w
ಸೌದಿ ಅರೇಬಿಯಾದ ಹಿರಿಯ ವಿದ್ವಾಂಸರಾದ ಅಶ್ಶೈಖ್ ಸಾಲಿಹ್ ಅಲ್-ಫೌಝಾನ್ (حَفِظَهُ اللَّهُ) ರವರು ಹೇಳಿದರು : ಖಂಡಿತವಾಗಿಯೂ, ರಮದಾನ್ ತಿಂಗಳಿಗೆ ಹಲವಾರು ಶ್ರೇಷ್ಠತೆಗಳಿವೆ, ಅವುಗಳ ಪೈಕಿ ಶ್ರೇಷ್ಠವಾದುದೇನೆಂದರೆ :
1. ಇಸ್ಲಾಮ್ನ ಒಂದು ಆಧಾರಸ್ತಂಭವನ್ನು (ಉಪವಾಸ) ರಮದಾನ್ನಲ್ಲಿ ನಿರ್ವಹಿಸಲಾಗುತ್ತದೆ.
ಇಸ್ಲಾಮ್ನ (ಐದು) ಆಧಾರಸ್ತಂಭಗಳ ಪೈಕಿ ಒಂದಾದ ಉಪವಾಸವನ್ನು ನಿರ್ವಹಿಸಲು ರಮದಾನ್ಅನ್ನು ಅಲ್ಲಾಹು ನಿರ್ದಿಷ್ಟಪಡಿಸಿರುವನು. ಈ ತಿಂಗಳಿನ ಮಹತ್ವ ಮತ್ತು ಶ್ರೇಷ್ಠತೆಯನ್ನು ಸೂಚಿಸಲು ಇದೇ ಸಾಕಾಗುವುದು.
2. ಕುರ್ಆನ್ ಅವತೀರ್ಣಗೊಂಡದ್ದು ರಮದಾನ್ನಲ್ಲಾಗಿತ್ತು
﴿ شَهْرُ رَمَضَانَ الَّذِي أُنزِلَ فِيهِ الْقُرْآنُ ﴾
“ರಮದಾನ್ ತಿಂಗಳಿನಲ್ಲೇ ಕುರ್ಆನ್ ಅವತೀರ್ಣಗೊಂಡಿದೆ.” (ಸೂರಃ ಅಲ್-ಬಕರಃ, 2 : 185)
ಇದೊಂದು ಮಹಾ ಶ್ರೇಷ್ಠತೆಯಾಗಿದೆ, ಅಲ್ಲಾಹುವಿನ ಗ್ರಂಥಗಳ ಪೈಕಿ ಅತ್ಯುನ್ನತವಾದ ಗ್ರಂಥವನ್ನು (ಅರ್ಥಾತ್ ಕುರ್ಆನ್ಅನ್ನು) ಅವತೀರ್ಣಗೊಳಿಸುವುದಕ್ಕಾಗಿ ಈ (ರಮದಾನ್ನ) ಅವಧಿಯನ್ನು ಆಯ್ಕೆ ಮಾಡಲಾಗಿದೆ. ಇದರಿಂದ ತಿಳಿದುಬರುವುದೇನೆಂದರೆ, ಈ ತಿಂಗಳಲ್ಲಿ ಕುರ್ಆನ್ ಪಾರಾಯಣ ಮಾಡುವುದು ಇನ್ನಿತರ ಯಾವುದೇ ತಿಂಗಳಿಗಿಂತ (ಅಧಿಕವಾದ) ವಿಶೇಷತೆಯನ್ನು ಹೊಂದಿದೆ. ಎಲ್ಲಾ ತಿಂಗಳಲ್ಲೂ ಕುರ್ಆನ್ ಪಾರಾಯಣದಲ್ಲಿ ಅಧಿಕಗೊಳಿಸುವುದು ಮುಸ್ಲಿಮರಿಗೆ ಅಪೇಕ್ಷಣೀಯವಾದುದಾಗಿದೆ, ಆದರೂ ಈ ತಿಂಗಳಿನಲ್ಲಿ, ಕುರ್ಆನ್ ಪಾರಾಯಣಗೈಯುವುದರಲ್ಲಿ ಅತ್ಯಧಿಕ ಶ್ರೇಷ್ಠತೆಯಿದೆ. ಯಾಕೆಂದರೆ ಇದು ಕುರ್ಆನ್ ಅವತೀರ್ಣಗೊಂಡ ತಿಂಗಳಾಗಿದೆ. ಜಿಬ್ರೀಲ್ (S) ರವರು ಪ್ರವಾದಿ (H) ರೊಡನೆ ಬಂದು ಕುರ್ಆನ್ಅನ್ನು ಓದಿ ಪುನರವಲೋಕನ ಮಾಡುತ್ತಿದ್ದ ತಿಂಗಳಾಗಿದೆ.
