w
ಇಮಾಮ್ ಅನ್ನವವೀ (V) ರವರು ತಮ್ಮ ರಿಯಾದ್ ಅಸ್ಸಾಲಿಹೀನ್ ಗ್ರಂಥದಲ್ಲಿ ಉಲ್ಲೇಖಿಸಿದರು :
« عَنْ عَائِشَةَ رَضِيَ اللهُ عَنْهَا، قَالَتْ : كَانَ رَسُولُ اللهِ صَلَّى اللهُ عَلَيْهِ وَسَلَّمَ، إِذَا دَخَلَ الْعَشْرُ، أَحْيَا اللَّيْلَ، وَأَيْقَظَ أَهْلَهُ، وَجَدَّ وَشَدَّ الْمِئْزَرَ »
“ಆಯಿಶಃ (J) ರಿಂದ ವರದಿ, ಅವರು ಹೇಳಿದರು : ಕೊನೆಯ ಹತ್ತರ ರಾತ್ರಿಗಳು ಪ್ರವೇಶಿಸಿದರೆ, ಅಲ್ಲಾಹುವಿನ ರಸೂಲ್ (H) ರವರು ರಾತ್ರಿಯಿಡೀ (ನಮಾಝ್ ಹಾಗೂ ಇನ್ನಿತರ ಇಬಾದತ್ಗಳನ್ನು ನಿರ್ವಹಿಸಲು) ಎಚ್ಚೆತ್ತುಕೊಳ್ಳುತ್ತಿದ್ದರು, ತಮ್ಮ ಕುಟುಂಬವನ್ನು ಎಬ್ಬಿಸುತ್ತಿದ್ದರು, (ರಾತ್ರಿಪೂರ್ತಿ ಇಬಾದತ್ಗಳಲ್ಲಿ) ಪರಿಶ್ರಮ ಪಡುತ್ತಿದ್ದರು, ಮಿಅ್ಝರ್ಅನ್ನು (ಸೊಂಟದ ಉಡುಪನ್ನು) ಬಿಗಿಯಾಗಿ ಕಟ್ಟುತ್ತಿದ್ದರು.” (ಅಲ್-ಬುಖಾರಿ : 2024 ಹಾಗೂ ಮುಸ್ಲಿಮ್ : 1174)
ಇಲ್ಲಿರುವ ಉದ್ದೇಶವು : ರಮದಾನ್ ತಿಂಗಳ ಕೊನೆಯ ಹತ್ತು ರಾತ್ರಿಗಳಾಗಿವೆ. ಅಲ್-ಮಿಅ್ಝರ್ ಎಂಬುದು ಅಲ್-ಇಝಾರ್ ಅರ್ಥಾತ್ ಪತ್ನಿಯರಿಂದ ದೂರವುಳಿಯುವುದಾಗಿದೆ, (ಅದೇ ರೀತಿ) ಇಬಾದತ್ಗಾಗಿ (ಉಡುಪನ್ನು) ಮೇಲಕ್ಕೆ (ಬಿಗಿಯಾಗಿ) ಕಟ್ಟುವುದು ಎಂಬ ಉದ್ದೇಶವಾಗಿದೆ ಎಂದು ಹೇಳಲಾಗುತ್ತದೆ. ನನ್ನ ಮಿಅ್ಝರ್ಅನ್ನು ಒಂದು ಕಾರ್ಯಕ್ಕೆ ನಾನು ಬಿಗಿಗೊಳಿಸಿದೆನು ಅಂದರೆ ನಾನು (ಉಡುಪನ್ನು) ಕಟ್ಟಿ ಅದಕ್ಕಾಗಿ ನನ್ನನ್ನು ನಾನು ತೊಡಗಿಸಿಕೊಂಡೆನು ಎಂದರ್ಥ.
