ಅಶ್ಶೈಖ್ ಸಾಲಿಹ್ ಅಲ್ ಉಸೈಮೀನ್ (رحمه الله) ಹೇಳಿದರು :
ವ್ಯಕ್ತಿಯು ಕೆಲವೊಮ್ಮೆ ತನ್ನ ಮಕ್ಕಳಿಗೆ ಶಿಸ್ತನ್ನು ಕಲಿಸುವ ವೇಳೆ ಸಿಟ್ಟಿನಿಂದ ಅವರ ಒಳಿತಿನ ಬದಲು ಅವರ ಕೆಡುಕಿಗಾಗಿ ಪ್ರಾರ್ಥಿಸುತ್ತಾನೆ. ಅಲ್ಲಾಹು ನಿನ್ನನ್ನು ಸನ್ಮಾರ್ಗದಲ್ಲಿ ಮುನ್ನಡೆಸಲಿ, ಅಲ್ಲಾಹು ನಿನ್ನನ್ನು ಸುಧಾರಣೆ ಮಾಡಲಿ, ನಿನ್ನ ಹೃದಯವನ್ನು ವಿಶಾಲಗೊಳಿಸಲಿ ಎಂದು ಹೇಳುವ ಬದಲು ಅಲ್ಲಾಹು ನಿನ್ನನ್ನು ನಾಶಪಡಿಸಲಿ, ಅಲ್ಲಾಹು ನಿನಗೆ ಇಂತಿಂಥದ್ದನ್ನು ನೀಡಲಿ ಎನ್ನುತ್ತಾನೆ.
“ಮನುಷ್ಯನು (ಅಲ್ಲಾಹುವಿನೊಂದಿಗೆ) ಒಳಿತಿಗಾಗಿ ಬೇಡುವಂತೆಯೇ ಕೆಡುಕಿಗಾಗಿಯೂ ಬೇಡುತ್ತಾನೆ. ಮನುಷ್ಯನು ತುಂಬಾ ಆತುರಪಡುವವನಾಗಿರುವನು.” (ಕುರ್’ಆನ್ 17 : 11)
ಕೆಲವು ವಿದ್ವಾಂಸರು ಅಲ್ಲಾಹುವಿನ ಈ ವಚನವನ್ನು ಈ ರೀತಿ ವಿವರಿಸಿದ್ದಾರೆ ಅಂದರೆ – ಒಳಿತಿಗಾಗಿ ಪ್ರಾರ್ಥಿಸಬೇಕಾದ ಅರ್ಹ ಸಂದರ್ಭದಲ್ಲಿ ದುಡುಕು ಮತ್ತು ಆತುರದಿಂದಾಗಿ ಮನುಷ್ಯನು ಕೆಡುಕಿಗಾಗಿ ಪ್ರಾರ್ಥಿಸುವನು.
ಮನುಷ್ಯನಿಗೆ ನೀಡಲಾದ ಕೊಡುಗೆಗಳಲ್ಲಿ ಸಹನೆಗಿಂತ ಉತ್ತಮ ಹಾಗೂ ಸಮೃದ್ಧವಾದ ಕೊಡುಗೆ ಬೇರೊಂದಿಲ್ಲ. (ಆದ್ದರಿಂದ) ನಿನ್ನ ಮನಸ್ಸನ್ನು ಶಾಂತಗೊಳಿಸು, ಅದನ್ನು ನಿಯಂತ್ರಿಸಿಕೋ.
ನಿನ್ನ ಮಕ್ಕಳೊಂದಿಗೆ ಅಥವಾ ನಿನ್ನ ಮನೆಯವರೊಂದಿಗೆ ನೀನು ಕೋಪಗೊಂಡರೆ ನಿನ್ನ ನಾಲಗೆಯನ್ನು ಅವರ ಒಳಿತಿಗಾಗಿ ಪ್ರಾರ್ಥಿಸಲು ನೀನು ರೂಢಿ ಮಾಡಿಕೋ.
ಆದರೆ ಕೆಲವರು (ಸಿಟ್ಟಾಗಿ) ಹೇಳುತ್ತಾರೆ : “ಅಲ್ಲಾಹು ನಿನ್ನನ್ನು ವಶಪಡಿಸಲಿ (ನಿನಗೆ ಸಾವು ಬರಲಿ), ಅಲ್ಲಾಹು ನಿನ್ನನ್ನು ನಾಶಪಡಿಸಲಿ, ಅಲ್ಲಾಹು ನಿನ್ನ ಮುಖವನ್ನು ಕೆಡಿಸಲಿ, ಇಹ ಮತ್ತು ಪರಲೋಕದಲ್ಲಿ ಅಲ್ಲಾಹು ನಿನಗೆ ಯಶಸ್ಸನ್ನು ನೀಡದಿರಲಿ.” ಇದು (ಇಂತಹ ಮಾತುಗಳು) ನಿಷಿದ್ಧವಾಗಿದೆ.
ಸಹನೆ ಮತ್ತು ತಾಳ್ಮೆ ವಹಿಸಿಕೋ, ನಿನ್ನ ಮನಸ್ಸನ್ನು ಶಾಂತಗೊಳಿಸು ಮತ್ತು ನಿನ್ನ ಮನೆಯವರ ಒಳಿತಿಗಾಗಿ ನೀನು ಪ್ರಾರ್ಥಿಸು.
(ಲಿಕಾಉಲ್ ಬಾಬಿಲ್ ಮಫ್ತೂಹ್ : 187)