ವರ್ಷಪೂರ್ತಿ ಕುರ್ಆನ್ ಪಾರಾಯಣಕ್ಕೆ ಪ್ರತಿ ಅಕ್ಷರಕ್ಕೂ ಒಂದು ಪುಣ್ಯದಂತೆ ಅದು ಹತ್ತು ಪಟ್ಟು ಅಧಿಕವಾಗಿರುವುದು. ಆದರೆ ರಮದಾನ್ನಲ್ಲಿ ಈ ಪುಣ್ಯವು (ಅವೆಲ್ಲವುಗಳಿಗಿಂತಲೂ ಇನ್ನಷ್ಟು) ಅಧಿಕವಾಗುವುದು.
3. ಲೈಲತುಲ್ ಕದ್ರ್ ಇರುವುದು ರಮದಾನ್ನಲ್ಲಾಗಿದೆ
ಸಾವಿರ ತಿಂಗಳಿಗಿಂತಲೂ ಉತ್ತಮವಾದ ಒಂದು ರಾತ್ರಿಯನ್ನು (ಅರ್ಥಾತ್ ಲೈಲತುಲ್ ಕದ್ರ್ಅನ್ನು) ಈ ತಿಂಗಳು ಹೊಂದಿದೆ. ಹಾಗಾಗಿ, ಈ ರಾತ್ರಿಯಲ್ಲಿ ಈಮಾನ್ನೊಂದಿಗೆ ಪ್ರತಿಫಲವನ್ನು ಅಪೇಕ್ಷಿಸುತ್ತಾ ಯಾರು ನಮಾಝ್ ನಿರ್ವಹಿಸುವನೋ ( ಅಲ್ಲಾಹುವನ್ನು ಆರಾಧಿಸುವನೋ), ಅವನಿಗೆ ಅಲ್ಲಾಹು ಸಾವಿರ ತಿಂಗಳಿಗೆ ಸಮಾನವಾದಷ್ಟು ಪ್ರತಿಫಲವನ್ನು ಬರೆದಿಡುವನು. ನಾವಿದನ್ನು ವರ್ಷವಾಗಿ ಲೆಕ್ಕಿಸಿದರೆ ಅದು ಎಂಬತ್ತಕ್ಕಿಂತಲೂ ಅಧಿಕ ವರ್ಷಗಳಾಗಿವೆ, ಈ ಎಲ್ಲಾ ಅವಧಿಗಳಲ್ಲಿ ಓರ್ವ ವ್ಯಕ್ತಿಯು ಅಲ್ಲಾಹುವಿನ ಆರಾಧನೆ ಮತ್ತು ವಿಧೇಯತೆಯಲ್ಲಿದ್ದಂತಾಗಿದೆ.
