ಅಹ್ಲುಸ್ಸುನ್ನಃ ವಲ್-ಜಮಾಅಃ ಮತ್ತು ಅದರ ವಿಶ್ವಾಸದ ಕುರಿತು…

w

ಸರ್ವಸ್ತುತಿಗಳೂ ಅಲ್ಲಾಹುವಿಗೆ ಮೀಸಲು. ಅಲ್ಲಾಹುವಿನ ಸಲಾತ್ ಮತ್ತು ಸಲಾಮ್‌ಗಳು ಅಲ್ಲಾಹುವಿನ ರಸೂಲ್ (H) ರವರ ಮೇಲೂ ಅವರ ಕುಟುಂಬದ ಮೇಲೂ ಅವರ ಎಲ್ಲಾ ಸಹಾಬಿಗಳ ಮೇಲೂ ಇರಲಿ.

ಖಂಡಿತವಾಗಿಯೂ, ಅಹ್ಲುಸ್ಸುನ್ನಃ ವಲ್-ಜಮಾಅತ್‌ನ ಅಕೀದಃ ಎಂಬುದು ಎಲ್ಲಾ ಮುಸ್ಲಿಮರು ಖಡ್ಡಾಯವಾಗಿ ವಿಶ್ವಾಸವಿಡಬೇಕಾದ ಸತ್ಯ ಧರ್ಮವಾಗಿದೆ. ಏಕೆಂದರೆ ಅದು ಅಲ್ಲಾಹುವಿನ ರಸೂಲ್ (H) ರವರ ಮತ್ತು ಅವರ ಆದರಣೀಯ ಸಹಾಬಿಗಳ ಅಕೀದಃವಾಗಿದೆ. ಹಾಗಾಗಿ ಅವುಗಳಲ್ಲಿ ಯಾರವರನ್ನು ವಿರೋಧಿಸುವನೋ ಅವನು ಅಲ್ಲಾಹುವಿನ ಕ್ರೋಧಕ್ಕೆ ಮತ್ತು ಅವನ ಕಠಿಣ ಶಿಕ್ಷೆಗೆ ತನ್ನನ್ನು ತಾನೇ ಗುರಿಯಾಗಿಸಿಕೊಂಡಿರುವನು. ಪ್ರವಾದಿ (H) ರವರು ತಮ್ಮ ಉಮ್ಮತ್‌ನಲ್ಲಿ ಉಂಟಾಗಲಿರುವ ಎಪ್ಪತ್ತ ಮೂರು ಗುಂಪುಗಳ ಕುರಿತು ಹೇಳಿದರು :

« كُلُّهَا فِي النَّارِ إِلَّا وَاحِدَةً ، وَهِيَ الْجَمَاعَةُ »

“ಅವುಗಳೆಲ್ಲವೂ (ಆ ಗುಂಪುಗಳೆಲ್ಲವೂ) ನರಕಾಗ್ನಿಯಲ್ಲಿರುವುದು, ಒಂದು (ಗುಂಪಿನ) ಹೊರತು, ಅದಾಗಿದೆ ಅಲ್-ಜಮಾಅಃ (ಸತ್ಯದಲ್ಲಿ ಒಗ್ಗೂಡಿದವರು).” (ಮುಆವಿಯಃ (I) ರವರ ಹದೀಸಿನಿಂದ ಇಮಾಮ್ ಅಹ್ಮದ್, ಅಬೂ ದಾವುದ್ ವರದಿ ಮಾಡಿರುವರು, ಅನಸ್ (I) ರವರ ಹದೀಸಿನಿಂದ ಅಹ್ಮದ್, ಇಬ್ನ್ ಮಾಜಃ ಮತ್ತು ಇಬ್ನ್ ಅಬೀ ಆಸಿಮ್ ವರದಿ ಮಾಡಿರುವರು)

 

ನರಕಾಗ್ನಿಯ (ಶಿಕ್ಷೆಯ) ತಾಕೀತಿನಿಂದ ಸುರಕ್ಷಿತವಾಗಿರುವ ಈ ಗುಂಪನ್ನು ಪ್ರವಾದಿ (H) ರವರು ವರ್ಣಸಿರುವರು, ಅವರು (H) ಹೇಳಿದರು :

« مَنْ كَانَ عَلَى مِثْلِ مَا أَنَا عَلَيْهِ وَأَصْحَابِي الْيَوْمَ »