ಸೌದಿ ಅರೇಬಿಯಾದ ಹಿರಿಯ ವಿದ್ವಾಂಸರಾದ ಅಶ್ಶೈಖ್ ಮುಹಮ್ಮದ್ ಬಿನ್ ಸಾಲಿಹ್ ಅಲ್-ಉಸೈಮೀನ್ (V) ರವರ ವಿವರಣೆ :
ರಮದಾನ್ ತಿಂಗಳ ಕೊನೆಯ ಹತ್ತು ರಾತ್ರಿಗಳಲ್ಲಿ ಅಲ್ಲಾಹುವಿನ ರಸೂಲ್ (H) ರವರ ಸಂದರ್ಭಗಳು ಹೇಗಿದ್ದವು ಎಂಬುದನ್ನು ಸತ್ಯವಿಶ್ವಾಸಿಗಳ ಮಾತೆಯಾದ ಆಯಿಶಃ ಬಿಂತ್ ಅಬೀ ಬಕ್ರ್ (L) ರವರಿಂದ ವರದಿಯಾಗಿರುವುದನ್ನು ಗ್ರಂಥಕರ್ತರು -ಅನ್ನವವೀ (V) ಹೇಳಿರುವರು. ಅವರು (ಪ್ರವಾದಿ H) ರವರು ಕೊನೆಯ ಹತ್ತರ ರಾತ್ರಿಗಳನ್ನು ಪ್ರವೇಶಿಸಿದರೆ ಮಿಅ್ಝರ್ಅನ್ನು (ಸೊಂಟದ ಉಡುಪನ್ನು) ಬಿಗಿಯಾಗಿ ಕಟ್ಟುತ್ತಿದ್ದರು, ರಾತ್ರಿಪೂರ್ತಿ ಎಚ್ಚೆತ್ತುಕೊಳ್ಳುತ್ತಿದ್ದರು, ಇಬಾದತ್ಗಳಲ್ಲಿ ಪರಿಶ್ರಮ ಪಡುತ್ತಿದ್ದರು, ಹಾಗೂ ಅದರಲ್ಲಿ ನಿರತರಾಗಲು ಅವರು (H) ಸಜ್ಜಾಗುತ್ತಿದ್ದರು.
ಈ ಹಿಂದೆ ಹದೀಸಿನಲ್ಲಿ ವರದಿಯಾಗಿರುವಂತೆ : ಪ್ರವಾದಿ (H) ರವರು ತಮ್ಮ ಪಾದಗಳು ಉಬ್ಬುವ ತನಕ ರಾತ್ರಿ ನಮಾಝಿನಲ್ಲಿ ನಿಂತುಕೊಳ್ಳುತ್ತಿದ್ದರು. ಅರ್ಧ ರಾತ್ರಿಗಿಂತಲೂ ಹೆಚ್ಚಾಗಿ ಅಥವಾ ಅರ್ಧ ರಾತ್ರಿ ಅಥವಾ ರಾತ್ರಿಯ ಮೂರನೇ ಒಂದು ಭಾಗದವರೆಗೂ ನಮಾಝಿನಲ್ಲಿ ನಿಂತುಕೊಳ್ಳುತ್ತಿದ್ದರು. ಆದರೆ ರಮದಾನ್ ತಿಂಗಳ ಕೊನೆಯ ಹತ್ತರ ರಾತ್ರಿಗಳಲ್ಲಿ ಅವರು ರಾತ್ರಿಯಿಡೀ ನಿಂತುಕೊಳ್ಳುತ್ತಿದ್ದರು ಅರ್ಥಾತ್ – ಇಬಾದತ್ನೊಂದಿಗೆ ರಾತ್ರಿಯಿಡೀ ಎಚ್ಚೆತ್ತುಕೊಳ್ಳುತ್ತಿದ್ದರು. ಆದರೆ ಸೂರ್ಯಾಸ್ತದ ಬಳಿಕ ಉಪವಾಸವನ್ನು ತೊರೆಯುವುದರೊಂದಿಗೆ, ರಾತ್ರಿಯೂಟ, ಇಶಾಅ್ ನಮಾಝ್ ಹಾಗೂ ಅಲ್ಲಾಹುವಿನೆಡೆಗೆ ಹತ್ತಿರಗೊಳಿಸುವ ತಾವು ಕಂಡಿರುವ (ಇನ್ನಿತರ) ಕಾರ್ಯಗಳು (ಇವುಗಳನ್ನೆಲ್ಲಾ ಅವರು ನಿರ್ವಹಿಸುತ್ತಿದ್ದರು).
