದರ ಸಂದೇಶಗಳೇನು? ನೈಜ ಮುಸ್ಲಿಮ್ ಯಾರು?
ಸರ್ವಲೋಕಗಳ ಸೃಷ್ಟಿಕರ್ತನೂ ಜಗದೊಡೆಯನೂ ಸಕಲ ಸೃಷ್ಟಿಗಳ ಪರಿಪಾಲಕನಾದ ಅಲ್ಲಾಹು ತನ್ನ ಎಲ್ಲಾ ಪ್ರವಾದಿಗಳಿಗೆ ಅವತೀರ್ಣಗೊಳಿಸಿದ ಧರ್ಮವಾಗಿದೆ ಇಸ್ಲಾಮ್. ಓರ್ವ ವ್ಯಕ್ತಿಯು ಮುಸ್ಲಿಮ್ ಎಂದೆನಿಸಿಕೊಳ್ಳಬೇಕಾದರೆ ಅವನು ಜಗದೊಡೆಯನಾದ ಅಲ್ಲಾಹುವನ್ನು ಮಾತ್ರ ಆರಾಧಿಸಬೇಕಾಗಿದೆ. ಅವನೊಂದಿಗೆ ಇತರ ಯಾರನ್ನೂ ಅಥವಾ ಯಾವುದನ್ನೂ ಸಹಭಾಗಿಗಳನ್ನಾಗಿ ಮಾಡದೆ, ಅವನಿಗೆ ವಿಧೇಯನಾಗಿ ಅವನ ಆಜ್ಞೆ ಹಾಗೂ ನಿಷೇಧಗಳನ್ನು ಪಾಲಿಸಬೇಕಾಗಿದೆ. ಆರಾಧಿಸಲ್ಪಡಲು ಅರ್ಹತೆಯುಳ್ಳವನೂ ಆರಾಧನೆಗೆ ಹಕ್ಕುದಾರನೂ ಆಗಿರುವ ಏಕೈಕ ಜಗದೊಡೆಯನನ್ನು ಮುಸ್ಲಿಮರು “ಅಲ್ಲಾಹು” ಎಂದು ಕರೆಯುತ್ತಾರೆ.
ಇಸ್ಲಾಮಿನಲ್ಲಿ ಪ್ರವಾದಿಗಳೆಂದರೆ ಯಾರು? ಅವರನ್ನು ಮುಸ್ಲಿಮರು ಆರಾಧಿಸುವರೇ?
ಇಸ್ಲಾಮಿನ ಸಂದೇಶಗಳನ್ನು ಜನರಿಗೆ ತಲುಪಿಸಲು ಹಾಗೂ ಅದನ್ನು ವಿವರಿಸಿಕೊಡಲು ಜಗದೊಡೆಯನಾದ ಅಲ್ಲಾಹು ನಿಯೋಗಿಸಿದ ವ್ಯಕ್ತಿಗಳಾಗಿರುವರು ಪ್ರವಾದಿಗಳು. ಅವರನ್ನು ಆರಾಧಿಸುವುದಾಗಲೀ ಅವರನ್ನು ಆರಾಧನೆಯಲ್ಲಿ ಮಧ್ಯವರ್ತಿಗಳನ್ನಾಗಿ ಮಾಡುವುದಾಗಲೀ ಇಸ್ಲಾಮಿನಲ್ಲಿ ನಿಷಿದ್ಧವಾಗಿದೆ. ಅಲ್ಲಾಹು ನಿಯೋಗಿಸಿದ ಎಲ್ಲಾ ಪ್ರವಾದಿಗಳ ಮೇಲೆ ಮುಸ್ಲಿಮರು ವಿಶ್ವಾಸವನ್ನಿಡುತ್ತಾರೆ.
ಏಕೈಕನಾದ ಜಗದೊಡೆಯನನ್ನು ಮಾತ್ರ ಆರಾಧಿಸಬೇಕೆಂದು ಎಲ್ಲಾ ಪ್ರವಾದಿಗಳು ತಮ್ಮ ಜನರಿಗೆ ಕರೆ ನೀಡಿರುವರು. ಅವರಲ್ಲಿ ಕೊನೆಯ ಪ್ರವಾದಿ, ಮುಹಮ್ಮದ್ (H) ಆಗಿರುವರು. ಜಗದೊಡೆಯನಾದ ಅಲ್ಲಾಹುವನ್ನು ಮಾತ್ರ ಆರಾಧಿಸಿ, ಅವನು ನಿಯೋಗಿಸಿದ ಕೊನೆಯ ಪ್ರವಾದಿ, ಮುಹಮ್ಮದ್ (H) ಅಲ್ಲಾಹುವಿನ ದಾಸ ಹಾಗೂ ಸಂದೇಶವಾಹಕರೆಂದು ಸಾಕ್ಷ್ಯವಹಿಸಿ, ಆ ಪ್ರವಾದಿಯನ್ನು ಯಾರು ಅನುಸರಿಸುವನೋ ಅವನು ಮುಸ್ಲಿಮನಾಗಿರುವನು.
![](https://salafikannada.com/storage/2020/01/city.jpg)
![](https://salafikannada.com/storage/2020/01/city.jpg)
ತಮ್ಮ ಸುತ್ತಮುತ್ತಲಿರುವ ಅನ್ಯಧರ್ಮೀಯರೊಂದಿಗೆ ಮುಸ್ಲಿಮರು ಹೇಗೆ ವರ್ತಿಸಬೇಕು?
