ಅಲ್ಲಾಹುವಿನ ಹೊರತು ಇತರರಿಗೆ ಬಲಿಯರ್ಪಿಸುವುದು ಶಿರ್ಕ್ಆಗಿದೆ : ಅಲ್-ಇಮಾಮ್ ಇಬ್ನ್ ಬಾಝ್

w

ಸೌದಿ ಅರೇಬಿಯಾದ ಹಿರಿಯ ವಿದ್ವಾಂಸರಾದ ಅಲ್-ಇಮಾಮ್ ಇಬ್ನ್ ಬಾಝ್ (V) ರವರೊಂದಿಗೆ ಪ್ರಶ್ನಿಸಲಾಯಿತು :

ಪ್ರಶ್ನೆ : ಸಜ್ಜನರಾದ ಔಲಿಯಾಗಳ ಸಮಾಧಿಗಳ ಬಳಿ (ದರ್ಗಾಗಳ ಬಳಿ) ಅವರ ಸಾಮಿಪ್ಯವನ್ನು ಅರಸಿಕೊಂಡು ಅವರಿಗೆ (ಪ್ರಾಣಿಗಳನ್ನು) ಬಲಿಯರ್ಪಿಸುವುದು ನನ್ನ ಕುಟುಂಬಿಕರಲ್ಲಿ ಈಗಲೂ ಚಾಲ್ತಿಯಲ್ಲಿದೆ. ಈ ರೀತಿ ಮಾಡುವುದನ್ನು ನಾನವರಿಗೆ ನಿಷೇಧಿಸಿರುವೆನು, ಆದರೆ ಹಠಮಾರಿತನದ ಹೊರತು ಅವರು ಇನ್ನೇನೂ ಹೆಚ್ಚಿಸಲಿಲ್ಲ. ಅದು ಶಿರ್ಕ್ ಆಗಿದೆಯೆಂದು (ಅರ್ಥಾತ್ ಅಲ್ಲಾಹುವಿಗೆ ಇತರರನ್ನು ಸಹಭಾಗಿಗಳಾಗಿ ಮಾಡುವುದಾಗಿದೆ ಎಂದು) ನಾನು ಅವರಿಗೆ ಹೇಳಿರುವೆನು, ಆದರೆ ಅದಕ್ಕವರು : ನಾವು ಆರಾಧಿಸುವುದು ಅಲ್ಲಾಹುವನ್ನು ಮಾತ್ರವಾಗಿದೆ, ಆದರೆ ಹಾಗೊಂದುವೇಳೆ ನಾವು ಅವನ ಔಲಿಯಾಗಳನ್ನು ಸಂದರ್ಶಿಸಿ, ನಮ್ಮ ಪ್ರಾರ್ಥಿನೆಯಲ್ಲಿ ಅಲ್ಲಾಹುವಿನೊಂದಿಗೆ –ಇಂತಿಂತ ನಿನ್ನ ಸಜ್ಜನ ವಲಿಯ್ಯ್‌ನ ಹಕ್ಕುಗಳ ಮೂಲಕ ನಮ್ಮನ್ನು ನೀನು ಗುಣಪಡಿಸು ಅಥವಾ ಸಂಕಷ್ಟವನ್ನು ನಮ್ಮಿಂದ ದೂರವಾಗಿಸು- ಎಂದು ಬೇಡಿಕೊಂಡರೆ (ಅದರಿಂದ) ನಮ್ಮ ಮೇಲೆ ಯಾವುದೇ ತಪ್ಪಿಲ್ಲ ಎಂದು ಹೇಳಿದರು.

ನಾನು ಅವರಿಗೆ ಹೇಳಿದೆನು : ನಮ್ಮ ದೀನ್‌ನಲ್ಲಿ ಮಧ್ಯಸ್ಥಿಕೆ ಎಂಬುದಿಲ್ಲ. ಆದರೆ ಅವರು ನನ್ನೊಂದಿಗೆ ಅವರನ್ನು ತಮ್ಮ ಪಾಡಿಗೆ ಬಿಟ್ಟುಬಿಡುವಂತೆ ಹೇಳಿದರು. ಇವರನ್ನು ಸರಿಪಡಿಸಲು ಉತ್ತಮವಾದ ಪರಿಹಾರ ಏನೆಂದು ತಾವು ಕಾಣುವಿರಿ? ಈ ಬಿದ್ಅತ್‌ನ ವಿರುದ್ಧ ನಾನು ಹೇಗೆ ಹೋರಾಡಬಹುದು? ಧನ್ಯವಾದಗಳು.

