ಸತ್ಯವಿಶ್ವಾಸಿಗಳನ್ನು ಸರ್ವ ಕೇಡುಗಳಿಂದ ರಕ್ಷಿಸುವ ದುಆಗಳು (ಪ್ರಾರ್ಥನೆಗಳು): ಇತ್ತೀಚಿನ ದಿನಗಳಲ್ಲಿ ಮುಸ್ಲಿಮರ ವಿರುದ್ಧ ನಡೆಯುತ್ತಿರುವ ದ್ವೇಷಪೂರಿತ ಅಪರಾಧಗಳು (ಕೊಲೆ, ಹಲ್ಲೆ, ಗುಂಪುಹತ್ಯೆ, ಬಹಿಷ್ಕಾರ) ಇತ್ಯಾದಿಗಳ ವಿರುದ್ಧವಿರುವ (ದುಆ ಎಂಬ) ಒಂದು ಬಲಿಷ್ಠವಾದ ಆಯುಧ.
ಸಂಗ್ರಹ : ಅಶ್ಶೈಖ್ ಅಬೂ ಇಸ್ಮಾಈಲ್ ಮುಸ್ತಫಾ ಜಾರ್ಜ್ (حَفِظَهُ اللَّهُ)
ಈ ಪುಸ್ತಕದ PDF ಪ್ರತಿಯನ್ನು ಈ ಕೆಳಗಿನಿಂದ ಡೌನ್‍ಲೋಡ್ ಮಾಡಿಕೊಳ್ಳಿರಿ.
w
ಇತ್ತೀಚಿನ ದಿನಗಳಲ್ಲಿ ವಿವಿಧ ದೇಶಗಳಲ್ಲಿ ಮುಸ್ಲಿಮರ ವಿರುದ್ಧ ನಡೆಯಿತ್ತಿರುವ ದ್ವೇಷಪೂರಿತ ಅಪರಾಧಗಳು (ಕೊಲೆ, ಹಲ್ಲೆ, ಗುಂಪುಹತ್ಯೆ, ಬಹಿಷ್ಕಾರ ಮುತಾದವುಗಳ) ಹಿನ್ನೆಲೆಯಲ್ಲಿ, ನಮಗೆ ಪ್ರವಾದಿ ಮುಹಮ್ಮದ್ (H) ರವರು ಕಲಿಸಿಕೊಟ್ಟಿರುವ ಹಲವಾರು ದೈನಂದಿನ ದುಆಗಳ ಮೂಲಕ ನಮ್ಮ ಮುಸ್ಲಿಮ್ ಸಹೋದರರರು (ಹಾಗೂ ಸಹೋದರಿಯರು), ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕಾದ ಪ್ರಾಮುಖ್ಯತೆಯನ್ನು ನೆನಪಿಸಬೇಕಾದ ಅನಿವಾರ್ಯತೆ ಇರುವುದನ್ನು ನಾವು ಕಂಡುಕೊಂಡೆವು. ಈ ಲೇಖನದ ಉದ್ದೇಶವು ಪ್ರತಿದಿನ ಮುಸ್ಲಿಮರು ಹೇಳಬೇಕಾದ ಎಲ್ಲಾ ದುಆಗಳನ್ನು ಪಟ್ಟಿಮಾಡುವುದಲ್ಲ, ಬದಲಾಗಿ, ತಮ್ಮನ್ನು ಎಲ್ಲಾ ಕೇಡುಗಳಿಂದ ರಕ್ಷಿಸಲು ಪ್ರವಾದಿ ಮುಹಮ್ಮದ್ (H) ರವರು ತಮ್ಮ ಅನುಯಾಯಿಗಳಿಗೆ ತೋರಿಸಿಕೊಟ್ಟ ಮಾರ್ಗವನ್ನು ನೆನಪಿಸಿಕೊಡುವುದಾಗಿದೆ. ಹಾಗಾಗಿ, ನಮ್ಮ ಎಲ್ಲಾ ಸಹೋದರ ಸಹೋದರಿಯರು ಈ ದುಆಗಳನ್ನು ಕಲಿತು ಕಂಠಪಾಠ ಮಾಡಿ, ತಮ್ಮ ಕುಟುಂಬದವರಿಗೂ ಇದನ್ನು ಕಲಿಸಿಕೊಡುವುದು ಅತೀ ಅನಿವಾರ್ಯವಾಗಿದೆ. ಈ ಮೂಲಕ ಅವರು :
1. ಓರ್ವ ಮುಸ್ಲಿಮ್‌ನ ಬದುಕಿನಲ್ಲಿ ತೌಹೀದ್ ಮತ್ತು ಅದರ ಅನಿವಾರ್ಯತೆಯನ್ನು ನೆನಪಿಸುವುದು.
2. ರಬ್ಬ್‌ನೊಂದಿಗೆ (ಅರ್ಥಾತ್ ಅಲ್ಲಾಹುವಿನೊಂದಿಗೆ) ತಮ್ಮ ಸಂಬಂಧವನ್ನು ಬಲಪಡಿಸುವುದು ಹಾಗೂ ಅವನ ಬಗ್ಗೆ ಅತ್ಯಧಿಕವಾದ ಅರಿವು ಮತ್ತು ಪ್ರಜ್ಞೆಯನ್ನು ಮೂಡಿಸುವುದು.
3. ಪ್ರವಾದಿ (H) ರವರ ಅಧಿಕೃತವಾದ ಸುನ್ನತ್ಅನ್ನು (ಮಾರ್ಗದರ್ಶನವನ್ನು) ಅನುಸರಿಸಲು ಕರೆ ನೀಡುವುದು ಹಾಗೂ ಅವರ ಬೋಧನೆಗಳ ಬಗ್ಗೆ ಜ್ಞಾನವನ್ನು ಹೆಚ್ಚಿಸುವುದು.
4. ಅವರಿಗೆ ಸಾಧ್ಯವಾದಷ್ಟು ಹೆಚ್ಚಿನ ರಕ್ಷಣೆಯನ್ನು ಒದಗಿಸುವುದು -ಅದು (ಅರ್ಥಾತ್ ದುಆಗಳು) ಸಕಲ ಲೋಕಗಳ ರಬ್ಬ್ (ಅಲ್ಲಾಹು) ನೀಡಿರುವ ಸುಭದ್ರಕೋಟೆಯಾಗಿದೆ!
ಈ ಮೊದಲೇ ಉಲ್ಲೇಖಿಸಿದಂತೆ, ಈ ಕೆಳಗೆ ನೀಡಲಾಗಿರುವುದು ಕೆಲವು ದುಆಗಳಾಗಿದೆ -ಇವುಗಳನ್ನು ಹಗಲಿನಲ್ಲೂ ರಾತ್ರಿಯಲ್ಲೂ- ದಿನವುದ್ದಕ್ಕೂ ಹೇಳಬೇಕಾಗಿದೆ. ಸಹೀಹ್ಆದ ದುಆಗಳನ್ನು ಕಲಿಸುವ ಅಧಿಕೃತವಾದ ಪುಸ್ತಕಗಳನ್ನು ಪಡೆದುಕೊಳ್ಳುವಂತೆ ನಮ್ಮ ಸಹೋದರ ಹಾಗೂ ಸಹೋದರಿಯರಲ್ಲಿ ನಾವು ಉತ್ತೇಜಿಸುತ್ತೇವೆ.
ದುಆಗಳು
(ಸರ್ವ ವಿಪತ್ತುಗಳಿಂದ) ರಕ್ಷಣೆ ಹೊಂದಲು ಮುಸ್ಲಿಮರು ಕಂಠಪಾಠ ಮಾಡಿ ದಿನಂಪ್ರತಿ ಹೇಳಬೇಕಾದವುಗಳ ಪೈಕಿಯಿರುವ ದುಆಗಳು:
1. ಉಸ್ಮಾನ್ ಬಿನ್ ಅಫ್ಫಾನ್ (I) ರವರು ಹೇಳಿದರು: ಅಲ್ಲಾಹುವಿನ ರಸೂಲ್ (H) ರವರು ಹೇಳುವುದನ್ನು ನಾನು ಆಲಿಸಿರುವೆನು :
« بِسْمِ اللَّهِ الَّذِي لَا يَضُرُّ مَعَ اسْمِهِ شَيْءٌ، فِي الْأَرْضِ، وَلَا فِي السَّمَاءِ، وَهُوَ السَّمِيعُ الْعَلِيمُ »
“ಯಾರ ನಾಮವು ಉಚ್ಚರಿಸಲ್ಪಟ್ಟರೆ ಭೂಮಿಯಲ್ಲಿರುವುದಾಗಲೀ ಅಥವಾ ಆಕಾಶದಲ್ಲಿರುವುದಾಗಲೀ ಯಾವುದೂ ಹಾನಿಯುಂಟುಮಾಡಲು ಸಾಧ್ಯವಿಲ್ಲವೋ ಆ ಅಲ್ಲಾಹುವಿನ ನಾಮದಿಂದ (ನಾನು ರಕ್ಷೆ ಮತ್ತು ಸಹಾವನ್ನು ಯಾಚಿಸುತ್ತೇನೆ). ಅವನು ಎಲ್ಲವನ್ನು ಆಲಿಸುವವನೂ, ಎಲ್ಲದರ ಕುರಿತು ಅರಿವುಳ್ಳವನೂ ಆಗಿದ್ದಾನೆ.”