ನ್ಯಾಯ ನೀತಿ, ಕರುಣೆ, ಕನಿಕರ, ಅತ್ಯುತ್ತಮ ನಡುವಳಿಕೆ ಹಾಗೂ ಉತ್ತಮ ಗುಣ ಸ್ವಭಾವಗಳಿಂದ ಜನರೊಂದಿಗೆ ವರ್ತಿಸಲು ಅಲ್ಲಾಹು ಮತ್ತು ಅವನ ಅಂತ್ಯ ಪ್ರವಾದಿ ಮುಹಮ್ಮದ್ (H) ಮುಸ್ಲಿಮರಿಗೆ ಆಜ್ಞಾಪಿಸಿರುವರು. ಕುರ್ಆನ್ ಹೇಳುತ್ತದೆ :
“ಧರ್ಮದ ವಿಷಯದಲ್ಲಿ ನಿಮ್ಮ ವಿರುದ್ಧ ಯುದ್ಧ ಮಾಡದವರು ಹಾಗೂ ನಿಮ್ಮನ್ನು ನಿಮ್ಮ ಮನೆಗಳಿಂದ ಹೊರಹಾಕದ ಜನರೊಡನೆ ನೀವು ಒಳಿತು ಮತ್ತು ಸೌಜನ್ಯ ತೋರುವುದರಿಂದ ಹಾಗೂ ಅವರೊಂದಿಗೆ ನ್ಯಾಯ ಪಾಲಿಸುವುದರಿಂದ ಅಲ್ಲಾಹು ನಿಮ್ಮನ್ನು ತಡೆಯುವುದಿಲ್ಲ. ನ್ಯಾಯ ಪಾಲಿಸುವವರನ್ನು ಅಲ್ಲಾಹು ಖಂಡಿತವಾಗಿಯೂ ಇಷ್ಟಪಡುತ್ತಾನೆ.” (ಕುರ್ಆನ್ 60 : 8)
ಇಸ್ಲಾಮ್ ಮತ್ತು ಭಯೋತ್ಪಾದನೆ - ಇವೆರಡೂ ಪದೇಪದೇ ಜೊತೆಯಾಗಿ ಉಲ್ಲೇಖಿಸುವುದನ್ನು ನಾವು ಇಂದು ನೋಡುತ್ತಿದ್ದೇವೆ. ಹಾಗಾದರೆ ಈ ಕುರಿತು ಇಸ್ಲಾಮ್ ಏನನ್ನುತ್ತದೆ?
ಎಲ್ಲಾ ರೀತಿಯ ಭಯೋತ್ಪಾದನೆಯನ್ನು ಇಸ್ಲಾಮ್ ಸ್ಪಷ್ಟವಾಗಿ ವಿರೋಧಿಸುತ್ತದೆ. ಹಾಗಿದ್ದರೂ ಮುಸ್ಲಿಮ್ ಹಾಗೂ ಅನ್ಯ ಧರ್ಮೀಯರನ್ನು ಭಯಭೀತಗೊಳಿಸುವ ಕೆಲವೊಂದು ಉಗ್ರವಾದಿ ಗುಂಪುಗಳು ಇಸ್ಲಾಮಿನ ಹೆಸರಿನಲ್ಲಿ ಕಾರ್ಯಾಚರಿಸುತ್ತಿವೆ. ಅವುಗಳ ಪೈಕಿ ಅತ್ಯಂತ ಹೆಚ್ಚು ಕುಪ್ರಸಿದ್ಧವಾಗಿರುವ ಉಗ್ರವಾದಿ ಗುಂಪು “ಅಲ್-ಖಾಯಿದ ಮತ್ತು ಐಸಿಸ್” ಆಗಿದೆ.
ಇಂತಹ ಉಗ್ರಗಾಮಿ ಗುಂಪುಗಳನ್ನು ಇಸ್ಲಾಮಿನ ಪದಪ್ರಯೋಗದಲ್ಲಿ “ಖವಾರಿಜ್” ಎಂದು ಕರೆಯಲಾಗುತ್ತದೆ. ಇದು ಇಸ್ಲಾಮ್ ಮತ್ತು ಮುಸ್ಲಿಮ್ ಆಡಳಿತಗಾರರ ವಿರುದ್ಧ ಪ್ರತಿಭಟಿಸಿ ಬಂಡಾಯ ಏಳುವ ಬಂಡುಕೋರರನ್ನು ಸೂಚಿಸುವ ನಾಮವಾಗಿದೆ. ಭವಿಷ್ಯದಲ್ಲಿ ಮುಂದೊಂದು ದಿನ ಇಂತಹ ಪಥಭ್ರಷ್ಟ ಗುಂಪುಗಳು ಹುಟ್ಟಿಕೊಳ್ಳುತ್ತದೆ ಎಂದು ಪ್ರವಾದಿ ಮುಹಮ್ಮದ್ (H) ಮುನ್ನೆಚ್ಚರಿಕೆಯನ್ನು ನೀಡಿರುವರು. ಅಂತಹ ಸಂದರ್ಭಗಳಲ್ಲಿ ಮುಸ್ಲಿಮರು ಅವರಿಂದ ದೂರವುಳಿಯಬೇಕೆಂದೂ ಅವರೊಂದು ವೇಳೆ ಆಕ್ರಮಿಸಿದರೆ ಅವರ ವಿರುದ್ಧ ಹೋರಾಡಲು ಪ್ರವಾದಿ ಮುಹಮ್ಮದ್ (H) ಆಜ್ಞಾಪಿಸಿರುವರು. ಖವಾರಿಜ್ಗಳು ಪ್ರಥಮವಾಗಿ ಬಂಡಾಯವೆದ್ದಿರುವುದು ಪ್ರವಾದಿ ಮುಹಮ್ಮದ್ (H) ರವರ ಸಹಚರರ (ಸಹಾಬಿಗಳ) ವಿರುದ್ಧವೇ ಆಗಿತ್ತು.
ತಮ್ಮ ಉಗ್ರಗಾಮಿ ಚಟುವಟಿಕೆಗಳಿಗೆ “ಧರ್ಮ ಹೋರಾಟ” ಎಂಬ ನಾಮವನ್ನು ಅಂಟಿಸಿ ಇತಿಹಾಸದುದ್ದಕ್ಕೂ ಖವಾರಿಜ್ಗಳು ನಡೆಸಿದ ಕೆಲವೊಂದು ಭೀಕರ ಹತ್ಯಾಕಾಂಡಗಳು...
– ಪ್ರವಾದಿ ಮುಹಮ್ಮದ್ (H) ರವರ ಕಾಲದ ಬಳಿಕ ಇಸ್ಲಾಮಿನ ಹೆಸರಿನಲ್ಲಿ ಇಸ್ಲಾಮಿಗೆ ಅಪರಿಚಿತವಾದ ಪಥಭ್ರಷ್ಟ ಸಿದ್ದಾಂತಗಳನ್ನು ನಿರ್ಮಿಸಿ ಸ್ವತಃ ಪ್ರವಾದಿಯ ಸಹಚರರಾದ ಸಹಾಬಿಗಳ ವಿರುದ್ಧವೇ ಬಂಡಾಯವೆದ್ದರು.