“ಅವರು (ಯಾರೆಂದರೆ) ನಾನು ಮತ್ತು ನನ್ನ ಸಹಾಬಿಗಳು ಇಂದು ಯಾವುದರಲ್ಲಿದ್ದೇವೆಯೋ (ಯಾವ ವಿಶ್ವಾಸ, ನುಡಿ ಮತ್ತು ಕರ್ಮಗಳಲ್ಲಿ ನಾವಿಂದು ಇರುವೆವೋ) ಅದರ ಮೇಲಿರುವವರಾಗಿದ್ದಾರೆ.” (ಅಬ್ದುಲ್ಲಾಹ್ ಬಿನ್ ಅಮ್ರ್'(I) ರಿಂದ ಅಲ್-ಆಜುರ್ರೀಯವರು ತಮ್ಮ “ಆಶ್ಶರೀಅಃ”ದಲ್ಲಿ ವರದಿ ಮಾಡಿರುವರು, ಅನಸ್ ಬಿನ್ ಮಾಲಿಕ್ (I) ರವರಿಂದ ಅತ್ತಬರಾನೀ ತಮ್ಮ “ಅಸ್ಸಗೀರ್” ಮತ್ತು ಅಲ್-ಅವ್’ಸತ್‌ನಲ್ಲಿ ವರದಿ ಮಾಡಿರುವರು)

 

ಹಾಗಾಗಿ, ಇದು ಅಹ್ಲುಸ್ಸುನ್ನಃ ವಲ್-ಜಮಾಅತ್‌ನ ಮಾನದಂಡವಾಗಿದೆ. ಅವರು ಅಲ್ಲಾಹುವಿನ ರಸೂಲ್ (H) ರವರ ಸುನ್ನತ್ಅನ್ನು ಮತ್ತು ಸನ್ಮಾರ್ಗಿಗಳಾದ ಅವರ ಖಲೀಫರುಗಳ ಸುನ್ನತ್ಅನ್ನು (ಮಾರ್ಗವನ್ನು) ಬಿಗಿಯಾಗಿ ಹಿಡಿದುಕೊಳ್ಳುತ್ತಾರೆ. ಅವರದನ್ನು ತಮ್ಮ ದವಡೆ ಹಲ್ಲುಗಳಿಂದ ಕಚ್ಚಿಹಿಡಿಯುತ್ತಾರೆ (ಪಥಭ್ರಷ್ಟರಾಗದೆ ದೃಢವಾಗಿ ನಿಲ್ಲುತ್ತಾರೆ), ಈ ಕಾರಣದಿಂದಾಗಿ ಅವರು ಸಂರಕ್ಷಿಸಲ್ಪಟ್ಟ ಗುಂಪಾಗಿದ್ದಾರೆ. ಅವರು ಲೋಕಾಂತ್ಯದ ದಿನದಂದು ನರಕಾಗ್ನಿಯಿಂದ ಸಂರಕ್ಷಿಸಲ್ಪಟ್ಟವರಾಗಿದ್ದಾರೆ, ಮತ್ತು ಅವರು ಈ (ಐಹಿಕ) ಲೋಕದಲ್ಲಿ ಬಿದ್ಅತ್‌ಗಳಿಂದ (ನವೀನಾಚಾರಗಳಿಂದ) ಸುರಕ್ಷಿತವಾಗಿರುವವರಾಗಿದ್ದಾರೆ. ಅವರು (ಅಲ್ಲಾಹುವಿನ) ಸಹಾಯ ದೊರಕಿದ ಗುಂಪಾಗಿದ್ದಾರೆ, ಪ್ರವಾದಿ (H) ರವರು ಹೇಳಿದಂತೆ :

« لَا تَزَالُ طَائِفَةٌ مِنْ أُمَّتِي ظَاهِرِينَ حَتَّى يَأْتِيَهُمْ أَمْرُ اللَّهِ وَهُمْ ظَاهِرُونَ »