ಇದರರ್ಥವು ಅವರು ರಾತ್ರಿಯಿಡೀ ನಮಾಝ್ ನಿರ್ವಹಿಸುತ್ತಿದ್ದರು ಎಂದಲ್ಲ. ಇದಕ್ಕಿರುವ ಪುರಾವೆಯೇನೆಂದರೆ, ಸಫಿಯ್ಯಃ ಬಿಂತ್ ಹುಯಯ್ಯಿ ಬಿನ್ ಅಖ್ತಬ್ (J) ರವರು ಇಶಾಅ್ ನಮಾಝಿನ ಬಳಿಕ ಪ್ರವಾದಿ (H) ರವರ ಬಳಿ ಬರುತ್ತಿದ್ದರು ಹಾಗೂ ಅವರೊಂದಿಗೆ ಪ್ರವಾದಿ (H) ಮಾತುಕತೆ ನಡೆಸುತ್ತಿದ್ದರು. ಅದಾಗ್ಯೂ ಆ ರಾತ್ರಿಗಳಲ್ಲಿ ಅವರು (H) ನಿರ್ವಹಿಸುತ್ತಿದ್ದೆಲ್ಲವೂ – ಅದು ನಮಾಝ್ ನಿರ್ವಹಿಸುವುದಾಗಲೀ ಅಥವಾ ನಮಾಝಿಗೆ ಸಿದ್ಧಗೊಳಿಸುವುದಾಗಲೀ ಅಥವಾ ಇನ್ನಿತರ ಕಾರ್ಯಗಳಾಗಲೀ (ಅವುಗಳೆಲ್ಲವೂ)- ಅಲ್ಲಾಹುವಿನೆಡೆಗೆ ಹತ್ತಿರಗೊಳಿಸುವ ಕಾರ್ಯಗಳಾಗಿದ್ದವು.
ಇದರಲ್ಲಿರುವ ಪುರಾವೆಯೇನೆಂದರೆ ಅಲ್ಲಾಹುವಿನ ರಸೂಲ್ (H) ರಮದಾನ್ ತಿಂಗಳ ಕೊನೆಯ ಹತ್ತರ ರಾತ್ರಿಗಳೆಲ್ಲಾ ಎಚ್ಚೆತ್ತುಕೊಳ್ಳುತ್ತಿದ್ದರು ಆದರೆ ಇದರ ಹೊರತಾದ ರಾತ್ರಿಗಳಲ್ಲಿ ಅವರು ಎಚ್ಚೆತ್ತುಕೊಳ್ಳುತ್ತಿರಲಿಲ್ಲ, ಅಂದರೆ ರಮದಾನ್ ತಿಂಗಳ ಕೊನೆಯ ಹತ್ತರ ರಾತ್ರಿಗಳಲ್ಲಿ ಹೊರತಾಗಿ ಯಾವೊಂದು ರಾತ್ರಿಯಲ್ಲೂ ಬೆಳಗ್ಗಿನ ತನಕ ಅವರು (H) ನಮಾಝ್ನಲ್ಲಿ ನಿಂತುಕೊಳ್ಳುತ್ತಿರಲಿಲ್ಲ. ಇದೇಕೆಂದರೆ ಲೈಲತುಲ್ ಕದ್ರ್ಅನ್ನು ಅರಸುತ್ತಾ (ಅವರು ರಾತ್ರಿಯಿಡೀ ಎಚ್ಚೆತ್ತುಕೊಳ್ಳುತ್ತಿದ್ದರು). ಈ ಒಂದು ರಾತ್ರಿಯು (ಲೈಲತುಲ್ ಕದ್ರ್) ಬರುವುದು ರಮದಾನ್ ತಿಂಗಳ ಕೊನೆಯ ಹತ್ತರ ರಾತ್ರಿಗಳಲ್ಲಾಗಿದೆ, ವಿಶೇಷವಾಗಿ ಅವುಗಳ ಪೈಕಿ ಕೊನೆಯ ಏಳರ ರಾತ್ರಿಗಳಲ್ಲಾಗಿದೆ. ಆ (ಪ್ರಸ್ತುತ) ವರ್ಷದಲ್ಲಿ ಏನೆಲ್ಲಾ ಆಗಲಿರುವುದೋ ಅವುಗಳೆನ್ನಲ್ಲಾ ಅಲ್ಲಾಹು ಈ ರಾತ್ರಿಯಲ್ಲಿ (ಲೈಲತುಲ್ ಕದ್ರ್ನಲ್ಲಿ) ನಿರ್ಣಯಿಸುವನು. ಅದು ಅಲ್ಲಾಹು ಹೇಳಿದಂತೆ :
