w
ಖಂಡಿತವಾಗಿಯೂ ಈ (ಮುಹರ್ರಮ್) ತಿಂಗಳು ಶ್ರೇಷ್ಠತೆಯನ್ನು ಹೊಂದಿದೆ. ಅಲ್ಲಾಹುವಿನ ರಸೂಲ್ (H) ರವರು ಹೇಳಿದರು :
« أَفْضَلُ الصِّيَامِ بَعْدَ رَمَضَانَ شَهْرُ اللَّهِ الْمُحَرَّمِ »
“ರಮದಾನ್ (ತಿಂಗಳ ಉಪವಾಸದ) ಬಳಿಕ ಅತ್ಯಂತ ಶ್ರೇಷ್ಠವಾದ ಉಪವಾಸವು ಅಲ್ಲಾಹುವಿನ ತಿಂಗಳಾದ ಮುಹರ್ರಮ್ ಆಗಿದೆ (ಅರ್ಥಾತ್ ಮುಹರ್ರಮ್‌ನ ಉಪವಾಸವಾಗಿದೆ)” (ಸಹೀಹ್ ಮುಸ್ಲಿಮ್ : 1163)
ಹಾಗಾಗಿ ಈ ತಿಂಗಳಿನಲ್ಲಿ ಉಪವಾಸ ಆಚರಿಸುವುದನ್ನು ಅಧಿಕಗೊಳಿಸುವುದು ಅಪೇಕ್ಷಣೀಯವಾದುದಾಗಿದೆ. ಅದು (ಅರ್ಥಾತ್ ಮುಹರ್ರಮ್ ತಿಂಗಳು) ಪವಿತ್ರ ತಿಂಗಳ ಪೈಕಿ ಒಂದಾಗಿದೆ. ಇದು ಉಮರ್ (I) ರವರ ಖಿಲಾಫತ್‌ನ ಅವಧಿಯಲ್ಲಿ ಹಿಜ್ರಿ ವರ್ಷದ ಮೊದಲ ತಿಂಗಳಾಗಿ ಸಹಾಬಿಗಳು ಆಯ್ಕೆಮಾಡಿದ ತಿಂಗಳಾಗಿದೆ. ಹಾಗಾಗಿ ಇದೊಂದು ಶ್ರೇಷ್ಠತೆಯ ತಿಂಗಳಾಗಿದೆ. ಅದರ (ಅರ್ಥಾತ್ ಮುಹರ್ರಮ್ ತಿಂಗಳಿನ) ಅತ್ಯಂತ ದೊಡ್ಡ ಶ್ರೇಷ್ಠತೆಯೇನೆಂದರೆ ಅದು ಆಶೂರಾ ದಿನವನ್ನು ಹೊಂದಿದೆ. ಈ (ಆಶೂರಾ) ದಿನದಲ್ಲಿ ಉಪವಾಸವನ್ನು ಆಚರಿಸುವುದು ಹಿಂದಿನ ವರ್ಷದ (ಪಾಪಗಳನ್ನು) ಅಳಿಸಿಹಾಕುತ್ತದೆ ಎಂದು ಪ್ರವಾದಿ (H) ರವರು ನಮಗೆ ತಿಳಿಸಿರುವರು (ಸಹೀಹ್ ಮುಸ್ಲಿಮ್ : 1162). ಫಿರ್‌ಔನ್ ಮತ್ತು ಅವನ (ದುಷ್ಟ) ಜನರನ್ನು (ಸಮುದ್ರದಲ್ಲಿ) ಮುಳುಗಿಸಿ ನಾಶಪಡಿಸಿದಕ್ಕಾಗಿ ಅಲ್ಲಾಹುವಿಗೆ ಕೃತಜ್ಞತೆಯನ್ನು ಸಲ್ಲಿಸಲು ಮೂಸಾ (S) ರವರು ಈ ದಿನದಂದು ಉಪವಾಸ ಆಚರಿಸಿದ್ದರು.
