w
ಸೌದಿ ಅರೇಬಿಯಾದ ಹಿರಿಯ ವಿದ್ವಾಂಸರಾದ ಅಶ್ಶೈಖ್ ಸಾಲಿಹ್ ಅಲ್-ಫೌಝಾನ್ (حَفِظَهُ اللَّهُ) ರವರೊಂದಿಗೆ ಪ್ರಶ್ನಿಸಲಾಯಿತು :
ಪ್ರಶ್ನೆ : ಅಲ್ಲಾಹು ನಿಮಗೆ ಅನುಗ್ರಹಗಳನ್ನು ದಯಪಾಲಿಸಲಿ. ಇತ್ತೀಚಿನ ದಿನಗಳಲ್ಲಿ ಚಲನಚಿತ್ರಗಳ ಮೂಲಕ, ಪತ್ರಿಕೆಗಳ ಮೂಲಕ ಮತ್ತು ಇನ್ನಿತರ ಮಾಧ್ಯಮಗಳ ಮೂಲಕ ಪ್ರವಾದಿ (H) ರವರನ್ನು ಪದೇ ಪದೇ ನಿಂದಿಸಲಾಗುತ್ತಿದೆ. ಪ್ರಶ್ನೆಯೇನೆಂದರೆ : ಈ ರೀತಿಯ ಅಪರಾಧಗಳ ಕುರಿತು (ಇಸ್ಲಾಮ್ನ) ಶರೀಅತ್ನ ನಿಲುವೇನು? ಮತ್ತು ಅದರಿಂದ ಮುಂದುವರಿಯುತ್ತಾ, ಅವರು (ಪ್ರಶ್ನಿಸುವವರು) ಹೇಳುತ್ತಾರೆ : ಪ್ರವಾದಿ ಮುಹಮ್ಮದ್ (H) ರವರ ವಿರುದ್ಧ ಮಾಡುವ ನಿಂದನೆಗಳಿಗೆ ಪ್ರತಿಭಟನೆ ಮತ್ತು ಧರಣಿಗಳ ಮೂಲಕ ಕ್ರೋಧ ವ್ಯಕ್ತಪಡಿಸುವುದರ ಕುರಿತು (ಇಸ್ಲಾಮ್ನ) ವಿಧಿಯೇನು?
ಉತ್ತರ : ಓ ಸಹೋದರರೇ!, ಇದು ಹೊಸತೇನಲ್ಲ!. ಪ್ರವಾದಿ (H) ರವರ ಕಾಲದಲ್ಲಿ ಅವರನ್ನು (ಅರ್ಥಾತ್ ಪ್ರವಾದಿ H ರವರನ್ನು) ಅವನೋರ್ವ ಮಾಂತ್ರಿಕ, ಸುಳ್ಳ, ಜ್ಯೋತಿಷಿ, ಓರ್ವ ಕವಿ ಮತ್ತು ಇನ್ನಿತರನೆಂದೂ ಅವರು (ಅರ್ಥಾತ್ ಸತ್ಯನಿಷೇಧಿಗಳು) ಹೇಳಿದ್ದರು. ಆದರೆ ಪ್ರವಾದಿ (H) ರವರು ತಾಳ್ಮೆಯಿಂದಿದ್ದರು, ಅವರು ಆತುರದಿಂದ ವರ್ತಿಸುತ್ತಿರಲಿಲ್ಲ ಮತ್ತು ಅಲ್ಲಾಹು ಅವರೊಂದಿಗೆ ತಾಳ್ಮೆವಹಿಸುವಂತೆ ಆಜ್ಞಾಪಿಸಿದ್ದನು.