-ಎಂದು ಯಾರು ಮೂರು ಬಾರಿ ಹೇಳುತ್ತಾನೋ, ಅವನಿಗೆ ಯಾವುದೇ ಅಪಾಯವೂ ಬಾಧಿಸದು.” (ಅಬೂ ದಾವೂದ್ : 5088 ಮತ್ತು ಅತ್ತಿರ್ಮಿದೀ : 3388, ಅಶ್ಶೈಖ್ ಅಲ್ಬಾನೀ ತಮ್ಮ ಸಹೀಹ್ ಅತ್ತರ್‌ಗೀಬ್ ; 655ರಲ್ಲಿ ‘ಸಹೀಹ್’ ಎಂದು ಉಲ್ಲೇಖಿಸಿರುವರು)
ಅಶ್ಶೈಖ್ ಅಬ್ದುರ್ರಝ್ಝಾಕ್ ಅಲ್-ಅಬ್ಬಾದ್ (حَفِظَهُ اللَّهُ) ಈ ಮೇಲಿನ ಹದೀಸ್ಅನ್ನು ವ್ಯಾಖ್ಯಾನಿಸುತ್ತಾ ಹೇಳಿದರು : ಇದು ಪ್ರತಿಯೋರ್ವ ಮುಸ್ಲಿಮನೂ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ನಿರಂತರವಾಗಿ ಹೇಳಬೇಕಾದ ಶ್ರೇಷ್ಠವಾದ ಪ್ರಾರ್ಥನೆಯಾಗಿದೆ -ಈ ಮೂಲಕ ಅಲ್ಲಾಹುವಿನ ಅನುಮತಿಯೊಂದಿಗೆ ಅವನು ಹಠಾತ್ತನೆ ಬಂದೆರಗುವ ಎಲ್ಲಾ ಅಪಾಯಗಳಿಂದಲೂ, ದುರಂತಗಳಿಂದಲೂ ಸಂರಕ್ಷಿಸಲ್ಪಡುವನು. (ಫಿಕ್ಹುಲ್ ಅದ್‍ಯಿಯ್ಯತಿ ವಲ್-ಅದ್‍ಕಾರ್ : 488)
2. ಅಬೂ ಹುರೈರಃ (I) ರಿಂದ ವರದಿ : ಅಲ್ಲಾಹುವಿನ ರಸೂಲ್ (H) ರವರು ಹೇಳಿದರು :
« لَا إِلَهَ إِلَّا اللَّهُ وَحْدَهُ لَا شَرِيكَ لَهُ، لَهُ الْمُلْكُ، وَلَهُ الْحَمْدُ، وَهُوَ عَلَى كُلِّ شَيْءٍ قَدِيرٌ »
“ಅಲ್ಲಾಹುವಿನ ಹೊರತು ಆರಾಧನೆಗೆ ನೈಜ ಹಕ್ಕುದಾರನು ಯಾರೂ ಇಲ್ಲ, ಅವನು ಏಕೈಕನೂ ಅವನಿಗೆ ಸಹಭಾಗಿಗಳಾರೂ ಇಲ್ಲ. ಸಕಲ ಆಧಿಪತ್ಯವು ಅವನದ್ದೇ ಆಗಿದೆ, ಸರ್ವಸ್ತುತಿಗಳೂ ಅವನಿಗಾಗಿದೆ, ಹಾಗೂ ಎಲ್ಲದರ ಮೇಲೂ ಅವನು ಸಾಮರ್ಥ್ಯವುಳ್ಳವನಾಗಿರುವನು.”
ಎಂದು ಯಾರು ಬೆಳಿಗ್ಗಿನ ಹೊತ್ತು ನೂರು ಬಾರಿ ಹೇಳುತ್ತಾನೋ ಅವನು ಹತ್ತು ದಾಸರನ್ನು ಸ್ವತಂತ್ರಗೊಳಿಸಿದಷ್ಟು ಪ್ರತಿಫಲವನ್ನು ಪಡೆಯುವನು, ಹಾಗೂ ಅವನಿಗಾಗಿ ನೂರು ಸತ್ಕರ್ಮಗಳನ್ನು ಬರೆಯಲಾಗುವುದು, ಹಾಗೂ ಅವನಿಂದ ನೂರು ಕೆಡುಕುಗಳನ್ನು ಅಳಿಸಲಾಗುವುದು, ಹಾಗೂ ಅವನು ಆ ದಿನದಂದು ಸೂರ್ಯಾಸ್ತವಾಗುವ ತನಕ ಶೈತಾನ್‌ನ ವಿರುದ್ಧ ಸಂರಕ್ಷಣೆಯಲ್ಲಿರುವನು. ಇದಕ್ಕಿಂತಲೂ ಹೆಚ್ಚು ಶ್ರೇಷ್ಠವಾದುದನ್ನು ಹೇಳಿದವನ ಹೊರತುಪಡಿಸಿ ಇತರ ಯಾರೂ ಅವನಿಗಿಂತಲೂ ಹೆಚ್ಚು ಶ್ರೇಷ್ಠತೆಯೊಂದಿಗೆ ಬರಲಾರರು.” (ಸಹೀಹ್ ಅಲ್-ಬುಖಾರಿ : 3293 ಮತ್ತು ಸಹೀಹ್ ಮುಸ್ಲಿಮ್ : 2691)
3. ಅಬೂ ಹುರೈರಃ (I) ರವರು ಹೇಳಿದರು : ಓರ್ವ ವ್ಯಕ್ತಿಯು ಪ್ರವಾದಿ (H) ರವರವರೆಡೆಗೆ ಬಂದು ಹೇಳಿದರು : “ಓ ಅಲ್ಲಾಹುವಿನ ಸಂದೇಶವಾಹಕರೇ, ನಿನ್ನೆ ರಾತ್ರಿ ನನಗೊಂದು ಚೇಳು ಕಚ್ಚಿತು!” ಆಗ ಪ್ರವಾದಿ (H) ರವರು ಉತ್ತರಿಸಿದರು : ಒಂದುವೇಳೆ ನೀನು ಮಲಗುವ ಮುಂಚೆ ಈ ರೀತಿ ಹೇಳಿದರೆ :
« أَعُوذُ بِكَلِمَاتِ اللَّهِ التَّامَّاتِ مِنْ شَرِّ مَا خَلَقَ »
“ಅಲ್ಲಾಹುವಿನ ಪರಿಪೂರ್ಣ ವಚನಗಳೊಂದಿಗೆ ಅವನು ಸೃಷ್ಟಿಸಿದವುಗಳ ಕೇಡಿನಿಂದ ನಾನು ಅಭಯಯಾಚಿಸುತ್ತೇನೆ.”