4. ರಮದಾನ್ನಲ್ಲಿ ಪ್ರತಿಫಲಗಳು ಅಧಿಕವಾಗುವುದು
ಈ ತಿಂಗಳಿಗೆ ಅಲ್ಲಾಹು ನೀಡಿರುವ ಶ್ರೇಷ್ಠತೆಯ ಕಾರಣದಿಂದಾಗಿ ಇನ್ನಿತರ ಯಾವುದೇ ತಿಂಗಳಿಗಿಂತಲೂ ಈ ತಿಂಗಳಿನಲ್ಲಿ ಮಾಡುವ ಸತ್ಕರ್ಮಗಳ ಪ್ರತಿಫಲವು ಹಲವು ಪಟ್ಟು ಅಧಿಕವಾಗುವುದು ಈ ತಿಂಗಳ ಶ್ರೇಷ್ಠತೆಗಳ ಪೈಕಿ ಸೇರಿರುವುದಾಗಿದೆ.
5. ತರಾವೀಹ್ಅನ್ನು ರಮದಾನ್ನಲ್ಲಿ ನಿರ್ದಿಷ್ಟಪಡಿಸಲಾಗಿದೆ
ಮಸೀದಿಗಳಲ್ಲಿ ಸಾಮೂಹಿಕವಾಗಿ ನಿರ್ವಹಿಸಲಾಗುವ ತರಾವೀಹ್ ನಮಾಝ್ಅನ್ನು ಈ ತಿಂಗಳಿನಲ್ಲಿ ಅಲ್ಲಾಹು ವಿಶೇಷಗೊಳಿಸಿರುವನು. ಇದು ರಮದಾನ್ ತಿಂಗಳಿನ ಹೊರತು ಇನ್ನಿತರ ಯಾವುದೇ ತಿಂಗಳಿನಲ್ಲಿ ನಡೆಯುವುದಿಲ್ಲ. ಇದು ಅಲ್ಲಾಹುವಿನ ಬಳಿ ರಮದಾನ್ನ ಶ್ರೇಷ್ಠತೆ ಹಾಗೂ ಅತ್ಯುನ್ನತ ದರ್ಜೆಯನ್ನು ಸೂಚಿಸುತ್ತದೆ.
6. (ಈ ತಿಂಗಳಿನಲ್ಲಿ) ಸ್ವರ್ಗದ ಬಾಗಿಲುಗಳನ್ನು ತೆರೆಯಲಾಗುವುದು ಮತ್ತು ನರಕ ಬಾಗಿಲುಗಳನ್ನು ಮುಚ್ಚಲಾಗುವುದು
ರಮದಾನ್ ತಿಂಗಳಿನಲ್ಲಿ ಸತ್ಕರ್ಮಗಳನ್ನು ಹಾಗೂ ಅದನ್ನು ನಿರ್ವಹಿಸುವವರನ್ನು ಸ್ವೀಕರಿಸಲು ಸ್ವರ್ಗದ ಬಾಗಿಲುಗಳನ್ನು ತೆರೆಯಲಾಗುವುದು, ಮತ್ತು ನರಕದ ಬಾಗಿಲುಗಳನ್ನು ಮುಚ್ಚಲಾಗುವುದು, ಹೀಗೆ ಅವಿಧೇಯತೆ ಹಾಗೂ ಪಾಪಕೃತ್ಯವೆಸಗುವುದು ಈ ತಿಂಗಳಲ್ಲಿ ಕಡಿಮೆಯಾಗುವುದು.