– ಇಸ್ಲಾಮಿನ ತೃತೀಯ ಖಲೀಫ, ಶ್ರೇಷ್ಠ ಸಹಾಬಿ ಉಸ್ಮಾನ್ ಬಿನ್ ಅಫ್ಫಾನ್ (I) ರವರ ಆಡಳಿತ ವೈಖರಿಯನ್ನು ಪ್ರಶ್ನಿಸಿ ಖವಾರಿಜ್ಗಳು ಅವರ ವಿರುದ್ಧ ಪ್ರತಿಭಟಿಸಿ ಅವರ ನಿವಾಸಕ್ಕೆ ಮುತ್ತಿಗೆಯನ್ನು ಹಾಕಿದರು. ತದನಂತರ ಖಲೀಫ ಉಸ್ಮಾನ್ (I) ರವರ ಮನೆಯೊಳಗೆ ನುಗ್ಗಿ ಅವರನ್ನು ಬರ್ಬರವಾಗಿ ಹತ್ಯೆಗೈದರು. ಈ ವೇಳೆ ಪತಿಯನ್ನು ರಕ್ಷಿಸಲು ಮುಂದೆ ಬಂದ ಉಸ್ಮಾನ್ (I) ರವರ ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆಯನ್ನು ನಡೆಸಿದರು. ಆ ಬಳಿಕ ಖಜಾನೆಯ ಕೇಂದ್ರಕ್ಕೆ ನುಗ್ಗಿ ಖವಾರಿಜ್ಗಳು ರಾಜ್ಯದ ಬೊಕ್ಕಸವನ್ನು ಲೂಟಿಗೈದರು.
– ಇಸ್ಲಾಮಿನ ನಾಲ್ಕನೆಯ ಖಲೀಫ, ಶ್ರೇಷ್ಠ ಸಹಾಬಿ, ಅಲೀ ಬಿನ್ ಅಬೀ ತಾಲಿಬ್ (I) ರವರು ರಮದಾನ್ ತಿಂಗಳಿನಲ್ಲಿ ಉಪವಾಸ ವ್ರತವನ್ನಾಚರಿಸಿ ನಮಾಝಿಗಾಗಿ ಮನೆಯಿಂದ ಮಸೀದಿಗೆ ಹೊರಟರು, ಆ ವೇಳೆ ಹೊಂಚು ಹಾಕಿ ಕುಳಿತಿದ್ದ ಖವಾರಿಜ್ಗಳು ಅಲೀ ಬಿನ್ ಅಬೀ ತಾಲಿಬ್ (I) ರವರನ್ನು ಕ್ರೂರವಾಗಿ ಕೊಚ್ಚಿ ಹಾಕಿದರು. ಇದರ ಪರಿಣಾಮವಾಗಿ ಅವರು ಕೆಲವೇ ದಿನಗಳಲ್ಲಿ ಮರಣಹೊಂದಿದರು.
– ಖವಾರಿಜ್ಗಳು ಪ್ರವಾದಿ ಮುಹಮ್ಮದ್ (H) ರವರ ಸಹಾಬಿಯ (ಸಹಚರ) ಪುತ್ರ ಅಬ್ದುಲ್ಲಾಹ್ ಬಿನ್ ಖಬ್ಬಾಬ್ರನ್ನು ದಾರುಣವಾಗಿ ಕಗ್ಗೊಲೆ ಮಾಡಿ ಅವರ ಗರ್ಭಾವತಿ ಪತ್ನಿಯನ್ನು ಭೀಕರವಾಗಿ ಕೊಂದು ಅವರ ಹೊಟ್ಟೆಯನ್ನು ಸೀಳಿ ತಮ್ಮ ಕ್ರೌರ್ಯದ ಅಟ್ಟಹಾಸವನ್ನು ಮೆರೆದರು.
– ಮುಸ್ಲಿಮ್ ರಾಷ್ಟ್ರಗಳಲ್ಲಿ ಅದರ ಆಡಳಿತಗಾರರು ನೀಡುವ ಅಭಯದ ಕರಾರಿನಲ್ಲಿ ವಾಸಿಸುವ ಅನ್ಯಧರ್ಮೀಯರು, ಅನಿವಾಸಿಗರು ಹಾಗೂ ಪ್ರವಾಸಿಗರನ್ನು ಉಗ್ರವಾದಿಗಳಾದ ಖವಾರಿಜ್ಗಳು ಅವರ ತಂಗುವ ಸ್ಥಳಕ್ಕೆ ನುಗ್ಗಿ ಆತ್ಮಹತ್ಯಾ ದಾಳಿಗಳಂತಹ ಭೀಕರ ದಾಳಿಗಳನ್ನು ನಡೆಸಿ ಅಮಾಯಕರನ್ನು ಬರ್ಬರವಾಗಿ ಹತ್ಯೆಗೈದಿರುವರು. ಇತ್ತೀಚಿನ ವರ್ಷಗಳಲ್ಲಿ ನಡೆದ ಭಯೋತ್ಪಾದಕ ದಾಳಿಗಳೇ ಇದಕ್ಕೆ ಸಾಕ್ಷಿ.
ಪ್ರಸಿದ್ಧ ಕುರ್ಆನ್ ವ್ಯಾಖ್ಯಾನಕಾರರಾದ ಇಮಾಮ್ ಇಬ್ನ್ ಕಸೀರ್ (V) ಹೇಳಿದರು :
“ಖವಾರಿಜ್ಗಳು (ಉಗ್ರವಾದಿಗಳು) ಮಹಿಳೆಯರು ಹಾಗೂ ಮಕ್ಕಳನ್ನು ಹತ್ಯೆಗೈದಿರುವರು ಹಾಗೂ ಗರ್ಭಿಣಿಯರ ಹೊಟ್ಟೆಯನ್ನು ಸೀಳಿ, ಯಾರೂ ಮಾಡಿರದಂತಹ ಘೋರ ಕೃತ್ಯಗಳನ್ನು ಅವರು ಎಸಗಿರುವರು. ”(ಅಲ್-ಬಿದಾಯಃ ವನ್ನಿಹಾಯಃ 8 : 323)
ಅಮಾಯಕರನ್ನು ಹತ್ಯೆಗೈಯುವ ಖವಾರಿಜ್ಗಳು (ಉಗ್ರವಾದಿಗಳು) ತಮ್ಮ ಹೊರತಾದ ಜನರು ಬದುಕಲು ಅನರ್ಹರೆಂದು ಯಾಕೆ ಭಾವಿಸುತ್ತಾರೆ?
ಜಗದೊಡೆಯನಾದ ಅಲ್ಲಾಹುವಿನಲ್ಲಿ ನಿಜವಾದ ವಿಶ್ವಾಸ ಹೊಂದಿರುವ ಏಕಮಾತ್ರ ಜನರು ನಾವೇ ಎಂಬ ಭ್ರಮೆಯಲ್ಲಿ ಖವಾರಿಜ್ಗಳಾದ ಉಗ್ರವಾದಿಗಳು ತಮ್ಮನ್ನು ಹೊರತುಪಡಿಸಿ ಇತರೆಲ್ಲರೂ ಬದುಕಲು ಅನರ್ಹರಾದ ಅವಿಶ್ವಾಸಿ ಅಥವಾ ಧರ್ಮಭ್ರಷ್ಟರು ಎಂಬ ಕೆಟ್ಟ ಭಾವನೆಯನ್ನು ಇಟ್ಟುಕೊಂಡಿರುವರು.
