w
“ತನ್ನ ಎಲ್ಲಾ ಸೃಷ್ಟಿಗಳ ಮೇಲೆ ಅತ್ಯಂತ ದಯೆವುಳ್ಳವನೂ, ತನ್ನ ಸತ್ಯ ವಿಶ್ವಾಸಿಗಳಾದ ದಾಸರ ಮೇಲೆ ಸದಾ ಕರುಣೆತೋರುವವನೂ ಆದ ಅಲ್ಲಾಹುವಿನ ನಾಮದಿಂದ.”
ಅಲ್-ಇಮಾಮ್ ಇಬ್ನುಲ್ ಕಯ್ಯಿಮ್ (V) ಹೇಳಿದರು :
ಅಲ್ಲಾಹುವಿನ ಪ್ರೀತಿಗೆ ಕಾರಣವಾಗುವ ಕಾರ್ಯಗಳು ಹತ್ತಾಗಿವೆ, ಅವುಗಳೆಂದರೆ:
ಒಂದನೆಯದು: ಕುರ್‌ಆನ್ ಅನ್ನು ಓದುವುದು, ಅದರ ಅರ್ಥ ಹಾಗೂ ಉದ್ದೇಶಗಳನ್ನು ಅರಿತುಕೊಂಡು ಆಲೋಚನೆ ನಡೆಸುವುದು.
ಎರಡನೆಯದು: ಕಡ್ಡಾಯ ಕರ್ಮಗಳನ್ನು ನೆರವೇರಿಸಿದ ಬಳಿಕ ನವಾಫಿಲ್ (ಐಚ್ಛಿಕವಾದ) ಕರ್ಮಗಳನ್ನು ನಿರ್ವಹಿಸುವುದು.
ಮೂರನೆಯದು: ಎಲ್ಲಾ ಸಂದರ್ಭದಲ್ಲೂ ಅಲ್ಲಾಹುವನ್ನು ನಿರಂತರವಾಗಿ (ದಿಕ್ರ್‌ಗಳನ್ನು ಹೇಳುವ ಮೂಲಕ) ನಾಲಿಗೆಯಿಂದಲೂ, (ನೆನೆದುಕೊಳ್ಳುವ ಮೂಲಕ) ಹೃದಯದಿಂದಲೂ ಹಾಗೂ (ಕರ್ಮವೆಸಗುವ ಮೂಲಕ) ಅಂಗಾಗಗಳಿಂದಲೂ ಸ್ಮರಿಸುವುದು. ಸ್ಮರಣೆ ಅಥವಾ ದಿಕ್ರ್ ಎಷ್ಟು ಹೆಚ್ಚುತ್ತದೆಯೋ ಅಷ್ಟರ ಮಟ್ಟಿಗೆ ಅಲ್ಲಾಹುವಿನ ಪ್ರೀತಿಯೂ ಹೆಚ್ಚಾಗುವುದು.
ನಾಲ್ಕನೆಯದು: ದೇಹೇಚ್ಛೆಗಳು ಆವರಿಸಿಕೊಂಡಾಗ, ತಮ್ಮ ಸ್ವಂತ ಇಷ್ಟಗಳ ಮೇಲೆ ಅಲ್ಲಾಹುವಿನ ಇಷ್ಟಗಳಿಗೆ ಪ್ರಾಧಾನ್ಯತೆ ನೀಡುವುದು ಹಾಗೂ ಅವನು ಇಷ್ಟಪಡುವ ಕಾರ್ಯಗಳನ್ನು ನಿರ್ವಹಿಸುವುದು, ಅದು ನಿರ್ವಹಿಸಲು ತನಗೆ ಕಷ್ಟವಾದರೂ ಸರಿ.
ಐದನೆಯದು: ಅಲ್ಲಾಹುವಿನ ಹೆಸರುಗಳು ಹಾಗೂ ಗುಣವಿಶೇಷಣೆಗಳ ಕುರಿತು ತಿಳಿದುಕೊಳ್ಳುವುದು ಹಾಗೂ ಆ ಕುರಿತು ಆಲೋಚನೆ ನಡೆಸುವುದು.
ಆರನೆಯದು: ಅಲ್ಲಾಹು ನೀಡಿರುವ -ಪ್ರತ್ಯಕ್ಷ ಅಥವಾ ಪರೋಕ್ಷವಾಗಿರುವ -ಎಲ್ಲಾ ಅನುಗ್ರಹಗಳನ್ನು ಗುರುತಿಸುವುದು ಹಾಗೂ ಅದನ್ನು ನೆನಪಿಸಿಕೊಳ್ಳುವುದು.