﴿ وَاصْبِرْ عَلَىٰ مَا يَقُولُونَ وَاهْجُرْهُمْ هَجْرًا جَمِيلًا ٠١ ﴾
“ಅವರು (ಅರ್ಥಾತ್ ಸತ್ಯನಿಷೇಧಿಗಳು) ಹೇಳುವುದರ ಕುರಿತು ತಾಳ್ಮೆವಹಿಸಿರಿ (ಓ ಮುಹಮ್ಮದ್ H) ಮತ್ತು ಉತ್ತಮ ರೀತಿಯಲ್ಲಿ ಅವರಿಂದ ದೂರಸರಿಯಿರಿ.” (ಸೂರಃ ಅಲ್-ಮುಝ್ಝಮ್ಮಿಲ್ 73 : 10)
ಅವರು (H) ಅವರನ್ನು (ಅರ್ಥಾತ್ ಸತ್ಯನಿಷೇಧಿಗಳ ನಿಂದನೆಗಳನ್ನು) ಆಲಿಸುತ್ತಿದ್ದರು, ಆದರೆ ಮಹೋನ್ನತನಾದ ಅಲ್ಲಾಹುವಿನ ಆಜ್ಞಾಪನೆಯಿಂದಾಗಿ ಅವರು ತಾಳ್ಮೆವಹಿಸುತ್ತಿದ್ದರು.
﴿ وَلَقَدْ نَعْلَمُ أَنَّكَ يَضِيقُ صَدْرُكَ بِمَا يَقُولُونَ ٧٩ فَسَبِّحْ بِحَمْدِ رَبِّكَ وَكُن مِّنَ السَّاجِدِينَ ٨٩ وَاعْبُدْ رَبَّكَ حَتَّىٰ يَأْتِيَكَ الْيَقِينُ ٩٩ ﴾
“ಅವರು ಏನನ್ನು ಹೇಳುತ್ತಿರುವರೋ ಅದರಿಂದಾಗಿ ನಿಮ್ಮ ಹೃದಯವು ಕುಗ್ಗುವಿಕೆಗೊಳಗಾಗಿದೆ ಎಂಬುದನ್ನು ಖಂಡಿತವಾಗಿಯೂ ನಾವು (ಈ ಮೊದಲೇ) ಅರಿತಿರುವೆವು. ಹಾಗಾಗಿ ನಿಮ್ಮ ರಬ್ಬ್ಅನ್ನು ಸ್ತುತಿಸುವ ಮೂಲಕ ಅವನ ಹಿರಿಮೆಯನ್ನು ಕೊಂಡಾಡಿರಿ ಮತ್ತು ಅವನಿಗೆ ಸಾಷ್ಟಾಂಗವೆರಗುವವರ ಪೈಕಿ (ನೀವು) ಸೇರಿದವರಾಗಿರಿ. ಖಚಿತವಾದ ಸಂಗತಿಯು (ಅರ್ಥಾತ್ ಮರಣವು) ನಿಮ್ಮೆಡೆಗೆ ಬರುವವರೆಗೂ ನಿಮ್ಮ ರಬ್ಬ್ಅನ್ನು ನೀವು ಆರಾಧಿಸಿರಿ.” (ಸೂರಃ ಅಲ್-ಹಿಜ್ರ್ 15 : 97-99)
ಹಾಗಾಗಿ, ಅವರು (H) ತಾಳ್ಮೆಯಿಂದಿದ್ದರು ಮತ್ತು ತಾವು ಮಕ್ಕಾದಲ್ಲಿ (ಜೀವಿಸುತ್ತಿದ್ದ) ದಿನಗಳಲ್ಲಿ ಅವರು ತಮ್ಮ ಪರವಾಗಿ ತಮ್ಮ ಸಹಾಬಿಗಳು (ಸಹಚರರು) ಇತರ ಯಾರ ವಿರುದ್ಧವೂ ಪ್ರತೀಕಾರ ತೀರಿಸುವುದನ್ನು ನಿಷೇಧಿಸಿದ್ದರು. ಅವರು (H) ಅವರನ್ನು (ಅರ್ಥಾತ್ ತಮ್ಮ ಸಹಚರರನ್ನು) ಈ ರೀತಿಯ ವರ್ತನೆಗಳಿಂದ ನಿಷೇಧಿಸಿದ್ದರು, ಏಕೆಂದರೆ ಒಂದುವೇಳೆ ಅವರು ಮುಶ್ರಿಕ್ಗಳಿಂದ ಪ್ರತೀಕಾರ ತೀರಿಸಿಕೊಳ್ಳುತ್ತಿದ್ದರೆ ಇದು ಖಂಡಿತವಾಗಿಯೂ ಮಕ್ಕಾದಲ್ಲಿ ಇಸ್ಲಾಮ್ ಹರಡುವುದನ್ನು ತಡೆಯುತ್ತಿತ್ತು ಮತ್ತು ಅದು ಪ್ರಾರಂಭ ದೆಶೆಯಲ್ಲೇ (ಇಸ್ಲಾಮ್ನ) ಸಂದೇಶ ಪ್ರಚಾರವನ್ನು ಕೊನೆಗೊಳಿಸುತ್ತಿತ್ತು. ಹೀಗೆ ಯಾವಾಗ ಅವರು (ಮದೀನಕ್ಕೆ) ವಲಸೆ ಹೋದರೋ ಮತ್ತು ಅನ್ಸಾರ್ಗಳನ್ನು ಕಂಡುಕೊಂಡರೋ, ಆ ಸಂದರ್ಭದಲ್ಲಿ ಮುಶ್ರಿಕ್ಗಳ ವಿರುದ್ಧ -ಇಸ್ಲಾಮ್ನಲ್ಲಿ ಶಾಸನಗೊಳಿಸಲಾದ- ಹೋರಾಟಕ್ಕೆ ಅಲ್ಲಾಹು ಅವರಿಗೆ ಆಜ್ಞಾಪಿಸಿದನು. ಇನ್ನು ಪ್ರತಿಭಟನೆಗಳು ಮತ್ತು ಧರಣಿಗಳು, ವಿನಾಶ ಮತ್ತು ವಿಧ್ವಂಸಕ ಕೃತ್ಯ, ಅಮಾಯಕ ಜನರನ್ನು ಹತ್ಯೆಗೈಯುವುದು ಮತ್ತು ಮುಸ್ಲಿಮರ ಭದ್ರತೆ ಮತ್ತು ರಕ್ಷಣೆಯಡಿಯಲ್ಲಿ ಜೀವಿಸುವವರನ್ನು (ಅನ್ಯಧರ್ಮೀಯರನ್ನು) ಕೊಲ್ಲುವುದು ಮುಂತಾದವುಗಳ ಕುರಿತು ಹೇಳುವುದಾದರೆ ಇದು ನಂಬಿಕೆದ್ರೋಹವಾಗಿದೆ ಮತ್ತು ಇದು ಸಮ್ಮತಾರ್ಹವಲ್ಲ. ಅಮಾಯಕ ಜನರನ್ನು ಕೊಲ್ಲುವುದು ಸಮ್ಮತಾರ್ಹವಲ್ಲ ಅದು ಅವರು ಸತ್ಯನಿಷೇಧಿಗಳಾದರೂ ಸರಿ. ಅದು ಸಮ್ಮತಾರ್ಹವಲ್ಲ.
﴿ وَلَا يَجْرِمَنَّكُمْ شَنَآنُ قَوْمٍ أَن صَدُّوكُمْ عَنِ الْمَسْجِدِ الْحَرَامِ أَن تَعْتَدُوا ﴾
“(ಮಕ್ಕಾದ) ಮಸ್ಜಿದುಲ್ ಹರಾಮ್ನಿಂದ ನಿಮ್ಮನ್ನು ತಡೆದ ಕಾರಣಕ್ಕಾಗಿ (ಆ ಒಂದು) ಜನತೆಯೊಂದಿಗಿನ ಕೋಪವು ಅತಿಕ್ರಮಣವೆಸಗುವುದರೆಡೆಗೆ ನಿಮ್ಮನ್ನು ಕೊಂಡೊಯ್ಯದಿರಲಿ.” (ಸೂರಃ ಅಲ್-ಮಾಇದಃ 5 : 2)
ಅಮಾಯಕ ಜನರ ಮೇಲೆ ಯಾವುದೇ ಅತಿಕ್ರಮಣವೆಸಗುವುದು ಸಮ್ಮತಾರ್ಹವಲ್ಲ.