– ನೀನು ಅಪಾಯಕ್ಕೊಳಗಾಗುವುದಿಲ್ಲ.” (ಸಹೀಹ್ ಮುಸ್ಲಿಮ್ : 2709)
4. ಅಬೂ ಹುರೈರಃ (I) ರಿಂದ ವರದಿ, ಪ್ರವಾದಿ (H) ರವರು ಹೇಳಿದರು : “ಯಾವಾಗ ನೀವು ಮನೆಗೆ ಪ್ರವೇಶಿಸುತ್ತೀರೋ, ಆಗ ಎರಡು ರಕ್ಅತ್ ನಮಾಝ್ ನಿರ್ವಹಿಸಿರಿ. ಅವು ನಿಮ್ಮನ್ನು ಕೆಡುಕುಗಳೊಂದಿಗೆ ಮನೆ ಪ್ರವೇಶಿಸುವುದರಿಂದ ತಡೆಯುವುದು. ಮತ್ತು ಯಾವಾಗ ನೀವು ಮನೆಯಿಂದ ಹೊರಹೋಗುತ್ತೀರೋ, ಆಗ ಎರಡು ರಕ್ಅತ್ ನಮಾಝ್ ನಿರ್ವಹಿಸಿರಿ. ಅವು ನಿಮ್ಮನ್ನು ಕೆಡುಕುಗಳೆಡೆಗೆ ಹೋಗುವುರಿಂದ ತಡೆಯುವುದು.” (ಕಷ್ಫ್-ಅಲ್-ಅಸ್ತಾರ್ ಅನ್ -ಝವಾಇದ್ ಅಲ್-ಬಝ್ಝಾರ್ : 746)
5. ಅಬ್ದುಲ್ಲಾಹ್ ಬಿನ್ ಖುಬೈಬ್ (I) ರವರು ಹೇಳಿದರು : ನಮ್ಮನ್ನು ನಮಾಝ್‌ನಲ್ಲಿ ಮುನ್ನಡೆಸಲೆಂದು ಅಲ್ಲಾಹುವಿನ ರಸೂಲ್ (H) ರವರನ್ನು ಹುಡುಕುತ್ತಾ ನಾವು ಒಂದು ಮಳೆಯ ಹಾಗೂ ತೀವ್ರ ಕತ್ತಲೆ ಕವಿದ ರಾತ್ರಿಯಲ್ಲಿ ಹೊರಟೆವು. ಹೀಗೆ ನಾವು ಅವರನ್ನು ಕಂಡುಕೊಂಡೆವು ಆಗ ಅವರು (H) ಹೇಳಿದರು : “ಹೇಳು!” ಆಗ ನಾನು ಏನನ್ನೂ ಹೇಳಲಿಲ್ಲ, (ಪುನಃ) ಅವರು (H) ಹೇಳಿದರು : “ಹೇಳು!” ಆಗಲೂ ನಾನು ಏನೂ ಹೇಳಲಿಲ್ಲ, ಅವರು (H) ಇನ್ನೊಮ್ಮೆ ಹೇಳಿದರು : “ಹೇಳು!” ಆಗ ನಾನು ಹೇಳಿದೆ : ಓ ಅಲ್ಲಾಹುವಿನ ಸಂದೇಶವಾಹಕರೇ, ನಾನು ಏನು ಹೇಳಬೇಕು? ಅವರು (H) ಹೇಳಿದರು: “ಕುಲ್ ಹುವಲ್ಲಾಹು ಅಹದ್ (ಸೂರಃ ಅಲ್-ಇಖ್ಲಾಸ್) “ಅಲ್-ಮುಅವ್ವಿಝತೈನ್” ಅನ್ನು (ಅರ್ಥಾತ್ ಸೂರಃ ಅಲ್-ಫಲಕ್ ಮತ್ತು ಸೂರಃ ಅನ್ನಾಸ್ಅನ್ನು) ಮುಂಜಾನೆ ಮತ್ತು ಸಂಜೆಯ ವೇಳೆ ಮೂರು ಬಾರಿ ಪಠಿಸಿರಿ : ಅವು ಎಲ್ಲದರ ವಿರುದ್ಧವೂ ನಿಮ್ಮನ್ನು ರಕ್ಷಿಸುವುದು.” (ಅಬೂ ದಾವುದ್ : 5082 ಮತ್ತು ಅತ್ತಿರ್ಮಿದಿ : 3575. ಅಶ್ಶೈಖ್ ಅಲ್ಬಾನೀ ತಮ್ಮ ಸಹೀಹ್ ಅತ್ತರ್‌ಗೀಬ್ : 649ರಲ್ಲಿ ‘ಸಹೀಹ್’ ಎಂದು ಉಲ್ಲೇಖಿಸಿರುವರು)
ಸೂರಃ ಅಲ್-ಇಖ್ಲಾಸ್:
بِسۡمِ ٱللَّهِ ٱلرَّحۡمَٰنِ ٱلرَّحِيمِ ﴿قُلۡ هُوَ ٱللَّهُ أَحَدٌ ١ ٱللَّهُ ٱلصَّمَدُ ٢ لَمۡ يَلِدۡ وَلَمۡ يُولَدۡ ٣ وَلَمۡ يَكُن لَّهُۥ كُفُوًا أَحَدٌ ٤﴾
“(ಅಚಲ ದೃಢವಿಶ್ವಾಸದೊಂದಿಗೆ) ಹೇಳಿರಿ, ಅವನು ಅಲ್ಲಾಹು (ಆತನ ಪರಿಪೂರ್ಣ ನಾಮಗಳಲ್ಲಿ, ಗುಣವಿಶೇಷಣೆಗಳಲ್ಲಿ, ಕ್ರಿಯೆಗಳಲ್ಲಿ ಮತ್ತು ಆರಾಧನೆಯ ಅರ್ಹತೆಯಲ್ಲಿ) ಏಕಮೇವನಾಗಿರುವನು. ಅಲ್ಲಾಹು ತನ್ನ ಎಲ್ಲಾ ಸೃಷ್ಟಿಗಳ ಅಗತ್ಯಗಳಿಂದ ಮುಕ್ತನಾಗಿರುವನು ಹಾಗೂ ಸರ್ವರೂ ಅವನ ಆಶ್ರಿತರಾಗಿರುವರು. ಅವನು ಯಾರಿಗೂ ಜನ್ಮವನ್ನು ನೀಡಿಲ್ಲ ಹಾಗೂ ಅವನು ಯಾರಿಗೂ ಜನಿಸಿದವನೂ ಅಲ್ಲ. (ಆತನ ಪರಿಪೂರ್ಣ ನಾಮಗಳಲ್ಲಿ, ಗುಣವಿಶೇಷಣೆಗಳಲ್ಲಿ, ಮತ್ತು ಕ್ರಿಯೆಗಳಲ್ಲಿ) ಅವನಿಗೆ ಸರಿಸಮಾನರಾಗಿ ಯಾರೂ ಇಲ್ಲ.” (ಸೂರಃ ಅಲ್-ಇಖ್ಲಾಸ್ : 1- 4)
ಸೂರಃ ಅಲ್-ಫಲಕ್:
﴿قُلۡ أَعُوذُ بِرَبِّ ٱلۡفَلَقِ ١ مِن شَرِّ مَا خَلَقَ ٢ وَمِن شَرِّ غَاسِقٍ إِذَا وَقَبَ ٣ وَمِن شَرِّ ٱلنَّفَّٰثَٰتِ فِي ٱلۡعُقَدِ ٤ وَمِن شَرِّ حَاسِدٍ إِذَا حَسَدَ ٥﴾
“ಹೇಳಿರಿ : ಪ್ರಭಾತದ ರಬ್ಬ್‌ನೊಂದಿಗೆ ನಾನು ರಕ್ಷಣೆ ಬೇಡುತ್ತೇನೆ. ಅವನು ಸೃಷ್ಟಿಸಿದವುಗಳಲ್ಲಿರುವ (ಎಲ್ಲಾ) ಕೇಡಿನಿಂದ. ಹಾಗೂ (ರಾತ್ರಿಯ) ಕತ್ತಲೆಯು ಆವರಿಸಿಕೊಂಡಾಗ ಅದರ (ಇರುಳಿನಲ್ಲಿ ಉದ್ಭವಿಸುವ) ಕೇಡಿನಿಂದ. ಮತ್ತು ಗಂಟುಗಳಲ್ಲಿ (ಮಂತ್ರಿಸಿ) ಊದುವ ಮಾಟಗಾತಿಯರ ಕೇಡಿನಿಂದ. ಹಾಗೂ ಮತ್ಸರಿಯು ಮತ್ಸರ ಪಡುವಾಗ ಅವನ ಕೇಡಿನಿಂದ (ಅಲ್ಲಾಹುವಿನೊಂದಿಗೆ ರಕ್ಷಣೆ ಬೇಡುತ್ತೇನೆ).” (ಸೂರಃ ಅಲ್-ಫಲಕ್ : 1 – 5)
ಸೂರಃ ಅನ್ನಾಸ್:
