w
ದುಬೈ (ಯು.ಎ.ಇ)ಯ ವಿದ್ವಾಂಸರಾದ ಅಶ್ಶೈಖ್ ಮುಹಮ್ಮದ್ ಬಿನ್ ಘಾಲಿಬ್ ಅಲ್-ಉಮರೀ (حَفِظَهُ اللَّهُ) ರವರು ಹೇಳಿದರು :
ಖಂಡಿತವಾಗಿಯೂ, ತನ್ನ ಸಹೋದರಿಗೆ ಉಡುಗೊರೆಯನ್ನು ನೀಡುವ ಮೂಲಕ ಆದರಿಸುವುದು ಹಾಗೂ ಉಪಕಾರವನ್ನು ಮಾಡುವ ಮೂಲಕ ಸ್ನೇಹದ ಸಂಬಂಧವನ್ನು ಬೆಳೆಸುವುದು. ಇದು (ಅವಳ) ಹೃದಯವನ್ನು ವಿಶಾಲಗೊಳಿಸುವ, ಎರಡು ಹೃದಯಗಳನ್ನು ಪರಸ್ಪರ ಬೆಸೆಯುವ, ಹಾಗೂ ಅಣ್ಣ ತಂಗಿಯ ಮಧ್ಯೆ ಪ್ರೀತಿಯನ್ನು ಬೆಳೆಸುವ ಪ್ರಮುಖ ಕಾರ್ಯವಾಗಿದೆ.
ಅವುಗಳೆಡೆಗೆ ಆಹ್ವಾನ ನೀಡುತ್ತಾ ಅಲ್ಲಾಹುವಿನ ರಸೂಲ್ (H) ಹೇಳಿದರು :
“ದಾನ ನೀಡುವ ಕೈ (ದಾನ ಪಡೆಯುವ ಕೈಗಿಂತ) ಶ್ರೇಷ್ಟವಾಗಿದೆ. ನೀನು ಯಾರಿಗೆ ಆಸರೆಯ ಹೊಣೆಗಾರಿಕೆಯನ್ನು ಹೊಂದಿರುವೆಯೋ – ನಿನ್ನ ತಾಯಿ, ನಿನ್ನ ತಂದೆ, ನಿನ್ನ ಸಹೋದರಿ, ನಿನ್ನ ಸಹೋದರ, ತದನಂತರ ನಿನ್ನ ಹತ್ತಿರದ ಸಂಬಂಧಿಕರು ಹಾಗೂ ಆ ನಂತರ (ದೂರದ) ಸಂಬಂಧಿಕರು- ಅವರಿಂದ ಪ್ರಾರಂಭಿಸು.” (ಸುನನ್ ಅನ್-ನಸಾಈ)
ಪ್ರವಾದಿ (H) ರವರು ತಂದೆ ಮತ್ತು ತಾಯಿಯ ಬಳಿಕ ಸಹೋದರಿಯನ್ನು ಉಲ್ಲೇಖಿಸಿರುವರು. ಸಹೋದರಿಯ ಪೋಷಣೆ ಮತ್ತು ಜವಾಬ್ದಾರಿಯನ್ನು ಹೊರಲು ಹಾಗೂ ಅವಳಿಗೆ ಆಸರೆಯಾಗಿರಲು ಅವರು (H) ನಮ್ಮನ್ನು ಪ್ರೇರೇಪಿಸಿರುವರು.
