w
ಸೌದಿ ಅರೇಬಿಯಾದ ಹಿರಿಯ ವಿದ್ವಾಂಸರಾದ ಅಶ್ಶೈಖ್ ಸಾಲಿಹ್ ಅಲ್-ಉಸೈಮೀನ್ (V) ಹೇಳಿದರು :
ತರಾವೀಹ್ ಎಂದರೆ ರಮದಾನ್ ತಿಂಗಳಲ್ಲಿ ಜಮಾಅತ್ಆಗಿ (ಅರ್ಥಾತ್ ಸಾಮೂಹಿಕವಾಗಿ) ರಾತ್ರಿ ನಮಾಝ್ ನಿರ್ವಹಿಸುವುದಾಗಿದೆ. ಅದರ ಸಮಯವು ಇಶಾಅ್ ನಮಾಝ್ನ ನಂತರದಿಂದ ಹಿಡಿದು ಫಜ್ರ್ನ ಆರಂಭದ ತನಕವಾಗಿದೆ. ಪ್ರವಾದಿ (H) ರವರು ರಾತ್ರಿ ನಮಾಝ್ ನಿರ್ವಹಿಸುವಂತೆ ನಮಗೆ ಪ್ರೋತ್ಸಾಹಿಸಿರುವರು, ಅವರು ಹೇಳಿದರು :
«مَنْ قَامَ رَمَضَانَ إِيمَانًا وَاحْتِسَابًا، غُفِرَ لَهُ مَا تَقَدَّمَ مِنْ ذَنْبِهِ»
“ಯಾರು ರಮದಾನ್ನಲ್ಲಿ ಈಮಾನ್ನೊಂದಿಗೆ ಪ್ರತಿಫಲವನ್ನು ಅರಸಿಕೊಂಡು ರಾತ್ರಿ ನಮಾಝ್ಅನ್ನು ನಿರ್ವಹಿಸುವನೋ, ಅವನ ಗತಕಾಲದ ಪಾಪಗಳೆಲ್ಲವೂ ಮನ್ನಿಸಲ್ಪಡುವುದು.” (ಸಹೀಹ್ ಅಲ್-ಬುಖಾರಿ, ಕಿತಾಬ್ ಅತ್ತರಾವೀಹ್ : 2009)
ಸಹೀಹ್ ಅಲ್-ಬುಖಾರಿಯಲ್ಲಿ, ಆಯಿಶಃ (J) ರವರು ವರದಿಮಾಡಿರುವರು, ಅದೇನೆಂದರೆ : “ಪ್ರವಾದಿ (H) ರವರು ರಾತ್ರಿ ನಮಾಝ್ಅನ್ನು ಒಂದು ರಾತ್ರಿ ಮಸ್ಜಿದ್ನಲ್ಲಿ ನಿರ್ವಹಿಸಿದರು ಮತ್ತು ಜನರಿಗೆ ಇಮಾಮ್ಆಗಿ ನಮಾಝ್ ಮುನ್ನಡೆಸಿದರು. ನಂತರ ಅವರು ಮುಂದಿನ ರಾತ್ರಿಯೂ ನಮಾಝ್ ನಿರ್ವಹಿಸಿದರು, (ಆಗ) ಜನರು ಹೆಚ್ಚಾಗತೊಡಗಿದರು. ನಂತರ ಜನರು ಮೂರನೆ ಅಥವಾ ನಾಲ್ಕನೇ ರಾತ್ರಿಯಂದು (ನಮಾಝ್ ನಿರ್ವಹಿಸಲು) ಒಟ್ಟುಸೇರಿದರು, ಆದರೆ ಪ್ರವಾದಿ (H) ರವರು ಅವರೆಡೆಗೆ (ಆ ರಾತ್ರಿಯಂದು ನಮಾಝ್ ನಿರ್ವಹಿಸಲು) ತೆರಳಲಿಲ್ಲ. ಮರುದಿನ ಬೆಳಿಗ್ಗೆಯಾದಾಗ ಅವರು (H) ಹೇಳಿದರು :
« قَدْ رَأَيْتُ الَّذِي صَنَعْتُمْ وَلَمْ يَمْنَعْنِي مِنَ الخُرُوجِ إِلَيْكُمْ إِلَّا أَنِّي خَشِيتُ أَنْ تُفْرَضَ عَلَيْكُمْ »
“ನೀವು ನಿನ್ನೆ ರಾತ್ರಿ ಏನು ಮಾಡಿದಿರಿ ಎಂಬುದನ್ನು ನಾನು ನೋಡಿರುವೆನು, ಹಾಗೂ ಇದು (ಅರ್ಥಾತ್ ತರಾವೀಹ್ ನಮಾಝ್) ನಿಮ್ಮ ಮೇಲೆ ಖಡ್ಡಾಯವಾಗಿಬಿಡಬಹುದು ಎಂಬ ಭಯದ ಹೊರತು ಇನ್ನಾವುದೂ ನಿಮ್ಮೆಡೆಗೆ ಬರುವುದರಿಂದ ನನ್ನನ್ನು ತಡೆದಿರಲಿಲ್ಲ.” (ಸಹೀಹ್ ಅಲ್-ಬುಖಾರಿ, ಕಿತಾಬ್ ಅತ್ತರಾವೀಹ್ : 2012; ಸಹೀಹ್ ಮುಸ್ಲಿಮ್ : 761)
ಇದು ಸಂಭವಿಸಿದ್ದು ರಮದಾನ್ನಲ್ಲಾಗಿತ್ತು.