ಉತ್ತರ : ಕುರ್‌ಆನ್ ಮತ್ತು ಸುನ್ನತ್‌ನ ಪುರಾವೆಗಳ ಮೂಲಕ ತಿಳಿದಿರುವ ವಿಚಾರವೇನೆಂದರೆ ಅಲ್ಲಾಹುವಿನ ಹೊರತು ಇತರರಿಗೆ -ಅದು ಔಲಿಯಾಗಳಾಗಲೀ, ಜಿನ್ನ್ಆಗಲೀ, ವಿಗ್ರಹಗಳಾಗಲೀ ಅಥವಾ ಇನ್ನಿತರ ಯಾರೇ ಆಗಲೀ- ಅವರಿಗೆ ಬಲಿಯರ್ಪಿಸುವ ಮೂಲಕ (ಅವರ) ಸಾಮೀಪ್ಯತೆಯನ್ನು ಅರಸುವುದು ಶಿರ್ಕ್ಆಗಿದೆ ಮತ್ತು ಜಾಹಿಲಿಯ್ಯಃದ ಕಾಲಘಟ್ಟದಲ್ಲಿ (ಅರ್ಥಾತ್ ಇಸ್ಲಾಮ್ ಬರುವುದಕ್ಕಿಂತಲೂ ಮುಂಚಿತವಾಗಿದ್ದ ಕಾಲಘಟ್ಟದಲ್ಲಿ) (ಅಲ್ಲಾಹುವಿನ ಹೊರತು ಇತರರಿಗೆ ಆರಾಧನೆಯನ್ನು ಅರ್ಪಿಸುತ್ತಿದ್ದ) ಮುಶ್ರಿಕ್‌ಗಳಿಂದ ನಿರ್ವಹಿಸಲ್ಪಡುತ್ತಿದ್ದ ಆಚಾರವಾಗಿದೆ. ಅಲ್ಲಾಹು (E) ಹೇಳುತ್ತಾನೆ :

﴿قُلْ إِنَّ صَلَاتِي وَنُسُكِي وَمَحْيَايَ وَمَمَاتِي لِلَّـهِ رَبِّ الْعَالَمِينَ ١٦٢ لَا شَرِيكَ لَهُ ۖ وَبِذَٰلِكَ أُمِرْتُ وَأَنَا أَوَّلُ الْمُسْلِمِينَ ١٦٣ 

“ಹೇಳಿರಿ (ಓ ಪ್ರವಾದಿಯವರೇ!), ಖಂಡಿತವಾಗಿಯೂ ನನ್ನ ಪ್ರಾರ್ಥನೆ (ನಮಾಝ್), ನನ್ನ ಬಲಿಕರ್ಮ, ನನ್ನ ಜೀವನ ಮತ್ತು ಮರಣ (ಎಲ್ಲವೂ) ಸಕಲ ಲೋಕಗಳ ರಬ್ಬ್ಆದ ಅಲ್ಲಾಹುವಿಗಿರುವುದಾಗಿವೆ. ಅವನಿಗೆ ಯಾವುದೇ ಸಹಭಾಗಿಗಳಿಲ್ಲ. ಇದನ್ನೇ ನನಗೆ ಆಜ್ಞಾಪಿಸಲಾಗಿದೆ. ಮತ್ತು ನಾನು ಮುಸ್ಲಿಮರ ಪೈಕಿ (ಅರ್ಥಾತ್ ಅಲ್ಲಾಹುವಿಗೆ ಇಸ್ಲಾಮ್ ಮತ್ತು ತೌಹೀದ್‌ನೊಂದಿಗೆ ವಿಧೇಯರಾಗುವವರ ಪೈಕಿ) ಮೊದಲಿಗನಾಗಿರುವೆನು.” (ಕುರ್‌ಆನ್ 6 : 162-163)

 