ಅವರು (H) ಪ್ರೀತಿ ಮತ್ತು ವಾತ್ಸಲ್ಯದ ಮೂಲಕ ಅವಳಿಗೆ ಮಗಳ ಸ್ಥಾನವನ್ನು ನೀಡಿರುವರು. ಪ್ರವಾದಿ (H) ಹದೀಸಿನಲ್ಲಿ ಹೇಳಿರುವರು :
“ಯಾರು ತನ್ನ ಎರಡು ಹೆಣ್ಣು ಮಕ್ಕಳನ್ನು ಅಥವಾ ಮೂರು ಹೆಣ್ಣು ಮಕ್ಕಳನ್ನು ಅಥವಾ ಇಬ್ಬರು ಸಹೋದರಿಯನ್ನು ಅಥವಾ ಮೂವರು ಸಹೋದರಿಯನ್ನು, ಅವರು ವಿವಾಹವಾಗುವ ತನಕ ಅಥವಾ ಅವರಿಗಿಂತ ಮೊದಲು ತಾನು ಮರಣಹೊಂದುವ ತನಕ (ಅವರ ಮೇಲೆ ಕಾಳಜಿ ವಹಿಸಿ) ಪೋಷಿಸುತ್ತಾನೋ, ನಾನು ಮತ್ತು ಅವನು (ಪೋಷಿಸಿದವನು) ಈ ರೀತಿ ಜೊತೆಗಿರುವೆವು.” ಅಂದರೆ ಸ್ವರ್ಗದಲ್ಲಿ ಜೊತೆಗಿರುವೆವು. ಅವರು ತನ್ನ ನಡುಬೆರಳು ಹಾಗೂ ತೋರುಬೆರಳನ್ನು (ಜೋಡಿಸಿ) ಸನ್ನೆ ಮಾಡಿದರು.” (ಮುಸ್ನದ್ ಅಹ್ಮದ್)
ಇದರಿಂದಾಗಿ ಅವನು ಸ್ವರ್ಗದ ಅತ್ಯುನ್ನತವಾದ ದರ್ಜೆಗಳಲ್ಲಿ ನೆಲೆಸುವನು ಹಾಗೂ ಅಲ್ಲಿ ಅವನು ಅಲ್ಲಾಹುವಿನ ರಸೂಲ್ (H) ರವರ ಜತೆಯಲ್ಲಿರುವವರು.
ತನ್ನ ಸಹೋದರಿಯೊಂದಿಗೆ ತೋರುವ ಒಳಿತಿನ ಪೈಕಿಯಿರುವ ಮುಖ್ಯ ಅಂಶವೇನೆಂದರೆ :
ಅವಳಿಗೆ (ಸಂಕಷ್ಟದಲ್ಲಿ) ಜೊತೆಯಾಗಿ ನಿಲ್ಲುವುದು. ಅವಳ ಸಂದಿಗ್ಧ ಸ್ಥಿತಿಯಲ್ಲಿ (ವಿಷಮ ಸ್ಥಿತಿಯಲ್ಲಿ) ಆಸರೆಯಾಗಿ ನೆರವಾಗುವುದು ಹಾಗೂ ಅವಳ ಸಮಸ್ಯೆಗಳನ್ನು ಪರಿಹರಿಸಲು ಶ್ರಮಿಸುವುದು.
ಈ ಕಾರಣದಿಂದ ಅವಳು ತನ್ನ ಬಲಹೀನತೆಯ ವೇಳೆ ಅವಳ ಸಹೋದರನಿಂದ (ಅವನ ಉಪಸ್ಥಿತಿಯಿಂದ) ಬಲಿಷ್ಠಗೊಳ್ಳುವಳು ಹಾಗೂ ಅವಳು (ಸಮಸ್ಯೆಗಳನ್ನು ಹಿಮ್ಮೆಟ್ಟಿಕೊಂಡು) ತಲೆಯೆತ್ತಿ ನಿಲ್ಲುವಳು.
ಇನ್ನು ಯಾರಿಗಾದರೂ ತನ್ನ ಸಹೋದರಿಯು ತೀರಿಕೊಂಡಿದ್ದರೆ ಹಾಗೂ ತನ್ನ ರಬ್ಬ್’ನೆಡೆಗೆ (ಬದುಕಿನ ಪಯಣ ಮುಗಿಸಿ) ಮರಳಿದ್ದರೆ, ಅವಳ ಮರಣದ ಬಳಿಕವೂ ಅವಳೊಂದಿಗಿರುವ (ಕುಟುಂಬ) ಸಂಬಂಧವು ಮುಂದುವರಿಯುತ್ತದೆ.
(ಅದು) ಅವಳ ಮಕ್ಕಳನ್ನು ಸಂದರ್ಶಿಸುವ ಮೂಲಕ, ಅವಳ ಪತಿಯೊಂದಿಗೆ (ಕುಟುಂಬ) ಸಂಬಂಧವನ್ನು ಮುಂದುವರಿಸುವ ಮೂಲಕ, ಅವಳಿಗಾಗಿ ದುಆ ಮಾಡುವ ಮೂಲಕ, ಅವಳ ಸಾಲಗಳನ್ನು ತೀರಿಸುವ ಮೂಲಕ ಹಾಗೂ ಅವಳ ಹರಕೆಗಳನ್ನು ನೆರವೇರಿಸುವ ಮೂಲಕವಾಗಿದೆ.