ಹಾಗಾಗಿ ಅವರು (ಮೂಸಾ S ರವರು) ಈ ದಿನದಂದು ಉಪವಾಸ ಆಚರಿಸಿದ್ದರು ಮತ್ತು ಅವರ ನಂತರ ಯಹೂದಿಗಳು ಈ ದಿನದಂದು ಉಪವಾಸ ಆಚರಿಸುವುದನ್ನು ಮುಂದುವರೆಸಿದರು. ಯಾವಾಗ ರಸೂಲ್ (H) ರವರು (ಹಿಜ್ರಾ ಮಾಡಿ) ಮದೀನಕ್ಕೆ ವಲಸಿಗರಾಗಿ ಬಂದರೋ, ಆಗ (ಅಲ್ಲಿದ್ದ) ಯಹೂದಿಗಳು ಈ ದಿನದಂದು ಉಪವಾಸ ಆಚರಿಸುತ್ತಿರುವುದನ್ನು ಅವರು ಕಂಡರು. ಅವರು (H) (ಯಹೂದಿಗಳ ಬಳಿ) ಹೇಳಿದರು : “ನೀವು ಆಚರಿಸುತ್ತಿರುವ ಈ ಉಪವಾಸವು ಯಾವುದಾಗಿದೆ?” ಅವರು (ಅರ್ಥಾತ್ ಯಹೂದಿಗಳು) ಹೇಳಿದರು : “ಖಂಡಿತವಾಗಿಯೂ ಇದು ಅಲ್ಲಾಹು ಮೂಸಾ ಮತ್ತು ಅವರ ಜನರನ್ನು ಸಂರಕ್ಷಿಸಿ ಬಲಪಡಿಸಿದ ಹಾಗೂ ಫಿರ್‌ಔನನ್ನೂ ಆತನ ಜನರನ್ನೂ ಸೋಲಿಸಿ ನಾಶಪಡಿಸಿದ ದಿನವಾಗಿದೆ. ಹಾಗಾಗಿ ಅಲ್ಲಾಹುವಿಗೆ ಕೃತಜ್ಞಾಪೂರಕವಾಗಿ ಮೂಸಾ (S) ಉಪವಾಸವನ್ನು ಆಚರಿಸುತ್ತಿದ್ದರು. ಹಾಗಾಗಿ ನಾವು ಕೂಡ ಉಪವಾಸ ಆಚರಿಸುತ್ತೇವೆ.” ಆಗ ಪ್ರವಾದಿ (H) ರವರು ಹೇಳಿದರು : “ಮೂಸಾ (S) ರ ಕುರಿತಂತೆ ನಿಮಗಿಂತ ಹೆಚ್ಚಿನ ಅರ್ಹತೆಯುಳ್ಳವರು (ಅಥವಾ ಆಪ್ತರಾಗಿರುವವರು) ನಾವಾಗಿರುವೆವು. ಹೀಗೆ ಅವರು (H) ಸ್ವತಃ ಈ ದಿನದಂದು ಉಪವಾಸ ಆಚರಿಸಿದರು ಮತ್ತು (ಇತರ) ಜನರಿಗೂ ಉಪವಾಸ ಆಚರಿಸುವಂತೆ ಆಜ್ಞಾಪಿಸಿದರು (ಸಹೀಹ್ ಅಲ್-ಬುಖಾರಿ : 1865). ಆದ್ದರಿಂದ, ಈ ದಿನದಂದು ಉಪವಾಸ ಆಚರಿಸುವುದು ಪ್ರಬಲವಾದ ಸುನ್ನತ್ ಆಗಿ ನೆಲೆಗೊಂಡಿತು. ಆದರೆ ಪ್ರವಾದಿ (H) ನಾವು ಯಹೂದಿಗಳಿಂದ ಭಿನ್ನವಾಗಿರಲು ಬಯಸಿದ್ದರು, ಹಾಗಾಗಿ ಅವರು ಆ ದಿನಕ್ಕಿಂದಲೂ ಮುಂಚಿತವಾಗಿರುವ ದಿನದಂದು ಅರ್ಥಾತ್ ಮುಹರ್ರಮ್ ಒಂಭತ್ತರಂದು ಉಪವಾಸ ಆಚರಿಸಲು ನಮಗೆ ಆಜ್ಞಾಪಿಸಿದರು. ಇನ್ನೊಂದು ವರದಿಯಲ್ಲಿ “ಆ ದಿನಕ್ಕಿಂತಲೂ ನಂತರದ ದಿನದಲ್ಲಿ ಉಪವಾಸ ಆಚರಿಸಿರಿ” ಎಂದು ಉಲ್ಲೇಖವಿದೆ. ಆದರೆ (ಆಶೂರಾ ದಿನದ ಹಿಂದಿನ ದಿನವಾದ) (ಮುಹರ್ರಮ್ ತಿಂಗಳ) ಒಂಭತ್ತನೆಯ ದಿನದಲ್ಲಿ ಉಪವಾಸ ಆಚರಿಸುವುದು ಹೆಚ್ಚು ಸ್ಥಿರಗೊಂಡಿರುವುದಾಗಿದೆ.