“ನನ್ನ ಸಮುದಾಯದಲ್ಲಿರುವ ಗುಂಪೊಂದು ವಿಜಯಶಾಲಿಗಳಾಗುತ್ತಲೇ ನೆಲೆಗೊಳ್ಳುವರು, ಅಲ್ಲಾಹುವಿನ ಆಜ್ಞೆಯು ಬಂದೆರಗುವವರೆಗೂ (ಅರ್ಥಾತ್ ಲೋಕಾಂತ್ಯವು ಸಂಭವಿಸುವವರೆಗೂ) ಅವರು ವಿಜಯಶಾಲಿಗಳಾಗುತ್ತಲೇ ಇರುವರು.” (ಅಲ್-ಮುಗೀರಃ ಬಿನ್ ಶು‌ಅ್‌ಬಃ (I) ರವರ ಹದೀಸಿನಿಂದ ಬುಖಾರಿ ಮತ್ತು ಮುಸ್ಲಿಮ್ ವರದಿ ಮಾಡಿರುವರು)

 

ಇಲ್ಲಿ ವಿಜಯಶಾಲಿ ಎಂದರೆ (ಅಲ್ಲಾಹುವಿನ) ನೆರವು ಮತ್ತು ಸಹಾಯವಾಗಿದೆ.

ಅಲ್ಲಾಹು ಹೇಳುತ್ತಾನೆ :

﴿ فَأَيَّدْنَا الَّذِينَ آمَنُوا عَلَى عَدُوِّهِمْ فَأَصْبَحُوا ظَاهِرِينَ ٤١

“ಹೀಗೆ ವಿಶ್ವಾಸವಿಟ್ಟವರಿಗೆ ಅವರ ಶತ್ರುಗಳ ವಿರುದ್ಧ ನಾವು ಶಕ್ತಿ ಮತ್ತು ಸಹಾಯವನ್ನು ಒದಗಿಸಿದೆವು ಮತ್ತು ಅವರು ವಿಜಯಶಾಲಿಗಳಾದರು.” (ಸೂರಃ ಅಸ್ಸಫ್ಫ್, 61 : 14)

 

ಮತ್ತು ಅಲ್ಲಾಹು ಹೇಳುತ್ತಾನೆ :

﴿ وَإِنَّ جُنْدَنَا لَهُمُ الْغَالِبُونَ ٣٧١

“ಖಂಡಿತವಾಗಿಯೂ ನಮ್ಮ ಸೈನ್ಯವೇ ವಿಜಯಶಾಲಿಗಳಾಗುವರು.” (ಸೂರಃ ಅಸ್ಸಾಫ್ಫಾತ್, 37 : 173)

 

ಅವರು ಹೋರಾಟದಲ್ಲೂ, ನುಡಿಯಲ್ಲೂ ಅಥವಾ (ಖಂಡಿಸಲಾಗದ) ವಾದ ಮತ್ತು ಸ್ಪಷ್ಟ ಪುರಾವೆಗಳಲ್ಲೂ ವಿಜಯಶಾಲಿಗಳಾಗಿರುವರು. ಅವರು ಒಂದು ಗುಂಪಾಗಿರುವರೇ ಹೊರತು ಹಲವಾರು ಗುಂಪುಗಳಲ್ಲ. ಈ ಕಾರಣಕ್ಕಾಗಿ ಅವರನ್ನು ‘ಅಲ್-ಜಮಾಅಃ’ ಎಂದು ಕರೆಯಲಾಗುವುದು.

ಅಲ್ಲಾಹು ಹೇಳುತ್ತಾನೆ :

﴿ فَمَاذَا بَعْدَ الْحَقِّ إِلَّا الضَّلَالُ فَأَنَّى تُصْرَفُونَ ٢٣

“ಆದ್ದರಿಂದ ಸತ್ಯದಾಚೆಗೆ ಪಥಭ್ರಷ್ಟತೆಯಲ್ಲದೆ ಮತ್ತೇನು? ಹೀಗಿರುತ್ತಾ, ಹೇಗೆ ತಾನೇ ನೀವು (ಸತ್ಯದಿಂದ) ವಿಮುಖಗೊಂಡಿರುವಿರಿ?” (ಸೂರಃ ಯೂನುಸ್, 10 : 32)

 

ಇಸ್ಲಾಮ್ ಮತ್ತು ಸುನ್ನಃ ಹಾಗೂ ಇವೆರಡನ್ನು ಸೂಚಿಸುವ ನಾಮಗಳಿಂದ ಹೊರತು ಅವರನ್ನು ಗುರುತಿಸುವ (ಇತರ) ಯಾವುದೇ ನಾಮವು ಅವರಿಗಿಲ್ಲ.

