ರಮದಾನ್ ತಿಂಗಳು ಕೊನೆಗೊಳ್ಳುವುದರಿಂದ ಅಲ್ಲಾಹುವಿನ ಹಕ್ಕು ಕೊನೆಗೊಳ್ಳುವುದಿಲ್ಲ! -ಅಶ್ಶೈಖ್ ಸಾಲಿಹ್ ಅಲ್-ಫೌಝಾನ್

w

Play Video
Play Video

ಸೌದಿ ಅರೇಬಿಯಾದ ಹಿರಿಯ ವಿದ್ವಾಂಸರಾದ ಅಶ್ಶೈಖ್ ಸಾಲಿಹ್ ಅಲ್-ಫೌಝಾನ್ (حَفِظَهُ اللَّهُ) ರವರು ಹೇಳಿದರು :

ರಮದಾನ್ ತಿಂಗಳು ಕೊನೆಗೊಂಡರೂ, (ನಮ್ಮ) ಮರಣದಿಂದಲ್ಲದೆ ಖಂಡಿತವಾಗಿಯೂ ಅಲ್ಲಾಹುವಿನ ಹಕ್ಕು ಕೊನೆಗೊಳ್ಳುವುದಿಲ್ಲ.

﴿ وَاعْبُدْ رَبَّكَ حَتَّىٰ يَأْتِيَكَ الْيَقِينُ

“ಖಚಿತವಾದ ಆ ಘಳಿಗೆ (ಮರಣ) ನಿಮ್ಮೆಡೆಗೆ ಬರುವ ತನಕವೂ ನೀವು ನಿಮ್ಮ ರಬ್ಬ್ಅನ್ನು ಆರಾಧಿಸುತ್ತಿರಿ.” (ಸೂರಃ ಅಲ್-ಹಿಜ್ರ್ : 99)

 

ಅಲ್ಲಾಹು – ಅವನು ರಮದಾನ್ ತಿಂಗಳ ರಬ್ಬ್ಆಗಿರುವನು ಮತ್ತು ಅವನು ಶವ್ವಾಲ್ ತಿಂಗಳ ರಬ್ಬ್ಆಗಿರುವನು ಹಾಗೂ ಅವನು ವರ್ಷದ ಎಲ್ಲಾ ತಿಂಗಳುಗಳ ರಬ್ಬ್ಆಗಿರುವನು. ಆದ್ದರಿಂದ ನೀವು ಎಲ್ಲಾ ತಿಂಗಳಿನಲ್ಲಿಯೂ ಅಲ್ಲಾಹುವನ್ನು ಭಯಪಡಿರಿ. ನಿಮ್ಮ ದೀನನ್ನು ನೀವು ರಕ್ಷಿಸಿಕೊಳ್ಳಿರಿ, ನಿಮ್ಮ ಜೀವನದುದ್ದಕ್ಕೂ ನಿಮ್ಮ ದೀನನ್ನು ರಕ್ಷಿಸಿಕೊಳ್ಳಿರಿ. ಯಾಕೆಂದರೆ ಖಂಡಿತವಾಗಿಯೂ ಅದು ಅಲ್ಲಾಹುವಿನ ಬಳಿ ನಿಮ್ಮ ಸಂಪತ್ತಿನ ಬಂಡವಾಳವಾಗಿದೆ. ಅದು ನರಕಾಗ್ನಿಯಿಂದ ನಿಮಗಿರುವ ಮೋಕ್ಷವಾಗಿದೆ. ಆದ್ದರಿಂದ ನೀವು ನಿಮ್ಮ ದೀನನ್ನು ರಕ್ಷಿಸಿಕೊಳ್ಳಿರಿ ಮತ್ತು ಎಲ್ಲಾ ತಿಂಗಳಿನಲ್ಲಿಯೂ ಹಾಗೂ ಎಲ್ಲಾ ಸಮಯ ಸಂದರ್ಭಗಳಲ್ಲಿಯೂ ಅದನ್ನು ಬಿಗಿ ಹಿಡಿದುಕೊಳ್ಳಿರಿ.

ಖಂಡಿತವಾಗಿಯೂ ರಮದಾನ್ ತಿಂಗಳ ನಂತರ ಹಿಂಬಾಲಿಸುವುದು ಕೃತಜ್ಞತೆ ಸಲ್ಲಿಸುವ ಮತ್ತು ಪಾಪ ಮುಕ್ತಿ ಬೇಡುವುದರ ಮೂಲಕವಾಗಿದೆ ಹಾಗೂ ಅದರ ದಿನಗಳಲ್ಲಿ ಉಪವಾಸವನ್ನು ಕೈಗೊಳ್ಳಲು ಹಾಗೂ ರಾತ್ರಿಗಳಲ್ಲಿ ಆರಾಧನೆಗೆ ನಿಂತುಕೊಳ್ಳಲು (ಹೀಗೆ) ನಮ್ಮನ್ನು ಸಾಧ್ಯಗೊಳಿಸಿದ ಅಲ್ಲಾಹುವಿನ ಔದಾರ್ಯದಿಂದ ಸಂತೋಷಗೊಳ್ಳುವ ಮೂಲಕ ಅದನ್ನು (ರಮದಾನ್ ತಿಂಗಳನ್ನು) ಹಿಂಬಾಲಿಸುವುದಾಗಿದೆ. ಆದ್ದರಿಂದ ಈ ಒಂದು ಅನುಗ್ರಹದಿಂದಾಗಿ ನಾವು ಸಂತೋಷ ಪಡುತ್ತೇವೆಯೇ ಹೊರತು (ರಮದಾನ್) ತಿಂಗಳು ಕೊನೆಗೊಂಡಿರುವುದಕ್ಕಲ್ಲ. ಅಲ್ಲಾಹುವಿನ ಇಬಾದತ್ತಿನಲ್ಲಿ ನಾವು ಅದನ್ನು (ಆ ತಿಂಗಳನ್ನು) ಪೂರ್ತಿಗೊಳಿಸಿದ್ದೇವೆ ಎಂಬುದಕ್ಕೆ ನಾವು ಸಂತೋಷ ಪಡುತ್ತೇವೆ. ಆದ್ದರಿಂದ ನಾವು ಸಂತೋಷ ಪಡುತ್ತೇವೆ.