﴿ وَلَا تَزِرُ وَازِرَةٌ وِزْرَ أُخْرَىٰ ﴾
“ಪಾಪಭಾರವನ್ನು ಹೊರುವವರು ಯಾರೂ ಇನ್ನೊಬ್ಬರ ಪಾಪಭಾರವನ್ನು ಹೊರಲಾರರು.” (ಸೂರಃ ಅಝ್ಝುಮರ್ 39 : 7)
﴿ وَإِنْ أَحَدٌ مِّنَ الْمُشْرِكِينَ اسْتَجَارَكَ فَأَجِرْهُ حَتَّىٰ يَسْمَعَ كَلَامَ اللَّـهِ ثُمَّ أَبْلِغْهُ مَأْمَنَهُ ﴾
“ಒಂದುವೇಳೆ ಮುಶ್ರಿಕ್ಗಳ ಪೈಕಿ ಯಾರಾದರೂ ನಿಮ್ಮ ರಕ್ಷಣೆಯನ್ನು ಬಯಸಿದರೆ ಅಲ್ಲಾಹುವಿನ ವಚನವನ್ನು ಆಲಿಸುವ ಸಲುವಾಗಿ ಅವನಿಗೆ ರಕ್ಷಣೆನೀಡಿರಿ ನಂತರ ಅವನ ಸುರಕ್ಷಿತವಾದ ಸ್ಥಳದೆಡೆಗೆ ಅವನನ್ನು ತಲುಪಿಸಿರಿ.” (ಸೂರಃ ಅತ್ತೌಬಃ 9 : 6)
ಮುಶ್ರಿಕ್ಗಳ ದೂತರು (ಸಂದೇಶ ತಲುಪಿಸುವ ಪ್ರತಿನಿಧಿಗಳು) ರಸೂಲ್ (H) ರವರ ಬಳಿಗೆ ಸಮಾಲೋಚನೆ ನಡೆಸಲು ಬರುತ್ತಿದ್ದರು. ಅವರು ಮುಶ್ರಿಕ್ ಮತ್ತು ಸತ್ಯನಿಷೇಧಿಗಳಾಗಿದ್ದರೂ ಸಹ ರಸೂಲ್ (H) ರವರ (ಮದೀನದ) ಮಸ್ಜಿದ್ನೆಡೆಗೂ ಬರುತ್ತಿದ್ದರು ಮತ್ತು ಅವರೊಂದಿಗೆ ಸಂಧಾನ ನಡೆಸುತ್ತಿದ್ದರು. ಅದಾಗ್ಯೂ, ಇಸ್ಲಾಮ್ ಕ್ರೋಧ ಮತ್ತು ಪ್ರತೀಕಾರದ ಧರ್ಮವಲ್ಲ ಎಂದು ಅರಿತುಕೊಳ್ಳುವುದು ಅವರಿಗೆ ಅನಿವಾರ್ಯವಾಗಿತ್ತು. ಪ್ರವಾದಿ (H) ರವರು ಮಾದರಿಯಾಗಿ (ಬದುಕಿ) ತೋರಿಸಿದಂತೆ ಇದು ಸನ್ಮಾರ್ಗ, ಕರುಣೆ ಮತ್ತು ದಯೆಯ ಧರ್ಮವಾಗಿದೆ. ಮತ್ತು (ಇದರಿಂದಾದ) ಪರಿಣಾಮವೇನಾಗಿತ್ತು? ಪರಿಣಾಮವೇನೆಂದರೆ ಅಲ್ಲಾಹು ತನ್ನ ಸಂದೇಶವಾಹಕರಿಗೆ (ಪ್ರವಾದಿ H ರವರಿಗೆ) ಗೆಲುವನ್ನು ದಯಪಾಲಿಸಿದನು ಮತ್ತು ಈ ದೀನ್ಅನ್ನು ಬಲಪಡಿಸಿದನು. ಪ್ರವಾದಿ (H) ರವರನ್ನು ಗೇಲಿಮಾಡುತ್ತಿದ್ದ ಕೆಲವರು