7. ಶೈತಾನ್ಗಳನ್ನು ಬಂಧಿಸಲಾಗುವುದು ಮತ್ತು ಬೇಡಿಹಾಕಲಾಗುವುದು
ಅಲ್ಲಾಹು ಈ ತಿಂಗಳಲ್ಲಿ ವಿಶ್ವಾಸಿಗಳಿಂದ ಶೈತಾನ್ಅನ್ನು ನಿರ್ಬಂಧಿಸುತ್ತಾನೆ, ಹಾಗಾಗಿ ಅವರು ಅವರ ಆರಾಧನೆಗೆ ಅಡ್ಡಿಪಡಿಸಲಾರರು, ಈ ಕಾರಣದಿಂದಾಗಿ ವರ್ಷದುದ್ದಕ್ಕೂ ಜನರು, ಅದರಲ್ಲೂ ಸಾಮಾನ್ಯವಾಗಿ ಆಲಸ್ಯ ತೋರುವವರು ಮತ್ತು ನಿರ್ಲಕ್ಷ್ಯವಹಿಸುವವರು ಆರಾಧನಾ ಕರ್ಮಗಳಲ್ಲಿ ನಿರತರಾಗುವುದನ್ನು ನಿಮಗೆ ಕಾಣಸಿಗುವುದು. ನೀವು ಅವರನ್ನು ಆರಾಧನಾ ಕರ್ಮಗಳಲ್ಲಿ ನಿರತರಾಗಿರುವುದಾಗಿ ಕಾಣುವಿರಿ, ಇದು ಸುಸ್ಪಷ್ಟವಾದ (ತಿಳಿದಿರುವ) ವಿಷಯವಾಗಿದೆ. ಇದೇಕೆಂದರೆ ಶೈತಾನ್ಗಳನ್ನು ಈಮಾನ್ನ ಜನರಿಂದ ಬಂಧಿಸಿ ದೂರವಿಡಲಾಗುತ್ತದೆ. ಇನ್ನು ಕುಫ್ಫಾರ್ಗಳು ಮತ್ತು ಮುನಾಫಿಕ್ಗಳ ಕುರಿತು ಹೇಳುವುದಾದರೆ, ರಮಾದಾನ್ನಲ್ಲೂ ಮತ್ತು ಅದರ ಹೊರತಾದರಲ್ಲೂ ಖಂಡಿತವಾಗಿಯೂ ಶೈತಾನ್ಗಳು ಅವರ ಮೇಲೆ ಪ್ರಾಬಲ್ಯವನ್ನು ಹೊಂದಿರುತ್ತಾರೆ.
ಈ ತಿಂಗಳಿನ ಒಳಿತುಗಳನ್ನು ಹಾಗೂ ಅದರ ಅನುಗ್ರಹಗಳನ್ನು ನಮಗೆ ಹಾಗೂ ನಿಮ್ಮೆಲ್ಲರಿಗೂ ದಯಪಾಲಿಸಲು ಮತ್ತು ಅದರ ಶ್ರೇಷ್ಠತೆ ಮತ್ತು ಪುಣ್ಯಗಳಿಂದ ಪ್ರಯೋಜನ ಪಡೆಯುವವರ ಪೈಕಿ ನಮ್ಮೆಲ್ಲರನ್ನು ಸೇರಿಸಲು ಅಲ್ಲಾಹುವಿನಲ್ಲಿ ನಾವು ಪ್ರಾರ್ಥಿಸುತ್ತೇವೆ. ಅದರ ಶ್ರೇಷ್ಠತೆ ಮತ್ತು ಪುಣ್ಯಗಳಿಂದ ನಮ್ಮನ್ನು ಹಾಗೂ ನಿಮ್ಮೆಲ್ಲರನ್ನೂ ತಡೆಹಿಡಿಯದಂತೆ ಮತ್ತು ಈ ತಿಂಗಳಲ್ಲೂ ಹಾಗೂ ಇನ್ನಿತರ ತಿಂಗಳಿನಲ್ಲೂ ಸತ್ಕರ್ಮಗಳನ್ನು ನಿರ್ವಹಿಸುವುದರಿಂದ ತಡೆಹಿಡಿಯದಂತೆ ನಾವು ಅಲ್ಲಾಹುವಿನೊಂದಿಗೆ ಬೇಡುತ್ತೇವೆ.
ಮೂಲ : ಮಜಾಲಿಸು ಶಹ್ರ್ ರಮದಾನ್ ಅಲ್-ಮುಬಾರಕ್, ಪುಟ 8-11
ಅನುವಾದ : ಅಬೂ ಹಮ್ಮಾದ್