ಇಮಾಮ್ ಮಾಲಿಕ್ (V) ಹೇಳಿದರು : “ಅಹ್ಲುಸ್ಸುನ್ನಃಕ್ಕೆ (ಇಸ್ಲಾಮ್ ಮತ್ತು ಸುನ್ನಃ ಹಾಗೂ ಇವೆರಡನ್ನು ಸೂಚಿಸುವ ನಾಮಗಳಿಂದ ಹೊರತು) ಅವರನ್ನು ಗುರುತಿಸುವ (ಇತರ) ಯಾವುದೇ ಉಪನಾಮವಿಲ್ಲ, (ಅದು) ಜಹ್‌ಮಿಯ್ಯ್ ಎಂದಾಗಲೀ, ಖದರಿಯ್ಯ್ ಎಂದಾಗಲೀ ರಾಫಿದಿಯ್ಯ್ ಎಂದಾಗಲೀ ಅಲ್ಲ. (ಇಮಾಮ್ ಮಾಲಿಕ್ V) ಅವರೊಂದಿಗೆ ಸುನ್ನಃದ ಬಗ್ಗೆ ಪ್ರಶ್ನಿಸಲಾಯಿತು, ಅವರು (V) ಉತ್ತರಿಸಿದರು, “ಸುನ್ನಃದ ಹೊರತು ಯಾವುದೇ ಅನ್ಯ ನಾಮವು ಅವರಿಗಿಲ್ಲ.” ಅರ್ಥಾತ್ ಇದನ್ನು (ಈ ನಾಮವನ್ನು) ಹೊರತುಪಡಿಸಿ ಅವರು ಗುರಿತಿಸಲ್ಪಡುವ ಯಾವುದೇ (ಅನ್ಯ) ನಾಮವು ಅಹ್ಲುಸ್ಸುನ್ನಕ್ಕಿಲ್ಲ.

ಹಲವು ಹಿರಿಯ ವಿದ್ವಾಂಸರುಗಳ ಅನೇಕ ಗ್ರಂಥಗಳಲ್ಲಿ ಸಂಕ್ಷಿಪ್ತ ಮತ್ತು ವಿವರವಾಗಿ ಸಲಫುಸ್ಸಾಲಿಹ್‍ಗಳ ಅಕೀದವನ್ನು ದಾಖಲಿಸಲು, ಅದರ ಪುರಾವೆಗಳನ್ನು ವಿವರಿಸಲು ಹಾಗೂ ವ್ಯಾಖ್ಯಾನಿಸಲು ಅತೀವ ಕಾಳಜಿಯನ್ನು ವಹಿಸಲಾಗಿದೆ. ಅವುಗಳು “ಅಸ್ಸುನ್ನಃ” ಅರ್ಥಾತ್ “ವಿಶ್ವಾಸ” ಎಂಬ ಶೀರ್ಷಿಕೆಯನ್ನು ಹೊಂದಿರುವ ಗ್ರಂಥಗಳಾಗಿವೆ. ಅವುಗಳು ಇನ್ನೂರ ಐವತ್ತಕ್ಕೂ ಅಧಿಕ ಗ್ರಂಥಗಳಾಗಿವೆ. ಅದರ ಪೈಕಿ (ಈ ಕೆಳಗಿನವು ಸೇರಿವೆ) :