ಧರ್ಮ ರಕ್ಷಣೆಗೆ ಅಲ್ಲಾಹು ವಿಶೇಷವಾಗಿ ನಮ್ಮನ್ನು ಆಯ್ಕೆಮಾಡಿಕೊಂಡಿರುವನು ಎಂಬ ಭ್ರಮೆಯಲ್ಲಿ ಖವಾರಿಜ್ಗಳಾದ ಉಗ್ರವಾದಿಗಳು, ಅಲ್ಲಾಹುವಿನ ಕಾನೂನುಗಳನ್ನು ತಮಗೆ ತೋಚಿದಂತೆ ವ್ಯಾಖ್ಯಾನಿಸಿ ಆ ಕಾನೂನುಗಳನ್ನು ಜಾರಿಗೊಳಿಸುವ ಸಲುವಾಗಿ ಮುಸ್ಲಿಮ್ ಹಾಗೂ ಅನ್ಯಧರ್ಮೀಯರನ್ನು ಸಾಮೂಹಿಕವಾಗಿ ಹತ್ಯೆಗೈದು ಈ ಮೂಲಕ ಭೂಮಿಯನ್ನು ಸ್ವಚ್ಛಗೊಳಿಸಬೇಕೆಂದು ಅವರು ಭಾವಿಸುತ್ತಾರೆ. ಆದರೆ ವಾಸ್ತವದಲ್ಲಿ ಅವರ ಮಾಡುವ ದುಷ್ಕೃತ್ಯಗಳಿಗೂ ಅಲ್ಲಾಹುವಿನ ಕಾನೂನು ನಿಯಮಗಳಿಗೂ, ಕುರ್ಆನ್ ಹಾಗೂ ಪ್ರವಾದಿ ಜೀವನ ಸಂದೇಶಕ್ಕೂ ಎಳ್ಳಷ್ಟು ಸಂಬಂಧವಿಲ್ಲ.
ಜನರೊಂದಿಗೆ ಕರುಣೆ ಮತ್ತು ಕನಿಕರವಿಲ್ಲದ ಹಾಗೂ ಸರಿಯಾದ ಧಾರ್ಮಿಕ ಜ್ಞಾನವಿಲ್ಲದ ಖವಾರಿಜ್ಗಳಾದ ಉಗ್ರವಾದಿಗಳು ವಾಸ್ತವದಲ್ಲಿ ಕ್ರೂರ ಹಂತಕರೂ, ಸಂಪತ್ತನ್ನು ಕೊಳ್ಳೆ ಹೊಡೆಯುವ ಲೂಟಿಕೋರರೂ ಆಗಿರುವರು. ಅಮಾಯಕರೆಂದು ಲೆಕ್ಕಿಸದೆ ನಿರಾಯುಧ ನಾಗರಿಕರನ್ನು ಅವರು ಬರ್ಬರವಾಗಿ ಹತ್ಯೆಗೈಯುವರು. ಪ್ರವಾದಿ ಮುಹಮ್ಮದ್ (H) ಹೇಳಿರುವರು :
“ಯಾರು ಜನರೊಂದಿಗೆ ಕರುಣೆ ತೋರುವುದಿಲ್ಲವೋ, ಅವನಿಗೆ ಅಲ್ಲಾಹು ಕರುಣೆ ತೋರಲಾರನು” (ಸಹೀಹ್ ಮುಸ್ಲಿಮ್)
ನಾವು ಗಮನಿಸಬಹುದಾದ ಉಗ್ರವಾದಿಯ ಕೆಲವು ಲಕ್ಷಣಗಳು ಯಾವುವು?
1) ಬಂಡಾಯ, ಪ್ರತಿಭಟನೆ ಹಾಗೂ ಕ್ರಾಂತಿಯನ್ನು ಬೆಂಬಲಿಸಿ ಮುಸ್ಲಿಮ್ ದೇಶಗಳಲ್ಲಿರುವ ರಾಜಕೀಯ ಸ್ಥಿತಿಗತಿಗಳ ಮೇಲೆ ತನ್ನ ಗಮನವನ್ನು ನಿರಂತರವಾಗಿ ಕೇಂದ್ರೀಕರಿಸುವನು.
2) ಮುಸ್ಲಿಮ್ ಆಡಳಿತಗಾರರನ್ನು ಉಗ್ರವಾಗಿ ಟೀಕಿಸುವನು ಹಾಗೂ ಶರೀಅತ್ ನಿಯಮಗಳನ್ನು ಸಂಪೂರ್ಣವಾಗಿ ಪಾಲಿಸದವರನ್ನು ಅಜ್ಞಾನದಿಂದ ಅವರನ್ನು ಧರ್ಮಭ್ರಷ್ಟರೆಂದು ಘೋಷಿಸುವನು.
3) ಉಗ್ರವಾದ ಸಿದ್ದಾಂತಗಳನ್ನು ವಿರೋಧಿಸುವ ಹಾಗೂ ಅದರ ಪಥಭ್ರಷ್ಟತೆಯನ್ನು ಬಯಲಿಗೆಳೆಯುವ ಇಸ್ಲಾಮಿನ ಹಿರಿಯ ವಿದ್ವಾಂಸರಿಗೆ ಯಾವುದೇ ಮಾನ್ಯತೆಯನ್ನು ನೀಡದೆ, ಅವಹೇಳನಗಳ ಮೂಲಕ ಅವರನ್ನು ತಾತ್ಸಾರ ಮಾಡಿ ಅವರ ವಿರುದ್ಧ ಸುಳ್ಳಾರೋಪಗಳನ್ನು ಹೊರಿಸುವನು. ಸುಲ್ತಾನರ ವಿದ್ವಾಂಸರು (ಆಡಳಿತಗಾರರ ಕಪಿಮುಷ್ಠಿಯಲ್ಲಿರುವ ವಿದ್ವಾಂಸರು), ಋತುಸ್ರಾವದ ವಿದ್ವಾಂಸರು (ಕೇವಲ ಕರ್ಮಶಾಸ್ತ್ರಕ್ಕೆ ಸೀಮಿತರಾದ ವಿದ್ವಾಂಸರು) ಪ್ರಚಲಿತ ಸನ್ನಿವೇಶಗಳ ಬಗ್ಗೆ ಲೋಕಜ್ಞಾನವಿಲ್ಲದವರು – ಹೀಗೆ ಹಲವು ಬಗೆಯ ಆಕ್ಷೇಪಾರ್ಹವಾದ ಸುಳ್ಳಾರೋಪಗಳನ್ನು ಹೊರಿಸಿ ಆ ಮೂಲಕ ಜನಸಾಮಾನ್ಯರನ್ನು ವಿದ್ವಾಂಸರಿಂದ ದೂರ ಸರಿಯುವಂತೆ ಮಾಡುವನು.