ಪ್ರತಿ ಎರಡು ರಕ್ಅತ್ಗಳಲ್ಲಿ ತಸ್ಲೀಮ್ ನಿರ್ವಹಿಸುತ್ತಾ (ಅರ್ಥಾತ್ ಸಲಾಮ್ ಹೇಳುತ್ತಾ) ರಾತ್ರಿ ನಮಾಝ್ಅನ್ನು (ಅರ್ಥಾತ್ ತರಾವೀಹ್ಅನ್ನು) ಹನ್ನೊಂದು ರಕ್ಅತ್ಗಳಿಗೆ ಸೀಮಿತಗೊಳಿಸುವುದು ಸುನ್ನತ್ಆಗಿದೆ (ಅಂದರೆ ಪ್ರವಾದಿ H ರವರು ನಿರ್ವಹಿಸಿದ ರೀತಿಯಾಗಿದೆ). ಇದೇಕೆಂದರೆ, ಆಯಿಶಃ (J) ರವರೊಂದಿಗೆ ರಮದಾನ್ನಲ್ಲಿ ಪ್ರವಾದಿ (H) ರವರ ನಮಾಝ್ನ ಕುರಿತು ಕೇಳಲಾದಾಗ, ಅವರು ಉತ್ತರಿಸಿದ್ದು :
« مَا كَانَ يَزِيدُ فِي رَمَضَانَ وَلاَ فِي غَيْرِهِ عَلَى إِحْدَى عَشْرَةَ رَكْعَةً »
“ಅವರು (ಅರ್ಥಾತ್ ಪ್ರವಾದಿ H ರವರು) ರಮದಾನ್ನಲ್ಲಾಗಲೀ ಅಥವಾ (ಅದರ) ಹೊರತಾದ ದಿನಗಳಲ್ಲಾಗಲೀ, (ಅವರ ರಾತ್ರಿ ನಮಾಝ್) ಹನ್ನೊಂದು ರಕ್ಅತ್ಗಳಿಗಿಂತ ಮೀರುತ್ತಿರಲಿಲ್ಲ.” (ಸಹೀಹ್ ಅಲ್-ಬುಖಾರಿ : ಕಿತಾಬ್ ಅತ್ತಹಜ್ಜುದ್ : 1138), ಸಹೀಹ್ ಮುಸ್ಲಿಮ್ : 764)
ಇಮಾಮ್ ಮಾಲಿಕ್ (V) ರವರ ಅಲ್-ಮುವತ್ತಅ್ದಲ್ಲಿ, ವಿಶ್ವಾಸಾರ್ಹ ವರದಿಗಾರರಾದ ಮುಹಮ್ಮದ್ ಬಿನ್ ಯೂಸುಫ್ (V) ರವರು ಸಹಾಬಿವರ್ಯರಾದ ಸಾಇಬ್ ಬಿನ್ ಯಝೀದ್ (I) ರಿಂದ ವರದಿಮಾಡಿರುವರು, (ಅದೇನೆಂದರೆ),
« أَمَرَ عُمَرُ بْنُ الْخَطَّابِ أُبَيَّ بْنَ كَعْبٍ وَتَمِيمًا الدَّارِيَّ أَنْ يَقُومَا لِلنَّاسِ بِإِحْدَى عَشْرَةَ رَكْعَةً »
“ಉಮರ್ (I) ರವರು ಉಬಯ್ಯ್ ಬಿನ್ ಕಅ್ಬ್ ಮತ್ತು ತಮೀಮ್ ಅದ್ದಾರೀ ಅವರೊಂದಿಗೆ ಜನರಿಗೆ ಇಮಾಮ್ ಆಗಿ ನಿಂತು ಹನ್ನೊಂದು ರಕ್ಅತ್ (ತರಾವೀಹ್) ನಿರ್ವಹಿಸುವಂತೆ ಆಜ್ಞಾಪಿಸಿದ್ದರು.” (ಮುವತ್ತಅ್ ಅಲ್ -ಇಮಾಮ್ ಮಾಲಿಕ್, ಕಿತಾಬ್ ಅಸ್ಸಲಾತ್ :1/110 ಮತ್ತು 280)