﴿قُلۡ أَعُوذُ بِرَبِّ ٱلنَّاسِ ١ مَلِكِ ٱلنَّاسِ ٢ إِلَٰهِ ٱلنَّاسِ ٣ مِن شَرِّ ٱلۡوَسۡوَاسِ ٱلۡخَنَّاسِ ٤ ٱلَّذِي يُوَسۡوِسُ فِي صُدُورِ ٱلنَّاسِ ٥ مِنَ ٱلۡجِنَّةِ وَٱلنَّاسِ ٦﴾
“ಹೇಳಿರಿ : ಮನುಷ್ಯರ ರಬ್ಬ್‌ನೊಂದಿಗೆ ನಾನು ರಕ್ಷಣೆ ಬೇಡುತ್ತೇನೆ, ಮನುಷ್ಯರ ಅಧಿಪತಿಯೂ, ಮನುಷ್ಯರ (ಏಕೈಕ) ನೈಜ ಆರಾಧ್ಯನೂ (ಆದ ಅಲ್ಲಾಹುವಿನೊಂದಿಗೆ), (ಮನುಷ್ಯರು ಅಲ್ಲಾಹುವನ್ನು ಸ್ಮರಿಸುವ ವೇಳೆ ನಿರಂತರವಾಗಿ) ಹಿಂದೆ ಸರಿಯುವ, (ಮತ್ತು ಅಲ್ಲಾಹುವಿನ ಬಗ್ಗೆ ಅಲಕ್ಷ್ಯರಾಗಿದ್ದಾಗ ಸತತವಾಗಿ) ದುಷ್ಪ್ರೇರಣೆಯನ್ನು ಉಂಟು ಮಾಡುವ ಆತನ ಕೇಡಿನಿಂದ (ಅರ್ಥಾತ್ ಶೈತಾನ್‌ನ ಕೇಡಿನಿಂದ). ಅವನು ಮನುಷ್ಯರ ಹೃದಯಗಳಲ್ಲಿ (ದುರಾಲೋಚನೆ, ಗೊಂದಲ ಹಾಗೂ ದೇಹೇಚ್ಛೆಗಳನ್ನು ಬಿತ್ತಿ) ದುಷ್ಪ್ರೇರಣೆ ಉಂಟುಮಾಡುತ್ತಾನೆ. (ಹೀಗೆ ಮನುಷ್ಯರ ಹೃದಯಗಳಲ್ಲಿ ದುಷ್ಪ್ರೇರಣೆ ಉಂಟು ಮಾಡುವವನು) ಜಿನ್ನ್ ವರ್ಗದಿಂದಲೂ (ಆಗಿರಬಹುದು) ಮತ್ತು ಮನುಷ್ಯ ವರ್ಗದಿಂದಲೂ (ಆಗಿರಬಹುದು).” (ಸೂರಃ ಅನ್ನಾಸ್ : 1 – 6)
6. ಅಬಾನ್ ಬಿನ್ ಉಸ್ಮಾನ್ (I) ರಿಂದ ವರದಿ, ಉಸ್ಮಾನ್ ಬಿನ್ ಅಫ್ಫಾನ್ (I) ರವರು ಹೇಳಿದರು : ಅಲ್ಲಾಹುವಿನ ರಸೂಲ್ (H) ರವರು ಹೇಳುವುದನ್ನು ನಾನು ಆಲಿಸಿರುವೆನು :
« بِسْمِ اللَّهِ الَّذِي لَا يَضُرُّ مَعَ اسْمِهِ شَيْءٌ، فِي الْأَرْضِ، وَلَا فِي السَّمَاءِ، وَهُوَ السَّمِيعُ الْعَلِيمُ »
“ಯಾರ ನಾಮವು ಉಚ್ಚರಿಸಲ್ಪಟ್ಟರೆ ಭೂಮಿಯಲ್ಲಿರುವುದಾಗಲೀ ಅಥವಾ ಆಕಾಶದಲ್ಲಿರುವುದಾಗಲೀ ಯಾವುದೂ ಹಾನಿಯುಂಟುಮಾಡಲು ಸಾಧ್ಯವಿಲ್ಲವೋ ಆ ಅಲ್ಲಾಹುವಿನ ನಾಮದಿಂದ (ನಾನು ರಕ್ಷೆ ಮತ್ತು ಸಹಾವನ್ನು ಯಾಚಿಸುತ್ತೇನೆ). ಅವನು ಎಲ್ಲವನ್ನು ಆಲಿಸುವವನೂ, ಎಲ್ಲದರ ಕುರಿತು ಅರಿವುಳ್ಳವನೂ ಆಗಿದ್ದಾನೆ.”
-ಎಂದು ಯಾರು ಮೂರು ಬಾರಿ ಹೇಳುತ್ತಾನೋ, ಅವನಿಗೆ ಬೆಳಿಗ್ಗಿನ ತನಕ ಹಠಾತ್ತನೆ ಬಂದೆರಗುವ ಯಾವುದೇ ಅಪಾಯವು ಬಾಧಿಸದು; ಹಾಗೂ ಯಾರಿದನ್ನು ಬೆಳಿಗ್ಗೆ ಮೂರು ಬಾರಿ ಹೇಳುತ್ತಾನೋ, ಅವನಿಗೆ ಸಂಜೆಯ ತನಕ ಹಠಾತ್ತನೆ ಬಂದೆರಗುವ ಯಾವುದೇ ಅಪಾಯವು ಬಾಧಿಸದು.”
(ಈ ಹದೀಸ್ಅನ್ನು ವರದಿ ಮಾಡಿದ) ಅಬಾನ್ ಬಿನ್ ಉಸ್ಮಾನ್ (I) ರವರು ಒಮ್ಮೆ ಪಾರ್ಶ್ವವಾಯು ರೋಗಕ್ಕೆ ಒಳಗಾದರು. ಈ ಮೇಲೆ ಉಲ್ಲೇಖಿಸಲಾದ ಹದೀಸ್ಅನ್ನು ಅಬಾನ್ (I) ರವರು ವರದಿಮಾಡುವುದನ್ನು ಆಲಿಸಿದ್ದ ಓರ್ವ ವ್ಯಕ್ತಿಯು ಅವರೆಡನೆ (ಆಶ್ಚರ್ಯದಿಂದ) ನೋಡಿದರು. ಅಬಾನ್ (I) ರವರು ಹೇಳಿದರು : ನೀವೇಕೆ ನನ್ನನು ನೋಡಿತ್ತಿರುವಿರಿ? ಅಲ್ಲಾಹುವಿನ ಮೇಲಾಣೆ!, ನಾನು ಉಸ್ಮಾನ್ (I) ರವರ ಬಗ್ಗೆ ಸುಳ್ಳು ನುಡಿದಿಲ್ಲ, ಹಾಗೂ ಉಸ್ಮಾನ್ (I) ರವರು ಪ್ರವಾದಿ (H) ರವರ ಬಗ್ಗೆ ಸುಳ್ಳು ನುಡಿದಿಲ್ಲ. ಬದಲಾಗಿ, ಯಾವಾಗ ನನಗೆ ಪಾರ್ಶ್ವವಾಯು ರೋಗವು ಬಾಧಿಸಿತೋ ಆ ದಿನದಂದು ನಾನು (ನನ್ನ ವಯಕ್ತಿಕ ವಿಚಾರದಲ್ಲಿ) ಕೋಪಗ್ರಸ್ತನಾಗಿದ್ದೆ, ಮತ್ತು ಈ ದುಆವನ್ನು ಹೇಳಲು ಮರೆತುಬಿಟ್ಟಿದ್ದೆ!.” (ಸುನನ್ ಅಬೀ ದಾವೂದ್ : 5088)
7. ಉಮರ್ ಬಿನ್ ಖಾತ್ತಾಬ್ (I) ರವರು ಹೇಳಿದರು : ಅಲ್ಲಾಹುವಿನ ರಸೂಲ್ (H) ರವರು ಎಂದಿಗೂ ಬೆಳಿಗ್ಗೆ ಮತ್ತು ಸಂಜೆ ಈ ದುಆಗಳನ್ನು (ಹೇಳದೇ) ಬಿಡುತ್ತಿರಲಿಲ್ಲ :
« اللَّهُمَّ إِنِّي أَسْأَلُكَ الْعَافِيَةَ فِي الدُّنْيَا وَالْآخِرَةِ، اللَّهُمَّ إِنِّي أَسْأَلُكَ الْعَفْوَ وَالْعَافِيَةَ فِي دِينِي وَدُنْيَايَ وَأَهْلِي وَمَالِي، اللَّهُمَّ اسْتُرْ عَوْرَاتِي وَآمِنْ رَوْعَاتِي، اللَّهُمَّ احْفَظْنِي مِنْ بَيْنِ يَدَيَّ، وَمِنْ خَلْفِي، وَعَنْ يَمِينِي، وَعَنْ شِمَالِي، وَمِنْ فَوْقِي، وَأَعُوذُ بِعَظَمَتِكَ أَنْ أُغْتَالَ مِنْ تَحْتِي »