ಬಲಿಕರ್ಮವೆಂಬುದು ಪ್ರಾಣಿಗಳನ್ನು ಬಲಿಯರ್ಪಿಸುವುದನ್ನು ಸೂಚಿಸುತ್ತದೆ. ಅಲ್ಲಾಹುವಿನ ಹೊರತು ಇತರರಿಗೆ ನಮಾಝ್ ನಿರ್ವಹಿಸುವುದು ಹೇಗೆ ಅಲ್ಲಾಹುವಿನೊಂದಿಗೆ ಮಾಡುವ ಶಿರ್ಕ್ ಆಗುವುದೋ ಅದೇ ರೀತಿ ಅಲ್ಲಾಹುವಿನ ಹೊರತು ಇತರರಿಗೆ ಬಲಿಯರ್ಪಿಸುವುದು (ಕೂಡ) ಶಿರ್ಕ್ ಆಗಿದೆ ಎಂದು ಅಲ್ಲಾಹು ಈ (ಮೇಲಿನ) ಆಯತ್ತಿನಲ್ಲಿ ಸ್ಪಷ್ಟಪಡಿಸಿದ್ದಾನೆ. ಅಲ್ಲಾಹು ಹೇಳುತ್ತಾನೆ :

﴿إِنَّا أَعْطَيْنَاكَ الْكَوْثَرَ ١  فَصَلِّ لِرَبِّكَ وَانْحَرْ ٢

“ಖಂಡಿತವಾಗಿಯೂ (ಓ ಪ್ರವಾದಿಯವರೇ), ನಾವು ನಿಮಗೆ (ಸ್ವರ್ಗದಲ್ಲಿರುವ ಒಂದು ನದಿಯಾದ) ಅಲ್-ಕೌಸರ್‌‍ಅನ್ನು ದಯಪಾಲಿಸಿರುವೆವು. ಹಾಗಾಗಿ ನಿಮ್ಮ ರಬ್ಬ್‌ಗೆ ನೀವು ನಮಾಝ್ ನಿರ್ವಹಿಸಿರಿ ಮತ್ತು (ಅವನಿಗೆ ಮಾತ್ರವೇ) ಬಲಿಕರ್ಮವನ್ನು ಅರ್ಪಿಸಿರಿ.” (ಸೂರಃ ಅಲ್-ಕೌಸರ್, 108 : 1-2)

 

ಅಲ್ಲಾಹುವಿನ ಹೊರತು ಇತರರಿಗೆ ಸುಜೂದ್ (ಸಾಷ್ಟಾಂಗ) ಹಾಗೂ ಬಲಿಯರ್ಪಿಸುವ ಶಿರ್ಕ್‌ನ ಜನರಿಗಿಂತ ವಿಭಿನ್ನವಾಗಿ ಅಲ್ಲಾಹು ಈ ಅಧ್ಯಾಯದಲ್ಲಿ ತನ್ನ ಪ್ರವಾದಿಯೊಂದಿಗೆ ತನಗಾಗಿ ಮಾತ್ರವೇ ನಮಾಝ್ ನಿರ್ವಹಿಸುವಂತೆ ಮತ್ತು ಬಲಿಕರ್ಮ ಅರ್ಪಿಸುವಂತೆ ಆಜ್ಞಾಪಿಸಿರುವನು. ಅವನು (E) ಹೇಳುತ್ತಾನೆ :

﴿وَقَضَىٰ رَبُّكَ أَلَّا تَعْبُدُوا إِلَّا إِيَّاهُ ٣٦

“ನಿಮ್ಮ ರಬ್ಬ್ ನಿಮಗೆ ಅಜ್ಞಾಪಿಸಿದ್ದಾನೆ (ಅದೇನೆಂದರೆ), ನೀವು ಅವನ ಹೊರತು ಇತರ ಯಾರನ್ನೂ ಆರಾಧಿಸಬೇಡಿ.” (ಸೂರಃ ಅಲ್-ಇಸ್ರಾಅ್, 17 : 23)

 

ಮತ್ತು (ಅಲ್ಲಾಹು ಹೇಳುತ್ತಾನೆ) :

﴿وَمَا أُمِرُوا إِلَّا لِيَعْبُدُوا اللَّـهَ مُخْلِصِينَ لَهُ الدِّينَ حُنَفَاءَ ٥