ಒಂದುವೇಳೆ ಓರ್ವನು ಹನ್ನೊಂದು ರಕ್ಅತ್ಗಳಿಗಿಂತ ಹೆಚ್ಚು ನಮಾಝ್ ನಿರ್ವಹಿಸಲು ಇಚ್ಚಿಸುವುದಾದರೆ, ಅದರಲ್ಲಿ ಯಾವುದೇ ತೊಂದರೆಯಿಲ್ಲ, ಏಕೆಂದರೆ ಪ್ರವಾದಿ (H) ರವರೊಂದಿಗೆ ಒಮ್ಮೆ ರಾತ್ರಿ ನಮಾಝ್ನ ಕುರಿತು ಕೇಳಲಾಯಿತು, ಅವರು (ಹೀಗೆ) ಉತ್ತರಿಸಿದರು :
« مَثْنَى مَثْنَى، فَإِذَا خَشِيَ أَحَدُكُمُ الصُّبْحَ صَلَّى رَكْعَةً وَاحِدَةً تُوتِرُ لَهُ مَا قَدْ صَلَّى»
“ಅದು ಎರಡೆರಡು ರಕ್ಅತ್ಗಳಾಗಿವೆ. ಒಂದುವೇಳೆ, ನಿಮ್ಮ ಪೈಕಿಯಿರುವ ಓರ್ವನು ಫಜ್ರ್ (ಸಮಯವು ಬಂದೆರಗುವುದೆಂದು) ಭಯಪಡುವುದಾದರೆ ಆಗ ಅವನು ಒಂದು ರಕ್ಅತ್ ನಿರ್ವಹಿಸಲಿ, ಆಗ ಅದು ಅವನು ನಿರ್ವಹಿಸಿದ ನಮಾಝ್ಅನ್ನು (ಅರ್ಥಾತ್ ಒಂದು ರಕ್ಅತ್ ನಮಾಝ್ಅನ್ನು) ವಿತ್ರ್ ಆಗಿಸುವುದು.” (ಸಹೀಹ್ ಅಲ್-ಬುಖಾರಿ, ಕಿತಾಬ್ ಅಲ್-ವಿತ್ರ್ : 990, ಸಹೀಹ್ ಮುಸ್ಲಿಮ್ : 749)
ಅದಾಗ್ಯೂ, ಸುನ್ನತ್ನಲ್ಲಿ ವರದಿಯಾದ ರಕ್ಅತ್ಗಳ ಸಂಖ್ಯೆಗಳನ್ನು (ಅರ್ಥಾತ್ ಹನ್ನೊಂದು ರಕ್ಅತ್ಗಳನ್ನು) ಪಾಲಿಸಿ ಅದಕ್ಕೆ ಹೊಂದಿಕೊಂಡಿರುವುದು, ಹಾಗೂ ಜನರಿಗೆ ಕಷ್ಟವಾಗದ ರೀತಿಯಲ್ಲಿ ಅದನ್ನು ನಿಧಾನವಾಗಿ (ಸಾವಧಾನದಿಂದ) ನಿರ್ವಹಿಸುವುದು ಮತ್ತು (ಕಿಯಾಮ್ನಲ್ಲಿ ಅಂದರೆ ನಿಲ್ಲುವವೇಳೆ ಕುರ್ಆನ್ ಪಾರಾಯಣವನ್ನು) ದೀರ್ಘಗೊಳಿಸುವುದು ಅತ್ಯುತ್ತಮವೂ ಅತೀ ಪರಿಪೂರ್ಣವೂ ಆದುದಾಗಿದೆ.