  • ಇಬ್ನ್ ಅಬೀ ಶೈಬಃರವರ “ಅಸ್ಸುನ್ನಃ”
  • ಇಮಾಮ್ ಅಹ್ಮದ್ ಬಿನ್ ಹಂಬಲ್‍ರವರ “ಅಸ್ಸುನ್ನಃ”
  • ಇಬ್ನ್ ಅಬೀ ಆಸಿಮ್‍ರವರ “ಅಸ್ಸುನ್ನಃ”
  • ಅಬ್ದುಲ್ಲಾಹ್ ಬಿನ್ ಅಹ್ಮದ್‍ರವರ “ಅಸ್ಸುನ್ನಃ”
  • ಅಲ್-ಖಲ್ಲಾಲ್‍ರವರ “ಅಸ್ಸುನ್ನಃ”
  • ಅಹ್ಮದ್ ಬಿನ್ ಅಲ್-ಫುರಾತ್ ಅಬೀ ಮಸ್ಊದ್ ಅರ್ರಾಝಿಯ್ಯ್‌ರವರ “ಅಸ್ಸುನ್ನಃ”
  • ಅಸದ್ ಬಿನ್ ಮೂಸಾರವರ “ಅಸ್ಸುನ್ನಃ”
  • (ಇಮಾಮ್ ಮಾಲಿಕ್‍ರವರ ಸಹಚರರಾದ) ಇಬ್ನುಲ್ ಕಾಸಿಮ್’ರವರ “ಅಸ್ಸುನ್ನಃ”
  • ಮುಹಮ್ಮದ್ ಬಿನ್ ಸಲಾಮ್ ಅಲ್-ಬೀಕನ್‍ದಿಯ್ಯ್‌ರವರ “ಅಸ್ಸುನ್ನಃ”
  • ನುಐಮ್ ಬಿನ್ ಹಮ್ಮಾದ್‍ರವರ “ಅಸ್ಸಿಫಾತ್ ವರ್ರದ್ದ್ ಅಲಲ್-ಜಹ್‌ಮಿಯ್ಯಃ”
  • ಅಲ್-ಅಸ್‍ರಮ್‍ರವರ “ಅಸ್ಸುನ್ನಃ”
  • ಹರ್ಬ್ ಬಿನ್ ಇಸ್ಮಾಈಲ್ ಅಲ್-ಖರ್‌ಮಾನೀಯವರ “ಅಸ್ಸುನ್ನಃ”
  • ಇಬ್ನ್ ಅಬೀ ಹಾತಿಮ್‍ರವರ “ಅಸ್ಸುನ್ನಃ”
  • ಇಬ್ನ್ ಅಬಿದ್ದುನ್ಯಾರವರ “ಅಸ್ಸುನ್ನಃ”
  • ಇಬ್ನ್ ಜರೀರ್ ಅತ್ತಬರಿಯ್ಯ್‌ರವರ “ಅಸ್ಸುನ್ನಃ”
  • ಇಬ್ನ್ ಜರೀರ್ ಅತ್ತಬರಿಯ್ಯ್‌ರವರ “ಅತ್ತಬ್‌ಸೀರ್ ಫೀ ಮಆಲಿಮಿದ್ದೀನ್”
  • ಅತ್ತಬರಾನಿಯ್ಯ್‌ರವರ “ಅಸ್ಸುನ್ನಃ”
  • ಅಬೂ ಅಶ್-ಶೈಖ್ ಅಲ್-ಅಸ್‌ಬಹಾನಿಯ್ಯ್‌ರವರ “ಅಸ್ಸುನ್ನಃ”
  • ಅಬುಲ್-ಕಾಸಿಮ್ ಅಲ್-ಲಾಲಕಾಈಯವರ “ಅಸ್ಸುನ್ನಃ”
  • ಮುಹಮ್ಮದ್ ಬಿನ್ ನಸ್ರ್ ಅಲ್-ಮರ್‌ವಝಿಯ್ಯ್‌ರವರ “ಅಸ್ಸುನ್ನಃ”
  • ಅಸ್ಸಾಬೂನಿಯ್ಯ್‌ರವರ “ಅಕೀದತುಸ್ಸಲಫ್ ಅಸ್‍ಹಾಬಿಲ್ ಹದೀಸ್”
  • ಇಬ್ನ್ ಬತ್ತಃರವರ “ಅಲ್-ಇಬಾನಃ”
  • ಇಬ್ನ್ ಖುಝೈಮಃರವರ “ಅತ್ತೌಹೀದ್”
  • ಇಬ್ನ್ ಮಂದಹ್‌ರವರ “ಅತ್ತೌಹೀದ್”
  • ಇಬ್ನ್ ಅಬೀ ಶೈಬಃರವರ “ಅಲ್-ಈಮಾನ್”
  • ಉಬೈದ್ ಅಲ್-ಕಾಸಿಮ್ ಬಿನ್ ಸಲಾಮ್‍ರವರ “ಅಲ್-ಈಮಾನ್”