﴿ خَيْرٌ مِنْ أَلْفِ شَهْرٍ ﴾
“ಸಾವಿರ ತಿಂಗಳಿಗಿಂತಲೂ ಶ್ರೇಷ್ಠವಾಗಿದೆ.” (ಸೂರಃ ಅಲ್-ಕದ್ರ್, 97 : 2)
ಹಾಗಾಗಿ, ಅವರು (H) (ರಾತ್ರಿಪೂರ್ತಿ) ಎಚ್ಚೆತ್ತುಕೊಳ್ಳುತ್ತಿದ್ದರು.
« وَمَنْ قَامَ لَيْلَةَ القَدْرِ إِيمَانًا وَاحْتِسَابًا غُفِرَ لَهُ مَا تَقَدَّمَ مِنْ ذَنْبِهِ »
“ಯಾರು ಲೈಲತುಲ್ ಕದ್ರ್ನಲ್ಲಿ (ನಮಾಝ್ ನಿರ್ವಹಿಸುವವರಿಗೆ ಅಲ್ಲಾಹು ಸಿದ್ಧಗೊಳಿಸಿದ ಪ್ರತಿಫಲದ) ವಿಶ್ವಾಸದೊಂದಿಗೆ ಹಾಗೂ ಪ್ರತಿಫಲದ ಬಯಕೆಯೊಂದಿಗೆ ನಮಾಝ್ ನಿರ್ವಹಿಸುವನೋ ಅವನ ಗತಕಾಲದ (ಸಣ್ಣ) ಪಾಪಗಳೆಲ್ಲವೂ ಕ್ಷಮಿಸಲ್ಪಡುವುದು.” (ಅಲ್-ಬುಖಾರಿ : ೧೯೦೧ ಹಾಗೂ ಮುಸ್ಲಿಮ್ : ೭೬೦)
ಆ ಬಳಿಕ (شَدَّ الْمِئْزَرَ) – ಎಂಬುದರ ಅರ್ಥವನ್ನು ಗ್ರಂಥಕರ್ತರು (V) ಉಲ್ಲೇಖಿಸಿರುವರು. ಅದರರ್ಥವು ಪತ್ನಿಯರಿಂದ ದೂರವುಳಿಯುವುದಾಗಿದೆ ಎಂದು ವಿದ್ವಾಂಸರ ಪೈಕಿ ಕೆಲವರು ಹೇಳಿರುವರು, ಯಾಕೆಂದರೆ ಅವರು ಇಅ್ತಿಕಾಫ್ನ ಸ್ಥಿತಿಯಲ್ಲಿದ್ದರು. ಇಅ್ತಿಕಾಫ್ ನಿರ್ವಹಿಸುವವರು ತಮ್ಮ ಪತ್ನಿಯರೊಂದಿಗೆ ಲೈಂಗಿಕ ಸಂಪರ್ಕ ಮಾಡುವುದು ಸಮ್ಮತ್ತಾರ್ಹವಲ್ಲ. ಅಲ್ಲಾಹು ಹೇಳಿರುವಂತೆ,