ಇನ್ನು ಕೆಲ ಜನರು ಮಾಡುತ್ತಿರುವುದೇನೆಂದರೆ, ಉತ್ಪ್ರೇಕ್ಷಿತ ರೀತಿಯಲ್ಲಿ ಆತುರದಿಂದ ನಮಾಝ್ ನಿರ್ವಹಿಸುವುದು -(ಇವೆಲ್ಲವೂ) ದೀನ್ನಲ್ಲಿ ನಿರ್ದೇಶಿಸಲಾದ ಕಾರ್ಯಗಳಿಗೆ ವಿರುದ್ಧವಾದುದಾಗಿದೆ. ಒಂದುವೇಳೆ ಈ ರೀತಿಯಲ್ಲಿ (ಆತುರದಿಂದ) ನಮಾಝ್ ನಿರ್ವಹಿಸುವುದು ಅವನಿಗೆ ನಮಾಝ್ನ ಕಡ್ಡಾಯ (ವಾಜಿಬ್) ಕರ್ಮಗಳು ಅಥವಾ ಕಡ್ಡಾಯ ಸ್ಥಂಭಗಳನ್ನು (ಅರ್ಥಾತ್ ರುಕ್ನ್ಗಳನ್ನು) ನಿರ್ಲಕ್ಷಿಸಲು ಕಾರಣವಾಗುವುದಾದರೆ ಅವನು ತನ್ನ ನಮಾಝ್ಅನ್ನು ಅಸಿಂಧುಗೊಳಿಸಿದನು.
ನಮಾಝ್ ನಿರ್ವಹಿಸಲು ನೇತೃತ್ವವಹಿಸುವ ಅನೇಕ ಇಮಾಮ್ಗಳು ತರಾವೀಹ್ ನಮಾಝ್ನಲ್ಲಿ ಸಾವಧಾನವನ್ನು ಪಾಲಿಸುವುದಿಲ್ಲ, ಇದು ಅವರಿಂದ ಸಂಭವಿಸುವ ತಪ್ಪಾಗಿದೆ. ಓರ್ವ ಇಮಾಮ್ ಸ್ವತಃ ತಾನೋರ್ವನಿಗೆ ಮಾತ್ರ ನಮಾಝ್ಅನ್ನು ನಿರ್ವಹಿಸುತ್ತಿಲ್ಲ, ಬದಲಾಗಿ ಅವನು ತನಗೂ ಇತರರಿಗೂ ಇಮಾಮ್ ಆಗಿ ನಮಾಝ್ ನಿರ್ವಹಿಸುವವನಾಗಿದ್ದಾನೆ. ಹಾಗಾಗಿ, ಅವನೋರ್ವ ನಾಯಕನಂತೆ ಆಗಿರುವನು, (ಜನರಿಗೆ) ಅತ್ಯಂತ ಸೂಕ್ತ ಮತ್ತು ಪ್ರಯೋಜನವಾದುದನ್ನು ಅವನು ನಿರ್ವಹಿಸಬೇಕಾಗಿದೆ. ತನ್ನ ಹಿಂದೆ ನಮಾಝ್ ನಿರ್ವಹಿಸುವವರು ಅವರು ತಮ್ಮ ನಮಾಝ್ನ ಕಡ್ಡಾಯವಾದ ಕರ್ಮಗಳನ್ನು ನಿರ್ವಹಿಸಲು ಅಸಾಧ್ಯವಾದ ರೀತಿಯಲ್ಲಿ ಆತುರದಿಂದ ನಮಾಝ್ ನಿರ್ವಹಿಸುವುದು ಓರ್ವ ಇಮಾಮ್ಗೆ (ಸಂಭಂದಿಸಿದಂತೆ) ಅಸಹ್ಯಕರ ಹಾಗೂ ಆಕ್ಷೇಪಾರ್ಹವಾದ ಕಾರ್ಯವಾಗಿದೆ ಎಂದು ವಿದ್ವಾಂಸರು ಉಲ್ಲೇಖಿಸಿರುವರು.