4) ಆಧುನಿಕ ಕಾಲದ ಉಗ್ರ ರಾಜಕೀಯ ಸಿದ್ಧಾಂತದ ಸಂಸ್ಥಾಪಕನಾದ ಸಯ್ಯಿದ್ ಕುತ್ಬ್, ಹಸನ್ ಅಲ್-ಬನ್ನಾ ಮುಂತಾದವರನ್ನು ಪ್ರಶಂಸಿಸುವನು.
5) ತನ್ನ ಉಗ್ರ ರಾಜಕೀಯ ನಿಲುವುಗಳನ್ನು ವಿರೋಧಿಸುವ ಮುಸ್ಲಿಮರನ್ನು ಅವನು ಸತ್ಯನಿಷೇಧಿ ಎಂದು ಘೋಷಿಸುವನು (ಇದಕ್ಕೆ ತಕ್ಫೀರ್ ಎನ್ನಲಾಗುತ್ತದೆ).
6) ತನ್ನ ಉಗ್ರವಾದಿ ಸಿದ್ಧಾಂತವನ್ನು ವಿರೋಧಿಸುವ ಮುಸ್ಲಿಮರ ಹತ್ಯೆಗೈಯುವುದನ್ನು ಅವನು ಧರ್ಮಸಮ್ಮತಗೊಳಿಸುವನು ಹಾಗೂ ಮುಸ್ಲಿಮರ ಅಭಯದ ಕರಾರಿನಲ್ಲಿ ಅರ್ಥಾತ್ ಮುಸ್ಲಿಮ್ ರಾಷ್ಟ್ರಗಳಲ್ಲಿ ವಾಸಿಸುವ ಅನ್ಯಧರ್ಮೀಯರನ್ನು ಕಗ್ಗೊಲೆ ನಡೆಸುವುದನ್ನು ಹಾಗೂ ಅವರ ಸಂಪತ್ತು ಕೊಳ್ಳೆ ಹೊಡೆಯುವುದನ್ನು ಕೂಡ ಧರ್ಮಸಮ್ಮತವೆಂದು ಪರಿಗಣಿಸುವನು.
7) ಉಗ್ರಗಾಮಿಗಳು ಹಾಗೂ ದಂಗೆಕೋರರು ಎಸಗುವ ಆತ್ಮಹತ್ಯಾ ದಾಳಿಗಳು ಹಾಗೂ ಶಿರಚ್ಛೇದಗಳು ಮುಂತಾದ ಘೋರ ಹಿಂಸಾಚಾರಗಳನ್ನು ವೈಭವೀಕರಿಸಿ ಅದನ್ನು ಅವನು ಶ್ಲಾಘಿಸುವನು.
8) ಉಗ್ರವಾದಿಗಳ ಪೈಕಿ ಬಹುತೇಕ ಜನರು ಇಸ್ಲಾಮಿನ ವಿದ್ವಾಂಸರ ಮಾರ್ಗದರ್ಶನದಿಂದ ದೂರವುಳಿದುಕೊಂಡಿರುವ ಧಾರ್ಮಿಕ ಅಜ್ಞಾನಿಗಳೂ, ಕಿರು ಪ್ರಾಯದ ಯುವಕರೂ ಆಗಿರುವರು.
![](https://salafikannada.com/storage/2020/01/1.jpg)
![](https://salafikannada.com/storage/2020/01/1.jpg)
ಹಿಜಾಬ್ ಧರಿಸಿದ ಮಹಿಳೆಯರನ್ನು ಅಥವಾ ಗಡ್ಡಧಾರಿಗಳಾದ ಪುರುಷರನ್ನು ಕಂಡರೆ, ನಾನು ಆತಂಕ ಪಡಬೇಕೇ? ಅವರು ನನ್ನ ಮೇಲೆ ಹಾನಿಯನ್ನುಂಟು ಮಾಡುವರೇ?
ಯಾವುದೇ ಕಾರಣಕ್ಕೂ ನೀವು ಆತಂಕ ಪಡಬೇಕಾಗಿಲ್ಲ. ಯಾಕೆಂದರೆ ಸಭ್ಯ ರೀತಿಯಲ್ಲಿ ವಸ್ತ್ರ ಧರಿಸಲು, ದಿನದ ಐದು ಹೊತ್ತಿನಲ್ಲಿ ನಮಾಝ್ ನಿರ್ವಹಿಸಲು, ದಾನಧರ್ಮ ನೀಡಲು, ರಮದಾನಿನಲ್ಲಿ ಉಪವಾಸ ವ್ರತವನ್ನಾಚರಿಸಲು ಹಾಗೂ ಒಳಿತು ಕಾರ್ಯಗಳನ್ನು ಮಾಡಲು ಮುಸ್ಲಿಮರಿಗೆ ಆಜ್ಞಾಪಿಸಲಾಗಿದೆ.
ಆದ್ದರಿಂದ ಹಿಜಾಬ್ ಧರಿಸಿದ ಮುಸ್ಲಿಮ್ ಮಹಿಳೆಯರನ್ನು ಹಾಗೂ ನೀಳವಾದ ಉಡುಪುಗಳನ್ನು ಧರಿಸಿದ ಗಡ್ಡಧಾರಿಗಳಾದ ಪುರುಷರನ್ನು ನೀವು ಕಂಡರೆ, ಇವುಗಳೆನ್ನೆಲ್ಲಾ ಉಗ್ರವಾದದ ಲಕ್ಷಣಗಳೆಂದು ಭಾವಿಸಬಾರದು. ಯಾವುದೇ ಕಾರಣಕ್ಕೂ ನೀವು ನೈಜ ಇಸ್ಲಾಮನ್ನು ಉಗ್ರವಾದದೊಂದಿಗೆ ತಪ್ಪಾಗಿ ಹೋಲಿಸಿ ಗೊಂದಲಕ್ಕೀಡಾಗಬಾರದು. ಭಯೋತ್ಪಾದನೆಯನ್ನು ವಿರೋಧಿಸುವಲ್ಲಿ ಮುಂಚೂಣಿಯಲ್ಲಿ ನಿಂತು ಅತ್ಯಂತ ಹೆಚ್ಚು ಕಠೋರವಾಗಿ ಖಂಡಿಸುವವರು ಇಸ್ಲಾಮ್ ಧರ್ಮವನ್ನು ಸರಿಯಾದ ರೀತಿಯಲ್ಲಿ ಕಲಿತ ಅದೆಷ್ಟೋ ನೈಜ ಮುಸ್ಲಿಮರೇ ಆಗಿರುವರು. ಆದ್ದರಿಂದ ಧರ್ಮಸಮ್ಮತವಾದ (ಹಲಾಲ್) ಮಾಂಸಾಹಾರ ತಿನ್ನುವುದು, ದಿನದ ಐದು ಹೊತ್ತು ನಮಾಝ್ ನಿರ್ವಹಿಸುವುದು, ಗಡ್ಡ ಬೆಳೆಸುವುದು ಹಾಗೂ ಹಿಜಾಬ್ ಧರಿಸುವುದು – ಇವುಗಳಾವುದೂ ಉಗ್ರವಾದದ ಲಕ್ಷಣಗಳಲ್ಲ.!