ಇಬ್ನ್ ಅಬ್ಬಾಸ್ (L) ರಿಂದ ವರದಿ, ಅವರು ಹೇಳಿದರು :
“ಓರ್ವ ವ್ಯಕ್ತಿಯು ಪ್ರವಾದಿ (H) ರವರ ಬಳಿ ಬಂದು ಅವರೊಂದಿಗೆ ಹೇಳಿದರು, “ನನ್ನ ಸಹೋದರಿಯು ಹಜ್ಜ್ ನಿರ್ವಹಿಸುವ ಹರಕೆಯನ್ನು ಹೊತ್ತುಕೊಂಡಿದ್ದಳು ಆದರೆ (ಅದನ್ನು ನೆರವೇರಿಸುವ ಮುನ್ನವೇ) ಅವಳು ತೀರಿಕೊಂಡಿದ್ದಾಳೆ. ಆಗ ಪ್ರವಾದಿ (H) ಹೇಳಿದರು, “ಒಂದು ವೇಳೆ ಅವಳಿಗೆ ಸಾಲ ತೀರಿಸಲು ಬಾಕಿಯಿದ್ದರೆ (ಅವಳಿಗಾಗಿ) ನೀನು ಅದನ್ನು ಸಂದಾಯ ಮಾಡುತ್ತಿದ್ದೆ ಅಲ್ಲವೇ? ಆ ವ್ಯಕ್ತಿ “ಹೌದೆಂದು” ಉತ್ತರಿಸಿದನು, ಪ್ರವಾದಿ (H) ಹೇಳಿದರು, “ಹಾಗಾದರೆ ಅಲ್ಲಾಹುವಿನ ಹಕ್ಕನ್ನು (ಅವಳು ಹಜ್ಜ್ ನಿರ್ವಹಿಸುವ ಹರಕೆಯನ್ನು) ನೀನು ಸಂದಾಯ ಮಾಡು (ನೆರವೇರಿಸು), ಯಾಕೆಂದರೆ ತನ್ನ ಹಕ್ಕಗಳನ್ನು ಪಡೆಯಲು ಅವನು (ಅಲ್ಲಾಹು) ಹೆಚ್ಚು ಅರ್ಹನಾಗಿರುತ್ತಾನೆ.” (ಸಹೀಹ್ ಅಲ್-ಬುಖಾರಿ)
ಆದ್ದರಿಂದ ಯಾರು ಈ ಬಗ್ಗೆ ಗಮನ ಹರಿಸುವನೋ, ಅವನಿಗೆ ಇಹ ಮತ್ತು ಪರಲೋಕದಲ್ಲಿ ಅಲ್ಲಾಹು ಮನ್ನಣೆಯನ್ನು ನೀಡುವನು.
ಜಗದೊಡೆಯನಾದ ಅಲ್ಲಾಹುವೇ, ರಕ್ತ (ಕುಟುಂಬ) ಸಂಬಂಧವನ್ನು ಜೋಡಿಸಲು, ನಮ್ಮ ಅಕ್ಕ ತಂಗಿಯರಿಗೆ (ಸಹೋದರಿಯರಿಗೆ) ಒಳಿತನ್ನು ಮಾಡಲು ಹಾಗೂ ನಮ್ಮ ಪರಿಸ್ಥಿತಿಗಳನ್ನು ಸುಧಾರಿಸಲು ನಮಗೆ ನೀನು ಅನುಗ್ರಹಿಸು.
“ನಿಮ್ಮ ಸಹೋದರಿಯು ನಡೆದುಕೊಳ್ಳುತ್ತಾ ಬಂದು (ಫಿರ್’ಔನ್ ಮತ್ತು ಅವನ ಜನರೊಡನೆ) “ಈತನ (ಪ್ರವಾದಿ ಮೂಸ S ರವರ) ಪೋಷಣೆ ವಹಿಸುವ ಒಬ್ಬರ ಬಗ್ಗೆ ನಾನು ನಿಮಗೆ ತೋರಿಸಿಕೊಡಲೇ? ಎಂದು ಅವಳು ಕೇಳಿದ ಸಂದರ್ಭ. ಹೀಗೆ ನಾವು ಮತ್ತೆ ನಿಮ್ಮನ್ನು ನಿಮ್ಮ ತಾಯಿಯ ಬಳಿಗೆ ಆಕೆಯ ಕಣ್ತಣಿಸಲು ಮತ್ತು ಆಕೆಯು ದುಃಖಿಸದಿರಲು (ಆಕೆಯೆಡೆಗೆ) ಮರಳಿಸಿದೆವು.” (ಕುರ್‌ಆನ್ 20 : 40).