ಏಳನೆಯದು: ಅಲ್ಲಾಹುವಿನ ಮುಂದೆ ವಿನಮ್ರತೆಯಿಂದ ಪೂರ್ಣವಾಗಿ ವಿಧೇಯರಾಗುವುದು. ಇದು ಅತ್ಯಂತ ದೊಡ್ಡ ಕಾರ್ಯವಾಗಿದೆ.
ಎಂಟನೆಯದು: ಅಲ್ಲಾಹು ಅತ್ಯಂತ ಕೆಳಗಿನ ಆಕಾಶಕ್ಕೆ ಇಳಿದುಬರುವ ಸಂದರ್ಭದಲ್ಲಿ (ಅರ್ಥಾತ್ ರಾತ್ರಿಯ ಕೊನೆಯ ಅವಧಿಯಲ್ಲಿ) ಕುರ್‌ಆನ್ ಓದುವುದರಲ್ಲಿ ತಲ್ಲೀನರಾಗುವುದು, ಓದಿ ಮುಗಿಸುವ ವೇಳೆ ಅಲ್ಲಾಹುವಿನಲ್ಲಿ ತಪ್ಪಿಗಾಗಿ ಕ್ಷಮೆಯಾಚಿಸುವುದು ಹಾಗೂ ಪಶ್ಚಾತಾಪ ಬೇಡುವುದು.
ಒಂಭತ್ತನೆಯದು: ನೈಜ ಹಾಗೂ ಪ್ರಾಮಾಣಿಕವಾಗಿ ಅಲ್ಲಾಹುವನ್ನು ಪ್ರೀತಿಸುವ ಜನರೊಂದಿಗೆ ಕುಳಿತುಕೊಳ್ಳುವುದು, ಅವರ ಮಾತುಗಳಿಂದ ಪ್ರಯೋಜನವನ್ನು ಪಡೆಯುವುದು. ತನ್ನ ಮಾತುಗಳಿಂದ ತನಗೆ ಹಾಗೂ ಇತರರಿಗೆ ಏನಾದರೂ ಪ್ರಯೋಜನವಾಗುವುದು ಎಂದು ಖಚಿತವಾಗಿದ್ದರೆ ಮಾತ್ರವೇ ಮಾತನಾಡುವುದು, ಇಲ್ಲದಿದ್ದರೆ ಮೌನವಹಿಸುವುದು.
ಹತ್ತನೆಯದು: ಹೃದಯವನ್ನು ಅಲ್ಲಾಹುವಿನಿಂದ ದೂರೀಕರಿಸುವ ಎಲ್ಲಾ ಮಾರ್ಗಗಳಿಂದಲೂ ಸಂಪೂರ್ಣವಾಗಿ ಮುಕ್ತವಾಗುವುದು.
[ಮೂಲ : ಮದಾರಿಜ್ ಅಸ್ಸಾಲಿಕೀನ್ 3:18]
ಅನುವಾದ : ಅಬೂ ಹಮ್ಮಾದ್
ಹೆಚ್ಚಿನ ಓದಿಗಾಗಿ :
ಇಬಾದತ್ (ಅಥವಾ ಆರಾಧನೆ) ಎಂದರೇನು? -ಅಶ್ಶೈಖ್ ಝೈದ್ ಅಲ್-ಮದ್‌ಖಲೀ (حَفِظَهُ اللَّهُ)
ಲಾ ಇಲಾಹ ಇಲ್ಲಲ್ಲಾಹ್ ಮುಹಮ್ಮದುರ್ರಸೂಲುಲ್ಲಾಹ್ ಎಂಬ ಸಾಕ್ಷ್ಯವಚನದ ಅರ್ಥವೇನು? -ಅಶ್ಶೈಖ್ ಅಬ್ದುಲ್ ಅಝೀಝ್ ಬಿನ್ ಬಾಝ್ (V) ಹಿರಿಯ ವಿದ್ವಾಂಸರು, ಸೌದಿ ಅರೇಬಿಯಾ.
ಪ್ರವಾದಿ ಜನ್ಮದಿನಾಚರಣೆ ಸಮ್ಮತಾರ್ಹವೇ? -ಅಶ್ಶೈಖ್ ಅಬ್ದುಲ್ ಅಝೀಝ್ ಬಿನ್ ಬಾಝ್ (V) ಹಿರಿಯ ವಿದ್ವಾಂಸರು, ಸೌದಿ ಅರೇಬಿಯಾ.