ಇಸ್ಲಾಮ್ನ ನಾಯಕರಾದರು ಹಾಗೂ ಅಲ್ಲಾಹುವಿನ ಮಾರ್ಗದಲ್ಲಿ ಹೋರಾಡುವವರಾಗಿ ಮಾರ್ಪಟ್ಟರು. ಅವರು ಇಸ್ಲಾಮ್ ಸ್ವೀಕರಿಸಿದರು ಮತ್ತು ಅವರು ತಮ್ಮ ಇಸ್ಲಾಮ್ನಲ್ಲಿ ಅತ್ಯುನ್ನತರಾದರು ಏಕೆಂದರೆ ಪ್ರವಾದಿ (H) ರವರು ಅವರೊಂದಿಗೆ ತಾಳ್ಮೆ, ಸೌಮ್ಯತೆ ಮತ್ತು ದಯೆಯಿಂದ ವರ್ತಿಸಿತ್ತಿದ್ದರು -ಎಷ್ಟರವರೆಗೆಂದರೆ (ಗೇಲಿಮಾಡುತ್ತಿದ್ದ) ಅವರು ಪ್ರವಾದಿ (H) ರವರನ್ನು ಪ್ರೀತಿಸಲಾರಂಭಿಸಿದರು. ಮಹೋನ್ನತನಾದ ಅಲ್ಲಾಹು ಹೇಳಿದಂತೆ :
﴿ وَإِنَّكَ لَعَلَىٰ خُلُقٍ عَظِيمٍ ٤ ﴾
“ಖಂಡಿತವಾಗಿಯೂ (ಓ ಮುಹಮ್ಮದ್ H), ನೀವು ಸರ್ವೋಚ್ಚ ಸ್ವಭಾವದವರಾಗಿರುವಿರಿ.” (ಸೂರಃ ಅಲ್-ಕಲಮ್ 68 : 4)
ಇದು ರಸೂಲ್ (H) ರವರ ಸರ್ವೋಚ್ಚ ಸ್ವಭಾವವಾಗಿತ್ತು. ಯಾವಾಗ ಸತ್ಯನಿಷೇಧಿಗಳು ಈ (ನಿಂದನೆಗಳಂತಹ) ಕೃತ್ಯಗಳನ್ನೆಸಗುತ್ತಿದ್ದರೋ ಆಗ ಅವರ ಉದ್ದೇಶವು ಉದ್ರೇಕಗೊಳಿಸುವುದಾಗಿದೆ ಮತ್ತು (ಈ ರೀತಿ ಅಪವಾದಗಳನ್ನು ಹೊರಿಸಿ) ಹೇಳುವುದಕ್ಕಾಗಿದೆ -“ಮುಸ್ಲಿಮರ ನಡುವಳಿಕೆಯನ್ನು ನೋಡಿರಿ, ಅವರು ರಾಯಭಾರಿಗಳನ್ನು ಹಾಗೂ ದೂತರನ್ನು ಕೊಲ್ಲುತ್ತಾರೆ, ಮನೆಗಳನ್ನು ನಾಶಮಾಡುತ್ತಾರೆ ಮತ್ತು ಕಟ್ಟಡಗಳನ್ನು ಕೆಡವುತ್ತಾರೆ. ಇದಾಗಿದೆ ಇಸ್ಲಾಮ್ ಧರ್ಮ.”…. ಮುಸ್ಲಿಮರನ್ನು ಕೆರಳಿಸಲು ಅವರ ಪೈಕಿಯಿರುವ ಧಾರ್ಮಿಕ ಅಜ್ಞಾನಿಗಳ ನಡುವಳಿಕೆಗಳ ಮೂಲಕ, ಅಜ್ಞಾನಿಗಳಾದ ಜನರ ವರ್ತನೆಗಳ ಮೂಲಕ ಅಥವಾ ಅವರ ಪೈಕಿಯಿರುವ ನುಸುಳುಕೋರರಿಂದ (ಇಂತಹ ವಿಧ್ವಂಸಕ ಕೃತ್ಯಗಳನ್ನೆಸಲು) ಸತ್ಯನಿಷೇಧಿಗಳು ಬಯಸುತ್ತಾರೆ. ಹಾಗಾಗಿ ಈ ಕಾರ್ಯಗಳಿಗೆ ಧಾವಿಸುವುದು ಸಮ್ಮತಾರ್ಹವಲ್ಲ.