“ಶಿರ್ಕ್‌‍ನಿಂದ ಮುಕ್ತವಾಗಿ ನಿಷ್ಕಲ್ಮಷದೊಂದಿಗೆ ಅಲ್ಲಾಹುವನ್ನು ಮಾತ್ರ ಆರಾಧಿಸಿರಿ -ಎಂಬುದರ ಹೊರತು (ಬೇರಾವುದನ್ನೂ ಅವರ ಗ್ರಂಥಗಳಲ್ಲಿ) ಅವರಿಗೆ ಆಜ್ಞಾಪಿಸಲಾಗಿಲ್ಲ.” (ಸೂರಃ ಅಲ್-ಬಯ್ಯಿನಃ, 98 : 5)

 

ಈ ಅರ್ಥವನ್ನು ಸೂಚಿಸುವ ಅನೇಕ ಆಯತ್‌‍ಗಳಿವೆ.

ಪ್ರಾಣಿಗಳನ್ನು ಬಲಿಯರ್ಪಿಸುವುದು ಇಬಾದತ್‌ನ (ಅರ್ಥಾತ್ ಆರಾಧನೆಯ) ಪೈಕಿಯಿರುವ ಕಾರ್ಯವಾಗಿದೆ, ಹಾಗಾಗಿ ಅದನ್ನು ಅಲ್ಲಾಹುವಿಗೆ ಮಾತ್ರವೇ ಅರ್ಪಿಸಬೇಕಾಗಿದೆ. ಸಹೀಹ್ ಮುಸ್ಲಿಮ್ ಗ್ರಂಥದಲ್ಲಿ ಇದನ್ನು ಉಲ್ಲೇಖಿಸಲಾಗಿದೆ, ಸತ್ಯವಿಶ್ವಾಸಿಗಳ ನೇತಾರರಾದ ಅಲಿಯ್ಯ್ ಬಿನ್ ಅಬೀ ತಾಲಿಬ್ (I) ರವರಿಂದ ವರದಿ, ಅಲ್ಲಾಹುವಿನ ರಸೂಲ್ (H) ರವರು ಹೇಳಿದರು :

« لَعَنَ اللَّهُ مَنْ ذَبَحَ لِغَيْرِ اللَّهِ »

“ಯಾರು ಅಲ್ಲಾಹುವಿನ ಹೊರತು ಇತರರಿಗೆ ಬಲಿಯರ್ಪಿಸುವರೋ ಅವರನ್ನು ಅಲ್ಲಾಹು ಶಪಿಸಿರುವನು.” (ಸಹೀಹ್ ಮುಸ್ಲಿಮ್ : 1978)

 

ಅದಾಗ್ಯೂ, ಒಂದುವೇಳೆ ಓರ್ವ ವ್ಯಕ್ತಿಯು ಅಲ್ಲಾಹುವಿನ ಔಲಿಯಾಗಳ ಹಕ್ಕುಗಳ ಮೂಲಕ ಅಥವಾ ಅವರ ಶ್ರೇಷ್ಠತೆಯ ಮೂಲಕ, ಅಥವಾ ಪ್ರವಾದಿ (H) ರವರ ಹಕ್ಕುಗಳ ಮೂಲಕ ಅಥವಾ ಅವರ ಶ್ರೇಷ್ಠತೆಯ ಮೂಲಕ ಅಲ್ಲಾಹುವಿನೊಂದಿಗೆ ಪ್ರಾರ್ಥಿಸಿದರೆ, ಬಹುತೇಕ ಉಲಮಾಗಳ ಪ್ರಕಾರ ಇದನ್ನು ಶಿರ್ಕ್ಆಗಿ ಪರಿಗಣಿಸಲಾಗುವುದಿಲ್ಲ. ಬದಲಾಗಿ ಅದೊಂದು ಬಿದ್ಅತ್ಆಗಿದೆ ಮತ್ತು ಶಿರ್ಕ್‌‍ಗೆ ಎಡೆಮಾಡಿಕೊಡುವ ಮಾರ್ಗಗಳ ಪೈಕಿ ಒಂದಾಗಿದೆ.