ಯಾರಾದರೂ ತನ್ನನ್ನು ಉಗ್ರವಾದಿ ಗುಂಪುಗಳೆಡೆಗೆ ಸೆಳೆಯುಲು ಯತ್ನಿಸಿದರೆ ಅಥವಾ ಭಯೋತ್ಪಾದನಾ ದಾಳಿಯನ್ನು ನಡೆಸಲು ಸಂಚು ರೂಪಿಸಿದರೆ ಮುಸ್ಲಿಮನಾದ ಓರ್ವನು ಮಾಡಬೇಕಾದದ್ದೇನು?
ಉಗ್ರಗಾಮಿಗಳ ಚಟುವಟಿಕೆಗಳನ್ನು ತಡೆಗಟ್ಟುವ ಎಲ್ಲಾ ಪ್ರಯತ್ನಗಳನ್ನು ಮುಸ್ಲಿಮರು ಮಾಡಬೇಕಾಗಿದೆ. ಭಯೋತ್ಪಾದನಾ ಕೃತ್ಯಗಳನ್ನು ತಡೆಯುವ ನಿಟ್ಟಿನಲ್ಲಿ ಪ್ರತಿಯೋರ್ವ ಮುಸ್ಲಿಮನು ಈ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡುವುದಲ್ಲದೆ, ತನ್ನ ಮಾತಾಪಿತರು ಶಿಕ್ಷಕರು ಅಥವಾ ಪೋಲಿಸ್ ಇಲಾಖೆಗೂ ಈ ಬಗ್ಗೆ ಮಾಹಿತಿಯನ್ನು ನೀಡಬೇಕು. ಭಯೋತ್ಪಾದನೆಯನ್ನು ಮಟ್ಟಹಾಕಲೇಬೇಕೆಂಬುದು ಇಸ್ಲಾಮಿನ ಸ್ಪಷ್ಟ ನಿಲುವಾಗಿದೆ. ಈ ಘೋರ ಅಪರಾಧಗಳಿಗೆ ಆಸ್ಪದ ಕೊಡಲು ಹಾಗೂ ಅವುಗಳಿಗೆ ನೆರವಾಗಲು ಯಾವೊಬ್ಬ ಮುಸ್ಲಿಮನಿಗೂ ಎಂದಿಗೂ ಮಾಡಲು ಸಾಧ್ಯವಿಲ್ಲ. ಹಿಂಸೆ, ಲೂಟಿ ಹಾಗೂ ಅಮಾಯಕರ ಹತ್ಯೆಗೈಯುವುದನ್ನು ತಡೆಗಟ್ಟಲು ಅಲ್ಲಾಹು ಮತ್ತು ಅವನ ಪ್ರವಾದಿ (H) ಮುಸ್ಲಿಮರಿಗೆ ಆಜ್ಞಾಪಿಸಿರುವರು.
ಪ್ರವಾದಿ (H) ಹೇಳಿರುವರು :
“ಯಾವುದೇ ಒಂದು ಜನತೆಯಲ್ಲಿ ಪಾಪ ಕೃತ್ಯಗಳು ನಡೆಯುತ್ತಿದ್ದರೂ ಅವರ (ಜನತೆಯ) ಪೈಕಿ ಅಂತಹವರನ್ನು (ಪಾಪಿಗಳನ್ನು) ತಡೆಗಟ್ಟಲು ಹಾಗೂ ಬದಲಾವಣೆ ತರಲು ಸಮರ್ಥರಾದ ಜನರಿದ್ದೂ ಸಹ ಅವರನ್ನು ತಡೆಯದೆ ಹೋದರೆ ಅವರೆಲ್ಲರನ್ನೂ ಅಲ್ಲಾಹು ಶಿಕ್ಷಿಸದೆ ಬಿಡಲಾರನು.” (ಸುನನ್ ಇಬ್ನ್ ಮಾಜಃ : 4009)
ನೈಜ ಸಲಫಿಗಳು ಉಗ್ರವಾದವನ್ನು ಕಟುವಾಗಿ ಖಂಡಿಸುತ್ತಾರೆ...