﴿ قُلْ بِفَضْلِ اللَّـهِ وَبِرَحْمَتِهِ فَبِذَٰلِكَ فَلْيَفْرَحُوا هُوَ خَيْرٌ مِّمَّا يَجْمَعُونَ

“ಹೇಳಿರಿ : ಇದು ಅಲ್ಲಾಹುವಿನ ಔದಾರ್ಯ ಮತ್ತು ಕಾರುಣ್ಯದಿಂದಾಗಿದೆ. ಅದಕ್ಕಾಗಿ ಅವರು ಸಂಭ್ರಮಿಸಲಿ. ಅವರು ಒಟ್ಟುಗೂಡಿಸುತ್ತಿರುವ ಎಲ್ಲವುಗಳಿಗಿಂತ ಇದು ಅತ್ಯುತ್ತಮವಾಗಿದೆ.” (ಸೂರಃ ಯೂನುಸ್ : 58)

 

ಅತಿಯಾದ ಆಟ ಮತ್ತು ಮನರಂಜನೆ ಹಾಗೂ ಮಿತಿಮೀರಿದ ಅಲಕ್ಷತೆ ಮತ್ತು ಅಲ್ಲಾಹುವಿನ ಆಜ್ಞೆಗಳ ಅನುಸರಣೆಯಿಂದ ವಿಮುಖರಾಗುವ ಬಗ್ಗೆ ಅತೀವ ಎಚ್ಚರವಹಿಸಿರಿ. ಯಾಕೆಂದರೆ ನಿಮ್ಮ ಸತ್ಕಾರ್ಯಗಳನ್ನು ಅಸಿಂಧುಗೊಳಿಸುವ ಹಾಗೂ ಒಳಿತುಗಳ ಪೈಕಿ ನೀವು ನಿರ್ವಹಿಸಿರುವುದೆಲ್ಲವನ್ನೂ ಅಳಿಸಿ ಹಾಕುವ ಸಲುವಾಗಿ ಶೈತಾನನು ತೀವ್ರವಾಗಿ ಬಯಸುತ್ತಾನೆ. ಆದ್ದರಿಂದ ಕೆಲವೊಂದು ಜನರಿಗೆ ಅವನು ಮರುಳು ಮಾಡುತ್ತಾನೆ, ಯಾವಾಗ ರಮದಾನ್ ತಿಂಗಳು ಕೊನೆಗೊಳ್ಳುವುದೋ ಆಗ ಮನುಷ್ಯನು ಜೈಲಿನಿಂದ ಬಿಡುಗಡೆ ಹೊಂದಿದಂತೆ ಸ್ವತಂತ್ರನಾಗುತ್ತಾನೆ. ಹಾಗೆಯೆ ವಿನೋದ, ಮನೋರಂಜನೆ, ಅಲಕ್ಷತೆ ಹಾಗೂ ನಮಾಝನ್ನು ಕಡೆಗಣಿಸಿ ದುಷ್ಕರ್ಮಗಳ ಪೈಕಿ ಇನ್ನಿತರ ಕಾರ್ಯಗಳಲ್ಲಿ ಅವನು ಮುಂದೆ ಸಾಗುತ್ತಾನೆ.

ಆದ್ದರಿಂದ ನೀವು ಸುತ್ತಿದ ನೂಲನ್ನು ನೀವೇ ಬಿಚ್ಚಿ ಹಾಕದಿರಿ, ಹಾಗಾದರೆ ನೂಲನ್ನು ಗಟ್ಟಿಯಾಗಿ ಸುತ್ತಿದ ಬಳಿಕ ತಾನೇ ಅದನ್ನು ಎಳೆಎಳೆಯಾಗಿ ಬಿಚ್ಚಿ ಹಾಕುವ ಒಬ್ಬಳಂತೆ ನೀವಾಗುವಿರಿ. ಆದ್ದರಿಂದ ನೀವು ಅಲ್ಲಾಹುವನ್ನು ಭಯಪಡಿರಿ. ಸತ್ಕಾರ್ಯಗಳ ಪೈಕಿ ನೀವು ಯಾವುದನ್ನು ಮಾಡಿ ನಿರ್ವಹಿಸಿದ್ದೀರೋ ಅದನ್ನು ನೀವು ಸಂರಕ್ಷಿಸಿಕೊಳ್ಳಿರಿ ಹಾಗೂ ನೀವೆಲ್ಲರೂ ನಿಮ್ಮ ನ್ಯೂನತೆ ಮತ್ತು ಲೋಪದೋಷಗಳಿಂದ ಅಲ್ಲಾಹುವಿನೆಡೆಗೆ ಪಶ್ಚಾತ್ತಾಪಪಟ್ಟು ಮರಳಿರಿ. ಖಂಡಿತವಾಗಿಯೂ ಅಲ್ಲಾಹು ಪಶ್ಚಾತ್ತಾಪ ಮಾಡುವವನ ಪಶ್ಚಾತ್ತಾಪವನ್ನು ಸ್ವೀಕರಿಸುತ್ತಾನೆ.

ಅನುವಾದ : ಅಬೂ ಹಮ್ಮಾದ್