ದುಆ (ಅರ್ಥಾತ್ ಪ್ರಾರ್ಥನೆಯು) ಇಬಾದತ್‌ನ ಒಂದು ರೂಪವಾಗಿದೆ. ಹಾಗಾಗಿ ಅದು ತೌಕೀಫಿಯ್ಯದ (ಅರ್ಥಾತ್ ಧಾರ್ಮಿಕ ಪುರಾವೆಗಳಿಗೆ ಬದ್ಧವಾದ ಮತ್ತು ವೈಯಕ್ತಿಕ ಅಭಿಪ್ರಾಯಗಳಿಗೆ ಅವಕಾಶವಿಲ್ಲದ) ಕಾರ್ಯವಾಗಿದೆ. ತವಸ್ಸುಲ್ಅನ್ನು (ಅರ್ಥಾತ್ ಯಾವುದೇ ಜನರ ಹಕ್ಕುಗಳ ಮೂಲಕ ಅಥವಾ ಶ್ರೇಷ್ಠತೆಯಲ್ಲಿ ಅಲ್ಲಾಹುವಿನೊಂದಿಗೆ ಪ್ರಾರ್ಥಿಸುವುದನ್ನು) ಸಮ್ಮತಾರ್ಹಗೊಳಿಸುವ ಯಾವುದೇ ಪುರಾವೆಯೂ ಪ್ರವಾದಿ (H) ರವರಿಂದ ವರದಿಯಾಗಿಲ್ಲ. ಹಾಗಾಗಿ, ಅಲ್ಲಾಹು ನಿರ್ಣಯಗೊಳಿಸದ (ಈ ರೀತಿಯ) ಒಂದು ತವಸುಲ್ಅನ್ನು ಹೊಸದಾಗಿ ಸೇರಿಸುವುದು ಮುಸ್ಲಿಮರಿಗೆ ಸಮ್ಮತಾರ್ಹವಲ್ಲ, -ಅಲ್ಲಾಹುವಿನ ಈ ಹೇಳಿಕೆಯಂತೆ:

﴿أَمْ لَهُمْ شُرَكَاءُ شَرَعُوا لَهُم مِّنَ الدِّينِ مَا لَمْ يَأْذَن بِهِ اللَّـهُ ١٢

“ಅಲ್ಲಾಹು ಅನುಮತಿಸದ ವಿಷಯವನ್ನು ಅವರಿಗೆ ಧರ್ಮವಾಗಿ ಮಾಡಿಕೊಟ್ಟ ಯಾರಾದರೂ ಸಹಭಾಗಿಗಳು ಅವರಿಗಿರುವರೇ?(ಸೂರಃ ಅಶ್ಶೂರಾ, 42 : 21)

 

ಪ್ರವಾದಿ (H) ರವರು ಹೇಳಿದರು :

« مَنْ أَحْدَثَ فِي أَمْرِنَا هَذَا مَا لَيْسَ مِنْهُ فَهُوَ رَدٌّ »

“ನಮ್ಮ (ದೀನ್‌ನ) ಕಾರ್ಯಕ್ಕೆ ಅದರಲ್ಲಿಲ್ಲದ ಹೊಸ ಆಚಾರವನ್ನು ಯಾರಾದರೂ ಹೊಸದಾಗಿ ಸೇರಿಸಿದರೆ ಅದು ತಿರಸ್ಕೃತವಾಗಿದೆ.” (ಸಹೀಹ್ ಅಲ್-ಬುಖಾರಿ : 2697, ಸಹೀಹ್ ಮುಸ್ಲಿಮ್ : 1718)

 

ಸಹೀಹ್ ಮುಸ್ಲಿಮ್‌ನಲ್ಲಿರುವ ಇನ್ನೊಂದು ವರದಿ (ಅದೇನೆಂದರೆ), :

« مَنْ عَمِلَ عَمَلاً لَيْسَ عَلَيهِ أَمْرُنا فَهُوَ رَدٌّ »

“ನಮ್ಮ ಆಜ್ಞೆಯಿಲ್ಲದ (ಅರ್ಥಾತ್ ಇಸ್ಲಾಮ್‌‍ನಲ್ಲಿಲ್ಲದ ಯಾವುದೇ ಒಂದು) ಆಚಾರವನ್ನು ಯಾರಾದರೂ ಆಚರಿಸಿದರೆ ಅದು ತಿರಸ್ಕೃತವಾಗಿದೆ.” (ಮುಸ್ಲಿಮ್ 5/133)

 

