ಭಯೋತ್ಪಾದನೆ, ಉಗ್ರವಾದ ಇವುಗಳೆಲ್ಲವೂ ವಿನಾಶದಂಚಿಗೆ ಕೊಂಡೊಯ್ಯುವ ಭೀಕರ ಮಹಾಪಾಪಗಳಾಗಿವೆ : ಅಶ್ಶೈಖ್ ಇಬ್ನ್ ಬಾಝ್

w

“ತನ್ನ ಎಲ್ಲಾ ಸೃಷ್ಟಿಗಳ ಮೇಲೆ ಅತ್ಯಂತ ದಯೆವುಳ್ಳವನೂ, ತನ್ನ ಸತ್ಯ ವಿಶ್ವಾಸಿಗಳಾದ ದಾಸರ ಮೇಲೆ ಸದಾ ಕರುಣೆತೋರುವವನೂ ಆದ ಅಲ್ಲಾಹುವಿನ ನಾಮದಿಂದ.”

  ಭಯೋತ್ಪಾದನಾ ದಾಳಿಗಳನ್ನು ನಡೆಸುವ ಮೂಲಕ ಜನರ ಶಾಂತಿ, ನೆಮ್ಮದಿ ಮತ್ತು ಭದ್ರತೆಗೆ ಧಕ್ಕೆ ತರುವ ಹಾಗೂ ಜನರನ್ನು ಅನ್ಯಾಯವಾಗಿ ಹತ್ಯೆ ಮಾಡುವ ಕುರಿತು ಸೌದಿ ಅರೇಬಿಯಾದ ಶ್ರೇಷ್ಠ ಸಲಫೀ ವಿದ್ವಾಂಸರಾದ ಅಲ್ಲಾಮಃ ಅಶ್ಶೈಖ್ ಅಬ್ದುಲ್ ಅಝೀಝ್ ಬಿನ್ ಬಾಝ್ (V) ರೊಂದಿಗೆ ಕೇಳಲಾಯಿತು, ಅವರು ಉತ್ತರಿಸಿದರು :

“ನಿಸ್ಸಂದೇಹವಾಗಿಯೂ ಇದು (ಭಯೋತ್ಪಾದನಾ ಕೃತ್ಯಗಳು) ವಿನಾಶದಂಚಿಗೆ ತಳ್ಳುವ ಮತ್ತು ಅನೇಕ ಕೆಡುಕುಗಳಿಗೆ ಕಾರಣವಾಗುವ ಭೀಕರ, ಮಹಾ ಪಾಪಗಳಾಗಿವೆ ಹಾಗೂ ಅತ್ಯಂತ ದುಷ್ಟಕರ ಕೃತ್ಯಗಳಾಗಿವೆ. ಅಲ್ಲಾಹು ಹಾಗೂ ಅಂತ್ಯದಿನದ ಮೇಲೆ ವಿಶ್ವಾಸ ಇಲ್ಲದ ಜನರು ಮಾತ್ರವೇ ಇಂತಹ ದುಷ್ಕೃತ್ಯಗಳನ್ನು ಮಾಡಬಲ್ಲರು. ಯಾರು ನೈಜವಾಗಿ – ಅರ್ಥಾತ್ ಸರಿಯಾದ ರೀತಿಯಲ್ಲಿ- ಅಲ್ಲಾಹು ಹಾಗೂ ಅಂತ್ಯದಿನದ ಮೇಲೆ ವಿಶ್ವಾಸವಿಡುವರೋ ಅವರು ಯಾರೂ ಕೂಡ ಇಂತಹ ಭೀಕರ ಹಾನಿ ಮತ್ತು ಕ್ಷೋಭೆಯನ್ನುಂಟು ಮಾಡುವ ದುಷ್ಕೃತ್ಯಗಳನ್ನೆಸುಗುವುದನ್ನು ತಾವು ಕಾಣಲಾರಿರಿ. ಅಲ್ಲಾಹು ಹಾಗೂ ಅವನ ಸಂದೇಶವಾಹಕರ ಮೇಲೆ ವಿಶ್ವಾಸವಿಲ್ಲದ ಕೇವಲ ಹಗೆತನ, ಅಸೂಯೆ, ದುಷ್ಟತನ ಹಾಗೂ ಕ್ಷೋಭೆಯನ್ನು ತುಂಬಿಕೊಂಡಿರುವ ಜನರೇ ಹೊರತು ಇನ್ನಾರೂ ಇಂತಹ ಕೃತ್ಯಗಳನ್ನು ಮಾಡಲಾರರು.