ಹಾಗಾಗಿ, ಅಲ್ಲಾಹುವಿನ ಪ್ರವಾದಿಗಳ ಮಾದರಿಯನ್ನು ಅನುಸರಿಸುತ್ತಾ : ಮೂಸಾ (S) ಮತ್ತು ಮುಹಮ್ಮದ್ (H) ರವರನ್ನು ಅವರ ಉಪವಾಸದಲ್ಲಿ ಅನುಕರಿಸಿಕೊಂಡು (ಮುಸ್ಲಿಮನಾದ) ಓರ್ವ ವ್ಯಕ್ತಿಯು ಉಪವಾಸ ಆಚರಿಸುತ್ತಾನೆ. ಅದು ಮೂಸಾ (S) ರವರ ಮೂಲಕ ಅಲ್ಲಾಹು ಮುಸ್ಲಿಮರನ್ನು ಬಲಪಡಿಸಿದ ದಿನವಾಗಿದೆ. ಹಾಗಾಗಿ ಲೋಕಾಂತ್ಯವು ಸಂಭವಿಸುವವರೆಗೂ ಅದು ಸತ್ಯವಿಶ್ವಾಸಿಗಳಿಗೆ ಅಲ್ಲಾಹು ನೀಡಿದ ಸಹಾಯವಾಗಿದೆ. ಅದು ಈ ಉಪವಾಸವನ್ನು ಆಚರಿಸುವ ಮೂಲಕ ಅವನಿಗೆ (ಅರ್ಥಾತ್ ಅಲ್ಲಾಹುವಿಗೆ) ಕೃತಜ್ಞತೆ ಸಲ್ಲಿಸಬೇಕಾದ ಅಲ್ಲಾಹುವಿನ ಔದಾರ್ಯವಾಗಿದೆ. ಈ ದಿನದಂದು ಉಪವಾಸ ಆಚರಿಸುವುದು ಪ್ರವಾದಿಯ ಸ್ಥಿರಗೊಂಡ ಸುನ್ನತ್ಆಗಿದೆ. ಆದ್ದರಿಂದ ಮುಸ್ಲಿಮರು ಒಂಭತ್ತನೆಯ ದಿನದಂದು ಮತ್ತು ಹತ್ತನೆಯ ದಿನದಂದು ಅರ್ಥಾತ್ ಆಶೂರಾ ದಿನದಂದು ಉಪವಾಸ ಆಚರಿಸುತ್ತಾರೆ. ಈ ಸುನ್ನತ್ ಉಮ್ಮತ್‌ನಾದ್ಯಂತ (ಮುಸ್ಲಿಮ್ ಸಮುದಾಯದಾದ್ಯಂತ) ಮುಂದುವರೆಯುತ್ತಾ ಬಂದಿದೆ -ಸರ್ವಸ್ತುತಿಗಳೂ ಅಲ್ಲಾಹುವಿಗಾಗಿದೆ. ಹಾಗಾಗಿ ಓರ್ವ ವ್ಯಕ್ತಿಯು (ಅಲ್ಲಾಹುವಿನ) ಪ್ರತಿಫಲವನ್ನು ಅರಸಿಕೊಂಡು ಮತ್ತು ಮಹೋನ್ನತನಾದ ಅಲ್ಲಾಹುವಿಗೆ ಕೃತಜ್ಞತೆತೋರುತ್ತಾ ಈ ಉಪವಾಸವನ್ನು ಅತ್ಯಗತ್ಯ ಹಾಗೂ ಮಹತ್ವಪೂರ್ಣವಾಗಿ ಕಾಣುತ್ತಾನೆ.
ಅನುವಾದ : ಅಬೂ ಹಮ್ಮಾದ್
ಮೂಲ : https://www.alfawzan.af.org.sa/ar/node/1721