“ಅದು ತಿರಸ್ಕೃತವಾಗಿದೆ” ಎಂಬ ಅವರ ವಚನದ ಅರ್ಥವು ಅದು ಸ್ವೀಕರಿಸಲ್ಪಡದು ಎಂದಾಗಿದೆ. ಯಾವುದನ್ನು ಅಲ್ಲಾಹು ನಿರ್ಣಯಿಸಿರುವನೋ ಅದಕ್ಕೆ ಮುಸ್ಲಿಮರು ಬದ್ಧರಾಗಿರಬೇಕಾಗಿದೆ ಮತ್ತು ಜನರಿಂದ ಹೊಸದಾಗಿ ಸೇರಿಸಲ್ಪಟ್ಟ ಬಿದ್ಅತ್‌‍ಗಳ ಕುರಿತು ಜಾಗರೂಕರಾಗಿರಬೇಕಾಗಿದೆ. ಇನ್ನು ಅನುಮತಿಸಲ್ಪಟ್ಟ ತವಸ್ಸುಲ್ ಕುರಿತು ಹೇಳುವುದಾದರೆ, ಅದು ಅಲ್ಲಾಹುವಿನ ಅಸ್ಮಾಅ್ ವಸ್ಸಿಫಾತ್‌‍ಗಳ ಮೂಲಕ (ಅತ್ಯುತ್ತಮ ನಾಮ ಹಾಗೂ ಅತ್ಯುನ್ನತವಾದ ಗುಣವಿಶೇಷಣೆಗಳ ಮೂಲಕ), ತೌಹೀದ್, ಸತ್ಕರ್ಮ, ಅಲ್ಲಾಹು ಮತ್ತು ಅವನ ಸಂದೇಶವಾಹಕರ ಮೇಲೆ ಈಮಾನ್, ಅಲ್ಲಾಹು ಮತ್ತು ಅವನ ಸಂದೇಶವಾಹಕರನ್ನು ಪ್ರೀತಿಸುವ ಮೂಲಕ ಮುಂತಾದ ಸತ್ಕರ್ಮಗಳ ಮೂಲಕ ಅಲ್ಲಾಹುವಿನ ಸಾಮಿಪ್ಯವನ್ನು ಅರಸುವುದಾಗಿದೆ. ಅಲ್ಲಾಹು ನಮಗೆ ತೌಫೀಕ್ ನೀಡಲಿ!.

ಮೂಲ : ಮಜ್‌ಮೂಅ್ ಫತಾವಾ ವಮಕಾಲಾತ್ ಅಶ್ಶೈಖ್ ಇಬ್ನ್ ಬಾಝ್ : 4/321
ನೋಡಿರಿ : https://binbaz.org.sa/fatwas/895/الذبح-لغير-الله-شرك
ಅನುವಾದ : ಅಬೂ ಹಮ್ಮಾದ್

ಹೆಚ್ಚಿನ ಓದಿಗಾಗಿ : 

ತವಸ್ಸುಲ್ ಮತ್ತು ಅದರ ವಿಧಗಳು -ಅಶ್ಶೈಖ್ ಸಾಲಿಹ್ ಅಲ್-ಫೌಝಾನ್ (حَفِظَهُ اللَّهُ) ಹಿರಿಯ ವಿದ್ವಾಂಸರು, ಸೌದಿ ಅರೇಬಿಯಾ.

ತೌಹೀದ್‍ನ ವಿಧಗಳಾವುವು? ಹಾಗೂ ಅವುಗಳ ಅರ್ಥವಿವರಣೆಯೇನು? -ಅಶ್ಶೈಖ್ ಸಾಲಿಹ್ ಅಲ್-ಫೌಝಾನ್ (حَفِظَهُ اللَّهُ) ಹಿರಿಯ ವಿದ್ವಾಂಸರು, ಸೌದಿ ಅರೇಬಿಯಾ.

ಪ್ರವಾದಿ ಜನ್ಮದಿನಾಚರಣೆ ಸಮ್ಮತಾರ್ಹವೇ?  -ಅಶ್ಶೈಖ್ ಅಬ್ದುಲ್ ಅಝೀಝ್ ಬಿನ್ ಬಾಝ್ (V) ಹಿರಿಯ ವಿದ್ವಾಂಸರು, ಸೌದಿ ಅರೇಬಿಯಾ.