ಇವುಗಳಿಂದ ಸುಧಾರಣೆ ಹಾಗೂ ರಕ್ಷಣೆಗಾಗಿ ನಾವು ಅಲ್ಲಾಹುವಿನಲ್ಲಿ ಪ್ರಾರ್ಥಿಸುತ್ತೇವೆ, ಇಂತಹ ಜನರ ಸಂಚುಗಳನ್ನು ಸದೆಬಡೆಯಲು ಹಾಗೂ ಅವರ ವಿರುದ್ಧ (ನ್ಯಾಯಯುತವಾಗಿ) ಪ್ರತೀಕಾರ ಮಾಡಲು ಆಡಳಿತಗಾರರಿಗೆ ಎಲ್ಲಾ ರೀತಿಯಲ್ಲಿ ಸಹಾಯವನ್ನು ಒದಗಿಸಲು ನಾವು ಅಲ್ಲಾಹುವಿನಲ್ಲಿ ಬೇಡುತ್ತೇವೆ. ಏಕೆಂದರೆ ಅವರ ದುಷ್ಕೃತ್ಯವು ಅತಿ ಘೋರವಾಗಿದೆ, ಹಾಗೂ ಅವರಿಂದ ಸಂಭವಿಸುವ ವಿನಾಶವು ಅತ್ಯಂತ ಭೀಕರವಾದುದಾಗಿದೆ. ಅಲ್ಲಾಹುವಿನ ಹೊರತು ಯಾವುದೇ ಶಕ್ತಿಯಾಗಲೀ ಅಥವಾ ಸಾಮರ್ಥ್ಯವಾಗಲೀ ಇಲ್ಲ. ಜನರ ವಿರುದ್ಧ ಅತಿಕ್ರಮಿಸುವ, ಅನ್ಯಾಯವಾಗಿ ಅವರನ್ನು ಹತ್ಯೆಗೈಯುವ, ಹಾಗೂ ಗಾಯಗೊಳಿಸುವ ಇಂತಹ ಭಯಾನಕ ಅಪರಾಧವನ್ನು ಓರ್ವ ನೈಜ ವಿಶ್ವಾಸಿ ಅಥವಾ ಮುಸ್ಲಿಮ್ ಹೇಗೆ ತಾನೇ ಸಮರ್ಥಿಸಿಕೊಳ್ಳಲು ಸಾಧ್ಯ!?, ಇವೆಲ್ಲವೂ ದುಷ್ಟಕರ ಹಾಗೂ ಅತ್ಯಂತ ಹೀನವಾದ ಅಪರಾಧವಾಗಿದೆ. ಇಂತಹ ಜನರ ಸಂಚುಗಳನ್ನು ತಡೆಹಿಡಿಯುವಂತೆ, ಅವರನ್ನು ಸದೆಬಡಿಯುವಂತೆ ಹಾಗೂ ಅವರ ದುಷ್ಟ ಕಾರ್ಯಯೋಜನೆಯನ್ನು ವಿಫಲಗೊಳಿಸುವಂತೆ ನಾವು ಅಲ್ಲಾಹುವಿನಲ್ಲಿ ಪ್ರಾರ್ಥಿಸುತ್ತೇವೆ. ಅದರಂತೆಯೇ, ಅವರನ್ನೂ ಅವರ ಬೆಂಬಲಿಗರನ್ನೂ ಸೋಲಿಸುವಂತೆ ನಾವು ಅಲ್ಲಾಹುವಿನಲ್ಲಿ ಬೇಡುತ್ತೇವೆ. ಅವರನ್ನು ಸೆರೆಹಿಡಿಯಲು, ಅವರ ವಿರುದ್ಧ ಕ್ರಮ ಜರುಗಿಸಲು ಹಾಗೂ ಅವರು ಮಾಡಿದ ಈ ಘೋರ ಕೃತ್ಯಕ್ಕೆ ಪ್ರತೀಕಾರವಾಗಿ ಅವರಿಗೆ ಕಠಿಣ ಶಿಕ್ಷೆಯನ್ನು ವಿಧಿಸಲು ಆಡಳಿತಗಾರರಿಗೆ ಸಫಲತೆಯನ್ನು ದಯಪಾಲಿಸಲು ನಾವು ಅಲ್ಲಾಹುವಿನಲ್ಲಿ ಬೇಡುತ್ತೇವೆ.

ಯಾರಿಗಾದರೂ ಅವರ ಕುರಿತು ಯಾವುದೇ ಮಾಹಿತಿಯಿದ್ದರೆ ಸೂಕ್ತವಾದ ಅಧಿಕಾರಿಗಳಿಗೆ ತಿಳಿಸುವಂತೆ ನಾನು ಪ್ರತಿಯೊಬ್ಬರಲ್ಲೂ ಉಪದೇಶಿಸುತ್ತೇನೆ. ಅವರ ಕುರಿತು ಮಾಹಿತಿಯಿದ್ದರೆ ಅಧಿಕಾರಿಗಳಿಗೆ ತಿಳಿಸಿಕೊಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಇದು ಪಾಪಕೃತ್ಯಗಳನ್ನು ಹಾಗೂ ಅತಿಕ್ರಮಣವನ್ನು ತಡೆಗಟ್ಟುವ ಹಾಗೂ ಜನರ ಭದ್ರತೆಯನ್ನು ಕಾಪಾಡುವ ಸಲುವಾಗಿ ಮಾಡುವ ಒಂದು ಪರಸ್ಪರ ಸಹಕಾರವಾಗಿದೆ. ಇದು ಅತಿಕ್ರಮಿಗಳ ವಿರುದ್ಧ ಕ್ರಮ ಜರುಗಿಸಲು ಸಹ ಸಹಕಾರಿಯಾಗುತ್ತದೆ.”

ಮೂಲ : ಮಜ್‌ಮೂಅ್ ಅಲ್-ಫತಾವಾ, ಸಂಪುಟ 9, ಪುಟ ಸಂಖ್ಯೆ 253
ಅನುವಾದ : ಅಬೂ ಹಮ್ಮಾದ್ ಸಲಾಹುದ್ದೀನ್