“ಓ ಅಲ್ಲಾಹ್! ಇಹಲೋಕದಲ್ಲೂ ಪರಲೋಕದಲ್ಲೂ (ಸಕಲ ಕೇಡುಗಳಿಂದ) ಕ್ಷೇಮ ಮತ್ತು ರಕ್ಷಣೆಯನ್ನು ನಿನ್ನೊಡನೆ ನಾನು ಯಾಚಿಸುತ್ತೇನೆ. ಓ ಅಲ್ಲಾಹ್! ನನ್ನ ದೀನ್‌ನಲ್ಲೂ, ನನ್ನ ಐಹಿಕ ಜೀವನದಲ್ಲೂ, ನನ್ನ ಕುಟುಂಬ ಮತ್ತು ಸಂಪತ್ತಿನಲ್ಲೂ ಕ್ಷಮೆ, ಕ್ಷೇಮ ಮತ್ತು ರಕ್ಷಣೆಯನ್ನು ನಿನ್ನೊಡನೆ ಯಾಚಿಸುತ್ತೇನೆ. ಓ ಅಲ್ಲಾಹ್! ನನ್ನ ನ್ಯೂನತೆ ಮತ್ತು ತಪ್ಪುಗಳನ್ನು ಮರೆಮಾಡು ಮತ್ತು (ಸುರಕ್ಷತೆಯನ್ನು ನೀಡುವ ಮೂಲಕ) ನನ್ನ ಭಯವನ್ನು ನೀಗಿಸು. ಓ ಅಲ್ಲಾಹ್! ನನ್ನ ಮುಂದಿನಿಂದಲೂ ಹಾಗೂ ಹಿಂದಿನಿಂದಲೂ, ನನ್ನ ಬಲದಿಂದಲೂ ಹಾಗೂ ಎಡದಿಂದಲೂ, ನನ್ನ ಮೇಲಿನಿಂದಲೂ ನನ್ನನ್ನು ಸಂರಕ್ಷಿಸು. ನನ್ನ ಕೆಳಭಾಗದಿಂದ ಹಠಾತ್ತನೇ (ಹಿಡಿಯಲ್ಪಟ್ಟು ಅಲಕ್ಷ್ಯನಾಗಿ) ನಾಶಹೊಂದುವುದರಿಂದ ನಿನ್ನ ಮಹಿಮೆಯೊಂದಿಗೆ ನಾನು ಅಭಯ ಯಾಚಿಸುತ್ತೇನೆ.” (ಸಹೀಹ್ ಅದಬ್ ಅಲ್-ಮುಫ್ರದ್ : 1200)
ಅಶ್ಶೈಖ್ ಝೈದ್ ಅಲ್-ಮದ್‌ಖಲೀ (V) ಈ ಮೇಲಿನ ಹದೀಸ್ಅನ್ನು ವ್ಯಾಖ್ಯಾನಿಸುತ್ತಾ ಹೇಳಿದರು :
“ಈ ದುಆವನ್ನು (ಬೆಳಿಗ್ಗೆ ಮತ್ತು ಸಂಜೆಯ ಹೊತ್ತು ಹೇಳುವ ದುಆಗಳೊಡನೆ) ಹೇಳುವುದರಲ್ಲಿ ಯಾವುದೇ ಅಡ್ಡಿಯಿಲ್ಲ, ಏಕೆಂದರೆ ಇದೊಂದು ಅನುಗ್ರಹಪೂರ್ಣವಾದ ದುಆ ಆಗಿದೆ. ಆ ವ್ಯಕ್ತಿಯು ಅರಸುವುದು ಅಲ್ಲಾಹುವಿನ ರಕ್ಷೆಯನ್ನಾಗಿದೆ -ಆ ಮೂಲಕ ಅವನು ಧಾರ್ಮಿಕ ಕಾರ್ಯದಲ್ಲೂ ಲೌಕಿಕ ಕಾರ್ಯದಲ್ಲೂ ಸಂರಕ್ಷಿಸಲ್ಪಡುವನು. ಅವನು ಪ್ರಾರ್ಥಿಸುವುದು ತನ್ನ ಪಾಪಗಳು ಈ ಲೌಕಿಕ ಜೀವನದಲ್ಲಿ, ಕಬ್‌ರ್‌ನಲ್ಲಿ, ಪರಲೋಕದಲ್ಲಿ ಮರೆಮಾಚಲ್ಪಡುವುದನ್ನಾಗಿದೆ. ಈ ವರದಿಗಳು ಬೆಳಿಗ್ಗೆ ಮತ್ತು ಸಂಜೆಯಲ್ಲಿ (ಹೇಳುವುದೆಂದು ಉಲ್ಲೇಖಿಸಲಾಗಿದೆ), ಆದರೆ ಅವುಗಳು ಸಾಮಾನ್ಯವಾಗಿ ಮುಸ್ಲಿಮ್ ಸ್ತ್ರೀ ಮತ್ತು ಪುರುಷರು ತಮ್ಮಿಚ್ಚೆಯಂತೆ, ಅದು ರಾತ್ರಿಯಾಗಿರಲಿ ಅಥವಾ ಬೆಳಿಗ್ಗೆಯಾಗಿರಲಿ -ಯಾವುದೇ ಸಂದರ್ಭದಲ್ಲೂ- ಹೇಳಬಹುದಾಗಿದೆ. ಈ ದುಆಗಳಿಲ್ಲದೆ ಓರ್ವನು (ತನ್ನ ಜೀವನದಲ್ಲಿ) ತೃಪ್ತಿಹೊಂದಲಾರನು ಏಕೆಂದರೆ ಈ ಮೂಲಕ ಅವನು ಮಹೋನ್ನತನಾದ ಅಲ್ಲಾಹುವಿನೆಡೆಗೆ (ರಕ್ಷಣೆಗಾಗಿ) ಮರಳುತ್ತಿರುವನು.” (ಶರ್ಹ್ ಅದಬ್ ಅಲ್-ಮುಫ್ರದ್ – ಔನ್ ಅಲ್-ಅಹದ್ ಅಸ್ಸಮದ್ : 3/327)
8. ಅನಸ್ ಬಿನ್ ಮಾಲಿಕ್ (I) ರಿಂದ ವರದಿ, ಅಲ್ಲಾಹುವಿನ ರಸೂಲ್ (H) ಹೇಳಿದರು : ಯಾವಾಗ ಓರ್ವ ವ್ಯಕ್ತಿಯು ತನ್ನ ಮನೆಯಿಂದ ಹೊರಡುವಾಗ ಈ ರೀತಿ ಹೇಳುತ್ತಾನೋ :
« بِسْمِ اللَّهِ، تَوَكَّلْتُ عَلَى اللَّهِ، لاَ حَوْلَ وَلاَ قُوَّةَ إِلاَّ بِاللَّهِ»
“ಅಲ್ಲಾಹುವಿನ ನಾಮದಿಂದ (ನಾನು ಹೊರಡುತ್ತಿದ್ದೇನೆ). ನಾನು ಅಲ್ಲಾಹುವಿನ ಮೇಲೆ ಭರವಸೆಯಿಟ್ಟಿರುವೆನು. ಅಲ್ಲಾಹುವಿನ ಹೊರತು ಶಕ್ತಿಯಾಗಲೀ ಸಾಮರ್ಥ್ಯವಾಗಲೀ ಇಲ್ಲ.”
ಆಗ ಆ ವ್ಯಕ್ತಿಯೊಡನೆ ಹೇಳಲಾಗುವುದು: “ಇದು ನಿನಗೆ (ಎಲ್ಲದಕ್ಕೂ) ಸಾಕಾಗಿದೆ. ನಿನಗೆ ಮಾರ್ಗದರ್ಶನ ಮಾಡಲಾಗಿದೆ, ಎಲ್ಲವನ್ನೂ ನೀಡಲಾಗಿದೆ ಮತ್ತು (ಸಕಲ ಕೇಡುಗಳಿಂದಲೂ) ರಕ್ಷಿಸಲಾಗಿದೆ. ಆಗ ಅವನ ಬಳಿಯಿಂದ ಶೈತಾನ್ ಹೊರಟು ಹೋಗುವುದು ಮತ್ತು ಇನ್ನೊಂದು ಶೈತಾನ್‌ನೊಡನೆ ಅದು ಹೇಳುವುದು : ಮಾರ್ಗದರ್ಶನ ಮಾಡಲಾದ, ಎಲ್ಲವನ್ನೂ ನೀಡಲಾದ ಮತ್ತು (ಸಕಲ ಕೇಡುಗಳಿಂದಲೂ) ರಕ್ಷಿಸಲಾದ ಓರ್ವ ವ್ಯಕ್ತಿಯ ಬಳಿ ಹೇಗೆ ತಾನೇ ನೀನು ಸಮೀಪಿಸಲು ಸಾಧ್ಯ?