  • (ಇಮಾಮ್ ಶಾಫಿಈಯವರ ಸಹಚರರಾದ) ಅಲ್-ಮುಝನಿಯ್ಯ್‌ರವರ “ಶರ್ಹುಸ್ಸುನ್ನಃ”
  • ಇಬ್ನ್ ಶಾಹೀನ್‍ರವರ “ಶರ್ಹು ಮಝಾಹಿಬಿ ಅಹ್ಲಿಸುನ್ನಃ”
  • ಸುನ್ನತ್‌ನ ಶ್ರೇಷ್ಠ ರಕ್ಷಕರಾದ ಅಬುಲ್ ಕಾಸಿಮ್ ಅತ್ತಯ್‌ಮಿಯ್ಯ್ ಅಲ್-ಅಸ್‌ಬಹಾನಿಯ್ಯ್‌ರವರ “ಅಲ್-ಹುಜ್ಜಃ ಫೀ ಬಯಾನಿಲ್-ಮಹಜ್ಜಃ ವ ಶರ್ಹು ಅಕೀದತಿ ಅಹ್ಲಿಸ್ಸುನ್ನಃ” ಎಂದು ಕರೆಯಲಾಗುವ “ಅಸ್ಸುನ್ನಃ”
  • ಅಬೂ ಅಬ್ದಿಲ್ಲಾಹ್ ಇಬ್ನ್ ಅಬೀ ಝಮನೀನ್‌ರವರ “ಉಸೂಲುಸ್ಸುನ್ನಃ”
  • ಅಲ್-ಆಜುರ್ರಿಯ್ಯ್‌ರವರ “ಅಶ್ಶರೀಅಃ”
  • ಅಬೂ ಬಕ್ರ್ ಅಲ್-ಇಸ್ಮಾಈಲಿಯ್ಯ್‌ರವರ “ಇಅ್‌ತಿಕಾದು ಅಹ್ಲಿಸ್ಸುನ್ನಃ”
  • ಅಲ್-ಬರ್‌ಬಹಾರಿಯ್ಯ್‌ರವರ “ಶರ್ಹುಸ್ಸುನ್ನಃ”
  • ಇಬ್ನ್ ಮಿನ್‌ದಹ್‌ರವರ “ಅಲ್-ಈಮಾನ್”
  • ಅಲ್-ಅದನಿಯ್ಯ್‌ರವರ “ಅಲ್-ಈಮಾನ್”
  • ಮುಹಮ್ಮದ್ ಬಿನ್ ಅಬೀ ಶೈಬಃರವರ “ಅಲ್-ಅರ್ಶ್”
  • ಇಬ್ನ್ ವಹ್‌ಬ್‌ರವರ “ಅಲ್-ಕದರ್”
  • ಅಬೂ ದಾವುದ್‍ರವರ “ಅಲ್-ಕದರ್”
  • ಅದ್ದಾರಕುತ್‍ನಿಯ್ಯ್‌ರವರ “ಅರ್ರುಅ್‌ಯಃ” “ಅಸ್ಸಿಫಾತ್” ಮತ್ತು “ಅನ್ನುಝೂಲ್”
  • ಅಬೂ ನಸ್ರ್ ಅಸ್ಸಿಜ್‌ಝಿಯ್ಯ್‌ರವರ “ರಿಸಾಲತುಸ್ಸಿಜ್‌ಝಿಯ್ಯ್ ಇಲಾ ಅಹ್ಲಿ ಝಬೀದ್”
  • ಅಲ್-ಖತೀಬ್ ಅಲ್-ಬಗ್‌ದಾದಿಯ್ಯ್‌ರವರ “ಜವಾಬು ಅಹ್ಲಿ ದಿಮಶ್ಕ ಫಿಸ್ಸಿಫಾತ್”
  • (ಅಲ್-ಅಸ್ಸಾಲ್ ಎಂದು ಅರಿಯಲ್ಪಡುವ) ಅಬೂ ಅಹ್ಮದ್ ಅಲ್-ಅಸ್‌ಬಹಾನಿಯ್ಯ್‌ರವರ “ಅಸ್ಸುನ್ನಃ”
  • ಯಅ್‌ಕೂಬ್ ಅಲ್-ಫಸವಿಯ್ಯ್‌ರವರ “ಅಸ್ಸುನ್ನಃ”
  • ಅಲ್-ಕಸ್ಸಾಬ್‌ರವರ “ಅಸ್ಸುನ್ನಃ”
  • ಅಬೂ ಬಕ್ರ್ ಅಬ್ದುಲ್ಲಾಹ್ ಬಿನ್ ಅಝ್ಝುಬೈರ್ ಅಲ್-ಹುಮೈದಿಯ್ಯ್‌ರವರ “ಉಸೂಲುಸ್ಸುನ್ನಃ”
  • ಹಂಬಲ್ ಬಿನ್ ಇಸ್‌ಹಾಕ್‌ರವರ “ಅಸ್ಸುನ್ನಃ”
  • ಅಬೂ ಅಮ್ರ್ ಅತ್ತಲಮನ್‌ಕಿಯ್ಯ್‌ರವರ “ಅಲ್-ಉಸೂಲ್”