ಶ್ರೇಷ್ಠ ಸಲಫೀ ವಿದ್ವಾಂಸರಾದ ಇಬ್ನ್ ತಯ್ಮಿಯ್ಯಃ (V) ಹೇಳಿದರು :
“ಖವಾರಿಜ್ಗಳು (ಉಗ್ರಗಾಮಿಗಳು) ಇತರರಿಗಿಂತಲೂ ಹೆಚ್ಚಾಗಿ ಮುಸ್ಲಿಮರಿಗೆ ಅಪಾಯಕಾರಿಯಾಗಿರುವರು. ಮುಸ್ಲಿಮರಿಗೆ ಅವರಿಗಿಂತಲೂ ಹೆಚ್ಚಿನ ದುಷ್ಟರು ಇನ್ಯಾರಿಲ್ಲ, ಯಹೂದಿಯರಾಗಲೀ ಅಥವಾ ಕ್ರೈಸ್ತರಾಗಲೀ ಅಲ್ಲ. ಅವರೊಂದಿಗೆ ಒಪ್ಪಿಕೊಳ್ಳದ ಪ್ರತಿಯೊಬ್ಬ ಮುಸ್ಲಿಮರನ್ನೂ ಹತ್ಯೆಗೈಯಲು ಅವರು ಪ್ರಯತ್ನಿಸಿರುವರು. ಅವರನ್ನು (ಮುಸ್ಲಿಮರನ್ನು) ಸತ್ಯನಿಷೇಧಿಗಳೆಂದು ಘೋಷಿಸಿಕೊಂಡು ಮುಸ್ಲಿಮರ ರಕ್ತ ಹರಿಸುವುದನ್ನು, ಅವರ ಆಸ್ತಿ ಸಂಪತ್ತುಗಳನ್ನು ಕಬಳಿಸುವುದನ್ನು, ಅವರ ಮಕ್ಕಳನ್ನು ಹತ್ಯೆಗೈಯುವುದನ್ನು ಅವರು ಸಮ್ಮತಾರ್ಹಗೊಳಿಸಿರುವರು. ಖವಾರಿಜ್ಗಳು ತಮ್ಮ ಅಜ್ಞಾನದ ಪರಮಾವಧಿಯ ಕಾರಣದಿಂದಾಗಿ ಹಾಗೂ ತಮ್ಮ ಪಥಭ್ರಷ್ಟ ನವೀನಾಚಾರದ ಕಾರಣದಿಂದಾಗಿ ಈ (ದುಷ್ಟ) ಮಾರ್ಗವನ್ನು ತಮ್ಮ ಧರ್ಮವಾಗಿ ಸ್ವೀಕರಿಸಿಕೊಂಡಿರುವರು…” (ಮಿನ್ಹಾಜುಸ್ಸುನ್ನಃ 5/248)
ಕುರ್ಆನ್ ವ್ಯಾಖ್ಯಾನಕಾರರ ಪೈಕಿ ಪ್ರಮುಖರಾದ (ಹಿಜರಿ 774 – ಅಂದರೆ 1373 ರ ಇಸವಿಯಲ್ಲಿ ಮರಣಗೊಂಡ) ಇಸ್ಲಾಮಿನ ಶ್ರೇಷ್ಠ ವಿದ್ವಾಂಸರಾದ ಇಮಾಮ್ ಇಬ್ನ್ ಕಸೀರ್ V – ತೀವ್ರಗಾಮಿಗಳಾದ – ಖವಾರಿಜ್ಗಳ ಕುರಿತು ಈ ರೀತಿ ಹೇಳಿರುವರು :
“ಖವಾರಿಜ್ಗಳು (ಐಸಿಸ್, ಅಲ್-ಖಾಯಿದಗಳಂತಹ ಉಗ್ರರು) ಎಂದಾದರೂ ಅಧಿಕಾರ ಶಕ್ತಿಯನ್ನು ಪಡೆದುಕೊಂಡರೆ, ಖಂಡಿತವಾಗಿಯೂ ಅವರು ಭೂಮಿಯುದ್ದಕ್ಕೂ, ವಿಶೇಷವಾಗಿ ಇರಾಕ್ ಮತ್ತು ಸಿರಿಯಾದಲ್ಲಿ ಭೀಕರ ಕ್ಷೋಭೆಯನ್ನುಂಟು ಮಾಡುವರು. ಯಾವೊಂದು ಮಗುವನ್ನೂ – ಅದು ಗಂಡು ಅಥವಾ ಹೆಣ್ಣಾಗಲೀ, ಪುರುಷ ಅಥವಾ ಸ್ತ್ರೀಯಾಗಲೀ ಯಾರನ್ನೂ ಪರಿಗಣಿಸದೆ ಎಲ್ಲರನ್ನೂ ಅವರು ನಿರ್ದಯವಾಗಿ ಕೊಲ್ಲದೆ ಬಿಡಲಾರರು. ಏಕೆಂದರೆ ಅವರ (ಖವಾರಿಜ್ಗಳ ಭ್ರಮೆಯ) ಪ್ರಕಾರ ಕ್ಷೋಭೆಯನ್ನುಂಟು ಮಾಡುವವರು ಜನರೇ ಆಗಿರುವುದರಿಂದ , ಅವರನ್ನು (ಜನರನ್ನು) ಸಾಮೂಹಿಕವಾಗಿ ಹತ್ಯೆ ಮಾಡದ ಹೊರತು ಅವರು (ಜನರು) ಮಾಡಿದ ಕ್ಷೋಭೆಯನ್ನು ಸರಿಪಡಿಸಲಾಗದು.!” (ಅಲ್-ಬಿದಾಯತು ವನ್ನಿಹಾಯಃ : 10/574-575)
ಸೌದಿ ಅರೇಬಿಯಾದ ಗ್ರಾಂಡ್ ಮುಫ್ತೀ ಅಶೈಖ್ ಅಬ್ದುಲ್ ಅಝೀಝ್ ಬಿನ್ ಅಬ್ದುಲ್ಲಾಹ್ ಆಲ್ ಶೈಖ್ (حَفِظَهُ اللَّهُ) ಹೇಳುತ್ತಾರೆ :
ಇಂದಿನ ಆಧುನಿಕ ಕಾಲದ ಉಗ್ರವಾದಿ ಗುಂಪುಗಳೆಲ್ಲವೂ ದಾರಿಗೆಟ್ಟ ಹಾಗೂ ಸನ್ಮಾರ್ಗದಿಂದ ವ್ಯತಿಚಲಿಸಿದ ಗುಂಪುಗಳಾಗಿವೆ. ಅವರಿಗೂ ಇಸ್ಲಾಮಿಗೂ ಕಿಂಚಿತ್ತೂ ಸಂಬಂಧವಿಲ್ಲವೆಂದು ನೀನು ಅವರನ್ನು ಸರಿಯಾಗಿ ಗಮನಿಸಿದರೆ ನಿನಗೆ ಮನವರಿಕೆಯಾಗುವುದು. ತನ್ನ ಸ್ವಂತ ಅಭಿಪ್ರಾಯ ಮತ್ತು ದೇಹೇಚ್ಚೆಗಳಿಂದ ಇಸ್ಲಾಮನ್ನು ದುರ್ವ್ಯಾಖ್ಯಾನಿಸಿ ಆ ಮೂಲಕ ಜನರನ್ನು ವಂಚಿಸುತ್ತಾರೆ.