ಅಶ್ಶೈಖ್ ಅಬ್ದುರ್ರಝ್ಝಾಕ್ ಅಲ್-ಅಬ್ಬಾದ್ (حَفِظَهُ اللَّهُ) ಈ ಮೇಲಿನ ಹದೀಸ್ಅನ್ನು ವ್ಯಾಖ್ಯಾನಿಸುತ್ತಾ ಹೇಳಿದರು : “ಇದೊಂದು ಅನುಗ್ರಹಪೂರ್ಣವಾದ ದುಆ ಆಗಿದೆ, ಓರ್ವ ಮುಸ್ಲಿಮನು ತಾನು ಮನೆಯಿಂದ ಲೌಕಿಕ ಅಥವಾ ಧಾರ್ಮಿಕ ಕಾರ್ಯವನ್ನು ನಿರ್ವಹಿಸಲು ಹೊರಡುವಾಗ ಹೇಳಲು ಪ್ರಯೋಜನಕರವಾದುದಾಗಿದೆ. ತಾನು ಹೊರಗಿರುವಾಗ ರಕ್ಷೆಹೊಂದಲು, ತನ್ನ ಕಾರ್ಯಗಳನ್ನು ಪೂರ್ತೀಕರಿಸಲು ನೆರವಾಗಲು, ಮತ್ತು ತಾನು ಸಾಧಿಸಲು ಬಯಸುವುದರಲ್ಲಿ ಯಶಸ್ಸು ದೊರಕಲು ಈ ರೀತಿ ದುಆ ಮಾಡುವನು. ತನ್ನ ರಬ್ಬ್‌ನ ನೆರವಿಲ್ಲದೆ ಓರ್ವ ದಾಸನು ಒಂದು ಕಣ್ಣಿನ ಮಿಟುಕಿನಷ್ಟು ಸಮಯವೂ ಸ್ವಯಂ ಸಮೃದ್ಧನಾಗಿ ಬದುಕಲು ಸಾಧ್ಯವಿಲ್ಲ.
ಅವನಾಗಿರುವನು ಆತನ ರಕ್ಷಕನು, ಆತನಿಗೆ ನೆರವು ನೀಡುವವನು, ಯಶಸ್ಸು ನೀಡುವವನು ಮತ್ತು ಮಾರ್ಗದರ್ಶನ ಮಾಡುವವನು. ಓರ್ವ ದಾಸನು ಮಹೋನ್ನತನಾದ ಅಲ್ಲಾಹುವಿನೆಡೆಗೆ ಅವಲಂಬಿತನಾಗದೆ ಇವುಗಳಾವುದನ್ನೂ ಗಳಿಸಲಾರನು.
ಆದ್ದರಿಂದ ತನ್ನ ಮನೆಯಿಂದ ಹೊರಡುವವನು ತಾನು ತೆರಳುವ ದಾರಿಯುದ್ದಕ್ಕೂ ಮಾರ್ಗದರ್ಶನವನ್ನು ಪಡೆಯಲು, ಉದ್ದೇಶ ಹಾಗೂ ಬಯಕೆಗಳು ಈಡೇರಲು, ಸರ್ವ ಕೇಡು ಹಾಗೂ ಅಪಾಯಗಳಿಂದ ಸಂರಕ್ಷೆಯನ್ನು ಹೊಂದಲು ಈ ಅನುಗ್ರಹಪೂರ್ಣವಾದ ದುಆವನ್ನು ಹೇಳಲು ಪ್ರವಾದಿ (H) ಹೇಳಿಕೊಟ್ಟಿರುವರು.” (ಫಿಕ್ಹುಲ್ ಅದ್‍ಯಿಯ್ಯತಿ ವಲ್-ಅದ್‍ಕಾರ್ : 565)
9. ಉಮ್ಮ್ ಸಲಮಃ (J) ರಿಂದ ವರದಿ, ಅಲ್ಲಾಹುವಿನ ರಸೂಲ್ (H) ರವರು ತಮ್ಮ ಮನೆಯಿಂದ ಹೊರ ಹೋಗುವಾಗ ಯಾವಾಗಲೂ ಆಕಾಶದೆಡೆಗೆ ನೋಡುತ್ತಾ ಈ ರೀತಿ ಹೇಳುತ್ತಿದ್ದರು :
« اللَّهُمَّ أَعُوذُ بِكَ أَنْ أَضِلَّ، أَوْ أُضَلَّ، أَوْ أَزِلَّ، أَوْ أُزَلَّ، أَوْ أَظْلِمَ، أَوْ أُظْلَمَ، أَوْ أَجْهَلَ، أَوْ يُجْهَلَ عَلَيَّ »
“ಓ ಅಲ್ಲಾಹ್, ಪಥಭ್ರಷ್ಟನಾಗುವುದರಿಂದಲೂ ಅಥವಾ ಇನ್ನೋರ್ವನನ್ನು ಪಥಭ್ರಷ್ಟಗೊಳಿಸುವುದರಿಂದಲೂ, ತಪ್ಪುಕೃತ್ಯಗಳಿಗೆ ಒಳಗಾಗುವುದರಿಂದಲೂ ಅಥವಾ ಇನ್ನೋರ್ವನನ್ನು ತಪ್ಪುಕೃತ್ಯಗಳಿಗೆ ಒಳಗಾಗಿಸುವುದರಿಂದಲೂ, ಅಕ್ರಮವೆಸಗುವುದರಿಂದಲೂ ಅಥವಾ ಇನೋರ್ವನಿಂದ ಅಕ್ರಮಕ್ಕೊಳಗಾಗುವುದರಿಂದಲೂ, ಅಜ್ಞಾನದಿಂದ ವರ್ತಿಸುವುದರಿಂದಲೂ ಅಥವಾ ಇನ್ನೋರ್ವನಿಂದ ಅಜ್ಞಾನಕ್ಕೊಳಗಾಗುವುದರಿಂದಲೂ ನಾನು ನಿನ್ನಲ್ಲಿ ರಕ್ಷೆಯನ್ನು ಬೇಡುತ್ತಿದ್ದೇನೆ.” (ಸುನನ್ ಅಬೀ ದಾವುದ್ : 5094. ಅಶ್ಶೈಖ್ ಅಲ್ಬಾನೀ ತಮ್ಮ ಮಿಶ್ಕಾತ್ ಅಲ್-ಮಸಾಬೀಹ್ : 2442ರಲ್ಲಿ ಸಹೀಹ್ ಎಂದು ಧೃಡೀಕರಿಸಿರುವರು)
ಹಾಗೆಯೇ, ನಗರಗಳಿಗೆ ಪ್ರವೆಶಿಸುವುದಕ್ಕಿಂತಲೂ ಮುಂಚಿತವಾಗಿ ದುಆ ಮಾಡುವುದು ಆಜ್ಞಾಪಿಸಲ್ಪಟ್ಟ ಕಾರ್ಯವಾಗಿದೆ.
10. ಸುಹೈಬ್ (I) ರಿಂದ ವರದಿ : ಪ್ರವಾದಿ (H) ರವರು ತಾವು ಹೋಗಲು ಇಚ್ಚಿಸಿದ ನಗರಗಳನ್ನು ಪ್ರವೇಶಿಸುದಕ್ಕಿಂತಲೂ ಮುಂಚಿತವಾಗಿ ಯಾವಾಗಲೂ ಈ ರೀತಿ ಹೇಳುತ್ತಿದ್ದರು :
« اللَّهُمَّ رَبَّ السَّمَاوَاتِ السَّبْعِ وَمَا أَظْلَلْنَ، وَرَبَّ الْأَرَضِينَ السَّبْعِ وَمَا أَقْلَلْنَ، وَرَبَّ الرِّيَاحِ وَمَا ذَرَيْنَ، وَرَبَّ الشَّيَاطِينِ وَمَا أَضْلَلْنَ، نَسْأَلُكَ خَيْرَ هَذِهِ الْقَرْيَةِ وَخَيْرَ أَهْلِهَا، وَنَعُوذُ بِكَ مِنْ شَرِّهَا وَشَرِّ أَهْلِهَا وَشَرِّ مَا فِيهَا »
“ಓ ಅಲ್ಲಾಹ್, ಏಳು ಆಕಾಶಗಳು ಹಾಗೂ ಅವುಗಳು ಆವರಿಸಿಕೊಂಡಿರುವುದರ ರಬ್ಬ್ಆಗಿರುವವನೇ, ಏಳು ಭೂಮಿಗಳು ಹಾಗೂ ಅವುಗಳು ಒಳಗೊಂಡಿರುವುದರ ರಬ್ಬ್ಆಗಿರುವವನೇ, ಗಾಳಿ ಮತ್ತು ಅದೇನನ್ನು ಸಾಗಿಸುವುದೋ ಅದರ ರಬ್ಬ್ಆಗಿರುವವನೇ, ಶೈತಾನ್‌ಗಳು ಮತ್ತು ಅವುಗಳು ಯಾರನ್ನು ಪಥಭ್ರಷ್ಟಗೊಳಿಸುವುದೋ ಅವರೆಲ್ಲರ ರಬ್ಬ್ಆಗಿರುವವನೇ, ಈ ನಗರದ ಒಳಿತನ್ನು ಮತ್ತು ಅದರ ನಿವಾಸಿಗಳ ಒಳಿತನ್ನು ಹಾಗೂ ಅದಲ್ಲಿ ಅಡಕವಾಗಿರುವ ಎಲ್ಲಾ ಒಳಿತನ್ನು ನಿನ್ನೊಡನೆ ನಾವು ಯಾಚಿಸುತ್ತೇವೆ. ಈ ನಗರದ ಕೆಡುಕಿನಿಂದ ಇದರ ನಿವಾಸಿಗಳ ಕೆಡುಕಿನಿಂದ ಹಾಗೂ ಇದರಲ್ಲಿ ಅಡಕವಾಗಿರುವ ಎಲ್ಲಾ ಕೆಡುಕುಗಳಿಂದಲೂ ನಿನ್ನಲ್ಲಿ ನಾವು ರಕ್ಷೆಯನ್ನು ಬೇಡುತ್ತೇವೆ.” (ಸಹೀಹ್ ಇಬ್ನ್ ಹಿಬ್ಬಾನ್ : 2709. ಅಶ್ಶೈಖ್ ಅಲ್ಬಾನೀ ತಮ್ಮ ಸಹೀಹ್ ಇಬ್ನ್ ಹಿಬಾನ್ : 2565ನಲ್ಲಿ ಇದನ್ನು “ಹಸನ್” ಎಂದು ಉಲ್ಲೇಖಿಸಿರುವರು)
ಮುಂದುವರಿದು, ತಮ್ಮ ಮಕ್ಕಳಿಗಾಗಿ ಅಲ್ಲಾಹುವಿನ ರಕ್ಷೆಗೆಂದು ದುಆ ಮಾಡುವುದು ಆಜ್ಞಾಪಿಸಲ್ಪಟ್ಟ ಹಾಗೂ ಅತೀ ಉತ್ತೇಜನೀಯವಾದ ಕಾರ್ಯವಾಗಿದೆ.