﴿ وَلَقَدْ كُذِّبَتْ رُسُلٌ مِّن قَبْلِكَ فَصَبَرُوا عَلَىٰ مَا كُذِّبُوا وَأُوذُوا حَتَّىٰ أَتَاهُمْ نَصْرُنَا ۚ وَلَا مُبَدِّلَ لِكَلِمَاتِ اللَّـهِ ۚ وَلَقَدْ جَاءَكَ مِن نَّبَإِ الْمُرْسَلِينَ ٤٣ ﴾
“(ಓ ಮುಹಮ್ಮದ್ H !) ಖಂಡಿತವಾಗಿಯೂ, ತಮಗಿಂತ ಮುಂಚೆಯೂ (ಅನೇಕ) ಸಂದೇಶವಾಹಕರು ನಿರಾಕರಿಸಲ್ಪಟ್ಟಿರುವರು. ಆದರೆ ನಮ್ಮ ಸಹಾಯ ಮತ್ತು ವಿಜಯವು ಅವರಿಗೆ ಬಂದೆರಗುವವರೆಗೂ ತಾವು ನಿರಾಕರಿಸಲ್ಪಡುವುದನ್ನು ಹಾಗೂ ಹಾನಿಗೊಳಗಾಗುವುದನ್ನು ಅವರು ತಾಳ್ಮೆಯಿಂದ ಸಹಿಸಿಕೊಲ್ಳುತ್ತಿದ್ದರು ಅಲ್ಲಾಹುವಿನ ವಚನವನ್ನು (ಇಹ ಪರದಲ್ಲಿ ನೈಜ ವಿಶ್ವಾಸಿಗಳಿಗೆ ಸಹಾಯ ಮತ್ತು ವಿಜಯವನ್ನು ನೀಡುವ ಅಲ್ಲಾಹುವಿನ ನಿರ್ಣಯವನ್ನು) ಬದಲಾಯಿಸುವವರು ಯಾರು ಇಲ್ಲ. ಖಂಡಿತವಾಗಿಯೂ ತಮಗಿಂತಲೂ (ಮುಂಚಿನ) ಸಂದೇಶವಾಹಕರ ಕೆಲವು ವೃತಾಂತವು ನಿಮಗೀಗಾಲೇ ತಲುಪಿದೆ.” (ಸೂರಃ ಅಲ್-ಅನ್ಆಮ್ 6 : 34)
ಈ ಕಾರ್ಯಗಳ ಕುರಿತು ಇಸ್ಲಾಮ್ನ ಮಾರ್ಗದರ್ಶನವು ಇದಾಗಿದೆ, ಇದರ ಜೊತೆಗೆ ದಯೆ, ವಿವೇಚನಾಶೀಲತೆ, ತಾಳ್ಮೆ ಮತ್ತು ಆತುರಪಡದೆ ಸಂಯಮದಿಂದ ವರ್ತಿಸುವುದಾಗಿದೆ.
ಹಾಗಾಗಿ, ಕೆಲವು (ಪಥಭ್ರಷ್ಟರಾದ) ಮುಸ್ಲಿಮರಿಂದ ಸಂಭವಿಸಿದ ಸ್ವಪ್ರತಿಷ್ಠೆಯ ದುಷ್ಕೃತ್ಯಗಳು, ಧ್ವಂಸ, ಹತ್ಯೆ ಮುಂತಾದ ಕೃತ್ಯಗಳನ್ನು (ಮುಂದಿಟ್ಟು ತಮ್ಮ ಅನುಕೂಲಕ್ಕಾಗಿ ಇವುಗಳನ್ನು) ಬಳಸಿಕೊಳ್ಳಲು ಸತ್ಯನಿಷೇಧಿಗಳು ಬಯಸುತ್ತಾರೆ. (ಅದರ ಕೆಟ್ಟ ಪರಿಣಾಮವು) ಎಷ್ಟರವರೆಗೆಂದರೆ ಮುಸ್ಲಿಮರು ಪರಸ್ಪರ ಕೊಲ್ಲಲು ಪ್ರಾರಂಭಿಸಿ ಅವರ ಪೈಕಿಯಿರುವ (ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವ) ಪೊಲೀಸರನ್ನು (ಕೂಡ) ಕೊಂದುಹಾಕಿದರು!! ಇದಾಗಿದೆ ಸತ್ಯನಿಷೇಧಿಗಳಿಗೆ ಬೇಕಾಗಿರುವುದು.
ಅನುವಾದ : ಅಬೂ ಹಮ್ಮಾದ್