﴿ وَلَا تُبَاشِرُوهُنَّ وَأَنْتُمْ عَاكِفُونَ فِي الْمَسَاجِدِ ﴾
“ಹಾಗೂ ನೀವು ಮಸೀದಿಗಳಲ್ಲಿ ಇಅ್ತಿಕಾಫ್ನ ಸ್ಥಿತಿಯಲ್ಲಿದ್ದರೆ ನೀವು ಅವರೊಂದಿಗೆ (ಪತ್ನಿಯರೊಂದಿಗೆ) ಲೈಂಗಿಕ ಸಂಪರ್ಕ ಮಾಡದಿರಿ.” (ಸೂರಃ ಅಲ್-ಬಕರಃ, 2 : 187)
ಇನ್ನು ಅವರ (ವಿದ್ವಾಂಸರ) ಪೈಕಿ ಇನ್ನು ಕೆಲವರು ಹೇಳಿರುವುದು : ಇದರರ್ಥವು ಸತ್ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಗಂಭೀರತೆಯನ್ನು ಪಾಲಿಸುವುದು ಹಾಗೂ ಉಡುಪನ್ನು ಕಟ್ಟಿ ಸಜ್ಜುಗೊಳಿಸುವುದು ಎಂದಾಗಿದೆ. ಇವೆರಡೂ (ವಿವರಣೆಗಳು) ಸರಿಯಾಗಿದೆ. ಇದೇಕೆಂದರೆ ರಮದಾನ್ ತಿಂಗಳ ಕೊನೆಯ ಹತ್ತರ ರಾತ್ರಿಯಲ್ಲಿ ರಸೂಲ್ (H) ರವರು ತಮ್ಮ ಕುಟುಂಬದ ಬಳಿ ಹೋಗುತ್ತಿರಲಿಲ್ಲ, ಯಾಕೆಂದರೆ ಅವರು (H) ಇಅ್ತಿಕಾಫ್ನ ಸ್ಥಿತಿಯಲ್ಲಿರುತ್ತಿದ್ದರು, ಹಾಗಾಗಿ ಅವರು ತಮ್ಮ ಮಿಅ್ಝರ್ಅನ್ನು ಬಿಗಿಗೊಳಿಸುತ್ತಿದ್ದರು, ಅವರು (ಇಬಾದತ್ಗಳಲ್ಲಿ) ಪರಿಶ್ರಮ ಪಡುತ್ತಿದ್ದರು ಹಾಗೂ ತಮ್ಮ ಉಡುಪನ್ನು ಕಟ್ಟಿ ಸಜ್ಜುಗೊಳಿಸುತ್ತಿದ್ದರು. ಇದು (ಮನಸ್ಸು ಹಾಗೂ ಶರೀರದ ವಿರುದ್ಧ) ಹೋರಾಟದ ವಿಧಗಳಲ್ಲಿರುವ ಕಾರ್ಯವಾಗಿದೆ. ಆದುದರಿಂದ ಅಲ್ಲಾಹುವಿನ ಆಜ್ಞೆಯ ಅನುಸರಣೆಯ ಮೂಲಕ ಓರ್ವ ವ್ಯಕ್ತಿಯು ಈ ಶ್ರೇಷ್ಠತೆಯ ವೇಳೆಗಳಲ್ಲಿ ತನ್ನ ಮನಸ್ಸು ಹಾಗೂ ಶರೀರದ ವಿರುದ್ಧ ಹೋರಾಡುವುದು ಕಡ್ಡಾಯವಾಗಿದೆ.
(ಮೂಲ : ಶರ್ಹ್ ರಿಯಾದ್ ಅಸ್ಸಾಲಿಹೀನ್ ೨ : ೭೪ – ೭೬)
ಅನುವಾದ : ಅಬೂ ಹಮ್ಮಾದ್