11. ಇಬ್ನ್ ಅಬ್ಬಾಸ್ (I) ರಿಂದ ವರದಿ : ಪ್ರವಾದಿ (H) ರವರು ಅಲ್-ಹಸನ್ ಮತ್ತು ಅಲ್-ಹುಸೈನ್ (L) ರವರ ರಕ್ಷೆಗಾಗಿ ದುಆ ಮಾಡುತ್ತಿದ್ದರು. ಅವರು ಹೇಳುತ್ತಿದ್ದರು : “ಖಂಡಿತವಾಗಿಯೂ ನಿಮ್ಮ ತಂದೆ (ಅರ್ಥಾತ್ ಪ್ರವಾದಿ ಇಬ್ರಾಹೀಮ್ S) ತಮ್ಮ ಪುತ್ರರಾದ ಇಸ್ಮಾಈಲ್ ಹಾಗೂ ಇಸ್‌ಹಾಕ್‌ರನ್ನು (Q) ಸಂರಕ್ಷಿಸುವಂತೆ ದುಆ ಮಾಡುತ್ತಿದ್ದರು. (ಅವರು ಹೇಳುತ್ತಿದ್ದರು):
« أَعُوذُ بِكَلِمَاتِ اللهِ التَّامَّةِ مِنْ كُلِّ شَيْطَانٍ وَهَامَّةٍ وَمِنْ كُلِّ عَيْنٍ لَامَّةٍ »
“ನಾನು ಅಲ್ಲಾಹುವಿನ ಪರಿಪೂರ್ಣ ವಚನಗಳೊಂದಿಗೆ ಎಲ್ಲಾ ಶೈತಾನ್‌ಗಳಿಂದಲೂ, ಸಕಲ ವಿಷಪೂರಿತ ಸೃಷ್ಠಿಗಳಿಂದಲೂ ಹಾಗೂ ಪ್ರತಿಯೊಂದು (ಹಾನಿಯನ್ನುಂಟು ಮಾಡುವ ಹಾಗೂ ಕೆಟ್ಟ ಪರಿಣಾಮ ಬೀರುವ) ಕಣ್ಣುದೃಷ್ಟಿಯಿಂದಲೂ ರಕ್ಷಣೆಯನ್ನು ಬೇಡುತ್ತಿರುವೆನು.” (ಸಹೀಹ್ ಅಲ್-ಬುಖಾರಿ : 3371)
ವಿಪತ್ತು ಹಾಗೂ ಸಂಕಷ್ಟಗಳಿಂದಾಗಿ ಈಮಾನ್ ಅಧಿಕವಾಗುವುದು...
ನಮ್ಮ ಪ್ರೀತಿಯ ಸಹೋದರ ಹಾಗೂ ಸಹೋದರಿಯರಿಗೆ ಇದನ್ನು ನೆನಪಿಸುವುದು ಅತ್ಯಗತ್ಯವಾಗಿದೆ ಅದೇನೆಂದರೆ, ಒಂದುವೇಳೆ ಅಲ್ಲಾಹು ಅವರನ್ನು (ಅರ್ಥಾತ್ ಮುಸ್ಲಿಮರನ್ನು) ಸತ್ಯನಿಷೇಧಿಗಳ ಮೂಲಕ ದಬ್ಬಾಳಿಕೆಯಿಂದ ಪರೀಕ್ಷಿಸಿದರೆ, ಅವರು ಅಲ್ಲಾಹುವಿನೆಡೆಗೆ ಮರಳಿ ಅವನಲ್ಲಿ ಕ್ಷಮೆ ಮತ್ತು ರಕ್ಷಣೆಯನ್ನು ಯಾಚಿಸಬೇಕಾಗಿದೆ. ನಮಗಿಂತಲೂ ಮುಂಚೆ ಬಂದ ಮುಸ್ಲಿಮರೂ ಕೂಡ ಹೀಗೆಯೇ ನಾನಾ ರೀತಿಯ ದ್ವೇಷಪೂರಿತ ದಮನ ಹಾಗೂ ದಬ್ಬಾಳಿಕೆಗಳಿಗೆ ಒಳಗಾಗಿದ್ದರು ಎಂಬುದನ್ನು ನಾವು ಅರಿತುಕೊಳ್ಳಬೇಕಾಗಿದೆ, ಆದರೆ ಅದು ಅವರ ಈಮಾನ್ ಅನ್ನು ದುರ್ಬಲಗೊಳಿಸಲಿಲ್ಲ, ಬದಲಾಗಿ ಅದು ಅವರ ಈಮಾನ್ಅನ್ನು ಅಧಿಕಗೊಳಿಸಿತು ಮತ್ತು ಅಲ್ಲಾಹುವಿನ ಮೇಲೆ ವಿಶ್ವಾಸ ಹಾಗೂ ಅವಲಂಬನೆಯನ್ನು ಸಧೃಡಗೊಳಿಸಿತು.
ಮಹೋನ್ನತನಾದ ಅಲ್ಲಾಹು ತನ್ನ ಆಧರಣೀಯ ಗ್ರಂಥದಲ್ಲಿ ನಮಗೆ ತಿಳಿಯಪಡಿಸುತ್ತಾ ಇದನ್ನು ಉಲ್ಲೇಖಿಸಿರುವನು, ಯಾವಾಗ ಸತ್ಯವಿಶ್ವಾಸಿಗಳು (ಮಕ್ಕಾದಿಂದ) ಮದೀನಃಕ್ಕೆ ವಲಸೆ ಹೋದರೋ ಆಗ ಮಕ್ಕಾದ ಹಲವಾರು ಗೋತ್ರದ ಜನರು ಒಂದಾಗಿ ಅವರ ವಿರುದ್ಧ ಯುದ್ಧಮಾಡಲು ಮದೀನಃದೆಡೆಗೆ ಬರುತ್ತಿರುವರೆಂದು ತಿಳಿಸಲಾಯಿತು.