 

ಹಾಗೂ ಇನ್ನಿತರ ಇನ್ನೂ ಅನೇಕಾನೇಕ ಗ್ರಂಥಗಳಿವೆ. ಅದರಂತೆಯೇ, ಅವರ ನಂತರ ಅಹ್ಲುಸ್ಸುನ್ನಃದಿಂದ ಬಂದ ವಿದ್ವಾಂಸರ ಗ್ರಂಥಗಳಿವೆ (ಉದಾಹರಣೆಗೆ)- ಇಬ್ನ್ ಅಬ್ದಿಲ್ ಬರ್ರ್, ಅಬ್ದುಲ್ ಘನಿಯ್ಯ್ ಅಲ್-ಮುಕ್‌ದಿಸಿಯ್ಯ್, ಇಬ್ನ್ ಕುದಾಮಃ ಅಲ್-ಮುಕ್‌ದಿಸಿಯ್ಯ್, ಇಬ್ನ್ ತಯ್‌ಮಿಯ್ಯಃ, ಇಬ್ನುಲ್ ಕಯ್ಯಿಮ್, ಇಮಾಮ್ ಅಝ್ಝಹಬಿಯ್ಯ್, ಇಬ್ನ್ ಕಸೀರ್, ಮುಹಮ್ಮದ್ ಬಿನ್ ಅಬ್ದುಲ್ ವಹ್ಹಾಬ್‌ರವರ (ಅರ್ಥಾತ್ ಮುಂತಾದವರು ರಚಿಸಿದ) ಗ್ರಂಥಗಳು. ಈ ಗ್ರಂಥಗಳಲ್ಲಿ ಸರಿಯಾದ ಅಕೀದಃದ ವಿವರಣೆ, ಅದಕ್ಕಿರುವ (ಪುರಾವೆಗಳಿಂದ ಕೂಡಿರುವ) ಸಮರ್ಥನೆ ಮತ್ತು ಅಹ್ಲುಲ್‍ಅಹ್‍ವಾದವರ (ದೇಹೇಚ್ಚೆಯವಾಹಕರಾದ ಪಥಭ್ರಷ್ಟರ) ತಪ್ಪುಕಲ್ಪನೆಗಳ ನಿವಾರಣೆ ಇವುಗಳೆಲ್ಲವೂ ಒಳಗೊಂಡಿದೆ.

ಈ ಎಲ್ಲಾ ಗಣ್ಯವಿಶಿಷ್ಟರ ವಿಶ್ವಾಸವನ್ನು ಸಂಕ್ಷಿಪ್ತವಾಗಿ ನಾವು (ಮುಂದೆ) ಪ್ರಸ್ತಾಪಿಸುವೆವು. ನನ್ನ ಸಫಲತೆಯು ಅಲ್ಲಾಹುವಿನಿಂದಲ್ಲದೆ ದೊರೆಯಲಾರದು, ನಾನು ಭರವಸೆಯಿಡುವುದು ಅವನಲ್ಲಾಗಿದೆ, ಹಾಗೂ ಅವನ ಆಜ್ಞೆಗಳನ್ನು ಪಾಲಿಸಿಕೊಂಡು ಅವನ ಸಾಮಿಪ್ಯದೆಡೆಗೆ ನಾನು ಮರಳುವೆನು.

– ಅಶ್ಶೈಖ್ ಅಬ್ದುಸ್ಸಲಾಮ್ ಬಿನ್ ಬರ್ಜಸ್ (V), ಶ್ರೇಷ್ಠ ವಿದ್ವಾಂಸರು, ಸೌದಿ ಅರೇಬಿಯಾ.

ಮೂಲ : ಅಲ್-ಮುಅ್‌ತಕದ್ ಅಸ್ಸಹೀಹ್ ಗ್ರಂಥದ ಮುನ್ನುಡಿ
ಭಾವಾನುವಾದ : ಅಬೂ ಹಮ್ಮಾದ್ ಸಲಾಹುದ್ದೀನ್

ಈ ಲೇಖನದ PDF ಪ್ರತಿಯನ್ನು ಇಲ್ಲಿಂದ ಡೌನ್‍ಲೋಡ್ ಮಾಡಿಕೊಳ್ಳಿ