ಈ ತರಾವೀಹ್ ನಮಾಝ್ಅನ್ನು (ಸರಿಯಾದ ರೀತಿಯಲ್ಲಿ) ನಿರ್ವಹಿಸಲು ಜನರು ಕಾಳಜಿ ವಹಿಸಬೇಕಾಗಿದೆ, ಹಾಗೂ ಮಸ್ಜಿದ್ನಿಂದ ಇನ್ನೊಂದು ಮಸ್ಜಿದ್ಗೆ ಹೊರಡುವ ಮೂಲಕ ಅದು ನಷ್ಟಹೊಂದುವಂತೆ ಮಾಡಬಾರದಾಗಿದೆ. ಏಕೆಂದರೆ, ಖಂಡಿತವಾಗಿಯೂ, ಯಾರು ಇಮಾಮ್ನೊಂದಿಗೆ ಅವನು ಪೂರ್ತಿಗೊಳಿಸುವ ತನಕ ರಾತ್ರಿ ನಮಾಝ್ಅನ್ನು ನಿರ್ವಹಿಸುವನೋ, ಅವನಿಗೆ ರಾತ್ರಿ ಪೂರ್ತಿ ನಮಾಝ್ ನಿರ್ವಹಿಸಿದ ಪ್ರತಿಫಲವನ್ನು ಬರೆದಿಡಲಾಗುವುದು, ಅದು ಅವನು ನಮಾಝ್ ನಿರ್ವಹಿಸಿದ ನಂತರ ನಿದ್ದೆಗೆ ಹೋದರೂ ಸರಿ.
ಹಾಗೂ ಒಂದುವೇಳೆ ಫಿತ್ನಃ ಇಲ್ಲವೆಂದಾದರೆ (ಫಿತ್ನಃದಿಂದ ಸುರಕ್ಷಿತರಾದರೆ), ಮಹಿಳೆಯರು – ತಮ್ಮ ಮನೆಯಿಂದ ಸಭ್ಯತೆಯನ್ನು ಪಾಲಿಸಿಕೊಂಡು, ಯಾವುದೇ ಸೌಂದರ್ಯ ಹಾಗೂ ಅಲಂಕಾರಗಳನ್ನು ಪ್ರದರ್ಶಿಸಿದೇ, ಸುಗಂಧದ್ರವ್ಯ ಬಳಸದೇ (ಹೀಗೆ) ಈ ಎಲ್ಲಾ ಷರತ್ತಿನೊಂದಿಗೆ ತರಾವೀಹ್ ನಮಾಝ್ ನಿರ್ವಹಿಸಲು (ಮಸ್ಜಿದ್ಗೆ) ತೆರಳುವುದಾದರೆ ಅದರಲ್ಲಿ ಯಾವುದೇ ತೊಂದರೆಯಿಲ್ಲ.
ಮೂಲ : ಫುಸೂಲುನ್ ಫಿಸ್ಸಿಯಾಮಿ ವತ್ತರಾವೀಹ್ ವಝ್ಝಕಾತ್, ಅಧ್ಯಾಯ : 5 ಪುಟ : 12-13
ಅನುವಾದ : ಅಬೂ ಹಮ್ಮಾದ್
ಹೆಚ್ಚಿನ ಓದಿಗಾಗಿ :
ಪ್ರವಾದಿಯವರ ಸುನ್ನತ್ ಪ್ರಕಾರ ವುದೂ ನಿರ್ವಹಿಸುವುದು ಹೇಗೆ? -ಅಶ್ಶೈಖ್ ಅಬ್ದುಲ್ ಅಝೀಝ್ ಬಿನ್ ಬಾಝ್ (V) ಹಿರಿಯ ವಿದ್ವಾಂಸರು, ಸೌದಿ ಅರೇಬಿಯಾ.
ಲಾ ಇಲಾಹ ಇಲ್ಲಲ್ಲಾಹ್ ಮುಹಮ್ಮದುರ್ರಸೂಲುಲ್ಲಾಹ್ ಎಂಬ ಸಾಕ್ಷ್ಯವಚನದ ಅರ್ಥವೇನು? -ಅಶ್ಶೈಖ್ ಅಬ್ದುಲ್ ಅಝೀಝ್ ಬಿನ್ ಬಾಝ್ (V) ಹಿರಿಯ ವಿದ್ವಾಂಸರು, ಸೌದಿ ಅರೇಬಿಯಾ.
ಪ್ರವಾದಿ ಜನ್ಮದಿನಾಚರಣೆ ಸಮ್ಮತಾರ್ಹವೇ? -ಅಶ್ಶೈಖ್ ಅಬ್ದುಲ್ ಅಝೀಝ್ ಬಿನ್ ಬಾಝ್ (V) ಹಿರಿಯ ವಿದ್ವಾಂಸರು, ಸೌದಿ ಅರೇಬಿಯಾ.