ಅಲ್ಲಾಹು (E) ಹೇಳಿದನು :
﴿ٱلَّذِينَ قَالَ لَهُمُ ٱلنَّاسُ إِنَّ ٱلنَّاسَ قَدۡ جَمَعُواْ لَكُمۡ فَٱخۡشَوۡهُمۡ فَزَادَهُمۡ إِيمَٰنٗا وَقَالُواْ حَسۡبُنَا ٱللَّهُ وَنِعۡمَ ٱلۡوَكِيلُ ١٧٣﴾
“ಯಾರೊಡನೆ (ಅರ್ಥಾತ್ ಸತ್ಯವಿಶ್ವಾಸಿಗಳೊಂದಿಗೆ, ಕಪಟವಿಶ್ವಾಸಿಗಳಾದ) ಜನರು (ಸತ್ಯವಿಶ್ವಾಸಿಗಳನ್ನು ಭಯಭೀತರನ್ನಾಗಿಸುವ ಸಲುವಾಗಿ) ಹೇಳಿದರೋ : “ಖಂಡಿತವಾಗಿಯೂ, ನಿಮ್ಮ ವಿರುದ್ಧ ಯುದ್ಧಮಾಡಲು (ಮಕ್ಕಾದ ಶತ್ತ್ರುಗಳಾದ) ಜನರು ಒಂದುಸೇರಿರುವರು, ಆದ್ದರಿಂದ ಅವರನ್ನು ಭಯಪಡಿರಿ. ಆದರೆ ಅದು (ಕಪಟವಿಶ್ವಾಸಿಗಳ ಬೆದರಿಕೆಯು) ಅವರ (ಸತ್ಯವಿಶ್ವಾಸಿಗಳ) ಈಮಾನ್ಅನ್ನು ಮತ್ತಷ್ಟು ಅಧಿಕಗೊಳಿಸಿತು, ಮತ್ತು ಅವರು ಹೇಳಿದರು : “(ರಕ್ಷಕನಾಗಿ) ನಮಗೆ ಅಲ್ಲಾಹು ಸಾಕು, ಮತ್ತು ಭರವಸೆಯಿಡಲು ಅವನೇ ಅತ್ಯುತ್ತಮನು.” (ಸೂರಃ ಆಲು-ಇಮ್ರಾನ್ : 173)
ಅಶ್ಶೈಖ್ ಮುಹಮ್ಮದ್ ಬಿನ್ ಸಾಲಿಹ್ ಅಲ್-ಉಸೈಮೀನ್ (V) ಹೇಳಿದರು : “ಇದೇಕೆಂದರೆ, ವಿಪತ್ತಿನ ಸಂದರ್ಭಗಳಲ್ಲಿ ಮುಅ್‌ಮಿನ್‌ಗಳು (ಸತ್ಯವಿಶ್ವಾಸಿಗಳು) ಈಮಾನ್‌ನಲ್ಲಿ ಅಧಿಕವಾಗುವರು. ಇದಕ್ಕಿರುವ ಇನ್ನೊಂದು ಉದಾಹರಣೆಯು: ಯಾವಾಗ (ಸತ್ಯನಿಷೇಧಿಗಳ) ಗೋತ್ರದವರು ಮದೀನಃ ನಗರವನ್ನು ಆಕ್ರಮಿಸಲು ಸುತ್ತುವರಿದರೋ, ಆಗ ಸತ್ಯವಿಶ್ವಾಸಿಗಳು ಹೇಳಿದರು :
﴿هَٰذَا مَا وَعَدَنَا ٱللَّهُ وَرَسُولُهُۥ وَصَدَقَ ٱللَّهُ وَرَسُولُهُۥۚ وَمَا زَادَهُمۡ إِلَّآ إِيمَٰنٗا وَتَسۡلِيمٗا ٢٢﴾
“ಇದನ್ನೇ ಆಗಿದೆ ಅಲ್ಲಾಹು ಮತ್ತು ಅವನ ಸಂದೇಶವಾಹಕರು ನಮಗೆ ವಾಗ್ದಾನಮಾಡಿರುವುದು, ಅಲ್ಲಾಹು ಮತ್ತು ಅವನ ಸಂದೇಶವಾಹಕರು ಸತ್ಯವನ್ನೇ ನುಡಿದಿದ್ದಾರೆ. ಮತ್ತು ಇದು ಅವರ ಈಮಾನ್ ಮತ್ತು ವಿಧೇಯತೆಯನ್ನು ಇನ್ನಷ್ಟು ಅಧಿಕಗೊಳಿಸಿತು.” (ಸೂರಃ ಅಹ್‌ಝಾಬ್ : 22)
ಈ ಮೇಲಿನ ಆಯತ್‌ನ ಪ್ರಯೋಜನಗಳನ್ನು ಉಲ್ಲೇಖಿಸುತ್ತಾ ಮುಂದುವರಿದು ಅಶ್ಶೈಖ್ ಸಾಲಿಹ್ ಅಲ್-ಉಸೈಮೀನ್ (V) ಹೇಳುತ್ತಾರೆ :
“ಸತ್ಯವಿಶ್ವಾಸಿಯೋರ್ವನಿಗೆ ಯಾವಾಗ ವಿಪತ್ತು ಅಧಿಕವಾಗುವುದೋ ಹಾಗೂ ಹೆಚ್ಚು ಕಷ್ಟಕರವಾಗಿ ಮಾರ್ಪಡುವುದೋ ಆಗ ಅವನು ತನ್ನ ರಬ್ಬ್‌ನೆಡೆಗೆ ಮರಳುವನು (ಅವಲಂಬಿಸುವನು) ಮತ್ತು ಅವನಲ್ಲಿ ತನ್ನ ಈಮಾನ್ಅನ್ನು ಇನ್ನಷ್ಟು ಅಧಿಕಗೊಳಿಸುವನು ಎಂಬುದು ಈ ಆಯತ್‌ನ ವಿವರಣೆಯಾಗಿದೆ. (ತಫ್ಸೀರ್ ಅಲ್-ಕುರ್‌ಆನ್ ಅಲ್-ಕರೀಮ್ : ಸೂರಃ ಆಲ್-ಇಮ್ರಾನ್ ಸಂಪುಟ : 2 – ಪುಟ : 447-449)
ಕೊನೆಯ ಮಾತು
ಈ ಮೇಲಿನ ಆಯತ್‌ಗಳು, (ಹದೀಸ್) ವರದಿಗಳು ಮತ್ತು ಉಲಮಾಗಳ ವಿವರಣೆಗಳು ಈ ವಿಷಯದ ಕುರಿತು ಉಲ್ಲೇಖಿಸಬಹುದಾದ ಕೇವಲ ಕೆಲವು ವಿಚಾರಗಳಾಗಿವೆ. ನಮ್ಮ ಮುಸ್ಲಿಮ್ ಸಹೋದರ ಹಾಗೂ ಸಹೋದರಿಯರನ್ನು ಎಲ್ಲಾ ರೀತಿಯ ಧಾರ್ಮಿಕ ಹಾಗೂ ದೈಹಿಕವಾದ ಅಪಾಯಗಳಿಂದ ಸಂರಕ್ಷಿಸುವಂತೆ ಮಹೋನ್ನತನಾದ ಅಲ್ಲಾಹುವಿನಲ್ಲಿ ನಾವು ಪ್ರಾರ್ಥಿಸುತ್ತೇವೆ.
-ಇತೀ ತಮ್ಮ ಸಹೋದರ,
ಮುಸ್ತಫಾ ಜಾರ್ಜ್ ಡಿ-ಬೆರ್ರೀ ~ ರಿಯಾದ್, ಸೌದಿ ಅರೇಬಿಯಾ.
(ಇವರು ಇತ್ತೀಚಗೆ ನಿಧನರಾದ ಸೌದಿ ಅರೇಬಿಯಾದ ಅಗ್ರಗಣ್ಯ ವಿದ್ವಾಂಸರಾಗಿರುವ ಅಶ್ಶೈಖ್ ಸಾಲಿಹ್ ಅಲ್-ಲುಹೈದಾನ್ V ರವರ ನಿಕಟ ಶಿಷ್ಯರಾಗಿರುತ್ತಾರೆ).
ಅನುವಾದ : ಅಬೂ ಹಮ್ಮಾದ್
ಹೆಚ್ಚಿನ ಓದಿಗಾಗಿ :
ಮುಂಜಾನೆ ಮತ್ತು ಸಂಜೆಯ ದಿಕ್ರ್‌ಗಳು ಹಾಗೂ ಅದರ ಶ್ರೇಷ್ಠತೆಗಳು -ಅಬೂ ತಲ್‍ಹಾ ದಾವೂದ್ ಬರ್‌ಬ್ಯಾಂಕ್ (V)
ನಮ್ಮ ಪ್ರಾರ್ಥನೆಗಳಿಗೇಕೆ ಉತ್ತರ ಲಭಿಸುತ್ತಿಲ್ಲ? -ಇಮಾಮ್ ಇಬ್ರಾಹೀಮ್ ಬಿನ್ ಅದ್‍ಹಮ್ (V)
ದುಆಗಳಿಗೆ ಉತ್ತರ ಲಭಿಸುವ ಸಮಯಗಳು -ಅಲ್ಲಾಮಃ ಅಶ್ಶೈಖ್ ಉಬೈದ್ ಅಲ್-ಜಾಬಿರೀ (حَفِظَهُ اللَّهُ)