ಲೈಲತುಲ್ ಕದ್‌ರ್‌ನ ಶ್ರೇಷ್ಠತೆಗಳು : ಅಶ್ಶೈಖ್ ಮುಹಮ್ಮದ್ ಬಿನ್ ಸಾಲಿಹ್ ಅಲ್-ಉಸೈಮೀನ್

w

ಸೌದಿ ಅರೇಬಿಯಾದ ಹಿರಿಯ ವಿದ್ವಾಂಸರಾದ ಅಶ್ಶೈಖ್ ಮುಹಮ್ಮದ್ ಬಿನ್ ಸಾಲಿಹ್ ಅಲ್-ಉಸೈಮೀನ್ (V) ರವರು ಸೂರಃ ಅಲ್-ಕದ್ರ್‌ನ ವಿವರಣೆಯಲ್ಲಿ ಈ ರೀತಿ ಉಲ್ಲೇಖಿಸಿರುವರು : 

ಲೈಲತುಲ್ ಕದ್ರ್‌ನ ಕುರಿತು ಈ ಆದರಣೀಯ ಸೂರಃದಲ್ಲಿ (ಅರ್ಥಾತ್ ಸೂರಃ ಅಲ್-ಕದ್ರ್‌ನಲ್ಲಿ) ಅನೇಕ ಶ್ರೇಷ್ಠತೆಗಳಿವೆ :

1 ನೇ ಶ್ರೇಷ್ಠತೆ : ಮನುಷ್ಯರಿಗೆ ಸನ್ಮಾರ್ಗವಾಗಿಯೂ ಅವರ ಇಹ ಮತ್ತು ಪರಲೋಕದ ಹಿತಕ್ಕಾಗಿಯೂ ಅಲ್ಲಾಹು ಕುರ್‌ಆನ್ಅನ್ನು ಈ (ಲೈಲತುಲ್ ಕದ್ರ್‌ನ) ರಾತ್ರಿಯಲ್ಲಿ ಅವತೀರ್ಣಗೊಳಿಸಿರುವನು.

2 ನೇ ಶ್ರೇಷ್ಠತೆ : ಲೈಲತುಲ್ ಕದ್ರ್ ಎಂದರೇನೆಂದು ನಿಮಗೇನಾದರೂ ತಿಳಿದಿದೆಯೇ (ಸೂರಃ ಅಲ್-ಕದ್ರ್ : 2) ಎಂದು ಪ್ರಶ್ನಿಸುವ ಅಲ್ಲಾಹುವಿನ ವಚನವು ಈ ರಾತ್ರಿಯ ಮಹತ್ವ ಹಾಗೂ ಮನ್ನಣೆಯನ್ನು ಸೂಚಿಸುತ್ತದೆ.

3 ನೇ ಶ್ರೇಷ್ಠತೆ : ಅದು (ಆ ರಾತ್ರಿಯು) ಸಾವಿರ ತಿಂಗಳಿಗಿಂತಲೂ ಶ್ರೇಷ್ಠವಾದುದಾಗಿದೆ.

4 ನೇ ಶ್ರೇಷ್ಠತೆ : ಆ ರಾತ್ರಿಯಲ್ಲಿ ಮಲಕ್‌ಗಳು ಇಳಿದು ಬರುತ್ತಾರೆ ಹಾಗೂ ಕರುಣೆ, ಅನುಗ್ರಹ ಮತ್ತು ಒಳಿತಿನೊಂದಿಗಲ್ಲದೆ ಅವರು ಇಳಿದು ಬರಲಾರರು.

5 ನೇ ಶ್ರೇಷ್ಠತೆ : ಆ ರಾತ್ರಿಯು ಶಾಂತಿಯಾಗಿರುವುದು ಯಾಕೆಂದರೆ ಅಲ್ಲಾಹುವಿನ ಆಜ್ಞೆಯನ್ನು ಅನುಸರಿಸುವ ಕಾರಣದಿಂದಾಗಿ ಅಲ್ಲಾಹುವಿನ ದಾಸನು ಶಿಕ್ಷೆ ಹಾಗೂ ಯಾತನೆಗಳಿಂದ ಆ ರಾತ್ರಿಯಲ್ಲಿ ಹೆಚ್ಚು ಶಾಂತಿ ಮತ್ತು ಸುರಕ್ಷತೆಯಲ್ಲಿರುವನು.

6 ನೇ ಶ್ರೇಷ್ಠತೆ : ಆ ರಾತ್ರಿಯಲ್ಲಿರುವ ಶ್ರೇಷ್ಠತೆಯ ಕಾರಣದಿಂದಾಗಿ ಅಂತ್ಯದಿನದ ತನಕ ಪಾರಾಯಣಗೈಯುವ ಸಂಪೂರ್ಣ ಸೂರಃವೊಂದನ್ನೇ (ಸೂರಃ ಅಲ್-ಕದ್ರ್ಅನ್ನು) ಅಲ್ಲಾಹು ಅವತೀರ್ಣಗೊಳಿಸಿರುವನು.
ಇನ್ನು ಲೈಲತುಲ್ ಕದ್ರ್‌ಗಿರುವ ಶ್ರೇಷ್ಠತೆಗಳೇನೆಂದರೆ – ಅಬೂ ಹುರೈರಃ (I) ರವರಿಂದ ಅಲ್-ಬುಖಾರಿ ಮತ್ತು ಮುಸ್ಲಿಮ್ ವರದಿ ಮಾಡಿರುವರು, ಪ್ರವಾದಿ (H) ಹೇಳಿರುವರು :

« مَنْ قَامَ لَيْلَةَ القَدْرِ إِيمَانًا وَاحْتِسَابًا غُفِرَ لَهُ مَا تَقَدَّمَ مِنْ ذَنْبِهِ »

“ಯಾರು ಲೈಲತುಲ್ ಕದ್ರ್‌ನಲ್ಲಿ (ಅಲ್ಲಾಹುವಿನ ಮೇಲೆ ವಿಶ್ವಾಸದೊಂದಿಗೆ ಹಾಗೂ ನಮಾಝ್ ನಿರ್ವಹಿಸುವವರಿಗೆ ಅಲ್ಲಾಹು ಸಿದ್ಧಗೊಳಿಸಿದ ಪ್ರತಿಫಲದ) ವಿಶ್ವಾಸದೊಂದಿಗೆ ಹಾಗೂ ಪ್ರತಿಫಲದ ಬಯಕೆಯೊಂದಿಗೆ ನಮಾಝ್ ನಿರ್ವಹಿಸುವನೋ ಅವನ ಗತಕಾಲದ (ಸಣ್ಣ) ಪಾಪಗಳೆಲ್ಲವೂ ಕ್ಷಮಿಸಲ್ಪಡುವುದು.”

 

(ಮೂಲ : ತಫ್ಸೀರ್ ಜುಝ್ ಅಮ್ಮ, ಪುಟ : 278)
ಅನುವಾದ : ಅಬೂ ಹಮ್ಮಾದ್