ನಿಸ್ಸಂಶಯವಾಗಿಯೂ ಅವರು ದಾರಿಗೆಟ್ಟವರಾಗಿರುವರು. ರಕ್ತಪಾತ ನಡೆಸುವುದನ್ನು ಅವರು ಧರ್ಮಸಮ್ಮತಗೊಳಿಸಿರುವರು, ಜನರ ಪಾವಿತ್ರ್ಯತೆಯನ್ನು ಹಾಳುಗೆಡವಿ ಸಂಪತ್ತನ್ನು ಕೊಳ್ಳೆ ಹೊಡೆದು ಭೂಮಿಯಲ್ಲಿ ಕ್ಷೋಭೆಯನ್ನುಂಟು ಮಾಡುತ್ತಾರೆ. ಸಹೋದರರೇ, ಇದರ ಹಿಂದೆ ಯಾರೇ ಇದ್ದರೂ ಇವುಗಳೆಲ್ಲವೂ (ಉಗ್ರವಾದ ಹಾಗೂ ತೀವ್ರವಾದಗಳೆಲ್ಲವೂ) ಮಿಥ್ಯ ಮಾರ್ಗಗಳಾಗಿವೆ. ಅವರಲ್ಲಿ ಅಥವಾ ಅವರನ್ನು ಅನುಸರಿಸುವವರಲ್ಲಿ ಯಾವುದೇ ಒಳಿತಿಲ್ಲ. ಯಾರು ನಮ್ಮ ಯುವಕರನ್ನು ಐಸಿಸ್, ಅಲ್-ಖಾಯಿದ ಮುಂತಾದ ತೀವ್ರವಾದಿ ಹಾಗೂ ಪಥಭ್ರಷ್ಟ ಗುಂಪುಗಳೊಂದಿಗೆ ಸೇರಿಕೊಳ್ಳಲು ಆಹ್ವಾನವನ್ನು ನೀಡುತ್ತಾನೋ, ಖಂಡಿತವಾಗಿಯೂ ಅವನು (ದೊಡ್ಡ) ಪ್ರಮಾದವನ್ನು ಎಸಗಿರುವನು ಮತ್ತು ಇಸ್ಲಾಮಿನ ಸನ್ಮಾರ್ಗದಿಂದ ಸ್ಪಷ್ಟವಾಗಿ ವಿಮುಖನಾಗಿರುವನು.
![](https://salafikannada.com/storage/2020/01/dawah-2.jpg)
![](https://salafikannada.com/storage/2020/01/dawah-2.jpg)
ಉಗ್ರವಾದ ಸಿದ್ಧಾಂತದಿಂದ ಜನರನ್ನು ಹೇಗೆ ತಡೆಗಟ್ಟಬಹುದು?
ಕುರ್ಆನ್ ಮತ್ತು ಪ್ರವಾದಿ ಮುಹಮ್ಮದ್ (H) ರವರ ಜೀವನ ಸಂದೇಶವನ್ನು ಇಸ್ಲಾಮಿನ ಸಜ್ಜನ ಪೂರ್ವಿಕರು ಅರ್ಥೈಸಿ ಮುನ್ನಡೆದ ಸನ್ಮಾರ್ಗದ ಹಾದಿಯೆಡೆಗೆ ಜನರನ್ನು ಆಹ್ವಾನಿಸುವ ಇಸ್ಲಾಮಿನ ಹಿರಿಯ ವಿದ್ವಾಂಸರ ಮಾರ್ಗದರ್ಶನವನ್ನು ಪಡೆಯುವುದು ಅನಿವಾರ್ಯವಾಗಿದೆ. ಇದರ ಹೊರತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅನಾಮಧೇಯರಿಂದ ಬರುವ ಪ್ರವಚನಗಳನ್ನು ಆಲಿಸಿ ಅಥವಾ ಸಂದೇಶಗಳನ್ನು ಓದಿ ಅದನ್ನೇ ಸತ್ಯವೆಂದು ನಂಬಿ ಉಗ್ರವಾದದ ಪಥಭ್ರಷ್ಟ ಸಿದ್ಧಾಂತದೆಡೆಗೆ ಮರುಳಾಗುವ ಎಲ್ಲಾ ಸಾಧ್ಯತೆಗಳಿವೆ. ಆದ್ದರಿಂದ ಪೋಷಕರು ತಮ್ಮ ಮಕ್ಕಳ ಕಾರ್ಯಚಟುವಟಿಕೆಗಳ ಬಗ್ಗೆ ನಿಗಾ ವಹಿಸಿ, ಅವರಿಗೆ ಇಸ್ಲಾಮಿನ ನೈಜ ಸಂದೇಶವನ್ನು ಕಲಿಸಿಕೊಡಬೇಕಾಗಿದೆ.
ಉಗ್ರವಾದಿಗಳನ್ನು ವೈಭವೀಕರಿಸುವ ಹಾಗೂ ಅಂತಹ ಪಥಭ್ರಷ್ಟ ಸಿದ್ಧಾಂತದ ಪ್ರತಿಪಾದಕರ ಕೃತಿಗಳನ್ನು ಪ್ರಚಾರಗೊಳಿಸುವ ಪಥಭ್ರಷ್ಟ ಗುಂಪು ಹಾಗೂ ಸಂಘಟನೆಗಳ ಬಗ್ಗೆ ಎಚ್ಚರಿಕೆಯನ್ನು ನೀಡಿ, ಅವರಿಗೆ ಇಸ್ಲಾಮಿನ ಬಗ್ಗೆ ಸರಿಯಾದ ತರಬೇತಿಯನ್ನು ನೀಡಬೇಕಾಗಿದೆ. ಹೀಗೆ ಧಾರ್ಮಿಕ ಜ್ಞಾನವನ್ನು ಸರಿಯಾದ ಮೂಲಗಳಿಂದ ಪಡೆದರೆ ಮಾತ್ರವೇ ಉಗ್ರವಾದಿ ಸಿದ್ಧಾಂತಗಳನ್ನು ಮಟ್ಟಹಾಕಲು ಸಾಧ್ಯ. ಇಷ್ಟಾದರೂ ಇಸ್ಲಾಮ್ ಮತ್ತು ಭಯೋತ್ಪಾದನೆಯನ್ನು ಯಾರು ಒಂದೇ ಎಂದು ಪರಿಗಣಿಸುವನೋ, ವಾಸ್ತವದಲ್ಲಿ ಅವನು ತಿಳಿದೋ ತಿಳಿಯದೆಯೋ ಇಸ್ಲಾಮನ್ನು ತಪ್ಪಾಗಿ ಕಂಡುಕೊಂಡಿರುವನು. ಆದ್ದರಿಂದ ಅವನು ಪೂರ್ವಗ್ರಹಪೀಡಿತನಾಗದೆ ಸತ್ಯ ಮತ್ತು ವಾಸ್ತವಿಕತೆಯನ್ನು ತಿಳಿದುಕೊಳ್ಳುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಬೇಕಾಗಿದೆ. ಆ ಹೆಜ್ಜೆಯತ್ತ ಸಾಗುವ ಪ್ರತಿಯೊಬ್ಬರಿಗೂ ಈ ಮಾತುಗಳು ಅವರ ಅನ್ವೇಷಣೆಗೆ ನಾಂದಿಯಾಗಲಿ.
– ಅಬೂ ಹಮ್ಮಾದ್ ಸಲಾಹುದ್ದೀನ್
(ರಬೀಅ್ ಅಲ್-ಅವ್ವಲ್ 24, 1441 / ನವೆಂಬರ್ 22, 2019)